Site icon Vistara News

ವಿಧಾನಸೌಧ ರೌಂಡ್ಸ್‌: ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಬಿಜೆಪಿ ನಾಯಕರಿಗಿಲ್ಲ ಚೇತರಿಕೆಯ ಮನಸ್ಸು

congress bjp

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಕರ್ತರಲ್ಲಿ (ವಿಧಾನಸೌಧ ರೌಂಡ್ಸ್‌) ಕಳೆ ಹೆಚ್ಚಾಗಿದೆ. ವಿಧಾನಸೌಧ ಪಡಸಾಲೆ ಮಾರುಕಟ್ಟೆಯಂತಾಗಿ ಬಿಟ್ಟಿದೆ. ಇತ್ತ ಸೋತ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ನೇಮಕ ಮಾಡಲೂ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಹುಮ್ಮಸ್ಸು ಇಲ್ಲದಾಗಿದೆ. 21 ದಿನಗಳ ಸರ್ಕಾರದ ವಿರುದ್ಧ ಕುಮಾರಸ್ವಾಮಿ 45% ಕಮಿಷನ್ ಆರೋಪ ಮಾಡಿರುವುದು ರಾಜ್ಯದ ಗಮನ ಸೆಳೆದಿದೆ… ನೀವು ಒಮ್ಮೆ ವಿಧಾನಸೌಧ ರೌಂಡ್ಸ್‌ ಹಾಕಿ ಬಿಡಿ.

ಅಕ್ಕ ಸಚಿವೆ – ತಮ್ಮನ ದರ್ಬಾರ್

ಮೂರು ದಿನಗಳ ಹಿಂದೆ ಸುದ್ದಿ ಮಾಧ್ಯಮ ಮಿತ್ರರು ವಿಧಾನಸೌಧದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ರಿಯಾಕ್ಷನ್ ಪಡೆಯಲು ಸಚಿವರ ಕೊಠಡಿಗೆ ತೆರಳಿದ್ದರು. ಬಾಗಿಲು ತೆಗೆದ ತಕ್ಷಣ ಮುಂದೆಯೇ ಇದ್ದ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ನಿಮ್ಮನ್ನ ಕರೆದವರು ಯಾರು, ಅನುಮತಿ ಪಡೆದಿದ್ದೀರಾ ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದ್ದಾರೆ. ಮೊದಲೇ ಗೃಹ ಲಕ್ಷ್ಮೀ ಮಾರ್ಗಸೂಚಿ ಹೊರಡಿಸುವಲ್ಲಿ, ದಿನಕೊಂದು ಹೇಳಿಕೆ ಕೊಟ್ಟು ರಾಜ್ಯದ ಜನರಿಗೆ ಕಿರಿಕಿರಿ ಕೊಟ್ಟಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ರಿಯಾಕ್ಷನ್ ಪಡೆಯಲು ಹೋದ್ರೆ ಅನುಮತಿ ಕೇಳಿದ ಹಟ್ಟಿಹೊಳಿಗೆ ಪತ್ರಕರ್ತರು ಲೆಫ್ಟ್ ರೈಟ್ ತಗೊಂಡಿದ್ದಾರೆ. who are you ಅಂತ ಪತ್ರಕರ್ತರು ಕೇಳಿದ್ದಾರೆ. ನಾನು ಎಂಎಲ್ಸಿ. ಅವರ ತಮ್ಮ ಅಂದ ತಕ್ಷಣ, ಎಂಎಲ್ಸಿ ಆದ್ರೆ ನಿಮಗೆ ಅಂತ ಎಲ್ಎಚ್‌ನಲ್ಲಿ ರೂಂ ಇದೆ. ಸಹೋದರ ಆದ್ರೆ ಅದು ಮನೆಯಲ್ಲಿ. ರಿಯಾಕ್ಷನ್‌ಗೆ ಬಂದಾಗ ಅನುಮತಿ ತೆಗೆದುಕೊಂಡು ಬರಲು ಆಗಲ್ಲ ನಡೀ ನೋಡಿದ್ದೀವಿ ಅಂತ ನಮ್ಮವರು ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಕೊನೆಗೆ “ಗೃಹ ಲಕ್ಷ್ಮಿʼ ಹೆಬ್ಬಾಳ್ಕರ್, ಮಗ ತೆರಿಗೆ ಕಟ್ಟಿದ್ರೂ ತಾಯಿಗೂ ಸಿಗುತ್ತೆ ಗ್ಯಾರಂಟಿ ಅಂತ ಹೇಳಿ ಸಾರಿ ಬ್ರದರ್ ಅಂತ ಗಲಾಟೆ ತಣ್ಣಗೆ ಮಾಡಿದ್ದಾರೆ. ಹೊರ ಬಂದ ತಕ್ಷಣ ಪಕ್ಕದಲ್ಲಿ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, ಅಣ್ಣಾ ಸರಿಯಾಗಿ ಹೇಳಿದ್ರಿ. ಏನು ಇದನ್ನ ಇವರು ಹೋಮ್‌ ಆಫೀಸ್ ಮಾಡಿಕೊಂಡಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಈ ಇಲಾಖೆ ಇತ್ತೀಚೆಗೆ ಮೊಟ್ಟೆ ವಿತರಣೆಯಲ್ಲಿ ಸುದ್ದಿ ಆಗಿತ್ತು. ಆದರೆ ಸಚಿವೆ ಆದ 10 ದಿನಕ್ಕೆ ಹೆಬ್ಬಾಳ್ಕರ್ ಸುದ್ದಿ ಆಗಿದ್ದು ಬೆಳಗಾವಿಯಲ್ಲೂ ಚರ್ಚೆಗೆ ಕಾರಣವಾಗಿದೆ.

Basavaraj Bommai

ಸ್ತ್ರೀಗೆ ಶಕ್ತಿ ತುಂಬಿದ ಕಾಂಗ್ರೆಸ್, ಲೋಕಸಭೆವರೆಗೂ ಗ್ಯಾರಂಟಿ!

ಕಾಂಗ್ರೆಸ್ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಅತಿಹೆಚ್ಚು ಜನಪ್ರಿಯ ಆಗುವ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸ್ಕೀಮ್. ಭಾನುವಾರದಿಂದ ಅದು ಸಹ ಶುರುವಾಗಿದೆ. ಆದ್ರೆ ಗ್ಯಾರಂಟಿ ಘೋಷಣೆ ಆದ ದಿನದಿಂದ ಮಹಿಳೆಯರು ಇದರ ಮೇಲೆ ಕಣ್ಣಿಟ್ಟಿದ್ರು. ವಿಧಾನಸೌಧದಲ್ಲಿ ಸಿಕ್ಕಿದ ಮಹಿಳಾ ಅಧಿಕಾರಿ Its wonderful scheme, But it is possible up to Lokasabh ಅಂದು ಬಿಟ್ರು. ಈ ಸ್ಕೀಮ್ ಲೋಕಸಭೆ ದಾಟಿ ಮುಂದೆ ನಡೆಯಬಹುದೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಹುಮ್ಮಸ್ಸು ಕಳೆದುಕೊಂಡ ಬಿಜೆಪಿ

ಮಹಾಭಾರತ ಯುದ್ಧ ನಡೆಯುವ 18ನೇ ದಿನಕ್ಕೆ ತನ್ನವರನ್ನು ಕಳೆದುಕೊಂಡ ದುರ್ಯೋಧನ ನದಿ ನೀರಿನಡಿ ಅಡಗಿ ಕುಳಿತಿರುತ್ತಾನೆ. ಅದು ಪಾಂಡವರಿಗೆ ಹೆದರಿಕೊಂಡು ಅಲ್ಲ, ತನ್ನವರನ್ನು ಕಳೆದುಕೊಂಡ ದುಃಖ ದೂರ ಮಾಡಿಕೊಳ್ಳಲು ಎನ್ನುತ್ತಾನೆ. ಅಲ್ಲಿಗೆ ಪಾಂಡವರು ಬಂದು ದುರ್ಯೋಧನನನ್ನು ಪ್ರಚೋದಿಸುವ ರೀತಿಯಲ್ಲಿ ಭೀಮನಲ್ಲಿ ಮಾತನಾಡಿಸುತ್ತಾರೆ. ಇಡೀ ನದಿಯೇ ದುರ್ಯೋಧನನ ಕೋಪಕ್ಕೆ ಕುದಿಯಲು ಆರಂಭವಾಗುತ್ತದೆ. ಸೋಲು ಮತ್ತು ಸಾವು ತನ್ನ ಸಮೀಪಕ್ಕೆ ಬಂದಾಗಲೂ ದುರ್ಯೋಧನ ಅಂಜಲಿಲ್ಲ. ಗದೆ ಎತ್ತಿದ ಭೀಮನ ದೇಹಕ್ಕೆ ಗಾಯವಾಗುವವರೆಗೂ ಹೊಡೆದ. ಕೊನೆಗೆ ಭೀಮನು ದುರ್ಯೋಧನನನ್ನ ಆಯಾಸಗೊಳಿಸಲು ಓಡಲು ಶುರು ಮಾಡುತ್ತಾನೆ. ಶತ್ರು ಆಯಾಸವಾದರೆ ಬಳಿಕ ಆತನ ಮೇಲೆ ಪ್ರಹಾರ ಮಾಡಿ ಗೆಲ್ಲಬಹುದು ಅನ್ನೋ ಲೆಕ್ಕಾಚಾರ. ಕೊನೆಗೆ ಓಡಿ ಓಡಿ ಸುಸ್ತಾದ ದುರ್ಯೋಧನನ ಮೇಲೆ ಗದೆ ಬೀಸಿ ಕೆಳಗೆ ಬೀಳಿಸುತ್ತಾನೆ. ಇದರ ತಾತ್ಪರ್ಯ. ಇಬ್ಬರೂ ಸಹ ಗೆಲ್ಲುವುದು ಅಷ್ಟು ಸುಲಭ ಇಲ್ಲದಿದ್ದರೂ ಕೊನೆಯ ಕ್ಷಣದವರೆಗೂ ಹೋರಾಟ ಮಾಡಿದರು. ಆದರೆ ರಾಜ್ಯ ಬಿಜೆಪಿ ಸೋತ ಬಳಿಕ ಸಂಘಟನೆಗೆ ಚುರುಕು ಮುಟ್ಟಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ವಿಪಕ್ಷ ನಾಯಕನ ನೇಮಕ ಮಾಡುವ ಮನಸ್ಸು ಸಹ ಮಾಡಲಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗುವಂತಾಗಿದೆ.

Basavaraj Bommai

ಕುಮಾರಸ್ವಾಮಿ ಹಿಟ್ ಅಂಡ್ ರನ್ ಆಗದಿದ್ರೆ ಸಾಕು!

ಸರ್ಕಾರ ಬಂದ 20 ದಿನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯದ್ದು 40% ಸರ್ಕಾರವಾದ್ರೆ, ಕಾಂಗ್ರೆಸ್‌ನದು 45% ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ 2008ರಿಂದ ಇಲ್ಲಿಯವರೆಗೂ ಹಲವು ಆರೋಪ ಮಾಡಿದ್ದಾರೆ. ಅದಕ್ಕೆ ದಾಖಲೆ ಸಹ ಅವರ ಬಳಿ ಇರ್ತಾವೆ. ಆದರೆ ಯಾವ ಆರೋಪವನ್ನೂ ಅವರು ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಲ್ಲ ಅನ್ನೋ ಆರೋಪ ಇದ್ದೇ ಇದೆ. ಅದರ ಹಿಂದೆ ಅಡ್ಜೆಸ್ಟ್ಮೆಂಟ್ ರಾಜಕಾರಣದ ಆರೋಪ ಇದೆ. ಹೀಗಾಗಿ ಕುಮಾರಸ್ವಾಮಿ ಈ ಬಾರಿ ಹಿಟ್ ಅಂಡ್ ರನ್ ಆಗಬಾರದು. ಜೆಡಿಎಸ್ 19 ಸ್ಥಾನಕ್ಕೆ ಬಂದು ನಿಂತಿರುವುದರಿಂದ ಫಿನಿಕ್ಸ್ ಅಂತೆ ಎದ್ದು ಬರಬೇಕು ಅನ್ನೋದಾದ್ರೆ ಕುಮಾರಸ್ವಾಮಿ ಹಿಟ್ ಅಂಡ್ ರನ್ ಆರೋಪದಿಂದ ಹೊರ ಬರಲೇಬೇಕು. ದಾಖಲೆ ಸಮೇತ ಇಟ್ಟು ಮುಂದಿನ ಲೋಕಸಭಾ ಚುನಾವಣೆಗೆ ಫಿನಿಕ್ಸ್‌ ಹಕ್ಕಿಯಂತೆ ಎದ್ದು ಬರಬೇಕು ಎನ್ನುತ್ತಿದ್ದಾರೆ ಅವರದೇ ಪಕ್ಷದ ಕಾರ್ಯಕರ್ತರು.

ಅಭಿಷೇಕ್ ಮದುವೆಗೆ ಕರೆದವರು ಬರಲಿಲ್ಲ… ಬರುವವರನ್ನ ಇವರು ಕರೆಯಲಿಲ್ಲ!

ಹೀಗೆ ಒಂದು ದಿನ ವಿಧಾನಸೌಧ ರೌಂಡ್ಸ್ ಹಾಕುತ್ತಿದ್ದಾಗ ನೀವು ಅಭಿಷೇಕ್ ಮದುವೆಗೆ ಬಂದ ಎಲ್ಲರನ್ನೂ ತೋರಿಸಿದ್ರಿ, ಆದರೆ ದೇವೇಗೌಡರು ಮತ್ತು ಕುಟುಂಬದವರನ್ನ ಯಾಕೆ ತೋರಿಸಲಿಲ್ಲ ಅಂತ ಒಬ್ಬರು ಪ್ರಶ್ನೆ ಮಾಡಿದ್ರು. ದೇವೇಗೌಡರನ್ನ ಮತ್ತು ಅವರ ಕುಟುಂಬವನ್ನ ಸುಮಲತಾ ಹಾಗೂ ಅಭಿಷೇಕ್ ಕರೆದಿದ್ದು ನಿಜ. ಆದರೆ ಅವರು ಮದುವೆಗೆ ಬರಲಿಲ್ಲ ಅಂದೆ. ಇದೇನು? ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ ಅಲ್ಲವೇ ಅಂದರವರು. ಅದು ದೊಡ್ಡ ಗೌಡರನ್ನ ಕೇಳಬೇಕು ಅಂದು ಸುಮ್ಮನಾದೆ. ಇನ್ನು ಡಿಕೆಶಿ ಕರೆದಿದ್ರೆ ಹೋಗ್ತಿದ್ರು. ಆದರೆ ಸುಮಲತಾ ಕಡೆಯಿಂದ ಅಹ್ವಾನ ಹೋಗಿಲ್ಲವಂತೆ ಅಂದೆ. ಅಭಿಷೇಕ್ ಮದುವೆಗೆ ದೇವೇಗೌಡರು, ಡಿಕೆಶಿ ಬಾರದಿರಲು ರಾಜಕೀಯ ಅಡ್ಡ ಬಂದಿದ್ದು ಮಾತ್ರ ಸತ್ಯ.

ಇದನ್ನೂ ಓದಿ: ವಿಧಾನಸೌಧ ರೌಂಡ್ಸ್‌: ರೌಂಡ್‌ ಟೇಬಲ್‌ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್‌!

ನಮ್ಮವರು, ತಮ್ಮವರ ಮರೆತರೆ ಸಿದ್ದರಾಮಯ್ಯಗೆ ಕಷ್ಟ

ಸಿದ್ದರಾಮಯ್ಯ ಸಿಎಂ ಆದ ತಕ್ಷಣ ಕುಮಾರಪಾರ್ಕ್ ರಸ್ತೆ ಬ್ಯುಸಿ ಆಗಿದೆ. ಸಿದ್ದರಾಮಯ್ಯ ಗೆಲುವಿಗೆ ದುಡಿದವರಿಗಿಂತಲೂ ಬೇರೆಯವರೇ ಜಾಸ್ತಿ ಕಾಣಿಸುತ್ತಿದ್ದಾರೆ. ಸಿಎಂ ಆದ ತಕ್ಷಣವೇ ಫೈಲ್ ಹಿಡಿದುಕೊಂಡು ಬರುವವರ ಸಂಖ್ಯೆ ಜಾಸ್ತಿ ಆಗಿದೆ. ಸಿದ್ದರಾಮಯ್ಯ ಮನೆಯ ಸುತ್ತಮುತ್ತ ಯಾವತ್ತೂ ನೋಡದವರ ಸಂಖ್ಯೆ ಹೆಚ್ಚಿದೆ. ಸಿದ್ದರಾಮಯ್ಯ ಈ ವಿಚಾರದಲ್ಲಿ ಎಚ್ಚರಿಕೆ ವಹಿಸದಿದ್ದರೆ ಕೊನೆಯ ಇನ್ನಿಂಗ್ಸ್‌ನಲ್ಲಿ ಡಕ್ ಔಟ್ ಆದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನಡೆಸಿ, ಹ್ಯಾಪಿ ಎಂಡಿಂಗ್ ಪಡೆಯಲಿ ಎಂಬುದು ಅವರ ಆಶಯ.

Exit mobile version