ಹಿಂದೂಗಳು ತಮ್ಮ ಬೌದ್ಧಿಕತೆ, ಚತುರತೆ, ವಿನಮ್ರತೆ, ಜೀವಿಸುವ ನೆಲಕ್ಕೆ ತೋರುವ ಬದ್ಧತೆಗಳಿಂದಾಗಿ ವಿಶ್ವ ಮಟ್ಟದಲ್ಲಿ ಹೇಗೆ ಮಾನ್ಯತೆ ಗಳಿಸುತ್ತಿದ್ದಾರೆ ಎನ್ನುವುದನ್ನು ಹಾಗೂ ಅದಕ್ಕೆ ಹಿಂದೂ ಧರ್ಮದ ಮೌಲ್ಯಗಳು ಎಷ್ಟು ಪ್ರಮುಖ ಕಾರಣ ಎನ್ನುವುದನ್ನು ಕಳೆದ ಎರಡು ವಾರದ ʻಸವಿಸ್ತಾರ’ ಲೇಖನದಲ್ಲಿ ಚರ್ಚೆ ನಡೆಸಿದೆವು. ಈ ದಿನ ಸ್ವಲ್ಪ ನಮ್ಮದೇ ದೇಶದಲ್ಲಿ, ನಮ್ಮದೇ ರಾಜ್ಯದಲ್ಲಿ ಹಿಂದೂ ಧರ್ಮದ ಬಗೆಗೆ ನಡೆಯುತ್ತಿರುವ ಚರ್ಚೆಯ ಕಡೆ ಗಮನ ಹರಿಸೋಣ.
ಕರ್ನಾಟಕದ ಮಟ್ಟಿಗೆ ಮತ್ತೊಬ್ಬ ʻಬುದ್ಧಿಜೀವಿ’ಯ ಉದಯವಾಗಿದೆ. ಇಲ್ಲಿಯವರೆಗೂ, ಒಬ್ಬ ಗಂಭೀರ ವ್ಯಕ್ತಿ, ಚಿಂತನಶೀಲ, ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಶ್ರಮಿಸುತ್ತಿರುವ, ಸಂವಿಧಾನಕ್ಕೆ ಬದ್ಧವಾದ ವ್ಯಕ್ತಿ ಎಂದೇ ನಾವು ನಂಬಿದ್ದೆವು. ಈಗ ಅವರ ಬೌದ್ಧಿಕ ಸಾಮರ್ಥ್ಯದ ಕುರಿತು ಅನೇಕರಲ್ಲಿ ಅನುಮಾನ ಮೂಡಲಾರಂಭಿಸಿದೆ.
ಕಾಂಗ್ರೆಸ್‌ನ ಹಿರಿಯ ನಾಯಕರು, ಯಮಕನಮರಡಿ ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಅರ್ಥವನ್ನು ವ್ಯಾಖ್ಯಾನಿಸಲು ಮುಂದಾಗಿದ್ದಾರೆ. ವಿಕಿಪೀಡಿಯಾದಲ್ಲಿ ಓದಿದ್ದ ಇಲ್ಲವೇ ಯಾರೋ-ಏನೋ ಓದಿದ ಒಂದಿಷ್ಟು ಸಂಗತಿಗಳ ಮೂಲಕ, ಹಿಂದೂ ಪದದ ಹುಟ್ಟನ್ನೇ ಕಟಕಟೆಗೆ ಎಳೆದಿದ್ದಾರೆ!
ಇದೇನು ತಪ್ಪಲ್ಲ. ಭಾರತದಲ್ಲಿ ಎಲ್ಲ ಚಿಂತನೆಗಳಿಗೂ ಅವಕಾಶವಿದೆ. ಹಾಗಾಗಿ, ಹಿಂದೂ ಧರ್ಮದ ಕುರಿತು ಅವರು ಪ್ರಶ್ನೆ ಎತ್ತಿದ ಕೂಡಲೆ ಅವರೊಬ್ಬ ʻದೇಶ ವಿರೋಧಿ’, ʻಹಿಂದೂ ವಿರೋಧಿ’ ಎಂದು ಜರಿಯಬೇಕಿಲ್ಲ. ಆ ರೀತಿ ಕರೆದರೆ ಬೇರೆಯವರಿಗೂ ನಮಗೂ ವ್ಯತ್ಯಾಸ ಇರುವುದಿಲ್ಲ. ಹಾಗಾಗಿ ಸತೀಶ್ ಜಾರಕಿಹೊಳಿ ಪ್ರಶ್ನೆಗಳನ್ನು ಎತ್ತಿದ್ದಕ್ಕೆ ಆಕ್ಷೇಪವಿಲ್ಲ. ಭಾರತೀಯ ಸಂಪ್ರದಾಯದಲ್ಲಂತೂ ಪ್ರಶ್ನಿಸಲು ಅವಕಾಶ ಇದ್ದೇ ಇದೆ. ನಮ್ಮ ಸಂವಿಧಾನವೂ ಅಂಥದ್ದೊಂದು ಸ್ವಾತಂತ್ರ್ಯ ನೀಡಿದೆ. ಸಂವಿಧಾನದ ವಿಧಿ 51 ಎ(ಎಚ್) ಅಂದರೆ ಮೂಲಭೂತ ಕರ್ತವ್ಯಗಳಲ್ಲಿ, ʻಭಾರತದ ಪ್ರತಿ ಪ್ರಜೆಯೂ ವೈಜ್ಞಾನಿಕ ಮನೋಭಾವ, ಮಾನವತಾ ವಾದ, ಪ್ರಶ್ನಿಸುವ ಹಾಗೂ ಸುಧಾರಣೆಯ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು’ ಎಂದಿದೆ.
ಆದರೆ, ಇಷ್ಟು ದೊಡ್ಡ ಜೀವಂತ ಸಮಾಜದ ಅಸ್ತಿತ್ವವನ್ನೇ ಪ್ರಶ್ನಿಸುವ ಮುನ್ನ ನಮ್ಮ ಸಿದ್ಧತೆಯೂ ಅಷ್ಟೇ ಇರಬೇಕಲ್ಲ? ಕ್ರೀಡಾಪಟುವೊಬ್ಬ ತನ್ನ ಗ್ರಾಮದ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಚ್ಚೇನೂ ತಯಾರಿ ನಡೆಸಬೇಕಿಲ್ಲ. ಆದರೆ ಅದೇ ಒಲಿಂಪಿಕ್‌ನಲ್ಲಿ ಭಾಗವಹಿಸಲು ಮೂರ್ನಾಲ್ಕು ವರ್ಷ ಜೀವನವನ್ನೇ ಮುಡಿಪಾಗಿಡುತ್ತಾನೆ. ವಿಶ್ವದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತನ್ನ ಸಾಮರ್ಥ್ಯವನ್ನು ಅರಿಯುತ್ತಾನೆ. ಎದುರಾಳಿಗಳು ಯಾರು? ಅವರ ಸಾಮರ್ಥ್ಯ ಏನು? ಅವರನ್ನು ಮೀರಲು ತಾನು ಮಾಡಿಕೊಳ್ಳಬೇಕಾದ ತಯಾರಿ ಏನು? ಎಂದು ಆಲೋಚಿಸುತ್ತಾನೆ. ಅಲ್ಲವೇ?
ಹಾಗೆಯೇ ಹಿಂದೂ ಧರ್ಮದ ಕುರಿತು ಮಾತನಾಡುವ ಮುನ್ನ ಜಾರಕಿಹೊಳಿ ಅವರು ಯಾವುದೇ ತಯಾರಿಯನ್ನೇ ಮಾಡಿಲ್ಲ. ಪರ್ಷಿಯಾದಿಂದ ಉರ್ದು ಭಾಷೆಗೆ ಒಂದು ನಿಘಂಟು ಇತ್ತು, ಅದನ್ನು ಉದಾಹರಿಸಿ ಒಬ್ಬರು ಲೇಖನ ಬರೆದರು, ಅದನ್ನು ನೋಡಿ ಜಾರಕಿಹೊಳಿ ಮಾತನಾಡಿದರು. ದಾಖಲೆ ಎಲ್ಲಿ? ಎಂದು ಕೇಳಿದರೆ ವಿಕಿಪೀಡಿಯ ನೋಡಿ, ಯೂಟ್ಯೂಬ್ ನೋಡಿ, ವಾಟ್ಸ್ಆ್ಯಪ್ ನೋಡಿ ಎಂದರು.
ಅವರು ಹೇಳಿದ ಮೂರೂ ಮೂಲಗಳೂ ಉತ್ತಮವಾದವೇ. 2001ರಲ್ಲಿ ಆರಂಭವಾದ ವಿಕಿಪೀಡಿಯದಲ್ಲಿ ಈಗ 66 ಲಕ್ಷ ಲೇಖನಗಳಿವೆ, ಪ್ರತಿ ತಿಂಗಳು ನೂರಾರು ಕೋಟಿ ಜನರು ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಯೂಟ್ಯೂಬ್‌ಗೆ ಪ್ರತಿ ತಿಂಗಳು 250 ಕೋಟಿ ಬಳಕೆದಾರರು ಇದ್ದಾರೆ. ಇವರೆಲ್ಲ ಸೇರಿ ಪ್ರತಿ ದಿನ ನೂರು ಕೋಟಿ ಗಂಟೆ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಾರೆ. ಇನ್ನು ವಾಟ್ಸ್ಆ್ಯಪ್ ಅನ್ನು ಇನ್ನೂರು ಕೋಟಿಗೂ ಹೆಚ್ಚು ಜನರು ಬಳಕೆ ಮಾಡುತ್ತಾರೆ. ಇವೆಲ್ಲವೂ ಜ್ಞಾನ ವಾಹಿನಿಗಳೇ. ಎಲ್ಲೋ ದೂರದ ಲಂಡನ್ ಮ್ಯೂಸಿಯಂನಲ್ಲಿದ್ದ ಮಾಹಿತಿಯನ್ನು ಬೆರಳ ತುದಿಯಲ್ಲೇ ನೀಡಬಲ್ಲವು. ಆದರೆ ಇವುಗಳ ಬಳಕೆ ತಿಳಿದಿರಬೇಕು.
ಉದಾಹರಣೆಗೆ, ವಿಕಿಪೀಡಿಯಾ ಸ್ವತಃ ಘೋಷಿಸಿಕೊಂಡಿರುವಂತೆ, ಅದು ಯಾರು ಬೇಕಾದರೂ ಎಡಿಟ್ ಮಾಡಬಹುದಾಗ, ಲೇಖನ ಸೇರಿಸಬಹುದಾದ ಆನ್ಲೈನ್ ಎನ್ಸೈಕ್ಲೋಪೀಡಿಯಾ. ಇಲ್ಲಿಗೆ ಯಾರು ಬೇಕಾದರೂ ಬರೆಯಬಹುದು. ವಿಕಿಪೀಡಿಯಾದಲ್ಲಿ ಮೇಲ್ನೋಟಕ್ಕೆ ಕಾಣುವ ಅಕ್ಷರಗಳು ಲೇಖಕನ ಅಭಿಪ್ರಾಯವೂ ಆಗಿರಬಹುದು. ಆದರೆ ಆ ಹೇಳಿಕೆಗೆ ಆತ ದಾಖಲೆಯನ್ನು ನೀಡಿರುತ್ತಾನೆ. ಅದು ಯಾವುದೇ ಪುಸ್ತಕ, ಲೇಖನ ಇರಬಹುದು. ಅದನ್ನು ಪರಿಶೀಲಿಸಿದರೆ ಮಾತ್ರವೇ ನಮಗೆ ಆ ಲೇಖನದ ನಿಜವಾದ ಮಹತ್ವ ತಿಳಿಯುತ್ತದೆ. ಹಿಂದೂ ಧರ್ಮದ ಕುರಿತು ಕೀಳು ಅರ್ಥವನ್ನು ನೀಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ ವಿಕಿಪೀಡಿಯಾದಲ್ಲೇ ಹಿಂದೂ ಧರ್ಮದ ಕುರಿತು ಹೀಗೂ ಹೇಳಲಾಗಿದೆ: “ಹಿಂದೂ ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವು ವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ”. ಹೀಗಾಗಿ, ಹಿಂದೂ ಧರ್ಮದ ಕುರಿತು ಪ್ರಶ್ನೆಗಳನ್ನು ಎತ್ತುವಷ್ಟು ತಯಾರಿಯನ್ನು ಇವರು ಮಾಡಿಕೊಂಡಿಲ್ಲ ಎಂದು ಮೇಲ್ನೋಟಕ್ಕೆ ಹೇಳಬಹುದು. ಆದರೆ ವಸ್ತುಸ್ಥಿತಿ ಅಷ್ಟು ಸರಳವಾಗಿಲ್ಲ.
ಹಿಂದೂ ಧರ್ಮವೇ ಏಕೆ ಆಗಾಗ್ಗೆ ಅಪಪ್ರಚಾರಕ್ಕೆ, ಆಕ್ರಮಣಕ್ಕೆ ಒಳಗಾಗುತ್ತದೆ? ಈ ಕುರಿತು ನಮ್ಮ ಮಧ್ಯೆ ಬಾಳಿ ಬದುಕಿ ಹೋದ ಬೌದ್ಧಿಕ ಕ್ಷತ್ರಿಯ ಡಾ. ಚಿದಾನಂದ ಮೂರ್ತಿ ಅವರು ವಿಸ್ತೃತ ಅಧ್ಯಯನ ನಡೆಸಿದ್ದಾರೆ. ʻಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂ ಧರ್ಮ’ ಎಂಬ ಪುಸ್ತಕವನ್ನೇ ಬರೆದಿದ್ದಾರೆ (ಭಾರತ ವಿಕಾಸ ಪರಿಷತ್ ಪ್ರಕಟಣೆ- 2007).
ಈ ಪುಸ್ತಕದ ಮೊದಲ ಲೇಖನದ ಮೊದಲ ಸಾಲು ಹೀಗೆ ಆರಂಭವಾಗುತ್ತದೆ: “ಭಾರತದ ಹೊರಗೆ ಇರಲಿ, ಭಾರತದ ಒಳಗೇ ಇರಲಿ- ಹಿಂದೂ ಧರ್ಮದ ಬಗ್ಗೆ ಇರುವ ಅಪಾರ್ಥ ಕಲ್ಪನೆ ಅಪಾರ, ಪಾಶ್ಚಾತ್ಯ ವಿದ್ವಾಂಸರು ಆರ್ಯ-ದ್ರಾವಿಡ ಭೇದ ಕಲ್ಪಿಸಿ ವೇದಗಳ ಆಶಯವನ್ನು ತಿರುಚಿ ಬರೆದ ಬರಹಗಳು. ಇವುಗಳ ಪ್ರಭಾವದಿಂದ ಇನ್ನೂ ಭಾರತೀಯರು ತಪ್ಪಿಸಿಕೊಂಡಿಲ್ಲ, ತಪ್ಪಿಸಿಕೊಳ್ಳುವ ಸೂಚನೆಗಳೂ ಇಲ್ಲ. ನಾವಿನ್ನೂ ಇಂಗ್ಲಿಷರು ಬರೆದಿರುವ ಅವರ ಕೃತಿಗಳು, ಅವು ಇಂಗ್ಲಿಷಿನಲ್ಲಿವೆ ಎಂಬ ಕಾರಣಕ್ಕೆ ಶ್ರೇಷ್ಠ ಎಂಬ ಗುಮ್ಮಕ್ಕೆ ಒಳಗಾಗಿದ್ದೇವೆ”.
ಇದನ್ನೂ ಓದಿ | ಸವಿಸ್ತಾರ ಅಂಕಣ | ಜ್ಞಾನದ ಬಲದಿಂದ ರಿಷಿ ಸುನಕ್ ಗೆದ್ದ ನೋಡಯ್ಯ!
ಇದೇ ಲೇಖನದ ಮುಂದುವರಿದ ಭಾಗದಲ್ಲಿ, ಇಂದು ಹಿಂದೂ ಧರ್ಮದ ಮೇಲೆ ನಡೆದಿರುವ ಮೂರು ಬಗೆಯ ಆಕ್ರಮಣಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಮೊದಲನೆಯ ಆಕ್ರಮಣದ ಕುರಿತು ಹೀಗೆ ಬರೆದಿದ್ದಾರೆ. “ಹಿಂದೂಗಳೇ ಆಗಿರುವ ಪ್ರಗತಿಪರರು, ಜಾತ್ಯತೀತರು, ಕ್ರಾಂತಿಕಾರಿಗಳೆಂದು ತಮ್ಮನ್ನು ತಾವು ಭಾವಿಸಿಕೊಂಡಿರುವ ʻಬುದ್ಧಿಜೀವಿಗಳುʼ ಅವರನ್ನು “ಬುದ್ಧಿಜೀವಿಗಳೆಂದು (Intellectuals) ಕರೆಯಲು ಮನಸ್ಸಾಗುವುದಿಲ್ಲ ಏಕೆಂದರೆ ಅವರಲ್ಲಿ ಬಹುಪಾಲು ಜನ ಸಾಹಿತಿಗಳಾಗಿದ್ದು, ಭಾಷೆಯ ಮೇಲೆ ಒಳ್ಳೆಯ ಹಿಡಿತ ಹೊಂದಿ ಆಕರ್ಷಕವಾಗಿ ಮಾತನಾಡಬಲ್ಲವರು, ಬರೆಯಬಲ್ಲವರು. ಅವರು ಹಲವು ಬಾರಿ ಮೌನ ವಹಿಸಿ ತಾವು “ಜಾತ್ಯತೀತರು” ಎಂದು ಬಿಂಬಿಸಿಕೊಳ್ಳುತ್ತಾರೆ: ನಿಷ್ಠುರ ಸತ್ಯವನ್ನು ಹೇಳುವ ಧೈರ್ಯ ಅವರಿಗಿಲ್ಲ. ಅವರಿಗೆ ಯಾವುದೇ ಮಾಹಿತಿಯ ಬೆಂಬಲ ಬೇಕಾಗಿಲ್ಲ. ಪರಿಸರ, ಆಡಳಿತ, ಪರಂಪರೆ, ಚರಿತ್ರೆ, ಕಲೆ, ಸಾಹಿತ್ಯ ಇಂತಹ ಎಲ್ಲ ವಿಷಯಗಳ ಬಗ್ಗೆ ಬಹಿರಂಗವಾಗಿ ಬರೆಯಲು, ಮಾತನಾಡಲು ಅವರಿಗೆ ಬೇರೆ ಬೇರೆ ವೇದಿಕೆಗಳು ದೊರಕುತ್ತವೆ. ಪತ್ರಿಕೆಗಳಲ್ಲಿ ಅವರಿಗೆ ಪ್ರಚಾರ ಸುಲಭವಾಗಿ ಸಿಗುತ್ತದೆ. ಈಚಿನ ಬಹು ಒಳ್ಳೆಯ ಉದಾಹರಣೆಯೆಂದರೆ ಟಿಪ್ಪು ವಿವಾದ: ಅವನನ್ನು ಕುರಿತಂತೆ ಆ ಪ್ರಗತಿಪರರು ವೈಭವೀಕರಿಸಿ ಮಾತನಾಡಿದರು; ಅವನ ಬಗ್ಗೆ ಸಾಹಿತ್ಯ ರಚನೆ ಕೂಡ ಮಾಡಿದ್ದಾರೆ. ಆದರೆ ಅವರ ಗಮನಕ್ಕೆ ಐತಿಹಾಸಿಕ ಮೂಲ ಸಾಮಗ್ರಿಯನ್ನು ತಂದು ಅವರ ವಾದದ ಟೊಳ್ಳುತನವನ್ನು ಬಯಲು ಮಾಡುತ್ತಲೇ ಅವರು ಆ ಬಗ್ಗೆ ಮೌನ ವಹಿಸಿದರು. ಏಕೆಂದರೆ ಅವರು ಮಾತಿನ ಮೂಲಕ ಯಾವುದನ್ನೇ ಎದುರಿಸಿ ಹೆದರಿಸಬಲ್ಲರೇ ಹೊರತು ವಾಸ್ತವತೆಯನ್ನು ಎದುರಿಸಲಾರರು. ಅವರು ಹಿಂದೂಗಳಿಗೆ ಅನ್ಯಾಯವಾದಾಗ ಅದನ್ನು ವಿರೋಧಿಸಿ ಪ್ರತಿಭಟಿಸಿರುವ ಒಂದು ಉದಾಹರಣೆಯೂ ನನ್ನ ಗಮನಕ್ಕೆ ಬಂದಿಲ್ಲ. ಆದರೆ ಕ್ರಿಶ್ಚಿಯನ್ನರಿಂದ ಮತಾಂತರ, ಮುಸ್ಲಿಮರಿಂದ ಹಿಂಸೆ, ಗಲಭೆ, ದೇವಾಲಯ ನಾಶಗಳು ನಡೆದರೂ ಆ ಬಗ್ಗೆ ಅವರು ಎಂದೂ ಧ್ವನಿಯೆತ್ತಿಲ್ಲ. ತಾವು ಹಿಂದೂಗಳಾಗಿದ್ದರೂ ಎಂದೂ ತಾವು ಹಿಂದೂಗಳ ಪರ ಅಲ್ಲ, ಕೇವಲ ʻಅಲ್ಪಸಂಖ್ಯಾತರ ಪರ ಎಂದು ತೋರಿಸಿಕೊಳ್ಳುವುದರ ಮೂಲಕ ತಾವು ಜಾತ್ಯತೀತರು(Secularists) ಎಂಬುದನ್ನು ಎತ್ತಿ ಹಿಡಿಯುವ ಪರೋಕ್ಷ ಸ್ವವೈಭವೀಕರಣ ಅವರಲ್ಲಿ ಕಾಣುತ್ತದೆ. ಅವರಿಗೆ ಹಿಂದೂಗಳನ್ನು ಅಲ್ಲಗಳೆಯುವಲ್ಲಿ, ಹಿಂದೂಗಳಿಗೆ ಆಗಿರುವ ಅನ್ಯಾಯಗಳನ್ನು ಎತ್ತಿ ಡಿಯುವವರನ್ನು ʻಮನುವಾದಿ’ಗಳೆಂದು ʻಕೋಮುವಾದಿ’ಗಳೆಂದು ಹೀಯಾಳಿಸುವುದರಲ್ಲಿ ಒಂದು ಬಗೆಯ ಖುಷಿ ಕಾಣುತ್ತದೆ.” ಇದರ ನಂತರ ಎರಡು ಆಕ್ರಮಣಗಳನ್ನು ಚಿದಾನಂದ ಮೂರ್ತಿ ಅವರು ಪಟ್ಟಿ ಮಾಡಿದ್ದು, ಅವುಗಳೆಂದರೆ ಕ್ರೈಸ್ತ ಹಾಗೂ ಮುಸ್ಲಿಂ ಆಕ್ರಮಣಗಳು. ಅಂದರೆ ಕ್ರೈಸ್ತ ಮತ್ತು ಮುಸ್ಲಿಂ ಆಕ್ರಮಣಗಳಿಗಿಂತಲೂ ಹೆಚ್ಚಾಗಿ ಹಿಂದೂ ಧರ್ಮಕ್ಕೆ ಅಪಾಯ ಇರುವುದು ತಮ್ಮನ್ನು ತಾವು ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವವರಿಂದ ಎನ್ನುವುದು ಅವರ ಸಂದೇಶ.
ಈಗ ಗೊತ್ತಾಯಿತು ಅಲ್ಲವೇ? ಈ ರೀತಿ ಹಿಂದು ಧರ್ಮದ ಕುರಿತು ಟೀಕಿಸುವುದು ಅಚಾನಕ್ಕಾಗಿ, ಬಾಯಿ ತಪ್ಪಿನಿಂದ ಆದ ಘಟನೆಯಲ್ಲ. ಇದು ಒಂದು ನಿರ್ದಿಷ್ಟ ಕಾರ್ಯತಂತ್ರವನ್ನು ಒಳಗೊಂಡಿದೆ! ಇಂತಹ ಅನೇಕರು ನಮ್ಮ ದೇಶದಲ್ಲಿದ್ದಾರೆ. ತಮ್ಮನ್ನು ತಾವು ಸಂವಿಧಾನದ ಕಾಲಾಳುಗಳು ಎಂದು ಕರೆದುಕೊಳ್ಳುತ್ತಾರೆ.
ಇದನ್ನೂ ಓದಿ | ಸವಿಸ್ತಾರ ಅಂಕಣ | Sorry ಎನ್ನಲು ಮನಸ್ಸಿಲ್ಲದ ಬ್ರಿಟನ್, ಭಾರತದಿಂದ ಕಲಿಯುವುದು ಸಾಕಷ್ಟಿದೆ
ಈ ಹಿಂದೆ ತಿಳಿಸಿದಂತೆ, ಪ್ರಶ್ನಿಸುವ ಅಧಿಕಾರ ನೀಡಿದ ಸಂವಿಧಾನವೇ, ಧಾರ್ಮಿಕ ವಿಚಾರದಲ್ಲಿ ಮತ್ತೊಬ್ಬರ ಮನಸ್ಸಿಗೆ ಘಾಸಿ ಉಂಟುಮಾಡಬಾರದು ಎಂದೂ ಹೇಳಿದೆ. ಪ್ರಶ್ನಿಸುವ ಮನೋಭಾವವನ್ನು ಉತ್ತೇಜಿಸುವ ಮೂಲಭೂತ ಕರ್ತವ್ಯದ 51ಎ (ಇ) ಅಂಶದಲ್ಲಿ, ವಿವಿಧ ಧರ್ಮ, ಜಾತಿ, ಪ್ರಾಂತ್ಯದ ಜನರೊಂದಿಗೆ ಸೌಹಾರ್ದದಿಂದ ಇರಬೇಕು ಎಂದು ಹೇಳಾಗಿದೆ. ಅದೇ ವಿಧಿಯ 51ಎ (ಎಫ್) ಅಂಶದಲ್ಲಿ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದೂ ಕರ್ತವ್ಯ ಎಂದು ಹೇಳಿದೆ.
ಹಾಗೆಯೇ ಭಾರತೀಯ ದಂಡ ಸಂಹಿತೆ (ಐಪಿಸಿ) 295 ಎ ಅನ್ವಯ, ಉದ್ದೇಶ ಪೂರ್ವಕವಾಗಿ ಮತ್ತೊಬ್ಬರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವುದು ನಾಲ್ಕು ವರ್ಷಗಳವರೆಗೆ ಶಿಕ್ಷಾರ್ಹ ಅಪರಾಧವೂ ಆಗುತ್ತದೆ.
ತಮ್ಮನ್ನು ತಾವು ಸಂವಿಧಾನದ ಕಾಲಾಳು ಎಂದು ಹೇಳಿಕೊಳ್ಳುವವರು ಇದನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ತಮ್ಮ ಮೂಗಿನ ನೇರಕ್ಕೆ ಸಂವಿಧಾನವನ್ನು, ಅದರಲ್ಲಿ ನೀಡಿರುವ ಅಧಿಕಾರಗಳನ್ನು ಅರ್ಥೈಸಿಕೊಂಡು ಮತ್ತೊಬ್ಬರ ಮನಸ್ಸಿಗೆ ಘಾಸಿ ಮಾಡಿ, ಆನಂತರ ಮಾತನ್ನು ಹಿಂಪಡೆಯುವ ʻಹಿಟ್ ಆ್ಯಂಡ್ ರನ್’ ಪ್ರವೃತ್ತಿಯನ್ನು ಬಿಡಲಿ. ಗ್ರಹಣದ ಕುರಿತು ಇರುವ ಮೂಢನಂಬಿಕೆಗಳನ್ನು, ಸ್ಮಶಾನದ ಕುರಿತು ಇರುವ ಭಯಗಳನ್ನು ಹೋಗಲಾಡಿಸಲು, ಜಾತಿ ಭೇದಭಾವವನ್ನು ಹೋಗಲಾಡಿಸುವಂತಹ ಗಂಭೀರ ಸುಧಾರಣೆಗಳತ್ತ ಸತೀಶ್ ಜಾರಕಿಹೊಳಿ ಅಂತಹವರು ಮುಂದುವರಿಯಲಿ. ಬುದ್ಧಿಜೀವಿ ಆಗಬೇಕೆಂಬ ಹಪಹಪಿಯಿಂದ ಹೊರಬಂದು ನಿಜವಾದ ಸಾಮಾಜಿಕ ಸುಧಾರಣೆಯ ಕಾರ್ಯವನ್ನು ಮುಂದುವರಿಸಲಿ ಎಂದು ಆಶಿಸೋಣ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಗೊಂದಲದ ಮಾತಿನ ಮೂಲಕ ʼಭಾರತ ಭಂಜನೆʼ ಮಾಡುವಿರೇಕೆ?