Site icon Vistara News

ತಾತಯ್ಯ ತತ್ವಾಮೃತಂ: ನವರಾತ್ರಿ ವಿಶೇಷ: ಅಖಿಲಾಂಡೇಶ್ವರಿಯ ವರ್ಣನೆ

devi goddess

ನಾಡಹಬ್ಬ ದಸರಾ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ಶಕ್ತಿ ಸ್ವರೂಪಿಣಿಯಾದ ಆದಿಶಕ್ತಿಯನ್ನು ಪೂಜಿಸಲಾಗುತ್ತದೆ. ಶಕ್ತಿಸ್ವರೂಪಿಣಿ ದೇವಿಯು ಪ್ರಕೃತಿಯ ಸಂಕೇತವೂ ಆಗಿದ್ದು, ದಸರಾ ಹಬ್ಬವು ಪ್ರಾಚೀನ ಹಬ್ಬವಾಗಿದೆ.

ಪ್ರಕೃತಿಯ ಸ್ವರೂಪವಾದ ಅಮ್ಮನವರನ್ನು ಕೈವಾರ ತಾತಯ್ಯನವರು ತಮ್ಮ ಕೀರ್ತನೆಗಳಲ್ಲಿ ಸ್ತುತಿಸಿ ಕೊಂಡಾಡಿದ್ದಾರೆ. “ಅಂಬನು ಚೂಡರಮ್ಮ ಮನ ಜಗದಂಬನು ಚೂಡರಮ್ಮ..” ಎಂದು ಭಕ್ತಿಪೂರ್ವಕವಾಗಿ ಕೀರ್ತನೆಯನ್ನು ರಚಿಸಿ, ಶಕ್ತಿಸ್ವರೂಪಿಣಿಯನ್ನು “ಜಗದ ತಾಯಿ” ಎಂದು ಬಣ್ಣಿಸಿದ್ದಾರೆ. ಈ ಕೀರ್ತನೆಯಲ್ಲಿ ಶಿವನ ಸಹಧರ್ಮಿಣಿಯಾದ ಪಾರ್ವತಿಯ ವರ್ಣನೆಯನ್ನು ಮಾಡುತ್ತಾ “ಅಂಬನು ಚೂಡರೇ ಅಖಿಲಾಂಡೇಶ್ವರಿ..” (ಅಖಿಲಾಂಡೇಶ್ವರಿಯಾದ ತಾಯಿಯನ್ನು ನೋಡಿರಿ) ಎಂದಿದ್ದಾರೆ.

ಈ ಕೀರ್ತನೆಯ ವಿಶೇಷತೆಯೆಂದರೆ ಎಲ್ಲಿಯೂ ಅಮ್ಮನವರ ಹೆಸರನ್ನು ಉಲ್ಲೇಖಿಸಿಲ್ಲ. ಹೆಸರನ್ನು ಹೇಳದೆ ಮಾನಸಿಕವಾಗಿ ತಾಯಿಯನ್ನು ದರ್ಶನ ಮಾಡಿ, ಸಂತೋಷದಿಂದ ಭಕ್ತಿಯನ್ನು ತಾಯಿಯ ಪಾದಗಳಲ್ಲಿ ಸಮರ್ಪಣೆ ಮಾಡಿದ್ದಾರೆ. ಮಾನಸಿಕ ಪೂಜೆಗೆ ಮಹತ್ವವನ್ನು ನೀಡಿ, ಅತ್ಯಂತ ಶ್ರದ್ಧೆ, ಭಕ್ತಿಭಾವಗಳಿಂದ ಈ ಕೀರ್ತನೆಯನ್ನು ರಚಿಸಿದ್ದಾರೆ.

ಪಂಜುಲು ಕಮ್ಮಲು ಪಾಪಟಬೊಟ್ಟುನು
ಥಳುಕು ಬುಗಡಲು ತಾಳಿ ಪದಕಮು
ಚಕ್ಕನಿ ತಲ್ಲಿಕಿ ಮುತ್ಯಪು ಮುಕ್ಕರ
ಪರಮೇಶ್ವರು ಸತಿ ಕೊಲುವೈಯುನ್ನದಿ||

ಪರಮೇಶ್ವರನ ಸತಿಯಾಗಿ ವಿರಾಜಮಾನವಾಗಿರುವ ತಾಯಿಯು ಹೊಳೆಯುವ ಮಣಿಗಳಿಂದ ಕೂಡಿರುವ ಕಿವಿಯೋಲೆಗಳನ್ನು, ಅಂದವಾದ ಬೈತಲೆಯ ಬೊಟ್ಟು, ಸುಂದರವಾಗಿ ತೂಗುತ್ತಿರುವ ತಾಳಿ ಹಾಗೂ ಮುತ್ತಿನ ಮೂಗುತಿಯನ್ನು ಸಿಂಗರಿಸಿಕೊಂಡಿರುವ ಅಮ್ಮನವರನ್ನು ಕಂಡು ತಾತಯ್ಯನವರು ಭಕ್ತಿಪರವಶರಾಗಿ ಸ್ತುತಿಸುತ್ತಿದ್ದಾರೆ.

ಹಸ್ತಕಡಿಯಮುಲು ಅದ್ದಪು ಗಾಜುಲು
ಪಾದಮುಲಂದೆಲು ಪಾವಡ ಗೆಜ್ಜೆಲು
ಪಿಲ್ಲಣಿ ಮೆಟ್ಟೆಲು ಬಿರುದುಮುದ್ರಿಕಲು
ಫಾಲಾಕ್ಷುನಿ ಸತಿ ಕೊಲುವೈಯುನ್ನದಿ ||

ಫಾಲಾಕ್ಷನ ಸತಿಯಾಗಿ ನಿವಾಸವಾಗಿರುವ ಅಮ್ಮನವರು ಹಸ್ತಗಳಿಗೆ ಕಡಗಗಳನ್ನು ಹಾಗೂ ಅಂದದ ಬಳೆಗಳನ್ನು ತೊಟ್ಟಿದ್ದಾಳೆ. ಪಾದಗಳಿಗೆ ಕಾಲ್ಕಡಗಗಳನ್ನು ಹಾಗೂ ಗಂಟೆಯ ನಾದವನ್ನು ಬೀರುವ ಗೆಜ್ಜೆಯ ಆಭರಣವನ್ನು ಧರಿಸಿದ್ದಾಳೆ. ಬೆರಳುಗಳಿಗೆ ಲಾಂಛನಗಳಿಂದ ಕೂಡಿದ ಉಂಗುರಗಳನ್ನು, ಬಿರುದು ಮುದ್ರಿಕೆಗಳನ್ನು ಹಾಗೂ ಪದಕಗಳನ್ನು ಧರಿಸಿ ಶೋಭಿಸುತ್ತಾ ತಾಯಿಯು ಕಂಗೊಳಿಸುತ್ತಿದ್ದಾಳೆ ಎಂದು ತಾತಯ್ಯನವರು ವರ್ಣಿಸುತ್ತಿದ್ದಾರೆ.

ನವರತ್ನಂಬುಲು ನವ್ಯ ಹಾರಮುಲು
ನಡುಮುನ ನಾಗಾಭರಣಮು ವೊಪ್ಪುಗ
ವೆಲದುಲು ವಿಂಜಾ ಮರಮುಲು ವೀವಗ
ಭೃಂಗೀಶ್ವರು ಸತಿ ಕೊಲುವೈಯುನ್ನದಿ||

ಭೃಂಗೀಶ್ವರನ ಸತಿಯಾಗಿ ಆಶೀರ್ವದಿಸುತ್ತಿರುವ ತಾಯಿಯು ನವರತ್ನಗಳಿಂದ ಕೂಡಿರುವ ಶುಭ್ರವಾದ, ನವ್ಯವಾದ ಹಾರಗಳನ್ನು ಧರಿಸಿದ್ದಾಳೆ. ಸೊಂಟಕ್ಕೆ (ನಡುವಿಗೆ) ಒಪ್ಪುವಂತಹ ನಾಗಾಭರಣವನ್ನು ಸುತ್ತಿಕೊಂಡಿದ್ದಾಳೆ. ಸಹಚಾರಿಣಿಯರಿಂದ ಚಾಮರಸೇವೆಯನ್ನು ಪಡೆಯುತ್ತಿರುವ ತಾಯಿಯನ್ನು ಕಂಡು ಧನ್ಯನಾದೆ ಎನ್ನುತ್ತಿದ್ದಾರೆ ತಾತಯ್ಯನವರು.

ಕರಮುನ ಖಡ್ಗತ್ರಿಶೂಲಮು ಬೂನಿ
ಕಾಟಿ ಗ್ರಹಮುಲ ಖಂಡ್ರಿಂಚೆದನನಿ
ಅಖಿಲ ಜನಂಬುಲ ಕಭಯಮುಲಿಚ್ಚಿ
ವೃಷಭವಾಹನುನಿ ಸತಿ ಕೊಲುವೈಯುನ್ನದಿ||

ವೃಷಭವನ್ನು ವಾಹನವನ್ನಾಗಿಟ್ಟುಕೊಂಡಿರುವ ಪರಶಿವನ ಸತಿಯಾದ ತಾಯಿಯು, ಭಕ್ತರಿಗೆ ಹಾನಿಯುಂಟು ಮಾಡುವ ದುಷ್ಟಗ್ರಹಗಳನ್ನು ಖಂಡಿಸಿ ನಾಶಮಾಡುತ್ತೇನೆ ಎನ್ನುವ ಸಂಕೇತದಂತೆ ಕೈಗಳಲ್ಲಿ ಖಡ್ಗ, ತ್ರಿಶೂಲವನ್ನು ಹಿಡಿದಿದ್ದಾಳೆ. ಜಗದ ಎಲ್ಲಾ ಭಕ್ತರಿಗೆ ಅಭಯವನ್ನು ನೀಡುತ್ತಾ ವಿರಾಜಮಾನವಾಗಿರುವ ತಾಯಿಯನ್ನು ಭಕ್ತರು ಶುಭ್ರವಾದ ವಸ್ತ್ರಗಳನ್ನು ಧರಿಸಿ, ದಿವ್ಯವಾದ ದೀಪಗಳನ್ನು ಬೆಳಗುತ್ತಾ ಆರಾಧಿಸುತ್ತಿದ್ದಾರೆ ಎನ್ನುತ್ತಿದ್ದಾರೆ ತಾತಯ್ಯನವರು.

ಭಕ್ತಿಗ ಕೊಲಚಿನ ಭಕ್ತುಲಕೆಲ್ಲನು
ಕೋರಿನ ಕೋರಿಕಲನ್ನಿಯು ವಿಚ್ಚುನು
ದಾಟು ಶೂನ್ಯಮುಲು ಮೀಟುನು ತೃಣಮುಗ
ಮುಕ್ಕಂಟೇಶುನಿ ಸತಿ ಕೊಲುವೈಯುನ್ನದಿ||

ಮುಕ್ಕಂಟೇಶ್ವರನ ಸತಿಯಾಗಿರುವ ತಾಯಿಯ ಬಳಿಗೆ ಶರಣಾಗಿ ಭಕ್ತಿಯಿಂದ ಬರುವ ಭಕ್ತರಿಗೆ, ಅವರ ಕೋರಿಕೆಯಂತೆ ವರಗಳನ್ನು ನೀಡುತ್ತಾಳೆ. ವಾಮಾಚಾರ ಹಾಗೂ ನಿಗೂಢವಾದ ಕ್ರಿಯೆಗಳನ್ನು ತಾಯಿಯು ತೃಣವಾಗಿ ಕಂಡು ಪರಿಹರಿಸುತ್ತಾಳೆ. ಈ ತಾಯಿ ಅಖಿಲಾಂಡೇಶ್ವರಿ, ಕೈವಾರದ ಅಮರನಾರೇಯಣಸ್ವಾಮಿಯ ಸಹೋದರಿ ಎಂದು ಹೇಳುತ್ತಾ, ತಾಯಿಯನ್ನು ಮಾನಸಿಕವಾಗಿ ಕೊಂಡಾಡುತ್ತಾ, ಸ್ತುತಿಸುತ್ತಾ, ಶಾಶ್ವತವಾದ ಆನಂದವನ್ನು, ವೈಭವವನ್ನು ಕಂಡುಕೊಂಡೆ ಎಂದಿದ್ದಾರೆ ತಾತಯ್ಯನವರು.

ನವರಾತ್ರಿಯ ಒಂಬತ್ತು ದಿನಗಳು ದೈವಿಶಕ್ತಿಯನ್ನು ಹೊಂದಿರುತ್ತದೆ. ಈ ದಿನಗಳಲ್ಲಿ ಧಾರ್ಮಿಕ ಚಿಂತನೆ, ನಾಮಸ್ಮರಣೆಗೆ ಹೆಚ್ಚು ಒತ್ತು ನೀಡಿದಲ್ಲಿ ಆಧ್ಯಾತ್ಮಿಕ ಪ್ರಜ್ಞೆಯ ಅರಿವು ಜಾಗೃತವಾಗುತ್ತದೆ. ಈ ಅರಿವಿನಿಂದ ಮನಸ್ಸು ಸ್ಥಿರವಾಗುತ್ತದೆ, ಚೈತನ್ಯಪೂರ್ಣವಾಗುತ್ತದೆ. ನಾಡಹಬ್ಬ ದಸರಾವನ್ನು ಭಕ್ತಿಯಿಂದ ಆಚರಿಸೋಣ, ಮಾನಸಿಕ ನೆಮ್ಮದಿಯನ್ನು ಪಡೆಯೋಣ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ

Exit mobile version