Site icon Vistara News

ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

trayastha column

ಮತ್ತೊಂದು ಸುತ್ತಿನ ಹೋರಾಟಕ್ಕೆ ಅಖಾಡ ಸಿದ್ಧವಾಗುತ್ತಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂದು ನಿರ್ಧರಿಸುವ ಲೋಕಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಉಳಿದಿದ್ದರೂ, ಅದಕ್ಕೆ ವೇದಿಕೆ ಸಿದ್ಧಪಡಿಸುವ ಕಾರ್ಯಕ್ಕೆ ಎಲ್ಲ ಪಕ್ಷಗಳೂ ಚಾಲನೆ ಕೊಟ್ಟುಬಿಟ್ಟಿವೆ. ಅತ್ತ ಕಾಂಗ್ರೆಸ್ ಮೋದಿಯನ್ನು ವಿರೋಧಿಸುವುದನ್ನೇ ಏಕೈಕ ಅಜೆಂಡಾ ಮಾಡಿಕೊಂಡು ʻಭಾರತ್‌ ಜೋಡೊʼ ಯಾತ್ರೆಯ ಹೆಸರಿನಲ್ಲಿ ಮುಂದಿನ ಚುನಾವಣೆಗೆ ಸಿದ್ಧವಾಗುತ್ತಿದ್ದರೆ, ಇತ್ತ ಬಿಜೆಪಿ ʻಅಭಿವೃದ್ಧಿ ಮತ್ತು ರಾಷ್ಟ್ರೀಯತೆಯೇ ನಮ್ಮ ಚುನಾವಣಾ ವಿಷಯʼ ಅಂತ ಬಾಯಲ್ಲಿ ಹೇಳುತ್ತಿದ್ದರೂ ತನ್ನ ಸಾಂಪ್ರದಾಯಿಕ ʻಚುನಾವಣಾ ಹಿಂದುತ್ವʼದ ಅಜೆಂಡಾದಿಂದ ಈ ಬಾರಿಯೂ ದೂರ ಸರಿಯುವಂತೆ ಕಾಣುತ್ತಿಲ್.‌ ಹೀಗಾಗಿ ಮುಂದಿನ ಚುನಾವಣೆಯ ವಿಷಯವೂ ʻಧರ್ಮ ದಂಗಲ್’ ಆಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಇತ್ತೀಚಿನ ಜ್ಞಾನವಾಪಿ ಮಸೀದಿಯ ಕುರಿತಾದ ವಾರಣಾಸಿ ಕೋರ್ಟ್‌ನ ತೀರ್ಪು ಸಹಾ ಮುಂದಿನ ಚುನಾವಣಾ ಭವಿಷ್ಯದ ಹಣೆಬರಹವನ್ನು ಅದಾಗಲೇ ನಿರ್ಧರಿಸಿರುವಂತೆ ಕಾಣುತ್ತದೆ. ಏಕೆಂದರೆ ಈ ತೀರ್ಪಿನ ಆಧಾರದ ಮೇಲೆ ಇದರ ನಂತರ ಮಥುರಾ ಸೇರಿದಂತೆ ಹಲವು ಮಂದಿರಗಳು ವಿಮೋಚನಾ ಹೋರಾಟಕ್ಕೆ ಸಾಕ್ಷಿಯಾಗಲಿವೆ.

ಭಾರತ ದೇಶವು ಬ್ರಿಟಿಷರ ವಿರುದ್ಧ ಹೋರಾಡಿ ನಲವತ್ತೇಳರಲ್ಲಿ ಸ್ವಾತಂತ್ರ್ಯ ಪಡೆದರೂ, ದೇಶ ವಿಭಜನೆಯೆಂಬ ಕರಾಳ ಘಟನೆಯು ದೇಶವಾಸಿಗಳ ಮನಸ್ಸಿನಲ್ಲಿ ಮಾಯದ ಗಾಯವನ್ನು ಸೃಷ್ಟಿಸಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸಲ್ಮಾನರ ಆಕ್ರಮಣಕಾರಿ ವರ್ತನೆಯಿಂದಾಗಿ ಕಾಲಕ್ರಮೇಣ ಹಿಂದೂ ನಶಿಸಿಹೋಗುವ ಹಂತಕ್ಕೆ ಬಂದರೆ, ಭಾರತದಲ್ಲಿ‌ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಮುಸಲ್ಮಾನರ ಜನಸಂಖ್ಯೆ ಬೆಳೆಯುತ್ತಲೇ ಹೋಯಿತು. ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಗಾಂಧಿಯವರು ಹಾಕಿಕೊಟ್ಟ ಮಾರ್ಗದಂತೆಯೇ, ನೆಹರೂ ನೇತೃತ್ವದಲ್ಲಿ ಮತ್ತಿತರ ಹಿರಿಯ ನಾಯಕರೂ ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ ತಲುಪಿದ್ದರಿಂದ ನ್ಯಾಯಯುತವಾಗಿ ಹಿಂದುವಿಗೆ ಸಿಗಬೇಕಾಗಿದ್ದ ಗೌರವ ಘನತೆ ಈ ದೇಶದಲ್ಲಿ ಲಭಿಸಲೇ ಇಲ್ಲ. ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದ ಕಾರಣದಿಂದ ನಡೆದ ಅಲ್ಪಸಂಖ್ಯಾತರ ಈ ರೀತಿಯ ನಿರಂತರ ಓಲೈಕೆಯು ಬಹುಸಂಖ್ಯಾತ ಹಿಂದುಗಳನ್ನು ಅಸಂತುಷ್ಟರನ್ನಾಗಿ‌ ಮಾಡಿತು. ಇದರ ಲಾಭವನ್ನು ಪಡೆದ ಬಿಜೆಪಿ ರಾಮಜನ್ಮಭೂಮಿ ರಥ ಯಾತ್ರೆಯ ಅಸ್ತ್ರವನ್ನು ಉಪಯೋಗಿಸಿ ಹಿಂದುಗಳನ್ನು ಒಗ್ಗೂಡುವಂತೆ ಮಾಡಿ ಅಧಿಕಾರದ ಗಾದಿಯನ್ನು ಏರಿತು. ಇದರ ಹಿಂದೆ ಹಿಂದೂ ರಾಷ್ಟ್ರ ಮತ್ತು ಅಖಂಡ ಭಾರತದ ಕಲ್ಪನೆಯನ್ನು ಪ್ರತಿಪಾದಿಸುವ ಸಂಘಪರಿವಾರದ ಪಾತ್ರ ಬಹಳ ಮುಖ್ಯವಾಗಿರುವುದು ಸರ್ವರಿಗೂ ತಿಳಿದ ಸಂಗತಿಯೇ‌.

ವಿಶ್ವದೆಲ್ಲೆಡೆಯ ಹಿಂದುಗಳನ್ನು ಸಂಘಟಿಸುವುದನ್ನೇ ತನ್ನ ಗುರಿಯಾಗಿಸಿಕೊಂಡಿರುವ ಬೃಹತ್ ಸರ್ಕಾರೇತರ ಸಂಘಟನೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ರಾಜಕೀಯ ಆವೃತ್ತಿಯಾದ ಜನಸಂಘದಿಂದ ಮೊಟ್ಟೆಯ ರೂಪದಲ್ಲಿ ಆರಂಭವಾದ ಹಿಂದುವಿನ ರಾಜಕೀಯ ಯಾತ್ರೆಯು ತುರ್ತು ಪರಿಸ್ಥಿತಿಯ ಬಂಡಾಯದ ಕಾವಿನಲ್ಲಿ ಒಡೆದು ಮರಿಯಾಗಿ, ಮುಂದೆ ಬಿಜೆಪಿ ಎಂಬ ಹೆಸರಿನಿಂದ ರೂಪಾಂತರಗೊಂಡು, ಆಡ್ವಾಣಿಯವರ ಮೂಲಕ ರಾಮನ ಹೆಸರಿನಲ್ಲಿ ರೆಕ್ಕೆಯನ್ನು ಪಡೆದು, ನಂತರ ವಾಜಪೇಯಿಯವರ ಕಾಲದಲ್ಲಿ ಕಾರ್ಗಿಲ್ ಯುದ್ಧದ ಬಿಸಿಯಲ್ಲಿ ಹಾರಾಟದ ಅನುಭವ ಗಳಿಸಿ, ರಾಜಕೀಯದ ಖುರ್ಚಿಯಾಟದಲ್ಲಿ ಜಾಗ ಗಟ್ಟಿ ಮಾಡಿಕೊಂಡು, ಇಂದು ಮೋದಿ ಎಂಬ ಹೆಸರಿನ ಸುನಾಮಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬೆಳೆದು‌ ನಿಂತು, ಅಧಿಕಾರದ ಗಾದಿಯಲ್ಲಿ ಹಿಂದೆಂದಿಗಿಂತಲೂ ಪ್ರಬಲವಾಗಿ ಕುಳಿತು, ಹದ್ದಿನಂತೆ ಮೋಡಗಳ ಮೇಲೆ ಹಾರುವವರೆಗೂ ಬಂದು ನಿಂತಿದೆ. ಮುಂದೆಯೂ ಅನೇಕ ವರ್ಷಗಳ ಕಾಲ ಅಧಿಕಾರದ ಗಾದಿಯಲ್ಲಿ ಕೂರುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದೆ. ವಿಪಕ್ಷಗಳ ಒಗ್ಗಟ್ಟಿನ ಕೊರತೆ, ವಿರೋಧಿ ನಾಯಕರ ಗೊತ್ತು ಗುರಿ ಇಲ್ಲದ ಪೇಲವ ಟೀಕೆಗಳು, ಬಿಜೆಪಿ ಸಮಯ ನೋಡಿ ಬಿಡುವ ಧರ್ಮಾಸ್ತ್ರ, ಇಳಿಯದ ಮೋದಿ ನಾಮ ಬಲದ ಜನಪ್ರಿಯತೆಯು, ಮುಂದಿನ ಬಾರಿಯೂ ಮೋದಿಯೇ ಎನ್ನುವ ಸೂಚನೆಯನ್ನು ನೀಡುತ್ತಿವೆ. ಬೆಲೆ ಏರಿಕೆ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ, ಮತ್ತು ಅಲ್ಪಸಂಖ್ಯಾತರ ಧ್ರುವೀಕರಣವು ಬಿಜೆಪಿಯ ಜನಪ್ರಿಯತೆಗೆ ಲಗಾಮು ಹಾಕುತ್ತಿದ್ದರೂ, ಅದು ಕಮಲ ಪಕ್ಷದ ಚುನಾವಣೆಯ ಅಶ್ವಮೇಧದ ನಾಗಾಲೋಟಕ್ಕೆ ತಡೆ ಹಾಕುವಲ್ಲಿ ಸಫಲವಾಗುವ ಲಕ್ಷಣಗಳು ದೊಡ್ಡ ಪ್ರಮಾಣದಲ್ಲಿ ಕಾಣುತ್ತಿಲ್ಲ. ಮೋದಿ ಮತ್ತು ಬಿಜೆಪಿ ಇದರಿಂದ ನಾವೇ ಏಕಮೇವ ಅದ್ವಿತೀಯ ಎಂದು ಖುಷಿಪಡುತ್ತಿದ್ದರೂ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದರ ಪರಿಣಾಮವೇನಾಗಬಹುದು ಎಂಬುದನ್ನು ಚಿಂತನೆ ನಡೆಸುವುದು ಎರಡೂ‌ ಪಕ್ಷಗಳಿಗೆ ಸೇರದೇ, ಎಲ್ಲರಿಂದ ಸಮಾನ ಅಂತರ ಕಾಯ್ದುಕೊಂಡು ಮೂರನೆಯವರಾಗಿ ನಿಂತವರ ಆದ್ಯತೆಯಾಗುತ್ತದೆ.

ಮೋದಿ ಮತ್ತು ಬಿಜೆಪಿ ಹಿಂದೆಂದಿಗಿಂತಲೂ ಇಂದು ಬಹಳ ಪ್ರಬಲವಾಗಿದ್ದರೂ ಭಾರತದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ಈ ರೀತಿಯ ಸಂದರ್ಭ ಹೊಸದೇನೂ ಅಲ್ಲ. ಹಿಂದೆ ನೆಹರೂ ಮತ್ತು ಕಾಂಗ್ರೆಸ್ ಹಾಗೂ ಇಂದಿರಾ ಮತ್ತು ಕಾಂಗ್ರೆಸ್ ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ದೇಶದ ಮೇಲೆ ಹಿಡಿತ ಸಾಧಿಸಿದ್ದವು. ನೆಹರೂ ಅಂತೂ “ತನ್ನ ನಂತರ ಯಾರು?” ಎಂದು ಪತ್ರಿಕೆಗಳಲ್ಲಿ ಪ್ರಶ್ನೆ ಹುಟ್ಟುವಂತೆ ನೋಡಿಕೊಂಡು, “ಯಾರೂ ಇಲ್ಲ!” ಎನ್ನುವ ಉತ್ತರ ಬರುವುದನ್ನು‌ ಕೇಳಿ ಆನಂದಿಸುತ್ತಿದ್ದರೆ, ಇಂದಿರಾ ಗಾಂಧಿಯವರು ಇನ್ನೂ‌ ಒಂದು ಹೆಜ್ಜೆ ಮುಂದೆ ಹೋಗಿ “ಇಂಡಿಯಾ ಅಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ” ಎನ್ನುವವರೆಗೂ ವ್ಯಕ್ತಿ ಪೂಜೆಯ ಪರಮಾವಧಿಯನ್ನು ಮುಟ್ಟಿಸಿದ್ದರು. ಅದರ ಪರಿಣಾಮವಾಗಿ ಸ್ವಾತಂತ್ರ್ಯಾನಂತರ ಬೃಹತ್ ದೇಶ ಭಾರತವನ್ನು ಸಂಭಾಳಿಸಿದ ನೆಹರೂನಂತ ನೆಹರೂರವರೇ 1962ರ ಚೈನಾ ಯುದ್ಧದ ಹೀನಾಯ ಸೋಲಿಗೂ ಕಾರಣಕರ್ತರಾಗುತ್ತಾರೆ. ಬಾಂಗ್ಲಾದೇಶ ಸೃಷ್ಟಿಯ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೇಗೆ ಇಂದಿರಾಗಾಂಧಿಯವರಿಗೆ ರಾಜಕೀಯ ಶಕ್ತಿ ತಂದು ಕೊಟ್ಟಿತೋ, ಅದೇ ರೀತಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವನ್ನೂ ಸಹಾ ಇದೇ ಶಕ್ತಿ ಅವರಿಗೆ ನೀಡಿತು. ಇಂದು ಸಹಾ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಮೋದಿಯವರು ಪ್ರತಿ ದಿನ ಅಧಿಕಾರದ ಖುರ್ಚಿಯ ಮೇಲೆ ಇನ್ನಷ್ಟು ಮತ್ತಷ್ಟು ಪ್ರಬಲವಾಗಿ ಕುಳಿತುಕೊಳ್ಳುತ್ತಿದ್ದಾರೆ. ಅವರ ಪ್ರಾಬಲ್ಯ ಇಂದಿರಾ ಮತ್ತು ನೆಹರೂರನ್ನು ಮೀರಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಇದರ ಪರಿಣಾಮವೇನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಎಲ್ಲಿಯವರೆಗೂ ಎಲ್ಲವೂ ಸರಿಯಾಗಿರುತ್ತದೆಯೋ ಅಲ್ಲಿಯವರೆಗೂ ಸಮಸ್ಯೆ ಕಾಣುವುದಿಲ್ಲ. ಆದರೆ ಯಾವಾಗ ಅಧಿಕಾರ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತದೆಯೋ ಎನು ಬೇಕಾದರೂ ಮಾಡಿ ಯಾವ ಬೆಲೆಯನ್ನು ತೆತ್ತಾದರೂ ಸರಿ ಅಧಿಕಾರವನ್ನು ಉಳಿಸಿಕೊಳ್ಳುವ ಭಂಡತನ ಸೃಷ್ಟಿಯಾಗಿಬಿಡುತ್ತದೆ. ಮೋದಿ ದೇಶಭಕ್ತ, ಬಿಜೆಪಿ ಧರ್ಮನಿಷ್ಠ, ಸಂಘಪರಿವಾರ ಅಧಿಕಾರದ ಆಸೆಯನ್ನು ತೊರೆದಿರುವ ಧ್ಯೇಯನಿಷ್ಠ ಅಂತ ಸಾವಿರ ಹೇಳಿದರೂ, ಇದೇ ಸಂಘ, ಪಕ್ಷ ಮತ್ತು ಮೋದಿಯವರ ಮೂಗಿನಡಿಯಲ್ಲೇ ಆಪರೇಷನ್ ಕಮಲದಂಥಾ ಪ್ರಜಾಪ್ರಭುತ್ವ ವಿರೋಧಿ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಮರೆಯಬಾರದು. ಕೇವಲ‌ ಒಂದು ವೋಟಿಗಾಗಿ ಕುದುರೆ ವ್ಯಾಪಾರ ಮಾಡಲು ಬಯಸದೇ ಅಧಿಕಾರ ತ್ಯಾಗ ಮಾಡಿದ ವಾಜಪೇಯಿಯವರ ತತ್ವ ಸಿದ್ಧಾಂತಗಳು ಇಂದಿಗೂ ಬಿಜೆಪಿಯಲ್ಲಿ ಉಳಿದಿದೆ ಎಂದು ಧೈರ್ಯವಾಗಿ ಹೇಳಬಲ್ಲ ಖಂಡಿತವಾದಿಗಳು ಇಂದು ಯಾರೂ ಉಳಿದಿಲ್ಲ. ಹೀಗಾಗಿ ಸಮಕಾಲೀನ ರಾಜಕೀಯ ಪರಿಸ್ಥಿತಿಯನ್ನು ಸ್ವಲ್ಪ ಗಂಭೀರವಾಗಿ ಯೋಚಿಸಿ ವಿಶ್ಲೇಷಣೆ ಮಾಡುವ ಅವಶ್ಯಕತೆಯಿದೆ.

ಮೋದಿಯವರ ಆಡಳಿತದಲ್ಲಿ ದೇಶ ಹಿಂದೆಂದೂ ಮುಟ್ಟದ ಭವ್ಯ ಶಿಖರದೆತ್ತರಕ್ಕೆ ಮುಟ್ಟುತ್ತಿರುವುದೇನೋ ನಿಜ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ದೃಷ್ಟಿಯಲ್ಲಿ ಭಾರತವು ಜಗತ್ತಿನೊಂದಿಗೆ ದೊಡ್ಡ ಮಟ್ಟದ ಪೈಪೋಟಿ ನಡೆಸುತ್ತಿದೆ. ದೇಶದ ಸೇನೆಯು ಹೊಸ ಶಕ್ತಿಯನ್ನು ಗಳಿಸುತ್ತಿದೆ. ಅಂತಾರಾಷ್ಟ್ರೀಯ ಸಂಬಂಧಗಳು ಹೊಸ ಎತ್ತರಗಳನ್ನು ಮುಟ್ಟುತ್ತಿವೆ, ವಿಶ್ವ ಭೂಪಟದಲ್ಲಿ ಭಾರತ ನಾಯಕನ‌ ಸ್ಥಾನ ಪಡೆಯುತ್ತಿದೆ. ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರನ್ನು ತಲುಪುತ್ತಿವೆ‌. ಸಾರಿಗೆ ಸಂಪರ್ಕ ಸುಧಾರಿಸುತ್ತಿದೆ. ಇದರ ಜೊತೆಗೆ ಜನಸಾಮಾನ್ಯರೂ ದೇಶದ ಪ್ರಗತಿಯಲ್ಲಿ ತಮ್ಮ ಪಾತ್ರವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಲ್ಲೂ ರಾಷ್ಟ್ರೀಯತೆಯ ಭಾವನೆಗಳು ಪ್ರಬಲವಾಗುತ್ತಿವೆ. ಇನ್ನೂ ಹತ್ತು ಹಲವು ಮಹತ್ವದ ಬದಲಾವಣೆಗಳು ಜರುಗುತ್ತಿವೆ. ಆದರೆ ಇದೆಲ್ಲದರ ಹೊರತಾಗಿಯೂ ಕೆಲವು ದೂರಗಾಮಿ ಅಪಾಯದ ಸಾಧ್ಯತೆಗಳು ಸದ್ದಿಲ್ಲದೇ ಬೆಳೆಯುತ್ತಿವೆ. ಅದರ ಲಕ್ಷಣಗಳೆಂದರೆ ವ್ಯಕ್ತಿ ಪೂಜೆ, ಅಧಿಕಾರ ಕೇಂದ್ರಿತ ರಾಜಕಾರಣ, ಉದ್ಯಮಿಗಳ ಓಲೈಕೆ, ಏಕಪಕ್ಷೀಯ ನಿರ್ಧಾರಗಳು, ಜನಸಾಮಾನ್ಯನ ನಿರ್ಲಕ್ಷ್ಯ, ತಗ್ಗಿದ ಮಾಧ್ಯಮಗಳ ಬಲ, ಕುಸಿದ ವಿರೋಧ ಪಕ್ಷಗಳ ಸತ್ವ, ಹಿಂದುತ್ವದ ರಾಜಕೀಯಕರಣ, ಇತ್ಯಾದಿಗಳು. ಇದರ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಗಮನಿಸೋಣ.

1. ವ್ಯಕ್ತಿ ಪೂಜೆ : ಮೋದಿ ಎಂಬ ಹೆಸರು ಇಂದು ಕೇವಲ ಹೆಸರಾಗಿ ಉಳಿದಿಲ್ಲ. ಹಿಂದೆ ಗಾಂಧಿ, ನೆಹರೂ, ಇಂದಿರಾರಿಗಿದ್ದಂಥಾ ಹೆಸರಿನ ವರ್ಚಸ್ಸೇ ಈಗ ಮೋದಿ ಅನ್ನುವ ಹೆಸರಿಗೂ ಬಂದು ಬಿಟ್ಟಿದೆ. ಮೋದಿ ನಾಮ ಬಲಕ್ಕೆ ಇಂದು ರಾಜ್ಯಗಳನ್ನು ಉದಿಸುವ ರಾಜ್ಯಗಳನ್ನು ಅಳಿಸುವಷ್ಟು ಶಕ್ತಿ ಬಂದಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಮೋದಿಯ ಹೆಸರು ಇಂದು ಬೆಂಗಳೂರಿನ ತೇಜಸ್ವಿ ಸೂರ್ಯನಂಥಾ ಚಿಕ್ಕ ಹುಡುಗನನ್ನು ಸಂಸತ್ತಿಗೆ ಕಳುಹಿಸಿದ ಹಾಗೆಯೇ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಜೆಪಿಯ ಭೀಷ್ಮ ಎಂದು ಕರೆಸಿಕೊಳ್ಳುವ ಅಡ್ವಾಣಿಯಂಥಾ ಹಿರಿಯರನ್ನೇ ಮನೆಗೆ ಕಳುಹಿಸುವಷ್ಟು ಪ್ರಬಲವಾಗಿ ಬೆಳೆದು ನಿಂತಿದೆ. ಕೇವಲ ನಾಮವೊಂದಕ್ಕೆ ಈ ಶಕ್ತಿ ಬರುವುದು ರಾಷ್ಟ್ರ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅನುಕೂಲವೂ ಹೌದು ಅಪಾಯಕಾರಿಯೂ ಹೌದು. ಇದೊಂದು ರೀತಿ ಬ್ರಹ್ಮಾಸ್ತ್ರದಂತೆ ಬಹು ಶಕ್ತಿಶಾಲಿ. ಉಪಯೋಗಿಸುವವರು ಯಾರು ಎಂಬುದರ ಮೇಲೆ ಅದರ ಪರಿಣಾಮ ನಿರ್ಧರಿಸಲ್ಪಡುತ್ತದೆ. ಮೋದಿ ದೇವರಂಥವರು ಅನ್ನುವ ಬಿಜೆಪಿ ಕಾರ್ಯಕರ್ತರ ಭಾವನೆಯನ್ನೇ ಒಪ್ಪಿಕೊಂಡರೂ, ಗಾಂಧಿ ನಾಮ ಬಲವನ್ನು ಹೇಗೆ 75 ವರ್ಷ ಚುನಾವಣೆಯಲ್ಲಿ ಇತರರು ಹೇಗೆ ಹೇಗೆ ಬಳಸಿಕೊಂಡರು, ಇನ್ನೂ ಹೇಗೆ ಬಳಸಿಕೊಳ್ಳುತ್ತಿದ್ದಾರೆ, ಮುಂದೆಯೂ ಬಳಸಿಕೊಳ್ಳುವ ಸಾಧ್ಯತೆ ಹೇಗಿದೆ ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ, ನೋಡುತ್ತಿದ್ದೇವೆ, ಮುಂದೆಯೂ ನೋಡಲಿದ್ದೇವೆ.

ಇದೇ ಮಾದರಿಯಲ್ಲಿ ಮೋದಿ ಹೆಸರು ಇತರರಿಂದ ದುರ್ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಏನಾದರೂ ಖಾತರಿ ಇದೆಯೇ? ಮೋದಿಯ ಹೆಸರಿನಲ್ಲಿ ವೋಟು ಪಡೆದ ಅನೇಕ ನಾಲಾಯಕ್ ಸಂಸದರ ಕಾರ್ಯ ನಿರ್ವಹಣೆಯೇ ಇದಕ್ಕೆ ಉತ್ತರವಾಗಿ ನಮ್ಮ ಕಣ್ಮುಂದೆ ಇದೆ. ವ್ಯಕ್ತಿ ಪೂಜೆಯು ಬಕೆಟ್ ಸಂಸ್ಕೃತಿ, ಜೀ ಹುಜೂರ್ ಸಂಸ್ಕೃತಿಯನ್ನು ಬೆಳೆಸುತ್ತದೆ. ಅಂತಹಾ ಜಾಗದಲ್ಲಿ ಪ್ರಾಮಾಣಿಕರು, ಸ್ವಾಭಿಮಾನಿಗಳು, ಆತ್ಮಗೌರವವುಳ್ಳವರು, ಖಂಡಿತವಾದಿಗಳು, ಖಂಡಿತಾ ಉಳಿಯಲಾರರು. ಇವರೆಲ್ಲಾ ಗಂಟುಮೂಟೆ ಕಟ್ಟಿದ ಮೇಲೆ ಪಕ್ಷ ಮತ್ತು ಸರ್ಕಾರದಲ್ಲಿ ಉಳಿಯುವವರ್ಯಾರು? ಹೊಗಳುಭಟರು ವಂಧಿ ಮಾಗಧರು ಮಾತ್ರ. ಇವರುಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಮೋದಿಯೇ ಅಲ್ಲ ಸ್ವಯಂ ಭಗವಂತನ ಬಳಿಯೂ ಸಾಧ್ಯವಿರುವುದಿಲ್ಲ. ಇದಲ್ಲದೇ ವ್ಯಕ್ತಿ‌ಪೂಜೆಯ ಪರಾಕಾಷ್ಠೆಯಲ್ಲಿ ಗಾಂಧಿ ಹೆಸರಿನಲ್ಲಿ ನಡೆದ ಚಿತ್ಪಾವನ ಬ್ರಾಹ್ಮಣರ ಸಾಮೂಹಿಕ ಹತ್ಯೆ, ಇಂದಿರಾ ಹೆಸರಿನಲ್ಲಿ ನಡೆದ ಸಿಖ್ಖರ ನರಮೇಧದ ಉದಾಹರಣೆಗಳು ಕಣ್ಣಮುಂದಿವೆ. ಮುಂದೆ ಮೋದಿ ಹೆಸರಲ್ಲಿ ಈ ರೀತಿಯ ಅಪಸವ್ಯಗಳು ನಡೆಯುವುದಿಲ್ಲವೆಂಬ ಖಾತರಿ ಇದೆಯೇ? ಬಾಂಬನ್ನು ಸೃಷ್ಟಿಸಿದ ಮೇಲೆ ವಿಜ್ಞಾನಿಗೆ ಅದರ ಮೇಲೆ ಹೇಗೆ ನಿಯಂತ್ರಣ ಇರುವುದಿಲ್ಲವೋ ಹಾಗೆ ಅಂಧಭಕ್ತರ ಪಡೆ. ಹಾಗೆ ಕಟ್ಟಿದ ಪಡೆಯ ಅಭಿಮಾನವನ್ನು ತತ್ವ ಸಿದ್ಧಾಂತಗಳ ಮಟ್ಟಕ್ಕೆ, ಅದಕ್ಕೂ ಮೀರಿದ ಸರ್ವರ ಹಿತ ಬಯಸುವ ಮನೋಭೂಮಿಕೆಯ ಮಟ್ಟಕ್ಕೆ ಏರಿಸುವ ಶಕ್ತಿ ಮೋದಿಯವರಿಗಿದೆಯೇ? ಅದಕ್ಕಾಗಿ ಏನಾದರೂ ಪ್ರಯತ್ನಗಳು ಜರುಗುತ್ತಿವೆಯೇ? ಯಾರಾದರೂ ಜವಾಬ್ದಾರಿ ಹೊತ್ತವರು ಉತ್ತರಿಸಬೇಕು. ಇಂದು ಬಿಜೆಪಿ ಮತ್ತು ಮೋದಿಯವರನ್ನು ಟೀಕಿಸುವವರನ್ನು ದೇಶದ್ರೋಹಿಗಳೆಂದು ನಿರ್ದಾಕ್ಷಿಣ್ಯವಾಗಿ ಕರೆಯಲಾಗುತ್ತದೆ. ಟೀಕಿಸಿದವರ ಹಿನ್ನೆಲೆ ಏನು? ಉದ್ದೇಶವೇನು? ಎಂಬುದನ್ನೂ ವಿಮರ್ಶಿಸದೇ ಅವರ ಬಾಯಿ ಮುಚ್ಚಿಸುವ ಪ್ರಕ್ರಿಯೆ ನಿಜಕ್ಕೂ ಗಂಡಾಂತರಕಾರಿ. ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಬೌದ್ಧಿಕವಾಗಿ ಬೆಳೆಯಬೇಕಾದ ಅವಶ್ಯಕತೆಯಿದೆ. ಆದರೆ ಬಿಜೆಪಿಯ ವಾತಾವರಣ ಹೇಗಿದೆಯೆಂದರೆ, ಹಾಗೆ ಬೌದ್ಧಿಕವಾಗಿ ಬೆಳೆಯುವುದಕ್ಕಿಂತಲೂ, ಮೇಲಿನವರು ಹೇಳಿದಂತೆ ಕೇಳಿಕೊಂಡು ಹೋಗುವ ಜೀ ಹುಜೂರ್ ಸಂಸ್ಕೃತಿಯಿಂದಲೇ ಜಾಸ್ತಿ ಲಾಭ ಎಂಬುದನ್ನು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅರ್ಥಮಾಡಿಸುತ್ತಿದೆ. ಇಷ್ಟವಾಗದವರು ಗಂಟುಮೂಟೆ ಕಟ್ಟಬಹುದು ಮತ್ತು ಹಾಗೆ ನೀವು ಹೊರಟರೂ ನಮಗೇನೂ ನಷ್ಟವಿಲ್ಲ ಎನ್ನುವ ದಿವ್ಯನಿರ್ಲಕ್ಷ್ಯ ಹಾಗೂ ಉದಾಸೀನತೆ ಪಕ್ಷ ಹಾಗೂ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂಬುದನ್ನು ಅಲ್ಲಗಳೆಯುವ ಶಕ್ತಿ ಯಾರಿಗಾದರೂ ಇದೆಯೇ?

2. ಅಧಿಕಾರ ಕೇಂದ್ರಿತ ರಾಜಕಾರಣ : ಅಂದು ವಾಜಪೇಯಿ ಕುದುರೆ ವ್ಯಾಪಾರದ ಮೇಲೆ ನಂಬಿಕೆಯಿಡದೇ ಅಧಿಕಾರವನ್ನೇ ತೊರೆದರು. ಮೋದಿ ನೇತೃತ್ವದ ಅದೇ ಬಿಜೆಪಿ ಇಂದು ಅಧಿಕಾರಕ್ಕಾಗಿ ನಿರ್ಲಜ್ಜವಾಗಿ ಸರಣಿ ಆಪರೇಷನ್‌ಗಳನ್ನು ನಡೆಸುತ್ತಿದೆ. ಇದಕ್ಕೆ ಬಿಜೆಪಿಯು “ಕಾಂಗ್ರೆಸ್‌ನ ದುರಾಡಳಿತವನ್ನು ತೊಲಗಿಸಲಿಕ್ಕಾಗಿ ಹೀಗೆ ಮಾಡಬೇಕಾಗಿದೆ” ಎಂಬ ಕಾರಣ ಹೇಳಿದರೂ, ಅಂಥಾ ಕಾರಣವು ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು “ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೊಟ್ಟ ಕಾರಣದಷ್ಟೇ ಹಗುರವಾದದ್ದು. ಹೀಗಾಗಿ ಇತರ ಪಕ್ಷಗಳ ನಾಯಕರ ನಿರಂತರ ವಲಸೆಯಿಂದ ಬಿಜೆಪಿಯ ಏಕೈಕ ಗುರಿ ಅಧಿಕಾರ ಹಿಡಿಯುವುದಲ್ಲದೇ ಬೇರೆ ಇನ್ನೇನೂ ಆಗಲು ಸಾಧ್ಯವಿಲ್ಲ. ಅಥವಾ ಹಾಗೆ ವಲಸೆ ಬಂದ ಅನ್ಯ ಪಕ್ಷಗಳ ನಾಯಕರಿಗೆ ತತ್ವ ಸಿದ್ಧಾಂತಗಳನ್ನು ಗಟ್ಟಿ ಮಾಡಲು ಬಿಜೆಪಿ ಏನಾದರೂ ವಿಶೇಷ ಕಾರ್ಯಯೋಜನೆಗಳನ್ನೇನಾದರೂ ಹಮ್ಮಿಕೊಂಡಿದೆಯೇ? ಮೊದಲಿಂದ ಇರುವ ನಾಯಕರ ತತ್ವ ಸಿದ್ಧಾಂತಗಳೇ ಸಂದೇಹಕ್ಕೊಳಪಟ್ಟಿರುವಾಗ ಪಕ್ಷ ಹಾಗೂ ಅದರ ಸಿದ್ಧಾಂತಗಳ ಅರಿವೇ‌ ಇಲ್ಲದ ಮತ್ತು ಹೆಚ್ಚು ಕಡಿಮೆ ವಿರುದ್ಧ ತತ್ವ ಸಿದ್ಧಾಂತಗಳ ಬೇರೆ ಪಕ್ಷಗಳಿಂದ ಬಂದ ನಾಯಕರು ಅದು ಹೇಗೆ ಬಿಜೆಪಿ ಸಿದ್ಧಾತಗಳನ್ನು ಮೈಗೂಡಿಸಿಕೊಳ್ಳಬಲ್ಲರು? ನೂರು ಜನರೊಳಗೆ ಒಬ್ಬ ಬೆರೆತು ಬದಲಾಗಬಹುದು. ಆದರೆ ನೂರು ಜನರಲ್ಲಿ 50 ಜನ ಹೊರಗಿನವರೇ ಆದಾಗ ಒಳಗಿನವರು ಬದಲಾಗದೇ ಉಳಿಯುವುದೇ ಆಶ್ಚರ್ಯ! ಅಂತಹಾ ಸಂದರ್ಭದಲ್ಲಿ ಎಲ್ಲರ ನಡುವಿನ ಸಮಾನ ಆಸಕ್ತಿಯ ವಿಚಾರಗಳು ಅಧಿಕಾರ ಮತ್ತು ಹಣ ಮಾತ್ರ ಆಗಿರುತ್ತದೆಯೇ ಹೊರತು ಸಿದ್ಧಾಂತ ಹಾಗೂ ತತ್ವಕ್ಕೆ ಮೂರು ಪೈಸೆಯ ಬೆಲೆ ಇರುವುದಿಲ್ಲ. ಇದೇ ರೀತಿ ಆಪರೇಷನ್ ಮಾಡುತ್ತಿದ್ದರೆ ಬರಲಿರುವ ದಿನಗಳಲ್ಲಿ ಬಿಜೆಪಿ ತನ್ನ ಸ್ವಂತ ಸ್ವರೂಪವನ್ನೇ ಕಳೆದುಕೊಳ್ಳುವುದು ನಿಶ್ಚಿತ.

3. ಉದ್ಯಮಿಗಳ ಓಲೈಕೆ : ಬಿಜೆಪಿಯ ಪ್ರಮುಖ ಶಕ್ತಿ‌ ಕೇಂದ್ರ ಮೋದಿಯೇ ಆಗಿದ್ದರೂ ಅದರ ಹಿಂದಿನ ಬೌದ್ಧಿಕ ಶಕ್ತಿ ಆರ್‌ಎಸ್‌ಸ್ ಆಗಿದೆ. ಮತ್ತು ಆರ್ಥಿಕ ಶಕ್ತಿ ಉದಾರವಾಗಿ ಚುನಾವಣಾ ನಿಧಿ ನೀಡುವ ಉದ್ಯಮಿಗಳೇ ಆಗಿದ್ದಾರೆ. ಉದ್ಯಮಿಗಳಲ್ಲಿ ಒಳ್ಳೆಯವರು ಕೆಟ್ಟವರು ಎಂದು ವಿಂಗಡಿಸುವುದು ಬಹಳ ಕಷ್ಟ. ಅವರಲ್ಲಿ ಬಹುತೇಕರ ಮೊದಲ ಆದ್ಯತೆಯ ವಿಷಯ ತಮ್ಮ ವ್ಯವಹಾರಗಳನ್ನು ಬೆಳೆಸುವುದೇ ಆಗಿರುತ್ತದೆಯೇ ಹೊರತು ಸಮಾಜಸೇವೆ ಅಥವಾ ದೇಶಭಕ್ತಿಯು ಎರಡನೇ ಆದ್ಯತೆಯಾಗಿರಬಹುದಷ್ಟೇ. ಎಲ್ಲಿಯವರೆಗೂ ಪಕ್ಷದ ಮತ್ತು ಮೋದಿಯಂಥಾ ಮುಖ್ಯ ನಾಯಕರ ಆಧ್ಯಾತ್ಮಿಕ ಬಲ ಮತ್ತು ಚಾರಿತ್ರ್ಯದ ಬಲಗಳು ಗಟ್ಟಿಯಿರುತ್ತದೆಯೋ ಅಲ್ಲಿಯವರೆಗೂ ಉದ್ಯಮಿಗಳು ರಾಜಕಾರಣಿಗಳಿಂದ ಉಪಯೋಗಿಸಿಕೊಳ್ಳಲ್ಪಡುತ್ತಾರೆ. ಅದಕ್ಕೆ ಪ್ರತಿಯಾಗಿ ಸ್ವಲ್ಪ ಪ್ರಮಾಣದ ಪ್ರಯೋಜನವನ್ನೂ ಪಡೆಯುತ್ತಾರೆ. ಆದರೆ ಯಾವತ್ತು ಈ ಸೂತ್ರ ಬದಲಾಗುತ್ತದೆಯೋ ಅಂದರೆ ನಾಯಕರ ಆದ್ಯತೆ ಆಧ್ಯಾತ್ಮಿಕತೆಯಿಂದ ಪ್ರಾಪಂಚಿಕತೆಯೆಡೆಗೆ ಬದಲಾಗುತ್ತದೆಯೋ ಆಗ ಅವರ ಶಕ್ತಿ ಕಡಿಮೆಯಾಗಿ ಉದ್ಯಮಿಗಳು ಕಿಂಗ್ ಮೇಕರ್ ಆಗಲು ಆರಂಭಿಸುತ್ತಾರೆ. ಸರ್ಕಾರ ಉದ್ಯಮಿಗಳ ತೆರೆಮರೆಯ ಆಣತಿಯಂತೆ ನಡೆಯಲಾರಂಭಿಸುತ್ತದೆ. ದೇಶದ ಮತ್ತು ಸರ್ಕಾರದ ಇಷ್ಟಾನಿಷ್ಟಗಳನ್ನು ಉದ್ಯಮಿಗಳು ಮತ್ತು ಶ್ರೀಮಂತರು ನಿರ್ಧರಿಸಲಾರಂಭಿಸುತ್ತಾರೆ. ಆಗ ಪ್ರಜಾಪ್ರಭುತ್ವದ ಮೌಲ್ಯಗಳು ಗಾಳಿಗೆ ತೂರಿಹೋಗುತ್ತವೆ. ಇಂಥಾ ಪರಿಸ್ಥಿತಿಯನ್ನು ಎದುರಿಸಲು ಬಿಜೆಪಿ ಮಾಡಿಕೊಂಡಿರುವ ಸಿದ್ಧತೆಗಳೇನು? ಉದ್ಯಮಿಗಳು ಸರ್ಕಾರದ ನೀತಿನಿಯಮಗಳಲ್ಲಿ ಮೂಗು ತೂರಿಸುತ್ತಿಲ್ಲ ಎಂದು ಎದೆಮುಟ್ಟಿ ಹೇಳಿಕೊಳ್ಳುವಷ್ಟು ಬಿಜೆಪಿ ಪಾರದರ್ಶಕವಾಗಿದೆಯೇ? ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಮತ್ತಿತರರ ಆಸ್ತಿ – ಉದ್ದಿಮೆಗಳ ಬೆಳವಣಿಗೆ ಬಿಜೆಪಿಯ ಬೆಳವಣೆಗೆಯನ್ನೇ ಮೀರಿಸುತ್ತಿದೆ. ಇದರ ಪರಿಣಾಮಗಳೇನಾಗಬಹುದು? ಯೋಚಿಸಬೇಕಾದ ವಿಚಾರ. ಇದಲ್ಲದೇ ಭಾರತದ ಬೃಹತ್ ಜನಸಮುದಾಯಕ್ಕೆ ಉದ್ಯೋಗ ನೀಡುವುದು ಗುಡಿ ಕೈಗಾರಿಕೆಗಳು. ಕೇವಲ ವೋಕಲ್ ಫಾರ್ ಲೋಕಲ್ ಎಂದು ಘೋಷಣೆ ಮಾಡಿದರಷ್ಟೇ ಅದು ಬೆಳೆಯುವುದಿಲ್ಲವಲ್ಲ. ಇಂಥಾ ದೊಡ್ಡ ದೊಡ್ಡ ಉದ್ಯಮಿಗಳು ಚಿಕ್ಕ ಚಿಕ್ಕ ಗುಡಿ ಕೈಗಾರಿಕೆಗಳ ಜೊತೆ ಸ್ಪರ್ಧೆಗಿಳಿಯದಂತೆ ಕಾನೂನು ಜಾರಿಗೊಳಿಸಬೇಕು. ಅಂಥಾ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕಿದೆಯೇ?

ಇದನ್ನೂ ಓದಿ | ಸವಿಸ್ತಾರ ಅಂಕಣ | ಒಂದೇ ʼಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?

4. ಏಕಪಕ್ಷೀಯ ನಿರ್ಧಾರಗಳು : ಬಿಜೆಪಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ‌ ಅನೇಕ ನಿರ್ಧಾರಗಳು ಐತಿಹಾಸಿಕ. ನೋಟು ಅಮಾನ್ಯೀಕರಣದಿಂದ ಹಿಡಿದು ಕಾಶ್ಮೀರದ ಆರ್ಟಿಕಲ್ 371 ರದ್ದುಗೊಳಿಸಿದವರೆಗೂ ಅನೇಕ ಅಪರೂಪದ ದಿಟ್ಟ ನಿರ್ಧಾರಗಳು ದೇಶದ ಒಳಿತಿಗೆ ಅಪಾರ ಕೊಡುಗೆ ನೀಡಿವೆ. ಆದರೆ ಇದನ್ನು ತರಲು ಬಿಜೆಪಿ ಅನುಸರಿಸಿದ ಮಾರ್ಗ ಚರ್ಚಾಯೋಗ್ಯ ವಿಚಾರ. ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರಗಳು, ಚರ್ಚೆಯೇ ನಡೆಯದೇ ಕೈಗೊಂಡ ತೀರ್ಮಾನಗಳು, ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದೇ ಏಕಪಕ್ಷೀಯವಾಗಿ ತೆಗೆದುಕೊಂಡ ಕ್ರಮಗಳು ದೇಶದ ಹಿತದೃಷ್ಟಿಯಿಂದ ಮೇಲ್ನೋಟಕ್ಕೆ ಒಳ್ಳೆಯದೆಂದು ತೋರಿದರೂ, ಈ ರೀತಿಯ ಕ್ರಮಗಳು ಪ್ರಜಾತಂತ್ರ ವ್ಯವಸ್ಥೆಯ ಬಲವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ನಂಥಾ ಪಕ್ಷಗಳು ಇರುತ್ತವೆ ಹೋಗುತ್ತವೆ. ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಹುಕಾಲ ಉಳಿಬೇಕು. ಅದರ ದೂರದೃಷ್ಟಿಯಿಂದ ಕೂಡಿದ ಆಶಯಗಳು ಈಡೇರಬೇಕು. ಅದನ್ನು ತಾತ್ಕಾಲಿಕ ಲಾಭದ ದೃಷ್ಟಿಯಿಂದ ಮೀರಿಹೋದರೆ, ಉದ್ದೇಶ ಒಳ್ಳೆಯದಾಗಿದ್ದರೂ ಶಾಶ್ವತ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ವಿರೋಧ ಪಕ್ಷಗಳು ಎಷ್ಟೇ ದುರ್ಬಲವಾಗಿರಲಿ ಅಥವಾ ನಾಯಕರು ಎಷ್ಟೇ ಕೆಳಮಟ್ಟದವರಾಗಿರಲಿ ಅವರನ್ನು ತಿರಸ್ಕರಿಸಿ, ಒಂದು ಮೂಲೆಗೆ ತಳ್ಳಿ, ಉಪೇಕ್ಷಿಸಿ ಆಡಳಿತ ನಡೆಸುವುದು ಪ್ರಜಾಪ್ರಭುತ್ವವಾಗಿರುವುದಿಲ್ಲ. ಬದಲಾಗಿ ಸರ್ವಾಧಿಕಾರಿ ಧೋರಣೆಯಾಗಿರುತ್ತದೆ. ಪ್ರಜ್ಞಾವಂತ ಜನರು “ದೇಶಕ್ಕೆ ಒಳ್ಳೆಯದಾದರೆ ಸರಿ, ಮಾರ್ಗ ಯಾವುದಾದರೂ ಪರವಾಗಿಲ್ಲ” ಎಂದು ಕೆಲ ದಿನಗಳು ಸಹಿಸಿಕೊಂಡು ಸುಮ್ಮನಿರಬಹುದು. ಆದರೆ ದೀರ್ಘಕಾಲದಲ್ಲಿ ಈ ಭಾವನೆಯನ್ನು ಬೌದ್ಧಿಕವಾಗಿ ಚಿಂತನೆ ನಡೆಸಯವವರಲ್ಲಿ ಹಾಗೇ ಉಳಿಸಲು ಸಾಧ್ಯವಿಲ್ಲ. ಒಂದು ಹಂತದಲ್ಲಿ ಬಂಡಾಯ ಸ್ಫೋಟಗೊಳ್ಳುತ್ತದೆ. ಈ ಸರ್ವಾಧಿಕಾರಿ ಧೋರಣೆಯನ್ನು ಬೆಳೆಯದಂತೆ ತಡೆಯಲು ಪಕ್ಷ ಅಥವಾ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ? ಆತ್ಮವಿಮರ್ಶೆಯ ಅವಶ್ಯಕತೆ ಇದೆ.

5. ಜನ ಸಾಮಾನ್ಯರ ನಿರ್ಲಕ್ಷ್ಯ : ಪ್ರಪಂಚವನ್ನೇ ಬಾಧಿಸಿದ ಕೊರೋನಾ ರೋಗವು ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ. ಭಾರತವೂ ಇದಕ್ಕೆ ಹೊರತಲ್ಲ. ಇದರ ಪರಿಣಾಮವಾಗಿ ಪೆಟ್ರೋಲ್ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ‌. ಶ್ರೀ ಸಾಮಾನ್ಯನ ಬದುಕು ದುರ್ಭರವಾಗುತ್ತಿರುವ ಸನ್ನಿವೇಶದಲ್ಲಿ ಅವನ ಸಹಾಯಕ್ಕೆ ನಿಲ್ಲುವುದು ಸರ್ಕಾರದ ಕರ್ತವ್ಯ. ಆದರೆ ಇದಕ್ಕೆ ವಿರುದ್ಧವಾಗಿ ಮಂಡಕ್ಕಿಯಂಥಾ ವಸ್ತುವಿನ ಮೇಲೂ ಜಿಎಸ್ ಟಿ ಹೇರಿದ ಸರ್ಕಾರದ ನಡೆ ವ್ಯಾಪಕ ಟೀಕೆಗೊಳಗಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಇತ್ಯಾದಿಗಳ ಬೆಲೆಯನ್ನು ಇಳಿಸುವಲ್ಲಿ ಸರ್ಕಾರ ವಿಫಲವಾಗುತ್ತಿರುವುದು ಜನಸಾಮಾನ್ಯರ ತಾಳ್ಮೆಯನ್ನು ತೀವ್ರವಾಗಿ ಪರೀಕ್ಷಿಸುತ್ತಿದೆ. ಇದಕ್ಕೆ ಉತ್ತರವಾಗಿ ಸರ್ಕಾರ ಮಾಡಬಹುದಾಗಿದ್ದ ಕೆಲಸಗಳೇನು? ಅಂಥಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ಎಷ್ಟು ಪ್ರಾಮಾಣಿಕವಾಗಿದೆ. ಪಕ್ಷದ ಸಂಸದರು ಈ ಕಡೆ ಎಷ್ಟು ಗಮನಹರಿಸಿದ್ದಾರೆ? ಅನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ? ಮೋದಿ ಮ್ಯಾಜಿಕ್ ಮಾಡಿಬಿಡುತ್ತಾರೆ ಎಂದು ನಂಬಿದ್ದ ಜನರಿಗೆ ಮೋದಿ‌ ಒಬ್ಬರ ಕೈಲಿ ಮ್ಯಾಜಿಕ್ ಮಾಡಲಾಗುವುದಿಲ್ಲ ಎಂದು ಅರ್ಥವಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ಮೋದಿಯವರಂತೆ ಉಳಿದ ಜನಪ್ರತಿನಿಧಿಗಳೂ ಕೆಲಸ ಮಾಡದಿದ್ದರೆ ಜನಸಾಮಾನ್ಯ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುವುದಂತೂ ಸತ್ಯ. ಜನಸಾಮಾನ್ಯರಿಗೆ ಉದ್ಯೋಗವೂ ದೊರೆಯುತ್ತಿಲ್ಲ, ಸರ್ಕಾರದಿಂದ ಸಹಾಯವೂ ದೊರೆಯುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಜನರು ತಮ್ಮ ಮನಸ್ಸು ಬದಲಿಸುವುದು ನಿಶ್ಚಿತ. ಇದಕ್ಕೆ ಸ್ಪಂದಿಸುವಷ್ಟು ಸರಳತೆಯನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರು ಉಳಿಸಿಕೊಂಡಿದ್ದಾರೆಯೇ?? ಪಕ್ಷ ಹಾಗೂ ನಾಯಕರು ಪರೀಕ್ಷಿಸಿ ನೋಡಿಕೊಳ್ಳಬೇಕಿದೆ.

6. ತಗ್ಗಿದ ಮಾಧ್ಯಮಗಳ ಬಲ : ಮೋದಿ ಅಧಿಕಾರಕ್ಕೆ ಬರುವ ಮೊದಲು ಅವರನ್ನು ಹೀನಾಮಾನವಾಗಿ ಟೀಕಿಸಿದ, ಅತಿ ಎನ್ನಿಸುವಷ್ಟು ದ್ವೇಷಿಸಿದ ಮಾಧ್ಯಮಗಳು ಇಂದು ಇನ್ನಿಲ್ಲದಂತೆ ಮೌನವಾಗಿವೆ. ಅದಷ್ಟು ಮಾತ್ರವಲ್ಲದೇ ಅದಕ್ಕೆ ವಿರುದ್ಧವಾಗಿ ಮೋದಿಯ ಹಿಂದು ಹಿಂದೆಯೇ ಕ್ಯಾಮೆರಾ ಹಿಡಿದುಕೊಂಡು ಸುತ್ತುತ್ತಿವೆ. ಆರ್‌ಎಸ್‌ಎಸ್ ಅನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದ ಟಿವಿ ಆಂಕರ್‌ಗಳು ಇಂದು ಆರ್‌ಎಸ್‌ಎಸ್‌ನಲ್ಲೇ ಹುಟ್ಟಿ ಬೆಳೆದವರಂತೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಈ ದಿಢೀರ್ ಪರಿವರ್ತನೆಗೆ ಕಾರಣವೇನು? ಎಲ್ಲ ಮಾಧ್ಯಮ ಮಿತ್ರರಿಗೂ ಮೋದಿ ಅಧಿಕಾರಕ್ಕೆ ಬಂದೊಡನೆ ಬೋಧಿವೃಕ್ಷದ ಕೆಳಗೆ ಸಾಕ್ಷಾತ್ಕಾರವಾಗಿಬಿಟ್ಟಿತೇ? ಖಂಡಿತಾ ಇಲ್ಲ. ಮಾಧ್ಯಮಗಳು ಇಂದು ಬಿಜೆಪಿಯ ನಿಯಂತ್ರಣಕ್ಕೆ ಒಳಪಟ್ಟಿವೆ. ಹೇಗೆ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಮಾಧ್ಯಮಗಳು ಅದರ ಕಪಿಮುಷ್ಠಿಗೆ ಸಿಲುಕಿ ಮೂಕವಾಗಿದ್ದವೋ ಅದೇ ಪರಿಸ್ಥಿತಿ ಇಂದು ನಿರ್ಮಾಣಗೊಂಡಿದೆ. ಟಿಆರ್‌ಪಿಗೋ, ದುಡ್ಡಿಗೋ, ಅಸ್ತಿತ್ವ ಉಳಿಸಿಕೊಳ್ಳಲೋ ಅಥವಾ ಪ್ರವಾಹದ ಜೊತೆಗೆ ಈಜಿಕೊಂಡು ಹೋಗಲೋ ಮಾಧ್ಯಮಗಳು‌ ಇನ್ನಿಲ್ಲದಂತೆ ಬಿಜೆಪಿಯನ್ನು ಓಲೈಸುತ್ತಿವೆ. ಇದು ದೀರ್ಘಕಾಲಕ್ಕೆ ಮುಂದುವರೆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ನಿರ್ವೀರ್ಯವಾಗಿ ಪತ್ರಿಕಾರಂಗ ಆಳುವ ಸರ್ಕಾರದ ಮುಖವಾಣಿಯಾಗುತ್ತವೆ. ಉದ್ಯಮಿಗಳು ರಾತ್ರೋ ರಾತ್ರಿ ಮಾಧ್ಯಮಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ಅಪಾಯದಿಂದ ಪಾರಾಗಲು ಮಾಧ್ಯಮರಂಗ ಮಾಡಿಕೊಂಡಿರುವ ಉಪಾಯಗಳೇನು? ಈ ಪ್ರವಾಹದಲ್ಲಿ ಈಜಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಂವಿಧಾನದ ಆಶಯಗಳನ್ನು ಈಡೇರಿಸಲು ಅದಕ್ಕೆ ಸಾಧ್ಯವೇ? ಮಾಧ್ಯಮಗಳು ಉತ್ತರಿಸಬೇಕು. ಸರ್ಕಾರ ಪತ್ರಿಕಾರಂಗದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸುವ ಮನಸ್ಸು ಮಾಡಲಿದೆಯೇ? ಸರ್ಕಾರ ಹೇಳಬೇಕು.

ಇದನ್ನೂ ಓದಿ | ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

7. ಕುಸಿದ ವಿರೋಧ ಪಕ್ಷಗಳ ನೈತಿಕತೆ ಮತ್ತು ಅಂತಃಸತ್ವ : ಬಿಜೆಪಿ ಮತ್ತು ಮೋದಿ ಮಾಡುತ್ತಿರುವ ಕೆಲವು ಎಕ್ಸ್ಟ್ರೀಮ್ ನಿರ್ಣಯಗಳೂ ಸಹಾ ನ್ಯಾಯಯುತವಾಗಿ ಕಾಣುತ್ತಿರುವುದರ ಹಿಂದೆ ಕಾಂಗ್ರೆಸ್ ಸೇರಿದಂತೆ ಉಳಿದ ವಿರೋಧ ಪಕ್ಷಗಳ ಮತ್ತು ನಾಯಕರ ನೈತಿಕ ಅಧಃಪತನದ ಕೊಡುಗೆ ಬಹಳಷ್ಟಿದೆ. ರಾಹುಲ್ ಗಾಂಧಿಯಂಥಾ ಬೌದ್ಧಿಕವಾಗಿ ತೀರಾ ಹಿಂದುಳಿದ ರಾಜಕಾರಣಿಯಬ್ಬನ ಕೈಲಿ ರಥದ ಸಾರಥ್ಯವನ್ನು ಕೊಟ್ಟು ಮೋದಿಯಂಥಾ ಬಲಿಷ್ಠ ನಾಯಕನನ್ನು ಎದುರಿಸುತ್ತಿರುವ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣ ದೇಶದ ಪ್ರಜಾಪ್ರಭುತ್ವವನ್ನು ಆತಂಕದ ಪರಿಸ್ಥಿತಿಗೆ ನೂಕುತ್ತಿದೆ. 137 ವರ್ಷಗಳ ಇತಿಹಾಸವುಳ್ಳ ಒಂದು ಪಕ್ಷಕ್ಕೆ ರಾಹುಲ್ ಗಾಂಧಿಗಿಂತಲೂ ಸಮರ್ಥನಾದ ಒಬ್ಬ ನಾಯಕ ದೊರೆಯದಿರುವುದು ವಿರೋಧ ಪಕ್ಷವೊಂದರ ದೈನೇಸಿ ಸ್ಥಿತಿಯನ್ನು ಎತ್ತಿಹಿಡಿಯುತ್ತಿದೆ. ಸಹಜವಾಗಿ ರಾಹುಲ್ ಸುತ್ತ ಹೊಗಳುಭಟರ, ಜೀ ಹುಜೂರ್ ಮನಸ್ಥಿತಿಯ, ಹುಂಬರ ಪಡೆ ಸುತ್ತುವರೆದು, ಯೋಗ್ಯರು ಅರ್ಹರು ಪಕ್ಷ ಬಿಟ್ಟು ಬಿಜೆಪಿ ಮತ್ತಿತರ ಪಕ್ಷಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ನಷ್ಟವೆಂಬಂತೆ ತೋರಿದರೂ, ಅದು ದೇಶದ ವಿಪಕ್ಷಗಳ ಜವಾಬ್ದಾರಿಗೆ ಬಿದ್ದ ಪೆಟ್ಟಾಗಿದೆ. ವಿಪಕ್ಷಗಳು ಪ್ರಜಾಪ್ರಭುತ್ವದ ಕಾವಲುನಾಯಿ. ಆದರೆ ಈ ಕಾವಲು ನಾಯಿಯ‌ ಕಣ್ಣು ಮಂಜಾಗಲು, ಕೈ ಕಾಲು ಸ್ವಾಧೀನ ಕಳೆದುಕೊಳ್ಳಲು, ಸ್ವತಃ ಕಾಂಗ್ರೆಸ್ ಕಾರಣಕರ್ತವಾಗಿದೆ. ಉಳಿದ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದೋ ಬಿಜೆಪಿಯೊಡನೆ ಬೇಷರತ್ತು ಮೈತ್ರಿ ಮಾಡಿಕೊಳ್ಳುತ್ತಿವೆ. ಇಲ್ಲವೇ ಸುಖಾಸುಮ್ಮನೆ ಮೋದಿಯವರನ್ನು ತೆಗಳುತ್ತಾ ನಗೆಪಾಟಲಿಗೀಡಾಗುತ್ತಾ ಗೌರವ ಕಳೆದುಕೊಳ್ಳುತ್ತಿವೆ. ಒಟ್ಟಿನಲ್ಲಿ ಮೋದಿ ಮತ್ತು ಬಿಜೆಪಿ ಮದಿಸಿದ ಆನೆಯಂತೆ, ಅಂಕುಶವಿಲ್ಲದ ಮಾವುತನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ತನಗೆ ಬೇಕಾದ ಮಾರ್ಗವನ್ನು ನಿರ್ಧರಿಸಿಕೊಂಡು ಮುಂದೆ ಸಾಗುತ್ತಿದೆ. ಇದನ್ನು ದೇಶದ ಪ್ರಜ್ಞಾವಂತರು ಗಮನಿಸಬೇಕಿದೆ.

8. ಹಿಂದುತ್ವದ ರಾಜಕೀಯಕರಣ : ಧರ್ಮ ಯಾವತ್ತೂ ರಾಜಕೀಯ ಅಸ್ತ್ರವಾಗಬಾರದು‌. ಆದರೆ ಕಾಂಗ್ರೆಸ್ ಮಾಡಿದ ಅಲ್ಪಸಂಖ್ಯಾತರ ಅತಿಯಾದ ತುಷ್ಟೀಕರಣ ಭಾರತದಲ್ಲಿ ಧರ್ಮ ರಾಜಕಾರಣ ಮಹತ್ವ ಪಡೆದುಕೊಳ್ಳುವಂತೆ ಮಾಡಿತು. ಇಂದು ಭಾರತದ ಮತದಾರನ ಮನಸ್ಥಿತಿಯನ್ನು ನಿರ್ಧರಿಸುವ ಅಂಶಗಳಲ್ಲಿ ಧರ್ಮದ ಪಾತ್ರ ಬಹುದೊಡ್ಡದಾಗಿದೆ. ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಇದೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ರಾಮಮಂದಿರ ಆಂದೋಲನವು ಸತ್ತಂತಿದ್ದ ಹಿಂದು ಅಂತಃಸತ್ವಕ್ಕೆ ಬಹುದೊಡ್ಡ ಟಾನಿಕ್ ನೀಡಿತು. ವಾಜಪೇಯಿ ಸರ್ಕಾರ ರಾಜಕೀಯವಾಗಿ ಹಿಂದುವಿಗೆ ದನಿ ತಂದುಕೊಟ್ಟಿತು. ಮೋದಿ ಸರ್ಕಾರ ಹಿಂದುತ್ವವೇ ಅಧಿಕಾರ ನಡೆಸುವಂತೆ ಮಾಡಿತು. ಆದರೆ ಹಿಂದುತ್ವ ಒಂದು ದಬ್ಬಾಳಿಕೆಯ ಅಸ್ತ್ರವಾಗಿಯೂ ಪ್ರಯೋಗವಾಗಬಹುದು ಎಂಬ ಲಕ್ಷಣಗಳನ್ನು ಯೋಗಿಯವರ ಆಕ್ರಮಣಕಾರಿ ಆಡಳಿತದ ಶೈಲಿಯಲ್ಲಿ ಗುರುತಿಸಬಹುದಾಗಿದೆ. ಆದರೆ ದುರದೃಷ್ಟವೆಂದರೆ ಅಂತಹಾ ಆಕ್ರಮಣಕಾರಿ ರಾಜಕಾರಣ ಹಿಂದುಗಳಿಗೆ ಬಹುವಾಗಿ ಪ್ರಿಯವಾಗುತ್ತಿದೆ. ಇದರ ದೂರಗಾಮಿ ಪರಿಣಾಮವೆಂದರೆ ಮಾನವೀಯತೆ ಮತ್ತು ವಿಶ್ವಪ್ರೇಮವುಳ್ಳ ಹಿಂದುವೊಬ್ಬ ನಾಯಕನಾಗದೇ ಕ್ರೂರ ಅಥವಾ ಧರ್ಮಾಂಧತೆಯುಳ್ಳ ಅಥವಾ ಧರ್ಮವನ್ನೇ ತನ್ನ ಅಧಿಕಾರದಾಸೆಗೆ ಬಳಸಿಕೊಳ್ಳುವ ಮನಸ್ಥಿತಿಯ ನಾಯಕನೇನಾದರೂ ಅಧಿಕಾರ ಹಿಡಿದರೆ ಭಾರತ ಒಂದು ಕೋಮುವಾದಿ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಶೀಘ್ರಾತಿಶೀಘ್ರ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಧರ್ಮವನ್ನು ರಾಜಕೀಯದಲ್ಲಿ ಬೆರೆಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಕೂಡಾ ತಾನು ಜಾತ್ಯಾತೀತ ಪಕ್ಷ ಎಂಬುದನ್ನು ಮರೆತು ಮುಸ್ಲಿಂ ಪಕ್ಷದಂತೆ ವರ್ತಿಸುತ್ತಿರುವುದನ್ನು ಸಾಕುಮಾಡಬೇಕು. ಇಲ್ಲದಿದ್ದರೆ ಸುಖ ಜೀವನಕ್ಕೆ ದಾರಿದೀಪವಾಗಬೇಕಿದ್ದ ಧರ್ಮವು ಮನುಷ್ಯರನ್ನು ಪರಸ್ಪರ ಶತ್ರುಗಳಂತೆ ಬೀದಿಯಲ್ಲಿ ನಿಂತು ಕಾದಾಡುವಂತೆ ಮಾಡುತ್ತದೆ. ಇದಕ್ಕೆ ಧಾರ್ಮಿಕ ಮುಖಂಡರು, ಮಠಾಧೀಶರು, ಸಾಧು ಸನ್ಯಾಸಿಗಳು ನಿಜವಾದ ಧರ್ಮವನ್ನು ರಾಜಕೀಯೇತರವಾಗಿ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸಬೇಕು. ಧರ್ಮ ಅಂದರೆ ಮೋದಿ ಮಾತ್ರ ಅಲ್ಲ, ಧರ್ಮ ಅಂದರೆ ಬಿಜೆಪಿ ಮಾತ್ರ ಅಲ್ಲ, ಧರ್ಮ ಎಂದರೆ ಆರ್ ಎಸ್ ಎಸ್ ಮಾತ್ರ ಅಲ್ಲ, ಅದು ನಮ್ಮೆಲ್ಲರಿಗೂ ಸೇರಿದ್ದು‌. ಅದರ ಜವಾಬ್ದಾರಿ ನಮ್ಮೆಲ್ಲರದ್ದು ಎಂಬ ವಾತಾವರಣವನ್ನು ಪುನರ್ಸ್ಥಾಪಿಸಬೇಕು. ಹಾಗಾದಾಗ ಧರ್ಮ ರಾಜಕೀಯ ಬಣ್ಣ ಪಡೆಯುವುದು ತಪ್ಪುತ್ತದೆ.

ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!

ಮೇಲೆ ತಿಳಿಸಿದ ಈ ಎಲ್ಲ ಅಂಶಗಳೂ ಇಂದಿಗೆ ಬೀಜರೂಪದಿಂದ ಮೊಳಕೆಯ ಹಂತದಕ್ಕೆ ಬಂದು ನಿಂತಿರಬಹುದು. ತತ್ಕಾಲಕ್ಕೆ ಅಂತಹಾ ಆಪತ್ತೇನೂ ಇಲ್ಲವೆಂದು ತೋರುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ನೀರು ಗೊಬ್ಬರ ದೊರೆತು ಅದಕ್ಕೆ ಬೇಕಾದ ವಾತಾವರಣವೂ ದೊರೆತುಬಿಟ್ಟರೆ ದೇಶದ ರಾಜಕೀಯ ಪರಿಸ್ಥಿತಿ ತನ್ನ ದಿಕ್ಕು ಕಳೆದುಕೊಳ್ಳುವುದು ನಿಶ್ಚಿತ. ಕಾಲಚಕ್ರದಲ್ಲಿ ಇದು ಸಹಜ ಕೂಡಾ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಹೋಗಲೇಬೇಕು. ಆದರೆ ಆ ಕಾಲಚಕ್ರವು ತಲೆಕೆಳಕಾದಾಗ ಗೊಂದಲಕ್ಕೊಳಗಾಗುವ ಜನರನ್ನು ಎಚ್ಚರಿಸಲು ಮತ್ತು ಸರಿಯಾದ ದಾರಿ ತೋರುವ ಸಲುವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ನೆಲೆಯಲ್ಲಿ ಅಥವಾ ಇನ್ಯಾವುದೋ ರಾಜಕೀಯ ಪ್ರೇರಿತವಾದ ದೃಷ್ಟಿಕೋನದಲ್ಲಿ ಈ ಬೆಳವಣಿಗೆಗಳನ್ನು ನೋಡದೇ, ಸತ್ಯದ ದೃಷ್ಟಿಯಲ್ಲಿ ತ್ರಯಸ್ಥರಾಗಿ ನಿಂತು ನೋಡುವ ವರ್ಗವೊಂದು ಗಟ್ಟಿಕೊಳ್ಳಬೇಕಾಗಿದೆ. ಇಂತಹಾ ವರ್ಗವು ವಸ್ತುನಿಷ್ಠವಾಗಿ ಅವಲೋಕನ ಮಾಡಿ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಿಶ್ವಪ್ರಜ್ಞೆಯನ್ನು ವಿಶಾಲ ಧರ್ಮಪ್ರಜ್ಞೆಯೊಂದಿಗೆ ಸಮ್ಮಿಳಿಸಿ ಸಂಕುಚಿತವಲ್ಲದ ರಾಷ್ಟ್ರಿಯತೆಯ ದೀಪಕ್ಕೆ ತೈಲವೆರೆಯುವ ಗುರಿಯನ್ನು ಹೊಂದಿರಬೇಕಾಗುತ್ತದೆ. ಅಂತಹುದೊಂದು ಹೊಸ ವರ್ಗ ಈ ದೇಶದಲ್ಲಿ ಹುಟ್ಟಿ ಬೆಳೆದು ಬಿಜೆಪಿ‌ ಮತ್ತು ಕಾಂಗ್ರೆಸ್ ನ ಜೊತೆಗೆ ಇರುವ ಪಕ್ಷಗಳ‌ ಹಾಗೂ ಮುಂದೆ ಹುಟ್ಟಲಿರುವ ಪಕ್ಷಗಳ ದಾರಿಗೆ ಮಾರ್ಗದರ್ಶನ ಮಾಡುವಂತಾಗಲಿ ಮತ್ತು ದೇಶಕ್ಕೆ ದಾರಿ ದೀಪವಾಗಲೆಂದು ಆಶಿಸುತ್ತೇನೆ. ರಾಜಕೀಯವಾಗಲೀ ನೀರಾಗಲೀ ಸ್ಫಟಿಕ ಶುದ್ಧವಾಗಿರಬೇಕೆಂದರೆ ಕೆರೆಯ ಹಾಗೆ ನಿಂತಲ್ಲಿ ನಿಲ್ಲದೇ ಸದಾ ಹರಿಯುವ ನದಿಯಾಗಬೇಕಲ್ಲವೇ?

(ಲೇಖಕರು ಸ್ವತಂತ್ರ ಚಿಂತಕ, ಲೇಖಕ ಮತ್ತು ವಾಗ್ಮಿ)

Exit mobile version