ಕೈವಾರದ ತಾತಯ್ಯನವರು ಮಾನವ ಜನ್ಮದ ಶ್ರೇಷ್ಠತೆಯನ್ನು ಹಲವಾರು ಬೋಧನೆಗಳಲ್ಲಿ ಎತ್ತಿಹಿಡಿದಿದ್ದಾರೆ. ನರಜನ್ಮದಲ್ಲಿ ಮಾತ್ರ ಮೋಕ್ಷವನ್ನು ಕಂಡುಕೊಳ್ಳಲು ಸಾಧ್ಯವಿದೆ. ನಿನ್ನನ್ನು ನೀನು ತಿಳಿದು ಆತ್ಮಜ್ಞಾನಿಯಾಗು. ಮತಿಹೀನನಾಗಿ ವರ್ತಿಸುತ್ತಾ, ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಅಧ್ಯಾತ್ಮವಿದ್ಯೆ ಅಂಟುವುದಿಲ್ಲ. ಹೀಗೆ ಹಲವಾರು ಮಹತ್ವದ ವಿಷಯಗಳನ್ನು ತಾತಯ್ಯನವರು ಸರಳವಾದ ಮಾತುಗಳಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬೋಧಿಸಿದ್ದಾರೆ.
ಮಾನವ ಜನ್ಮವು ಪರಮಾತ್ಮನ ಕೃಪೆ. ಪರಮಾತ್ಮನ ಕೃಪೆಯಿಂದ ದೊರಕಿರುವ ಈ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆದುಕೊಳ್ಳಬಾರದೆಂಬ ಕಳಕಳಿಯಿಂದ ಗುರುವರ್ಯರಾದ ತಾತಯ್ಯನವರು ಈ ಭಕ್ತಿತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಜೀವಿಗೂ ಮರಣವಿದೆ. ಇದು ಸತ್ಯ. ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮರಣದ ನಂತರ ಹುಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ. ಈ ಚಿಂತನೆಯನ್ನು ತಾತಯ್ಯನವರು ಮುಂದಿಡುತ್ತಿದ್ದಾರೆ.
ಯೆಂತ ಕಾಲಮೈನ ಯೆರುಕ ಲೇಕನು ಜೀವಿ
ಚಚ್ಚಿ ಪುಟ್ಟುಚುನುಂಡು ಸಹಜಮಿದಿಯು
ತಾತಯ್ಯನವರು ಈ ಪದ್ಯದಲ್ಲಿ ಮಾನವರಿಗೆ ನೇರವಾಗಿ ತತ್ವಬೋಧೆಯನ್ನು ಮಾಡಿದ್ದಾರೆ. ಎಷ್ಟೇ ಕಾಲ ಕಳೆದರೂ ಅಜ್ಞಾನದಿಂದ ಕೂಡಿರುವ ಜೀವಿಯು ಮತ್ತೆ ಮತ್ತೆ ಸತ್ತು ಹುಟ್ಟುತ್ತಿರುತ್ತಾನೆ. ಇದು ಸಹಜವಾದ ಪ್ರಕ್ರಿಯೆ. ಕಾರಣವೆಂದರೇ ಅಜ್ಞಾನ. ಯಾರಿಗಾದರೇ ಕೇವಲ ಪ್ರಾಪಂಚಿಕವಾದ ವ್ಯವಹಾರದಲ್ಲಿ ಮಾತ್ರ ಆಸಕ್ತಿ ಇರುತ್ತದೋ ಅವರು ಅಜ್ಞಾನಿಗಳು. ಮಾನವಜನ್ಮದಲ್ಲಿ ಹುಟ್ಟಿದ ಮೇಲೆ ಪರಲೋಕದ ಚಿಂತನೆಯನ್ನು ಮಾಡುತ್ತಿರಬೇಕು. ಅಜ್ಞಾನಿಯಾಗದೇ ಆತ್ಮಜ್ಞಾನಿಯಾಗಿ ಈ ಸಹಜಸ್ಥಿತಿಯಿಂದ ತಪ್ಪಿಸಿಕೊಂಡು ಪಾರಾಗು ಎನ್ನುತ್ತಿದ್ದಾರೆ ತಾತಯ್ಯನವರು.
ಜನನ ಮರಣಮುಲೆನ್ನೋ..
ಮಾನವನಾಗಿ ಹುಟ್ಟುವುದಕ್ಕೆ ಮೊದಲು ಏನಾಗಿದ್ದೇವೋ? ಯಾರಿಗೂ ಗೊತ್ತಿಲ್ಲ. ಮಾನವ ಜನ್ಮದಲ್ಲಿರುವ ಆತ್ಮ ಹಿಂದೆ ಯಾವ ಯಾವ ಜೀವರಾಶಿಗಳಲ್ಲಿ ಸೇರಿಕೊಂಡು ಜೀವಿಸಿತ್ತೋ? ಯಾರಿಗೂ ಗೊತ್ತಿಲ್ಲ. ಇದರ ಮನವರಿಕೆಯನ್ನು ತಾತಯ್ಯನವರು ಮಾಡಿಕೊಡುತ್ತಿದ್ದಾರೆ.
ಜನನಮರಣಮುಲೆನ್ನೊ ಜಾತುಲೆನ್ನಾಯೆನೋ
ತಲಿದಂಡ್ರುಲೆಂದರೋ ತನುವುಲೆನ್ನೋ
ಇಪ್ಪುಡು ಧರಲೋನ ಯಿಟುವಂಟಿ ಮಾನವ
ದೇಹಂಬು ನಿರ್ಮಿಂಚೆ ಮಾಧವುಂಡು||
ಈವರೆಗೆ ಅದೆಷ್ಟು ಸಲ ಜನನ ಮರಣಗಳಾದವೋ, ಅದೆಷ್ಟು ಜಾತಿಗಳಾದವೋ, ಅದೆಷ್ಟು ಮಂದಿ ತಾಯಿತಂದೆಗಳನ್ನು ಪಡೆದದ್ದಾಯಿತೋ, ಅದಕ್ಕೆ ಲೆಕ್ಕವೇ ಇಲ್ಲ. ಎಷ್ಟೆಷ್ಟು ಶರೀರಗಳನ್ನು ಪಡೆದು ಮಣ್ಣುಗೂಡಿಸಿದ್ದಾಯಿತೋ, ಲೆಕ್ಕವಿಲ್ಲ. ಹಿಂದಿನ ಜನ್ಮಗಳು ಏನೇ ಇರಲಿ, ಕಳೆದು ಹೋಯಿತು. ಚಿಂತೆ ಮಾಡಬೇಡ. ಈಗಲಾದರೂ, ಜ್ಞಾನ ಸಂಪಾದನೆಗೆ ಅವಕಾಶವಿರುವ ವಿವೇಕದಿಂದ ಕೂಡಿರುವ ಮಾನವಜನ್ಮ ಬಂದಿದೆ. ಲೋಕೇಶ್ವರನಾದ ಮಾಧವನು ಇಂತಹ ಶ್ರೇಷ್ಠವಾದ ಮಾನವದೇಹವನ್ನು ಕೊಟ್ಟಿದ್ದಾನೆ, ಹಾಳುಮಾಡಿಕೊಳ್ಳಬೇಡ ಎಂದು ಎಚ್ಚರಿಸುತ್ತಿದ್ದಾರೆ ತಾತಯ್ಯನವರು.
ಭೂಮಿಯಲ್ಲಿ ಇಂತಹ ಮಾನವದೇಹವನ್ನು ಪಡೆದ ಮೇಲೆ ಮಾಡಬೇಕಾದ ಕರ್ತವ್ಯವೇನು? ಅದರ ಫಲಶ್ರುತಿಯೇನು? ಪದ್ಯದ ಕೊನೆಯಲ್ಲಿ ಈ ರೀತಿಯಾಗಿ ಬೋಧಿಸುತ್ತಿದ್ದಾರೆ ತಾತಯ್ಯನವರು.
ಹಿಂದೆ ಮಾಡಿದ ತಪ್ಪನ್ನು ಮಾಡದಿರು..
ನಮ್ಮ ಕಣ್ಣ ಮುಂದೆಯೇ ಮಾನವ ದೇಹವಿಲ್ಲದ ಅದೆಷ್ಟೋ ಜಂತುಗಳಿವೆ. ಆದರೆ ಈ ಜಂತುಗಳಿಗೆ ಮಾನವನಿಗಿರುವಷ್ಟು ಜ್ಞಾನವಿಲ್ಲ, ಅನುಕೂಲಗಳಿಲ್ಲ. ಆ ಜಂತುಗಳು ಪರಮಾತ್ಮನಾದ ಜಗದೀಶ್ವರನ ಸ್ಮರಣೆ ಮಾಡುವುದಿಲ್ಲ. ಮಾನವನಾಗಿ ಹುಟ್ಟಿದ ಮೇಲೆ ನೀನು ಪರಮಾತ್ಮನ ಸ್ಮರಣೆಯನ್ನು ಮಾಡದಿದ್ದರೆ ಏನು ಪ್ರಯೋಜನ? ಮಾನವಜನ್ಮದ ಸಾರ್ಥಕವೇನು? ಆ ಜಂತುವಿಗೂ ಮಾನವರಿಗೂ ಇರುವ ವ್ಯತ್ಯಾಸವೇನು? ತಾತಯ್ಯನವರು ಹೀಗೆ ಬೋಧಿಸಿದ್ದಾರೆ.
ಮುನುಪಟಿ ವಿಧಂಬುನ ಮೂರ್ಖುಡೈ ಪೋವಲದು
ಜಗದೀಶ್ವರುನಿ ಜಪಮು ಚೇಸಿ ನೀವು
ಪಟ್ಟು ವದಲಕ ಪರಮಂದೆ ದೃಷ್ಟಿವುಂಚಿ
ಚಾವು-ಪುಟ್ಟು ಲೇನಿ ಸೌಖ್ಯಸಂಪದಲನುಂಡು||
ಹಿಂದಿನ ಜನ್ಮಗಳಲ್ಲಿ ಮಾಡಿದದಂತೆ ಈ ಸಲವೂ ಮೂರ್ಖನಾಗಿ ಹೊರಡುವವನಾಗಬೇಡ. ಮಾನವಜನ್ಮವನ್ನು ಎಷ್ಟೋ ಪೂರ್ವಜನ್ಮಗಳ ಪುಣ್ಯದಿಂದ ಪಡೆದಿದ್ದೀಯ. ಈ ಸದಾವಕಾಶವನ್ನು ಕಳೆದುಕೊಳ್ಳಬೇಡ. ಪರಮಾತ್ಮನಾದ ಜಗದೀಶ್ವರನ ಜಪಸ್ಮರಣೆಯನ್ನು ಮಾಡು. ಪಟ್ಟು ಬಿಡದೆ ಪರಮಲಕ್ಷ್ಯವಾಗಿರುವ ಮೋಕ್ಷದಲ್ಲೇ ದೃಷ್ಟಿಯನ್ನಿಟ್ಟು, ಸಾವು-ಹುಟ್ಟುಗಳಿಲ್ಲದ ಸೌಖ್ಯ ಸಂಪತ್ತುಗಳನ್ನು ಅನುಭವಿಸು ಎನ್ನುತ್ತಿದ್ದಾರೆ ತಾತಯ್ಯನವರು.
“ಪಟ್ಟು ವದಲಕ ಮರಮಂದೆ ದೃಷ್ಠಿವುಂಚಿ” ತಾತಯ್ಯನವರು ಮಾನವರಿಗೆ ನೀಡುತ್ತಿರುವ ಎಚ್ಚರಿಕೆ ಇದು. ಪರಮಾತ್ಮನ ಸ್ಮರಣೆ ಮಾಡು, ಇದು ತಾತಯ್ಯನವರು ಬೋಧಿಸುತ್ತಿರುವ ಉಪದೇಶ. ದೃಢ ಸಂಕಲ್ಪದಿಂದ, ಹಿಡಿದ ಪಟ್ಟು ಬಿಡದೆ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು ಎನ್ನುತ್ತಿದ್ದಾರೆ. ಉದಾಸೀನದ ಸ್ಮರಣೆಯಿಂದ ಪ್ರಯೋಜನವಿಲ್ಲ. ಆದುದರಿಂದ ಜಪಸ್ಮರಣೆಯಲ್ಲಿ ಸಡಿಲವಾಗದೆ ಬಿಗಿಯಾದ, ದೃಢವಾದ ಹಿಡಿತವಿರಬೇಕು.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ನವರಾತ್ರಿ ವಿಶೇಷ: ಅಖಿಲಾಂಡೇಶ್ವರಿಯ ವರ್ಣನೆ
ಪರದಲ್ಲಿ ದೃಷ್ಠಿ ಇರಿಸಬೇಕೆಂದು ಹೇಳಿದ್ದಾರೆ. ಇದು ಬಹಳ ಮುಖ್ಯವಾದುದು. ಲೌಕಿಕ ಭೋಗಗಳನ್ನು ಬಯಸಿ ಮಾಡುವ ಅನೇಕ ಜಪಗಳು ಶಾಶ್ವತವಾದ ಸುಖಗಳನ್ನು ನೀಡುವುದಿಲ್ಲ. ಅಜ್ಞಾನಿ ಜನರು ಧನಕನಕ ಭೋಗಗಳೆಂಬ ಅಲ್ಪಲಾಭಕ್ಕೆ ಮರುಳಾಗಿ ಅದನ್ನೇ ಸುಖವೆಂದು ಭ್ರಮಿಸುತ್ತಾರೆ. ಆದರೆ ಸ್ವಲ್ಪವೇ ಕಾಲದ ನಂತರ ಭೋಗವು ರೋಗವಾಗಿ ಪರಿಣಮಿಸುತ್ತದೆ. ಕೊನೆಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನೀನು ಹಾಗಾಗಬೇಡ, ಜ್ಞಾನಿಯಾಗಿ ಹುಟ್ಟುಸಾವುಗಳಿಲ್ಲದ ಭಗವಂತನ ಸಾನ್ನಿಧ್ಯವನ್ನು ಸೌಖ್ಯ ಸಂಪದವೆಂದು ಅರಿತುಕೋ. ಲೋಕದ ಇನ್ನಿತರ ಅಲ್ಪವಸ್ತುಗಳಿಗೆ ಆಸೆಪಡದೆ ಮೋಕ್ಷತತ್ವದಲ್ಲಿ ಮನಸ್ಸಿಟ್ಟು ಸ್ಮರಿಸು, ಆಗ ಜಗದೀಶ್ವರನು ನಿನ್ನನ್ನು ತನ್ನ ಲೋಕಕ್ಕೆ ಕರೆದುಕೊಂಡು ತನ್ನ ಬಳಿ ಇರಿಸಿಕೊಳ್ಳುತ್ತಾನೆ. ಇದು ಮೋಕ್ಷಪದವಿ. ಇಲ್ಲಿಗೆ ಹೋದಮೇಲೆ ಪುನ: ಈ ಲೋಕಕ್ಕೆ ಹಿಂತಿರುಗಿ ಬರಬೇಕಾಗಿಲ್ಲ. ಹುಟ್ಟುಸಾವುಗಳ ತಂಟೆ ಇರುವುದಿಲ್ಲ. ಇದೇ ನಿಜವಾದ ಆನಂದ. ಭಗವಂತನ ನಾಮಜಪದ ಸ್ಮರಣೆಯಿಂದ ಈ ಮೋಕ್ಷಸಾಧನೆಯನ್ನು ಮಾಡು, ಹಿಂದಿನ ಜನ್ಮಗಳಲ್ಲಿ ಮೂರ್ಖತನದಿಂದ ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೋ ಎನ್ನುತ್ತಿದ್ದಾರೆ ತಾತಯ್ಯನವರು.
ಹುಟ್ಟು ಸಾವುಗಳಿಲ್ಲದ ಮೋಕ್ಷ ಪಡೆಯಲು ಈ ಮಾನವದೇಹದಲ್ಲಿಯೇ ಸಾಧನೆ ಮಾಡಬೇಕು. ಈ ಸಾಧನೆಗೆ ಪರಮಾತ್ಮನ ನಿರಂತರ ಸ್ಮರಣೆಯೇ ಉತ್ತಮವಾದ ಸಾಧನ ವಿಧಾನವಾಗಿದೆ. ಮಾನವಜನ್ಮ ಲಭಿಸಿರುವ ಈ ಸಮಯದಲ್ಲೂ ಮೋಕ್ಷ ಸಾಧನೆಗಾಗಿ ಭಗವಂತನ ಸ್ಮರಣೆಮಾಡದೆ, ಇಹಭೋಗಗಳಿಗೆ ಆಸೆಪಟ್ಟರೇ ಯಮಪಾಶಕ್ಕೆ ತುತ್ತಾಗಬೇಕಾಗುತ್ತದೆ. ಭಕ್ತನಾಗು, ಭಜನೆ ಮಾಡು, ಹುಟ್ಟುಸಾವುಗಳಿಲ್ಲದ ಸೌಖ್ಯಸಂಪತ್ತನ್ನು ಅನುಭವಿಸು ಎಂದು ತಾತಯ್ಯನವರು ಮಾನವರನ್ನು ಈ ಬೋಧನೆಯ ಮೂಲಕ ಜಾಗೃತಗೊಳಿಸಿದ್ದಾರೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ