Site icon Vistara News

ಸವಿಸ್ತಾರ ಅಂಕಣ | ನೆಹರೂ, ಗಾಂಧಿ, ಸಾವರ್ಕರ್ ಇತ್ಯಾದಿ: ನಡೆಯಲಿ ʼಸೀಮೋಲ್ಲಂಘನೆʼ, ನಿಲ್ಲಲಿ ʼಮೂರ್ತಿ ಭಂಜನೆʼ

nehru gandhi savarkar

ಅಮೃತ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ನಡೆದ ಸಾವರ್ಕರ್, ನೆಹರೂ, ಗಾಂಧೀಜಿ ಕುರಿತ ಸಾರ್ವಜನಿಕ ಹಾಗೂ ಸಾಮಾಜಿಕ ಮಾಧ್ಯಮಗಳ ಚರ್ಚೆಯ ಒಳಿತು-ಕೆಡುಕಿನ ಗುಂಗು ಇನ್ನೂ ಕರಗಿಲ್ಲ. ನಮ್ಮ ಮುತ್ತಜ್ಜ, ಗಿರಿಯಜ್ಜನ ಸಮಾನರಾದ ಈ ಮಹಾನ್‌ ವ್ಯಕ್ತಿತ್ವಗಳ ದೋಷಗಳ ಕುರಿತು ಮೂರ್ನಾಲ್ಕನೇ ತಲೆಮಾರಿನ ನಾವು ಏನನ್ನು ಚರ್ಚಿಸುವುದು? ನೆನಪಿನ ಚಿತ್ರಪಟವಾಗಿ ಗೋಡೆ ಸೇರಿದವರೆಲ್ಲರೂ ದೇವರ ಸಮಾನ ಎಂಬ ಮಾತೊಂದು ಗ್ರಾಮೀಣ ಜನಪದದಲ್ಲಿದೆ. ಇದರರ್ಥ ಸತ್ತವರ ಬಗ್ಗೆ ಕೇಡು ನುಡಿಯಬಾರದು ! ಇದೇ ಮಾತನ್ನು ಬೌದ್ಧಿಕ ವಲಯದವರು- ʻಇತಿಹಾಸದಿಂದ ನಾವು ಪಾಠ ಕಲಿಯೋಣ’ ಎನ್ನುತ್ತಾರೆ. ಅಂದರೆ, ಇತಿಹಾಸದಲ್ಲಿ ಆಗಿ ಹೋಗಿರುವ ಸಂಗತಿಗಳಿಂದ ನಾವು ಪಾಠ ಕಲಿತು, ಒಳಿತೆನೆಡೆಗೆ ಪಯಣಿಸಬೇಕೆ ಹೊರತು, ಇತಿಹಾಸದ ಕೇಡುಗಳನ್ನು ವರ್ತಮಾನದಲ್ಲಿ ಎತ್ತಿ ತೋರಿಸುತ್ತಾ ಕೂರಬಾರದು ಎಂದಷ್ಟೇ.

ಸಾವರ್ಕರ್, ನೆಹರೂ ಅವರ ಕುರಿತು ಆಲೋಚನೆಯನ್ನು ವಿಸ್ತರಿಸುವ ಮುನ್ನ ವಚನ ಸಾಹಿತ್ಯದ ಕುರಿತು ಒಂದಿಷ್ಟು ಹೇಳುವುದಿದೆ. ವಿಶ್ವಕ್ಕೆ ಭಾರತ ಕೊಟ್ಟ ಅನೇಕ ಕೊಡುಗೆಗಳಲ್ಲಿ ಒಂದಾದ ವಚನ ಸಾಹಿತ್ಯದ ಮೂಲಕವೇ ನನ್ನ ಲಹರಿಯನ್ನು ಶುರು ಮಾಡುವೆ. ಇತ್ತೀಚೆಗೆ ಸಿರಿಗೆರೆ ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶರಣರ ವಿಡಿಯೊವೊಂದನ್ನು ನೋಡುತ್ತಿದ್ದೆ. ʻಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ. ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿʼ ಎಂಬ ವಚನವನ್ನು ಉದಾಹರಿಸಿದ ಸ್ವಾಮೀಜಿಯವರು ಸುಲಲಿತವಾಗಿ, ಅದನ್ನು ಈಗಿನ ಕಾಲಕ್ಕೆ ಹೊಂದಿಸಿಬಿಟ್ಟರು.

ಕಳಬೇಡ ಎಂಬುದು ಭಾರತೀಯ ದಂಡ ಸಂಹಿತೆಯ (ಐಪಿಸಿ) 379ನೇ ಸೆಕ್ಷನ್‌ಗೆ ಸಂಬಂಧಿಸಿದರೆ, ಕೊಲಬೇಡ ಎಂಬುದು ಐಪಿಸಿ 302ಕ್ಕೆ ಹಾಗೂ ಹುಸಿಯ ನುಡಿಯಲು ಬೇಡ ಎಂಬುದು ಐಪಿಸಿ 201ರ ಶಿಕ್ಷೆಯನ್ನು ನೆನಪಿಸುತ್ತವೆ. ಭಾರತೀಯ ದಂಡ ಸಂಹಿತೆ ಹೆಸರು ಹೇಳುವಂತೆ, ಅದು ನಮ್ಮ ದೇಶದ ಕಾನೂನು. ಹಾಗಾಗಿ, ನಮ್ಮ ನೆಲಕ್ಕಷ್ಟೇ ಅದು ಅನ್ವಯವಾಗುತ್ತದೆ. ಉಳಿದಂತೆ ಈ ಐಪಿಸಿ, ಸಿಆರ್‌ಪಿಸಿ ಎಲ್ಲವು ಭಾರತದ ಹೊರಗೆ ಬೆಲೆಯನ್ನು ಕಳೆದುಕೊಳ್ಳುತ್ತವೆ. ಆದರೆ ಶರಣರ ವಚನಗಳು ಗಡಿಯನ್ನೂ ಮೀರಿ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಎಂಬುದನ್ನು ಸ್ವಾಮೀಜಿ ಸೊಗಸಾಗಿ ವಿವರಿಸಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಮಹಾನ್ ವಚನಗಳು ಇಂದಿಗೂ ಪ್ರಸ್ತುತವಾಗಿವೆ, ಅವುಗಳನ್ನು ಅಳವಡಿಸಿಕೊಳ್ಳುವುದು ಮನುಕುಲಕ್ಕೆ ಒಳಿತು. ಆದರೆ 12ನೇ ಶತಮಾನದಲ್ಲಿ ಮೂಡಿದ್ದ ವಚನಗಳು ಮತ್ತೆ ಜಗದ ಬೆಳಕು ಕಂಡಿದ್ದು 19ನೇ ಶತಮಾನದಲ್ಲಿ. ಧಾರವಾಡದಲ್ಲಿ ಜನಿಸಿದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂಬ ಮಹಾತ್ಮರ ಕಾರ್ಯದಿಂದಾಗಿ ಇಂದು ನಮಗೆಲ್ಲ ವಚನಗಳು ಒಟ್ಟಿಗೆ, ಸಮಗ್ರವಾಗಿ ಸಿಗುತ್ತವೆ. ಫ.ಗು. ಹಳಕಟ್ಟಿ ಎಂದೇ ಪ್ರಸಿದ್ಧವಾದ ಈ ಮಹಾತ್ಮರು ಊರೂರು ಅಲೆದು ಜನರಿಂದ ವಚನಗಳನ್ನು ಸಂಗ್ರಹಿಸಿದರು. ಅದನ್ನು ಅಚ್ಚು ಹಾಕಿಸಲು ಹರಸಾಹಸ ಪಟ್ಟರು. ಇದಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದು, ಮನೆ ಮಾರುವ ವಿಚಾರಗಳನ್ನು ಕಂಡ ಹಾಗೂ ಸೇವೆಯನ್ನು ಶ್ಲಾಘಿಸಿದ, ಅಂದಿನ ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯರು ಮಠದಿಂದ ಬಂಗಾರದ ಪದಕವನ್ನು ಕೊಟ್ಟು ಸನ್ಮಾನಿಸಿದರು. ಇದನ್ನು ಮಾರಿ ಅದರಿಂದ ಋಣಮುಕ್ತರಾಗು ಎಂದು ಹರಸಿದ್ದರು.

ಇಷ್ಟೆಲ್ಲ ಕಥೆಯನ್ನು ಏಕೆ ಹೇಳಬೇಕಾಯಿತು ಎಂದರೆ, ಫ.ಗು. ಹಳಕಟ್ಟಿಯವರು, ವಚನಗಳ ಸಾರವನ್ನು ಗ್ರಹಿಸಿ, ಅವುಗಳನ್ನು ಹೊಸತಾಗಿ ಕಟ್ಟಿದರು. ಆ ಕಾಲದ ಗ್ರಾಮೀಣ ಜನ, ಬರಹಗಾರರು, ತತ್ತ್ವಪದ ಹಾಡುವವರು- ಎಲ್ಲರನ್ನೂ ಸಂದರ್ಶಿಸಿ, ವಚನಗಳನ್ನು ಮತ್ತೆ ಕಟ್ಟಿದರು. ಹಳಕಟ್ಟಿ ಕೇಳಿದ್ದರಲ್ಲಿ, ಅವರಿಗೆ ದೊರೆತ ಪರಿಕರಗಳಲ್ಲಿ, ಅವರು ಗ್ರಹಿಸಿಕೊಂಡಿದ್ದರಲ್ಲಿ ನೂರೆಂಟು ತಪ್ಪು-ಒಪ್ಪುಗಳು ಇದ್ದವೇನೋ ? ಬಲ್ಲವರು ಯಾರು ? ಬಸವಾದಿ ಶರಣರು ಮಾಡಿರಬಹುದಾದ ತಪ್ಪುಗಳೇನು? ಅವರ ವಚನಗಳಲ್ಲಿರುವ ದೋಷಗಳೇನು? ಈ ಯಾವ ಸಂಗತಿಗಳು ಹಳಕಟ್ಟಿ ಅವರಿಗೆ ಮುಖ್ಯವಾಗಲಿಲ್ಲ. ಅವುಗಳನ್ನು ಎತ್ತಿಯಾಡಿಸಿ ತಾನು ದೊಡ್ಡ ಮನುಷ್ಯ ಎಂದು ಬಿಂಬಿಸಿಕೊಳ್ಳಬೇಕು ಎಂಬ ಮನಸ್ಸೂ ಅವರಿಗೆ ಇರಲಿಲ್ಲ. ತಮ್ಮ ಆರ್ಥಿಕ, ಕೌಟುಂಬಿಕ ಇತಿಮಿತಿಗಳನ್ನು ಮೀರಿ, ಸೀಮೋಲ್ಲಂಘನ ಮಾಡಿ ವಚನಗಳನ್ನು ಹೊಸ ಜಗತ್ತಿಗೆ ನೀಡಿದರು. ಆದರೆ ಇಂದು ಸಮಾಜದಲ್ಲಿ ಇದಕ್ಕೆ ತದ್ವಿರುದ್ಧವಾದ ಕೆಲಸ ನಡೆಯುತ್ತಿದೆ. (ನಮ್ಮ ಕಾಲದ ಸಂಶೋಧಕರ ಬೌದ್ಧಿಕ ಆಸಕ್ತಿಯ ಸ್ಯಾಂಪಲ್ ನೋಡಿ- ಬಸವಣ್ಣನ ಜಾತಿ ಯಾವುದು ? ಆತ ಮೇಲ್ಜಾತಿಯವನೇ, ತಳ ಸಮುದಾಯದವನೇ ? ಅವನಿಗೆ ಇಬ್ಬರು ಹೆಂಡತಿಯರು, ಆತನ ಊಟದ ಪದ್ಧತಿ ಏನು?-ಇತ್ಯಾದಿ!)

ಹಳಕಟ್ಟಿಯವರ ವಿವೇಕ ನಿಜಕ್ಕೂ ಗ್ರೇಟ್‌. ಆದರೆ, ಇಂದೇನಾಗಿದೆ ನೋಡಿ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಶ್ರಮಿಸಿದ ಮಹಾನ್ ವ್ಯಕ್ತಿಗಳ ಅರ್ಹತೆಯನ್ನು ಅಳೆಯುವ ಹಂತಕ್ಕೆ ಇಂದು ಅನೇಕರು ಇಳಿದಿದ್ದಾರೆ. ಅವರು ಅಂದು ತೆಗೆದುಕೊಂಡ ಆ ನಿರ್ಧಾರದಿಂದ ಇಂದು ಈ ಸಂಕಷ್ಟ ಎದುರಾಗಿದೆ. ಹಾಗಾಗಿ ಅವರನ್ನು ಸ್ಮರಿಸಲೇಬಾರದು ಎನ್ನುವ ಹಂತಕ್ಕೆ ಮಾತುಗಳು ಕೇಳಿಬರುತ್ತಿವೆ.

ಇದೊಂದು ರೀತಿ, ಮೂವರು ಹೆಂಡತಿಯರ ನಮ್ಮಜ್ಜ ೧೨ ಜನ ಮಕ್ಕಳನ್ನು ಮಾಡಿಕೊಂಡ ಪರಿಣಾಮವೇ, ನಮಗಿಂದು ಪಿತ್ರಾರ್ಜಿತ ಆಸ್ತಿಯ ಪ್ರಮಾಣ ಕಡಿಮೆಯಾಗಿದೆ. ಒಂದು ಮದುವೆಯಾಗಿ, ಒಂದೇ ಮಗುವನ್ನು ಮಾಡಿಕೊಂಡಿದ್ದರೆ ಆಸ್ತಿಯೆಲ್ಲವೂ ನನ್ನೊಬ್ಬನದ್ದೇ ಆಗಿರುತ್ತಿತ್ತು. ಹಾಗಾಗಿ, ಅಜ್ಜನನ್ನು ನೆನಪಿಸಿಕೊಳ್ಳುವುದೇ ಬೇಡ ಎಂಬ ಮೊಮ್ಮಗನೊಬ್ಬನ ಅವಿವೇಕದಂತೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

ಕಳೆದ ನಾಲ್ಕು ವಾರದಿಂದ ಸ್ವಾತಂತ್ರ್ಯ ವೀರ ಸಾವರ್ಕರರ ಕುರಿತು ಕೇಳಿಬರುತ್ತಿರುವ ಮಾತುಗಳನ್ನು ಚರ್ಚೆ ಮಾಡಿದೆವು. ಸಾವರ್ಕರರ ದೇಶಭಕ್ತಿ, ತ್ಯಾಗ, ಭಾವನೆಗಳನ್ನು ಬಿಟ್ಟು ಅವರ ತಪ್ಪುಗಳನ್ನಷ್ಟೆ ಎತ್ತಾಡಿಸುವ ಒಂದು ವರ್ಗ ಇಂದು ಜೀವಂತವಾಗಿದೆ. ಅದೇ ರೀತಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕುರಿತು ಅಪಪ್ರಚಾರವನ್ನೇ ಮಾಡುವ ಇನ್ನೊಂದು ವರ್ಗವೂ ಇದೆ.

ನೆಹರೂ ಕಾರಣದಿಂದಾಗಿ ದೇಶ ವಿಭಜನೆಯಾಯಿತು, ನೆಹರೂ ಕಾರಣದಿಂದಾಗಿ ಮುಸ್ಲಿಂ ತುಷ್ಟೀಕರಣವಾಯಿತು, ನೆಹರೂ ಕಾರಣದಿಂದಾಗಿಯೇ ಅಭಿವೃದ್ಧಿಯಲ್ಲಿ ದೇಶ ಹಿನ್ನಡೆ ಅನುಭವಿಸಿತು, ನೆಹರೂ ಕಾರಣಕ್ಕೇ ಕಾಶ್ಮೀರ ಸಮಸ್ಯೆ ಉಲ್ಬಣಿಸಿತು, ನೆಹರೂ ಕಾರಣದಿಂದಾಗಿಯೇ ಚೀನಾ ಯುದ್ಧದಲ್ಲಿ ಭಾರತ ಸೋಲುಂಡಿತು… ಇಂತಹ ಅನೇಕ ವಾದಗಳಿವೆ. ಈ ಪೈಕಿ ಕೆಲವು ವಾದಗಳನ್ನು ನಿರಾಕರಿಸಲೂ ಸಾಧ್ಯವಿಲ್ಲ. ಇಂಥದ್ದೊಂದು ನಿರಾಕರಣೆ, ತಕರಾರನ್ನು ಹೊಂದಿಯೂ ನೆಹರೂ ಅವರನ್ನು ಪ್ರೀತಿಸಲು, ಗೌರವಿಸಲು ನಮಗೆ ಹತ್ತಾರು ಕಾರಣಗಳಿವೆ ಎಂಬುದನ್ನು ಮರೆಯಬಾರದು. ನೆಹರೂ ಅವರ ಕಾಲದಲ್ಲೇ ದೇಶದ ಎಲ್ಲೆಡೆ ಜಲಾಶಯಗಳು ನಿರ್ಮಾಣವಾದವು. ವೇಗವಾಗಿ ಬೆಳೆಯುತ್ತಿದ್ದ ಭಾರತೀಯ ಕೈಗಳಿಗೆ ಕೆಲಸ ಕೊಡಲು ಕೈಗಾರಿಕೀಕರಣ ಆಗಿದ್ದು ನೆಹರೂ ಅವಧಿಯಲ್ಲಿ. ಪಂಚವಾರ್ಷಿಕ ಯೋಜನೆಗಳು ರೂಪು ಗೊಂಡಿದ್ದು, ಸಂಶೋಧನಾ ಸಂಸ್ಥೆಗಳು, ಏಮ್ಸ್‌ನಂಥ ಆಸ್ಪತ್ರೆ ಸ್ಥಾಪನೆಯಾಗಿದ್ದು ಕೂಡ ಅವರ ಕಾಲದಲ್ಲಿಯೇ. ಜಲಾಶಯ ನಿರ್ಮಾಣದ ಕಾರಣದಿಂದ ಅನೇಕ ಗ್ರಾಮಗಳು ಮುಳುಗಡೆ ಆಗಿರಬಹುದು, ಆದರೆ ಮುಂದಿನ ಅನೇಕ ಪೀಳಿಗೆಗಳನ್ನು ಈ ಯೋಜನೆಗಳು ಸಾಕಿಲ್ಲವೇ ? ಮಹಿಳೆಯರಿಗೆ ಸಮಾನತೆ, ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದು, ಭಾರತೀಯ ಎಲ್ಲ ಭಾಷೆಗಳಿಗೂ ಸಮಾನ ಆದ್ಯತೆ ನೀಡಿದ್ದು, ವಿಜ್ಞಾನ-ತಂತ್ರಜ್ಞಾನವನ್ನು ಪ್ರೋತ್ಸಾಹಿಸಿದ್ದು- ಒಂದೇ ಎರಡೇ, ನೆಹರೂ ಅವರನ್ನು ಮರೆಯಲು ಸಾಧ್ಯವೇ ಇಲ್ಲ.

ನಿಜ, ದೇಶ ವಿಭಜನೆಯನ್ನು ʼಎ ಫೆಂಟಾಸ್ಟಿಕ್ ನಾನ್ಸೆನ್ಸ್ʼ ಎಂದು ಅಪಹಾಸ್ಯ ಮಾಡಿದ ನೆಹರೂ, ಅದೇ ತುಂಡಾದ ದೇಶದ ಮೊದಲ ಪ್ರಧಾನಿಯಾದರು. ಅದು ಸತ್ಯ. ಆದರೆ ಇದೇ ಮಾತನ್ನು ಮಹಾತ್ಮಾ ಗಾಂಧೀಜಿಯವರೂ ಹೇಳಿದ್ದರಲ್ಲ? ದೇಶವನ್ನು ತುಂಡರಿಸಲು ಮುಂದಾಗುವವರ ಕತ್ತಿಗಳಿಗೆ ನಮ್ಮ ಕತ್ತಿಗಳು ಉತ್ತರ ನೀಡುತ್ತವೆ ಎಂದು ಸರ್ದಾರ್ ಪಟೇಲರು ಹೇಳಿದ್ದರಲ್ಲ? ಹಾಗಾದರೆ ಎಲ್ಲರೂ ಸ್ವಾರ್ಥಿಗಳು ಎಂದು ತೀರ್ಮಾನಿಸಿಬಿಡಬೇಕೆ? ಆ ಕಾಲದ ಒತ್ತಡ, ನಿರ್ಧಾರದ ಹಿಂದೆ ಕೆಲಸ ಮಾಡಿದ ಅನಿವಾರ್ಯ ಸಂಗತಿಗಳು ಏನಿತ್ತೋ ? ಒಂದು ವೇಳೆ, ಅದನ್ನು ತಪ್ಪೇ ಎಂದು ಒಪ್ಪಿಕೊಂಡರೂ, ಈಗ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ?

ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

ವ್ಯಕ್ತಿಗಳಲ್ಲಿ ಮಾತ್ರವಲ್ಲ ಮಹಾನ್ ವ್ಯಕ್ತಿತ್ವಗಳಲ್ಲೂ ದೋಷಗಳು ಇರುತ್ತವೆ. ದೋಷ-ದೌರ್ಬಲ್ಯವಿಲ್ಲದ ವ್ಯಕ್ತಿ ದೇವರಾಗುತ್ತಾನೆ, ವ್ಯಕ್ತಿಗಳನ್ನು ಅವನ ದೋಷ ಸಹಿತ ಪ್ರೀತಿಸು ಎನ್ನುತ್ತಾರೆ ಗಾಂಧಿ ! ಅಂದರೆ, ಗಾಂಧಿಯಲ್ಲೂ ದೋಷವಿತ್ತು. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ ಕೂಡ. ಸುಭಾಷ್ಚಂದ್ರ ಬೋಸ್, ನೆಹರೂ, ಸಾವರ್ಕರ್… ಯಾರೂ ದೋಷಗಳಿಗೆ ಹೊರತಲ್ಲ. ಯಾರೂ ಪರಿಪೂರ್ಣವೂ ಅಲ್ಲ. ಇತಿಹಾಸದ ಪುಟಗಳಲ್ಲಿ ತಪ್ಪೆಸಗಿರುವುದು ಯಾವುದೇ ಕಂಡುಬಂದರೂ ಅದನ್ನು ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಲೇಬೇಕು. ಆದರೆ ಈ ಪ್ರಕ್ರಿಯೆಯಲ್ಲಿ, ʼಹಳೆಯʼ ಸಾವರ್ಕರರನ್ನು ಮೀರಿದ ʼಹೊಸʼ ಸಾವರ್ಕರ್, ಮುಂದಿನ ಪೀಳಿಗೆಗೆ ಲಭಿಸುವಂತಾಗಬೇಕು. ಹಳೆಯ ನೆಹರೂರಲ್ಲಿದ್ದ ದೋಷಗಳನ್ನು ಕಳೆದು ಅವರಲ್ಲಿರುವ ದೂರಗಾಮಿ ಆಲೋಚನೆಗಳು ಮುಂದಿನವರಿಗೆ ಲಭಿಸಬೇಕು. ಅದನ್ನು ಮಂಥನ ಎನ್ನಲಾಗುತ್ತದೆ. ಮಂಥನದಲ್ಲಿ ವಿಷ, ಅಮೃತಗಳೆರಡೂ ಸಿಗುತ್ತವೆ. ಆದರೆ ನಮ್ಮ ಉದ್ದೇಶ ಅಮೃತವನ್ನು ಪಡೆಯುವುದೇ ಆಗಿರಬೇಕು.

ಸ್ವಾತಂತ್ರ್ಯಾನಂತರ ದೇಶವನ್ನು ನಡೆಸಿಕೊಂಡು ಹೋಗುವ ಮಹತ್ವದ ಹೊಣೆಗಾರಿಕೆ ನೆಹರೂ ಅವರ ಮೇಲಿತ್ತು. ಅವರು ದೇಶದ ಜನರ ಹೊಟ್ಟೆ ತುಂಬಿಸಲು, ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗ ಸೃಜನೆ ಮಾಡಲು ನೀಡಿದಷ್ಟು ಆಲೋಚನಾ ಶ್ರಮವನ್ನು, ಸಾಂಸ್ಕೃತಿಕ ಅಭಿವೃದ್ಧಿಗೆ ನೀಡಲಿಲ್ಲ ಎನ್ನುವುದು ಸತ್ಯ. ಉದಾಹರಣೆಗೆ, ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ ಸಂಪೂರ್ಣವಾಗಿ ರಚನೆ ಆಗಿದ್ದೇ ಇಸ್ಲಾಂ ಆಧಾರದಲ್ಲಿ. ಪಾಕಿಸ್ತಾನದ ಅಧಿಕೃತ ಮತ ಅದು ಇಸ್ಲಾಂ. ಹಾಗಾದರೆ ಸಹಜವಾಗಿಯೇ ಭಾರತ ಹಿಂದು ರಾಷ್ಟ್ರ ಎಂದು ಅಧಿಕೃತವಾಗಿ ಘೋಷಣೆ ಆಗಬೇಕಿತ್ತಲ್ಲವೇ? ಹಿಂದುಗಳು ನೆಲೆಸಿರುವ ನೆಲ ಈ ಭಾರತ, ಹಿಂದುಗಳಿಗಿರುವ ಏಕೈಕ ನೆಲ ಭಾರತ. ಹೀಗೆ ಮಾಡಿದ್ದರೆ ಇಂದು ನೆಹರೂ ಅವರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವಂತಾಗುತ್ತಿತ್ತು. ಆದರೆ ಅವರಿಂದ ಅದು ಆಗಲಿಲ್ಲ, ಹಾಗಾಗಿ ದೇಶದ ಒಬ್ಬ ನಾಯಕರಾಗಿ ಉಳಿದಿದ್ದಾರೆ.

ಈ ರೀತಿಯ ಆಲೋಚನೆಯನ್ನು ಬಿಟ್ಟು ಕೇವಲ ಕೆಡುಕನ್ನೇ ಹುಡುಕಿ ಟೀಕಿಸುವ ಅನೇಕರು ಇಂದು ಇದ್ದಾರೆ. ಸಾವರ್ಕರರ ರೀತಿಯಲ್ಲೇ ನೆಹರೂ, ಗಾಂಧಿ, ಅಂಬೇಡ್ಕರ್ ಅವರನ್ನೂ ಟೀಕಿಸುವವರಿದ್ದಾರೆ. ಅದರಲ್ಲೂ ಶಾಸಕರು, ಸಂಸದರು, ಸಚಿವ ಸ್ಥಾನ ಅಲಂಕರಿಸಿರುವವರು, ಮುಖ್ಯಮಂತ್ರಿಯಾಗಿರುವವರು ತಮ್ಮ ಸ್ಥಾನದ ಘನತೆಯನ್ನೂ ಮರೆತು ಅಪದ್ಧಗಳನ್ನು ನುಡಿಯುತ್ತಿರುವುದು ನೋವಿನ ಸಂಗತಿ. ಹೊಸದಾಗಿ ಕಟ್ಟುವುದಕ್ಕಿಂತಲೂ ಇರುವುದನ್ನು ಹಾಳು ಮಾಡುವುದರಲ್ಲೇ ಇವರಿಗೆ ಆಸಕ್ತಿ. ಮೂರ್ತಿ ಭಂಜನೆಯ ಈ ಕಾರ್ಯದಿಂದ ಯಾವ ಪುರುಷಾರ್ಥವೂ ಈಡೇರುವುದಿಲ್ಲ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

ಭಾರತದ ಮೇಲೆ ದಾಳಿ ಮಾಡಿದ ಮಹಮ್ಮದ್ ಘೋರಿಯನ್ನು ಮೂರ್ತಿ ಭಂಜಕ ಎನ್ನಲಾಗುತ್ತಿತ್ತು. ಹಿಂದು ದೇವಾಲಯಗಳನ್ನು, ಇಲ್ಲಿನ ಸಾಂಸ್ಕೃತಿಕ ಗುರುತುಗಳನ್ನು ಭಗ್ನ ಮಾಡುವುದೇ ಅವನ ಕೆಲಸವಾಗಿತ್ತು. ಅಲ್ಲಿ ಹೊಸತೇನನ್ನೋ ಕಟ್ಟಬೇಕು ಎಂಬ ಆಲೋಚನೆ ಇರಲಿಲ್ಲ, ಬದಲಿಗೆ ಇಸ್ಲಾಂ ಅನ್ನು ಒಪ್ಪದ ಹಿಂದುಗಳಿಗೆ ಚಿತ್ರಹಿಂಸೆ ನೀಡುವ ವಿಕೃತ ಸಂತೋಷವಷ್ಟೆ ಸಿಗುತ್ತಿತ್ತು. ಹಾಗಾದರೆ, ಇದೀಗ ಯಾವುದೇ ಕಟ್ಟುವ ಆಲೋಚನೆ ಇಲ್ಲದೆ ಮತ್ತೊಬ್ಬ ಇತಿಹಾಸ ಪುರುಷನನ್ನು ತೇಜೋವಧೆ ಮಾಡುವುದನ್ನೇ ಕೆಲಸ ಮಾಡಿಕೊಳ್ಳುವವರಿಗೂ ಮಹಮ್ಮದ್ ಘೋರಿಗೂ ಏನೂ ವ್ಯತ್ಯಾಸ ಉಳಿಯಲೇ ಇಲ್ಲ.

ನಾವೆಲ್ಲರೂ ನಮ್ಮ ಇತಿಮಿತಿಗಳನ್ನು ಮೀರಿ, ಸೀಮೋಲ್ಲಂಘನ ಮಾಡಿ ಮುಂದಿನ ಪೀಳಿಗೆಗೆ ಉತ್ತಮ ವ್ಯಕ್ತಿಗಳ ಕೊಡುಗೆಯನ್ನು ನೋಡೋಣ. ಯಾವುದೇ ಕಾರಣಕ್ಕೆ ಮೂರ್ತಿ ಭಂಜಕರಾಗುವುದು ಬೇಡ.

Exit mobile version