ದೇಶದ ಒಳಗಾಗಲೀ ಹೊರಗಾಗಲೀ ರಾಷ್ಟ್ರದ ಗೌರವದೊಂದಿಗೆ ಯಾರಾದರೂ ಆಟವಾಡುವುದನ್ನು ಒಪ್ಪಿಕೊಳ್ಳಲು ಮತ್ತು ಸಹಿಸಲು ಸಾಧ್ಯವಿಲ್ಲ. ʼʼನೀವು ಆಸಿಡ್ ಮತ್ತು ದ್ವೇಷದಿಂದ ಪ್ರೀತಿಯ ಕಾವ್ಯವನ್ನು ಬರೆಯಲು ಸಾಧ್ಯವಿಲ್ಲ. ಅಥವಾ ದುಷ್ಟರನ್ನು ಕಾವ್ಯದಿಂದ ಮೌನಗೊಳಿಸಲು ಸಾಧ್ಯವಿಲ್ಲ. ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿ ಮತ್ತು ಕೆಟ್ಟವರಿಗೆ ಕೆಟ್ಟದ್ದನ್ನು ಮಾಡಿʼʼ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಜನ ಬ್ರಿಟಿಷರ ದಬ್ಬಾಳಿಕೆಗೂ ಹೆದರದೆ ಲಂಡನ್‌ಗೆ ಹೋಗುತ್ತಿದ್ದರು. ಇಂದು ಲಂಡನ್‌ನಲ್ಲಿದ್ದುಕೊಂಡು ಭಾರತದ ವಿರುದ್ಧ ದನಿ ಎತ್ತುವವರ ಬಗ್ಗೆ ಮೃದು ಧೋರಣೆ ತಾಳುವ ಬ್ರಿಟೀಷ್ ಭಕ್ತರಿದ್ದಾರೆ ಎನ್ನುವುದೇ ವಿಸ್ಮಯ!
ಲಂಡನ್‌ನಲ್ಲಿ ನಡೆದ ಭಾರತ ವಿರೋಧಿ ಕೃತ್ಯಗಳ ಬಗ್ಗೆ, ಅದಕ್ಕೆ ಒದಗಿಬರುತ್ತಿರುವ ವಿದೇಶಿ ಹಣದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಇರುವ ನಕಲಿ ರೈತ ಮುಖಂಡರ ಬಾಯಿಂದ ಒಂದೇ ಒಂದು ಮಾತು ಹೊರಬರಲಾರದು.
ಕೆಲ ತಿಂಗಳುಗಳಿಂದ ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳಲ್ಲಿ ಭಾರತೀಯರ ವಿರುದ್ಧ ದಾಳಿಯ ಸುದ್ದಿಗಳು ನಿರಂತರವಾಗಿ ಬರುತ್ತಿವೆ. ಲಂಡನ್‌ನಲ್ಲಿರುವ ನಮ್ಮ ಹೈಕಮಿಷನ್ ಮೇಲೆ ದಾಳಿ ನಡೆಸಲಾಯಿತು ಮತ್ತು ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಲಾಯಿತು. ಅಲ್ಲಿ ನಮ್ಮ ಹೈಕಮಿಷನ್‌ಗೆ ಬ್ರಿಟಿಷ್ ಸರ್ಕಾರ ಸೂಕ್ತ ಭದ್ರತೆಯನ್ನೂ ನೀಡಿರಲಿಲ್ಲ. ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನರ್ ನಿವಾಸದಿಂದ ಭಾರತವು ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿದಾಗ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಭದ್ರತೆ ಕಾಣಿಸಿಕೊಂಡಿತು. ಆದರೆ ಅದು ಕೇವಲ ಪ್ರದರ್ಶನವಾಗಿತ್ತು. ಇಲ್ಲಿಯವರೆಗೆ ಬ್ರಿಟಿಷ್ ಸರ್ಕಾರವು ಹೈಕಮಿಷನ್ ಮೇಲೆ ದಾಳಿ ಮಾಡಿದ ತನ್ನ ನಾಗರಿಕರನ್ನು ಬಂಧಿಸಿಲ್ಲ. ಗೃಹ ಸಚಿವ ಅಮಿತ್ ಶಾ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ದಾಳಿಕೋರರು ಮತ್ತು ಪಂಜಾಬ್‌ನಲ್ಲಿ ಕುಳಿತಿರುವ ಅವರ ಸಂಬಂಧಿಕರ ಗುರುತನ್ನು ತನಿಖೆ ಮಾಡುವಂತೆ ಪಂಜಾಬ್ ಪೊಲೀಸರಿಗೆ ಆದೇಶಿಸಿದ್ದಾರೆ. ಈ ದೇಶದ್ರೋಹಿಗಳು ಭಾರತಕ್ಕೆ ಬರುವ ಎಲ್ಲಾ ಮಾರ್ಗಗಳು ಮುಚ್ಚಿಹೋಗಬಹುದು.
ಭಾರತ ವಿರೋಧಿ ಜಿಹಾದಿಗಳು, ಖಲಿಸ್ತಾನಿಗಳು ಮತ್ತು ಪಾಕಿಸ್ತಾನದ ನೆರವು ಪಡೆದ ಕಾಶ್ಮೀರಿ ಮುಸ್ಲಿಮರಿಗೆ ಬ್ರಿಟನ್ ಆಶ್ರಯವಾಗಿದೆ. ಅವರು ಪ್ರತಿದಿನ ಭಾರತದ ವಿರುದ್ಧ ವಿಷ ಉಗುಳುತ್ತಾರೆ ಮತ್ತು ಭಾರತದ ಪರ ಸಮಾವೇಶಗಳಲ್ಲಿ ಭಾಗವಹಿಸುತ್ತಾರೆ. ಕೆನಡಾದಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿ ಮಾಜಿ ರಕ್ಷಣಾ ಸಚಿವರನ್ನು ಖಲಿಸ್ತಾನ್ ಪರ ಎಂದು ಘೋಷಿಸಲಾಯಿತು. ಅಲ್ಲಿ ಹಿಂದೂಗಳು, ಹಿಂದೂ ದೇವಾಲಯಗಳು ಮತ್ತು ಭಾರತದ ಹೈಕಮಿಷನ್ ವಿರುದ್ಧ ಇನ್ನೂ ಅನೇಕ ದಾಳಿಗಳು ಮತ್ತು ಪ್ರದರ್ಶನಗಳು ನಡೆದಿವೆ. ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯ ಘಟನೆಗಳೂ ಆಘಾತಕಾರಿ.
ಈ ಘಟನೆಗಳಲ್ಲಿ ದಾಳಿ ಮಾಡಿದ ಪೇಟಾಧಾರಿಗಳು ಸಿಖ್ಖರೆಂದು ಬಿಂಬಿಸಲ್ಪಡುತ್ತಿದ್ದಾರೆ. ವಾಸ್ತವವಾಗಿ, ಅವರಿಗೆ ಸಿಖ್ ಪಂಥ್‌ದೊಂದಿಗೆ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಿಖ್ಖರು ಚಿತ್ರಹಿಂಸೆಗೊಳಗಾದಾಗ, ಅವರ ಹೆಣ್ಣುಮಕ್ಕಳನ್ನು ಹಿಂಸೆಗೆ ಒಳಪಡಿಸಿದಾಗ, ಸಿಕ್ಖರು ಶ್ರೀ ಗುರು ಗ್ರಂಥ ಸಾಹಿಬ್‌ನ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಭಾರತಕ್ಕೆ ಬರಬೇಕಾದಾಗ, ಅಂಥವರ ಬಗ್ಗೆ ಈ ನಕಲಿ ಪೇಟಧಾರಿಗಳಲ್ಲಿ ಒಬ್ಬನೂ ಯಾವುದೇ ಕಾಳಜಿ ತೋರಿಸಲಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಿಖ್ಖರನ್ನು ದೌರ್ಜನ್ಯದಿಂದ ರಕ್ಷಿಸಲು ಕಟ್ಟುನಿಟ್ಟಾದ ಕಾರ್ಯಕ್ರಮಗಳನ್ನು ಮೋದಿ ಸರ್ಕಾರ ರೂಪಿಸಿ ಶೋಷಿತ ಸಿಕ್ಖರನ್ನು ಗೌರವದಿಂದ ಭಾರತಕ್ಕೆ ಕರೆತಂದಿತು. ಕೇಂದ್ರ ಸಚಿವರು ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು. ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ತಲೆಯ ಮೇಲೆ ಹೊತ್ತರು.
ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ರಾಷ್ಟ್ರೀಯವಾದಿ ನಾಯಕರ ನಾಯಕತ್ವದಲ್ಲಿ ಈ ದೇಶ ನಡೆಯುತ್ತಿದೆ. ಬ್ರಿಟನ್ ಮತ್ತು ಕೆನಡಾ ಭಾರತದ ಪ್ರಗತಿಯನ್ನು ಎಂದಿಗೂ ಒಪ್ಪಿಕೊಳ್ಳಲಾರದಾಗಿವೆ. ವಾಸ್ತವವಾಗಿ ಈ ದೇಶಗಳು ಕ್ರೂರಿ ಆಡಳಿತಗಾರ, ವಸಾಹತುಶಾಹಿಗಳ ನೆಲೆ.
ಇದೇ ಬ್ರಿಟನ್, ಮಹಾರಾಜ ರಂಜಿತ್ ಸಿಂಗ್ ಅವರ ಕಿರಿಯ ರಾಣಿ ಮಹಾರಾಣಿ ಜಿಂದ್ ಕೌರ್ ಅವರ ಆರು ವರ್ಷದ ಮಗ ಮಹಾರಾಜ ದುಲೀಪ್ ಸಿಂಗ್ ಅವರನ್ನು ಬಲವಂತವಾಗಿ ಇಂಗ್ಲೆಂಡ್‌ಗೆ ಕರೆದೊಯ್ದು ಅಲ್ಲಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿ, ಮದ್ಯಪಾನಕ್ಕೆ ವ್ಯಸನಿಯಾಗುವಂತೆ ಮಾಡಿತು. ಮಹಾರಾಣಿ ಜಿಂದ್ ಕೌರ್ ಕುರುಡಳಾದ ಬಳಿಕ ವಾರಕ್ಕೊಮ್ಮೆ ಮಾತ್ರ ದುಲೀಪ್ ಸಿಂಗ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಇಷ್ಟೆಲ್ಲಾ ದೌರ್ಜನ್ಯ ಎಸಗಿದ ಬ್ರಿಟಿಷ್ ಸರ್ಕಾರದ ಗುಲಾಮರಾದ ಪೇಟಧಾರಿಗಳನ್ನು ಸಿಖ್ಖರೆಂದು ಕರೆಯಬಹುದೇ?
ಲಂಡನ್‌ನ ಖಲಿಸ್ತಾನಿಗಳು, ಹುತಾತ್ಮ ಭಗತ್ ಸಿಂಗ್ ವಿರುದ್ಧ ವಿಷವನ್ನು ಉಗುಳುತ್ತವೆ. ಅವರಿಗೆ ಭಾರತದ ಪ್ರತಿಯೊಬ್ಬ ಶತ್ರುವೂ ಗೌರವಕ್ಕೆ ಅರ್ಹರು. ಇಡೀ ಬ್ರಿಟನ್ ಇಂದು ಭಾರತದಿಂದ ಲೂಟಿ ಮಾಡಿದ ಸಂಪತ್ತಿನಲ್ಲಿ ಪ್ರಗತಿ ಸಾಧಿಸಿದೆ ಎಂಬುದನ್ನು ಅವರು ಮರೆಯುತ್ತಾರೆ. ಬ್ರಿಟನ್‌ನ ಪ್ರತಿಯೊಂದು ಬೆಳವಣಿಗೆಯಲ್ಲೂ ಭಾರತದ ಲಕ್ಷಾಂತರ ಜನರ ರಕ್ತ ಬೆರೆತಿದೆ. ಬ್ರಿಟನ್‌ನ ಅಂದಿನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡ ಆಹಾರ ನೀತಿಯಿಂದಾಗಿ ಬಂಗಾಳದ ಮೂವತ್ತು ಲಕ್ಷ ಮಂದಿ 1930ರಲ್ಲಿ ಸಾಯಬೇಕಾಯಿತು. ಇದು ವಿಶ್ವದ ಅತ್ಯಂತ ಕೆಟ್ಟ ಮಾನವ ನಿರ್ಮಿತ ಕ್ಷಾಮ. ಇದನ್ನು ಬ್ರಿಟಿಷ್ ನಿರ್ಮಿತ ಕ್ಷಾಮ ಎಂದೂ ಕರೆಯುತ್ತಾರೆ. ಇಂತಹ ಕಳ್ಳ ಮತ್ತು ಬರ್ಬರ ದೇಶದ ಬಗ್ಗೆ ಭಾರತದಲ್ಲಿ ಎಂದಿಗೂ ಸಹಾನುಭೂತಿ ಇರಲು ಸಾಧ್ಯವಿಲ್ಲ.
ಬ್ರಿಟನ್ ಪ್ರಜೆಗಳು ಭಾರತೀಯ ಹೈಕಮಿಷನ್ ಮೇಲೆ ದಾಳಿ ನಡೆಸಿದ ಬಳಿಕ ಇದೀಗ ಮತ್ತೊಮ್ಮೆ ಭಾರತ ಬ್ರಿಟನ್ ಕಾಮನ್‌ವೆಲ್ತ್‌ನಿಂದ ಹೊರ ಬರಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದು ಬ್ರಿಟನ್‌ನ ಹಿಂದಿನ ಗುಲಾಮ ರಾಷ್ಟ್ರಗಳ ಏಕೈಕ ಕ್ಲಬ್. ಬ್ರಿಟನ್ನಿನ ರಾಣಿ ಅಥವಾ ರಾಜ ಇದರಲ್ಲಿ ಮುಖ್ಯ. ಭಾರತವು ಈ ಕಾಮನ್‌ವೆಲ್ತ್‌ನ ಸದಸ್ಯನಾಗಿರುವುದು ಅವಮಾನಕರ.
ಇದನ್ನೂ ಓದಿ: ಬಿಗಿ ಭದ್ರತೆ ನಡುವೆಯೂ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ; ನಮ್ಮ ದೇಶದಲ್ಲಿರುವ ಹೈಕಮಿಷನರ್ಗೆ ಸಮನ್ಸ್ ನೀಡಿದ ಭಾರತ
ಭಾರತೀಯ ಮತ್ತು ಯುರೋಪಿಯನ್ ಬರಹಗಾರರು ಭಾರತದ ಮೇಲೆ ಬ್ರಿಟಿಷರ ದೌರ್ಜನ್ಯದ ಅನೇಕ ಕಥೆಗಳನ್ನು ಬರೆದಿದ್ದಾರೆ. ಅಂತಹ ಕೆಲವು ಸತ್ಯಪೂರ್ಣ ಗ್ರಂಥಗಳ ಮಾಹಿತಿಯನ್ನು ಕೆಲವು ಕೊಂಡಿಗಳ ಮೂಲಕ ಇಲ್ಲಿ ನೀಡುತ್ತಿದ್ದೇನೆ.
ಶ್ರೀ ತೀರ್ಥಂಕರ ರಾಯರು ಬರೆದ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ರಾವಿಟಾಸ್ ಈ ವಿಷಯದ ಮೇಲೆ ನೀಡಿದ ಪರಿಣಾಮಕಾರಿ ಕಾರ್ಯಕ್ರಮ ವಿವರ.
ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಲೇಖನಕ್ಕಾಗಿ ಕ್ಲಿಕ್ ಮಾಡಿ.
ಬ್ರಿಟಿಷರನ್ನು ಹಾಡಿ ಹೊಗಳುವವರು ಭಾರತದಲ್ಲಿ ಇಂದಿಗೂ ಇದ್ದಾರೆ. ಅವರೆಲ್ಲರೂ ಎಡಪಂಥೀಯ ಬರಹಗಾರರ ಇತಿಹಾಸ ಪುಸ್ತಕಗಳನ್ನು ಅಥವಾ ರೊಮಿಲಾ ಥಾಪರ್ ಅಂಥವರ ತಪ್ಪುದಾರಿಗೆಳೆಯುವ ನಿರೂಪಣೆಗಳನ್ನು ಓದಿದವರು. ವಸಾಹತುಶಾಹಿ ಚಿಂತನೆಯನ್ನು ಕೊನೆಗೊಳಿಸುವುದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅತ್ಯಗತ್ಯ. ಬ್ರಿಟಿಷರ ದಲ್ಲಾಳಿಗಳನ್ನು ಬಯಲಿಗೆಳೆದು ಭಾರತದ ನಿಜವಾದ ಭಕ್ತರಿಗೆ ಗೌರವ ನೀಡೋಣ. ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ತ್ಯಾಗದ ನಾಯಕರೆಂದು ಪರಿಗಣಿಸುವ ದೇಶದಲ್ಲಿ ಬ್ರಿಟನ್‌ನ ದುರಹಂಕಾರವನ್ನು ಎಂದಿಗೂ ಒಪ್ಪಿಕೊಳ್ಳಲಾಗುವುದಿಲ್ಲ. ಬ್ರಿಟನ್ ಮತ್ತು ಕೆನಡಾದಲ್ಲಿ ಕುಳಿತಿರುವ ಭಾರತ ವಿರೋಧಿ ದೇಶದ್ರೋಹಿಗಳನ್ನು ಸುಮ್ಮನಾಗಿಸುವ ಸಮಯ ಬಂದಿದೆ.
ಇದನ್ನೂ ಓದಿ: ತರುಣ ಪದ ಅಂಕಣ: ಬಲೂಚಿಸ್ತಾನದಿಂದ ಬೆಂಗಳೂರಿಗೆ ಹಿಂಗ್ಲಾಜ್ ದೇವಿಯ ಭವ್ಯ ಯಾತ್ರೆ