Site icon Vistara News

ಅಂಕಣ: ದತ್ತಾತ್ರೇಯನ ಅವತಾರ, ಧರ್ಮರಕ್ಷಣೆಯ ನೇತಾರ, ದಮನಿತರ ಆಧಾರ ಶ್ರೀಧರ ಸ್ವಾಮೀಜಿ

Sri Sridhara Swamiji

Sri Sridhara Swamiji; an incarnation of Dattatreya, Protector Hinduism

| ಜಿ ಟಿ ಶ್ರೀಧರ ಶರ್ಮಾ

ಬೆಂಗಳೂರು: ಸಂತರು, ದಾರ್ಶನಿಕರು, ಸಮಾಜ ಸುಧಾರಕರು, ಸನ್ಯಾಸಿಗಳು, ಪವಾಡ ಪುರುಷರು ಹೇಗಿದ್ದರು? ಅವರು ಕುಳಿತಲ್ಲಿಗೇ ಜನರನ್ನು, ಭಕ್ತರನ್ನು, ಅನುಯಾಯಿಗಳನ್ನು ಕರೆಸಿಕೊಂಡು, ಸಮಾಜದಲ್ಲಿ, ಜನರಲ್ಲಿ ಬದಲಾವಣೆ ತರುತ್ತಿದ್ದರು. ಇಲ್ಲದಿದ್ದರೆ, ಅವರ ಲೋಕ ಸಂಚಾರ ಮಾಡಿ ಸಮಾಜವನ್ನು ಸರಿದಾರಿಗೆ ತರುತ್ತಿದ್ದರು. ಆದರೆ, ದತ್ತಾತ್ರೇಯನ ಅವತಾರ ಎಂದೇ ಖ್ಯಾತಿಯಾಗಿರುವ, ವರದಹಳ್ಳಿ ಆಶ್ರಮದ ಶ್ರೀ ಶ್ರೀಧರ ಸ್ವಾಮೀಜಿ ಅವರು ತಾವು ಕುಳಿತಲ್ಲಿಗೇ ಜನರು ಬರುವಂತೆ ಮಾಡಿ, ತಾವು ಕೂಡ ಜನರ ಬಳಿಗೆ ತೆರಳಿ, ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಇದರ ಜತೆಗೆ ದಮನಿತರಿಗೆ ಧ್ವನಿಯಾಗಿ, ಧರ್ಮ ರಕ್ಷಕರಾಗಿ, ಸಮಾಜ ಸುಧಾರಕರಾಗಿ ಭಗವಾನ್‌ ಶ್ರೀಧರ ಸ್ವಾಮಿಯವರ ಕೊಡುಗೆ ಅನೂಹ್ಯವಾಗಿದೆ. ಹಾಗಾಗಿ, ದತ್ತ ಜಯಂತಿಯಂದೇ ಜನಿಸಿ, ದತ್ತಾತ್ರೇಯನ ಅವತಾರ ಎಂದೇ ಖ್ಯಾತಿಯಾದ ಶ್ರೀಧರ ಸ್ವಾಮೀಜಿಯವರ ಕೊಡುಗೆಯನ್ನು, ಸಲ್ಲಿಸಿದ ಸೇವೆಯನ್ನು ದತ್ತ ಜಯಂತಿಯಂದು ಸ್ಮರಿಸುವುದು ಅತ್ಯವಶ್ಯಕವಾಗಿದೆ.

ಕಲಬುರಗಿಯಲ್ಲಿ ಜನನ, ಸನ್ಯಾಸತ್ವದತ್ತ ಮನ

ಶ್ರೀ ಶ್ರೀಧರ ಸ್ವಾಮೀಜಿಯವರು ಕಲಬುರಗಿ ಜಿಲ್ಲೆಯ ಲಾಡ್‌ ಚಿಂಚೋಳಿ ಗ್ರಾಮದಲ್ಲಿ 1908ರ ಡಿಸೆಂಬರ್‌ 7ರಂದು ಜನಿಸಿದರು. ಇವರ ತಂದೆ ನಾರಾಯಣರಾವ್‌ ಹಾಗೂ ತಾಯಿ ಕಮಲಾಬಾಯಿ. ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಶ್ರೀಧರ ಅವರ ಪ್ರಾಥಮಿಕ ಶಿಕ್ಷಣವು ಹೈದರಾಬಾದ್‌ನಲ್ಲಿ ಲಭಿಸಿತು. ತಾಯಿಯ ಅಗಲಿಕೆಯಿಂದಾಗಿ ಕಲಬುರಗಿಯಲ್ಲಿರುವ ಚಿಕ್ಕಮ್ಮನ ಮನೆಗೆ ಬಂದ ಶ್ರೀಧರ, ಅಲ್ಲೊಂದಿಷ್ಟು ಕಾಲ ಇದ್ದು, ಉನ್ನತ ಶಿಕ್ಷಣಕ್ಕಾಗಿ ಪುಣೆಯತ್ತ ತೆರಳಿದರು. ಆದರೆ, ಸಣ್ಣ ವಯಸ್ಸಿನಲ್ಲಿಯೇ ಶ್ರೀಧರ ಅವರ ಮನಸ್ಸು ತಪ್ಪಸ್ಸಿನತ್ತ, ಸನ್ಯಾಸತ್ವದತ್ತ ವಾಲಿತು. ಹಿರಿಯರೊಬ್ಬರು ನೀಡಿದ ಸಲಹೆಯಂತೆ 1927ರ ವಿಜಯದಶಮಿ ದಿನದಂದು ಸಮರ್ಥ ರಾಮದಾಸರ ಕ್ಷೇತ್ರವಾದ ಸಜ್ಜನಗಢಕ್ಕೆ ಶ್ರೀಧರ ಅವರು ತೆರಳಿದರು. ಅಲ್ಲಿಂದ ಅವರ ಜೀವನವು ಸಮಾಜಕ್ಕೇ ಮುಡಿಪಾಯಿತು, ಅವರ ಜೀವನದ ಪಯಣವು ಸನ್ಯಾಸತ್ವದ ದಾರಿ ಹಿಡಿಯಿತು ಎಂಬುದು ಗಮನಾರ್ಹ.

ಸಜ್ಜನಗಢದಲ್ಲಿ ಶ್ರೀಧರ ಅವರ ಬದುಕು ಸಂಪೂರ್ಣವಾಗಿ ಬದಲಾಯಿತು. ಸಜ್ಜನಗಢದ ದೇವಾಲಯವನ್ನು ಸ್ವಚ್ಛಗೊಳಿಸುವುದು, ಜನರ ಸೇವೆ ಮಾಡುವುದು, ದೇಗುಲದಲ್ಲಿ ಕುಳಿತು ತಪಸ್ಸು ಮಾಡುವುದು ನಿತ್ಯ ಕಾಯಕವಾಯಿತು. ಶ್ರೀರಾಮನ ಆರಾಧನೆ, ಸಮರ್ಥ ರಾಮದಾಸರ ಸಮಾಧಿ ಬಳಿ ತಪಸ್ಸು, ದೇಗುಲಕ್ಕೆ ಬರುವ ವೃದ್ಧರ ಸೇವೆ, ಕಠಿಣವಾದ ತಪಸ್ಸು ಹಾಗೂ ಧ್ಯಾನದಿಂದಾಗಿ ಶ್ರೀ ಶ್ರೀಧರ ಸ್ವಾಮಿ ಅವರು ಸಜ್ಜನಗಢದ ತುಂಬ ಖ್ಯಾತಿ ಗಳಿಸಿದರು. ಇವರ ಜ್ಞಾನವನ್ನು ಕಂಡು ಹಿರಿಯರು ಕೂಡ ನಿಬ್ಬೆರಗಾಗುತ್ತಿದ್ದರು. ಹಾಗಾಗಿಯೇ, ಅವರನ್ನು ಭಗವಾನ್‌ ಶ್ರೀಧರ ಎಂದು ಜನ ಕರೆಯಲಾರಂಭಿಸಿದರು.

ದಕ್ಷಿಣದತ್ತ ಪಯಣ, ಕರ್ನಾಟಕಕ್ಕೆ ಆಗಮನ

ಕನ್ನಡ, ಮರಾಠಿ, ಹಿಂದಿ ಸೇರಿ ಹಲವು ಭಾಷೆಗಳನ್ನು ಬಲ್ಲವರಾಗಿದ್ದ ಶ್ರೀ ಶ್ರೀಧರ ಸ್ವಾಮೀಜಿಯವರು ಸಜ್ಜನಗಢದಿಂದ ದಕ್ಷಿಣ ಭಾರತದತ್ತ ಮುಖ ಮಾಡಿದರು. ಜ್ಞಾನದ ಬೆಳಕನ್ನು ದಕ್ಷಿಣ ಭಾರತದಲ್ಲೂ ಪಸರಿಸುವ ದಿಸೆಯಲ್ಲಿ ಹೊರಟ ಅವರು ಕರ್ನಾಟಕದ ಶೀಗೆಹಳ್ಳಿಗೆ ಆಗಮಿಸಿದ್ದು ವಿಶೇಷ. ಶೀಗೆಹಳ್ಳಿಯಲ್ಲಿ ಮಹಾನ್‌ ಯೋಗಪಟು, ಸಂತ ಸ್ವಾಮಿ ಶಿವಾನಂದರನ್ನು ಭೇಟಿಯಾದ ಶ್ರೀಧರ ಸ್ವಾಮೀಜಿ ಅವರು ಆಶ್ರಮದಲ್ಲಿಯೇ ಉಳಿದರು. ಸ್ವಾಮಿ ಶಿವಾನಂದರ ಮಾರ್ಗದರ್ಶನದಲ್ಲಿ ಶ್ರೀ ಶ್ರೀಧರ ಸ್ವಾಮೀಜಿ ಅವರು ಯೋಗ ಕಲಿತರು. ಸ್ವಾಮಿ ಶಿವಾನಂದ ಅವರು ಶ್ರೀಧರ ಸ್ವಾಮಿ ಅವರನ್ನು ತಮ್ಮ ಮುಖ್ಯ ಶಿಷ್ಯ ಎಂಬುದಾಗಿ ಘೋಷಿಸುವ ಇಚ್ಛೆ ಹೊಂದಿದ್ದರು. ಅಲ್ಲದೆ, ಆಶ್ರಮದ ಉಸ್ತುವಾರಿ ಮಾಡಬೇಕು ಎಂಬ ಬಯಕೆಯೂ ಇತ್ತು. ಆದರೆ, ಯಾವುದೇ ಆಶ್ರಮದ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಶ್ರೀಧರ ಸ್ವಾಮೀಜಿ ಅವರು ಶಪಥ ಮಾಡಿದ್ದ ಕಾರಣ ಶೀಗೆಹಳ್ಳಿ ಆಶ್ರಮದಿಂದ ಶ್ರೀಧರ ಸ್ವಾಮೀಜಿ ಹೊರಟರು.

ವರದಹಳ್ಳಿಯಲ್ಲಿ ಆಶ್ರಮ ಸ್ಥಾಪನೆ

ದಕ್ಷಿಣ ಭಾರತದಲ್ಲಿ ಸುಮಾರು 12 ವರ್ಷಗಳ ಕಾಲ ಸಂಚರಿಸಿ ಜನರ ಸೇವೆ ಮಾಡಿದ, ಧರ್ಮದ ತಿಳಿವಳಿಕೆ ಮೂಡಿಸಿದ ಶ್ರೀಧರ ಸ್ವಾಮೀಜಿಯವರು 1954ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಿದರು. ವರದಹಳ್ಳಿಯ ಬೆಟ್ಟದ ಮೇಲೆ ನಿಂತ ಅವರು ತಮ್ಮ ತಪಸ್ಸಿನ ಶಕ್ತಿಯಿಂದ ನೀರು ಉದ್ಭವಿಸಿದರು. ವರದಹಳ್ಳಿ ಪ್ರವೇಶದಲ್ಲಿ ಈಗಲೂ ಗೋವಿನ ಬಾಯಿಂದ ನೀರು ಬೀಳುತ್ತದೆ. ಇದು ಅತ್ಯಂತ ಪವಿತ್ರವಾಗಿದ್ದು ಆಶ್ರಮಕ್ಕೆ ಹೋಗುವವರು ಈ ನೀರಿನಲ್ಲಿ ಸ್ನಾನ ಮಾಡಿ ಹೋಗುತ್ತಾರೆ. ಇಲ್ಲಿಂದ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋದರೆ ಶ್ರೀಧರ ಆಶ್ರಮ ಸಿಗುತ್ತದೆ. ಅಲ್ಲಿ ಶ್ರೀಧರರು ಕುಳಿತು ತಪಸ್ಸು ಮಾಡಿದ್ದರು ಎಂಬ ನಂಬಿಕೆಯಿದೆ. ಪ್ರತಿದಿನ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ಇಲ್ಲಿದೆ ಏಕಾಂತ ಗುಹೆ ಕೂಡಾ ಇದೆ. ಇಲ್ಲಿಂದ ಬೆಟ್ಟವನ್ನು ದಾಟಿ ಮೇಲೆ ಸ್ವಲ್ಪ ದೂರ ಹೋದರೆ ಅಲ್ಲಿ ಶ್ರೀಧರ ಸ್ವಾಮಿಗಳು ಐಕ್ಯರಾದ ಗುಹೆ ಇದೆ. ಸಾಗರ, ಹೊಸ ನಗರ, ಸೊರಬ, ಶಿರಸಿ, ಕೊಡಚಾದ್ರಿ ಸೇರಿ ಹಲವೆಡೆ ಸಂಚರಿಸಿದ ಶ್ರೀಧರ ಸ್ವಾಮಿಗಳು ಜನರಿಗೆ ಧರ್ಮದ ಜಾಗೃತಿ ಮೂಡಿಸಿದರು. ಸುಮಾರು 20 ಗ್ರಂಥಗಳ ಮೂಲಕ ಜನರ ಮೌಢ್ಯವನ್ನು ಕಳೆದರು.

ವರದಹಳ್ಳಿಯಲ್ಲಿ ಇವರು ಸ್ಥಾಪಿಸಿದ ಆಶ್ರಮವು ಸಾವಿರಾರು ಜನರಿಗೆ ಆಶ್ರಯವಾಯಿತು. ಶಿಷ್ಯೋತ್ತಮರಿಗೆ ಸ್ವಾಮೀಜಿಯವರು ಸನ್ಮಾರ್ಗ ತೋರಿದರು. ಭಿಕ್ಷುಕರು, ಅನಾಥರು, ವೃದ್ಧರು, ದಮನೀತರು, ಅನಾರೋಗ್ಯದಿಂದ ಬಳಲುತ್ತಿದ್ದವರು ಆಶ್ರಮದಲ್ಲಿ ಆಶ್ರಯ ಪಡೆದರು. ಧಾರ್ಮಿಕ ಕಾರ್ಯಕ್ರಮಗಳು, ದತ್ತಾತ್ರೇಯ ಅವರ ಆರಾಧನೆಗಳು ಹೆಚ್ಚಾದವು. ಇಡೀ ಕ್ಷೇತ್ರವು ಪುಣ್ಯಕ್ಷೇತ್ರವಾಗಿ ಪರಿವರ್ತನೆಯಾಯಿತು. ಇಷ್ಟೆಲ್ಲ ಸಾಧನೆಗೈದ ಅವರು ಉತ್ತರ ಭಾರತದತ್ತ ಯಾತ್ರೆ ಹೊರಟರು. ಕಾಶಿ, ಉಜ್ಜಯಿನಿ, ಹಿಮಾಲಯದಲ್ಲಿ ತಪಸ್ಸು ಮಾಡಿದ ಅವರು 1967ರಲ್ಲಿ ವರದಹಳ್ಳಿ ಆಶ್ರಮಕ್ಕೆ ಆಗಮಿಸಿದ ಅವರು ಆರು ವರ್ಷ ಸತತವಾಗಿ ಏಕಾಂತ ವ್ರತ ಕೈಗೊಂಡರು. ಕೊನೆಗೆ ಅವರು 1973ರ ಏಪ್ರಿಲ್‌ 19ರಂದು ಇಹಲೋಕ ತ್ಯಜಿಸಿದರು. ಅವರ ಶಿಷ್ಯಂದಿರು ಇಂದಿಗೂ ವರದಹಳ್ಳಿಯ ಆಶ್ರಮದಲ್ಲಿ ಸೇವೆ ಮಾಡುತ್ತಿರುವುದು ಶ್ರೀಧರ ಸ್ವಾಮೀಜಿಯವರ ಸಾಧನೆ, ಹಾಕಿದ ಸೇವಾ ಮಾರ್ಗದ ಚಿರಂತನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Datta Jayanti : ದತ್ತಪೀಠದ ಅರ್ಚಕರು, ಮುಜಾವರ್‌ ಸಹಿತ ಐವರಿಗೆ ಗನ್‌ ಮ್ಯಾನ್‌ ಸೆಕ್ಯುರಿಟಿ

ಸ್ವಾಮೀಜಿಯವರು ಮಾದರಿಯಾಗುವುದು ಇದೇ ಕಾರಣಕ್ಕೆ…

ಹಣ, ಜಾತಿ, ರಾಜಕೀಯವು ಮಠಗಳನ್ನೂ ಪ್ರವೇಶಿಸಿರುವ ಕಾಲಘಟ್ಟದಲ್ಲಿ ಶ್ರೀ ಶ್ರೀಧರ ಸ್ವಾಮೀಜಿಯವರು ವಿಭಿನ್ನವಾಗಿ ನಿಲ್ಲುತ್ತಾರೆ. ‘ನಾನು ಕೊನೆಯ ಉಸಿರಿನವರೆಗೂ ಬ್ರಹ್ಮಚಾರಿಯಾಗಿ ಇರುತ್ತೇನೆ’ ಎಂದು ಶಪಥ ಮಾಡಿದ ಅವರು, ಕೊನೆಯವರೆಗೆ ಬ್ರಹ್ಮಚರ್ಯ ಪಾಲಿಸಿದರು. ಇನ್ನು ಎಂದಿಗೂ ಹಣವನ್ನು ಮುಟ್ಟುವುದಿಲ್ಲ ಎಂದವರು ಹಾಗೆಯೇ ನಡೆದುಕೊಂಡರು. ಕೊನೆಯವರೆಗೆ ಅವರು ಎಲ್ಲಿಯೂ ಮುಖ್ಯ ಅರ್ಚರಾಗಲಿಲ್ಲ. ಕನಿಷ್ಠ ಅವಶ್ಯಕತೆಗಳೊಂದಿಗೆ ಸರಳ ಜೀವನ ಸಾಗಿಸಿದ ಅವರು ಎಂದಿಗೂ ಗಂಡು-ಹೆಣ್ಣೆಂಬ ಭೇದ ತೋರಲಿಲ್ಲ. ಎಲ್ಲ ವರ್ಗದವರು, ಅದರಲ್ಲೂ ದಮನಿತರ ಪರವಾಗಿ ಜೀವನವನ್ನೇ ಮುಡಿಪಾಗಿಟ್ಟ ಶ್ರೀಧರ ಸ್ವಾಮೀಜಿಯವರು ಎಲ್ಲ ಕಾಲಕ್ಕೂ, ಎಲ್ಲರಿಗೂ ಸ್ಫೂರ್ತಿದಾಯಕ ಎನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version