ಈ ಬಾರಿ ಬೆಳಗಾವಿ ಅಧಿವೇಶನಕ್ಕೆ ಮೂರೂ ಪಕ್ಷಗಳಿಂದ ತಯಾರಿ ಜೋರಾಗಿ ಶುರುವಾಗಿದೆ. ಯಾಕೆಂದರೆ ಬಿಜೆಪಿಯಲ್ಲಿ ಆರು ತಿಂಗಳಿಂದ ಖಾಲಿ ಇದ್ದ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ (BY Vijayendra) ಮತ್ತು ವಿಪಕ್ಷ ನಾಯಕನ ಹುದ್ದೆಗೆ ಆರ್ ಆಶೋಕ್ (R Ashok) ಅವರನ್ನು ಕೂರಿಸಿರುವುದರಿಂದ ಸದನದ ಒಳಗೆ ಮತ್ತು ಹೊರಗೆ ಕೈ ಸರ್ಕಾರದ ವಿರುದ್ಧ ಕಹಳೆ ಊದಲು ಬಿಜೆಪಿ ನಿರ್ಧಾರ ಮಾಡಿದೆ. ಇತ್ತ ಕುಮಾರಸ್ವಾಮಿ ಜೆಡಿಎಸ್ ಶಾಸಕರ ಸಪೋರ್ಟ್ ಇಲ್ಲದಿದ್ದರೂ ಸರ್ಕಾರದ ವಿರುದ್ಧ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಮಗನ ಮೇಲೆ ಕೇಳಿ ಬಂದಿರುವ ವರ್ಗಾವಣೆ ದಂಧೆ ಪ್ರಕರಣವನ್ನು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿವೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಸರ್ಕಾರ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ ಎಂಬುದಕ್ಕೆ ಒಂದಷ್ಟು ದಾಖಲೆ ಸಮೇತ ಪ್ರದರ್ಶನ ಮಾಡಲು ಪ್ರತಿಪಕ್ಷ ನಾಯಕರು ಮುಂದಾಗಿದ್ದಾರೆ. ರಾಜ್ಯದಲ್ಲಿ ಸಿಕ್ಕಿಬಿದ್ದ ಕೋಟಿ ಕೋಟಿ ಕಮಿಷನ್ ಹಣಕ್ಕೆ ಪೋಷಕರು ಕಾಂಗ್ರೆಸಿನವರು, ಕಾವೇರಿಯಲ್ಲಿ ಹಿನ್ನಡೆ, ಬರ ನಿರ್ವಹಣೆಯಲ್ಲಿ ವೈಫಲ್ಯಗಳನ್ನ ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ಲ್ಯಾನ್ ವಿಪಕ್ಷ ನಾಯಕರದಾಗಿದೆ.
ರಾಜ್ಯ ಬಿಜೆಪಿಗೆ ಶುಭ ಸುದ್ದಿ ತಂದ ನವೆಂಬರ್
ಆರು ತಿಂಗಳಿಂದಲೂ ಗೊಂದಲದಲ್ಲಿದ್ದ ಬಿಜೆಪಿ ಹೈಕಮಾಂಡ್ ಕೊನೆಗೂ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಯಾರಾಗಬೇಕು, ಯಾರಾದರೆ ಎಷ್ಟು ಲಾಭ ಅಂತ ಲೆಕ್ಕಾಚಾರ ಹಾಕಿಕೊಂಡು ಹುದ್ದೆ ಭರ್ತಿ ಮಾಡಿದ್ದಾರೆ. ರಾಷ್ಟ್ರೀಯ ನಾಯಕರ ಏಕಮಾತ್ರ ಗುರಿ 2024ರ ಲೋಕಸಭೆ ಚುನಾವಣೆ. ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವುದು ಬಿಜೆಪಿಯ ಗುರಿಯಾಗಿದೆ.
2023ರ ತಪ್ಪು ತಿದ್ದಿಕೊಂಡ ವರಿಷ್ಠರು
ಬಿಜೆಪಿ ರಾಷ್ಟ್ರೀಯ ನಾಯಕರು ಇಡೀ ವ್ಯವಸ್ಥೆ ತಾವು ಹೇಳಿದಂತೆ ನಡೆಯುತ್ತದೆ ಎನ್ನುವ ಭ್ರಮೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜಾತಿ ಸಮೀಕರಣ ಮಣೆ ಹಾಕದೆ, ಹಿರಿಯರಿಗೆ ಅವಕಾಶ ಕೊಡದೆ ಹೊಸ ಪ್ರಯೋಗ ಮಾಡಿದರು. ಆದರೆ ಹೊಸ ಪ್ರಯೋಗದಿಂದ ಉತ್ತಮ ಫಲಿತಾಂಶ ಬರಲಿಲ್ಲ. ಹೀಗಾಗಿ ಮತ್ತೆ ಯಡಿಯೂರಪ್ಪ ಅನಿವಾರ್ಯವಾದರು. ಯಡಿಯೂರಪ್ಪ ಮೆಚ್ಚಿನ ಶಿಷ್ಯ ಈಗ ವಿಪಕ್ಷ ನಾಯಕನ ಸ್ಥಾನದಲ್ಲಿ ಕೂತಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಕುಮಾರಸ್ವಾಮಿ, ಆಶೋಕ್ ಫಾರ್ಮುಲಾ ವರ್ಕೌಟ್ ಆದ್ರೆ ಕನಿಷ್ಠ 25 ಸ್ಥಾನ ನಮ್ಮದೇ ಅನ್ನೋದು ವರಿಷ್ಠರ ಲೆಕ್ಕಾಚಾರ. ಅಂತಿಮವಾಗಿ ಯಡಿಯೂರಪ್ಪ ಅವರ ಕೈ ಮೇಲಾಗಿದೆ.
ಆಶೋಕ್ ವಿಪಕ್ಷ ನಾಯಕರಾಗಿದ್ದರಿಂದ ಕಾಂಗ್ರೆಸ್‌ಗೆ ಖುಷಿ!
ಆರ್ ಆಶೋಕ್ ವಿಪಕ್ಷ ನಾಯಕ ಅಂತ ಘೋಷಣೆ ಆದ ಬೆನ್ನಲ್ಲೇ ಸಿದ್ದರಾಮಯ್ಯ ಟೀಮ್ ಭಾರಿ ಖುಷಿ ಪಟ್ಟಿದೆ! ಅಧಿವೇಶನದಲ್ಲಿ ವಿಪಕ್ಷ ನಾಯಕ ಒಂದು ರೀತಿ ಶ್ಯಾಡೋ ಸಿಎಂ ಇದ್ದಂತೆ. ಅದನ್ನ ನಿಭಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ವಿಪಕ್ಷ ನಾಯಕ ಮನಸ್ಸು ಮಾಡಿದ್ರೆ ಸರ್ಕಾರವನ್ನು ನಡಗಿಸಬಹುದು. ಆದರೆ ಆ ಸಾಮರ್ಥ್ಯ ಆರ್ ಆಶೋಕ್ ಅವರಲ್ಲಿ ಇಲ್ಲ ಅನ್ನೋದು ಕಾಂಗ್ರೆಸ್ ನಾಯಕರ, ಅದ್ರಲ್ಲೂ ಸಿದ್ದರಾಮಯ್ಯ ಟೀಮ್ ಲೆಕ್ಕಾಚಾರ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಕಾಂಗ್ರೆಸ್‌ಗೆ ʼಬಿಟ್ಟಿ ಹೇಳಿಕೆʼ ಭಾಗ್ಯ! ಬಿಜೆಪಿಗೆ ಪ್ರತಿಪಕ್ಷ ನಾಯಕ ಸಿಗದ ದೌರ್ಭಾಗ್ಯ!
ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನದ ಟೆನ್ಶನ್
ಈ ಬಾರಿ ಬೆಳಗಾವಿ ಅಧಿವೇಶನವನ್ನು ವಿಪಕ್ಷಗಳು ಸಮರ್ಥವಾಗಿ ಸರ್ಕಾರದ ವಿರುದ್ಧ ಬಳಸಿಕೊಳ್ಳಲು ಮುಂದಾಗಿವೆ. ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಕಮಿಷನ್ ಆರೋಪದ ಮೂಲಕವೇ ಉತ್ತರ ಕೊಡಲು ನಿರ್ಧಾರ ಮಾಡಿವೆ. ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಹಣ ಯಾರದ್ದು, ತೆಲಂಗಾಣಕ್ಕೆ ದುಡ್ಡು ಕಳುಹಿಸಲು ಸಂಗ್ರಹಿಸಿದ್ದು, ವರ್ಗಾವಣೆಯಲ್ಲಿ ಯತೀಂದ್ರ ಪಾತ್ರ, ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ, ಬರ ನಿರ್ವಹಣೆಯಲ್ಲಿ ವೈಫಲ್ಯ ಇತ್ಯಾದಿ ಸಂಗತಿಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಲು ಮುಂದಾಗಿವೆ. ವಿಪಕ್ಷಗಳು ಬಳಸುವ ಅಸ್ತ್ರಗಳ ಪಟ್ಟಿ ದೊಡ್ಡದಿರುವುದರಿಂದ ಸಿದ್ದರಾಮಯ್ಯ ಅವರನ್ನು ಈ ಅಧಿವೇಶನ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ