ಸರ್ಕಾರಿ ಕೆಲಸ ದೇವರ ಕೆಲಸ- ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ನೋಡಿದರೆ ನಮ್ಮ ಕಣ್ಣಿಗೆ ಎದ್ದು ಕಾಣುವ ಘೋಷವಾಕ್ಯ ಇದು. ಈ ಘೋಷಣೆ ಈಗ ಓದಲಷ್ಟೇ ಸೀಮಿತವಾಗಿದೆ. ʼದೇವರ ಕೆಲಸʼ ಎಂಬುದರ ಅರ್ಥ ಬೇರೆಯೇ ಆಗಿದೆ. ವಿಧಾನಸೌಧದಲ್ಲಿ ಇರುವ ಸಿಬ್ಬಂದಿ ಒಂದು ಖಾಸಗಿ ಕಂಪನಿಯಲ್ಲಿ ಇದ್ದಿದ್ದರೆ ಈ ರೀತಿ ಸಾಲುಸಾಲು ಫೈಲ್‌ಗಳು ಪೆಂಡಿಂಗ್ ಬೀಳುತ್ತಿರಲಿಲ್ಲ. ಕೆಲಸಕ್ಕೆ ಹತ್ತು ಗಂಟೆಗೆ ಹಾಜರಾದ್ರೆ ಹನ್ನೊಂದು ಗಂಟೆಗೆ ಟೀ ಬ್ರೇಕ್, 1 ಗಂಟೆಗೆ ಲಂಚ್ ಬ್ರೇಕ್, ಮತ್ತೆ ಮೂರು ಗಂಟೆ ಟೀ ಬ್ರೇಕ್. ಐದು ಗಂಟೆಗೆ ಗೇಟ್ ಪಾಸ್! ಒಂದೊಂದು ಬ್ರೇಕ್ ಕನಿಷ್ಠ ಒಂದು ಗಂಟೆ ಟೈಮ್ ಪಾಸ್. ಈ ರೀತಿಯಲ್ಲಿ ಇದು ಒಂದು ರೀತಿಯ ದೇವರ ಕೆಲಸವೇ ಆಗಿದೆ ಅಂತಾರೆ ಇಲ್ಲಿಯ ನಿವೃತ್ತಿ ಅಂಚಿನಲ್ಲಿ ಇರುವ ಒಬ್ಬ ಡಿ ಗ್ರೇಡ್ ನೌಕರ!
ರಾಮಲಿಂಗಾ ರೆಡ್ಡಿ ಪಾಸ್ – ಮುನಿಯಪ್ಪ ಫೇಲ್
ಜುಲೈ ಒಂದರಿಂದ ಐದು ಕೆಜಿ ಅಕ್ಕಿ ಕೊಡ್ತೀವಿ, ಇನ್ನೂ ಐದು ಕೆಜಿ ಅಕ್ಕಿಗೆ ಹಣ ಕೊಡ್ತೀವಿ ಎಂದಿದ್ದ ಸಚಿವ ಮುನಿಯಪ್ಪ ಕೊಟ್ಟ ಮಾತಿನಂತೆ ನಡೆಯುವಲ್ಲಿ ವಿಫಲರಾಗಿದ್ದಾರೆ. ಮುನಿಯಪ್ಪ ಕಳೆದ ಒಂದು ತಿಂಗಳಿಂದ ಸರ್ಕಸ್ ಮಾಡಿದರೂ ಅಕ್ಕಿ ತರಲು ಆಗಲಿಲ್ಲ. ಕನಿಷ್ಠ ನೆರೆಯ ಒಂದು ರಾಜ್ಯಕ್ಕೆ ಭೇಟಿ ನೀಡಿ ಅಕ್ಕಿ ಖರೀದಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಎಲ್ಲವನ್ನೂ ಅಧಿಕಾರಿಗಳ ಮೇಲೆ ಹಾಕಿ ಜುಲೈ ಒಂದರಂದು ಕೈ ಎತ್ತಿ ಬಿಟ್ರು. ಎಂಟು ಬಾರಿ ಸಂಸದ, ಎರಡು ಬಾರಿ ಕೇಂದ್ರ ಸಚಿವ, ಈಗ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರಾದರೂ ಅಕ್ಕಿ ತರುವಲ್ಲಿ ವಿಫಲ ಆಗಿರುವುದು ಚರ್ಚೆಗೆ ಕಾರಣವಾಗಿದೆ. 2013ರಲ್ಲಿ ಇದೇ ಪರಿಸ್ಥಿತಿ ಆದಾಗ ಅಂದಿನ ಆಹಾರ ಸಚಿವ ದಿನೇಶ್ ಗುಂಡೂರಾವ್ ಹೊರ ರಾಜ್ಯಗಳಿಗೆ ಹೋಗಿ ಅಕ್ಕಿ ಖರೀದಿ ಮಾಡಿಕೊಂಡು ಬಂದು ವಿತರಣೆ ಮಾಡಿದ್ದರು.
ಇನ್ನೊಂದೆಡೆ, ಜೂನ್ ಹನ್ನೊಂದರಂದು ಶಕ್ತಿ ಯೋಜನೆ ಜಾರಿ ಮಾಡಬೇಕು ಎಂದು ಸೂಚಿಸಿದ್ದೇ ತಡ ರಾಮಲಿಂಗಾ ರೆಡ್ಡಿ ಅವರು ಯೋಜನೆ ಜಾರಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇಲಾಖೆಯ ಅಧಿಕಾರಿಗಳ ಮೇಲೆ ರಾಮಲಿಂಗಾ ರೆಡ್ಡಿ ಹಿಡಿತ ಇಟ್ಟುಕೊಂಡಿರುವುದಕ್ಕೆ ಇದು ಸಾಕ್ಷಿ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿಕೊಂಡಿದ್ದಾರೆ.
ಬಿಜೆಪಿ ಹೈಕಮಾಂಡ್‌ಗಿಂತಲೂ ಹಾರ್ಡ್ ಈ ಸುರ್ಜೇವಾಲಾ
ಸುರ್ಜೇವಾಲಾ ಮತ್ತು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇರೋದು ಕೇವಲ ಚುನಾವಣೆ ಗೆಲ್ಲುವ ಲೆಕ್ಕಾಚಾರ. ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ಇಲ್ಲದೇ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕದಲ್ಲಿ ಶತಾಯಗತಾಯ ಗ್ಯಾರಂಟಿ ಈಡೇರಿಸಲೇಬೇಕು ಎಂದು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತರುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ಹಾಗೂ ಬರಗಾಲ ಎದುರಿಸಲು ತಯಾರಿ ಸಭೆಗಳನ್ನು ನಿಲ್ಲಿಸಿ ಹೈಕಮಾಂಡ್ ಆದೇಶದಂತೆ ಗ್ಯಾರಂಟಿ ಜಾರಿಗೆ ಹಣ ಒದಗಿಸುವುದರಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಮುಂಗಾರು ಕೈಕೊಟ್ಟು ಜಲಾಶಯಗಳು ತುಂಬಲಿಲ್ಲ. ರೈತರು ಬಿತ್ತಲಿಲ್ಲ. ಇನ್ನೊಂದು ತಿಂಗಳ ಬಳಿಕ ರಾಜ್ಯದ ಪರಿಸ್ಥಿತಿ ನೆನಪಿಸಿಕೊಂಡರೆ ನಿದ್ದೆ ಬರಲ್ಲ. ಆದರೆ ಈ ಬಾರಿ ನಮ್ಮ ಹೈಕಮಾಂಡ್ ಬಿಜೆಪಿಗಿಂತಲೂ ಕಟುವಾಗಿದೆ. ಸಿದ್ದರಾಮಯ್ಯ ಅವರಿಗೆ ಹೆಜ್ಜೆ ಹೆಜ್ಜೆಗೆ ಕಾಟ ಕೊಡುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತರ ಭಾರತದ ಕೆಲವು ರಾಜ್ಯಗಳಿಗಿಂತಲೂ ಅದ್ವಾನ ಮಾಡಲು ಹೊರಟಿದೆ… ಹೀಗಂತ ಹೇಳಿದ್ದು ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು.
ಸಚಿವರಾದರೂ ಮಕ್ಕಳ ಮುಂದೆ ಇವರು ವೀಕ್!
ಇತ್ತ ಸರ್ಕಾರ ಮತ್ತು ಅತ್ತ ಕೆಪಿಸಿಸಿ ಎರಡರಲ್ಲೂ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ನಾಯಕರ ಮನೆಯ ಪಾಲಿಟಿಕ್ಸ್ ವಿಧಾನಸೌಧದಲ್ಲಿ ಚರ್ಚೆ ಆಗುತ್ತಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಭಾರಿ ಬದಲಾವಣೆ ಆಗಿದೆ. ಹತ್ತು ವರ್ಷಗಳಿಂದ ಇದ್ದ ಗನ್ ಮ್ಯಾನ್, ಪಿಎಗಳಿಗೆ ಕೊಕ್ ಕೊಟ್ಟಿದ್ದಾರೆ. ಅದೇ ಜಾಗಕ್ಕೆ ಹೊಸಬರನ್ನು ಕರೆತಂದಿದ್ದಾರೆ. ಏನು ಮಾಡೋದು ಅಣ್ಣಾ… ಸಚಿವರ ಮಕ್ಕಳ ಆಣತಿಯಂತೆ ನಮ್ಮ ಸಾಹೇಬ್ರು ನಾವು ಬೇಡ ಅಂದ್ರು. ಈಗ ಹೊಸಬರ ಬಳಿ ಬಂದಿದ್ದೇವೆ. ಏನೇ ಆಗಲಿ, ಅವರು ನಮ್ಮ ಹಳೆಯ ಸಾಹೇಬರು. ಚೆನ್ನಾಗಿರಲಿ ಎಂದು ಹಾರೈಸಿದರು.
ಪ್ರಿಯಾಂಕ ಖರ್ಗೆ ರಿಪೋರ್ಟ್ ಕಾರ್ಡ್
ಸಚಿವ ಪ್ರಿಯಾಂಕ ಖರ್ಗೆ ಮತ್ತು ಬಿಜೆಪಿ ನಾಯಕರ ನಡುವೆ ಹಾವು ಮುಂಗುಸಿಯ ರಾಜಕೀಯ ಆಟ ನೋಡಿದ್ದೇವೆ. ಪ್ರಿಯಾಂಕ ಅವರು ಐಟಿಬಿಟಿ ಸಚಿವರಾದ ತಕ್ಷಣ ಪಿಯುಸಿ ಫೇಲ್ ಅಂತ ವಾಟ್ಸ್ ಆಪ್ ಯುನಿವರ್ಸಿಟಿಯಲ್ಲಿ ಬಿಜೆಪಿ ನಾಯಕರು ಸಂದೇಶ ಹರಿಬಿಟ್ಟರು. ಎಚ್ಚೆತ್ತುಕೊಂಡ ಸಚಿವರು ಒಂದು ತಿಂಗಳ ರಿಪೋರ್ಟ್ ಕಾರ್ಡ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಸ್ವತಃ ಸಿದ್ದರಾಮಯ್ಯ, ಡಿಕೆಶಿ ಅವರೇ ತಮ್ಮ ರಿಪೋರ್ಟ್ ಕಾರ್ಡ್ ರೆಡಿ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಇನ್ನು ಧರಂ ಸಿಂಗ್ ಮಗನಿಗೆ ಸಚಿವ ಸ್ಥಾನ ಕೊಡಿಸದ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಈಗಲೂ ಉತ್ತರ ಕರ್ನಾಟಕ ಮಂದಿಗೆ ಬೇಸರವಿದೆ. ಮೂರು ಬಾರಿ ಗೆದ್ದರೂ ಮಂತ್ರಿ ಮಾಡಲಿಲ್ಲ. ತಮ್ಮ ಮಗ ಮೊದಲ ಬಾರಿ ಗೆದ್ದಾಗಲೇ ಮಂತ್ರಿ ಮಾಡಿದರು. ಮೂರನೇ ಬಾರಿ ಗೆದ್ದಾಗ ಮೊದಲ ಪಾಳಿಯಲ್ಲಿಯೇ ಮಂತ್ರಿ ಮಾಡಿಬಿಟ್ರು ಎಂದು ಧರಂ ಸಿಂಗ್ ಬೆಂಬಲಿಗರೊಬರು ಅಲವತ್ತುಕೊಂಡರು.
ಸಿಎಂ ಮನೆ ಪ್ರವೇಶಕ್ಕೆ ಬ್ರೇಕ್ ಹಾಕಿದ “ಹೋಮ್ ಮಿನಿಸ್ಟರ್ʼ!
ವಿಧಾನಸೌಧದ ಸಿಎಂ ಕಚೇರಿಯ ದಕ್ಷಿಣ ಬಾಗಿಲು ತೆರೆಸಿ ಕಳೆದ ವಾರ ಸುದ್ದಿಯಾಗಿದ್ದ ಸಿದ್ದರಾಮಯ್ಯ ಈ ವಾರ ಕಾವೇರಿ ಸಿಂಗಾರಗೊಂಡರೂ ಪ್ರವೇಶ ಮಾಡಲು ಆಷಾಢ ಅಡ್ಡಿ ಬಂದಿದೆ! ಸದ್ಯ ಗೃಹ ಪ್ರವೇಶ ಮಾಡುವುದು ಬೇಡ ಎಂದು ಅವರ ʼಹೋಮ್ ಮಿನಿಸ್ಟರ್ʼ ಆದೇಶ ಮಾಡಿದ್ದಾರೆ! ಸಿದ್ದರಾಮಯ್ಯ ದಿನ, ಗಳಿಗೆ ನೋಡದಿದ್ದರೂ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮಾತ್ರ ಇವೆಲ್ಲವನ್ನೂ ನೋಡುತ್ತಾರೆ. ಹೀಗಾಗಿ ಸಿದ್ದರಾಮಯ್ಯಗೆ ಕಾವೇರಿಗೆ ಹೋಗಲು ಆತುರ ಇದ್ದರೂ ಹೋಮ್ ಮಿನಿಸ್ಟರ್ ಆದೇಶ ಅಡ್ಡಿ ಬಂದು, ಕುಮಾರಕೃಪಾ ನಿವಾಸದಲ್ಲೇ ಇರಬೇಕಾಗಿದೆ.
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ
ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ನಿಧಾನವಾಗಿ ಹೈಕಮಾಂಡ್ ನಾಯಕರಿಗೆ ಮನವರಿಕೆಯಾಗಿದೆ. ಹೀಗಾಗಿ ಶುಕ್ರವಾರ ನಡೆದ ಬಿಜೆಪಿ ಕಚೇರಿಯ ಸಭೆಯಲ್ಲಿ ಸರ್ ನೀವೇ ಮುಂದೆ ಇರಿ. ನಾವು ಹಿಂದೆ ಜೈ ಅಂತೀವಿ ಅಂತ ಮನವಿ ಮಾಡಿದ್ದಾರೆ. ಸಭೆಯಿಂದ ಹೊರ ಬಂದ ಕಟೀಲ್ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಹೋರಾಟ ಮಾಡ್ತೀವಿ ಅನ್ನೋ ಮೂಲಕ ಮತ್ತೊಮ್ಮೆ ರಾಜಾಹುಲಿಯ ಅನಿವಾರ್ಯತೆಯನ್ನು ಸಾರಿ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ಅವರನ್ನು ಎದುರಿಸಲು ಬೊಮ್ಮಾಯಿಗೆ ಮಾತ್ರ ಸಾಧ್ಯ. ಯತ್ನಾಳ್ ಅಂಕಿಅಂಶಗಳನ್ನು ಇಟ್ಟುಕೊಂಡು ಮಾತನಾಡುವುದು ಕಷ್ಟ ಎಂಬುದನ್ನು ವರಿಷ್ಠರ ಗಮನಕ್ಕೆ ಕೆಲ ನಾಯಕರು ತಂದಿದ್ದಾರೆ. ಇದು ʼಹಿಂದು ಹುಲಿʼ ಯತ್ನಾಳ್ ಗುರ್ ಗುರ್ ಅನ್ನುವುದಕ್ಕೆ ಕಾರಣವಾಗಿದೆ!