ಜನರ ಸಮಸ್ಯೆಗಳನ್ನು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಿದ್ದ ಸದನ ರಾಜಕೀಯ ಪಕ್ಷಗಳ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿದೆ. ಒಮ್ಮೆ ಗೆದ್ದರೂ ಜೀವನಪರ್ಯಂತ ನಾನಾ ಪ್ರಯೋಜನಗಳು ಶಾಸಕರಿಗೆ ಸಿಗುತ್ತದೆ. ಆದರೆ ದಿನಾಬೆಳಗ್ಗೆ ನಾನಾ ಸಮಸ್ಯೆಗಳ ಜತೆ ಗುದ್ದಾಡುವ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಮೂರೂ ಪಕ್ಷಗಳ ಶಾಸಕರಿಗೆ ಆಸಕ್ತಿ ಇರುವುದಿಲ್ಲ. ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಸದನದ ಕಲಾಪ ಹಾಳು ಮಾಡುವುದು ಸರಿಯಲ್ಲ.
2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಕ್ಷೇತರ ಶಾಸಕರನ್ನು ಅಮಾನತು ಮಾಡಿದಾಗ ಇಡೀ ದೇಶ ಕರ್ನಾಟಕದ ಬಗ್ಗೆ ಕುಹಕವಾಡಿತು. 2021ರಲ್ಲಿ ಸಭಾಪತಿ ನೇಮಕ ವಿಚಾರದಲ್ಲಿ ಪರಿಷತ್ ನಲ್ಲಿ ಸದಸ್ಯರು ನಡೆದುಕೊಂಡ ರೀತಿ ಅಸಹ್ಯವಾಗಿತ್ತು. ಈಗ ಅಂಥದ್ದೆ ಮತ್ತೊಂದು ಘಟನೆಗೆ 16ನೇ ವಿಧಾನಸಭೆ ಸಾಕ್ಷಿಯಾಗಿದೆ. ಸ್ಪೀಕರ್ ಊಟಕ್ಕೆ ಬಿಡಲಿಲ್ಲ ಅನ್ನೋ ಕಾರಣಕ್ಕೆ ಪ್ರತಿಪಕ್ಷ ಸದಸ್ಯರು ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಪೇಪರ್ ಎಸೆದಿದ್ದು ಅಕ್ಷಮ್ಯ. ಅಮಾನತು ಆದ ಬಳಿಕ ಸ್ಪೀಕರ್ ಕಚೇರಿ ಮುಂದಿನಿಂದ ಹಿರಿಯ ಮುಖಂಡರನ್ನು ಎತ್ತಿಕೊಂಡು ಹೋಗಬೇಕಾಯಿತು. ಆ ದೃಶ್ಯ ರಾಜಕಾರಣಿಗಳಿಗೆ ಭೂಷಣವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಜನಪರ ಧ್ವನಿ ಆಗಬೇಕು. ಆದರೆ ಜನರ ಸಮಸ್ಯೆಗಳನ್ನು ಬದಿಗೊತ್ತಿ ಪೇಪರ್, ಟಿವಿಯಲ್ಲಿ ಹೆಡ್‌ಲೈನ್ ಆಗುವುದಕ್ಕೆ ಸಿಮೀತ ಆಗಬಾರದು.
ಪ್ರಾದೇಶಿಕ ಪಕ್ಷದ ಮುಂದೆ ಮಂಕಾದ ಬಿಜೆಪಿ
ಈ ಬಾರಿ ಸದನ ನಡೆದ 15 ದಿನಗಳಲ್ಲಿ ಜೆಡಿಎಸ್ ಎತ್ತಿಕೊಂಡ ಎಲ್ಲಾ ವಿಚಾರಗಳಿಗೂ ಬಿಜೆಪಿ ಸಾಥ್ ನೀಡಿತು. ಅಂದರೆ ಸರ್ಕಾರದ ವಿರುದ್ಧ ಯಾವ ಅಸ್ತ್ರ ಬಳಸಬೇಕು ಎನ್ನುವ ಪೂರ್ವ ತಯಾರಿಯನ್ನು ಬಿಜೆಪಿ ಮಾಡಿರಲಿಲ್ಲ ಎನ್ನುವುದು ಸ್ಪಷ್ಟವಾಯಿತು. ವರ್ಗಾವಣೆ ದಂಧೆ, ಸರ್ಕಾರಿ ಅಧಿಕಾರಿಗಳ ಪ್ರೋಟೋಕಾಲ್ ಇತ್ಯಾದಿ ವಿಚಾರಗಳನ್ನು ಎತ್ತಿಕೊಂಡಿದ್ದು ಜೆಡಿಎಸ್. ಅದನ್ನ ಹೋರಾಟದ ಕೊನೆ ಮುಟ್ಟಿಸಿದ್ದು ಮಾತ್ರ ಬಿಜೆಪಿ. ಕೊನೆಯ ದಿನ ಕುಮಾರಸ್ವಾಮಿ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬೊಮ್ಮಾಯಿ ಸೇರುವುದರ ಮೂಲಕ ರಾಷ್ಟ್ರೀಯ ಪಕ್ಷಕ್ಕಿಂತ ಪ್ರಾದೇಶಿಕ ಪಕ್ಷ ಹೆಚ್ಚು ಮಹತ್ವ ಪಡೆದಿರುವುದು ಸ್ಪಷ್ಟವಾಯಿತು. ಜೆಡಿಎಸ್ ಕಚೇರಿಗೆ ಹೋಗುವುದಕ್ಕೆ ಬೊಮ್ಮಾಯಿಗೆ ಇಷ್ಟವಿರಲಿಲ್ಲ. ಆದರೆ ದೆಹಲಿಯಿಂದ ಬಂದ ಕರೆ ಅವರನ್ನು ಜೆಡಿಎಸ್ ಕಚೇರಿಗೆ ಹೋಗುವಂತೆ ಮಾಡಿತು ಎನ್ನಲಾಗುತ್ತಿದೆ.
ಕಾಂಗ್ರೆಸ್ ಮೂಲ ಮತ್ತು ವಲಸಿಗರ ನಡುವೆ ಫೈಟ್
ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಮೂಲ ಮತ್ತು ವಲಸಿಗ ಅನ್ನೋ ವಿಚಾರ ಸದಾ ಜೀವಂತವಾಗಿ ಇರುತ್ತದೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದ ಬಳಿಕವೂ ಇದು ಜೋರಾಗಿದೆ. ಬಿ ಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಸಚಿವ ಸ್ಥಾನ ತಪ್ಪೋಕೆ ಕಾರಣ ಸಿದ್ದರಾಮಯ್ಯ ಅಂತ ಹೇಳಿದ್ದಾರೆ. ನಾನು ಐದು ರಾಜ್ಯಗಳಲ್ಲಿ ಸಿಎಂ ಮಾಡಿದ್ದೇನೆ. ಸಮಯ ಬಂದಾಗ ಬದಲಿಸಿದ್ದೇನೆ. ಆ ಚಾಕಚಕ್ಯತೆ ನನಗೆ ತಿಳಿದಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮಾತು ಕೇಳಿಸಿಕೊಂಡಿರುವ ಮೂಲ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಅಲ್ಲ, ಎರಡೂವರೆ ವರ್ಷಗಳ ಸಿಎಂ ಅನ್ನುತ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಅವರ ಹಿಂದೆ ಇರುವ ವಲಸಿಗರ ಟೀಮ್, ಕಿಚನ್ ಕ್ಯಾಬಿನೆಟ್‌ನಲ್ಲಿ ಇದ್ದೇನೆ ಅನ್ನುತ್ತಿದ್ದವರಿಗೆ ಮಂತ್ರಿ ಸ್ಥಾನ ಸಹ ಸಿಗಲಿಲ್ಲ. ಈಗ ಅವರು ಹಲ್ಲು ಕಿತ್ತ ಹಾವು. ಬುಸ್ ಬುಸ್ ಅನ್ನಬಹುದು. ಆದರೆ ಕಚ್ಚಲು ಆಗಲ್ಲ ಅಂತಿದ್ದಾರೆ!
ಮಧು ಬಂಗಾರಪ್ಪ ಹೇರ್ ಸ್ಟೈಲ್ ಬೇಕೆಂದ ವಿದ್ಯಾರ್ಥಿ!
ವಿಧಾನಸಭೆ ನಡೆಯುವಾಗ ಸಹಜವಾಗಿ ಸದನದ ಕಲಾಪ ನೋಡಲು ಜನ ಬರ್ತಾರೆ. ಬಂದವರ ಪೈಕಿ ಒಬ್ಬರ ಜತೆ ವಿಧಾನ ಸೌಧದ ಹೋಟೆಲ್‌ನಲ್ಲಿ ಟೀ ಕುಡಿಯುತ್ತಿದ್ದಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾದು ಹೋದರು. ಆಗ ನೋಡುತ್ತಿದ್ದ ಆ ವ್ಯಕ್ತಿ, ಮೊನ್ನೆ ನನ್ನ ಮಗನನ್ನ ಹೇರ್ ಕಟಿಂಗ್‌ಗೆ ಕರೆದುಕೊಂಡು ಹೋಗಿದ್ದೆ. ಮಂತ್ರಿ ಸ್ಟೈಲ್ ಕಟಿಂಗ್ ಬೇಕು ಎಂದು ಹಠ ಹಿಡಿದ ಎನ್ನಬೇಕೆ! ಮಗ ಹಟ ಬಿಡದಿದ್ದಾಗ ಕೊನೆಗೆ ಎರಡು ಏಟು ಬಿಟ್ಟು ಕಟಿಂಗ್ ಮಾಡಿಸಿಕೊಂಡು ಬಂದರಂತೆ. ಮಧು ಬಂಗಾರಪ್ಪ ಕೂದಲನ್ನು ಪ್ರತ್ಯಕ್ಷ ನೋಡಿದ ಮೇಲೆ ಅವರಿಗೆ ಮಗನ ಡಿಮ್ಯಾಂಡ್ ಅರ್ಥವಾಯಿತು! ಮಧು ಬಂಗಾರಪ್ಪ ಈಗ ಶಿಕ್ಷಣ ಸಚಿವರು. ವಿದ್ಯಾರ್ಥಿಗಳ ಶಿಸ್ತಿನ ದೃಷ್ಟಿಯಿಂದಾರೂ ಅವರ ಹೇರ್ ಸ್ಟೈಲ್ ಬದಲಾಗಬೇಕು ಎಂಬ ಒತ್ತಾಯ ಕೇಳಿ ಬರ್ತಿದೆ.
ಸಿ ಟಿ ರವಿ ಸೋಲಿಸಿದ್ದು ನಾನೇ!
ಚಿಕ್ಕಮಗಳೂರು ಶಾಸಕ ತಮ್ಮಯ್ಯ ಅವರ ವರಸೆ ಗಮನ ಸೆಳೆಯುತ್ತಿದೆ. ಅವರೀಗ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವಾಗ, ತಮ್ಮ ಹೆಸರಿಗಿಂತಲೂ ಹೆಚ್ಚಾಗಿ, ನಾನು ಸಿ ಟಿ ರವಿ ಅವರನ್ನು ಸೋಲಿಸಿದ ತಮ್ಮಯ್ಯ ಅಂತ ಹೇಳಿಕೊಳ್ತಿದ್ದಾರೆ!