Site icon Vistara News

ಸಮರಾಂಕಣ | ಭಾರತೀಯ ಸೈನ್ಯದ ಆಧುನಿಕ ಯುದ್ಧ ತಂತ್ರಗಳಿಗೆ ನೆರವಾಗಲಿದೆಯಾ 5ಜಿ ತಂತ್ರಜ್ಞಾನ?

5g

ದೂರಸಂಪರ್ಕ ಜಾಲದ ಪ್ರತಿಯೊಂದು ತಲೆಮಾರಿನಲ್ಲಿ ಕಂಡು ಬರುವ ಅಭಿವೃದ್ಧಿಯನ್ನು ಗಮನಿಸಿದರೆ ನಮ್ಮ ಸಂಪರ್ಕ ಸಾಮರ್ಥ್ಯ ಎಷ್ಟು ಅಸಾಧಾರಣವಾಗಿ ಬೆಳೆದಿದೆ ಎಂಬುದು ಗಮನಕ್ಕೆ ಬರುತ್ತದೆ. ನಾವು 1981ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದ ಮೊದಲ ತಲೆಮಾರಿನ 1ಜಿ ಅನಲಾಗ್ ಫೋನನ್ನು ಗಮನಿಸಿದರೆ ನಮಗೆ ಈ ಜಾಲ ಎಷ್ಟರಮಟ್ಟಿಗೆ ಅಭಿವೃದ್ಧಿ ಕಂಡಿದೆ ಎಂಬುದು ಅರಿವಾಗುತ್ತದೆ. 1992ರಲ್ಲಿ 2ಜಿ ಸೇವೆಗಳು ಆರಂಭಗೊಂಡಾಗ ಬಳಕೆದಾರರು ಕೇವಲ ದೂರವಾಣಿ ಕರೆಗಳನ್ನು ಮಾತ್ರ ಮಾಡುವುದಲ್ಲದೆ, ಶಾರ್ಟ್ ಮೆಸೇಜ್ ಸರ್ವಿಸ್ (ಎಸ್ಎಂಎಸ್) ಮೂಲಕ ಸಣ್ಣ ಸಂದೇಶಗಳನ್ನೂ ರವಾನಿಸಬಹುದಾಗಿತ್ತು. 2001ರ ವೇಳೆಗೆ 3ಜಿ ಸೇವೆ ಆರಂಭವಾಗಿತ್ತು. 3ಜಿ ಸೇವೆಯಲ್ಲಿ ಮಾಹಿತಿ ವರ್ಗಾವಣೆಯ ವೇಗ 2ಜಿಗಿಂತ ನಾಲ್ಕು ಪಟ್ಟು ಹೆಚ್ಚಳ ಕಂಡಿತ್ತು. ಅದರೊಡನೆ, ಮಾರುಕಟ್ಟೆಗೆ ಸ್ಮಾರ್ಟ್ ಫೋನ್‌ಗಳೂ ಬರಲಾರಂಭಿಸಿದವು. ಮೊದಲ ಬ್ಲ್ಯಾಕ್ ಬೆರಿ ಸ್ಮಾರ್ಟ್ ಫೋನ್ 2002ರಲ್ಲಿ ಬಿಡುಗಡೆಗೊಂಡರೆ, ಮೊದಲ ಐಫೋನ್‌ 2007ರಲ್ಲಿ ಮಾರುಕಟ್ಟೆಗೆ ಬಂತು.

2012ರಲ್ಲಿ 4ಜಿ ತಂತ್ರಜ್ಞಾನ ಬಂದಾಗ ಸಂವಹನ ನಿಜವಾದ ವೇಗ ಪಡೆದುಕೊಂಡಿತು. ತಾಂತ್ರಿಕವಾಗಿ 4ಜಿ ತಂತ್ರಜ್ಞಾನ 3ಜಿ ತಂತ್ರಜ್ಞಾನದ ಒಂದು ಆವೃತ್ತಿಯಾಗಿತ್ತು. ಆದರೆ ಅದು 2012ರ ಬಳಿಕ ನಿಜವಾದ 4ಜಿ ತಂತ್ರಜ್ಞಾನವಾಗಿ ಅಭಿವೃದ್ಧಿ ಹೊಂದಿತು. ಈ ನೆಟ್‌ವರ್ಕ್‌ನಲ್ಲಿ ಕಂಡುಬಂದ ಮೊದಲ ಬದಲಾವಣೆಗಳಲ್ಲಿ ಕೇವಲ ಸಿಮ್ ಕಾರ್ಡ್ ಬದಲಾವಣೆ ಮಾತ್ರವೇ ಸೇರಿತ್ತು. ಆದರೆ ವೀಡಿಯೋ ಲೈವ್ ಸ್ಟ್ರೀಮಿಂಗ್ ಹಾಗೂ ವೇಗದ ಕಾರ್ಯಾಚರಣೆಗಳ ಮೂಲಕ ನೂತನ 4ಜಿ ಸಾಧನಗಳು ಜಾರಿಗೆ ತಂದವು. ಈ ತಂತ್ರಜ್ಞಾನ ವಿಕಾಸದ ಮುಂದಿನ ತಲೆಮಾರು ಎಂದರೆ 5ಜಿ ತಂತ್ರಜ್ಞಾನ. ಇದು 4ಜಿಗೆ ಹೋಲಿಸಿ ನೋಡಿದಲ್ಲಿ ಹೆಚ್ಚಿನ ಸಾಮರ್ಥ್ಯ, ಕಡಿಮೆ ಲೇಟೆನ್ಸಿ, ಹಾಗೂ ಹೆಚ್ಚಿನ ಬ್ಯಾಂಡ್ ವಿಡ್ತ್ ಹೊಂದಿದೆ.

ಹೆಚ್ಚಿನ ಸಾಮರ್ಥ್ಯ

ಸಾಕಷ್ಟು ಉದ್ಯಮಗಳು, ಸಾಮಾನ್ಯ ಗ್ರಾಹಕರು 5ಜಿ ತಂತ್ರಜ್ಞಾನದ ಅಪಾರ ಸಾಮರ್ಥ್ಯದ ಕುರಿತಾಗಿ ಉತ್ಸಾಹ ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಕಮ್ಯುನಿಟಿ ಸಹ ಇದರ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದು, 5ಜಿ ತಂತ್ರಜ್ಞಾನದ ಹೆಚ್ಚಿನ ಸಾಮರ್ಥ್ಯ ಕನೆಕ್ಷನ್ ಹಾಗೂ ಸಾಧನ ಮತ್ತು ಬಳಕೆದಾರರ ಪರಸ್ಪರ ಸಂವಹನ ಹೆಚ್ಚಿಸಲು ಸಹಕರಿಸುತ್ತದೆ.

5ಜಿ ತಂತ್ರಜ್ಞಾನ 4ಜಿಗೆ ಹೋಲಿಸಿದರೆ 1,000 ಪಟ್ಟು ಹೆಚ್ಚಿನ ವೇಗ ಸಾಧಿಸುವ ಸಾಮರ್ಥ್ಯ ಹೊಂದಿದೆ. 5ಜಿಯಲ್ಲಿ ಸಾಧನಗಳು ಸಂಪರ್ಕ ಹೊಂದುವ ರೀತಿ 4ಜಿಯಲ್ಲಿ ಸಾಧ್ಯವೇ ಇಲ್ಲ. ಉದಾಹರಣೆಗೆ, ಒಂದು ಕಾರ್ಯಾಚರಣಾ ಸಂದರ್ಭದಲ್ಲಿ ಕಾನೂನು ಜಾರಿ ಅಧಿಕಾರಿಗಳು ಹಲವು ರೇಡಿಯೋ ಹಾಗೂ ಕಂಪ್ಯೂಟರ್‌‌ಗಳನ್ನು ಸಂವಹನ ಸಾಧಿಸಲು ಬಳಸಿಕೊಳ್ಳುತ್ತಾರೆ. ಈ ರೀತಿಯ ಕಾರ್ಯಾಚರಣೆಗಳಲ್ಲಿ ಅಂದಾಜು 100 ಸಂವಹನ ಉಪಕರಣಗಳು ಭಾಗವಹಿಸಿವೆ ಎಂದು ನಾವು ಅಂದುಕೊಳ್ಳೋಣ.

4ಜಿ ತಂತ್ರಜ್ಞಾನದಲ್ಲಿ, ಸಾಮಾನ್ಯವಾಗಿ ಪ್ರತಿಯೊಂದು ಸಾಧನವೂ ಸಹ ಆ ಕ್ಷಣದಲ್ಲಿ ಸುಲಭವಾಗಿ ಸಂಪರ್ಕ ಸಾಧಿಸಬಲ್ಲದು. ಆದರೆ ಪ್ರತಿಯೊಂದು ಸಾಧನಕ್ಕೂ ಏಕಕಾಲದಲ್ಲಿ ಇತರ 99 ಸಾಧನಗಳೊಡನೆ ಧ್ವನಿ, ಇಂಟರ್ನೆಟ್ ಹಾಗೂ ಇತರ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ 5ಜಿ ತಂತ್ರಜ್ಞಾನದ ಹೆಚ್ಚಿನ ಸಾಮರ್ಥ್ಯದ ಕಾರಣ ಎಲ್ಲ ನೂರು ಸಾಧನಗಳು ಹಾಗೂ ಸೆನ್ಸರ್‌ಗಳು ಏಕಕಾಲದಲ್ಲಿ ಜೊತೆಯಾಗಿ ಸಂಪರ್ಕ ಸಾಧಿಸಿ ಕಾರ್ಯ ನಿರ್ವಹಿಸಬಲ್ಲವು.

ನಗರಗಳು, ಸೇನೆ, ಹಾಗೂ ನಾಗರಿಕ ಸುರಕ್ಷಾ ಸಂಸ್ಥೆಗಳು ಒಂದು ಸೆನ್ಸರ್ ಮತ್ತು ಸಾಧನಗಳ ಜಾಲದ ಮೂಲಕ ಸಂವಹನ ನಡೆಸಬಲ್ಲವು. ಇದಲ್ಲದೆ, ಈ ತಂತ್ರಜ್ಞಾನದ ಬಳಕೆದಾರರ ದಕ್ಷತೆಯೂ ಅಪಾರವಾಗಿ ಹೆಚ್ಚಳವಾಗಲಿದೆ. 5ಜಿ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ (ಎಐ) ಹಾಗೂ ವರ್ಚುವಲ್ ರಿಯಾಲಿಟಿಗಳ ಉಪಯೋಗಕ್ಕೆ ಹೊಸ ಬಾಗಿಲನ್ನೇ ತೆರೆಯಲಿದೆ.

ಕನಿಷ್ಠ ಸುಪ್ತತೆ (ಲೇಟೆನ್ಸಿ)

ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ತೆರಳಿದ ಸಂದೇಶ ಮರಳಿ ತಲುಪಲು ತೆಗೆದುಕೊಳ್ಳುವ ಸಮಯವನ್ನು ಸುಪ್ತತೆ (ಲೇಟೆನ್ಸಿ) ಎಂದು ಕರೆಯುತ್ತಾರೆ. 4ಜಿ ತಂತ್ರಜ್ಞಾನದಲ್ಲಿ ಈ ಸುಪ್ತತೆ ವೇಗ 20ರಿಂದ 30 ಮಿಲಿ ಸೆಕೆಂಡುಗಳ ಮಧ್ಯದಲ್ಲಿರುತ್ತದೆ. ಆದರೆ 5ಜಿ ತಂತ್ರಜ್ಞಾನ 10 ಮಿಲಿ ಸೆಕೆಂಡುಗಳಿಗೂ ಕನಿಷ್ಠ ಸುಪ್ತತೆಯ ವೇಗವನ್ನು ಸಾಧಿಸಬಲ್ಲದು. ಹಾಗಾದರೆ ಈ ಸುಪ್ತತೆಯ ವೇಗ ಯಾಕೆ ಮುಖ್ಯ? ಮಾನವರು ತಮ್ಮ ಕಣ್ಣಿನಿಂದ ಮಾಹಿತಿಯನ್ನು 13 ಮಿಲಿ ಸೆಕೆಂಡುಗಳಲ್ಲಿ ಅರ್ಥೈಸಿಕೊಳ್ಳಬಲ್ಲರು. ಅಂದರೆ, ಇದು ಒಂದು ವಸ್ತುವನ್ನು ನೋಡಿ, ಅದನ್ನು ಮೆದುಳಿಗೆ ರವಾನಿಸಿ, ಅರ್ಥೈಸಿಕೊಳ್ಳಲು ತಗುಲುವ ಸುಪ್ತತೆಯ ವೇಗವಾಗಿದೆ. ಆದರೆ ಇದೇ ಮೊದಲ ಬಾರಿಗೆ ಮನುಷ್ಯರು ಏನನ್ನಾದರೂ ನೋಡಿ, ಅದನ್ನು ಅರ್ಥೈಸಿಕೊಳ್ಳುವ ವೇಗ ತಂತ್ರಜ್ಞಾನದ ಮಾಹಿತಿ ರವಾನಿಸುವ ವೇಗಕ್ಕಿಂತ ನಿಧಾನವಾಗಿರಲಿದೆ.

ಈ ವೇಗ ದೂರದ ಸ್ಥಳಗಳಿಂದ ಕಾರ್ಯ ನಿರ್ವಹಿಸುವ ಸಾಧನಗಳಿಗೆ ಅತ್ಯಂತ ಉಪಯುಕ್ತ ಎನಿಸಲಿದೆ. ಉದಾಹರಣೆಗೆ, ಹೆಚ್ಚಿನ ದೇಶಗಳಲ್ಲಿ ವಾಣಿಜ್ಯಿಕ ಡ್ರೋನ್‌ಗಳ ಪೈಲಟ್‌ಗಳು ಅವರು ಚಲಾಯಿಸುವ ಡ್ರೋನ್‌ಗಳನ್ನು ಸುರಕ್ಷತಾ ಕಾರಣಗಳಿಗೆ ವಿಷುವಲ್ ಲೈನ್ ಆಫ್ ಸೈಟ್‌ನಲ್ಲಿ ಚಲಿಸುವಂತೆ ಮಾಡಬೇಕಾಗುತ್ತದೆ. ಆದರೆ ಈಗ 5ಜಿ ತಂತ್ರಜ್ಞಾನ ಅತ್ಯಂತ ವೇಗವಾಗಿರುವುದರಿಂದ, ಈ ಅತಿ ವೇಗದ ಸುಪ್ತತೆಯ ಕಾರಣದಿಂದ ಡ್ರೋನ್ ನಿರ್ವಾಹಕರಿಗೆ ನೈಜ ಸಮಯದ ಮಾಹಿತಿ ಲಭ್ಯವಾಗುತ್ತಿರುತ್ತದೆ. ಆ ಮೂಲಕ ಅವರು ಡ್ರೋನ್‌ಗಳನ್ನು ಯಾವುದೇ ಸ್ಥಳದಿಂದಲಾದರೂ ಸುರಕ್ಷಿತವಾಗಿ ಚಲಾಯಿಸಬಹುದು.

ಹೆಚ್ಚಿನ ಬ್ಯಾಂಡ್‌ವಿಡ್ತ್

ಹೆಚ್ಚಿನ ಬ್ಯಾಂಡ್‌ವಿಡ್ತ್ ಎಂದು ನಾವು ಯೋಚಿಸಿದಾಗ ನಮಗೆ ಸಾಮಾನ್ಯವಾಗಿ ಹೆಚ್ಚಿನ ವೇಗವೇ ನೆನಪಾಗುತ್ತದೆ. ಮಾಹಿತಿ ವರ್ಗಾವಣೆಯ ವೇಗ ಒಂದೇ ಆಗಿದ್ದರೂ, ಒಂದೇ ಬಾರಿಗೆ ಹೆಚ್ಚಿನ ಮಾಹಿತಿ ವರ್ಗಾವಣೆ ಆಗುತ್ತಿರುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಇಮೇಲ್‌ ಮೂಲಕ ಪಡೆದುಕೊಳ್ಳುವ ಮಾಹಿತಿ. ಒಂದು ವೇಳೆ ನಮಗೆ ಬರುವ ಪ್ರತಿಯೊಂದು ಪ್ಯಾಕೇಜನ್ನೂ ನಮಗೆ ಬರುವ ಮಾಹಿತಿ ಎಂದುಕೊಂಡರೆ, 4ಜಿ ನಮಗೆ ಪ್ರತಿ ಸೆಕೆಂಡಿಗೆ ಒಂದು ಮಾಹಿತಿ ಕಳುಹಿಸಿ ಕೊಡಬಲ್ಲದು. ಆದರೆ 5ಜಿ ತಂತ್ರಜ್ಞಾನ ನಮಗೆ ಪ್ರತಿ ಸೆಕೆಂಡಿಗೆ 100 ಪ್ಯಾಕೇಜ್ ಕಳುಹಿಸಿ ಕೊಡುತ್ತದೆ.

ಸರಿಯಾದ ಪ್ರಯೋಗಾಲಯದ ಪರಿಸ್ಥಿತಿಯಲ್ಲಿ, 4ಜಿ ವೇಗ ಪ್ರತಿ ಸೆಕೆಂಡಿಗೆ 100 ಮೆಗಾಬಿಟ್ ಗರಿಷ್ಠ ವೇಗವನ್ನು ತಲುಪಬಹುದು. ಆದರೆ 5ಜಿ ಪ್ರತಿ ಸೆಕೆಂಡಿಗೆ 10 ಗಿಗಾಬಿಟ್ ಗರಿಷ್ಠ ವೇಗವನ್ನು ತಲುಪಬಲ್ಲದು. ಈ ಅಪರಿಮಿತವಾದ ವೇಗ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಅಸಂಖ್ಯಾತ ಸಾಧ್ಯತೆಗಳನ್ನು ತೆರೆದಿಡಬಲ್ಲದು.

ಮಿಲಿಟರಿ ಮತ್ತು ಸರ್ಕಾರಿ ಸೇವೆಗಳ ಮೇಲಿನ ಪರಿಣಾಮ

5ಜಿ ನೆಟ್‌ವರ್ಕ್ ತಂತ್ರಜ್ಞಾನ ಮಿಲಿಟರಿ ಹಾಗೂ ಸಾರ್ವಜನಿಕ ಸುರಕ್ಷತಾ ಸಂಸ್ಥೆಗಳು ಕಾರ್ಯ ನಿರ್ವಹಿಸುವ ವಿಧಾನವನ್ನು ಬದಲಾಯಿಸಬಲ್ಲದು. ಹೆಚ್ಚಿನ ಸಾಮರ್ಥ್ಯ, ಹೆಚ್ಚಿನ ಬ್ಯಾಂಡ್‌ವಿಡ್ತ್, ಹಾಗೂ ಕನಿಷ್ಠ ಸುಪ್ತತೆ ಎಷ್ಟು ಪರಿಣಾಮಕಾರಿ ಆಗಿವೆ ಎಂದರೆ ಈ ವಲಯಗಳ ಉದ್ಯೋಗಿಗಳು ಅವರು ಮಾಹಿತಿ ವರ್ಗಾವಣೆ ನಡೆಸುವುದು ಮತ್ತು ಅರ್ಥೈಸಿಕೊಳ್ಳುವುದರ ಕುರಿತು ಮರು ಆಲೋಚನೆ ಮಾಡಬೇಕಾಗುತ್ತದೆ. ಎಲ್ಲಾ ಹಂತಗಳ ನಾಯಕರೂ 5ಜಿ ವೇಗದ ಸದುಪಯೋಗ ಪಡೆದುಕೊಂಡು, ಸಮಯಕ್ಕೆ ಸರಿಯಾಗಿ, ಕರಾರುವಾಕ್ಕಾದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ | ಸಮರಾಂಕಣ | ಅಗ್ನಿ 5 ಕ್ಷಿಪಣಿ: ಭಾರತದ ಬತ್ತಳಿಕೆಯಲ್ಲಿದೆ ಐಸಿಬಿಎಂ ಅಸ್ತ್ರ

ಆಧುನಿಕ ಯುದ್ಧರಂಗವು ಎಷ್ಟು ವೇಗವಾಗಿ ಮಾಹಿತಿಗಳ ವರ್ಗಾವಣೆಯಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇಂದಿಗೂ ಮಧ್ಯಮ ಹಾಗೂ ಹಿರಿಯ ವರ್ಗದ ಮಿಲಿಟರಿ ಸಂಯೋಜಕರು ನೀಡುವ ಮಾಹಿತಿಗಳು ಸಾಮಾನ್ಯವಾಗಿ ವಾಯ್ಸ್ ಓವರ್ ರೇಡಿಯೋ ಮೂಲಕ ವರ್ಗಾಯಿಸಲಾಗುತ್ತದೆ. ಈಗ 5ಜಿ ತಂತ್ರಜ್ಞಾನದ ಸಹಾಯದಿಂದ ಸೇನಾಪಡೆಗಳು ಸೆನ್ಸರ್‌ಗಳು, ಡ್ರೋನ್‌ಗಳು ಹಾಗೂ ಇತರ ಸಾಧನಗಳನ್ನು ಕಾರ್ಯಾಚರಣೆಗೆ ಇಳಿಸಿ, ಆ ಮೂಲಕ ಕದನ ಪ್ರದೇಶದ ನೈಜ ಚಿತ್ರಣವನ್ನು ಅತ್ಯಂತ ಕ್ಷಿಪ್ರ ವೇಗದಲ್ಲಿ ಪಡೆದುಕೊಳ್ಳಲು ಸಾಧ್ಯ. 5ಜಿ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆಯನ್ನು ಪರಿಚಯಿಸುವ ಮೂಲಕ ಮಾಹಿತಿಗಳ ಅರ್ಥೈಸುವಿಕೆಗೆ ಮಾನವರ ಮಧ್ಯ ಪ್ರವೇಶದಿಂದ ಉಂಟಾಗುವ ವಿಳಂಬವನ್ನೂ ನಿವಾರಿಸಲಾಗುತ್ತದೆ. 5ಜಿ ತಂತ್ರಜ್ಞಾನದ ವೇಗ ಮತ್ತು ಸಾಮರ್ಥ್ಯವನ್ನು ಊಹಿಸಲು ಒಂದು ಉದಾಹರಣೆ ಗಮನಿಸಿ. ಒಂದು ಪ್ರದೇಶದಲ್ಲಿರುವ ಸೇನಾ ಪಡೆಯ ಮೇಲೆ ದಾಳಿ ನಡೆದಾಗ, ಅದರ ಒಂದು ಸೆಕೆಂಡಿನ ಒಳಗೆ ಯುದ್ಧ ವಿಮಾನಗಳು ಸೇನೆಯ ಸಹಾಯಕ್ಕೆ ಆಗಸಕ್ಕೇರುತ್ತದೆ. ಸೇನಾಪಡೆಗಳ ಹಿರಿಯ ಅಧಿಕಾರಿಗಳಿಗೆ ದಾಳಿ ನಡೆದಿದೆ ಎಂಬುದು ಅರಿವಿಗೆ ಬರುವ ಮುನ್ನವೇ ಪಡೆಗಳಿಗೆ ಸಹಾಯ ತೆರಳಿರುತ್ತದೆ. ಇದು 5ಜಿ ತಂತ್ರಜ್ಞಾನದ ಮೇಲುಗೈ.

ಸಾರ್ವಜನಿಕ ಸುರಕ್ಷತಾ ಅಧಿಕಾರಿಗಳು ಅವರ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲೇ ಸಮಸ್ಯೆಗಳು ಎದುರಾದರೂ ಅದನ್ನು ಅವರು ಎಲ್ಲಿದ್ದರೂ ನಿರ್ವಹಿಸಲು ಸಾಧ್ಯವಾಗುತ್ತದೆ. 5ಜಿ ತಂತ್ರಜ್ಞಾನ ನಗರ ನಿರ್ವಾಹಕರಿಗೆ ಜನರು ಹಾಗೂ ಸಂಪನ್ಮೂಲಗಳನ್ನು ಈ ಹಿಂದೆ ಎಂದೂ ಇಲ್ಲದ ವೇಗದಲ್ಲಿ ನಿರ್ವಹಿಸಲು ಸಾಧ್ಯವಾಗಿಸುತ್ತದೆ. ಎಲ್ಲಾದರೂ ಅಗ್ನಿ ಅವಘಡ ಸಂಭವಿಸಿದಾಗ, ಅದನ್ನು ನೋಡಿದ ಜನರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವ ಮೊದಲೇ 5ಜಿ ನೆಟ್‌ವರ್ಕ್ ನಲ್ಲಿರುವ ಸೆನ್ಸರ್ ಅಗ್ನಿ ಆಕಸ್ಮಿಕ ಘಟಿಸಿದ ಸಂದರ್ಭದಲ್ಲೇ ಅದನ್ನು ಗ್ರಹಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ಒದಗಿಸಬಲ್ಲದು. ಒಂದು ಕ್ರಿಮಿನಲ್ ಕೃತ್ಯ ನಡೆದ ಕ್ಷಣದಲ್ಲೇ 5ಜಿ ತಂತ್ರಜ್ಞಾನ ನಿರ್ಧಾರ ತೆಗೆದುಕೊಳ್ಳಲು ಮಾನವ ಹಸ್ತಕ್ಷೇಪದ ಅಗತ್ಯವೇ ಇಲ್ಲದಂತೆ, ಘಟನಾ ಸ್ಥಳಕ್ಕೆ ಸಂಪನ್ಮೂಲಗಳನ್ನು ಕಳುಹಿಸುವ ವ್ಯವಸ್ಥೆ ಕೈಗೊಳ್ಳಬಲ್ಲದು.

ಕಳೆದ ಹತ್ತು ವರ್ಷಗಳ ಹಿಂದೆ ಇದೆಲ್ಲ ಕೇವಲ ಸೈನ್ಸ್ ಫಿಕ್ಷನ್ ಎಂಬಂತೆ ಭಾಸವಾಗುತ್ತಿದ್ದ ವಿಚಾರಗಳು ಈಗ 5ಜಿ ತಂತ್ರಜ್ಞಾನದ ಸಹಾಯದಿಂದ ವಾಸ್ತವವಾಗುತ್ತಿದೆ. ಮುಂದಿನ ತಲೆಮಾರಿನ ದೂರ ಸಂಪರ್ಕ ಜಾಲ ನಮ್ಮನ್ನು ಈ ಹಿಂದೆ ಯಾವತ್ತೂ ಇಲ್ಲದ ರೀತಿಯಲ್ಲಿ ಸಂವಹನ ನಡೆಸುವ, ಸಂಪರ್ಕ ಸಾಧಿಸುವಂತೆ ಮಾಡುತ್ತದೆ. ಇದೊಂದು ಅದ್ಭುತ ಬದಲಾವಣೆಯ ಆರಂಭವಾಗಿದ್ದು, 5ಜಿ ತಂತ್ರಜ್ಞಾನ ಜಗತ್ತನ್ನು ಹೇಗೆ ಇನ್ನಷ್ಟು ಉತ್ತಮಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | ಸಮರಾಂಕಣ | ಭಾರತದ ನೌಕಾಸೇನೆಯಲ್ಲಿ ಸದ್ದಿಲ್ಲದ ಕ್ರಾಂತಿ- INS ವಿಕ್ರಾಂತ್‌

Exit mobile version