ಪ್ರಾಚೀನವಾದ ವಿಚಾರವೊಂದನ್ನು ಈಗ ಚರ್ಚೆ ಮಾಡಲಾಗುತ್ತಿದೆ. ಈ ಪ್ರಾಚೀನ ಎಷ್ಟು ಪ್ರಾಚೀನ ಎಂದರೆ ಅದು ಯಾವಾಗಿನಿಂದ ಆರಂಭವಾಯಿತು ಎನ್ನುವುದೇ ತಿಳಿಯದಷ್ಟು. ಅದೇ ಹಿಂದೂ ಧರ್ಮ. ಹಿಂದೂ ಎಂಬ ಹೆಸರು ಇತ್ತೀಚೆಗೆ, ಆಕ್ರಮಣಕಾರರ ಕಾಲದಲ್ಲಿ ಬಂದಿರಬಹುದು. ಆದರೆ ಅದು ಸನಾತನ ಧರ್ಮದ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದಲೇ ಅಸ್ತಿತ್ವದಲ್ಲಿದೆ. ಒಟ್ಟಾರೆ ಸನಾತನ ಹಾಗೂ ಹಿಂದೂ ಧರ್ಮ-ಈ ಎರಡರ ಕುರಿತೂ ಚರ್ಚೆಗಳು ನಡೆದಿವೆ.
ಕೆಲ ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು, ಹಿಂದೂ ಎನ್ನುವ ಶಬ್ದಕ್ಕೆ ಅತ್ಯಂತ ತುಚ್ಛ ಅರ್ಥವಿದೆ ಎಂದು ಹೇಳಿದ್ದು ವಿವಾದವಾಗಿತ್ತು. ಇದಕ್ಕೆ ಅನೇಕರು ಸಮರ್ಥನೆಯನ್ನೂ ನೀಡಿದ್ದರು. ಬಹುತೇಕರು ಅದನ್ನು ನಿರ್ಲಕ್ಷಿಸಿದರು. ಚುನಾವಣೆ ಸಂದರ್ಭದಲ್ಲಿ ಇದನ್ನು ಲಂಬಿಸಿದರೆ ನಷ್ಟವೇ ಹೆಚ್ಚು ಎಂದು ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಲಾಯಿತು. ಹೀಗೆ ಪದೇಪದೆ ಹಿಂದೂ ಧರ್ಮದ ಕುರಿತು ಅಪದ್ಧದ ಮಾತುಗಳು, ಅದನ್ನು ವಿರೋಧಿಸುವುದು, ಬೌದ್ಧಿಕ ದಾಳಿಯಿಡುವುದು, ನಡೆಯುತ್ತಲೇ ಇದೆ. ಹಿಂದೂ ಧರ್ಮ ಆಕ್ರಮಣಕ್ಕೆ ಒಳಗಾಗುತ್ತಲೇ ಇದೆ. ಬಹಳಷ್ಟು ಬಾರಿ ವಿರೋಧ ಹಾಗೂ ಆಕ್ರಮಣಗಳಿಂದ ಅದಕ್ಕೆ ಒಳಿತೂ ಆಗಿದೆ. ಸಮಾಜವಾಗಿ ಒಂದು ಸಂಘಟಿತ ಜೀವನ ನಡೆಸದಿದ್ದರೆ ಉಳಿಗಾಲ ಇಲ್ಲ ಎನ್ನುವುದು ಭಾರತೀಯರಿಗೆ ಅರಿವಿಗೆ ಬರುತ್ತಿರುವುದೇ ಅನೇಕ ಆಕ್ರಮಣಗಳ ನಂತರ ಅಲ್ಲವೇ?
ಮೂರ್ನಾಲ್ಕು ದಿನದ ಹಿಂದೆ ಪಾಣಿಪತ್‌ನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ ವಾರ್ಷಿಕ ಸಭೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ ಮಾತು ತುಸು ಚರ್ಚೆಯಾಯಿತು. “ಭಾರತ ಹಿಂದೂ ರಾಷ್ಟ್ರವೇ(ನೇಷನ್) ಆಗಿದ್ದು, ಅದನ್ನು ಮತ್ತೆ ಹಿಂದೂ ರಾಷ್ಟ್ರ ಮಾಡುವ ಅಗತ್ಯವಿಲ್ಲ. ರಾಷ್ಟ್ರ ಎನ್ನುವುದು ಸಾಂಸ್ಕೃತಿಕ ಪರಿಕಲ್ಪನೆಯಾಗಿದ್ದು, ಸ್ಟೇಟ್(ಪ್ರಭುತ್ವ) ಎಂಬ ಆಡಳಿತಾತ್ಮಕ ಪರಿಕಲ್ಪನೆಗಿಂತ ಭಿನ್ನʼʼ ಎಂದರು. ಅವರ ಮಾತಿನ ಅರ್ಥ, ಸಂಘಕ್ಕೆ ಬೇಕಿರುವುದು ಹಿಂದೂ ರಾಷ್ಟ್ರವೇ ಹೊರತು, ಹಿಂದೂ ಪ್ರಭುತ್ವವಲ್ಲ. ಇದೇನು ಮೊದಲನೆ ಬಾರಿಗೆ ಆರ್‌ಎಸ್ಎಸ್ ಹೇಳಿದ ಮಾತಲ್ಲ. ಈ ಹಿಂದಿನ ಅನೇಕ ಸರಸಂಘಚಾಲಕರು, ಈಗಿನ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರೂ ಹೇಳಿದ್ದಾರೆ.
ಇದೇ ವೇಳೆ ಮೂರು ದಿನದ ಹಿಂದೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೂ ಇಂಥದ್ದೇ ಮಾತನ್ನಾಡಿದರು. ತಿಗಳ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಇದು ಹಿಂದೂ ರಾಷ್ಟ್ರ ಎಂದರು. ಇಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲ ಜಾತಿ ಮತದವರೂ ತಂತಮ್ಮ ಆಚರಣೆಗೆ ಅನುಗುಣವಾಗಿ ಜೀವಿಸಲು ಅವಕಾಶವಿದೆ. ಧರ್ಮದ ಮಾರ್ಗದಲ್ಲಿ ಜೀವಿಸಲು ಈ ದೇಶದಲ್ಲಿ ಆದ್ಯತೆ ನೀಡಿಕೊಂಡು ಬಂದಿದ್ದೇವೆ ಎಂದರು.
ಇಬ್ಬರು ಹೇಳಿದ್ದರಲ್ಲೂ ವ್ಯತ್ಯಾಸವಿಲ್ಲ. ಡಿ.ಕೆ. ಶಿವಕುಮಾರ್ ಅವರು, ಇದು ಹಿಂದೂ ರಾಷ್ಟ್ರ ಎನ್ನುತ್ತಲೇ ಇಲ್ಲಿ ಎಲ್ಲರಿಗೂ ಅವರವರ ಸಂಪ್ರದಾಯದಂತೆ ಬದುಕಲು ಅವಕಾಶವಿದೆ ಎಂದರು. ಅಸಲಿಗೆ ಇದೇ ಹಿಂದೂ ಧರ್ಮ. ಹಾಗೂ ಹಿಂದೂ ಧರ್ಮದಲ್ಲಿ ಮಾತ್ರವೇ ಇದು ಸಾಧ್ಯ. ಹಿಂದುವಾಗಿದ್ದುಕೊಂಡೂ ನಾವು ದೇವರನ್ನು ಪೂಜಿಸದೇ ಇರಬಹುದು. ಹಿಂದುವಾಗಿದ್ದುಕೊಂಡೂ ತಿಲಕ ಇಡದೇ, ಹಬ್ಬವನ್ನು ಆಚರಿಸದೇ ಇರಬಹುದು. ಮನೆಯಲ್ಲಿ ಎಲ್ಲರೂ ಗಣೇಶನನ್ನು ಪೂಜಿಸಿದರೆ ಒಬ್ಬ ಮಾತ್ರ ವಿಷ್ಣುವನ್ನೋ, ಶಿವನನ್ನೋ, ದೇವಿಯನ್ನೋ ಪೂಜಿಸಬಹುದು. ಅಷ್ಟೇ ಏಕೆ? ದೇವರೇ ಇಲ್ಲ ಎಂದುಕೊಂಡೂ ತಿರುಗಾಡಬಹುದು. ಹೀಗೆಲ್ಲ ಮಾಡುವುದು ಶ್ರೇಷ್ಠವಲ್ಲ, ಆದರ್ಶವಲ್ಲ ಎಂದು ಹೇಳಲಾಗುತ್ತದೆಯೇ ವಿನಃ, ಹೀಗೆ ಮಾಡಿದ ಕೂಡಲೆ ಅಪರಾಧ ಎಂದು ಜೈಲಿಗೆ ಅಟ್ಟುವುದೋ, ಕೊಂದುಹಾಕುವುದೋ ಇಲ್ಲ. ಹೆಚ್ಚಿಗೆ ವಿವರಣೆ ನೀಡದೆ, ಇಂತಹ ಸ್ವಾತಂತ್ರ್ಯ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ ಎನ್ನುವುದನ್ನು ಹೇಳಬಹುದು.
ವಿಶ್ವದಲ್ಲಿ ಜೀವಂತವಾಗಿ ಉಳಿದಿರುವ ಅತ್ಯಂತ ಪ್ರಾಚೀನವಾದ ಆಚರಣೆ, ನಂಬಿಕೆ ಎಂದರೆ ಹಿಂದೂ ಧರ್ಮ. ನಂತರದಲ್ಲಿ ಚೀನಾದ ತಾವೋಯಿಸಂ ಮಾತ್ರ. ಈಜಿಪ್ಟ್ ಸಂಸ್ಕೃತಿ ಎಂದು ನಾವು ಕೇಳುತ್ತೇವೆ, ಆದರೆ ಇಂದು ಅಲ್ಲಿ ಸಂಸ್ಕೃತಿಯನ್ನು ಆಚರಣೆ ಮಾಡುವವರು ಯಾರೂ ಇಲ್ಲ. ಆಕ್ರಮಣಕಾರರು, ಮತಾಂತರಿಗಳ ದಾಳಿಗೆ ಸಿಕ್ಕಿ ಅವು ನಶಿಸಿಹೋಗಿವೆ. ಆದರೆ ಹಿಂದೂ ಧರ್ಮ ಜೀವಂತವಾಗಿ ಉಳಿದುಕೊಳ್ಳಲು ಇಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಆಯ್ಕೆಯ ಸ್ವಾತಂತ್ರ್ಯ, ಪ್ರಶ್ನಿಸುವ ವಾತಾವರಣ, ಕಾಲಾನುಕೂಲ ಸ್ಥಿತಿಗಳಿಗೆ ಬದಲಾಗುವ ಗುಣವೆ. ಬದಲಾವಣೆಯೇ ಶಾಶ್ವತ ಎಂಬ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಭಗವದ್ಗೀತೆಯ ಶ್ಲೋಕವೊಂದಿದೆ.
ದೇಹಿನೋ ಅಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾಂತರಪ್ರಾಪ್ತಿಃ ಧೀರಃ ತತ್ರ ನಮುಹ್ಯತಿ ||2.13||
ಅಂದರೆ ದೇಹಸ್ಥ ಆತ್ಮವು ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ರೀತಿಯಲ್ಲಿ ಸಾಗುವ ರೀತಿಯಲ್ಲೇ ಆತ್ಮವು ಸಾವಿನ ನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ ಎಂದರ್ಥ.
ಇನ್ನು ಈಗಿನ ವಾದಸರಣಿಗೆ ಬರೋಣ. ಹಿಂದೂ ಧರ್ಮ ಎಂಬ ಹೆಸರು ಮೊದಲು ಇರಲಿಲ್ಲ, ನಂತರ ಬಂದಿತು ಹಾಗಾಗಿ ಅದು ಸರಿಯಲ್ಲ ಎನ್ನುವುದು ಕೆಲವರ ವಾದ. ಹುಟ್ಟಿದ ಮಗುವಿಗೆ ಹೆಸರು ಇರುತ್ತದ? ಹುಟ್ಟುವ ಮೊದಲು ಭ್ರೂಣದಲ್ಲಿ ಹೆಸರು ಇರುತ್ತದ? ಹುಟ್ಟಿ ಕೆಲವು ದಿನ, ತಿಂಗಳು, ವರ್ಷದವರೆಗೆ ಹೆಸರು ಇರುತ್ತದ? ನಾಮಕರಣ ಶಾಸ್ತ್ರ ಎನ್ನುವುದೊಂದು ಸಂಸ್ಕಾರದಲ್ಲಿ ಮಗುವಿಗೆ ಹೆಸರನ್ನು ಇಡಲಾಗುತ್ತದೆ. ಅಂದರೆ ಈ ಹೆಸರನ್ನು ಇಡುವುದಕ್ಕೂ ಮೊದಲು ಆ ಮಗು ಬದುಕೇ ಇರಲಿಲ್ಲ ಎಂದರ್ಥವೇ? ಅಲ್ಲಿವರೆಗೆ ಮಗು ಎಂತಲೋ ಎನ್ನಾವುದೋ ಮುದ್ದಾದ ಹೆಸರಿನಿಂದಲೋ ಕರೆಯುತ್ತಿರುತ್ತಾರೆ, ನಾಮಕರಣದ ನಂತರ ಹೊಸ ಹೆಸರಿನಿಂದ ಕರೆಯುತ್ತಾರೆ. ಅಂದ ಮಾತ್ರಕ್ಕೆ ನಾಮಕರಣಕ್ಕೂ ಮುಂಚಿನ ಅಸ್ತಿತ್ವವನ್ನೇ ಪ್ರಶ್ನಿಸಲು ಆಗುವುದಿಲ್ಲ. ಹಾಗೆಯೇ ಹಿಂದೂ ಧರ್ಮವು ಅದಕ್ಕೆ ಹೆಸರು ಪ್ರಾಪ್ತವಾಗುವುದಕ್ಕೆ ಮುಂಚಿನಿಂದಲೂ ಇದೆ.
ಮೇಲೆ ಉಲ್ಲೇಖಿಸಿದ ಭಗವದ್ಗೀತೆಯ ಶ್ಲೋಕದಲ್ಲಿ ಹೇಳಿದಂತೆ, ಬದಲಾವಣೆಗೆ ಹೆದರುವ ಧರ್ಮ ಅಲ್ಲ. ತನ್ನ ಧಾರ್ಮಿಕ ಗ್ರಂಥವೊಂದರಲ್ಲಿ ಹೀಗೆ ಹೇಳಿಬಿಟ್ಟಿದ್ದಾರೆ ಹಾಗಾಗಿ ಅದನ್ನೇ ಮಾಡಬೇಕು ಎಂಬ ಕಡ್ಡಾಯ ಇಲ್ಲವೇ ಇಲ್ಲ. ಎಲ್ಲ ಗ್ರಂಥಗಳನ್ನೂ, ಅದನ್ನು ವ್ಯಾಖ್ಯಾನಿಸಿರುವ ಗ್ರಂಥಗಳನ್ನೂ ನಮ್ಮ ಜ್ಞಾನಕ್ಕಾಗಿ ಬಳಸಿಕೊಳ್ಳಬಹುದು. ಅಂತಿಮವಾಗಿ ಈಗಿನ ಕಾಲಕ್ಕೆ ಯಾವುದು ಸೂಕ್ತವೋ ಅದನ್ನು ಆಚರಿಸುವುದು. ಹಾಗೆಂದು ಈಗಿನ ಕಾಲಕ್ಕೆ ಅನವಶ್ಯಕ ಎನ್ನಿಸಿದ್ದನ್ನು ಬಿಸಾಡುವುದಲ್ಲ, ಅದನ್ನೂ ಜ್ಞಾನ ರೂಪದಲ್ಲಿ ಮುಂದುವರಿಸುವುದು. ಆದರೆ ಆಚರಣೆ ಮಾತ್ರ ಕಾಲಾನುಕೂಲ, ಯುಗಾನುಕೂಲದ್ದು.
ಹಾಗಾದರೆ ಹಿಂದೂ ಧರ್ಮವನ್ನು ಶ್ರೇಷ್ಠ ಹೌದೋ ಅಲ್ಲವೋ ಎಂದು ನಿರ್ಧರಿಸುವ ಅಂಶ ಯಾವುದು? ಅದು ಎಲ್ಲಕ್ಕಿಂತ ಪ್ರಾಚೀನವಾದದ್ದು ಎನ್ನುವುದೆ? ಮೊದಲಿಗೆ ಹುಟ್ಟಿದ ಮಾತ್ರಕ್ಕೆ ಶ್ರೇಷ್ಠ ಎನ್ನಲು ಬರುವುದಿಲ್ಲ. ಇನ್ನೂ ಜೀವಂತವಾಗಿದೆ ಎನ್ನುವುದೇ ಶ್ರೇಷ್ಠೆತೆಗೆ ಮಾನದಂಡವೇ? ಅರ್ಧ ಸತ್ಯ. ಏಕೆಂದರೆ ಅದು ಇಲ್ಲಿವರೆಗೆ ಉಳಿದುಕೊಂಡು ಬಂದಿರುವುದು ಯಾವುದೇ ಆಕ್ರಮಣ, ಮತಾಂತರದಿಂದಲ್ಲ, ಬದಲಿಗೆ ಶುದ್ಧ ಸಾವಯವ ವಿಕಾಸದ ಮೂಲಕ.
ಡಾ. ಅಂಬೇಡ್ಕರರು ಸಂವಿಧಾನದ ಕುರಿತು ಹೇಳುವ ಮಾತು ಹಿಂದೂ ಧರ್ಮಕ್ಕೂ ಅನ್ವಯಿಸಬಹುದು. ಒಂದು ಸಂವಿಧಾನ ತಾನೇತಾನಾಗಿ ಒಳ್ಳೆಯದೋ ಅಥವಾ ಕೆಟ್ಟದೋ ಎಂದು ಹೇಳಲಾಗದು. ಅದು ಒಳ್ಳೆಯದೋ ಅಥವಾ ಕೆಟ್ಟದೋ ಎಂದು ತೀರ್ಮಾನಿಸುವುದು ಅದನ್ನು ಅನುಸರಿಸುವ ಜನರ ಆಧಾರದಲ್ಲಿ. ಆಚರಿಸುವ ಜನರು ಸದಾಚಾರ ಸಂಪನ್ನರಾಗಿದ್ದರೆ ಸಂವಿಧಾನದಿಂದ ಒಳ್ಳೆಯದೇ ಆಗುತ್ತದೆ. ಆಚರಿಸುವವರು ಕೆಡುಕರಾಗಿದ್ದರೆ ಸಂವಿಧಾನದಿಂದ ಕೆಡುಕೇ ಆಗುತ್ತದೆ ಎಂದಿದ್ದರು. ಇದೇ ಮಾತನ್ನು ಧರ್ಮಕ್ಕೆ ಹೋಲಿಸಬಹುದು. “ಒಂದು ಧರ್ಮದ ಶ್ರೇಷ್ಠತೆ, ಕೊರತೆ ಹಾಗೂ ದೌರ್ಬಲ್ಯಗಳನ್ನು ಕುರಿತು ವಿವೇಚನೆ ಮಾಡುವಾಗ ಆ ಧರ್ಮದ ಮೂಲ ಗ್ರಂಥ(ಗಳು) ಮುಖ್ಯವಾಗುತ್ತವೆಯೇ ವಿನಃ ಅದರ ಅನುಯಾಯಿಗಳು ಅಲ್ಲ. ಆ ಧರ್ಮದ ಶ್ರೇಷ್ಠ ತತ್ವಗಳನ್ನು ಅದರ ಅನುಯಾಯಿಗಳು ಪರಿಪಾಲಿಸದಿದ್ದರೆ ಅದು ಸ್ಪಷ್ಟವಾಗಿ ಖಂಡನೀಯ. ಆದರೆ ಅನುಯಾಯಿಗಳ ಅನಾಚಾರವನ್ನು ಆಧಾರಗ್ರಂಥಗಳ ಮೇಲೆ ಹೊರಿಸಬಾರದು. ಹಾಗೊಂದು ವೇಳೆ ಮೂಲ ಧರ್ಮಗ್ರಂಥಗಳಲ್ಲೇ ಅನಾಚಾರದ ಬೋಧನೆ ಇದ್ದರೆ ಅದು ಖಂಡನೀಯ” ಎಂದು ಕನ್ನಡದ ಖ್ಯಾತ ಸಂಶೋಧಕರಾಗಿದ್ದ ಡಾ. ಚಿದಾನಂದ ಮೂರ್ತಿ ಅವರು ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇಲ್ಲಿನ ಶಾಸ್ತ್ರಗ್ರಂಥಗಳಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶವೇ ಇಲ್ಲ. ಹೀಗೆ ಯಾರಾದರೂ ಹೇಳಿದರೆ ಥಟ್ಟನೆ ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಈಗ ಸ್ತ್ರೀ ಶೋಷಣೆ ನಡೆಯುತ್ತಿಲ್ಲವೇ? ಈಗ ದಲಿತರ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿಲ್ಲವೇ? ಹಿಂದೂ ಧರ್ಮ ಎಂದರೆ ಶೋಷಣೆಯ ಧರ್ಮ ಎನ್ನುತ್ತಾರೆ. ಇಲ್ಲೇ ಆಗುತ್ತಿರುವುದು ಸಮಸ್ಯೆ. ಹಿಂದೂ ಧರ್ಮದ ಕೆಲವು ಅಥವಾ ಹಲವು ಅನುಯಾಯಿಗಳು ಮಾಡುತ್ತಿರುವ ತಪ್ಪುಗಳು ಈ ಸ್ತ್ರೀ ಶೋಷಣೆ, ಅಸ್ಪೃಶ್ಯತೆ ಆಚರಣೆ. ಅದು ಆಚರಣೆ ಮಾಡುತ್ತಿರುವವರ ತಪ್ಪೇ ವಿನಃ ಹಿಂದೂ ಧರ್ಮದ್ದಲ್ಲ. ಮನುಸ್ಮೃತಿಯಲ್ಲೊ ಇನ್ನೊಂದು ಗ್ರಂಥದಲ್ಲೊ ಅಸ್ಪೃಶ್ಯತೆ ಆಚರಣೆ ಹೇಳಿಲ್ಲವೇ? ಎಂಬ ಪ್ರಶ್ನೆ ಬರುತ್ತದೆ. ಇದರ ಬಗ್ಗೆ ಈಗಾಗಲೆ ಚರ್ಚಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಏನೇ ಇರಲಿ, ಈಗಿನ ಕಾಲಕ್ಕೆ ಅದು ಸಮ್ಮತವಾಗಿದ್ದರೆ ಮಾತ್ರ ಅನುಸರಣೆ. ಇಲ್ಲದಿದ್ದರೆ ಅದು ಯಾವುದೇ ಗ್ರಂಥದಲ್ಲಿರಲಿ, ಯಾರೇ ಮಹಾತ್ಮ ಹೇಳಿರಲಿ ಆಚರಣೆ ಮಾಡದೇ ಇರಲು ಹಿಂದೂ ಧರ್ಮದಲ್ಲಿ ಅವಕಾಶವಿದೆ.
ಇದನ್ನೂ ಓದಿ: ವಿಸ್ತಾರ ಅಂಕಣ: ನರೇಂದ್ರ ಮೋದಿಯವರತ್ತ ಬೆರಳು ತೋರಿಸಿ ಎಷ್ಟು ವಿಚಾರ ಮುಚ್ಚಿಡಲು ಸಾಧ್ಯ?
ದೇಶದ ಖ್ಯಾತ ಪತ್ರಕರ್ತರು, ಕನ್ನಡಿಗರೇ ಆದ ಪದ್ಮಭೂಷಣ ಡಾ. ಎಂ.ವಿ. ಕಾಮತ್ ಅವರು 2004ರ ಜೂನ್ 12ರಂದು ಬೆಂಗಳೂರಿನಲ್ಲಿ ಮಾಸ್ತಿ ಸ್ಮಾರಕ ಉಪನ್ಯಾಸ ನೀಡಿದರು. ಅವರ ವಿಷಯ; “Hindutva Exploration of a Challenge”. ಅವರ ಪ್ರಾರಂಭದ ಮಾತುಗಳು ಹೀಗಿವೆ. “ಹಿಂದುತ್ವ ಎನ್ನುವುದು ಹಿಂದೂ ಧರ್ಮದ ಸಾರ ಸರ್ವಸ್ವ. ಅದು ಎಲ್ಲ ಮತೀಯ ತತ್ತ್ವಗಳನ್ನೂ ಮೀರಿದ ವಿಶ್ವ ಪರಿಕಲ್ಪನೆ. ಆದರೆ ನಮ್ಮ ಬುದ್ಧಿಜೀವಿಗಳು ಅದು ಮತೀಯ ಅಸಹನೆ ಮತ್ತು ಉಗ್ರ ಕೋಮುವಾದದ ಸಂಕೇತವೆಂದು ಭಾವಿಸಿದ್ದಾರೆ. ಭಾರತದ ಹಿಂದುಗಳ ಮೇಲೆ ನಡೆದಿರುವ ಇಸ್ಲಾಂ ದಾಳಿ ಮತ್ತು ಬ್ರಿಟಿಷ್ ಪ್ರಭುತ್ವದಿಂದಾಗಿ ಹಿಂದುಗಳು ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನು ಮತ್ತೆ ಪಡೆಯಲು ಹಿಂದುತ್ವದ ಪರಿಕಲ್ಪನೆ ಅಗತ್ಯ. ಹಿಂದೂ ಧರ್ಮದ ಅಪಾರ್ಥದಿಂದಾಗಿ ಹಿಂದುಗಳು ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟುಕೊಳ್ಳುವಂತಹ ವಾತಾವರಣ ಸೃಷ್ಟಿಯಿಂದಾಗಿ ಹಿಂದುತ್ವದ ಪರಿಕಲ್ಪನೆ ಮೂಡಿಬಂದಿದೆ. ನಮ್ಮ ಜಾತ್ಯತೀತರಿಗೆ ಹಿಂದುತ್ವ ಎಂಬುದು ಇಸ್ಲಾಂ ಮೂಲಭೂತವಾದದ ಇನ್ನೊಂದು ರೂಪವಾಗಿ ಕಾಣುತ್ತಿದೆ. ಹಿಂದುಗಳನ್ನು ದೂಷಿಸುವುದೇ ಜಾತ್ಯತೀತರ ಕುಲಕಸುಬಾಗಿಬಿಟ್ಟಿದೆ” ಎಂದು ಹೇಳಿದ್ದರು.
ಸಮಾಧಾನಕರ ವಿಚಾರವೆಂದರೆ ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅದು ರಾಜಕೀಯ ಕಾರಣಗಳಿಗೇ ಇರಲಿ, ಹಿಂದೂ ಶಬ್ದದ ಕುರಿತು ಹಿಂದೆ ಇದ್ದಷ್ಟು ವಿರೋಧ ಈಗ ಇಲ್ಲ. ಬಿಜೆಪಿ ಪಕ್ಷವು ಹಿಂದುತ್ವವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳುತ್ತಾರೆಯೇ ವಿನಃ ಹಿಂದುತ್ವವೇ ತಪ್ಪು ಎಂದು ಹೇಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.
ಅದೇ ರೀತಿ ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯೂ ಜನರಿಗೆ ಈಗೀಗ ಮನವರಿಕೆ ಆಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಿಂದಾಗಿ, ಡಿಜಿಟಲ್ ಮಾಧ್ಯಮಗಳಿಂದಾಗಿ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಜನರಿಗೆ ತಿಳಿಯುತ್ತಿದೆ. ಅನ್ಯ ಮತ, ಸಂಪ್ರದಾಯಗಳನ್ನು ಅಪ್ಪಿಕೊಂಡ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹೇಗಿದೆ? ಅಲ್ಲಿನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಹೇಗೆ ಓಡಿಸಲಾಗುತ್ತಿದೆ ಎನ್ನುವುದು ಕಣ್ಣಿಗೆ ಕಾಣುತ್ತಿದೆ. ಭಾರತವು ಹಿಂದೂ ರಾಷ್ಟ್ರವಾಗಿರುವುದರಿಂದಲೇ ಇಲ್ಲಿ ಪರಧರ್ಮ ಸಹಿಷ್ಣುತೆ (Universal Tolerance) ಮಾತ್ರವಲ್ಲ, ಸ್ವಾಮಿ ವಿವೇಕಾನಂದರು ಹೇಳಿದಂತೆ ಪರಧರ್ಮ ಸ್ವೀಕಾರತೆ (Universal Acceptance) ಇದೆ. ಅದಕ್ಕೆ ಮುಖ್ಯ ಕಾರಣವೇ ಹಿಂದೂ ಧರ್ಮ.
ಇದನ್ನೂ ಓದಿ: ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು?
ಹಿಂದೂ ಧರ್ಮ ಎಂದ ಕೂಡಲೆ ನಿಘಂಟನ್ನೋ, ಇತಿಹಾಸದ ಪುಟಗಳನ್ನೋ, ಅದರ ಉಗಮವನ್ನೋ ನೋಡುವುದನ್ನು ಬುದ್ಧಿಜೀವಿಗಳು ಎನ್ನಿಸಿಕೊಂಡವರು ಈಗಲಾದರೂ ಬಿಡಬೇಕು. ಆ ಹಿಂದೂ ಧರ್ಮದ ಗ್ರಂಥಗಳ ಬೋಧನೆ ಏನು? ಅದನ್ನು ಆಚರಿಸುತ್ತಿರುವವರ ಧೋರಣೆಗಳೇನು? ಎನ್ನುವುದರಲ್ಲೇ ಹಿಂದೂ ಧರ್ಮದ ಸಾರ ತಿಳಿಯುತ್ತದೆ. ಭಾರತವು ಹಿಂದೂ ರಾಷ್ಟ್ರವಾಗಿ ಉಳಿಯುವುದರಿಂದ ಮಾತ್ರವೇ ಇಲ್ಲಿರುವ ಬಹುತ್ವ, ವಿವಿಧತೆ, ಸ್ವಾತಂತ್ರ್ಯಗಳು ಉಳಿಯುತ್ತವೆ ಎನ್ನುವುದು ಅಷ್ಟೇ ವಾಸ್ತವ ಸಂಗತಿ.
ಚಿಕಾಗೋದಲ್ಲಿ 1893ರ ಸೆಪ್ಟಂಬರ್ 19ರಂದು ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಕುರಿತು ಆಡಿದ ಮಾತುಗಳು: ಇತಿಹಾಸ ಪೂರ್ವದಿಂದ ಈ ತನಕ ಮೂರು ಧರ್ಮಗಳು ಮಾತ್ರ ಆಚರಣೆಯಲ್ಲಿವೆ. ಅವು- ಹಿಂದೂ ಧರ್ಮ, ಪಾರ್ಸಿ ಧರ್ಮ ಮತ್ತು ಯಹೂದ್ಯ ಧರ್ಮ. ಈ ಮೂರು ಧರ್ಮಗಳು ಅಗಾಧವಾದ ಆಘಾತಗಳನ್ನು ಎದುರಿಸಿಯೂ, ತಮ್ಮ ಅಂತರಂಗದಲ್ಲಿ ಶಕ್ತಿ ಇರುವುದರಿಂದ ಈಗಲೂ ಉಳಿದುಕೊಂಡಿವೆ. ಈ ಪೈಕಿ ಯಹೂದ್ಯ ಧರ್ಮಕ್ಕೆ ತನ್ನಿಂದಲೆ ಹುಟ್ಟಿದ ಕ್ರೈಸ್ತ ಧರ್ಮವನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಅದು ತನ್ನ ತಾಯ್ನೆಲವನ್ನು ಬಿಡಬೇಕಾಗಿ ಬಂತು. ಹಿಂದೊಮ್ಮೆ ಬಹಳ ಪ್ರಾಖ್ಯಾತಿ ಪಡೆದಿದ್ದ ಪಾರ್ಸಿ ಧರ್ಮ ಕುರಿತು ಮಾತನಾಡಲು ಪಾರ್ಸಿಗಳು ಉಳಿದಿದ್ದಾರೆ. ಆದರೆ, ಭರತ ಖಂಡದ ಹಿಂದೂ ಧರ್ಮ ಮಾತ್ರ ಎಲ್ಲವನ್ನೂ ಎದುರಿಸಿ ಬೆಳೆಯುತ್ತಲೇ ಇದೆ. ಏಕೆಂದರೆ, ಇಲ್ಲಿ ವೈವಿಧ್ಯತೆ ಇದೆ. ವಿಗ್ರಹಾರಾಧನೆ, ಪುರಾಣ, ನಾಸ್ತಿಕತೆ, ಆಜ್ಞೇಯವಾದ, ಆಧುನಿಕ ವಿಜ್ಞಾನ- ಹೀಗೆ ಎಲ್ಲದಕ್ಕೂ ಹಿಂದೂ ಧರ್ಮದಲ್ಲಿ ಸ್ಥಾನವಿದೆ. ಅದಕ್ಕೇ ಹೇಳುವುದು: ಭಾರತ ಹಿಂದೂ ರಾಷ್ಟ್ರವಾಗಿ ಉಳಿದರಷ್ಟೆ ಬಹುತ್ವ ಉಳಿಯುತ್ತದೆ !
ಇನ್ನೊಂದು ಮಾತು, ಹಿಂದೂ ಧರ್ಮದಲ್ಲಿರುವ ಎಲ್ಲವೂ ಶ್ರೇಷ್ಠ ಎನ್ನುವ ಭಾವನೆಯನ್ನೂ ಅನೇಕರು ಬಿಡಬೇಕು. ಸುಧಾರಣೆಗೆ ಹಿಂದೂ ಧರ್ಮ ಸದಾ ಮುಕ್ತ, ಹಾಗೆಯೇ ಇರಬೇಕು. ಅದು ಮುಂದುವರಿಯಲಿ. ಯಾವುದೇ ವ್ಯವಸ್ಥೆಯನ್ನು ಸ್ವಲ್ಪವೂ ಬದಲಾಗದಂತೆ, ಇದ್ದಂತೆಯೇ ಇಡುವುದು ಮ್ಯೂಸಿಯಂನಲ್ಲಿ ಮಾತ್ರ. ಮ್ಯೂಸಿಯಂನಲ್ಲಿ ಇತಿಹಾಸ ಸಿಗುತ್ತದೆಯೇ ವಿನಃ ಜೀವ, ಜೀವನ ಸಿಗುವುದಿಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ಮಸೂರಿಯಲ್ಲಿ ಕಲಿತ ಪಾಠವನ್ನು ಈ ಅಧಿಕಾರಿಗಳಿಗೆ ಮತ್ತೆ ನೆನಪಿಸುವವರು ಯಾರು?