ಬಿಂದು ಫಿಜ್ ಜೀರಾ ಮಸಾಲಾ! ನೀವು ಈ ಅಪ್ಪಟ ಹಾಗೂ ಸ್ವಾದಿಷ್ಟಕರ ಸ್ವದೇಶಿ ತಂಪು ಪಾನೀಯವನ್ನು ಸೇವಿಸಿರಬಹುದು. ಭಾರತದಲ್ಲಿ ಇಂದು ಮನೆ ಮಾತಾಗಿರುವ ಬಿಂದು ಫಿಜ್ ಜೀರಾ ಮಸಾಲಾ, ದಕ್ಷಿಣ ಕನ್ನಡದ ಗ್ರಾಮೀಣ ಪರಿಸರದ ಪುತ್ತೂರು ಮೂಲದ ಮೆಗಾ ಕಾರ್ಪೊರೇಟ್ ಬ್ರಾಂಡ್ ಎಂದರೆ ಅಚ್ಚರಿಯಾಗಬಹುದು. ಮಾತ್ರವಲ್ಲದೆ ಈ ಬ್ರಾಂಡ್ ಜಾಗತಿಕ ಬ್ರಾಂಡ್‌ಗಳಾದ ಪೆಪ್ಸಿ-ಕೋಕಾ ಕೋಲಾದ ಎದುರು ಯಶಸ್ವಿಯಾಗಿ ಪೈಪೋಟಿ ನೀಡಿದೆ. (Brand story) ಈ ಅಂತಾರಾಷ್ಟ್ರೀಯ ಬ್ರಾಂಡ್‌ಗಳೂ ಜೀರಾ ಮಾದರಿಯ ಬೇರೆ ಬೇರೆ ಪಾನೀಯಗಳನ್ನು ಬಿಡುಗಡೆಗೊಳಿಸಿದ್ದರೂ, ಬಿಂದು ಜೀರಾವನ್ನು ಅಲುಗಾಡಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಸರಿಸಾಟಿ ಬೇರೆ ಇಲ್ಲ ಎನ್ನುವಷ್ಟರಮಟ್ಟಿಗೆ ಜನಪ್ರಿಯವಾಗಿದೆ!
ಭಾರತದ ಕಾರ್ಪೊರೇಟ್ ವಲಯದ ದಿಗ್ಗಜ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಕೂಡ ಬಿಂದು ಜೀರಾ ಬ್ರಾಂಡ್ ಅನ್ನು ಖರೀದಿಸಲು ಇತ್ತೀಚೆಗೆ ಕೇಳಿದ್ದಾರೆ. ಆದರೆ ಇದರ ಉತ್ಪಾದಕ ಎಸ್‌ಜಿ ಕಾರ್ಪೊರೇಟ್ಸ್, ತಾನು ಬಿಂದು ಜೀರಾ ಬ್ರಾಂಡ್ ಅನ್ನು ಮತ್ತೊಂದು ಕಂಪನಿಗೆ ಮಾರಾಟಕ್ಕಿಟ್ಟಿಲ್ಲ ಎಂದಿದೆ.
ಬಿಂದು ಜೀರಾ ( Bindu jeera) ಬ್ರಾಂಡ್‌ನ ಅದ್ಭುತ ಯಶೋಗಾಥೆ ಇವತ್ತು ಕಾರ್ಪೊರೇಟ್ ವಲಯದ ಹತ್ತು ಹಲವಾರು ಮಿಥ್ಯೆಗಳನ್ನು ಅಳಿಸಿ ಹಾಕಿದೆ. ಭಾರತದ ಆಹಾರ ಮತ್ತು ಸಂಸ್ಕರಣೆ ಉದ್ದಿಮೆಯ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನೇ ಬರೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಂದು ಜೀರಾದ ಸ್ಥಾಪಕರಾದ ಸತ್ಯ ಶಂಕರ ಸಾಧನೆ, ನಿಸ್ಸಂದೇಹವಾಗಿ ಯಾವುದೇ ಪ್ರೇರಣಾದಾಯಿ ಸಿನಿಮಾದ ಕಥೆಯನ್ನೂ ಮೀರಿಸುವಷ್ಟು ಸ್ಪೂರ್ತಿದಾಯಕ. ಜಗತ್ತಿನ ಪ್ರಮುಖ ಬಿಸಿನೆಸ್ ಸ್ಕೂಲ್‌ಗಳಲ್ಲಿ ಅಧ್ಯಯನ ಮಾಡಬೇಕಾದ ಬ್ರಾಂಡ್ ಇದು ಎಂದರೆ ಉತ್ಪ್ರೇಕ್ಷೆಯಲ್ಲ. ರಾಜ್ಯ ಸರ್ಕಾರ ಕೂಡ ಇಂಥ ಮಾದರಿ ಉದ್ಯಮಿಗಳ ಯಶೋಗಾಥೆಯನ್ನು ಶಾಲಾ ಮಕ್ಕಳಿಗೆ ಪಠ್ಯವಸ್ತುವಾಗಿಸಬಹುದು.
ಇವರೇ ಬಿಂದು ಜೀರಾದ ರೂವಾರಿ ಸತ್ಯ ಶಂಕರ
ಇವತ್ತು ಬಿಂದು ಜೀರಾ ಬ್ರಾಂಡ್‌ನ ಎಸ್‌ಜಿ ಗ್ರೂಪ್ ವಾರ್ಷಿಕ 500 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ದೇಶದ ಪ್ರಮುಖ ಆಹಾರ ಮತ್ತು ತಂಪು ಪಾನೀಯ ಬ್ರಾಂಡ್ ಆಗಿ ಹೊರಹೊಮ್ಮಿದೆ. ವಾರ್ಷಿಕ 1000 ಕೋಟಿ ರೂ. ವಹಿವಾಟು ನಡೆಸುವ ಹಾಗೂ ಬಳಿಕ ಷೇರು ಮಾರುಕಟ್ಟೆಯನ್ನು ಐಪಿಒ ಮೂಲಕ ಪ್ರವೇಶಿಸುವ ಮಹತ್ವಾಕಾಂಕ್ಷೆಯನ್ನೂ ಹೊಂದಿದೆ. ದೇಶದ ಪ್ರತಿಯೊಂದು ರಾಜ್ಯದಲ್ಲೂ ಉತ್ಪಾದನಾ ಘಟಕಗಳನ್ನು ತೆರೆಯುವ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸಡ್ಡು ಹೊಡೆಯುವ ಸನ್ನಾಹದಲ್ಲಿದೆ. ಇಂಥ ದಿಗ್ಗಜ ಉದ್ದಿಮೆಯನ್ನು ಕಟ್ಟಿದ ಧೀಮಂತ ಉದ್ಯಮಿ, ಎಸ್‌ಜಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯ ಶಂಕರ ಅವರು, ದಕ್ಷಿಣ ಕನ್ನಡ ಪುತ್ತೂರಿನ ಬೆಳ್ಳಾರೆಯಲ್ಲಿನ ಕೃಷಿಕ ಕುಟುಂಬದಲ್ಲಿ ಜನಿಸಿದರು. ಸಾಮಾನ್ಯ ಮಧ್ಯಮ ವರ್ಗದ ಆದಾಯವಿರುವ ಕುಟುಂಬದಲ್ಲಿ ಬೆಳೆದು ಪಿಯುಸಿ ಬಳಿಕ ಓದು ಮುಂದುವರಿಸಲು ಕಷ್ಟವಾಗಿ ನಿಲ್ಲಿಸಿದರು. ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎಂದು ಸಾಲದಲ್ಲಿ ಒಂದು ಆಟೊ ರಿಕ್ಷಾವನ್ನು ಖರೀದಿಸಿ ಟೂರಿಸ್ಟ್ ಸರ್ವೀಸ್ ಆರಂಭಿಸಿದ್ದರು ಸತ್ಯ ಶಂಕರ. ಹೀಗೆ ಪುತ್ತೂರಿನ ಗ್ರಾಮೀಣ ಪರಿಸರದಲ್ಲಿ 1984ರಲ್ಲಿ ಕೆಲ ಕಾಲ ಆಟೋ ರಿಕ್ಷಾ ಓಡಿಸುತ್ತಿದ್ದ ಸತ್ಯಶಂಕರ ಅವರಲ್ಲಿ ಅದ್ಭುತವಾದ ಕನಸು, ಛಲ, ಕಠಿಣ ಪರಿಶ್ರಮ, ಬುದ್ಧಿಮತ್ತೆ, ಅನ್ವೇಷಕ ಪ್ರವೃತ್ತಿ, ಇಚ್ಛಾಶಕ್ತಿ ಇತ್ತು. ಮುಂದೊಂದು ದಿನ ದೊಡ್ಡ ಉದ್ಯಮಿಯಾಗಿ ತಾನೂ ಉದ್ಧಾರವಾಗಬೇಕು, ಇತರರಿಗೂ, ಸಮಾಜಕ್ಕೂ ನೆರವಾಗಬೇಕು, ಉದ್ಯೋಗ ಸೃಷ್ಟಿಸಬೇಕು ಎಂಬ ಗುರಿ ಇತ್ತು. ಹೀಗಾಗಿ ಆಟೊ ರಿಕ್ಷಾದ ಸಾಲ ತೀರಿದ ಕೂಡಲೇ ಅದನ್ನು ಮಾರಿ, ಒಂದು ಡೀಸೆಲ್ ಅಂಬಾಸಿಡರ್ ಕಾರು ಖರೀದಿಸಿದರು. ಬಳಿಕ 1987ರಲ್ಲಿ ಕ್ಷಿಪ್ರವಾಗಿ ಆಟೊಮೊಬೈಲ್ ಬಿಡಿಭಾಗಗಳ ಮಾರಾಟ ಶುರು ಮಾಡಿದರು. ಆಟೊಮೊಬೈಲ್ ಬಿಡಿಭಾಗ ಖರೀದಿಸುತ್ತಿದ್ದ ಜನ ಟೈರ್ ಇದೆಯಾ ಎನ್ನುತ್ತಿದ್ದರು. ಟೈರ್ ಡೀಲರ್‌ಶಿಪ್ ಖರೀದಿಸಿದರು. ಬಳಿಕ ಆಟೊಮೊಬೈಲ್ ಫೈನಾನ್ಸ್ ಆರಂಭಿಸಿದರು. 1994ರಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಹಣಕಾಸು ನೆರವು ನೀಡಿದರು. ಕ್ರಮೇಣ ಸತ್ಯ ಶಂಕರ ಅವರಲ್ಲಿದ್ದ ಉದ್ಯಮಿ ಮುನ್ನಡೆದ.
ಬಿಂದು ಕುಡಿಯುವ ನೀರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾಗಿಯೇ ಶುದ್ಧ ಮಳೆ ನೀರು ಲಭ್ಯ. ಬೋರ್‌ವೆಲ್ ಕೊರೆದರೆ ಶುದ್ಧ ಅಂತರ್ಜಲ ದೊರೆಯುತ್ತದೆ. ಹೀಗಾಗಿ 2000ರಲ್ಲಿ ಬಿಂದು ಬ್ರಾಂಡ್‌ನ ಕುಡಿಯುವ ನೀರಿನ ಬಾಟಲಿಗಳ ಮಾರಾಟ ಆರಂಭಿಸಿದರು. ಇದರೊಂದಿಗೆ ಆಹಾರ ಮತ್ತು ಪಾನೀಯ ಉದ್ದಿಮೆಗೆ ಸತ್ಯ ಶಂಕರ್ ನಾಂದಿ ಹಾಡಿದ್ದರು. ಬಿಂದು ಕುಡಿಯುವ ನೀರಿನ ಮಾರಾಟ ಅವರಿಗೆ ಅಪೂರ್ವ ಯಶಸ್ಸನ್ನು ತಂದುಕೊಟ್ಟಿತು.
ಬಿಂದು ಜೀರಾ ಐಡಿಯಾ ಹೊಳೆದದ್ದು ಹೇಗೆ?!
ಒಂದು ಸಲ ಸತ್ಯ ಶಂಕರ ಅವರು ಉತ್ತರಭಾರತದ ಪ್ರವಾಸದಲ್ಲಿದ್ದರು. ಆಗ ಒಂದು ಕಡೆ ಜೀರಿಗೆ ಪುಡಿ ಮಿಶ್ರಿತ ಜ್ಯೂಸ್‌ಗೆ ಸೋಡಾ ಬೆರೆಸಿ ಮಾರಾಟ ಮಾಡುತ್ತಿದ್ದುದನ್ನು ಕಂಡರು. ಉತ್ತರಭಾರತದಲ್ಲಿ ಇದು ಸಾಂಪ್ರದಾಯಿಕ, ದೇಸಿ ಪಾನೀಯಗಳಲ್ಲೊಂದು. ಈ ಜೀರಾ ಶರಬತ್ತಿನ ರುಚಿ ನೋಡಿದ ಸತ್ಯ ಶಂಕರ ಅವರಲ್ಲಿ “ಯುರೇಕಾʼ ಕ್ಷಣ ಹೊಳೆದಿತ್ತು. ಈ ದೇಸಿ ಪಾನೀಯ ತಯಾರಿಕೆಗೆ ತಂತ್ರಜ್ಞಾನ, ಗುಣಮಟ್ಟ, ಪ್ಯಾಕೇಜಿಂಗ್ ಮತ್ತು ಕಾರ್ಪೊರೇಟ್ ಸ್ಪರ್ಶ ನೀಡಿ ಕಾರ್ಬೊನೇಟೆಡ್ ಪಾನೀಯಗಳ ವಿಭಾಗದಲ್ಲಿ ಹೊಸ ಮಾದರಿಯ ಉತ್ಪನ್ನವನ್ನು ಏಕೆ ಮಾರಾಟ ಮಾಡಬಾರದು ಎಂದು ಆಲೋಚಿಸಿದರು. ಈ ಪರಿಕಲ್ಪನೆಯೇ ಬಿಂದು ಫಿಜ್ ಜೀರಾ ಮಸಾಲಾ ಆಗಿ ಇತಿಹಾಸ ಸೃಷ್ಟಿಸಿತು!
ಆರಂಭದಲ್ಲಿ ಈ ಹೊಸ ಉತ್ಪನ್ನವನ್ನು ಜನರಿಗೆ ಪರಿಚಯಿಸಲು ಸತ್ಯಶಂಕರ ಅವರ ತಂಡ ಹೋರಾಟ ನಡೆಸಿತ್ತು. ಕೋಲಾ ಇರುವಾಗ ಟಾನಿಕ್‌ನ ಹಾಗೆ ಇರುವ ಬಿಂದು ಜೀರಾವನ್ನು ಯಾರು ಕುಡಿಯುತ್ತಾರೆ? ಎಂದು ಕೆಲವರು ಟೀಕಿಸಿದ್ದರಂತೆ. ಆದರೆ ನಂತರ ಆಗಿದ್ದೇ ಪವಾಡ! ಉತ್ತಮ ಗುಣಮಟ್ಟದ ಜೀರಾ ಕ್ರಮೇಣ ಜನರ ಮನಗೆದ್ದಿತು. ಬಿಂದು ಜೀರಾದ ಸ್ವಾದ ಮಾರುಕಟ್ಟೆಯಲ್ಲಿ ಗೆಲ್ಲಲಿದೆ ಎಂದು ಸತ್ಯ ಶಂಕರ ಅವರಿಗೆ ಅರಿವಾಗಿತ್ತು. ಬಿಂದು ಜೀರಾ ಮತ್ತು ಶುಂಠಿ ಅಸಾಂಪ್ರದಾಯಿಕ ಉತ್ಪನ್ನಗಳು, ಪಾನೀಯ ಉತ್ಪನ್ನಗಳಿಗೆ ದೇಸಿ ಸ್ಪರ್ಶ ನೀಡುವ ಈ ಉತ್ಪನ್ನ ಯಶಸ್ವಿಯಾಗಬಹುದು ಎಂಬ ಮುನ್ನೋಟ ಅವರಲ್ಲಿತ್ತು. ಕರ್ನಾಟಕ, ಆಂಧ್ರಪ್ರದೇಶದ ಮೂಲೆ ಮೂಲೆಯಲ್ಲೂ ಇಂದು ಬಿಂದು ಜೀರಾ ಸಿಗುತ್ತದೆ!
60ಕ್ಕೂ ಹೆಚ್ಚು ಉತ್ಪನ್ನಗಳ ವೈವಿಧ್ಯ!
ಬಿಂದು ಜೀರಾ ಒಂದೇ ಅಲ್ಲ, ೬೦ಕ್ಕೂ ಹೆಚ್ಚು ಪಾನೀಯ ಮತ್ತು ಕುರುಕಲು ತಿಂಡಿಗಳ ಉತ್ಪನ್ನಗಳನ್ನು ಎಸ್‌ಜಿ ಗ್ರೂಪ್ ಹೊಂದಿದೆ. ನೀವು ಸಿಪ್ ಆನ್ ಹಣ್ಣಿನ ರಸಗಳನ್ನು ಸೇವಿಸಿರಬಹುದು. ಸ್ನಾಕ್‌ಅಪ್ , ಫ್ರುಜೋನ್, ಝಿವೊ ಸೋಡಾ, ಬಿ-ಹಾಟ್ ಎನರ್ಜಿ ಡ್ರಿಂಕ್ ಖರೀದಿಸಿರಬಹುದು. ಎರಡು ದಶಕಗಳ ಹಿಂದೆ ಬಿಂದು ವಾಟರ್ ಕುಡಿದಿರಬಹುದು. ಇದೆಲ್ಲವೂ ಎಸ್‌ಜಿ ಗ್ರೂಪ್‌ನ ಉತ್ಪನ್ನಗಳಾಗಿವೆ. ಎಸ್‌ಜಿ ಗ್ರೂಪ್ ದೇಶದ 12 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಒಳಗೊಂಡಿದೆ. ಕರ್ನಾಟಕದಲ್ಲಿ 11% ಮಾರುಕಟ್ಟೆ ಪಾಲು, 520 ವಿತರಕರು, 262 ಉದ್ಯೋಗಿಗಳ ತಂಡವನ್ನು ಹೊಂದಿದೆ. ಒಟ್ಟು 1,000ಕ್ಕೂ ಹೆಚ್ಚು ಸಿಬ್ಬಂದಿ ಮಾರಾಟ ವಿಭಾಗದಲ್ಲಿ ಇದ್ದಾರೆ. 3 ಸಾವಿರ ಉದ್ಯೋಗಿಗಳಿಗೆ ನೇರ ಉದ್ಯೋಗವನ್ನು ಕಲ್ಪಿಸಲಾಗಿದೆ. ಸಾವಿರಾರು ಮಂದಿಗೆ ಪರೋಕ್ಷ ಉದ್ಯೋಗ ಲಭಿಸಿದೆ.
ಪ್ರಮುಖ ಉತ್ಪನ್ನಗಳು: ಬಿಂದು ಪ್ಯಾಕೇಜ್ಡ್ ವಾಟರ್, ಬಿಂದು ಫಿಜ್ ಜೀರಾ ಮಸಾಲಾ, ಝಿವೊ ಸೋಡಾ, ಫ್ರುಜನ್-ಫಿಝಿ ಕ್ಲೌಡಿ ಲೆಮನ್, ಫಿಜ್ ಆರೆಂಜ್, ಫಿಝಿ ಗ್ರೀನ್ ಆಪಲ್, ಸಿಪ್ಪೊನ್ ಮ್ಯಾಂಗೊ ಡ್ರಿಂಕ್, ಗುವಾ ಡ್ರಿಂಕ್, ಚಿಪ್ಸ್, ಪಫ್ಸ್, ಮೂಂಗ್ ದಾಲ್, ಬಿಂದು ಗೋಲ್ಡ್ ಅಡುಗೆ ಎಣ್ಣೆ.
ಎಸ್‌ಜಿ ಗ್ರೂಪ್‌ನ ಆರಂಭ, ಬೆಳವಣಿಗೆಯ ಇತಿಹಾಸ
1984 | ಪುತ್ತೂರಿನಲ್ಲಿ ಸತ್ಯ ಶಂಕರ ಅವರಿಂದ ಆಟೊ ರಿಕ್ಷಾ ಟೂರಿಸ್ಟ್ ಸೇವೆ ಆರಂಭ. |
1985 | ರಿಕ್ಷಾದಿಂದ ಕಾರುಗಳ ಸೇವೆಗೆ ಬಡ್ತಿ |
1987 | ಆಟೊಮೊಬೈಲ್ ಬಿಡಿ ಭಾಗಗಳ ಮಾರಾಟ |
1989 | ಪ್ರಮುಖ ಟೈರ್‌ಗಳ ಡೀಲರ್‌ಶಿಪ್ |
1994 | ಆಟೊಮೊಬೈಲ್ ಫೈನಾನ್ಸ್ |
2000 | ಬಿಂದು ಬ್ರಾಂಡ್‌ನ ಕುಡಿಯುವ ನೀರು ಬಿಡುಗಡೆ |
2002 | ಬಿಂದು ಫಿಜ್ ಜೀರಾ ಮಸಾಲಾ ತಂಪು ಪಾನೀಯ ಬಿಡುಗಡೆ |
2004 | ಸಿಪ್‌ಆನ್ ಬ್ರಾಂಡ್ ಉತ್ಪನ್ನದ ಲೋಕಾರ್ಪಣೆ |
2009 | ಸ್ನ್ಯಾಕ್‌ಅಪ್ ರಿಲೀಸ್ |
2012 | ಫ್ರುಜೋನ್ ಬ್ರಾಂಡ್ ಅನಾವರಣ |
2017 | ಹೈದರಾಬಾದ್‌ನಲ್ಲಿ ಕಾರ್ಖಾನೆಯ ವಿಸ್ತರಣೆ, ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಚೇರಿ |
ದಿನಕ್ಕೆ ಸರಾಸರಿ 20 ಲಕ್ಷ ಬಾಟಲಿ ಬಿಂದು ಜೀರಾ ಉತ್ಪಾದನೆ!
ಎಸ್‌ಜಿ ಗ್ರೂಪ್‌ನ 500 ಕೋಟಿ ರೂ. ವಾರ್ಷಿಕ ವಹಿವಾಟಿನಲ್ಲಿ ಅರ್ಧದಷ್ಟು, ಅಂದರೆ 250 ಕೋಟಿ ರೂ. ವಹಿವಾಟು ಬಿಂದು ಜೀರಾ ಒಂದರಿಂದಲೇ ಸಿಗುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಸೇಲ್ಸ್ ಇದೆ. ಅದು ಹೊರತುಪಡಿಸಿದರೆ ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರದಲ್ಲಿ ಎಸ್‌ಜಿ ಗ್ರೂಪ್‌ನ ಉತ್ಪನ್ನಗಳು ಮಾರಾಟವಾಗುತ್ತದೆ. ದೂರದ ಪಶ್ಚಿಮ ಬಂಗಾಳದಲ್ಲಿ ಕೂಡ ವಾರ್ಷಿಕ 10 ಕೋಟಿ ರೂ. ವಹಿವಾಟು ಇದೆ. ಕುಡಿಯುವ ನೀರು, ಕಾರ್ಬೊನೇಟೆಡ್ ಪಾನೀಯ, ಅಪ್ಪಟ ಹಣ್ಣಿನ ರಸ, ಸ್ನಾಕ್ಸ್ (ಕುರುಕಲು) ಒಟ್ಟು 65 ವಿಧದದ ಪಾನೀಯಗಳ ಪಟ್ಟಿಯೇ ಎಸ್‌ಜಿ ಗ್ರೂಪ್‌ನಲ್ಲಿದೆ.
ಉತ್ಪಾದನಾ ಘಟಕಗಳು ಎಲ್ಲಿವೆ? ಪುತ್ತೂರು ಮತ್ತು ಹೈದರಾಬಾದ್‌ನಲ್ಲಿ ಈಗಾಗಲೇ ಎಸ್‌ಜಿ ಗ್ರೂಪ್‌ನ ಉತ್ಪಾದನಾ ಘಟಕವಿದೆ. ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ.
35 ಲಕ್ಷ ರೂ.ಗಳಿಂದ 500 ಕೋಟಿ ರೂ.ಗೆ ವಹಿವಾಟು ಜಿಗಿತ ಹೇಗೆ?
೨೦೦೧ರಲ್ಲಿ ವಾರ್ಷಿಕ 35 ಲಕ್ಷ ರೂ.ಗಳಿದ್ದ ಎಸ್‌ಜಿ ಗ್ರೂಪ್ ವಹಿವಾಟು, 2005ರಲ್ಲಿ 6 ಕೋಟಿ ರೂ.ಗೆ ಜಿಗಿಯಿತು. ಬಳಿಕ 2010ರಲ್ಲಿ 100 ಕೋಟಿ ರೂ.ಗೆ ವೃದ್ಧಿಸಿತು. 2013ರಲ್ಲಿ 250 ಕೋಟಿ ರೂ.ಗೆ ತಲುಪಿತು. ಈಗ 500 ಕೋಟಿ ರೂ.ಗಳ ವಹಿವಾಟು! ಇದು ಹೇಗೆ ಸಾಧ್ಯವಾಯಿತು?
ಸಂದೇಹವೇ ಬೇಡ, ಬಿಂದು ಜೀರಾದ ಅದ್ಭುತ ಯಶಸ್ಸು, ಎರಡನೆಯದಾಗಿ ವೈವಿಧ್ಯಮಯ ಉತ್ಪನ್ನಗಳು, ಸತ್ಯ ಶಂಕರ್ ಅವರ ಸಾರಥ್ಯ, ಸಾವಿರಕ್ಕೂ ಹೆಚ್ಚು ಸೇಲ್ಸ್ ಟೀಮ್ ಮತ್ತು ಕಂಪನಿಯ ಉದ್ಯೋಗಿಗಳು ಶ್ರಮ ಕಾರಣವಾಗಿದೆ. ಬಿಂದು ವಾಟರ್‌ಗೆ ಸೀಮಿತವಾಗಿರುತ್ತಿದ್ದರೆ, 60ಕ್ಕೂ ಹೆಚ್ಚು ಉತ್ಪನ್ನ ವೈವಿಧ್ಯದ ಅನ್ವೇಷಣೆಯನ್ನು ಒಂದು ವೇಳೆ ಮಾಡದೆ ಇರುತ್ತಿದ್ದರೆ, ಈ ಮಟ್ಟದ ಸಕ್ಸಸ್ ಸಾಧ್ಯವಾಗುತ್ತಿರಲಿಲ್ಲ. ನಿಮಗೆ ಆಶ್ಚರ್ಯವಾಗಬಹುದು. ಎಸ್‌ಜಿ ಗ್ರೂಪ್ ಹಾಸನದಿಂದ ಆಲೂಗಡ್ಡೆ ತರಿಸುತ್ತದೆ. ಸ್ಥಳೀಯವಾಗಿ ಮಾವಿನ ಹಣ್ಣುಗಳನ್ನು ಖರೀದಿಸುತ್ತದೆ. ಇಸ್ರೇಲ್, ಚೀನಾದಿಂದಲೂ ಕೆಲವು ವಿಶಿಷ್ಟ ಹಣ್ಣುಗಳನ್ನು ತರಿಸುತ್ತದೆ. ಏಕೆಂದರೆ ಅವುಗಳು ಭಾರತದಲ್ಲಿ ಸಿಗುವುದಿಲ್ಲ. ಇಂಥ ಸಾಹಸ, ಕ್ರಿಯಾಶೀಲತೆ ಮುಖ್ಯವಾಗುತ್ತದೆ. ಹೀಗಾಗಿ ಕುಡಿಯುವ ನೀರಿನಿಂದ ಎನರ್ಜಿ ಡ್ರಿಂಕ್ಸ್, ಕಾರ್ಬೊನೇಟೆಡ್ ಡ್ರಿಂಕ್ಸ್, ಸ್ನ್ಯಾಕ್ಸ್ ಎಲ್ಲವನ್ನೂ ತಯಾರಿಸುತ್ತದೆ. ಗುಣಮಟ್ಟ ನಿಯಂತ್ರಣಕ್ಕೆ ಸುಸಜ್ಜಿತ ಪ್ರಯೋಗಶಾಲೆಯನ್ನು ಒಳಗೊಂಡಿದೆ.
ಅಸಾಧ್ಯವಾಗದಿರುವುದು ಯಾವುದೂ ಇಲ್ಲ: ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ, ಕಷ್ಟ ಸಾಧ್ಯವಾಗಿರಬಹುದು. ಅಂದರೆ ಕಠಿಣ ಪರಿಶ್ರಮದಿಂದ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸತ್ಯಶಂಕರ್. ಎರಡನೆಯದಾಗಿ ಅವರ ಸೃಜನಶೀಲತೆಯನ್ನು ಗಮನಿಸಬೇಕು. ಋಣಾತ್ಮಕ ಮನಸ್ಸಿನವರು ಯಾವಾಗಲೂ ಇರುತ್ತಾರೆ, ಆಗ ವೈಫಲ್ಯವೂ ಸಹಜವೇ, ಯಶಸ್ಸನ್ನು ಸಾಧಿಸಬೇಕು ಎಂಬ ಗುರಿ ಇದ್ದರೆ ಸಾಧ್ಯ ಎನ್ನುವುದು ಸತ್ಯ ಶಂಕರ ಅವರ ನಂಬಿಕೆ.
ಇದನ್ನೂ ಓದಿ:Brand story | ಕಾಲೇಜು ಡ್ರಾಪ್‌ಔಟ್ ಹುಡುಗ ಡಿಮಾರ್ಟ್ ಸ್ಟೋರ್ ತೆರೆದು ರಿಟೇಲ್ ಕಿಂಗ್ ಆಗಿದ್ದು ಹೇಗೆ?!
ಭಾರತದಲ್ಲಿ ಆಹಾರ ಮತ್ತು ಪಾನೀಯಗಳ ಮಾರುಕಟ್ಟೆ ಅಗಾಧವಾಗಿ ಬೆಳೆಯುತ್ತಿದೆ. ಐಸಿಆರ್‌ಐಇಆರ್ ವರದಿಯ ಪ್ರಕಾರ 2030ರ ವೇಳೆಗೆ ಮದ್ಯ ಹೊರತುಪಡಿಸಿದ (Non-alcoholic beverage) ಪಾನೀಯಗಳ ಮಾರುಕಟ್ಟೆಯ ಗಾತ್ರ 1.47 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಗಾತ್ರ ಎಂದರೆ ವಾರ್ಷಿಕ ಬಿಸಿನೆಸ್ ಮೊತ್ತ. 2019ರಲ್ಲಿ ಈ ಮೌಲ್ಯ 76,100 ಕೋಟಿ ರೂ. ಇತ್ತು. ಅಂದರೆ ಈ ಪಾನೀಯಗಳ ಮಾರುಕಟ್ಟೆ ಬೆಳೆಯುತ್ತಿರುವ ವೇಗವನ್ನು ಗಮನಿಸಿ! ಇದೇ ಕಾರಣಕ್ಕೆ ಇವತ್ತು ರಿಲಯನ್ಸ್ ಇಂಡಸ್ಟ್ರೀಸ್ ಎಫ್‌ಎಂಸಿಜಿ ವಲಯವನ್ನು ಈ ವರ್ಷ ಪ್ರವೇಶಿಸುವುದಾಗಿ ತಿಳಿಸಿದೆ. ” ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚೆಗೆ ಬಿಂದು ಜೀರಾ ಬ್ರಾಂಡ್ ಅನ್ನು ಖರೀದಿಸಲು ಪ್ರಸ್ತಾಪಿಸಿತ್ತು. ಆದರೆ ನಾವು ಈ ಬ್ರಾಂಡ್ ಅನ್ನು ಮಾರಾಟ ಮಾಡುವುದಿಲ್ಲ. ನಾವೇ ಮತ್ತಷ್ಟು ವಿಸ್ತರಿಸುತ್ತೇವೆʼʼ ಎನ್ನುತ್ತಾರೆ ಸತ್ಯಶಂಕರ.
ಅಗಾಧ ಮಾರುಕಟ್ಟೆ, ಅನಂತ ಅವಕಾಶ
ಭಾರತದಲ್ಲಿ ತಂಪು ಪಾನೀಯ ಮಾತ್ರವಲ್ಲದೆ, ಕುರುಕಲು ತಿಂಡಿಗಳ (ಸ್ನ್ಯಾಕ್ಸ್) ಮಾರುಕಟ್ಟೆಯೂ ಅಗಾಧವಾಗಿ ವಿಸ್ತರಿಸುತ್ತಿದೆ. ವಾರ್ಷಿಕ 30,000 ಕೋಟಿ ರೂ. ವಹಿವಾಟನ್ನು ಹೊಂದಿದೆ. ನಮ್ಮ ದೇಶದಲ್ಲಂತೂ ಸಾಂಪ್ರದಾಯಿಕ ಕುರುಕಲು ತಿಂಡಿಗಳ ವೈವಿಧ್ಯವಂತೂ ಅಮೋಘ. ಹೀಗಾಗಿ ಅನೇಕ ಹೊಸ ಕಂಪನಿಗಳು ಆಹಾರ ಸಂಸ್ಕರಣೆ ಮತ್ತು ಪಾನೀಯಗಳ ವಲಯದಲ್ಲಿ ಹೊಸ ಪ್ರಯೋಗಗಳೊಂದಿಗೆ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ. ನೂರಾರು ಜೀರಾ ಪಾನೀಯಗಳಿವೆ ಎಂದರೆ ಅಚ್ಚರಿಯಾಗಬಹುದು. ಒಂದು ಕಡೆ ಅಸಂಖ್ಯಾತ ಸಣ್ಣ ಪುಟ್ಟ ಬ್ರಾಂಡ್‌ಗಳು, ಜತೆಗೆ ಕೋಕಾ ಕೋಲಾ, ಪೆಪ್ಸಿಯಂಥ ದಿಗ್ಗಜ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ಬಹುರಾಷ್ಟ್ರೀಯ ಬ್ರಾಂಡ್‌ಗಳ ಪೈಪೋಟಿಯ ಎದುರು ಬಿಂದು ಜೀರಾದ ಅಮೋಘ ಯಶಸ್ಸು ಇಂದಿನ ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ. ಜತೆಗೆ ಉದ್ಯಮ ನಡೆಸಲು ಮುಂಬಯಿ, ದಿಲ್ಲಿ, ಚೆನ್ನೈ, ಬೆಂಗಳೂರು ಇತ್ಯಾದಿ ನಗರ ಪ್ರದೇಶಗಳೇ ಆಗಿರಬೇಕಿಲ್ಲ. ರಾಷ್ಟ್ರೀಯ ಹೆದ್ದಾರಿ ಅಥವಾ ಏರ್ ಪೋರ್ಟ್ ಹತ್ತಿರವೇ ಆಗಬೇಕೆಂದೇನಿಲ್ಲ. ದಕ್ಷಿಣ ಕನ್ನಡದಂಥ ಗ್ರಾಮಾಂತರ ಪ್ರದೇಶದಲ್ಲಿ ಕೂಡ ಇಂಥ ದಿಗ್ಗಜ ಬ್ರಾಂಡ್ ಅನ್ನು ಸ್ಥಾಪಿಸಬಹುದು ಮತ್ತು ವಿಸ್ತರಿಸಬಹುದು ಎಂಬುದಕ್ಕೆ ಬಿಂದು ಜೀರಾ ಮಾದರಿ.
ಇದನ್ನೂ ಓದಿ:Brand story | NDTV: ದೇಶದ ಮೊದಲ 24×7 ನ್ಯೂಸ್ ಚಾನೆಲ್ ಈಗ ಸುದ್ದಿಯಲ್ಲಿ!