ರಾಜ್ಯದಲ್ಲಿ ಸಿಎಂ, ಡಿಸಿಎಂಗಳಿಗಿಂತಲೂ ಶ್ಯಾಡೋ ಸಿಎಂಗಳ ಬಗ್ಗೆಯೇ ವಿಧಾನಸೌಧ ರೌಂಡ್ಸ್‌ನಲ್ಲಿ ಚರ್ಚೆ ಆಗುತ್ತಿದೆ. ಸಿ ಟಿ ರವಿ ರಾಜ್ಯ ಬಿಜೆಪಿ ಸಂಘಟನೆಯ ಸಾರಥಿ ಆಗುವುದು ಪಕ್ಕಾ ಆಗಿದೆ. ಇದರ ಹಿಂದೆ ಯಡಿಯೂರಪ್ಪ ಅವರ ಲೆಕ್ಕಾಚಾರ ವರ್ಕೌಟ್ ಆಗಿದೆ. ಇನ್ನು ಶಾಸಕರಾಗುವುದಕ್ಕಿಂತಲೂ ಪಿಎ, ಒಎಸ್‌ಡಿ ಆಗೋದು ಒಳ್ಳೆಯದು ಅನ್ನೋ ಅಸಮಾಧಾನ ಕೈ ಶಾಸಕರಲ್ಲಿ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರು ಬುದ್ಧಿವಂತ ರಾಜಕಾರಣಿಗಳಿಂದ ಕಿರಿಕಿರಿ ಇಲ್ಲ, ಅತಿಬುದ್ಧಿವಂತ ರಾಜಕಾರಣಿಗಳಿಂದ ಕಿರಿಕಿರಿ ಆಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು 90ರ ಗಡಿ ದಾಟಿದ ಬಳಿವೂ ಲೋಕಸಭೆ ಚುನಾವಣೆಗೆ ರೆಡಿ ಎಂದಿರುವುದು ಸುದ್ದಿ ಮಾಡುತ್ತಿದೆ.
ಯತೀಂದ್ರ, ಪ್ರಿಯಾಂಕ್ ಶ್ಯಾಡೋ ಸಿಎಂ, ಡಿ ಕೆ ಸುರೇಶ್ ಶ್ಯಾಡೋ ಡಿಸಿಎಂ!
ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಆಡಳಿತದಲ್ಲಿ ಮಕ್ಕಳ ಪಾತ್ರ ಹೆಚ್ಚಾಗಿದೆ ಅಂತ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ಈಗ ಈ ಆರೋಪದಿಂದ ಹೊರತಾಗಿಲ್ಲ. ಸಿದ್ದರಾಮಯ್ಯ ಅವರ ಕೆಲಸವನ್ನು ಯತೀಂದ್ರ ಮಾಡ್ತಿದ್ದಾರೆ, ಕೇವಲ ವರುಣ ಕ್ಷೇತ್ರಕ್ಕೆ ಇದು ಸೀಮಿತ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಇಡೀ ರಾಜ್ಯದ ಪತ್ರಗಳ ಪರಿಶೀಲನೆಯನ್ನು ಯತೀಂದ್ರ ಮಾಡಿ ಶ್ಯಾಡೋ ಸಿಎಂ ಅನಿಸಿಕೊಂಡಿದ್ದಾರೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಎಲ್ಲ ಇಲಾಖೆಗಳ ಬಗ್ಗೆ ಮಾತನಾಡುತ್ತಿದ್ದು, ಎಐಸಿಸಿ ಅಧ್ಯಕ್ಷರ ಮಗ ಸಹ ಈ ಸರ್ಕಾರದಲ್ಲಿ ಶ್ಯಾಡೋ ಸಿಎಂ ಪಾತ್ರ ವಹಿಸುತ್ತಿದ್ದಾರೆ ಅನ್ನೋ ಮಾತುಗಳು ವಿಧಾನಸೌಧದಲ್ಲಿ ಸಾಮಾನ್ಯವಾಗಿವೆ. ಇನ್ನು ಡಿ ಕೆ ಶಿವಕುಮಾರ್ ಹೆಸರಿಗಷ್ಟೇ ಡಿಸಿಎಂ. ಅವರ ಸಂಪೂರ್ಣ ಕೆಲಸ ನೋಡ್ತಿರುವುದು ಡಿ ಕೆ ಸುರೇಶ್. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಬದಲಿಗೆ ಕುಸುಮ ಅವರನ್ನ ಸ್ಪರ್ಧೆ ಮಾಡಿಸಿ ನಾನು ಎರಡೂವರೆ ವರ್ಷದ ಬಳಿಕ ಡಿಕೆಶಿಗೆ ಸಿಎಂ ಸ್ಥಾನ ಒಲಿದರೆ ಶಾಸಕರನ್ನ ನಿಯಂತ್ರಣ ಮಾಡ್ತೀನಿ ಅಂತ ಹೇಳ್ತಿದ್ದಾರಂತೆ! ಹೀಗಾಗಿ ಲೋಕಸಭಾ ಚುನಾವಣೆ ಬಗ್ಗೆ ಡಿ ಕೆ ಸುರೇಶ್‌ಗೆ ಆಸಕ್ತಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಜಾತಿ ಲೆಕ್ಕಾಚಾರ ಹಾಕಿದ ಬಿಜೆಪಿ: ಸಂತೋಷ್, ಬಿಎಸ್‌ವೈ ಮಾತಿಗೆ ಮಣೆ
ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಕ ಮಾಡುವ ವಿಚಾರದಲ್ಲಿ ಈ ಬಾರಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಮಣೆ ಹಾಕಲು ಮುಂದಾಗಿದೆ. ಸಿ ಟಿ ರವಿಗೆ ಪಕ್ಷ ನಿಷ್ಠೆ ಇದ್ದರೂ ಯಡಿಯೂರಪ್ಪ ಅವರ ಆಶೀರ್ವಾದ ಬೇಕು ಅನ್ನೋ ಸಂದೇಶ ರವಾನೆ ಮಾಡಲಾಗಿದೆ. ಈ ಹಿಂದೆ ತಾವು ಹೇಳಿದ್ದ ಕಿಚನ್ ಕ್ಯಾಬಿನೆಟ್ ಹೇಳಿಕೆಯ ತಪ್ಪು ತಿದ್ದಿಕೊಳ್ಳುವ ರೀತಿಯಲ್ಲಿ ಯಡಿಯೂರಪ್ಪ ಅವರನ್ನ ಕಿಚನ್‌ನಲ್ಲಿಯೇ ಭೇಟಿ ಮಾಡಿ ದೀರ್ಘ ದಂಡ ನಮಸ್ಕಾರ ಹಾಕಿ ನನಗೆ ಸಹಾಯ ಮಾಡಿ ಎಂದು ಬೇಡಿಕೊಂಡಿರುವುದು ಗಮನಾರ್ಹ. ಅದರ ಫಲ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಕೃಪೆಯಿಂದ ಸಿ ಟಿ ರವಿ ಅವರ ಮನೆ ಬಾಗಿಲಿನ ಮುಂದೆ ಅಧ್ಯಕ್ಷ ಪದವಿ ಕಾಯಲು ಶುರು ಮಾಡಿದೆ! ಮುಂದಿನ ವಾರ ಮನೆಯ ಒಳಗೆ ಪ್ರವೇಶ ಮಾಡಿ ರಾಜ್ಯ ಜವಾಬ್ದಾರಿ ಸಿ ಟಿ ರವಿ ಕೈ ಸೇರಬಹುದು. ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಪದವಿ ಸಿಕ್ಕರೆ ವಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಸಿಗುವುದು ಪಕ್ಕಾ. ಸದ್ಯ ರಾಜ್ಯ ನಾಯಕರಲ್ಲಿ ಬೊಮ್ಮಾಯಿ ಬೆಸ್ಟ್ ಅನ್ನೋ ರಿಪೋರ್ಟ್ ಅಮಿತ್ ಶಾ ಕೈ ಸೇರಿದೆಯಂತೆ.
ಸಿದ್ದರಾಮಯ್ಯಗೆ ಅತಿಬುದ್ಧಿವಂತ ಶಾಸಕರ ಕಾಟ
ಈ ವಾರ ಸಿದ್ದರಾಮಯ್ಯಗೆ ಸ್ವಲ್ಪ ಮುಜುಗರ ತಂದಿದ್ದು ಕಾಂಗ್ರೆಸ್ ಹಿರಿಯ ಶಾಸಕರು ಬರೆದ ಪತ್ರ. ಬಿ.ಆರ್ ಪಾಟೀಲ್ ಮತ್ತು ಬಸವರಾಜ ರಾಯರೆಡ್ಡಿ ಹೆಣೆದ ಪ್ರಚಾರ ತಂತ್ರಕ್ಕೆ ಹಲವು ಶಾಸಕರು ಮೋಸ ಹೋಗಿ ಸಹಿ ಹಾಕಿದರು. ತೀರ ಸುದ್ದಿ ಆದ ಬಳಿಕ ಆ ಪತ್ರ ನನ್ನದಲ್ಲ ಅಂದರು. ಅಷ್ಟೊತ್ತಿಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಆಗಬೇಕಿದ್ದ ಮುಜುಗರ ಆಗಿ ಹೋಗಿತ್ತು. ಬಿ ಆರ್ ಪಾಟೀಲ್ ಮತ್ತು ರಾಯರೆಡ್ಡಿಗೆ ಕರೆ ಮಾಡಿ ಸಿದ್ದರಾಮಯ್ಯ ಕೇಳಿದರೆ ರಾಯರೆಡ್ಡಿ, ನಾವು ಇದೀವಿ ಅನ್ನೋದು ಗೊತ್ತಾಗಬೇಕಲ್ಲ ಅಂದ್ರಂತೆ. ಅದಕ್ಕೆ ಸಿದ್ದರಾಮಯ್ಯ ನೀನು ಬುದ್ಧಿವಂತ ಅಲ್ಲ, ಅತಿಬುದ್ಧಿವಂತ. ನಿಮ್ಮಂಥವರಿಂದಲೇ ನನಗೆ ತೊಂದರೆ ಆಗ್ತಿರುವುದು ಎಂದು ರೇಗಾಡಿದರಂತೆ. ಇದು ನಮಗೆ ಗೊತ್ತಾಗಿದ್ದು, ಸಿಎಂ ಕಿಚನ್ ಕ್ಯಾಬಿನೆಟ್‌ನಲ್ಲಿ ಇರುವ ಒಬ್ಬ ಹಿರಿಯ ರಾಜಕಾರಣಿಯಿಂದ.
90 ದಾಟಿದರೂ ಗೌಡರ ಉತ್ಸಾಹ ಕಡಿಮೆ ಆಗಿಲ್ಲ
ದೇವೇಗೌಡರ ವಯಸ್ಸಿನವರು ಸಕ್ರಿಯ ರಾಜಕಾರಣದಲ್ಲಿ ಇರೋದು ಬಹಳ ಕಡಿಮೆ. ಶ್ಯಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರಿಗಿಂತಲೂ ದೇವೇಗೌಡರೇ ಹಿರಿಯರು. ಆದರೆ ದೇಹಕ್ಕೆ ವಯಸ್ಸು ಆದರೂ ರಾಜಕಾರಣ ಮಾಡಲು ನನಗಿನ್ನೂ ವಯಸ್ಸಿದೆ ಅಂತ 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದಾರಂತೆ. ಕೊನೆಯ ಚುನಾವಣೆ ಹಾಸನದಿಂದ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಅಂತ ಒಬ್ಬ ಜ್ಯೋತಿಷಿ ಹೇಳಿದ್ದಾರಂತೆ. ಎಲ್ಲ ವಿಚಾರದಲ್ಲೂ ದಿನ, ಗಳಿಗೆ ನೋಡುವ ದೊಡ್ಡ ಗೌಡರು ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ಮೂಲಕ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಈ ಬಾರಿ ಟಿಕೆಟ್ ಇಲ್ಲ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ಬಿಜೆಪಿ ನಾಯಕರಿಗೆ ಈಗ ಜೆಡಿಎಸ್ ಬಾಸ್!
ಶಾಸಕ ಆಗುವುದಕಿಂತಲೂ ಒಎಸ್‌ಡಿ ಆಗುವುದು ಬೆಟರ್!
ನೂತನವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ ಕಾಂಗ್ರೆಸ್‌ನ ಹಲವು ಶಾಸಕರು ಈ ಮಾತನ್ನ ಹೇಳುತ್ತಿದ್ದಾರೆ. ಕೆಲಸ ಅಂತ ಸಚಿವರ ಬಳಿ ಹೋದ್ರೆ ಒಎಸ್ಡಿ ಮತ್ತು ಪಿಎಗಳ ಪರ್ಮಿಷನ್ ತಗೊಂಡು ಹೋಗಬೇಕು. ಅವರು ಟೈಮ್ ಹೇಳಿದ ಮೇಲೆ ಹೋಗಬೇಕು. ಬಹಿರಂಗವಾಗಿ ವ್ಯವಹಾರದ ಮಾತನಾಡುತ್ತಾರೆ. ಹೀಗಾಗಿ ಕೋಟಿ ಕೋಟಿ ಖರ್ಚು ಮಾಡಿ ಶಾಸಕರರಾಗುವುದಕ್ಕಿಂತಲೂ ಒಬ್ಬ ಸಚಿವರ ಬಳಿ ಪಿಎ ಇಲ್ಲವೇ ಒಎಸ್ಡಿ ಆಗಿ ಸೇರಿಕೊಳ್ಳುವುದು ಉತ್ತಮ ಅಂತ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ. ಶಾಸಕನ ಸಮಸ್ಯೆ ಕೇಳಿ ಸಿದ್ದರಾಮಯ್ಯ ಸಮಸ್ಯೆ ಬಗೆಹರಿಸುವ ಮಾತನಾಡಿದ್ದಾರಂತೆ. ಶಾಸಕ ಹೊರ ಬರುವಾಗ ಸಮಸ್ಯೆ ಬಗೆಹರಿಸುವುದು ಅಂದ್ರೆ ನನ್ನ ಒಎಸ್ಡಿಯಾಗಿ ಕಳಿಸ್ತಾರಾ ಅನ್ನೋ ಮಾತಿಗೆ ಜತೆಯಲ್ಲಿ ಇದ್ದ ಶಾಸಕರು ನಗೆಗಡಲಿಲ್ಲ ತೇಲಾಡಿದ್ದಾರೆ.