Site icon Vistara News

ತಾತಯ್ಯ ತತ್ವಾಮೃತಂ: ಶಿಷ್ಯನನ್ನು ಉದ್ಧರಿಸುವ ಕಾರುಣ್ಯಗುರು

kaivara tatayya guru

ಕೈವಾರದ ಶ್ರೀಯೋಗಿ ನಾರೇಯಣ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಗುರುವಿನ ಲಕ್ಷಣ, ಸ್ವರೂಪ, ಎಂತಹ ಗುರುವನ್ನು ಆಶ್ರಯಿಸಬೇಕು ಹೀಗೆ ನಾನಾ ವಿಚಾರ ಚಿಂತನೆಗಳನ್ನು ತಮ್ಮ ತತ್ವಗಳ ಮೂಲಕ ಭಕ್ತರನ್ನು ಎಚ್ಚರಿಸಿದ್ದಾರೆ. ಸಾಧನೆ ಮಾಡಲು ಬಯಸಿದ ಶಿಷ್ಯನ ಮೊದಲ ಗುರಿಯೆಂದರೆ ಉತ್ತಮ ಜ್ಞಾನಿಯಾದ ಗುರುವನ್ನು ಆಶ್ರಯಿಸಬೇಕು. ತಾತಯ್ಯನವರು ಗುರುಗಳನ್ನು ಬೋಧಗುರು ಹಾಗೂ ಬಾಧೆಗುರುವೆಂದು ವಿಂಗಡಿಸಿದ್ದಾರೆ.
ತಾವು ಅನುಭವದಿಂದ ಪಡೆದ ಜ್ಞಾನವನ್ನು ಶಿಷ್ಯನಿಗೆ ಬೋಧಿಸಿ ಗುರಿಯನ್ನು ತಲುಪಿಸುವವರು ಬೋಧಗುರುಗಳು. ಕೇವಲ ವೇಷಮಾತ್ರದಿಂದ ಗುರುವಾಗಿ ಶಿಷ್ಯನನ್ನು ವಂಚಿಸಿ, ಅವನ ಬಳಿ ಇರುವ ಹಣವನ್ನು ಕಬಳಿಸುವ ಗುರುಗಳು ಬಾಧೆಗುರುಗಳು. ತಾತಯ್ಯನವರು ಒಂದು ಪದ್ಯದಲ್ಲಿ “ಕಡತೇರ್ಚೆ ಗುರುಡು ಒಕಕಾಸು ಅಡಗಡುರಾ” ಎಂದಿದ್ದಾರೆ. ಅಂದರೆ ಯಾರಾದರೇ ಶಿಷ್ಯನನ್ನು ಸಾಧನೆಯ ಮೂಲಕ ದಡಸೇರಿಸಬೇಕು ಎಂಬ ಲಕ್ಷ್ಯವನ್ನು ಹೊಂದಿರುತ್ತಾನೋ ಅಂತಹ ಗುರು ಶಿಷ್ಯನಿಂದ ಒಂದೇ ಒಂದು ಕಾಸನ್ನು ಕೇಳುವುದಿಲ್ಲ ಎನ್ನುತ್ತಿದ್ದಾರೆ ತಾತಯ್ಯನವರು. ಗುರು, ಶಿಷ್ಯನ ಚಿತ್ತಾಪಹಾರಿಯಾಗಬೇಕೆ ಹೊರತು, ವಿತ್ತಾಪಹಾರಿಯಾಗಬಾರದು.

ಕರುಣಾಮಯ ಗುರು

ತಾತಯ್ಯನವರು ಗುರುವನ್ನು ಕರುಣಾಮಯನೆಂದು ಕೊಂಡಾಡಿದ್ದಾರೆ. ಶಿಷ್ಯನ ಮೇಲೆ ಕರುಣೆಯುಳ್ಳವನೇ ಕಾರುಣ್ಯಗುರು. ತಾತಯ್ಯನವರು ಅಮರನಾರೇಯಣ ಶತಕದ ಪದ್ಯದಲ್ಲಿ ಗುರುವಿನ ಮಹಿಮೆ, ಶಿಷ್ಯನನ್ನು ಗುರು ಉದ್ದರಿಸುವ ವಿಧಾನ ಬೋಧನೆಯನ್ನು ಈ ರೀತಿಯಾಗಿ ತಿಳಿಸಿದ್ದಾರೆ.

ಕಾರುಣ್ಯಗುರುಡು ತನ ಕರಮು ಶಿರಮುನ ಚೇರ್ಚಿ
ಕದಲನಿಯ್ಯಕ ನಿಲಿಪಿ ಕನುಲು ಮೂಸಿ
ಲೋಚೂಪು ಗುರಿಚೂಪಿ ಲೋನು ಪದಿಲ ಪರಚಿ
ವೆರುವಕುಮನಿ ವಾನಿ ವೆರಪು ತೀರ್ಚಿ||

ಕರುಣಾಮಯನಾದ ಗುರುದೇವನು ತನ್ನ ಕೈಯನ್ನು ಶಿಷ್ಯನ ತಲೆಯ ಮೇಲಿಟ್ಟು ಸ್ಪರ್ಶಿಸುತ್ತಾನೆ. ಕದಲದಂತೆ ಯೋಗಾಸನ ವಿಧಾನವನ್ನು ತಿಳಿಸಿ ಕುಳ್ಳಿರಿಸುತ್ತಾನೆ. ಆ ಬಳಿಕ ಕಣ್ಣು ಮುಚ್ಚಿಕೊಂಡು ಧ್ಯಾನ ಮಾರ್ಗದ ಮೂಲಕ ಒಳನೋಟದ ಗುರಿಯನ್ನು ಸೇರುವ ವಿಧಾನವನ್ನು ತೋರಿಸಿಕೊಡುತ್ತಾನೆ. ಅಂತರಂಗವನ್ನು ಪರಿಶುದ್ಧ ಪಡಿಸುತ್ತಾನೆ. ಭಯಪಡಬೇಡ, ಅಂಜಬೇಡವೆಂದು ತಿಳಿಸಿ ಶಿಷ್ಯನ ಭಯವನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು.

ಸಾಧನೆಯನ್ನು ಬೋಧಿಸುವ ಗುರು ಸಿದ್ಧಪುರುಷನಾಗಿರಬೇಕು. ಯೋಗದ ವಿಚಾರವನ್ನು ಓದಿ ತಿಳಿದುಕೊಂಡಿದ್ದರೆ ಸಾಲದು, ಸಾಧನೆಯ ಮಾರ್ಗವನ್ನು ಅನುಭವಿಸಿ ತಪಸಿದ್ಧಿಯನ್ನು ಪಡೆದ ಯೋಗಿಯಾಗಿರಬೇಕು. ಅಷ್ಟೇ ಅಲ್ಲ ಶಿಷ್ಯನನ್ನು ಉದ್ಧರಿಸುವ ಕಾರುಣ್ಯ ಗುರು ಆಗಿರಬೇಕು. ಈ ಪದ್ಯದಲ್ಲಿ ತಾತಯ್ಯನವರು ಶಿಷ್ಯನನ್ನು ಕಾರುಣ್ಯಗುರು ಹೇಗೆ ಉದ್ಧರಿಸುತ್ತಾನೆ ಎಂಬುದನ್ನು ಹೇಳುತ್ತಿದ್ದಾರೆ.

ಶಿಷ್ಯನ ಎಲ್ಲಾ ಭಾರವನ್ನು ತಾನೇ ಹೊತ್ತುಕೊಂಡು, ಶಿಷ್ಯನ ಆಗುಹೋಗುಗಳನ್ನು ನಿರ್ಧರಿಸಿ, ಸಾಧನೆಯ ಕೊನೆಯ ಹಂತದವರೆಗೂ ಜೊತೆಗಿದ್ದು ಗುರಿ ಸೇರಿಸುವವನೇ ಕಾರುಣ್ಯಗುರು. ಶಿಷ್ಯನು ಉದ್ಧಾರವಾಗಬೇಕಾದರೆ ಗುರುಕಾರುಣ್ಯವನ್ನು ಗಳಿಸಬೇಕು. ಕಾರುಣ್ಯಗುರು ಶಿಷ್ಯನನ್ನು ಯಾವ ರೀತಿಯಾಗಿ ಸಾಧನೆಗೆ ತಯಾರು ಮಾಡುತ್ತಾರೆ ಎಂಬುದನ್ನು ತಿಳಿಸುತ್ತಿದ್ದಾರೆ ತಾತಯ್ಯನವರು.

ಕರುಣಾಳುವಾದ ಗುರು ಮೊದಲಿಗೆ ಶಿಷ್ಯನನ್ನು ಧ್ಯಾನಕ್ಕೆ ಕುಳ್ಳರಿಸುತ್ತಾನೆ. ಧ್ಯಾನಕ್ಕೆ ಕುಳಿತಾಗ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಅತ್ತ-ಇತ್ತ ನೋಡುತ್ತಾನೆ. ಮನಸ್ಸು ಚಂಚಲವಾಗಿರುತ್ತದೆ. ಆಗ ಗುರುದೇವನು ಪ್ರೀತಿ ವಾತ್ಸಲ್ಯದಿಂದ ಶಿಷ್ಯನ ತಲೆಯ ಮೇಲೆ ಅಭಯಹಸ್ತವನ್ನಿಟ್ಟು ಸ್ಪರ್ಶಿಸುತ್ತಾನೆ. ಆ ಕೂಡಲೆ ಶಿಷ್ಯನ ಶರೀರ ಹಾಗೂ ಮನಸ್ಸಿನೊಳಗೆ ಕಾರುಣ್ಯಗುರುವಿನ ತಪೋಮಹಿಮೆಯಿಂದ ಕೂಡಿರುವ ದಿವ್ಯಶಕ್ತಿಯು ಸಂಚರಿಸುತ್ತದೆ. ಆಗ ಶಿಷ್ಯನ ಮನಸ್ಸಿನ ಅಲೆದಾಟ ನಿಲ್ಲುತ್ತದೆ. ಮನಸ್ಸು ಸ್ಥಿರವಾಗುತ್ತದೆ, ಶರೀರ ನಿಶ್ಚಲವಾಗುತ್ತದೆ.

ಈ ರೀತಿಯಾಗಿ ಗುರುದೇವನು ಧ್ಯಾನ ಮಾಡುವ ವಿಧಾನವನ್ನು ಕಲಿಸಿದಾಗ, ಶಿಷ್ಯನ ಹೊರಗಿನ ದೃಷ್ಠಿ ಅಳಿಸಿಹೋಗಿತ್ತದೆ. ಧ್ಯಾನ ಮಾಡುತ್ತಾ, ಮಾಡುತ್ತಾ ಒಳನೋಟ ಪ್ರಾರಂಭವಾಗುತ್ತದೆ. ಆಗ ಗುರು ಒಳನೋಟವನ್ನು ಸಾಧಿಸುವ ಯೋಗರಹಸ್ಯವನ್ನು ಕಲಿಸುತ್ತಾನೆ. ಒಳನೋಟವನ್ನು ಸಾಧಿಸಿದ ನಂತರದ ಮುಂದಿನ ಹಂತವೇ ಅಂತರಂಗ ಶುದ್ಧಿ.

ಶಿಷ್ಯನ ಅಂತರಂಗ ಶುದ್ಧಿಯನ್ನು ಮಾಡುವುದು ಗುರುವಿಗೆ ಒಂದು ದೊಡ್ಡ ಹೊಣೆ. ಧ್ಯಾನ ಮಾಡಬಹುದು, ಪ್ರಾಣಾಯಾಮಗಳಿಂದ ಒಳನೋಟದ ದೃಷ್ಠಿಯೂ ಬರಬಹುದು ಆದರೆ ಅಂತರಂಗದ ಶುದ್ಧಿಯಾಗುವುದು ಬಹಳ ಕಷ್ಟ. ಅಂತರಂಗ ಎಂದರೆ ಮುಖ್ಯವಾಗಿ ಮನಸ್ಸಿನ ಶುದ್ಧಿಯೇ ಆಗಿದೆ. ಏನೆಲ್ಲಾ ಮಾಡಿದರೂ ಮನಸ್ಸಿನ ಕೊಳೆಯನ್ನು ತೊಳೆಯುವುದು ಕಷ್ಟ. ಮನಸ್ಸು ಅವಿದ್ಯೆಗಳಿಂದ ಕೂಡಿದೆ. ಅವಿದ್ಯೆಗಳಿಂದ ಕೂಡಿರುವ ಮನಸ್ಸನ್ನು ಹೇಗೆ ಶುದ್ಧಿಪಡಿಸಬೇಕು ಎಂಬುದು ಕಾರುಣ್ಯಗುರುವಿಗೆ ಮಾತ್ರ ತಿಳಿದಿರುತ್ತದೆ. ಅಂತರಂಗದ ಶುದ್ಧಿಯನ್ನು ಮಾಡಿದ ನಂತರ ಗುರು ಮನಸ್ಸನ್ನು ಸಾಧನೆಗೆ ಸಿದ್ಧಪಡಿಸುತ್ತಾನೆ. ಆಗ ಶಿಷ್ಯನು ಸಾಧನೆ ನನ್ನಿಂದ ಆಗುವುದೋ ಇಲ್ಲವೋ ಎಂದು ಕಳವಳ ಪಡುತ್ತಾ ಭಯಪಡುತ್ತಿರುವಾಗ, ಗುರು ಶಿಷ್ಯನ ಭೀತಿಯನ್ನು ತೊಲಗಿಸುತ್ತಾನೆ. ನಿಶ್ಚಯವಾಗಿಯೂ ಸಮಾಧಿಯೋಗವನ್ನು ಸಾಧಿಸಿ, ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತೀಯೆಂದು ಭರವಸೆಯನ್ನು ಕೊಟ್ಟು ಶಿಷ್ಯನನ್ನು ಹುರಿದುಂಭಿಸುತ್ತಾನೆ.

ಗಗನಜ್ಯೋತಿ ತೋರುವ ಗುರು

ಶಿಷ್ಯನ ಭಯ ನಿವಾರಣೆ ಮಾಡಿದ ಗುರು ಗಗನ ಜ್ಯೋತಿಯನ್ನು ತೋರುತ್ತಾನೆ ಎಂದಿದ್ದಾರೆ ತಾತಯ್ಯನವರು. ಶಿಷ್ಯನಿಗೆ ಸಾಧನೆ ಮಾರ್ಗವನ್ನು ತೋರುತ್ತಾ ಗುರು ಏನು ಮಾಡುತ್ತಾನೆ? ತಾತಯ್ಯನವರು ಹೀಗೆ ಹೇಳಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಚಿಂತೆ ಪಡುವುದು ಹುಚ್ಚುತನವಯ್ಯಾ

ಅಜುಡು ವ್ರಾಸಿನ ವ್ರಾತ ಅಟ್ಟೆ ತುಡಿಸಿವೇಶಿ
ಬದುಲು ಚಕ್ಕಗವ್ರಾಶಿ ಭದ್ರಪರಚಿ
ಭಾಟ ಚಕ್ಕಗ ತೀಸಿ ಭಾನುಚಂದ್ರುಲ ಜೂಪಿ
ಮನಸು ಸಹಸ್ರಕಮಲ ಮಂಡಲಮು ಚೇರ್ಚಿ
ಗಗನ ಜ್ಯೋತಿನಿ ಚೂಪಿನ ಘನುಡು ಗುರುಡು
ಇತರ ಗುರುವುಲನೇಕುಲು ವುಂದುರಿಲನು||

ಬ್ರಹ್ಮನು ಬರೆದ ಬರಹವನ್ನು ಪೂರ್ಣವಾಗಿ ಅಳಿಸಿಹಾಕಿ, ಬದಲಿ ಬರಹವನ್ನು ಸ್ಪಷ್ಟವಾಗಿ ಬರೆದು ಭದ್ರಪಡಿಸುತ್ತಾನೆ. ನಂತರ ಶಿಷ್ಯನ ಸಾಧನೆಯ ದಾರಿಯನ್ನು ಸುಗಮವಾಗಿ ರೂಪಿಸಿ ಭಾನುಚಂದ್ರರನ್ನು ದೇಹದಲ್ಲಿಯೇ ತೋರಿಸಿಕೊಡುತ್ತಾನೆ. ಮನಸ್ಸನ್ನು ಸಹಸ್ರಪದ್ಮದ ಮಂಡಲಕ್ಕೆ ಹೇಗೆ ಸೇರಿಸಬೇಕು ಎಂಬ ವಿದ್ಯೆಯ ಸಿದ್ಧಿಯನ್ನು ಕಲಿಸಿಕೊಟ್ಟು ಸಹಸ್ರಾರಚಕ್ರದಲ್ಲಿ ಸೇರಿಸುತ್ತಾನೆ. ಹೀಗೆ ಗಗನಜ್ಯೋತಿಯನ್ನು ತೋರಿಸಿಕೊಟ್ಟ ಸಿದ್ಧಿಪುರುಷನೇ ನಿಜವಾದ ಯೋಗಗುರು. ಆದರೆ ಲೋಕದಲ್ಲಿ ಇಂತಹ ಯೋಗ್ಯತೆ ಇಲ್ಲದ ಇತರ ಗುರುಗಳು ಅನೇಕರಿದ್ದಾರೆ ಎನ್ನುತ್ತಿದ್ದಾರೆ ತಾತಯ್ಯನವರು.

ಗಗನವೆಂದರೆ ಆಕಾಶ. ಗಗನಜ್ಯೋತಿ ಎಂದರೆ ಆಕಾಶದೀಪ. ಗುರು ಈ ದೀಪವನ್ನು ತೋರಬೇಕಾದರೆ ಮೊದಲು ಆತನು ದೃಷ್ಟಿಸಿದ್ಧಿಯನ್ನು ಪಡೆದ ವಿಕ್ರಮಯೋಗಿಯಾಗಿರಬೇಕು. ಕೈವಾರ ತಾತಯ್ಯನವರು ವಿಕ್ರಮಯೋಗಿಗಳು. ತಾತಯ್ಯನವರ ಬೋಧನೆಗಳನ್ನು ಮನನ ಮಾಡೋಣ.. ಗಗನಜ್ಯೋತಿಯ ದರ್ಶನವನ್ನು ಕಾಣೋಣ..

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ರಾಮನ ಭಜಿಸು ಸದಾ ಮನಸೇ…

Exit mobile version