Site icon Vistara News

ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

veer savarakar

“ಸಾವರ್ಕರ್ ಅವರ ಬಂಧನ ಪ್ರಕ್ರಿಯೆಯಲ್ಲಿ ಎರಡು ರೀತಿಯ ಪ್ರಮಾದಗಳು ನಡೆದುಹೋಗಿವೆ. ಮೊದಲನೆಯದು, ಬ್ರಿಟಿಷ್ ಪೊಲೀಸರು ಸಾವರ್ಕರ್ ಅವರನ್ನು ʼಕಳ್ಳʼ ಎಂದು ಸಂಬೋಧಿಸಿರುವುದು. ಎರಡನೆಯದು, ಸಾವರ್ಕರ್ ಬಂಧನದ ಬಳಿಕ ಫ್ರಾನ್ಸಿನ ನೌಕಾ ಸಿಬ್ಬಂದಿಯೊಬ್ಬರು ಅವರನ್ನು ಮಾರ್ಸೆಲಸ್ ನಗರದ ಬಂದರಿನ ಕಮಿಷನರಿಗೆ(ಮುಖ್ಯಾಧಿಕಾರಿ) ಒಪ್ಪಿಸದೆ ಬ್ರಿಟಿಷ್ ಪೊಲೀಸರಿಗೆ ಒಪ್ಪಿಸಿರುವುದು!

— ಇದು 1910ರ ಜುಲೈ 13ರಂದು ಫ್ರಾನ್ಸಿನ ಎಲ್ ಹ್ಯೂಮನೈಟ್(ಅರ್ಥ: ಮಾನವೀಯತೆ) ಎಂಬ ಹೆಸರಿನ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ. ಈ ಸುದ್ದಿ ಫ್ರಾನ್ಸಿನಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು!

ಅಂದಹಾಗೆ, ಸಾವರ್ಕರ್ ಪರವಾಗಿ ಈ ಸುದ್ದಿಯನ್ನು ಬರೆದ ಪತ್ರಕರ್ತ ಜೀನ್ ಲಾಂಗೆಟ್. ಈ ಲಾಂಗೆಟ್ ಯಾರು ಗೊತ್ತೆ? ಕಮ್ಯುನಿಷ್ಟ್ ಸಿದ್ಧಾಂತದ ಜನಕ ಕಾರ್ಲ್ ಮಾರ್ಕ್ಸ್ ಮೊಮ್ಮಗ.

1910ರಲ್ಲಿ ಲಂಡನ್ನಿನಲ್ಲಿ ಬಂಧಿತರಾದ ಸಾವರ್ಕರ್, ತಮ್ಮ ಬಂಧನಕ್ಕೂ ಮೊದಲು ಹಾಗೂ ಬಳಿಕ ಬ್ರಿಟಿಷ್ ರಾಜಕಾರಣಿಗಳು, ಪತ್ರಕರ್ತರು ಹಾಗೂ ಅಧಿಕಾರಿಗಳ ನಡುವೆ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿದ್ದರು. ಲಂಡನ್ ನಗರಿಯಿಂದ ಭಾರತಕ್ಕೆ ಅವರನ್ನು ಕರೆತರುವಾಗ, ಫ್ರಾನ್ಸಿನ ಮಾರ್ಸೆಲಸ್‌ನಲ್ಲಿ ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದರು. ಮಾತ್ರವಲ್ಲ, ತಮಗೆ ಆಶ್ರಯ ನೀಡಬೇಕೆಂದು ಫ್ರಾನ್ಸ್ ಸರಕಾರವನ್ನು ಕೋರಿಕೊಳ್ಳುವ ಮೂಲಕ, ಫ್ರಾನ್ಸ್ ಮತ್ತು ಬ್ರಿಟನ್ ನಡುವೆ ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದರು. ಸಾವರ್ಕರ್ ಎಂಬ ವ್ಯಕ್ತಿತ್ವದ ಕುರಿತು ಬ್ರಿಟನ್ ಮಾತ್ರವಲ್ಲ ಫ್ರಾನ್ಸಿನ ಅನೇಕ ಪತ್ರಿಕೆಗಳು ದೊಡ್ಡ ಮಟ್ಟದಲ್ಲಿ ಚರ್ಚೆಗಿಳಿದಿದ್ದವು.

ಈ ಘಟನೆ ನಡೆದು ನೂರು ವರ್ಷಗಳ ಬಳಿಕವೂ ಸಾವರ್ಕರ್ ಏನು ಮಹಾ ಎಂದು ಇಂದಿಗೂ ಚರ್ಚಿಸುತ್ತಿರುವ ಭಾರತದಲ್ಲಿರುವ ಮಾರ್ಕ್ಸ್ ಚಿಂತನೆಯ ಬೌದ್ಧಿಕ ಮರಿಮಕ್ಕಳು, ಗಿರಿಮಕ್ಕಳ ವಾದ-ವಿವಾದ ನೋಡಿದಾಗ, ಮಾರ್ಕ್ಸ್‌ನ ನಿಜವಾದ ಮೊಮ್ಮಗ ಲಾಂಗೆಟ್ ನೆನಪಾದ.

ಇಷ್ಟಕ್ಕೂ ಸಾವರ್ಕರ್ ಬ್ರಿಟನ್‌ಗೆ ಹೋಗಿದ್ದೇಕೆ? ಫ್ರಾನ್ಸ್ ನೆಲದಲ್ಲಿ ಅವರು ನಡೆಸಿದ ಪಲಾಯನ ಸಾಹಸಕ್ಕೆ ಮುನ್ನ, ಲಂಡನ್ ಕಥಾನಕವನ್ನು ಅರಿಯೋಣ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್

ಸಿಂಹವನ್ನು ಸಿಂಹದ ಗುಹೆಯಲ್ಲೇ ಎದುರಿಸುತ್ತೇನೆ ಎಂಬ ಗುಂಡಿಗೆಯನ್ನು ಹೊತ್ತೇ ಲಂಡನ್ನಿಗೆ ತೆರಳಿದ್ದರು ಸಾವರ್ಕರ್. ಲಂಡನ್ನಿನ ಲೈಬ್ರರಿಯಲ್ಲಿ ಕುಳಿತು, ಭಾರತದ ಇತಿಹಾಸದ ಪುಟಗಳನ್ನು ಬ್ರಿಟಿಷ್ ದಾಖಲೆಗಳ ಮೂಲಕವೇ ಬರೆದರು, ಮುಖ್ಯವಾಗಿ 1857ರಲ್ಲಿ ನಡೆದದ್ದು ಸಿಪಾಯಿ ದಂಗೆ ಎಂದು ನಂಬಿಸಿದ್ದ ಬ್ರಿಟಿಷ್ ಇತಿಹಾಸಕಾರರ ವಾದವನ್ನು ಸುಳ್ಳಾಗಿಸಿ, ಅದು ಭಾರತದ ಪ್ರಥಮ ಸಂಘಟಿತ ಸ್ವಾತಂತ್ರ್ಯ ಸಂಗ್ರಾಮ ಎನ್ನುವುದನ್ನು ದಾಖಲೆ ಸಹಿತ ನಿರೂಪಿಸಿದರು. ಬಹಳ ವರ್ಷಗಳ ಕಾಲ ಸೋಲಿನ ಇತಿಹಾಸ ಎಂದೇ ವ್ಯಾಖ್ಯಾನಿತ ಘಟನೆಯನ್ನು ವಿಜಯದ ಇತಿಹಾಸ ಎಂದು ಬ್ರಿಟಿಷರಿಗೆ ತಿವಿದು ಹೇಳಿದರು. ಇದಕ್ಕಿಂತಲೂ ಹೆಚ್ಚಾಗಿ ಭಾರತೀಯರಿಗೆ ವಿಜಯಗಾಥೆಯನ್ನು ಮನವರಿಕೆ ಮಾಡಿಕೊಟ್ಟರು.

ಅಧ್ಯಯನಶೀಲ ವೀರ ಸಾವರ್ಕರ್

“ಬ್ರಿಟಿಷ್ ಅಧಿಕಾರಿಗಳ ಬಗ್ಗೆ, ಅವರು ರೂಪಿಸಿದ ಕಾನೂನುಗಳ ಬಗ್ಗೆ ಗೊಣಗುವುದರಲ್ಲಿ ಏನು ಅರ್ಥವಿದೆ? ಅದಕ್ಕೆ ಕೊನೆ ಮೊದಲಿಲ್ಲ. ನಮ್ಮ ಚಳವಳಿ, ಹೋರಾಟ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗಬಾರದು. ಬದಲಿಗೆ, ಆ ನಾವೇ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು. ಅದಕ್ಕಾಗಿ ಬ್ರಿಟಿಷರನ್ನು ಹೊರದಬ್ಬಬೇಕು,” ಎಂದು ಯುವಕರಲ್ಲಿ ಪ್ರೇರಣೆ ತುಂಬುವ ಕೆಲಸ ಮಾಡಿದರು. ಸ್ವರಾಜ್ಯವೇ ನಮ್ಮ ಹಕ್ಕು, ಅದೇ ಸ್ವಾತಂತ್ರ್ಯದ ಪರಮ ಗುರಿ ಎಂಬುದನ್ನು ಸಾವರ್ಕರ್ ಅವರು, ತಿಲಕರು ಮತ್ತು ಗಾಂಧೀಜಿ ಅವರಿಗಿಂತ ಅದೆಷ್ಟೋ ವರ್ಷಗಳ ಮೊದಲೇ ಹೇಳಿದ್ದರು!

ಲಂಡನ್‌ನಲ್ಲಿ ಸ್ವತಂತ್ರ ಭಾರತ ಸಮಾಜ (ಫ್ರೀ ಇಂಡಿಯಾ ಸೊಸೈಟಿ), ಅಭಿನವ ಭಾರತ ಎಂಬ ಸಂಸ್ಥೆಗಳನ್ನು ಸ್ಥಾಪಿಸಿ, ಭಾರತೀಯ ಹಬ್ಬ-ಹರಿದಿನಗಳನ್ನು, ಸ್ವಾತಂತ್ರ್ಯ ಸಂಗ್ರಾಮದ ಮೈಲುಗಲ್ಲುಗಳನ್ನೂ (1857ರ ಸಂಗ್ರಾಮದ ಬೆಳ್ಳಿಹಬ್ಬ) ಆಚರಿಸುತ್ತಿದ್ದರು. ಭಾರತದ ಸ್ವಾತಂತ್ರ್ಯದ ಬಗ್ಗೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸತ್ತೆಯ ಕೆಂಗಣ್ಣು ಬೀಳಲು ತಡವಾಗಲಿಲ್ಲ. ಈ ಸಭೆಗಳಿಗೆ ಆಗಮಿಸುತ್ತಿದ್ದ ತರುಣರು, ಇಲ್ಲಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕುತ್ತಿದ್ದರು.

ಸಾವರ್ಕರರೇನೋ ಸ್ವಾತಂತ್ರ್ಯ ಲಕ್ಷ್ಮಿಯ ಪ್ರಾಪ್ತಿಯ ಹೋರಾಟಕ್ಕೆ ಲಂಡನ್ನಿಗೆ ಹೋಗಿದ್ದರು. ಆದರೆ ಎಲ್ಲರೂ ಅದೇ ರೀತಿ ಇರಲಿಲ್ಲ. ಮನೆಯಲ್ಲಿ ಸ್ಥಿತಿವಂತರಾಗಿದ್ದ ಭಾರತೀಯರಿಗೆ, ಅವರ ಮಕ್ಕಳಿಗೆ, ಲಂಡನ್ನಿಗೆ ಹೋಗುವುದು ಜೀವನಶೈಲಿಯಾಗಿತ್ತು. ಅಲ್ಲಿನ ಬಿಳಿ ಚರ್ಮದ ಹುಡುಗಿಯರ ಮುಂದೆ ಶೋಕಿ ಮಾಡುತ್ತ, ತಾವು ಅನಾದಿಕಾಲದ ಭಾರತೀಯರಲ್ಲ, ನಿಮ್ಮ ರೀತಿಯಲ್ಲೆ ʼನಾಗರಿಕರುʼ ಎಂದು ತೋರಿಸಿಕೊಳ್ಳುವ ಬಯಕೆಯವರು ಇದ್ದರು. ಬ್ರಿಟಿಷರಿಗಿಂತಲೂ ಹೆಚ್ಚು ಬ್ರಿಟಿಷರಾಗುವ ಬಯಕೆ ಅವರಲ್ಲಿತ್ತು. ಈಗಲೂ ಅಂತವರಿಗೇನೂ ಕಡಿಮೆ ಇಲ್ಲ, ಅಲ್ಲವೇ?

ಅಂಥದ್ದೇ ಮಾನಸಿಕತೆಯ ಮದನ್ ಲಾಲ್ ಧಿಂಗ್ರಾ, ಅಚಾನಕ್ ಆಗಿ ಸಾವರ್ಕರ್ ಸಂಪರ್ಕಕ್ಕೆ ಬಂದ. 1907ರಲ್ಲಿ ಭಾರತ ಭವನದಲ್ಲಿ ಸಾವರ್ಕರ್ ಹಾಗೂ ಸಂಗಡಿಗರು ಸೇರಿ 1857ರ ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಹೊರಗಿನ ಪ್ರದೇಶದಲ್ಲಿ ಗ್ರಾಮಾಫೋನ್‌ಗಳಲ್ಲಿ ಪಾಶ್ಚಾತ್ಯ ಸಂಗೀತದೊಂದಿಗೆ ಸ್ನೇಹಿತರ ಜತೆಗೂಡಿದ್ದ ಧಿಂಗ್ರಾ, ಕುಣಿಯುತ್ತಿದ್ದ. ಇದರಿಂದ ಕೋಪಗೊಂಡ ಸಾವರ್ಕರ್, ಅಲ್ಲಿ ದೇಶ ಗುಲಾಮಗಿರಿಯಲ್ಲಿದ್ದರೆ ನೀನು ಸಂತಸಪಡುತ್ತಿದ್ದೀಯೇ ಎಂದು ಗದರಿ ಹೋದರು. ಅದು ಏಕೊ ಧಿಂಗ್ರಾನ ಮನಸ್ಸಿಗೆ ನಾಟಿತು. ಕೆಲ ದಿನಗಳ ಬಳಿಕ ತಾನೇ ತಾನಾಗಿ ಭಾರತ ಭವನಕ್ಕೆ ಬಂದು ಸಾವರ್ಕರರನ್ನು ಸಂಪರ್ಕಿಸಿದ, ಅವರ ಜತೆಗೇ ಸೇರಿಕೊಂಡ. ಭಾರತ ಭವನದಲ್ಲಿ ನಡೆಯುತ್ತಿದ್ದ ಮಾತುಕತೆಗಳು, ಮುಖ್ಯವಾಗಿ ಸಾವರ್ಕರ್ ಮಾಡುತ್ತಿದ್ದ ದೇಶಭಕ್ತಿಪೂರಿತ ಭಾಷಣಗಳು ಧಿಂಗ್ರಾನ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿದ್ದವು. ದೇಶದಲ್ಲಿ ಬ್ರಿಟಿಷರು ನಡೆಸುತ್ತಿರುವ ದೌರ್ಜನ್ಯಗಳಿಗೆ ಬ್ರಿಟಿಷ್ ನೆಲದಲ್ಲೇ ಉತ್ತರ ನೀಡಲು ಹೊರಟ. ಇಂಪೀರಿಯಲ್ ಇನ್ಸ್ಟಿಟ್ಯೂಟ್‌ನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿ, ಮಾಜಿ ಬ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ತುಂಬಿದ ಸಭೆಯಲ್ಲಿ ಗುಂಡಿಕ್ಕಿ ಕೊಂದ. ನಂತರ ಎಂದಿನಂತೆ ನೆಪಮಾತ್ರಕ್ಕೆ ವಿಚಾರಣೆ ನಡೆಸಿದ ಬ್ರಿಟಿಷರು ಧಿಂಗ್ರಾನನ್ನು 1909ರಲ್ಲಿ ಅದೇ ದೇಶದಲ್ಲಿ ಗಲ್ಲಿಗೇರಿಸಿದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್‌ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?

ಸಾವರ್ಕರ್‌ರಿಂದ ಕಿರಿಯರಷ್ಟೆ ಅಲ್ಲ, ಹಿರಿಯರೂ ಪ್ರೇರಣೆ ಪಡೆದಿದ್ದರು, ಬೆಂಬಲವಾಗಿ ನಿಂತಿದ್ದರು. ವಿದೇಶದದಲ್ಲಿದ್ದರೂ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದ ಮೇಡಂ ಭಿಕಾಜಿ ಕ್ಯಾಮ, ಶ್ಯಾಮ್ ಜಿ ಕೃಷ್ಣವರ್ಮ, ವೀರೇಂದ್ರನಾಥ ಚಟ್ಟೋಪಾಧ್ಯಾಯ ಸೇರಿ ಅನೇಕರು ಸಾವರ್ಕರ್ ಚಟುವಟಿಕೆಗಳ ಬೆನ್ನೆಲುಬಾಗಿದ್ದರು.

ಈ ನಡುವೆ 1909ರ ಡಿಸೆಂಬರ್ 21ರಂದು ಮಹಾರಾಷ್ಟ್ರದಲ್ಲಿ ತುಂಬಿದ ಸಭಾಂಗಣದಲ್ಲಿ ಬ್ರಿಟಿಷ್ ಅಧಿಕಾರಿ ಎ.ಎಂ.ಟಿ. ಜಾಕ್ಸನ್‌ನನ್ನು 17 ವರ್ಷದ ಅನಂತ ಲಕ್ಷ್ಮಣ ಕಾನ್ಹರೆ ಗುಂಡಿಟ್ಟು ಕೊಂದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವರ್ಕರರನ್ನು ಲಂಡನ್ನಿನಲ್ಲಿ ಬಂಧಿಸಿದ ಬ್ರಿಟಿಷರು ಅವರನ್ನು ಹಡಗಿನ ಮೂಲಕ ಭಾರತಕ್ಕೆ ಕರೆತರುತ್ತಿದ್ದರು.

ಎಸ್.ಎಸ್. ಮೋರಿಯಾ ಹೆಸರಿನ ಹಡಗಿನಲ್ಲಿ ಆಗಮಿಸುತ್ತಿದ್ದ ಸಾವರ್ಕರ್, ಈ ಆರೋಪದಲ್ಲಿ ಬ್ರಿಟಿಷರು ತಮ್ಮನ್ನು ಕರೆದುಕೊಂಡು ಹೋಗಿ ಕಾರಾಗೃಹಕ್ಕೆ ತಳ್ಳುತ್ತಾರೆ. ಜೈಲಿನಲ್ಲಿದ್ದು ಸ್ವಾತಂತ್ರ್ಯ ಹೋರಾಟ ಮಾಡುವುದೆಂತು ಎಂದು ಯೋಚಿಸಿ ಪರಾರಿಯಾಗುವ ಉಪಾಯ ಹೂಡಿದರು. ಮೇಡಂ ಕ್ಯಾಮಾ ಅವರಿಗೆ ವಿಚಾರವನ್ನು ತಿಳಿಸಿದರು. ತಾಂತ್ರಿಕ ಕಾರಣಗಳಿಗಾಗಿ ಈ ಹಡಗು ಫ್ರಾನ್ಸ್‌ನ ಮಾರ್ಸೆಲೆಸ್ ಎಂಬ ಪಟ್ಟಣದಲ್ಲಿ ಕೆಲಕಾಲ ನಿಲ್ಲುತ್ತದೆ ಎಂಬ ಅರಿವು ಸಾವರ್ಕರ್ ಅವರಿಗಿತ್ತು. ಹಾಗೂ ಅದಕ್ಕಿಂತಲೂ ಹೆಚ್ಚಾಗಿ, ಫ್ರಾನ್ಸ್ ಹಾಗೂ ಬ್ರಿಟಿಷ್ ನಡುವಿನ ಅಂತರದ ವಿಚಾರ ತಿಳಿದಿತ್ತು. ಫ್ರಾನ್ಸ್ ನೆಲದಲ್ಲಿ ಬ್ರಿಟಿಷ್ ಪೊಲೀಸರ ಆಟ ನಡೆಯುವುದಿಲ್ಲವಾದ್ದರಿಂದ ತಪ್ಪಿಸಿಕೊಳ್ಳಬಹುದು ಎಂದು ಯೋಜನೆ ರೂಪಿಸಿದರು.

ಅದರಂತೆಯೇ, ಶೌಚಾಲಯದಲ್ಲಿದ್ದ ಸಣ್ಣ ಕಿಟಕಿಯ ಮೂಲಕ ಸಮುದ್ರಕ್ಕೆ ಜಿಗಿದು ಈಜಿ ದಡವನ್ನೂ ಸೇರಿದರು. ಎಲ್ಲವೂ ಯೋಜನೆಯಂತೆಯೇ ನಡೆಯುತ್ತಿತ್ತು, ಆದರೆ ಅಲ್ಲಿಂದ ಕರೆದೊಯ್ಯಲು ಮೇಡಂ ಕ್ಯಾಮಾ ಮತ್ತಿತರರು ಆಗಮಿಸುವುದು ಸ್ವಲ್ಪ ತಡವಾಯಿತು. ಈ ಸಮಯದಲ್ಲಿ ಬಂದರಿನಲ್ಲಿ ಓಡುತ್ತಿದ್ದ ಸಾವರ್ಕರರನ್ನು ಬ್ರಿಟಿಷ್ ಪೊಲೀಸರು ಹಿಂಬಾಲಿಸಿದರು. ಕಳ್ಳ ಓಡುತ್ತಿದ್ದಾನೆ, ಕಳ್ಳ ಓಡುತ್ತಿದ್ದಾನೆ ಎಂದು ಕೂಗಿದರು. ಇದನ್ನು ಕಂಡ ಮಾರ್ಸೆಲೆಸ್ ಬಂದರಿನ ಪೊಲೀಸರು ಸಾವರ್ಕರರನ್ನು ಹಿಡಿದು ಬ್ರಿಟಿಷರಿಗೊಪ್ಪಿಸಿದರು. ಅಲ್ಲಿಂದ ಮತ್ತೆ ಹಡಗಿಗೆ ಹತ್ತಿಸಿಕೊಂಡು ಭಾರತಕ್ಕೆ ಕರೆತಂದರು, ಅಲ್ಲಿಂದ ಕರಿನೀರಿನ ಶಿಕ್ಷೆಗೆ ಗುರಿಯಾದರು.

ಇದನ್ನೂ ಓದಿ | Ramakrishna Hegde Birth Day | ರಾಮಕೃಷ್ಣ ಹೆಗಡೆ ನೆನಪಿಸುವ ಹತ್ತು ಮೌಲ್ಯಗಳು

13 ಜುಲೈ 1910ರಂದು ಫ್ರೆಂಚ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ
ಸಾವರ್ಕರ್ ಫೋಟೊ ಸಹಿತ ವರದಿ.

ಆದರೆ ಈ ನಡುವೆ ಫ್ರಾನ್ಸ್‌ನಲ್ಲಿ ಕಿಡಿಯೊಂದು ಹೊತ್ತಿಕೊಂಡಿತು. ಫ್ರಾನ್ಸಿನ ಎಲ್ ಹ್ಯೂಮನೈಟ್ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದವನು ಜೀನ್ ಲಾಂಗೆಟ್. ಈತ ಕಾರ್ಲ್ ಮಾರ್ಕ್ಸ್ ಪುತ್ರಿ ಜೆನ್ನಿ ಕ್ಯಾರೊಲಿನ್ ಮಾರ್ಕ್ಸ್ ಅವರ ಪುತ್ರ. ತಾನು ಪ್ರತಿಪಾದಿಸುತ್ತಿದ್ದ ಸಿದ್ಧಾಂತ ಕಮ್ಯುನಿಸಂ, ಆದರೆ ಹಡಗಿನಲ್ಲಿ ತಪ್ಪಿಸಿಕೊಂಡ ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಿಂದುತ್ವವಾದಿ, ರಾಷ್ಟ್ರೀಯವಾದಿ. ಆದರೆ ಈ ಅಂತರಗಳು ಜೀನ್ ಲಾಂಗೆಟ್ ಹಾದಿಗೆ ಅಡ್ಡಲಾಗಲಿಲ್ಲ.

ಒಬ್ಬ ಕ್ರಾಂತಿಕಾರಿ, ಯಾವುದೇ ದೇಶದವನಾದರೂ ಕ್ರಾಂತಿಕಾರಿಯೇ. ಇದೂ ಸಾವರ್ಕರ್ ಮಾರ್ಗವೇ ಅಲ್ಲವೇ? ಅಲ್ಲೆಲ್ಲೊ ಇಟಲಿಯಲ್ಲಿ ಏಕೀಕರಣಕ್ಕೆ ಹೋರಾಡಿದ ಜೋಸೆಫ್ ಮ್ಯಾಜಿನಿಯಿಂದಲೂ ಪ್ರೇರಣೆ ಪಡೆದವರು ಸಾವರ್ಕರ್. ಜೀನ್ ಲಾಂಗೆಟ್, ಸಾವರ್ಕರ್ ಬಂಧನದ ವಿಚಾರವನ್ನು ಅಲ್ಲಿಗೇ ಬಿಡಲಿಲ್ಲ. ಸ್ವತಃ ಫ್ರಾನ್ಸ್ ಸರ್ಕಾರದ ವಿರುದ್ಧವೇ ಸಮರ ಸಾರಿದ. ಸರಣಿ ಲೇಖನಗಳನ್ನು ಪ್ರಕಟಿಸಿದ. ಫ್ರಾನ್ಸ್ ಪೊಲೀಸರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಕೂಡಲೆ ಬ್ರಿಟಿಷರಿಗೆ ಪತ್ರ ಬರೆದು, ಸಾವರ್ಕರ್ ಅವರನ್ನು ಫ್ರಾನ್ಸ್‌ಗೆ ಒಪ್ಪಿಸಲು ಸೂಚಿಸಬೇಕು. ಇದು ಫ್ರಾನ್ಸ್ ನೆಲದಲ್ಲಿ ಬ್ರಿಟಿಷರು ನಡೆಸಿರುವ ಅನಧಿಕೃತ ಚಟುವಟಿಕೆ ಎನ್ನುತ್ತ ಫ್ರೆಂಚ್ ಸರ್ಕಾರದ ನಿದ್ದೆಗೆಡಿಸಿದರು. ಸ್ವತಃ ವಕೀಲನೂ ಆಗಿದ್ದ ಲಾಂಗೆಟ್, ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೂ ಸಾವರ್ಕರ್ ಪರ ವಾದ ಮಂಡಿಸಿದ. ಲಾಂಗೆಟ್ ಪ್ರಯತ್ನಕ್ಕೆ ಎಲ್ಲ ರೀತಿಯ ನೆರವನ್ನೂ ನೀಡಿದವರು ಮತ್ತದೇ ಮೇಡಂ ಕಾಮಾ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿಲ್ಲ ಎನ್ನುವುದು ಬೇರೆಯ ಮಾತು. ಬ್ರಿಟಿಷರ ಕಾಲದ ನ್ಯಾಯವ್ಯವಸ್ಥೆ ಎಲ್ಲರಿಗೂ ತಿಳಿದೇ ಇತ್ತು. ಆದರೆ ಸಮಾಜಕ್ಕೆ ಇದರಿಂದ ನೀಡಬೇಕಾದ ಸಂದೇಶವನ್ನು ನೀಡಿಯಾಗಿತ್ತು. ವಿಶ್ವದೆಲ್ಲೆಡೆ ಬ್ರಿಟಿಷರ ಬಣ್ಣ ಬಯಲಾಗಿತ್ತು.

ಸಾವರ್ಕರ್ ಅವರು ಬರೆದ 1857ರ ಸ್ವಾತಂತ್ರ್ಯ ಸಂಗ್ರಾಮದ ಕೃತಿಯನ್ನು ಮುದ್ರಿಸಿ ಯುವಕರಿಗೆ ಹಂಚಿದವರಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಸಹ ಇದ್ದರು. 1924ರಲ್ಲಿ ಮತವಾಲಾ ಎಂಬ ಹಿಂದಿ ಪತ್ರಿಕೆಯಲ್ಲಿ ವಿಶ್ವಪ್ರೇಮ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದು ಪ್ರಕಟವಾಯಿತು. “ಇಡೀ ವಿಶ್ವವನ್ನೇ ಪ್ರೀತಿಸುವ ಅವರನ್ನು ನಾವು ಧೈರ್ಯವಂತ, ವೀರ ಎಂದು ಸಂಬೋಧಿಸಲು ಹಿಂಜರಿಯುವುದಿಲ್ಲ, ಅವರೇ ವೀರ ಸಾವರ್ಕರ್” ಎಂದು ಬರೆಯಲಾಗಿತ್ತು. ಈ ಲೇಖನದ ಲೇಖಕರ ಹೆಸರು ಬಲವಂತ ಸಿಂಗ್ ಎಂದು ಪ್ರಕಟಿಸಲಾಗಿತ್ತು. ಆದರೆ ಅಸಲಿಗೆ ಇದನ್ನು ಗುಪ್ತನಾಮದಲ್ಲಿ ಬರೆದವರು ಭಗತ್ ಸಿಂಗ್. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಗಲ್ಲಿಗೇರಿಸಿದಾಗಲೂ ನೊಂದುಕೊಂಡು ಕವಿತೆ ಬರೆದವರು ಸಾವರ್ಕರ್.

ಕಾರ್ಯಕ್ರಮವೊಂದರಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ ಜತೆಗೆ ವೀರ ಸಾವರ್ಕರ್‌.

ಹಾಂ, ಸುಭಾಷ್ ಮತ್ತು ಸಾವರ್ಕರ್ ಬಗ್ಗೆಯೂ ತಥಾಕಥಿತ ಸೆಕ್ಯೂಲರ್ ವಾದಿಗಳು ಬೇರೆಯದ್ದೇ ಆದ ಕಥೆ ಕಟ್ಟಿದ್ದಾರೆ. ಆದರೆ, ಬೆಳಕಿಗೆ ಬರುತ್ತಿರುವ ವಾಸ್ತವ ಚರಿತ್ರೆ ಏನು ಗೊತ್ತೆ? ಸ್ವತಃ ನೇತಾಜಿ ಸುಭಾಷ್ ಚಂದ್ರ ಬೋಸರಿಗೂ ಸಾವರ್ಕರ್ ಪ್ರೇರಣೆ ನೀಡಿದ್ದರು.

ಸಾವರ್ಕರರನ್ನು ಭೇಟಿ ಮಾಡಿದ ಸುಭಾಷರು ಮಾತನಾಡುತ್ತಿದ್ದಾಗ, ಬ್ರಿಟಿಷರ ವಿರುದ್ಧ ಏನು ಚಟುವಟಿಕೆ ಮಾಡುತ್ತೀರ ಎಂದು ಸಾವರ್ಕರ್ ಪ್ರಶ್ನಿಸಿದರು. ದೇಶದ ಎಲ್ಲ ನಗರಗಳಲ್ಲಿ ಬ್ರಿಟಿಷರು ತಮ್ಮ ಪ್ರತಿಮೆಗಳನ್ನು ಸ್ಥಾಪಿಸಿ ಭಾರತೀಯರ ಗುಲಾಮಗಿರಿಗೆ ಅಧಿಕೃತ ಮುದ್ರೆ ಒತ್ತುತ್ತಿದ್ದಾರೆ. ಇದೆಲ್ಲವನ್ನೂ ನೆಲಸಮ ಮಾಡುತ್ತೇನೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಾವರ್ಕರ್, ನೀವು ಹೀಗೆ ಮಾಡಿದರೆ ಬ್ರಿಟಿಷರು ಜೈಲಿಗೆ ಅಟ್ಟುತ್ತಾರೆ. ಅಲ್ಲಿಂದ ಹೊರಬರುವ ವೇಳೆಗೆ ಸಾಕಾಗಿ ಹೋಗುತ್ತದೆ. ನಿಮ್ಮ ಉದ್ದೇಶ ಈಡೇರುವುದಿಲ್ಲ ಎನ್ನುತ್ತಾರೆ. ಹಾಗಾದರೆ ಏನು ಮಾಡಲಿ ಎಂದು ಸುಭಾಷ್ ಕೇಳುತ್ತಾರೆ. ನೀವು ವಿದೇಶಕ್ಕೆ ತೆರಳಿ ಬ್ರಿಟಿಷ್ ಸರ್ಕಾರದ ವಿರುದ್ಧ ಸೈನ್ಯ ಸಂಘಟಿಸಿ ಯುದ್ಧ ಸಾರಿ. ದೇಶದ ಒಳಗಿಂದ ಹಾಗೂ ಹೊರಗಿಂದಲೂ ದಾಳಿಗಳು ನಡೆದರೆ ಬ್ರಿಟಿಷರು ಕಾಲ್ಕೀಳುತ್ತಾರೆ ಎಂಬ ಉಪಾಯ ನೀಡಿದರು. ಇದನ್ನು ಸ್ವೀಕರಿಸಿದ ಸುಭಾಷರು ನಂತರ ಐಎನ್ಎ ಸ್ಥಾಪಿಸಿದರು. ಈ ಮಾತನ್ನು ರೇಡಿಯೋ ಸಂದೇಶದ ಮೂಲಕ ಸ್ವತಃ ಸುಭಾಷರೇ ಹೇಳಿದ್ದಾರೆ!

ಅದು ಭಾರತದಲ್ಲೇ ಇರಲಿ, ದೂರದ ಫ್ರಾನ್ಸ್‌ನಲ್ಲೇ ಇರಲಿ, ವಿಶ್ವದ ವಿವಿಧೆಡೆಯ ಕ್ರಾಂತಿಕಾರಿಗಳು ಒಂದೇ. ಈ ಎಲ್ಲ ಸಮಕಾಲೀನ ಕ್ರಾಂತಿಕಾರಿಗಳ ಮನಗೆದ್ದವರು ಸಾವರ್ಕರ್. ಕ್ರಾಂತಿಕಾರಿಗಳ ರಾಜಕುಮಾರ ಸಾವರ್ಕರ್, ಅವರ ದೇಶಪ್ರೇಮಕ್ಕೆ ಸಿದ್ಧಾಂತ, ಲಿಂಗ, ಪ್ರದೇಶ, ದೇಶದ ಗಡಿಗಳ ವ್ಯತ್ಯಾಸವಿಲ್ಲ.

ಸ್ವಾತಂತ್ರ್ಯ ಪೂರ್ವದ ಕ್ರಾಂತಿಕಾರಿಗಳಲ್ಲೇ ಇಲ್ಲದ ಭಿನ್ನಾಭಿಪ್ರಾಯಗಳನ್ನು ಈಗ ಮೂಡಿಸುವ ಪ್ರಯತ್ನವನ್ನು ಕೆಲವು ಉದಾರವಾದಿಗಳು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರನ್ನು ಎತ್ತಿಕಟ್ಟುವ, ಮತ್ತೊಬ್ಬರನ್ನು ಕೀಳಾಗಿ ಕಾಣುವ ರೋಗಪೀಡಿತ ಪ್ರವೃತ್ತಿಯನ್ನು ಬಿತ್ತಲಾರಂಭಿಸಿದ್ದಾರೆ. ಆದರೆ, ಹೊಸ ಪೀಳಿಗೆ ಎಲ್ಲವನ್ನೂ ಸುಲಭವಾಗಿ ಒಪ್ಪುತ್ತಿಲ್ಲ. ನಂಬಿದ ತತ್ತ್ವ ಸಿದ್ಧಾಂತಗಳ ಮೂಗಿನ ನೇರಕ್ಕೆ ಬರೆದಿರುವ ಇತಿಹಾಸದ ನೈಜತೆಯನ್ನು ಒರೆಗಲ್ಲಿಗೆ ಹಚ್ಚುತ್ತಿದ್ದಾರೆ. ಹಾಗಾಗಿಯೇ ಸತ್ಯ ಹೊರಬರಲಾರಂಭಿಸಿದೆ!

ಹಾಗೆ ನೋಡಿದರೆ, ಭಾರತದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ ಕ್ರಾಂತಿಕಾರಿಗಳು ಹಾಗೂ ಮಂದಗಾಮಿಗಳ ಉದ್ದೇಶ ಮತ್ತು ಗುರಿ ಒಂದೇ ಆಗಿತ್ತು. ಇದನ್ನು ಪಡೆಯಲು ಎರಡೂ ಗುಂಪುಗಳು ಸವೆಸಿದ ಮಾರ್ಗ ಬೇರೆ ಬೇರೆಯದೇ ಆಗಿತ್ತು. ಆದರೆ, ಈ ಎರಡೂ ಗುಂಪುಗಳ ಪರಸ್ಪರರ ನಡುವಿನ ಗೌರವ ಕಡಿಮೆಯಾಗಿರಲಿಲ್ಲ. ಹಾಗಾಗಿ, ಆ ಎರಡೂ ಗುಂಪುಗಳನ್ನು ಗೌರವಿಸುತ್ತಲೇ, ಸ್ವಾತಂತ್ರ್ಯದ ಪೂರ್ವಸೂರಿಗಳನ್ನು ನಾವು ನೆನೆಯಬೇಕಿದೆ.

(ಗ್ರಂಥ ಋಣ: ಆತ್ಮಾಹುತಿ- ಶಿವರಾಮು, 1857ರ ನಿಂದಕರು- ನೀ.ರ. ವರ್ಹಾಡಪಾಂಡೆ, ಸಾವರ್ಕರ್ ಬಂಧನ ಫ್ರಾನ್ಸ್ ಸ್ಪಂದನ: (ಫ್ರೆಂಚ್) ಜೀನ್ ಲಾಂಗೆಟ್)

Exit mobile version