Site icon Vistara News

ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

veer savarkar

ಧರ್ಮದ ಜಾಗ ಹೃದಯದಲ್ಲೋ, ಹೊಟ್ಟೆಯಲ್ಲೋ?

ಅಸ್ಪೃಶ್ಯತೆ ಎನ್ನುವುದು ಅಸ್ಪೃಶ್ಯತೆಗೆ ತುತ್ತಾದ ನನ್ನ ಜನರಿಗೆ ನಾಚಿಕೆ ಉಂಟುಮಾಡುವ ಸಂಗತಿಯಲ್ಲ. ಬದಲಿಗೆ, ಸುಧಾರಣೆಯ ಪರವಾಗಿರುವ ಹಿಂದು ಸಮಾಜ ಸುಧಾರಕರಿಗೆ ನಾಚಿಕೆಯ ವಿಷಯ.

— ಇದು ಮಹಾತ್ಮ ಗಾಂಧೀಜಿಯವರ ಮಾತು. 1932ರಲ್ಲಿ ಲಂಡನ್ನಿನಲ್ಲಿ ನಡೆದ ಎರಡನೇ ದುಂಡುಮೇಜಿನ ಸಭೆಯಲ್ಲಿ ಈ ನೋವು ಹಂಚಿಕೊಂಡ ಗಾಂಧಿ, ಇದರ ನಿರ್ಮೂಲನೆಗಾಗಿ ಭಾರತದಲ್ಲಿ ಒಂದು ದೊಡ್ಡ ಪಾದಯಾತ್ರೆಯನ್ನೇ ನಡೆಸಿದರು. ಜಾಗೃತಿಯನ್ನೂ ಮೂಡಿಸಿದರು. ಸ್ವರಾಜ್ಯ ಮತ್ತು ಸಾಮಾಜಿಕ ಬದಲಾವಣೆ ಎಂಬುದು ಜತೆಜತೆಯಲ್ಲಿಯೇ ಸಾಗಬೇಕು ಎಂಬುದು ಗಾಂಧಿ ಅವರ ದೊಡ್ಡ ನಂಬಿಕೆಯಾಗಿತ್ತು. ಅದರಂತೆ ನಡೆದರು ಕೂಡ.

ಹೆಚ್ಚು ಕಡಿಮೆ, ಸಾಮಾಜಿಕ ಸುಧಾರಣೆ ಮತ್ತು ಅಸ್ಪೃಶ್ಯತೆ ಕುರಿತು ವಿನಾಯಕ ದಾಮೋದರ ಸಾವರ್ಕರ್ ಕೂಡ ಗಾಂಧಿಯಂತೆ ದನಿ ಎತ್ತಿದ್ದರು ಮತ್ತು ಅವರಿಗಿಂತ ಮುಂಚೆಯೇ ಕೆಲಸ ಮಾಡಿದ್ದರು. ಹಾಗೆ ನೋಡಿದರೆ, ಹಿಂದೂ ಧರ್ಮದ ಕುರಿತು ಅವರ ನಿಲುವು ಗಾಂಧಿ ಅವರಿಗಿಂದಲೂ ಪ್ರಖರವಾಗಿತ್ತು. ಈ ಕುರಿತು ಸಾವರ್ಕರ್ ಹೇಳುತ್ತಾರೆ, “ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ ಆಚರಣೆ ಮತ್ತು ಹಿಂದೂಗಳನ್ನು ನುಂಗಿ ನೊಣೆಯುತ್ತಿರುವ ಮೌಢ್ಯಗಳನ್ನು ಕಿತ್ತೊಗೆಯಬೇಕಿದೆ. ಎಲ್ಲರನ್ನೂ ಒಳಗೊಳ್ಳುವ ಹಾಗೂ ವೈಜ್ಞಾನಿಕ ಮನೋಧರ್ಮ ಹಿಂದೂ ಧರ್ಮದಲ್ಲಿ ಬೆಳೆಸಿಕೊಳ್ಳಬೇಕಿದೆ !”

1927ರಲ್ಲಿ ʼನನ್ನ ಜೀವನ ಪಯಣʼ ಹಾಗೂ ʼಹಿಂದುತ್ವದ ಪಂಚಪ್ರಾಣʼ ಎಂಬ ಲೇಖನಗಳಲ್ಲಿ ಸಾವರ್ಕರ್ ಬರೆದಿರುವ ಮುಂದಿನ ಸಾಲು ಬಹಳ ಆಸಕ್ತಿದಾಯಕವಾಗಿದೆ. “ಹಿಂದುಗಳು ಮಾಡಿದ ಅಡುಗೆಯನ್ನು ಸೇವಿಸಿದ ಕೂಡಲೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರು ಹಿಂದುಗಳಾಗಿಬಿಡುವುದಿಲ್ಲ. ಅವರು ಮುಸ್ಲಿಂ ಅಥವಾ ಕ್ರೈಸ್ತರಾಗಿಯೇ ಇರುತ್ತಾರೆ. ಹಾಗಾದ ಮೇಲೆ ಮುಸ್ಲಿಮರು ಮಾಡಿದ ಆಹಾರ ಸೇವಿಸಿದ ಕೂಡಲೆ ನಿನ್ನ ಧರ್ಮ ಹೇಗೆ ಕೊಚ್ಚಿಕೊಂಡು ಹೋಗಿಬಿಡುತ್ತದೆ? ನಿಮ್ಮ ಧರ್ಮದ ಜೀರ್ಣ ಶಕ್ತಿ ಅದೇಕೆ ಅಷ್ಟೊಂದು ದುರ್ಬಲವಾಯಿತು? ಸಹೋದರರೇ ಕೇಳಿ, ವಿಶ್ವದಲ್ಲಿ ಯಾರೇ ತಯಾರಿಸಿದ ಆಹಾರವನ್ನು ಸೇವಿಸಿ ಜೀರ್ಣಿಸಿಕೊಳ್ಳಿ, ಹಿಂದುಗಳಾಗಿಯೇ ಇರಿ. ಆಗ ಮಾತ್ರ ಈ ಸಮಾಜಕ್ಕೆ ಏನಾದರೂ ಆಶಾಭಾವನೆ ಉಳಿಯುತ್ತದೆ. ಧರ್ಮದ ಜಾಗ ಹೃದಯದಲ್ಲಿರಬೇಕೆ ವಿನಃ ಹೊಟ್ಟೆಯಲ್ಲಲ್ಲ…”

ಹಿಂದೂ ಸಮಾಜವನ್ನು ಎಷ್ಟು ಪ್ರೀತಿಸುತ್ತಿದ್ದರೋ, ಇಲ್ಲಿನ ದುಷ್ಟ ಆಚರಣೆಗಳನ್ನು ತೊಡೆದುಹಾಕಬೇಕು ಎಂಬ ಉತ್ಕಟ ಬಯಕೆ ಅಷ್ಟೇ ಪ್ರಮಾಣದಲ್ಲಿ ಸಾವರ್ಕರರಿಗಿತ್ತು. ದಲಿತರನ್ನು ತಮ್ಮ ಹತ್ತಿರಕ್ಕೆ ಬಿಟ್ಟುಕೊಳ್ಳದ ಅಸ್ಪೃಶ್ಯತೆಯಷ್ಟೆ ಅಲ್ಲದೆ ಮೇಲ್ಜಾತಿಯ ಸಮುದಾಯಗಳ ಒಳಗಿನ ಸಮಸ್ಯೆಗಳೂ ಸಾವರ್ಕರ್‌ ಅವರ ಚಿಂತೆಯ ಕಾರಣಗಳಾಗಿದ್ದವು. ಹಿಂದು ಧರ್ಮ ತನ್ನನ್ನು ತಾನು ಏಳು ರೀತಿಯಲ್ಲಿ ಬಂಧಿಸಿಕೊಂಡಿದೆ ಎಂದು ಸಾವರ್ಕರ್ ನಂಬಿದ್ದರು. ಅವುಗಳನ್ನು ಸಾವರ್ಕರ್ ʼಬಂದಿ (bandi)ʼ ಎಂದು ಕರೆದಿದ್ದರು.

ಪತಿತ ಪಾವನ ಮಂದಿರದ ಒಳಾಂಗಣ

ಆ ಏಳು ಬಂದಿಗಳೆಂದರೆ, 1. ಸ್ಪರ್ಶಬಂದಿ (ಅಸ್ಪೃಶ್ಯತೆ ಆಚರಣೆ), 2. ರೋಟಿಬಂದಿ (ಕೆಲವು ಸಮುದಾಯಗಳೊಂದಿಗೆ ಕುಳಿತು ಊಟ ಸೇವಿಸಬಾರದು ಎಂಬ ನಿರ್ಬಂಧ), 3. ಬೇಟಿಬಂದಿ (ಅಂತರ್ಜಾತಿ ವಿವಾಹಗಳ ನಿಷೇಧ), 4. ವ್ಯವಸಾಯಬಂದಿ (ಕೆಲವು ಉದ್ಯೋಗಗಳನ್ನು ಇಂಥದ್ದೇ ವರ್ಗ ಮಾಡಬೇಕು, ಬೇರೆಯವರು ಮಾಡಬಾರದು ಎಂಬ ನಿರ್ಬಂಧ), 5. ಸಿಂಧುಬಂದಿ (ಈಗ ಕೇಳಿದರೆ ನಂಬಲು ಸಾಧ್ಯವಾಗದ ನಿರ್ಬಂಧ ಇದು. ಸಿಂಧು ನದಿಯನ್ನಾಗಲಿ, ಸಮುದ್ರವನ್ನಾಗಲಿ ದಾಟಿ ಹೋದರೆ ಅಂಥವರ ಸಾಮಾಜಿಕ ಮೌಲ್ಯ ಕಳೆದುಹೋಗುತ್ತದೆ ಎಂಬ ನಂಬಿಕೆ. ಸಮುದ್ರಯಾನ ಮಾಡುವ ಸಂದರ್ಭದಲ್ಲಿ ನಿತ್ಯ ಪೂಜೆಯನ್ನು ನಡೆಸುವುದು ತಪ್ಪುತ್ತದೆ ಎನ್ನುವುದು ಒಂದು ಕಾರಣವಾದರೆ, ಸಮುದ್ರದಲ್ಲಿ ಹೆಚ್ಚು ಪ್ರಯಾಣಿಸುವ ಮ್ಲೇಚ್ಛರ ಸಂಪರ್ಕವಾಗಿ ಧರ್ಮಾಚರಣೆಗೆ ಧಕ್ಕೆಯಾಗುತ್ತದೆ ಎಂಬ ಮತ್ತೊಂದು ಆತಂಕ), 6. ವೇದೋಕ್ತಬಂದಿ (ಹೋಮ, ಹವನ ಸೇರಿ ವೇದೋಕ್ತ ಆಚರಣೆಗಳನ್ನು ಕೆಲವರು ಮಾತ್ರವೇ ಮಾಡಬೇಕೆಂಬ ನಿರ್ಬಂಧ), 7. ಶುದ್ಧಿಬಂದಿ (ಮುಸಲ್ಮಾನರ ಆಳ್ವಿಕೆಯಿರಬಹುದು, ಕ್ರೈಸ್ತರ ಆಕ್ರಮಣವಿರಬಹುದು ಎಲ್ಲ ಸಮಯದಲ್ಲೂ ಮತಾಂತರ ನಡೆದೇ ಇದೆ. ಈ ಸಮಯದಲ್ಲಿ ಭಯದಿಂದಲೊ, ಆಮಿಷದಿಂದಲೋ ಮತಾಂತರವಾಗಿದ್ದವರು ಮೂರ್ನಾಲ್ಕು ವರ್ಷದ ನಂತರ ಮಾತೃ ಧರ್ಮಕ್ಕೆ ವಾಪಸಾಗಬೇಕು ಎಂದು ಬಯಸಿದರೆ ಅದಕ್ಕೆ ಅವಕಾಶ ಇರಲಿಲ್ಲ.).

ಇದನ್ನೂ ಓದಿ | ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

ಒಂದು ಕ್ಷಣ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ, ಆಚರಿಸಿದ ಸಪ್ತಪಾಪಗಳನ್ನು ನೆನಪಿಸಿಕೊಳ್ಳಿ. ಸಮಾಜದ ಕೆಡುಕುಗಳನ್ನು ತೊಡೆದುಹಾಕಲು ಅವರು ಪಟ್ಟಿ ಮಾಡಿರುವ ಸಪ್ತ ಪಾಪಗಳು- 1. ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು, 2. ಆತ್ಮಸಾಕ್ಷಿಯಿಲ್ಲದ ಭೋಗ, 3. ಚಾರಿತ್ರ್ಯವಿಲ್ಲದ ಜ್ಞಾನ, 4. ನೀತಿಯಿಲ್ಲದ ವ್ಯಾಪಾರ, 5. ಮಾನವೀಯತೆಯಿಲ್ಲದ ವಿಜ್ಞಾನ, 6. ತ್ಯಾಗವಿಲ್ಲದ ಧರ್ಮ, 7. ನೀತಿಯಿಲ್ಲದ ರಾಜಕೀಯ. ಸ್ವತಃ ತಮ್ಮ ಜೀವನವನ್ನೇ ಪ್ರಯೋಗಶಾಲೆಯನ್ನಾಗಿಸಿಕೊಂಡು, ಸತ್ಯದೊಂದಿಗೆ ನನ್ನ ಪ್ರಯೋಗಗಳು ಎಂದು ಗಾಂಧೀಜಿ ಕರೆದರು.

ಈಗ ಮತ್ತೆ ಸಾವರ್ಕರ್ ಅವರ ಸಪ್ತಬಂದಿಗಳತ್ತ ಕಣ್ಣಾಯಿಸಿ. ಆ ಎಲ್ಲವೂ ಸುಸ್ಪಷ್ಟ. ಯಾವ ಮಾತಿಗೂ ಬೋಧನೆಯ ಹಂಗಿಲ್ಲ. ಎಲ್ಲವೂ ಕಪ್ಪು-ಬಿಳುಪಿನಂತೆ ಖಚಿತ. ಬಹಳ ಫೋಕಸ್ ಆಗಿ ಇಂಥವನ್ನೆಲ್ಲಾ ಎಲ್ಲರೂ ಮಾಡಬೇಕು, ಮಾಡಲು ಸಾಧ್ಯ, ಮಾಡಿದರೆ ಮಾತ್ರ ಉದ್ಧಾರ ಸಾಧ್ಯ ಎಂಬ ದೃಢತೆಗಳು ಅಲ್ಲಿ ಕಾಣುತ್ತದೆ.

ಸಾವರ್ಕರ್‌ ಸಮಾಜದಲ್ಲಿದ್ದ ಕೆಟ್ಟ ಆಚರಣೆಗಳನ್ನು ತೊಡೆದುಹಾಕಬೇಕು ಎಂದು ಸಪ್ತಬಂದಿಗಳನ್ನು ಪಟ್ಟಿ ಮಾಡಿ ಸುಮ್ಮನೇ ಕೂರಲಿಲ್ಲ. ನೇರ ಕಾರ್ಯಾಚರಣೆಗೆ ಇಳಿದರು. ೧೯೨೪ರಲ್ಲಿ ರತ್ನಗಿರಿಯಲ್ಲಿ ನಡೆದ ಗಣೇಶೋತ್ಸವ ಜಾತಿ ರಹಿತ ಕಟ್ಟುಪಾಡುಗಳೇ ಇಲ್ಲದೆ ನಡೆಯಿತು. ಅಲ್ಲಿಯವರೆಗೂ ಗಣೇಶನ ವಿಸರ್ಜನೆಯಲ್ಲಿ ಬ್ರಾಹ್ಮಣರಿಗಷ್ಟೇ ಮಹತ್ವವಿತ್ತು. ಅವರಷ್ಟೇ ಗಣೇಶನನ್ನು ಹೊರಬೇಕಾಗಿತ್ತು. ಆದರೆ, ಆ ವರ್ಷ ತಳಸಮುದಾಯದ ಮಹಾರ್, ಜಾಡಮಾಲಿಗಳು ಕೂಡ ಗಣೇಶ ಮೆರವಣಿಗೆಯಲ್ಲಿ ಹೆಗಲು ನೀಡಿದರು. ದಸರೆ ಹಬ್ಬದ ಸಂದರ್ಭದಲ್ಲಿ ಸಾವರ್ಕರ್ ದಲಿತರ ಮನೆಗೆ ಹೋಗಿ ಸಾಮೂಹಿಕ ಭೋಜನದಲ್ಲಿ ಭಾಗವಹಿಸಿದರು. ರತ್ನಗಿರಿ ಜಿಲ್ಲೆಯಲ್ಲಿ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದರು. ಮಹಾರ್ ಮತ್ತು ಚಮ್ಮಾರರಿಗೆ ವೇದಗಳನ್ನು ಕಲಿಸಿಕೊಟ್ಟರು. ಅಂತರ್ಜಾತೀಯ ವಿವಾಹಕ್ಕೆ ಬೆಂಬಲ ನೀಡಿದರು. ಗೋ ಪೂಜೆಯನ್ನು ಸಾವರ್ಕರ್ ಯಾವತ್ತೂ ಒಪ್ಪಿಕೊಂಡೇ ಇರಲಿಲ್ಲ.

ಪತಿತ ಪಾವನ ಮಂದಿರದ ಮೂರ್ತಿಗಳು

ಕಾಶಿ ವಿಶ್ವನಾಥನ ಮಂದಿರವಿರಬಹುದು, ಪುರಿ ಜಗನ್ನಾಥನ ಮಂದಿರವಿರಬಹುದು, ದ್ವಾರಕಾಧೀಶನ ಮಂದಿರವಿರಬಹುದು, ಎಲ್ಲ ಹಿಂದುಗಳಿಗೂ ಪ್ರವೇಶ ಕಲ್ಪಿಸಬೇಕು ಎಂಬುದು ಸಾವರ್ಕರ್ ಹೇಳುತ್ತಿದ್ದರು. ಆದರೆ ಅದಕ್ಕೆ ಸಮಯ ಪಕ್ವವಾಗುವವರೆಗೆ, ಹಿಂದು ಸಮಾಜದ ಎಲ್ಲರೂ ದರ್ಶನ ಮಾಡಬಹುದಾದ ದೇವಸ್ಥಾನ ಇರಬೇಕು ಎಂದು ರತ್ನಗಿರಿಯಲ್ಲಿ ಪತಿತಪಾವನ ಮಂದಿರವನ್ನು ಸ್ಥಾಪಿಸಿದರು. ಈ ಮಂದಿರದ ಟ್ರಸ್ಟ್‌ನಲ್ಲಿ ಎಲ್ಲ ವರ್ಗದವರೂ ಇದ್ದರು. ಪೂಜಾ ಪದ್ಧತಿಯನ್ನು ತಿಳಿದಿರುವ ಯಾವುದೇ ಹಿಂದು ಅರ್ಚಕ ಆಗಬಹುದಾಗಿತ್ತು.

ಎಲ್ಲ ದೇವಸ್ಥಾನಗಳಿಗೂ ಎಲ್ಲ ಹಿಂದುಗಳ ಪ್ರವೇಶಕ್ಕೆ ಅವಕಾಶ ಇರಬೇಕು ಎಂದು ಸಾವರ್ಕರ್ ನಂಬಿದ್ದರು. ಅದಕ್ಕಾಗಿ ಅನೇಕ ಪ್ರಯತ್ನ ಮಾಡಿದರು. ಆದರೆ ಸಮಾಜ ಸುಧಾರಣೆ ಎನ್ನುವುದು ಒಂದು ದಿನದಲ್ಲಿ ಯಾವುದೋ ಸರಕಾರಿ ಆದೇಶದಿಂದ ಆಗುವ ಕೆಲಸವಲ್ಲ. ಅದಕ್ಕೆ ಮನಸ್ಸುಗಳ ಬದಲಾವಣೆ ಆಗಬೇಕಾಗುತ್ತದೆ. ಈ ರೀತಿಯೂ ಆಗಬಹುದು ಎಂದು ಉದಾಹರಣೆ ಮೂಲಕ ತೋರಿಸಿಕೊಟ್ಟಿದ್ದರು. ಸ್ವಾರಸ್ಯ ಅಂದರೆ, ಸಾವರ್ಕರ್ ಅವರ ಈ ಎಲ್ಲ ಕೆಲಸದ ಬಗ್ಗೆ ಅ ಕಾಲದ ಸಂಪ್ರದಾಯಸ್ಥ ಬ್ರಾಹ್ಮಣರು ಕೆರಳಿ ಕೆಂಡವಾಗಿದ್ದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್

ಹೀಗೆ ಸಾವರ್ಕರ್ ರತ್ನಗಿರಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸುಧಾರಣಾ ಕೆಲಸವನ್ನೇ ಮಾಡಿದರು. “ಸಮಾಜ ಸುಧಾರಕ ಎಂದರೆ, ಒಣ ಭಾಷಣಗಳನ್ನು ಬಿಟ್ಟು, ತಾನು ನಂಬಿದ ಸುಧಾರಣೆಗಳನ್ನು ಬೇರೆಯವರು ಹಿಂಬಾಲಿಸುತ್ತಾರೆಯೋ ಇಲ್ಲವೊ ಎನ್ನುವುದನ್ನು ಲೆಕ್ಕಿಸದೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವವನು. ಸುಧಾರಣೆಗಳನ್ನು ಕೇವಲ ಬೌದ್ಧಿಕ ಚರ್ಚೆಯಲ್ಲೆ ಇರಿಸದೆ, ಆದಷ್ಟು ಬೇಗನೆ ಅವುಗಳನ್ನು ಆಚರಣೆಗೆ ತರುವವನು. ಆಚರಣೆ ಮಾಡಿ ತೋರಿಸುವುದರ ಮೂಲಕ, ಅನುಮಾನ ಉಳ್ಳವರಿಗೆ ಉತ್ತರ ನೀಡುವವನು,” ಎಂದಿದ್ದರು. ಅದೆಂಥಾ ಗಟ್ಟಿ ನಿಲುವಿದು !

ಆದರೆ, ಸಾವರ್ಕರ್ ಕೈಗೊಂಡ ಈ ಎಲ್ಲ ಕೆಲಸಗಳು ರತ್ನಗಿರಿ ಜಿಲ್ಲೆಗೆ ಸೀಮಿತವಾಗಿದ್ದವು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಹಾಗೂ ರತ್ನಗಿರಿ ಜಿಲ್ಲೆಯಿಂದ ಹೊರಗೆ ಬರುವಂತಿಲ್ಲ ಎಂದು ಬ್ರಿಟಿಷರು ಹೇಳಿದ ನಂತರ ಸಂಪೂರ್ಣ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡ ಸಾವರ್ಕರ್, ತಮ್ಮ ಜೀವನದ ಪ್ರಮುಖ ಆಶಯವಾಗಿ ಅಸ್ಪೃಶ್ಯತೆಯನ್ನು ತೊಡೆದುಹಾಕುವ ಪಣ ತೊಟ್ಟಿದ್ದರು.

ಸಾವರ್ಕರ್ ಅವರ ಸಾಮಾಜಿಕ ಕೆಲಸದ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೆ ಮೆಚ್ಚುಗೆ ಇತ್ತು. ಅಂಬೇಡ್ಕರ್ ಅವರ ಐತಿಹಾಸಿಕ ಮಹಾಡ್ ಜಿಲ್ಲೆಯ ಕೆರೆ ಹೋರಾಟಕ್ಕೆ ಸಾವರ್ಕರ್ ಬೆಂಬಲ ನೀಡಿದ್ದರು. ಮಾತ್ರವಲ್ಲ, ೧೯೩೧ರಲ್ಲಿ ತಾವು ನಿರ್ಮಿಸಿದ ಪತಿತಪಾವನ ಮಂದಿರವನ್ನು ಉದ್ಘಾಟಿಸಲು ಬಾಬಾ ಸಾಹೇಬರನ್ನು ಸಾವರ್ಕರ್ ಆಹ್ವಾನಿಸಿದ್ದರು. ಆದರೆ ಅಂಬೇಡ್ಕರ್ ಪೂರ್ವ ನಿಯೋಜಿತ ಕಾರ್ಯಕ್ರಮದಿಂದಾಗಿ ಈ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಪತ್ರ ಬರೆದು ಸಾವರ್ಕರ್ ಅವರ ಸಾಮಾಜಿಕ ಸುಧಾರಣೆಯ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಅಂಡಮಾನ್‌ನಲ್ಲಿ ಸಾವರ್ಕರರನ್ನು ಬಂಧಿಸಿ ಇಟ್ಟಿದ್ದ ಕೋಣೆ

ಸಾವರ್ಕರರನ್ನು ವಿರೋಧಿಸುವ ಕೆಲವರು, ಅವರ ಬದುಕಿನ ಕೆಲವೇ ಘಟನೆಗಳನ್ನು ಉಲ್ಲೇಖಿಸುತ್ತಾರೆ. ಬ್ರಿಟಿಷರಿಗೆ ಪತ್ರ ಬರೆದರು ಎನ್ನುವುದೊಂದನ್ನು ಹಿಡಿದುಕೊಂಡು ಅವರ ಚಾರಿತ್ರ್ಯ ಹರಣದ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇನ್ನು ಸಾವರ್ಕರರನ್ನು ಆರಾಧಿಸುವ ಅನೇಕರಲ್ಲೂ ಪೂರ್ಣ ಕಲ್ಪನೆ ಇಲ್ಲ. ಸಾವರ್ಕರರು ಹಿಂದುತ್ವವನ್ನು ಅಪ್ಪಿಕೊಂಡಷ್ಟೇ ಗಾಢವಾಗಿ ಅಲ್ಲಿನ ಕೆಟ್ಟ ಆಚರಣೆಗಳ ದ್ವೇಷಿಯಾಗಿದ್ದರು. ಅವುಗಳಲ್ಲಿ ಮೊದಲನೆಯದು ಅಸ್ಪೃಶ್ಯತೆ ನಿವಾರಣೆ. ಅಸ್ಪೃಶ್ಯತೆ ನಿವಾರಣೆ ಆಗದ ಹೊರತು ಹಿಂದು ಧರ್ಮಕ್ಕಾಗಲಿ, ಹಿಂದುತ್ವಕ್ಕಾಗಲಿ ಅರ್ಥವಿಲ್ಲ ಎಂದು ನಂಬಿದ್ದವರು. ಸಾವರ್ಕರರನ್ನು ವಿರೋಧಿಸುತ್ತಿರುವವರಿಗಿಂತಲೂ ಹೆಚ್ಚಾಗಿ, ಅವರನ್ನು ಆರಾಧಿಸುವವರು ಈ ಮಾತನ್ನು ಹೆಚ್ಚು ಅಳವಡಿಸಿಕೊಳ್ಳಬೇಕು. ತಮ್ಮ ಮೂಗಿನ ನೇರಕ್ಕೆ ಮಾತ್ರ ಸಾವರ್ಕರ್ ಅವರನ್ನು ಸ್ವೀಕರಿಸಿ ಉಳಿದವುಗಳ ಕಡೆ ಜಾಣ ಕುರುಡು ಪ್ರದರ್ಶನ ಆಗಬಾರದು.

ಇದನ್ನೂ ಓದಿ | ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್‌ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?

ಇಂದು ಸಾವರ್ಕರ್ ಅವರ ಬಗ್ಗೆ ಆರ್‌ಎಸ್‌ಎಸ್ ಸ್ವಯಂಸೇವಕರು, ಅಭಿಮಾನಿಗಳ ಬಹಳ ಪ್ರೀತಿ-ಅಭಿಮಾನದಿಂದ ಮಾತನಾಡುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಅದರೆ, ಸಾವರ್ಕರ್ ತಮ್ಮ ಜೀವಿತ ಅವಧಿಯಲ್ಲಿ ಆರ್‌ಎಸ್‌ಎಸ್ ಸೇರಲಿಲ್ಲ. ಅವರು ಹಿಂದೂ ಧರ್ಮವನ್ನು ಆರ್‌ಎಸ್‌ಎಸ್‌ಗಿಂತ ಹೆಚ್ಚು ವೈಜ್ಞಾನಿಕವಾಗಿ, ವೈಚಾರಿಕವಾಗಿ ಸುಧಾರಣೆ ಮಾಡಬೇಕೆಂದು ಹಂಬಲಿಸಿದ್ದರು. ಈ ಕಾರಣವೇ ಇರಬೇಕು. ಅವರು ಸಂಘದಿಂದ ದೂರ ಉಳಿಯಲು !

ಸ್ವರಾಜ್ಯ, ಅಸ್ಪೃಶ್ಯತೆ ನಿರ್ಮೂಲನೆ, ಹಿಂದೂ ಮುಸ್ಲಿಂ ಐಕ್ಯ- ಈ ಮೂರು ಸಂಗತಿಗಳು ಮಹಾತ್ಮ ಗಾಂಧೀಜಿ ಅವರ ಸಾರ್ವಜನಿಕ ಬದುಕಿನ ಮೂರು ಮಹಾಧ್ಯೇಯಗಳಾಗಿದ್ದವು. ಇವುಗಳ ಸಾಕಾರಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ಅಹಿಂಸೆ ಮತ್ತು ಸತ್ಯಾಗ್ರಹ ಎಂಬ ಅಪರೂಪದ ಅಸ್ತ್ರವಾಗಿದ್ದವು. ಸಾವರ್ಕರ್ ಅವರನ್ನು ಅಧ್ಯಯನ ಮಾಡಿದರೆ, ಅವರ ಸಾರ್ವಜನಿಕ ಬದುಕಿನ ಧ್ಯೇಯಗಳು ಆರಂಭಿಕ ದಿನಗಳಲ್ಲಿ ಈ ಮೂರೇ ಆಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ತರಬೇಕೆಂಬ ಅವರ ಸ್ವರಾಜ್ಯದ ಕುರಿತು ಯಾರದ್ದೂ ತಕರಾರು ಇರಲಿಕ್ಕಿಲ್ಲ. (ಜೈಲಿನಿಂದ ಬಿಡುಗಡೆ ಮಾಡಿ ಎಂದು ಪತ್ರ ಬರೆದರು ಎಂಬುದಷ್ಟೇ ಕೆಲವರ ಕೊಂಕು) ಅಸ್ಪೃಶ್ಯತೆ ನಿರ್ಮೂಲನೆ ಎಂಬುದು ಸಾವರ್ಕರ್ ಪಾಲಿಗೆ ಬೋಧನೆಯ ವಿಷಯವಾಗಿರಲಿಲ್ಲ. ಗಾಂಧಿಯಂತೆ ಅವರು ಮಾಡಿ ತೋರಿಸಿದರು. ಹಿಂದೂ ಮುಸ್ಲಿಂ ಐಕ್ಯತೆ ವಿಷಯದಲ್ಲೂ ಅವರು ಆರಂಭದಲ್ಲಿ ಗಾಂಧಿಯ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು. ಸೆಲ್ಯೂಲಾರ್ ಜೈಲಿಗೆ ಹೋಗುವ ಮುನ್ನ ಸಾವರ್ಕರ್ ಕೂಡ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರಬಲ ಪ್ರತಿಪಾದಕರೇ ಆಗಿದ್ದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಅವಧ್‌ನ ಸುಲ್ತಾನ ವಾಜಿದ್ ಆಲಿ, ರೋಹಿಲ್ ಖಂಡದ ಖಾನ್ ಬಹದ್ದೂರ್‌ ಖಾನ್ ಸೇರಿದಂತೆ ಅನೇಕ ಮುಸ್ಲಿಂ ಬಂಡುಕೋರರ ಬಗ್ಗೆ ಬಹಳ ಪ್ರೀತಿಯಿಂದ ಹಾಡಿ ಬರೆದಿದ್ದಾರೆ. ಆದರೆ, ಅಂಡಮಾನ್ ಜೈಲಿನಿಂದ ಬಂದ ಬಳಿಕ ಅವರ ಧೋರಣೆಯಲ್ಲಿ ಬದಲಾವಣೆಯಾಯಿತು. ಕಾರಣಗಳು ಏನೇ ಇರಲಿ ಇದು ಇತಿಹಾಸದ ಸತ್ಯ. ಉಳಿದಂತೆ, ಸಾವರ್ಕರ್ ತಮ್ಮ ಸ್ವಾತಂತ್ರ್ಯದ ಧ್ಯೇಯದ ಸಾಕಾರಕ್ಕೆ ಕಂಡುಕೊಂಡ ಮಾರ್ಗ ಮಾತ್ರ ಹಿಂಸೆ ಮತ್ತು ಬಂಡುಕೋರತನವೇ ಆಗಿತ್ತು. ಇಬ್ಬರಿಗೂ ಇದ್ದ ವ್ಯತ್ಯಾಸ ಹಿಂಸೆ ಮತ್ತು ಅಹಿಂಸೆಯ ಮಾರ್ಗದ್ದಷ್ಟೆ.

ಕ್ರಾಂತಿಕಾರಿಗಳ ಪಾಲಿಗೆ ಮಹಾನ್ ನಾಯಕರೇ ಆಗಿದ್ದರು. ಬ್ರಿಟಿಷರಂತೂ ಬಹುವಾಗಿ ಹೆದರಿದ್ದು ಗಾಂಧಿ ಮತ್ತು ಸಾವರ್ಕರ್‌ಗೆ ಮಾತ್ರ ! ಹಾಗಾಗಿ, ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಸಾವರ್ಕರ್ ಅವರು ತಮ್ಮ ಆರಂಭಿಕ ದಿನಗಳ ಧೋರಣೆಯನ್ನೇ ಉಳಿಸಿಕೊಂಡಿದ್ದರೆ, ಈ ದೇಶದ ಮಾರ್ಕ್ಸ್‌ವಾದಿ ಹಾಗೂ ಬ್ರಿಟಿಷ್ ಪ್ರಭಾವಿತ ಇತಿಹಾಸಕಾರರು ಸಾವರ್ಕರ್ ಅವರಿಗೆ ಗಾಂಧಿ ನಂತರದ ಸ್ಥಾನವನ್ನು ಇತಿಹಾಸದಲ್ಲಿ ನೀಡುತ್ತಿದ್ದರೇನೋ ? ಯಾವುದೇ ಇಸಂ, ಪಂಥದ ಹಂಗು-ಗೊಡವೆಗಳಿಲ್ಲದ ಇತಿಹಾಸಕಾರರು ಇತಿಹಾಸ ಬರೆದಿದ್ದರೆ, ಸಾವರ್ಕರ್ ಅವರಿಗೆ ಈಗಿನಷ್ಟು ಅನ್ಯಾಯ ಆಗುತ್ತಿರಲಿಲ್ಲವೇನೋ?

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. Great minds think alike ಎಂಬುದು ಆ ಮಾತು. ಉನ್ನತ ಆದರ್ಶಗಳನ್ನು ಪಾಲಿಸುವ ವ್ಯಕ್ತಿಗಳ ಗುರಿ ಒಂದೇ ಆಗಿರುತ್ತದೆ. ಮಾನವನ ಒಳಿತನ್ನೇ ಬಯಸುವವರು ಅದೆಷ್ಟೇ ದೂರವಿದ್ದರೂ, ಅವರ ನಡುವೆ ಅದೆಷ್ಟೇ ವರ್ಷಗಳ ವ್ಯತ್ಯಾಸವಿದ್ದರೂ ಅನೇಕ ಆಲೋಚನೆಗಳು ಸಮಾನವಾಗಿರುತ್ತವೆ. ಅಂತೆಯೇ, ಮಹಾಪುರುಷರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದಾಗಲೂ ಅವರ ಆಲೋಚನೆಗಳಲ್ಲಿ ಸಮಾನ ಅಂಶಗಳಿರುತ್ತವೆ.

ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಸಮಾಜಕ್ಕೆ, ದೇಶಕ್ಕಾಗಿ ಕೆಲಸ ಮಾಡುವ ಎಲ್ಲರೂ ಒಂದು ಸರಪಳಿಯಲ್ಲಿರುವ ಕೊಂಡಿಗಳು. ಹಿಂದಿನಿಂದಲೂ ಬಂದ ಆಲೋಚನೆ, ಸಂಪ್ರದಾಯ, ನಡವಳಿಕೆ, ಆದರ್ಶಗಳನ್ನು ಹೊಸ ಕಾಲಕ್ಕೆ ತಕ್ಕಂತೆ ಶುದ್ಧಗೊಳಿಸಿ, ಮತ್ತಷ್ಟು ಗಟ್ಟಿಯಾಗಿಸಿ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಬೇಕಿದೆಯಷ್ಟೆ.

Exit mobile version