ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದರೆ ಭಾರತೀಯರಿಗೆ ಏಕೆ ಹೆಮ್ಮೆ ಆಗಬೇಕು ಎನ್ನುವುದು ಅನೇಕರ ಪ್ರಶ್ನೆ. ಈ ವಿಚಾರವನ್ನು ಕಳೆದ ವಾರ ಚರ್ಚಿಸಿದ್ದೆವು. ರಿಷಿ ಸುನಕ್ ನೇರವಾಗಿ ಭಾರತದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅನೇಕರು ವಾದಿಸುತ್ತಾರೆ. ಸುನಕ್ ತಾತ ಹುಟ್ಟಿದ್ದು ಈಗಿನ ಪಾಕಿಸ್ತಾನದ ಪಂಜಾಬಿನಲ್ಲಿ. ಅಂದರೆ ಸ್ವಾತಂತ್ರ್ಯಪೂರ್ವದ ಅಖಂಡ ಭಾರತದಲ್ಲಿ.
ಅಲ್ಲಿಂದ ಕೀನ್ಯಾಗೆ ತೆರಳಿ, ಬಳಿಕ ಅಲ್ಲಿಯೂ ನೆಲೆ ನಿಲ್ಲದೇ ಬ್ರಿಟನ್ನಿಗೆ ತೆರಳಿದರು. ಹೀಗಾಗಿ ರಿಷಿ ಸುನಕ್ ಪಂಜಾಬಿನಿಂದ ವಲಸೆ ಹೋದ ಕುಟುಂಬದ ಎರಡನೇ ಪೀಳಿಗೆಗೆ ಸೇರಿದವರು. ಹಾಗಾಗಿ ಅವರನ್ನು ಹೇಗೆ ಭಾರತೀಯರು ಎನ್ನುವಿರಿ ಎನ್ನುವುದು ಇಂಥ ಪ್ರಶ್ನೆ ಎತ್ತುವವರ ವಾದ. ಇದೆಲ್ಲವೂ ಸತ್ಯ. ಇದರ ಹೊರತಾಗಿಯೂ ನಾವು ಅರಿಯಬೇಕಿರುವುದು ರಿಷಿ ಸುನಕ್ ಭಾರತೀಯರೇ! ಏಕೆಂದರೆ, ಅವರು ಭಾರತದ ಜ್ಞಾನ ಪರಂಪರೆಯನ್ನು ಬ್ರಿಟನ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಅದು ಹೇಗೆ ಎಂಬುದನ್ನು ಚರ್ಚಿಸೋಣ.
ವಿದೇಶ ಪ್ರವಾಸ ಎನ್ನುವುದು ಇವತ್ತು ಎಷ್ಟೊಂದು ಸುಲಭವಾಗಿ ಹೋಗಿದೆ. ಚಿಟಿಕೆ ಹೊಡೆಯುವಷ್ಟರಲ್ಲಿ, ಕುಳಿತಲ್ಲಿಂದಲೇ ವಿಮಾನದ ಟಿಕೆಟ್ ಬುಕ್ ಮಾಡಬಹುದು. ಮನೆ ಬಾಗಿಲಿಗೇ ಕ್ಯಾಬ್ ಬಂದು ಸೀದಾ ವಿಮಾನ ನಿಲ್ದಾಣದ ಬಾಗಿಲಿಗೆ ಒಯ್ಯುತ್ತದೆ. ವಿಮಾನ ಅಷ್ಟೆ ಅಲ್ಲ, ರಸ್ತೆ, ವಾಹನದ ಮೂಲಕವೂ ಪ್ರಯಾಣ ಮಾಡಬಹುದು. ಆದರೆ ಎಲ್ಲರಿಗೂ ಸೋಜಿಗ ಎನಿಸುವುದೇನೆಂದರೆ, ಮೇಲೆ ತಿಳಿಸಿದ ಈ ಯಾವ ಸಾರಿಗೆ ವ್ಯವಸ್ಥೆ ಇಲ್ಲದ ಸಮಯದಲ್ಲೂ ನಮ್ಮ ಪೂರ್ವಜರು, ಅಂದರೆ ಅಂದಿನ ಭಾರತೀಯ ಪೂರ್ವಸೂರಿಗಳು ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಬೆಳೆಸಿದ್ದರು. ಇದು ಸುಮಾರು ಒಂದನೇ ಶತಮಾನದ ಸಮಯದಿಂದಲೂ ನಡೆದುಕೊಂಡು ಬಂದಿದೆ.
ಭಾರತವನ್ನು ಮೂರು ದಿಕ್ಕುಗಳಿಂದ ಸಮುದ್ರವೇ ಆವರಿಸಿದೆ. ಪೂರ್ವದಲ್ಲಂತೂ ಮಹಾ ಹಿಮಾಲಯವೇ ಅಡ್ಡನಿಂತಿದೆ. ಆದರೂ ಇದ್ಯಾವುದೂ ಭಾರತೀಯರ ವಿದೇಶ ಸಂಪರ್ಕಕ್ಕೆ ಅಡ್ಡಿ ಆಗಲೇ ಇಲ್ಲ. ವಿದೇಶಗಳಿಗೆ ತೆರಳಿದ ಭಾರತೀಯರು ಅಲ್ಲಿಂದ ಅತ್ಯುತ್ತಮ ವಿಚಾರಗಳನ್ನು ಹೊತ್ತು ತಂದರು. ವಸ್ತುಗಳಷ್ಟೆ ಅಲ್ಲ, ಕಲೆ, ಸಂಸ್ಕೃತಿಯನ್ನೂ ಹೊತ್ತು ತಂದು ಇಲ್ಲಿನ ಆಚರಣೆಗಳ ಜತೆಗೆ ಸಮ್ಮಿಳಿತಗೊಳಿಸಿದರು. ಅದಕ್ಕಿಂತಲೂ ಮುಖ್ಯವಾಗಿ, ಭಾರತೀಯರು ಹೋದಲ್ಲೆಲ್ಲ ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಹರಡಿದರು. ಮುಖ್ಯವಾಗಿ, ಭಾರತಕ್ಕೆ ವಾಯವ್ಯದಲ್ಲಿರುವ (ಯುರೋಪಿಯನ್ನರು ಮಧ್ಯ ಏಷ್ಯಾ ಎಂದು ಕರೆಯುವ) ಅಫಘಾನಿಸ್ತಾನ, ಕಜಕ್‌ಸ್ತಾನ, ಉಜ್ಬೇಕಿಸ್ತಾನದಂತಹ ದೇಶಗಳು, ಭಾರತದ ಆಗ್ನೇಯ ಭಾಗಕ್ಕಿರುವ ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾದಂತಹ ದೇಶಗಳು, ಚೀನಾ, ಜಪಾನ್, ಕೊರಿಯಾ ಮುಂತಾದೆಡೆಗೆ ಭಾರತದ ಸಂಸ್ಕೃತಿಯ ವಾಹಕರಾದರು.
ಇದೆಲ್ಲದರಲ್ಲಿ ಒಂದು ಮುಖ್ಯ ಅಂಶವೆಂದರೆ ಈ ಯಾವ ಸಂದರ್ಭದಲ್ಲಿಯೂ ಆಯಾ ದೇಶಗಳ ಜನರು ಹಾಗೂ ಅವರು ಪಾಲಿಸುವ ಸಂಸ್ಕೃತಿ, ಆಚಾರ-ವಿಚಾರದೊಂದಿಗೆ ನಮ್ಮ ಜನ ಸಂಘರ್ಷ ಮಾಡಿಕೊಳ್ಳಲಿಲ್ಲ. ಆಕ್ರಮಣ, ಬೆದರಿಕೆ, ಆಸೆ, ಆಮಿಷದ ಮೂಲಕವೂ ಭಾರತೀಯ ಸಂಸ್ಕೃತಿಯನ್ನು ಹರಡಲಿಲ್ಲ. ಬದಲಿಗೆ, ಭಾರತೀಯರ ಸಂಪರ್ಕಕ್ಕೆ ಬಂದ ವಿದೇಶಿಯರೇ ಭಾರತೀಯ ಅಧ್ಯಾತ್ಮ ಹಾಗೂ ಸಂಸ್ಕೃತಿಗೆ ಮಾರುಹೋಗಿ, ಸ್ವಯಂಪ್ರೇರಿತವಾಗಿ ಸ್ವೀಕರಿಸಿದರು.
ಚಿನ್ನವನ್ನು ಅರಸುತ್ತ ಒಂದನೇ ಶತಮಾನದಲ್ಲೆ ಇಂಡೋನೇಷ್ಯಾ ಹಾಗೂ ಕಾಂಬೋಡಿಯಾಕ್ಕೆ ಭಾರತೀಯ ವ್ಯಾಪಾರಿಗಳು ತೆರಳಿದರು. ಮುಖ್ಯವಾಗಿ, ಸುಮಾತ್ರಾ, ಜಾವಾ ಹಾಗೂ ಮಲಯ ದ್ವೀಪಗಳಿಗೆ ಸಾಗಿದರು. ಅದಕ್ಕಾಗಿಯೇ ಈ ಪ್ರದೇಶಗಳನ್ನು ಸುವರ್ಣ ದ್ವೀಪ ಎಂದು ಕರೆಯಲಾಯಿತು. ಈ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ, ಧಾರ್ಮಿಕ ಕ್ಷೇತ್ರಗಳಾದ ಕಾಶಿ, ಮಥುರಾ, ಉಜ್ಜಯಿನಿ, ಪ್ರಯಾಗದವರಾಗಿರುತ್ತಿದ್ದರು ಹಾಗೂ ಮಮ್ಮಲಪುರಂ, ಪುರಿ ಹಾಗೂ ಕಾವೇರಿಪಟ್ಟಣಂನಂತಹ ಕರಾವಳಿ ನೆಲದವರಾಗಿರುತ್ತಿದ್ದರು. ಸಾಮ್ರಾಟ್ ಅಶೋಕನ ಕಾಲದಲ್ಲಿ ಕಳಿಂಗ ಸಾಮ್ರಾಜ್ಯವು ಶ್ರೀಲಂಕಾದೊಂದಿಗೆ ವ್ಯಾಪಾರ ಸಂಬಂಧ ಹೊಂದಿತ್ತು. ವ್ಯಾಪಾರಿಗಳು ಹೋದಲ್ಲೆಲ್ಲ ಭಾರತದ ಸಂಸ್ಕೃತಿಯೊಂದಿಗೆ ಅಲ್ಲಿನ ಜನರನ್ನು ಬೆಸೆದರು. ಈ ಮೂಲಕ ಭಾರತೀಯ ಸಂಸ್ಕೃತಿಯ ರಾಯಭಾರಿಗಳಾದರು.
ಇನ್ನು ಇಲ್ಲಿನ ವಿದ್ವಾಂಸರಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇತ್ತು. ಇಲ್ಲಿನ ನಳಂದ, ತಕ್ಷಶಿಲಾ, ವಿಕ್ರಮಶಿಲಾ ಹಾಗೂ ಒದಾಂತಪುರಿ ವಿಶ್ವವಿದ್ಯಾಲಯಗಳಿಗೆ ವಿದೇಶಗಳಿಂದ ವಿದ್ಯಾರ್ಥಿಗಳು, ಸಂಶೋಧಕರು ಆಗಮಿಸುತ್ತಿದ್ದರು. ಚೀನಾ ರಾಜನ ಆಹ್ವಾನದ ಮೇರೆಗೆ ಕಶ್ಯಪ ಮಾರ್ತಾಂಗ ಹಾಗೂ ಧರ್ಮರಕ್ಷಿತ ಎಂಬ ವಿದ್ವಾಂಸರು ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರು. ಚೀನಾಕ್ಕೆ ತೆರಳಿದ ಆಚಾರ್ಯ ಕುಮಾರಜೀವ ಅವರಲ್ಲಿ, ಸಂಸ್ಕೃತ ಸಾಹಿತ್ಯವನ್ನು ಚೀನಾ ಭಾಷೆಗೆ ತರ್ಜುಮೆ ಮಾಡುವಂತೆ ಅಲ್ಲಿನ ರಾಜ ವಿನಂತಿಸಿದ್ದ. ಯೋಗಶಾಸ್ತ್ರ ವಿದ್ವಾಂಸ ಬೋಧಿಧರ್ಮ ಈಗಲೂ ಚೀನಾ ಮತ್ತು ಜಪಾನ್‌ನಲ್ಲಿ ಗೌರವಾನ್ವಿತರು.
ಇನ್ನು ಕೆಲವು ಭಾರತೀಯರು ಅಲೆಮಾರಿಗಳಾಗಿದ್ದರು. ತಮ್ಮನ್ನು ರೋಮ ಎಂದು ಕರೆದುಕೊಳ್ಳುತ್ತಿದ್ದ ಇವರು ಈಗಿನ ಪಾಕಿಸ್ತಾನ, ಅಫಘಾನಿಸ್ತಾನ ಗಡಿಗಳನ್ನೂ ದಾಟಿ ಮುಂದೆ ಸಾಗಿದರು. ಅಲ್ಲಿಗೂ ನಿಲ್ಲದೇ ಟರ್ಕಿ, ಇರಾಕ್‌ನತ್ತಲೂ ಸಾಗಿದರು. ಪರ್ಷಿಯಾ, ಟೌರಸ್ ಪರ್ವತಗಳು ಹಾಗೂ ಕಾನ್ಸ್ಟಾಂಟಿನೋಪಲ್ ಅನ್ನೂ ದಾಟಿ ಯುರೋಪಿನ ಆನೇಕ ದೇಶಗಳಲ್ಲಿ ನೆಲೆಸಿದರು. ಇಂದು ಗ್ರೀಸ್, ಬಲ್ಗೇರಿಯಾ, ಹಂಗರಿ, ರಷ್ಯಾ, ಪೊಲ್ಯಾಂಡ್, ಫ್ರಾನ್ಸ್, ಸ್ವಿಜರ್ಲೆಂಡ್, ಸ್ವೀಡನ್, ಡೆನ್ಮಾರ್ಕ್, ಇಂಗ್ಲೆಂಡ್‌ನಲ್ಲಿ ವಾಸಿಸುವ ರೋಮರನ್ನು ಜಿಪ್ಸಿಗಳು ಎಂದೂ ಕರೆಯಲಾಗುತ್ತದೆ. ಇಷ್ಟೆಲ್ಲ ಪ್ರದೇಶದಲ್ಲಿ ವ್ಯಾಪಿಸಲು ಇವರು ತೆಗೆದುಕೊಂಡಿದ್ದು ಸುಮಾರು ನಾಲ್ಕು ನೂರು ವರ್ಷಗಳು. ತಮ್ಮ ಮೂಲ ಸಂಸ್ಕೃತಿಯಿಂದ ಇಷ್ಟು ಪೀಳಿಗೆವರೆಗೆ ದೂರವಿದ್ದರೂ ಅವರು ತಮ್ಮ ಮೂಲ ಆಚರಣೆಗಳನ್ನು ಮರೆಯಲಿಲ್ಲ ಹಾಗೂ ತಾವು ಹೋದ ಪ್ರದೇಶಗಳಲ್ಲೂ ಪಸರಿಸಿದರು.
ಇದನ್ನೂ ಓದಿ | ಸವಿಸ್ತಾರ ಅಂಕಣ | Sorry ಎನ್ನಲು ಮನಸ್ಸಿಲ್ಲದ ಬ್ರಿಟನ್, ಭಾರತದಿಂದ ಕಲಿಯುವುದು ಸಾಕಷ್ಟಿದೆ
ಇದು ಇತಿಹಾಸದ ವಿವರವಾಯಿತು. ಇತಿಹಾಸ ಪೂರ್ವಕ್ಕೆ ತೆರಳಿದರೆ, ಸಪ್ತರ್ಷಿಗಳಲ್ಲಿ ಒಬ್ಬರಾದ ಅಗಸ್ತ್ಯ ಮುನಿಗಳನ್ನು ಅನೇಕ ಆಗ್ನೇಯ ದೇಶಗಳಲ್ಲಿ ಪೂಜಿಸಲಾಗುತ್ತದೆ. ಕಾಂಬೋಡಿಯಾ, ಲಾವೋಸ್, ಥೈಲೆಂಡ್, ವಿಯೆಟ್ನಾಮ್, ಮಲೇಷ್ಯಾ, ಸಿಂಗಪುರ, ಇಂಡೋನೇಷ್ಯಾಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಸಾರ ಮಾಡಿದವರು ಅಗಸ್ತ್ಯ ಮುನಿಗಳು. ಅಲ್ಲಿಂದ ನ್ಯೂಜಿಲೆಂಡ್‌ಗೆ ತೆರಳಿದ ಜನರು, ಅಗಸ್ತ್ಯರನ್ನೂ ತಮ್ಮ ಜತೆಗೆ ಕೊಂಡೊಯ್ದರು.
ಇವಿಷ್ಟೂ ಇತಿಹಾಸದ ಹಾಗೂ ಇತಿಹಾಸ ಪೂರ್ವದಲ್ಲಿ ಭಾರತೀಯ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪ್ರಸಾರ ಮಾಡಿದ ಕೆಲವು ಉದಾಹರಣೆಗಳಾದವು. ಆಗಿನ ಋಷಿಮುನಿಗಳ ಜೀವನವನ್ನು ಕಂಡ ಸ್ಥಳೀಯರು ತಮ್ಮ ಜೀವನ ಪದ್ಧತಿಗಳನ್ನೇ ಬದಲು ಮಾಡಿಕೊಂಡರು. ಭಾರತೀಯ ಸಂಸ್ಕೃತಿಗೆ ಮಾರುಹೋದರು. ಈಗಿನ ಕಾಲದ, ಅಂದರೆ ಕಳೆದ ನೂರೈವತ್ತು ವರ್ಷಗಳಲ್ಲಿಯೂ ಈ ಪರಂಪರೆ ಮುಂದುವರಿದಿದೆ.
ಈಗ್ಗೆ ಕೇವಲ 129 ವರ್ಷದ ಹಿಂದೆ ಭಾರತದ ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರು ಜಗತ್ತನ್ನು ತಮ್ಮ ಜ್ಞಾನದ ಶಕ್ತಿಯಿಂದ ನಡುಗಿಸಿದ್ದರು. 1893ರಲ್ಲಿ ಷಿಕಾಗೊದ ಸರ್ವ ಧರ್ಮ ಸಮ್ಮೇಳನದಲ್ಲಿ “ಅಮೆರಿಕದ ಸಹೋದರಿಯರೇ ಮತ್ತು ಸಹೋದರರೇ” ಎಂದು ಆರಂಭವಾದ ವಿವೇಕಾನಂದರ ಜೈತ್ರ ಯಾತ್ರೆ, ಮುಂದಿನ ಮೂರು ವರ್ಷ ಅವರು ವಿದೇಶಗಳಲ್ಲಿಯೇ ಪ್ರವಾಸ ಮಾಡುವಂತೆ ಅಲ್ಲಿನ ಜನರ ಮೇಲೆ ಪ್ರಭಾವ ಬೀರಿತು. ಭಾರತೀಯ ಜ್ಞಾನ ಪರಂಪರೆ ಎಂದರೆ ಏನು ಎನ್ನುವುದೇ ಗೊತ್ತಿಲ್ಲದ, ತಮ್ಮ ಮತಗಳಲ್ಲಿ ತಿಳಿಸಿರುವ ವಿಚಾರಗಳೇ ಅಂತಿಮ ಎಂದು ತಿಳಿದಿದ್ದವರು ನಂಬಿಕೆಗಳು ಬುಡಮೇಲಾಗಿದ್ದವು.
ಇದೀಗ ಬ್ರಿಟನ್‌ನಲ್ಲಿ ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿಯೂ ಸುನಕ್ ಯಾವುದೇ ʼಅಡ್ಡʼ ಮಾರ್ಗಗಳನ್ನು ಅಳವಡಿಸಿಕೊಂಡಿಲ್ಲ. ಸುನಕ್ ಯಾವುದೇ ರಾಜಕೀಯ ಕುಟುಂಬದಿಂದ ಬಂದಿಲ್ಲ. ಪ್ರಜಾಪ್ರಭುತ್ವದ ರಾಜಕಾರಣದಲ್ಲಿ ಬಹುಮುಖ್ಯವಾಗಿ ಬಳಸುವ ಬಹುಸಂಖ್ಯಾತ ವಾದಕ್ಕೆ ಜೋತು ಬಿದ್ದಿಲ್ಲ. ಭಾರತೀಯ ಮೂಲದ ಮತದಾರರು ಮತಗಳನ್ನು ಧ್ರುವೀಕರಿಸಿಕೊಂಡು, ಉಳಿದ ಸಮುದಾಯಗಳನ್ನು ಬೆದರಿಸಲಿಲ್ಲ. ತಾನು ಇಲ್ಲಿನ ಅಲ್ಪಸಂಖ್ಯಾತ, ಇಲ್ಲಿನ ಸಂಪನ್ಮೂಲಗಳ ಮೇಲೆ ನನಗೇ ಮೊದಲ ಅಧಿಕಾರ ಇರುವುದು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾತಿನ ಧಾಟಿಯಲ್ಲಿ ಹೇಳಿಕೆ ನೀಡಲಿಲ್ಲ. ಬ್ರಿಟಿಷರು ನಮ್ಮನ್ನು ತುಳಿದಿದ್ದಾರೆ, ಈಗ ಅದರ ಪ್ರಾಯಶ್ಚಿತ್ತಕ್ಕಾಗಿ ಭಾರತೀಯನೊಬ್ಬನಿಗೆ ಅಧಿಕಾರ ಕೊಡಿ ಎನ್ನಲಿಲ್ಲ. ಈಗ ರಿಷಿ ಸುನಕ್ ಪ್ರಧಾನಿ ಆಗಿರುವುದು ಸಂಪೂರ್ಣವಾಗಿ ಅವರ ಜ್ಞಾನ ಬಲದಿಂದ ಮಾತ್ರ. ಸುನಕ್ ಮಾತ್ರವಲ್ಲ. ತಮ್ಮ ಜ್ಞಾನ, ಬದ್ಧತೆ, ನಂಬಿಕೆಗೆ ಅರ್ಹರಾಗಿರುವಿಕೆ, ಶಾಂತಿ ಪ್ರಿಯತೆ, ವಿನಮ್ರತೆಗಳ ಕಾರಣಕ್ಕೆ ಭಾರತ ಮೂಲದವರು ವಿಶ್ವದ ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅದರ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಗೊಂದಲದ ಮಾತಿನ ಮೂಲಕ ʼಭಾರತ ಭಂಜನೆʼ ಮಾಡುವಿರೇಕೆ?