Site icon Vistara News

ವಿಸ್ತಾರ ಅಂಕಣ: ಮತದಾರರು ʼದೇವರ’ ರೀತಿ ಹಕ್ಕು ಚಲಾಯಿಸುತ್ತಾರ? ʼದೇವರʼ ರೀತಿ ಸುಮ್ಮನೆ ಕೂರುತ್ತಾರ?

voters india

“ರಾಜ್ಯಗಳನ್ನು ಒಗ್ಗೂಡಿಸುವಿಕೆ ಹಾಗೂ ಸಮಾನತೆಯನ್ನು ಮೂಡಿಸುವುದಕ್ಕಿಂತಲೂ ಮುಖ್ಯವಾದ ಕೆಲಸವೊಂದು ನಮ್ಮ ಮುಂದಿದೆ. ಅದು- ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಪ್ರಜಾಪ್ರಭುತ್ವ ಚುನಾವಣೆ. ಇದಕ್ಕೆ ಸರಿ ಸಮನಾದ ಶಕ್ತಿ ಇಡೀ ವಿಶ್ವದ ಇತಿಹಾಸದಲ್ಲಿ ಮತ್ಯಾವುದಕ್ಕೂ ಇಲ್ಲ. ಗಾಢ ನಿದ್ರೆಯಲ್ಲಿರುವ ಈ ದೇಶವನ್ನು ಎಚ್ಚರಿಸುವುದರ ಜತೆಗೆ ತನ್ನ ಶಕ್ತಿ ಹಾಗೂ ಸಾಮರ್ಥ್ಯದ ಅರಿವನ್ನು ಇದು ಮೂಡಿಸುತ್ತದೆ ಎಂದು ನಾನು ಆಶಿಸುತ್ತೇನೆ. ನೀವೆಲ್ಲರೂ ಮತವನ್ನು ಚಲಾಯಿಸುವ ಹಾಗೂ ನಿಮ್ಮ ಆಯ್ಕೆಯನ್ನು ಮಾಡುವ ಸಂದರ್ಭದಲ್ಲಿ Vox populi, vox Dei (The voice of the people is the voice of the god) ಎಂಬ ಮಾತನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಕೈಯಲ್ಲಿ ಈಗ ದೇವರ ಶಕ್ತಿಯಿದೆ, ಆ ಶಕ್ತಿಯನ್ನು ನೀವು ದೇವರ ರೀತಿಯಲ್ಲೇ ಬಳಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ…!”

ಇದು 1951ರ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನದ ಮುನ್ನಾ ದಿನ ಮಾಡಿದ ಭಾಷಣದಲ್ಲಿ ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಹೇಳಿದ ಮಾತು. 1951-52ರಲ್ಲಿ ದೇಶ ಎದುರಿಸಲಿದ್ದ ಮೊದಲ ಚುನಾವಣೆ ಕುರಿತು ರಾಷ್ಟ್ರಪತಿ ಈ ಮಾತನ್ನು ಹೇಳಿದ್ದರು. ರಾಜೇಂದ್ರ ಪ್ರಸಾದರು ಹೇಳಿದ “Vox populi, vox Dei” ಎಂಬ ಲ್ಯಾಟಿನ್ ಗಾದೆಯ ಅರ್ಥ- ಜನರ ಧ್ವನಿಯೇ ದೇವರ ಧ್ವನಿ. ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರವಾದ ಅಡಿಪಾಯವೇ ಚುನಾವಣೆ. ಈ ಚುನಾವಣೆಯಲ್ಲಿ ಮತದಾರರು ಯಾವ ರೀತಿ ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಡಲು ಲ್ಯಾಟಿನ್ ಗಾದೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅವರ ದಾರ್ಶನಿಕ ಮಾತು ದೇಶವಾಸಿಗಳಿಗೆ ಅರ್ಥವಾಗಿದೆಯೇ? ನಮ್ಮ ದೇಶದ ಶ್ರೀಸಾಮಾನ್ಯ ಜನರು ಅಷ್ಟು ಪ್ರಬುದ್ಧತೆಯಿಂದ ತಮ್ಮ ಮತವನ್ನು ಚಲಾಯಿಸುತ್ತಿರುವರೇ? ಈ ಹೊತ್ತಿಗೆ ಇಂಥಾ ಪ್ರಶ್ನೆಗಳಿಗೆ ದೊರಕುವ ಉತ್ತರ ಅಷ್ಟು ಸರಳವಾಗಿಲ್ಲ. ಅದು ತುಸು ಸಂಕೀರ್ಣವೆ.

ಭಾರತೀಯ ಮತದಾರರು ತಮ್ಮ ವಿವೇಚನೆಯನ್ನು ಬಳಸಿ ಸರ್ಕಾರಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಬಲವಾದ ಉದಾಹರಣೆಯಿದೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಮೊದಲ 25 ವರ್ಷವನ್ನು ಆಡಳಿತಾರೂಢ ಪಕ್ಷಗಳ ʼಹನಿಮೂನ್ʼ ಅವಧಿ ಎಂದೇ ಕರೆಯಲಾಗುತ್ತದೆ. 1952ರ ಮೊದಲ ಚುನಾವಣೆಯಿಂದ 1977ರವರೆಗೆ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ಚುನಾವಣೆಯಲ್ಲಿ, ಶೇ.82 ಸರ್ಕಾರಗಳು ಪುನರಾಯ್ಕೆ ಆದವು. ಈ ಅವಧಿಯಲ್ಲಿ ಹೆಚ್ಚಿನ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿತ್ತು. ಮತದಾರರು, ಪ್ರಜಾಪ್ರಭುತ್ವ ಸರ್ಕಾರದ ಬಗ್ಗೆ ಬಹಳಷ್ಟು ವಿಶ್ವಾಸ ಹೊಂದಿದ್ದರು.

ಆದರೆ 1977ರಿಂದ 2002ರವರೆಗಿನ ಎರಡನೇ ಅವಧಿ ತದ್ವಿರುದ್ಧವಾಯಿತು. ಈ ಅವಧಿಯಲ್ಲಿ ಮತದಾರರು ಸರ್ಕಾರಗಳ ವಿರುದ್ಧ ಕೋಪ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ದೇಶಾದ್ಯಂತ ಪುನರಾಯ್ಕೆ ಆದ ಸರ್ಕಾರಗಳ ಸಂಖ್ಯೆ ಕೇವಲ ಶೇ.29. ಅಂದರೆ ಉಳಿದ ಶೇ.71 ಬಾರಿ ಸರ್ಕಾರಗಳು ಬದಲಾಗಿವೆ. ಕೆಲವು ರಾಜ್ಯಗಳಲ್ಲಂತೂ ಇದರ ಪ್ರಮಾಣ ಶೇ. 94% ಇತ್ತು. ಆದರೆ 2002ರಿಂದ 2019ರವರೆಗಿನ ಅವಧಿಯನ್ನು 50:50 ಅವಧಿ ಎನ್ನಲಾಗುತ್ತದೆ. ಈ ಅವಧಿಯಲ್ಲಿ ದೇಶದಲ್ಲಿ ಶೇ.48 ಸರ್ಕಾರಗಳು ಪುನರಾಯ್ಕೆ ಆದರೆ, ಶೇ.52 ಸರ್ಕಾರಗಳು ಬದಲಾಗಿವೆ. ಅಂದರೆ ಮತದಾರರು ಸುಖಾಸುಮ್ಮನೆ, ಕಣ್ಮುಚ್ಚಿಕೊಂಡು ಒಂದು ಸರ್ಕಾರದ ಪರ ಅಥವಾ ಸರ್ಕಾರದ ವಿರುದ್ಧ ಮತ ಹಾಕುವ ಅಭ್ಯಾಸವನ್ನು ಬಿಟ್ಟಿದ್ದಾರೆ. ತಮಗೆ ಇಷ್ಟವಾದರೆ ಸರ್ಕಾರವನ್ನು ಉಳಿಸಿಕೊಳ್ಳುವ, ಇಲ್ಲವಾದರೆ ಬದಲಿಸುವ ನಿರ್ಧಾರ ಮಾಡಿದ್ದಾರೆ. ಇದು ಒಟ್ಟಾರೆ ಚುನಾವಣೆಗಳ ಫಲಿತಾಂಶದ ಪರಿಯನ್ನು(ಟ್ರೆಂಡ್) ನೋಡಿದರೆ ದೊರಕುವ ಚಿತ್ರಣ. ಇದಿಷ್ಟೇ ಸತ್ಯವೇ? ಇಲ್ಲ, ಆದರೆ ಆಳಕ್ಕಿಳಿದು ನೋಡಿದರೆ ಸಾಕಷ್ಟು ದೋಷಗಳೂ ಕಾಣಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಬಹಳ ಕೆಟ್ಟು ಹೋಗಿದೆ, ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ ಎಂಬ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಹಿಂದಿನ ಕಾಲದಲ್ಲಿ ಸಜ್ಜನರು ಇರುತ್ತಿದ್ದರು, ಈಗ ಯಾವುದೇ ಮೌಲ್ಯ, ನೈತಿಕತೆ ಇಲ್ಲದವರೇ ರಾಜಕಾರಣದಲ್ಲಿ ಇದ್ದಾರೆ ಎಂಬ ಮಾತಂತೂ ಒಣ ಕ್ಲೀಷೆಯಾಗಿಬಿಟ್ಟಿದೆ. ಆದರೆ ಸ್ವಾತಂತ್ರ್ಯದ ಬಳಿಕ ನಡೆದ ಮೊದಲ ಚುನಾವಣೆಯ ಸಂದರ್ಭದಲ್ಲಿಯೇ ಈ ಸಮಸ್ಯೆ ಸಣ್ಣ ಪ್ರಮಾಣದಲ್ಲಿ ಶುರುವಾಗಿತ್ತು. 1960ರ ದಶಕದ ವೇಳೆಗೆ ಇದೊಂದು ಸಮಸ್ಯೆ ಎಂದು ಗುರುತು ಮಾಡುವಷ್ಟು ಕಣ್ಣಿಗೆ ಕಾಣಲಾರಂಭಿಸಿತು. 1967ರಲ್ಲಿ ಹರ್ಯಾಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾದ ಗಯಾರಾಮ್, ಚುನಾವಣೆ ನಂತರ ಕಾಂಗ್ರೆಸ್ ಸೇರಿದರು. ಅಲ್ಲಿಂದ 15 ದಿನದಲ್ಲಿ ಅವರು ಮೂರು ಪಕ್ಷ ಬದಲಾಯಿಸಿದರು. ಒಮ್ಮೆ ಕಾಂಗ್ರೆಸ್‌ಗೆ ಬಂದರು, ನಂತರ ಸಂಯುಕ್ತ ರಂಗಕ್ಕೆ ಹೋದರು, ಅಲ್ಲಿಂದ ಕೇವಲ 9 ಗಂಟೆಯಲ್ಲಿ ಮತ್ತೆ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಸೇರ್ಪಡೆಯಾಗಲು ರಾವ್ ಬೀರೇಂದ್ರ ಸಿಂಗ್ ಸಹಕರಿಸಿದ್ದರು. ಗಯಾರಾಮ್ ಅವರೊಂದಿಗೆ ಸುದ್ದಿಗೋಷ್ಠಿಗೆ ಆಗಮಿಸಿದ ಬೀರೇಂದ್ರ ಸಿಂಗ್, ಗಯಾ ರಾಮ್ ಈಗ ಆಯಾ ರಾಮ್ ಆಗಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ಅಲ್ಲಿಂದ, ಪಕ್ಷಾಂತರಕ್ಕೆ ಆಯಾರಾಮ್ ಗಯಾರಾಮ್ ಎಂಬ ನುಡಿಗಟ್ಟು ಹುಟ್ಟಿಕೊಂಡಿತು.

ಒಟ್ಟು 81 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ 8 ತಿಂಗಳಲ್ಲಿ ಒಟ್ಟು 44 ಶಾಸಕರು ಪಕ್ಷಾಂತರ ಮಾಡಿದ್ದರು. ಇವರಲ್ಲಿ ಒಬ್ಬ 5 ಬಾರಿ, ಇಬ್ಬರು ನಾಲ್ಕು ಬಾರಿ, ಮೂವರು ಮೂರು ಬಾರಿ, ನಾಲ್ವರು ಎರಡು ಬಾರಿ ಹಾಗೂ 34 ಶಾಸಕರು ಒಂದು ಬಾರಿ ಪಕ್ಷಾಂತರ ಮಾಡಿದರು. ಇಷ್ಟೆಲ್ಲ ಭಾನಗಡಿ ಮಾಡಿದ ಮೇಲೆ ಆ ಸರ್ಕಾರ ಉಳಿಯುವುದು ಹೇಗೆ? ಸರ್ಕಾರ ಕುಸಿಯಿತು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ‌

ಈ ಸಮಯದಿಂದಲೇ ಪಕ್ಷಾಂತರಕ್ಕೆ ತಡೆ ಹಾಕಬೇಕೆಂದು ಲೋಕಸಭೆಯಲ್ಲಿ ಚರ್ಚೆಗಳಾಗಿ ಅನೇಕ ಸಮಿತಿಗಳು ರಚನೆಯಾದವು. ಆದರೆ ನಿರ್ದಿಷ್ಟ ರೂಪ ಪಡೆಯಲು ಎರಡು ದಶಕಗಳೇ ಬೇಕಾಯಿತು. ಸ್ವತಃ ಕಾಂಗ್ರೆಸ್ ಆರಂಭಿಸಿದ ಈ ಪಕ್ಷಾಂತದ ಪಿಡುಗು ಆ ಪಕ್ಷವನ್ನೇ ಬಾಧಿಸತೊಡಗಿದಾಗ ಇದಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ರಧಾನಮಂತ್ರಿಯೇ ಮುಂದಾದರು. 1985ರಲ್ಲಿ ರಾಜೀವ್ ಗಾಂಧಿಯವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಿದರು. 1985ರ ಜನವರಿ 30ರಂದು ಲೋಕಸಭೆಯಲ್ಲಿ ಈ ಮಸೂದೆ ಸುದೀರ್ಘ ಏಳು ಗಂಟೆ ಚರ್ಚೆಯಾಯಿತು. 47 ಲೋಕಸಭೆ ಸದಸ್ಯರು ತಮ್ಮ ಮದ್ಯಾಹ್ನದ ಊಟದ ಅವಧಿಯನ್ನು ಮರೆತು, ಹೊರಗೆ ಹೋಗದೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ್ದ ರಾಜೀವ್ ಗಾಂಧಿ, ಸಾರ್ವಜನಿಕ ಜೀವನವನ್ನು ಶುದ್ಧಗೊಳಿಸುವ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆ. ನನಗೂ ಕನಸಿದೆ ಎನ್ನುವ ಐತಿಹಾಸಿಕ ಭಾಷಣ ಮಾಡಿದ್ದರು. ಅಂತಿಮವಾಗಿ ಸಂವಿಧಾನಕ್ಕೆ 52ನೇ ತಿದ್ದುಪಡಿ ತರುವ ಮೂಲಕ ಮಸೂದೆ ಅಂಗೀಕಾರವಾಯಿತು. ಮಾರನೆಯ ದಿನವೇ ರಾಜ್ಯಸಭೆಯಲ್ಲೂ ಇದಕ್ಕೆ ಒಪ್ಪಿಗೆ ಸಿಕ್ಕಿತು. ಎರಡು ವಾರದ ನಂತರ ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದರು, 1985ರ ಮಾರ್ಚ್ 18ರಿಂದ ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂತು. ಪಕ್ಷಾಂತರ ನಿಷೇಧ ಎನ್ನುವ ಪದ ಕಾಯ್ದೆಯಲ್ಲಿ ಇತ್ತಾದರೂ ಅದು ನಿಜವಾಗಿಯೂ ನಿಷೇಧ ಹೇರಲಿಲ್ಲ. ಬದಲಿಗೆ ಪಕ್ಷಾಂತರವನ್ನು ನಿರ್ಬಂಧಿಸುವ ಕಾಯ್ದೆಯಾಗಿತ್ತಷ್ಟೆ. ಅಂದರೆ ಪಕ್ಷಾಂತರ ಮಾಡುವ ಪ್ರಕ್ರಿಯೆಯನ್ನು ಇದು ಸ್ವಲ್ಪ ಕಷ್ಟವಾಗಿಸಿತ್ತು ಅಷ್ಟೆ.

ಇಂದಿಗೂ ಪಕ್ಷಾಂತರ ಮುಂದುವರಿದಿದೆ. ಕೇವಲ ಮೂರೂವರೆ ವರ್ಷದ ಹಿಂದೆ ಕರ್ನಾಟಕದಲ್ಲಿ 17 ಶಾಸಕರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರಿಂದ ಮೈತ್ರಿ ಸರ್ಕಾರ ಕುಸಿಯಿತು. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಇವರಲ್ಲಿ ಬಹುತೇಕರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ʼಜನಾದೇಶʼ ಪಡೆದು ಮತ್ತೆ ಶಾಸಕರಾದರು, ಅನೇಕರು ಸಚಿವರೂ ಆದರು. ಯಾವುದೇ ಪಕ್ಷಾಂತರದ ಸಮಯದಲ್ಲಿ, ಪಕ್ಷಾಂತರ ಮಾಡಿದವರಿಗೆ ಆಮಿಷ ಒಡ್ಡಲಾಯಿತು, ಬೆದರಿಸಲಾಯಿತು ಎಂಬ ಮಾತುಗಳು ಕೇಳಿಬರುತ್ತವೆ. ಅವುಗಳನ್ನು ಪರಿಶೀಲಿಸಲು ಯಾವ ಮಾನದಂಡವೂ ಇಲ್ಲ. ಎಲ್ಲರೂ ತಮ್ಮ ತಮ್ಮ ವಿವೇಚನೆ, ಬುದ್ಧಿಯನ್ನು ಹೊಂದಿರುವುದರಿಂದ ಸಮರ್ಥನೆಯನ್ನು ನೀಡುತ್ತಾರೆ. ಪಕ್ಷಾಂತರ ನಿಷೇಧ ಕಾಯ್ದೆಯಡಿಯ ಕಾನೂನಿನಿಂದಷ್ಟೇ ಪಕ್ಷಾಂತರ ಎಂಬ ಪಿಡುಗನ್ನು ಅಳಿಸಿ ಹಾಕಲು ಅಸಾಧ್ಯ ಎನ್ನುವ ಮಟ್ಟಿಗೆ ಈಗ ಸ್ಥಿತಿ ಬಂದು ಮುಟ್ಟಿದೆ.

ಒಂದು ಅಂದಾಜಿನ ಪ್ರಕಾರ, ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾದ ಸಮಯದಿಂದಲೇ ಭಾರತದಲ್ಲಿ ಪಕ್ಷಗಳು ಒಡೆದು ಹೋಳಾದವು. ಪ್ರದೇಶ, ಭಾಷೆಯ ಆಧಾರದ ಮೇಲೆ ಸಣ್ಣ ಪುಟ್ಟ ಪಕ್ಷಗಳ ಉದಯವಾಯಿತು. ಪ್ರತ್ಯೇಕ ಪಕ್ಷವೇ ಇದ್ದುಬಿಟ್ಟರೆ ಯಾವ ಸರ್ಕಾರಕ್ಕಾದರೂ ಬೆಂಬಲ ನೀಡಬಹುದು, ಹಿಂಪಡೆಯಬಹುದು ಎಂಬುದು ಇದಕ್ಕೆ ಕಾರಣ.

ಪಕ್ಷಾಂತರದ ಸಂದರ್ಭದಲ್ಲಿ ರಾಜಕಾರಣಿಗಳು ನೀಡುವ ಅತಿ ದೊಡ್ಡ ಸಮರ್ಥನೆ ಎಂದರೆ ʼನಾವು ಮತ್ತೆ ಜನಾದೇಶ ಪಡೆದು ಮತ್ತೆ ಶಾಸಕರಾಗಿದ್ದೇವೆʼ ಎನ್ನುವುದು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯನ್ನು ಎದುರಿಸಿ ಆಯ್ಕೆಯಾಗುವುದು ನಡೆದಿರುವ ಪ್ರಕ್ರಿಯೆ. ಅಂದರೆ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ನಡೆಸುವ ಪ್ರಕ್ರಿಯೆಯ ಇಡೀ ಪಾಪವನ್ನು ನೇರವಾಗಿ ಜನರ ಮೇಲೆ ಹೊರಿಸುತ್ತಿದ್ದಾರೆ. ನಾನು ಮಾಡಿದ್ದು ತಪ್ಪು ಎನ್ನುವುದಾಗಿದ್ದರೆ ಜನರು ಸೋಲಿಸುತ್ತಿದ್ದರು. ಜನರು ಗೆಲ್ಲಿಸಿ ಕಳಿಸಿದ್ದಾರೆ ಎಂದರೆ ಅವರು ನನ್ನ ಜತೆಗಿದ್ದಾರೆ ಎಂಬ ಸಮರ್ಥನೆ ಬೇರೆ !

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ

ಆದರೆ ನಿಜವಾಗಲೂ ನಡೆಯುವುದೇ ಬೇರೆ. ಸಾಮಾನ್ಯವಾಗಿ ಚುನಾಯಿತ ಪ್ರತಿನಿಧಿಗಳು ಪಕ್ಷಾಂತರ ಆಗುವುದು ಆಡಳಿತಾರೂಢ ಪಕ್ಷಕ್ಕೆ. ಆ ಪಕ್ಷ ಅಧಿಕಾರದಲ್ಲಿರುವುದರಿಂದ, ತಮ್ಮ ಕ್ಷೇತ್ರದಲ್ಲಿ ಈತನನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೊಂದಿಷ್ಟು ಅಭಿವೃದ್ಧಿ ಕೆಲಸಗಳಾಗುತ್ತವೆ ಎಂಬ ಬಯಕೆ ಜನರಿಗೆ ಸಹಜವಾಗಿ ಮೂಡುತ್ತದೆ. ಈ ರೀತಿ ಗೆದ್ದವರು ಅನೇಕ ಬಾರಿ ಮಂತ್ರಿಯೂ ಆಗುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚುತ್ತದೆ. ಸರ್ಕಾರವು ಅನೇಕ ಯೋಜನೆಗಳನ್ನು ಘೋಷಿಸುವ ಮೂಲಕ ಈ ಪ್ರಕ್ರಿಯೆಗೆ ಸಹಕರಿಸುತ್ತದೆ.

ಸೈದ್ಧಾಂತಿಕ ಸ್ಪಷ್ಟತೆಯು ಪಕ್ಷಾಂತರ ನಿಷೇಧವನ್ನು ತಡೆಗಟ್ಟುತ್ತದೆ ಎಂದು ಕೆಲಕಾಲ ವಾದಿಸಲಾಗಿತ್ತು. ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿದ್ದವ ಎದುರಾಳಿ ಸಿದ್ಧಾಂತವನ್ನು ವಿರೋಧಿಸುತ್ತಾನೆ, ಆತನ ಮತದಾರರೂ ಸಿದ್ಧಾಂತಕ್ಕೆ ಒಗ್ಗಿಕೊಂಡಿರುತ್ತಾರೆ, ಹಾಗಾಗಿ ಪಕ್ಷಾಂತರ ಮಾಡುವುದು ಕಷ್ಟ ಎನ್ನಲಾಗುತ್ತಿತ್ತು. ಆದರೆ ಪರಸ್ಪರ ವಿರುದ್ಧ ದಿಕ್ಕಿನ ಸಿದ್ಧಾಂತ ಹೊಂದಿರುವ ಕಾಂಗ್ರೆಸ್-ಬಿಜೆಪಿ ಶಾಸಕರುಗಳೇ ಪರಸ್ಪರ ಪಕ್ಷಾಂತರ ಆದ ಮೇಲೆ ಸಿದ್ಧಾಂತಕ್ಕೆ ಬೆಲೆ ಇನ್ನೆಲ್ಲಿಯದು? ಇದೇ ಕಾರಣಕ್ಕೆ ಮತದಾರರನ್ನು ತಮ್ಮ ವೈಯಕ್ತಿಕ ವರ್ಚಸ್ಸಿನ, ಪ್ರದೇಶದ, ಜಾತಿಯ ಆಧಾರದಲ್ಲಿ ಹಿಡಿದಿಟ್ಟುಕೊಳ್ಳಲು ಎಲ್ಲ ರಾಜಕಾರಣಿಗಳೂ ಮುಂದಾಗಿದ್ದಾರೆ. ತಮ್ಮ ಬಳಿ ಇಷ್ಟು ವೋಟ್ ಬ್ಯಾಂಕ್ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ತಾವು ಹೋದ ಪಕ್ಷಕ್ಕೆಲ್ಲ ಈ ವೋಟ್ ಬ್ಯಾಂಕ್ ಹಿಂಬಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಈಗ ಚೆಂಡು ಮತದಾರರ ಅಂಗಳಕ್ಕೇ ಬಂದು ನಿಂತಿದೆ. ಈಗಿಗಿಂತಲೂ ಕಠಿಣವಾದ ಪಕ್ಷಾಂತರ ನಿಷೇಧ ಕಾಯ್ದೆ ರಚಿಸುವುದು ಬಹುತೇಕ ಅಸಾಧ್ಯ. ಹಾಗೆ ಮಾಡಿದರೆ ಮತ್ತಷ್ಟು ಒಳಸುಳಿಗಳನ್ನು ರಾಜಕಾರಣಿಗಳು ಹುಡುಕುತ್ತಾ ಸಾಗಿ ರಾಜಕಾರಣ ಮತ್ತಷ್ಟು ಸಂಕೀರ್ಣವಾಗುತ್ತದೆ. ಇದಕ್ಕೆ ಇರುವ ಬಹುದೊಡ್ಡ ಮಾರ್ಗೋಪಾಯವೆಂದರೆ ಮತದಾರರು ಜಾಗೃತವಾಗುವುದು.

ತಾವು ನೀಡುವ ಮತವನ್ನು ಯಾವ ಆಧಾರದಲ್ಲಿ ನೀಡುತ್ತಿದ್ದೇವೆ? ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಹೇಳಿದಂತೆ ಜನ ದನಿ ದೇವರ ದನಿಯಾಗಬೇಕಿದೆ ! ದೇವರ ದನಿ ಎಂದೂ ಪ್ರಬಲವೂ, ನ್ಯಾಯೋಚಿತವೂ, ನ್ಯಾಯ ಸಮ್ಮತವೂ ಎಂದರ್ಥ. ದನಿಗೆ ಅಂಥದ್ದೊಂದು ಪ್ರಾಮಾಣಿಕತೆ ಬರಬೇಕು ಎಂದು ಈ ದೇಶದ ಮತದಾರರು ಜವಾಬ್ದಾರಿಯುತವಾಗಿ ತನ್ನ ದನಿ(ವೋಟು) ಎತ್ತಬೇಕು.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!

ನಮ್ಮ ಮತವನ್ನು ʼದೇವರʼ ರೀತಿಯಲ್ಲಿ ಜವಾಬ್ದಾರಿಯುತವಾಗಿ ಚಲಾಯಿಸಬೇಕಷ್ಟೆ. ದೇವರ ರೀತಿ ಎಂಬುದನ್ನು ನಮ್ಮಲ್ಲಿ ಹಾಸ್ಯಕ್ಕೂ ಅನೇಕ ಬಾರಿ ಬಳಸುವುದುಂಟು. ಪ್ರಪಂಚದಲ್ಲಿ ಏನೇ ಆಗುತ್ತಿದ್ದರೂ ಸುಮ್ಮನೆ ನೋಡಿಕೊಂಡು ʼದೇವರʼ ರೀತಿ ಇರುವುದು ಎಂಬ ಅರ್ಥವೂ ಇದೆ. ಆದರೆ ಇಲ್ಲಿ ಹೇಳುತ್ತಿರುವುದು ಮೊದಲ ಅರ್ಥ. ಜಾತಿ, ಉಪಜಾತಿ, ಪ್ರದೇಶ, ಹಣ, ಆಮಿಷ, ಬೆದರಿಕೆಗೆ ಒಳಗಾಗಿ ಮತದಾನ ಮಾಡುತ್ತಿದ್ದೇವೆಯೇ? ನಾವು ಆಯ್ಕೆ ಮಾಡುವ ಶಾಸಕ ನಮ್ಮ ಕ್ಷೇತ್ರಕ್ಕೆ ಮಾತ್ರವಲ್ಲ, ಇಡೀ ರಾಜ್ಯದ ಶಾಸನ ರಚನೆಯ ಅಧಿಕಾರ ಹೊಂದುತ್ತಾನೆ. ಆತನ ಆಯ್ಕೆಯು ಒಂದು ಕ್ಷೇತ್ರ ಮಾತ್ರವಲ್ಲದೆ ಇಡೀ ರಾಜ್ಯವನ್ನು ಪ್ರಭಾವಿಸುತ್ತದೆ ಎಂಬ ಅರಿವನ್ನು ಹೊಂದುತ್ತೇವೆಯೇ?

ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಆದಾಗ ಕೇಂದ್ರ ಚುನಾವಣಾ ಆಯುಕ್ತರು ಎರಡು ಮಾತು ಹೇಳಿದರು. ಅದು ನಿಜಕ್ಕೂ ತಲೆತಗ್ಗಿಸುವ ವಿಚಾರ. ಮೊದಲನೆಯದು, ನಗರ ಮತದಾರರು ಮತದಾನಕ್ಕೆ ಆಸಕ್ತಿ ತೋರುತ್ತಿಲ್ಲ, ಅದನ್ನು ಹೆಚ್ಚಿಸಬೇಕು ಎನ್ನುವುದು. ಎರಡನೆಯದು, ಕರ್ನಾಟಕದಲ್ಲಿ ಚುನಾವಣೆ ಸಮಯದಲ್ಲಿ ಹಣದ ಹೊಳೆ ಹರಿಯುತ್ತದೆ ಎನ್ನುವುದು. 2018ರ ಚುನಾವಣೆಗೂ ಮುನ್ನ ವಿವಿಧೆಡೆ ದಾಳಿ ನಡೆಸಿ ಹಣ, ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ಈಗ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ 2018ರ ಇಡೀ ಚುನಾವಣೆಯಲ್ಲಿ ವಶಪಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಮೌಲ್ಯದ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಚುನಾವಣೆಯಲ್ಲಿಯೂ ಮತದಾರರ ಎದುರು ಆಯ್ಕೆಗಳಿವೆ. ಆಯ್ಕೆಯಂತೆಯೇ ಸರ್ಕಾರ ರಚನೆಯಾಗುತ್ತದೆ. ಆಮೇಲೆ ಐದು ವರ್ಷ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಬಿತ್ತಿದಂತೆ ಫಲ. ನಮ್ಮ ಮತದ ಯೋಗ್ಯತೆಗೆ ತಕ್ಕಂತೆ ನಮ್ಮ ಪ್ರತಿನಿಧಿ ಇರುತ್ತಾನೆ. ಯೋಚಿಸಲು ಇದು ಸಕಾಲ.

ನಗರ ಮತದಾರರ ಆಲಸ್ಯದ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಇದನ್ನೂ ಓದಿ: ವಿಸ್ತಾರ ಅಂಕಣ: ನರೇಂದ್ರ ಮೋದಿಯವರತ್ತ ಬೆರಳು ತೋರಿಸಿ ಎಷ್ಟು ವಿಚಾರ ಮುಚ್ಚಿಡಲು ಸಾಧ್ಯ?

Exit mobile version