Site icon Vistara News

ತರುಣ ಪದ ಅಂಕಣ: ನಮ್ಮ ಗಡಿ ಕಾಯುವ ಮೊದಲ ಕಾವಲುಗಾರರ ಕಡೆ ಇರಲಿ ನಮ್ಮ ಕಾಳಜಿ

tribes of border

ಭಾರತದ ಒಟ್ಟು ಭೂ ಗಡಿಯ ಉದ್ದ ಹದಿನೈದು ಸಾವಿರದ ಇನ್ನೂರು ಕಿಲೋಮೀಟರ್ (15,200 km). ಇದು ಹನ್ನೆರಡು ರಾಜ್ಯಗಳ 92 ಜಿಲ್ಲೆಗಳ ಮೂಲಕ ಹಾಯುತ್ತಾ ಒಂಬತ್ತು ನೆರೆಯ ರಾಷ್ಟ್ರಗಳನ್ನು ಸ್ಪರ್ಶಿಸುತ್ತದೆ. ಈ ಮಹಾನ್ ರಾಷ್ಟ್ರದ ಗಡಿಯ ದರ್ಶನವು ತಪಸ್ಸು ಮತ್ತು ಈಶ್ವರ ಸಾಕ್ಷಾತ್ಕಾರದ ಪ್ರಯಾಣಕ್ಕಿಂತ ಕಡಿಮೆಯದಲ್ಲ. ಭಾರತಮಾತೆಯನ್ನು ಪ್ರಾರ್ಥಿಸುವುದು, ಆಕೆಯ ಚರಣಪಾದುಕೆಯನ್ನು ಪೂಜಿಸುವುದು ಬೇರೆಯಲ್ಲ; ಈ ದೇಶದ ಗಡಿಯನ್ನು ನೋಡಿ ಅಲ್ಲಿ ವಾಸಿಸುವ ಭಾರತೀಯರ ಪರಿಚಯ ಮಾಡಿಕೊಳ್ಳುವುದು ಬೇರೆಯಲ್ಲ. ನಗರಗಳಲ್ಲಿ ವಾಸಿಸುತ್ತಾ ದೇಶಭಕ್ತಿಯ ಬಗ್ಗೆ ಮಾತನಾಡುವವರು ಭಾರತದ ಗಡಿ ಪ್ರದೇಶಗಳಿಗೆ ಭೇಟಿ ನೀಡಬೇಕು. ಇಲ್ಲಿ ಶತ್ರುಗಳ ಗುಂಡುಗಳು ಮತ್ತು ಪಿತೂರಿಗಳನ್ನು ಮೊತ್ತಮೊದಲು ಎದುರಿಸುವವರನ್ನು ನೋಡಬೇಕು. ಅವರೇ ಭಾರತದ ಮೊದಲ ಸಾಲಿನ ರಕ್ಷಕರು; ಬುಡಕಟ್ಟು ಸಮಾಜದ ಜನರು.

ಗಡಿಪ್ರದೇಶಗಳಲ್ಲಿರುವ ಪರಿಶಿಷ್ಟ ಪಂಗಡಗಳು, ಬುಡಕಟ್ಟುಗಳ ಜನ ಸಹ ಗಡಿ ಕಾವಲುಗಾರರಾಗಿದ್ದಾರೆ. ಲಡಾಕ್‌ನಿಂದ ಹಿಮಾಚಲದ ಶಿಪ್ಕಿ ಲಾ, ಲಾಹೌಲ್ ಸ್ಪಿತಿ, ಉತ್ತರಾಖಂಡದ ಧಾರ್ಚುಲಾ, ಬಡಾ ಹೋಟಿ, ಸಿಕ್ಕಿಂನ ನಾಥುಲಾ, ತವಾಂಗ್ ಮತ್ತು ಅರುಣಾಚಲದ ನುರಾನಾಂಗ್‌ವರೆಗೆ ಇವೆ. ದೇಶದ ಸುಮಾರು ಹನ್ನೊಂದು ಪ್ರತಿಶತ ಆದಿವಾಸಿಗಳು ದೇಶದ ಗಡಿಯಲ್ಲಿ ನೆಲೆಸಿದ್ದಾರೆ. ಇವರಿಗಿರುವ ಸೌಲಭ್ಯಗಳು ಅತಿ ಕಡಿಮೆ. ಇವರು ತ್ರಿವರ್ಣ ಧ್ವಜಕ್ಕೆ ನಿಷ್ಠರಾದವರು. ಎಂದಿಗೂ ಯಾವುದರ ಬಗೆಗೂ ದೂರು ನೀಡಿದವರಲ್ಲ.

ಈ ಹನ್ನೊಂದು ಪ್ರತಿಶತ ಬುಡಕಟ್ಟು ಸಮಾಜಗಳಲ್ಲಿ ತೊಂಬತ್ತೈದು ಪ್ರತಿಶತವು ಭಯೋತ್ಪಾದನೆ, ಬಂಡಾಯ, ಎಚ್‌ಐವಿ, ಕಡಿಮೆ ಶಿಕ್ಷಣ ಮತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿದೆ. ಇವರ ಬಳಿ ದೊಡ್ಡ ದೊಡ್ಡ ಸಂತರಾಗಲಿ, ಪಂಚತಾರಾ ಬಾಬಾಜಿಗಳು, ಸತತ ಆಧ್ಯಾತ್ಮಿಕ ಕಥೆಗಳನ್ನು ಹೇಳುವ ಮಿಲಿಯನೇರ್ ಕಥೆಗಾರರಾಗಲಿ ಹೋಗುವುದಿಲ್ಲ.

ಗಡಿ ಅಧಿಕಾರಿಗಳು ಸಾಮಾನ್ಯವಾಗಿ (ಎಲ್ಲರೂ ಅಲ್ಲ) ಇವರನ್ನು ʼದಂಡʼದ ನೇಮಕಾತಿ ಎಂದು ಪರಿಗಣಿಸುತ್ತಾರೆ. ಇವರ ಸುಖ ದುಃಖ ನಮ್ಮ ಸಮಾಜಕ್ಕೇ ಸಂಬಂಧಿಸಿದ್ದು ಎಂದು ಹೆಚ್ಚಿನವರು ಪರಿಗಣಿಸುವುದಿಲ್ಲ. ಕೆಲವು ಕ್ರಿಶ್ಚಿಯನ್ ಯುವಕರು ಸ್ವೀಡನ್, ಸ್ವಿಟ್ಜರ್ಲೆಂಡ್, ಜರ್ಮನಿಯಿಂದ ಬಂದು ಇವರಲ್ಲಿ ಮತಾಂತರದ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಆದರೆ ಇವರ ನಡುವೆಯೇ, ಹಿಂದೂ ಸಮಾಜದಿಂದ ಬಂದು ಸೇವಾಕೆಲಸ ಮಾಡುವವರು ಸಾಕಷ್ಟು ಜನ ಇದ್ದಾರೆ. ಹೆಚ್ಚಾಗಿ ಇವರು ಆರ್‌ಎಸ್‌ಎಸ್ ಪ್ರೇರಿತ ಸಂಸ್ಥೆಗಳಿಂದ ಹೋದವರು.

ನಾನು ಈ ಲೇಖನವನ್ನು ಇಂಡೋ-ಟಿಬೆಟ್- (ಚೀನಾ) ನೇಪಾಳದ ಗಡಿ ಸಂಗಮದಲ್ಲಿರುವ ಧಾರ್ಚುಲಾ-ಪಿಥೋರಗಢದಿಂದ ಬರೆಯುತ್ತಿದ್ದೇನೆ. ಭೋಟಿಯಾ ಮತ್ತು ವನರಾಜಿ (ವಾನ್ ರಾವತ್) ಬುಡಕಟ್ಟುಗಳು ಇಲ್ಲಿನ ಗಡಿಯಲ್ಲಿ ನೆಲೆಸಿದ್ದಾರೆ. ಈ ಜನರು ಧೈರ್ಯಶಾಲಿಗಳು. ಕಾಯುವದರಲ್ಲಿ ಕುಶಲಿಗಳು. ಗಡಿ ಪ್ರದೇಶವನ್ನು ಬಿಡಲು ಬಯಸದ ಭಾರತೀಯರು.

ಈ ಪೈಕಿ ಭೋಟಿಯಾ ಬುಡಕಟ್ಟಿನವರು ಸಾಕಷ್ಟು ಪ್ರಗತಿ ಸಾಧಿಸಿದ್ದು, ಈ ಸಮಾಜದಿಂದ ಹಲವಾರು ಐಎಎಸ್, ಐಪಿಎಸ್, ರಾಜಕೀಯ ನಾಯಕರು ಬಂದಿದ್ದಾರೆ. ಆದರೆ ಕೆಲ ಕಾಲದ ಹಿಂದಿನವರೆಗೂ ತಮ್ಮದೇ ಆದ ಪ್ರತ್ಯೇಕ ಭಾಷೆ, ಸಂಪ್ರದಾಯಗಳನ್ನು ಹೊಂದಿದ್ದ ಗುಹಾ, ವನರಾಜಿ ನಿವಾಸಿಗಳು ಇಂದಿಗೂ ನೂರಾರು ವರ್ಷಗಳ ಹಿಂದೆ ಉಳಿದಿದ್ದಾರೆ.

ವನರಾಜಿಗಳು ಕಳೆದ 75 ವರ್ಷಗಳಿಂದ ಹೊಸ ಬೆಳಕು ಮತ್ತು ಸ್ವಾತಂತ್ರ್ಯಕ್ಕಾಗಿ ಕಾಯುತ್ತಿದ್ದಾರೆ. ಗಡಿಯಂಚಿನಲ್ಲಿ ಇವರಿಗೆ ವಸತಿ ಇತ್ಯಾದಿಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಅವರಿಗೂ ಭಾರತೀಯ ಅಧಿಕಾರಿಗಳಿಗೂ ಹೃದಯದ ಭಾಷೆಯಲ್ಲಿ ಸ್ವಲ್ಪ ಸಂವಹನದ ಕೊರತೆಯಿತ್ತು. ದಿಲೀಪ್ ಅಧಿಕಾರಿಯಂತಹ ಉತ್ಸಾಹಿ ಸಮಾಜ ಕಲ್ಯಾಣ ಅಧಿಕಾರಿಗಳು ವೈಯಕ್ತಿಕ ಪ್ರಯತ್ನಗಳನ್ನು, ಹೊಸ ಉಪಕ್ರಮಗಳನ್ನು ಕೈಗೊಂಡರು.

ಜಗದೀಶ್ ಕಾಲೋಣಿ ಎಂಬ ಪತ್ರಕರ್ತರು ಇಲ್ಲಿನ ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಮುತುವರ್ಜಿ ವಹಿಸಿ 1997ರಿಂದ ವನರಾಜಿಗಳ ಸಮಸ್ಯೆಗಳ ಬಗ್ಗೆ ಬರೆಯುತ್ತಾ ಬಂದಿದ್ದಾರೆ. ಆದರೆ ರಾಜಕಾರಣಿಗಳಿಗೆ ಇಲ್ಲಿ ಮತಬ್ಯಾಂಕ್ ಇಲ್ಲ. ಹೀಗಾಗಿ ಇವರ ಪ್ರದೇಶದಲ್ಲಿ ಅಭಿವೃದ್ಧ ಆಗಿಲ್ಲ. ಆಗಬೇಕಾಗಿದ್ದ ಹತ್ತನೇ ಒಂದು ಭಾಗದಷ್ಟು ಕೆಲಸವೂ ಆಗಿಲ್ಲ.

ಅದೃಷ್ಟವಶಾತ್, ಮೋದಿ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಉಪಕ್ರಮವನ್ನು ಕೈಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಳಿವಿನಂಚಿನಲ್ಲಿರುವ ಬುಡಕಟ್ಟುಗಳ ಬಗ್ಗೆ ವೈಯಕ್ತಿಕ ಆಸಕ್ತಿ ಹೊಂದಿದ್ದಾರೆ. ಇದಕ್ಕಾಗಿ ದೇಶಾದ್ಯಂತ ಹೊಸ ಕ್ರಮಗಳನ್ನು ಕೈಗೊಳ್ಳುವ ಉತ್ಸಾಹ ಹೊಂದಿರುವ ಮೊದಲ ರಾಷ್ಟ್ರಪತಿ ಇವರಾಗಿದ್ದಾರೆ. ಅವರು ರಾಷ್ಟ್ರಪತಿ ಭವನದಲ್ಲಿ ಈ ಬುಡಕಟ್ಟುಗಳ ಗುಂಪುಗಳನ್ನು ಭೇಟಿಯಾಗುತ್ತಿದ್ದಾರೆ.

ಇದನ್ನೂ ಓದಿ: ತರುಣ ಪದ ಅಂಕಣ: ವಿದೇಶದಲ್ಲಿ ಕುಳಿತಿರುವ ಭಾರತದ ವಿರೋಧಿಗಳನ್ನು ಇನ್ನೂ ಸಹಿಸಿಕೊಳ್ಳಬೇಕೆ?

ಸರ್ಕಾರವೊಂದೇ ಇವರಿಗಾಗಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸಮಾಜದ ಹೆಚ್ಚು ಸಂಪನ್ನ ವರ್ಗಗಳು ಸರ್ಕಾರದಿಂದ ಯಾವುದೇ ಸಹಾಯವನ್ನು ನಿರೀಕ್ಷಿಸದೆ ಸಮಾನತೆ ಮತ್ತು ಸಾಮರಸ್ಯಕ್ಕಾಗಿ ಶ್ರಮಿಸಬೇಕು. ಆದರೆ ದುರದೃಷ್ಟವಶಾತ್, ಪ್ರತಿಯೊಬ್ಬರೂ ರಾಜಕಾರಣಿಗಳ ವೈಭವ, ತ್ವರಿತ ಹಣಗಳಿಕೆಯ ಹೆಚ್ಚು ಆಕರ್ಷಕವಾದ ಮಾರ್ಗಗಳನ್ನು ಅಭಿವೃದ್ಧಿ ಎಂದು ಭಾವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ʼವನವಾಸಿ ಕಲ್ಯಾಣ ಆಶ್ರಮʼದಂತಹ ಸಂಸ್ಥೆಗಳು, ಕಿಶೋರ್ ಪಂತ್, ನಾನ್ಹಿ ಚೌಪಾಲ್, ದಿಲೀಪ್ ಅಧಿಕಾರಿಯಂತಹ ಸೇವಾ ಮನೋಭಾವದ ಅಧಿಕಾರಿಗಳು ಸಮಾಜ ಮತ್ತು ಸರ್ಕಾರದಿಂದ ಜನಮನ್ನಣೆ ಪಡೆಯಬೇಕಾಗಿದೆ.

ರಾಷ್ಟ್ರಪತಿಗಳ ಪ್ರಯತ್ನಗಳು ಅಳಿವಿನಂಚಿನಲ್ಲಿರುವ ಬುಡಕಟ್ಟುಗಳ ರಕ್ಷಣೆಗೆ ಫಲ ನೀಡಲಿವೆ. ಪ್ರಸ್ತುತ ವನರಾಜಿ ಭಾಷೆಯ ಲಿಪಿ ಮತ್ತು ಡಿಜಿಟಲೀಕರಣಕ್ಕೆ ದೊಡ್ಡ ಪ್ರಮಾಣದ ಕೆಲಸ ಅಗತ್ಯವಿದೆ. ಆಗ ಮಾತ್ರ ಸ್ವಾತಂತ್ರ್ಯದ ಅಮೃತ ಹಬ್ಬವು ಅವರಿಗೆ ಅರ್ಥಪೂರ್ಣ ಆಗುತ್ತದೆ. ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರನ್ನು ಪ್ರಗತಿಯ ಮುಖ್ಯವಾಹಿನಿಗೆ ಸಂಪರ್ಕಿಸಲು ಸಮಾಜದ ಪ್ರಮುಖರು ಮುಂದಾಗಬೇಕು. ಅವರು ದೇಶದ ಮೊದಲ ಉದ್ಧಾರಕರು. ಆದರೆ ಅವರ ಪ್ರದೇಶಗಳನ್ನು ನಿರ್ಲಕ್ಷಿಸಿದರೆ ಅದು ಮಾನವೀಯತೆಗೆ ವಿರುದ್ಧ; ಮಾತ್ರವಲ್ಲ ಭದ್ರತೆಯ ಬಗ್ಗೆಯೂ ಅಕ್ಷಮ್ಯ ಅಪರಾಧ.

ಇದನ್ನೂ ಓದಿ: ತರುಣ ಪದ ಅಂಕಣ: ಬಲೂಚಿಸ್ತಾನದಿಂದ ಬೆಂಗಳೂರಿಗೆ ಹಿಂಗ್ಲಾಜ್‌ ದೇವಿಯ ಭವ್ಯ ಯಾತ್ರೆ

Exit mobile version