Site icon Vistara News

ವಿಸ್ತಾರ ಅಂಕಣ: ಭಾರತವು ವಿಶ್ವ ಗುರು ಪಟ್ಟ ಉಳಿಸಿಕೊಳ್ಳಬೇಕಾ, ಇಲ್ಲ ಸೂಪರ್ ಪವರ್ ಆಗಬೇಕಾ?

International Yoga Day 2024

International Yoga Day 2024: Narendra Modi Will Participate In Srinagar Programme, World Is Ready To Celebrate

“ಭಾರತವು ನಮ್ಮ ಜನಾಂಗದ ಮಾತೃಭೂಮಿ ಹಾಗೂ ಸಂಸ್ಕೃತವು ಯುರೋಪಿನ ಭಾಷೆಗಳ ತಾಯಿ. ಅವಳು(ಭಾರತ) ನಮ್ಮ ತತ್ತ್ವಶಾಸ್ತ್ರದ ತಾಯಿ, ಅರಬ್ಬರ ಮೂಲಕ ನಮ್ಮ ಬಹುತೇಕ ಗಣಿತ ನೀಡಿದ ತಾಯಿ, ಬುದ್ಧನ ಮೂಲಕ ಕ್ರೈಸ್ತ ಮತದಲ್ಲಿ ಅಡಕವಾಗಿರುವ ಆದರ್ಶಗಳನ್ನು ಒದಗಿಸಿದ ತಾಯಿ. ಸ್ವಯಂ ಶಾಸನದ ಗ್ರಾಮೀಣ ಸಮುದಾಯಗಳ ಮೂಲಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ನಮ್ಮ ತಾಯಿ. ತಾಯಿ ಭಾರತಿಯು ಅನೇಕ ರೂಪದಲ್ಲಿ ನಮಗೆಲ್ಲ ತಾಯಿ”

ಈ ಮಾತನ್ನು ಹೇಳಿದವರು ಅಮೆರಿಕದ ಪ್ರಸಿದ್ಧ ತತ್ತ್ವಜ್ಞಾನಿ ವಿಲ್ ಡುರಾಂಟ್. ವಿಲ್ ಡುರಾಂಟ್ ಅವರ ವಾಕ್ಯವನ್ನೇ -ಭಾರತವು ನಮಗೆಲ್ಲ ತಾಯಿ ( India- Mother of us All) ಕೃತಿಯನ್ನು ಚಮನ್ ಲಾಲ್ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ, ಭಾರತದ ಕುರಿತು ಅನೇಕರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೂ ದಾಖಲಿಸಿದ್ದಾರೆ.

ಜಪಾನ್ ನ ಪ್ರೊಫೆಸರ್ ಎಚ್. ನಕಮುರ ಅವರು ಈ ರೀತಿ ಹೇಳುತ್ತಾರೆ: “ಭಾರತವು ಸಾಂಸ್ಕೃತಿಕವಾಗಿ ನಮ್ಮ ತಾಯಿ. ತನ್ನದೇ ವಿಶಿಷ್ಟ ರೂಪದಲ್ಲಿ ಅನೇಕ ಶತಮಾನಗಳವರೆಗೆ, ಈಗಲೂ ಜಪಾನ್ನ ಆಲೋಚನೆ ಹಾಗೂ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಲೇ ಇದೆ”.

ಇಂದು ಇಡೀ ವಿಶ್ವ ಭಾರತದ ಕಡೆಗೆ ಬೆರಗುಗಣ್ಣಿನಿಂದ ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ದೇಶಕ್ಕೆ ಮೊದಲ ರಾಜತಾಂತ್ರಿಕ ಭೇಟಿ ಮಾಡುತ್ತಿರುವ ಸಂದರ್ಭದಲ್ಲಿ ಅವರಿಗೆ ದೊರಕುತ್ತಿರುವ ಗೌರವ, ವೇದಿಕೆಯನ್ನು ಕಂಡು ಭಾರತೀಯರಾದ ನಮ್ಮೆಲ್ಲರ ಆತ್ಮವಿಶ್ವಾಸ ಕನಿಷ್ಠ ಹತ್ತು ಪಟ್ಟು ಹೆಚ್ಚಾಗಲೇಬೇಕು. ಏಕೆಂದರೆ ಅಲ್ಲಿ ದೊರಕುತ್ತಿರುವ ಗೌರವ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗುತ್ತಿದ್ದರೂ, ಅಮೆರಿಕದವರ ಕಣ್ಣ ಮುಂದೆ ಇರುವುದು ಇಡೀ ದೇಶದ 130 ಕೋಟಿಗೂ ಹೆಚ್ಚಿನ ಜನರು, ಇಲ್ಲಿನ ವೈವಿಧ್ಯತೆ, ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ. ಎಲ್ಲಕ್ಕಿಂತ ಹೆಚ್ಚಾಗಿ ಈ ಎಲ್ಲ ಆದರ್ಶಗಳನ್ನೂ ದೇಶ ವಿದೇಶಗಳಲ್ಲಿ ಪಾಲನೆ ಮಾಡಿಕೊಂಡು ಬರುತ್ತಿರುವ ಜೀವಂತ ಸಮಾಜ.

ಭಾರತದ ಕಡೆಗೆ ವಿಶ್ವ ಈ ರೀತಿ ನೋಡಲು ಆರಂಭಿಸಿದ್ದು ಈಗಿನ ಕಥೆಯಲ್ಲ. ಯಾವಾಗ ಯುರೋಪ್ ಹಾಗೂ ಅಮೆರಿಕ ಹಣದ ಮತ್ತಿನಲ್ಲಿ ನೆಮ್ಮದಿಯನ್ನು ಕಳೆದುಕೊಂಡವೋ ಆಗಲೇ ಅವುಗಳಿಗೆ ಭಾರತದ ಅವಶ್ಯಕತೆ ಮನವರಿಕೆಯಾಯಿತು.

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಕುರಿತು ಉಲ್ಲೇಖಿಸಿದ್ದಾರೆ. ಅದರ ಸಾರಾಂಶ ಹೀಗಿದೆ. “ಜನರು ಇಂದು ರಾಜಕಾರಣಿಯನ್ನಾಗಲಿ, ಮುತ್ಸದ್ಧಿಯನ್ನಾಗಲಿ, ತಥಾಕಥಿತ ಆಧ್ಯಾತ್ಮಿಕ ಗುರುವನ್ನಾಗಲಿ ಆಲಿಸಲು ಇಷ್ಟಪಡುವುದಿಲ್ಲ. ಮನುಷ್ಯನನ್ನು ಮನುಷ್ಯನ ವಿರುದ್ಧ, ರಾಷ್ಟ್ರವನ್ನು ರಾಷ್ಟ್ರದ ವಿರುದ್ಧ ಎತ್ತಿಕಟ್ಟುತ್ತಿರುವ ಭಂಜಕ ಶಕ್ತಿಗಳಿಂದ ವಿಶ್ವಕ್ಕೆ ಪರಿಹಾರ ಬೇಕಾಗಿದೆ. ಹಾಗೂ, ಬಹುಶಃ ಈ ಸಮಸ್ಯೆಗೆ ಪರಿಹಾರ ಭಾರತದಲ್ಲಿ ಮಾತ್ರ ಇದೆ. ಸಂಕಟದಲ್ಲಿ ಬಳಲುತ್ತಿರುವ ಮಾನವತೆಗೆ ಸಾಂತ್ವನ ಹೇಳುವ ಸಂದೇಶಕ್ಕಾಗಿ, ಪ್ರೀತಿ, ಸೇವೆಗಾಗಿ ಇಡೀ ವಿಶ್ವ ಈಗ ಭಾರತದ ಕಡೆಗೆ ನೋಡುತ್ತಿದೆ. ಅಚಾನಕ್ಕಾಗಿ ಎದ್ದುನಿಂತ ಅನೇಕ ದೇಶಗಳು ವೈಜ್ಞಾನಿಕ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿದ್ದರೂ, ಆಧ್ಯಾತ್ಮಿಕ ಜೀವನ ಹಾಗೂ ದೈವಿಕತೆಯಲ್ಲಿ ಖಾಲಿಯಾಗಿರುವುದು ಮನವರಿಕೆಯಾಗಿದೆ. ಸ್ವತಃ ಅಮೆರಿಕವೂ ಇಂದು ಈ ಬಡತನದಿಂದ ಬಳಲುತ್ತಿದೆ”.

ಇಂದು ಭಾರತವನ್ನು ಸೂಪರ್ ಪವರ್ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತವೆ. ಈ ಸೂಪರ್ ಪವರ್ ಎಂದರೆ ಏನು? ಮಿಲಿಟರಿಯಲ್ಲಿ ಇಡೀ ಜಗತ್ತಿನಲ್ಲೆ ಯಾವ ದೇಶದಲ್ಲೂ ಇಲ್ಲದಷ್ಟು ಸೈನಿಕರು, ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದುವದೇ? ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದಷ್ಟು ಧನ ಸಂಪತ್ತು ಹೊಂದುವುದೇ? ಪ್ರಪಂಚಕ್ಕೆ ಮುಂದಿನ ನೂರು ವರ್ಷಕ್ಕಾಗುವಷ್ಟು ಇಂಧನದ ದಾಸ್ತಾನನ್ನು ಹೊಂದಿ, ಎಲ್ಲರನ್ನೂ ನಿಯಂತ್ರಿಸುವುದೇ? ಶತಕೋಟಿ ಡಾಲರ್ ಮೌಲ್ಯದ ಕಂಪನಿಗಳ ಮೂಲಕ ವಿವಿಧ ದೇಶಗಳ ಮಾರುಕಟ್ಟೆಯನ್ನು ಕಬಳಿಸಿ ಲಾಭ ಮಾಡಿಕೊಳ್ಳುವುದೇ? ಇಂದಿನ ಅನೇಕರು ಮಾತನಾಡುವುದು ಇಂತಹ ಭಾಷೆಯಲ್ಲೆ.

ಇನ್ನೊಬ್ಬರನ್ನು ನಿಯಂತ್ರಣಕ್ಕೆ ಇರಿಸಿಕೊಳ್ಳುವುದು, ಮತ್ತೊಬ್ಬರು ನಮ್ಮನ್ನು ನೋಡಿದರೆ ಭಯ ಪಡಬೇಕು, ಇದೇ ಶಕ್ತಿ ಎಂದು ಅನೇಕರು ತಿಳಿದಿದ್ದಾರೆ. ಬಹುಶಃ ಐರೋಪ್ಯ ದೇಶಗಳು, ಈಗಿನ ಕಮ್ಯುನಿಸ್ಟ್ ಚೀನಾ, ಅಮೆರಿಕದಂತಹ ದೇಶಗಳನ್ನು ತಿಳಿದವರಿಗೆ ಇದು ಸರಿ ಎನ್ನಿಸುತ್ತದೆ. ಏಕೆಂದರೆ ಈ ದೇಶಗಳಿಗೆ ಸೂಪರ್ ಪವರ್ ಆಗುವುದು ಎಂದರೆ ಇನ್ನೊಬ್ಬರನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಎಂದೇ ಅರ್ಥ. ಆದರೆ ಭಾರತದ ಮಟ್ಟಿಗೆ ಇದು ಅಪ್ಪಟ ಸುಳ್ಳು.

ʼಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯʼ, ʼಕೃಣ್ವಂತೋ ವಿಶ್ವಂ ಆರ್ಯಂʼ, ʼವಸುಧೈವ ಕುಟುಂಬಕಂʼಎಂಬ ವಾಕ್ಯಗಳು ಭಾರತದಲ್ಲಿ ಮಾತ್ರವೇ ಕೇಳಲು ಸಿಗುವಂಥವು. ಇವು ಸಂಸ್ಕೃತ ಭಾಷೆಯಲ್ಲಿವೆ, ಹಾಗಾಗಿ ಭಾರತ ಬಿಟ್ಟು ಇನ್ನೇನು ಅಮೆರಿಕದಲ್ಲೋ, ಇಟಲಿಯಲ್ಲೋ ಈ ವಾಕ್ಯಗಳು ಇರಲು ಸಾಧ್ಯವೇ ಎಂದು ಯಾರಾದರೂ ಹಾಸ್ಯ ಮಾಡಬಹುದು. ನಾವಿಲ್ಲಿ ಹೇಳುತ್ತಿರುವುದು ಈ ಸಂಸ್ಕೃತದ ಸಾಲುಗಳಲ್ಲ, ಬದಲಿಗೆ ಆ ಸಾಲುಗಳಲ್ಲಿರುವ ಸಾರ, ಉದಾತ್ತಯನ್ನು. ಇದನ್ನು ಆ ಸಂಸ್ಕೃತಿಗಳಲ್ಲಿ ಕಾಣಲು ಸಿಗುವುದಿಲ್ಲ. ಹಾಗೆ ನೋಡಿದರೆ, ಇದು ಇದು ಅವರ ತಪ್ಪಲ್ಲ. ಅವರ ಸ್ವಭಾವವೇ ಹಾಗೆ.

yoga by foreigners

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ ಎಂದು ಸ್ವಾಮಿ ವಿವೇಕಾನಂದರು ಹೇಳಿದರು. ಆತ್ಮದ ಮೋಕ್ಷವೂ ಆಗಬೇಕು, ಜಗತ್ತಿನ ಹಿತವೂ ಆಗುವಂತೆ ನಮ್ಮ ಜೀವನ ಇರಬೇಕು ಎಂದರು. ಹಾಗಾದರೆ ವಿಶ್ವಕ್ಕೆ ಜ್ಞಾನ ಕೊಡಲು ಮಾತ್ರ ನಾವು ಇರುವುದೇ? ಇಲ್ಲ. ವಿಶ್ವದಿಂದಲೂ ನಾವು ಪಡೆಯಬೇಕು. ಅದಕ್ಕಾಗಿಯೇ ಆನೋ ಭದ್ರಾ ಕೃತವೋ ಯಂತು ವಿಶ್ವತಃ ಎಂದು ನಮ್ಮ ಪೂರ್ವಜರು ತಿಳಿಸಿಕೊಟ್ಟರು. ಅಂದರೆ ಒಳ್ಳೆಯ ವಿಚಾರಗಳು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ, ಅದನ್ನು ಪಡೆಯಬೇಕು. “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು, ವಿದ್ಯೆಯ ಪರ್ವತವೆ ಆದ ಸರ್ವಜ್ಞ” ಎನ್ನುವ ನುಡಿಯಂತೆ ಭಾರತವು ಜಗತ್ತಿನ ಎಲ್ಲೆಡೆಯಿಂದಲೂ ವಿಚಾರಗಳನ್ನು ಸ್ವೀಕರಿಸುತ್ತ ತಾನೂ ಬೆಳೆಯಿತು, ಜಗತ್ತನ್ನೂ ಬೆಳಗಿತು. ಹಾಗಾಗಿಯೇ ವಿದೇಶಗಳ ವಿದ್ವಾಂಸರೂ ಭಾರತದ ಕಡೆಗೆ ಗೌರವದ ದೃಷ್ಟಿಯಿಂದ ನೋಡುತ್ತಾರೆ.

ಇಂದು ಭಾರತವನ್ನು ವಿಶ್ವ ನೋಡುತ್ತಿರುವುದೂ ಅದೇ ಕಣ್ಣುಗಳಿಂದ. ಯೋಗ ಎನ್ನುವುದು ಇಡೀ ವಿಶ್ವದಲ್ಲಿ ಇಂದು ಆವರಿಸಿದೆ. ಇಂದಿನ ಈ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗಲ್ಲದೆ ಬೇರೆ ಯಾರಿಗೂ ಆ ಶ್ರೇಯವನ್ನು ನೀಡಲಾಗದು. ವಿಶ್ವಸಂಸ್ಥೆಯೇ ಯೋಗ ಕಾರ್ಯಕ್ರಮ ಆಯೋಜನೆ ಮಾಡುವುದರ ಜತೆಗೆ ಜಗತ್ತಿನ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೂ ಒಟ್ಟಿಗೆ ಯೋಗ ಮಾಡಿ ಗಿನ್ನೆಸ್ ದಾಖಲೆಯನ್ನೂ ಬರೆದಿದ್ದಾರೆ. ಜಗತ್ತು ಇಂದು ಹಣದ ಹಿಂದೆ ಓಡುತ್ತಿದೆ, ಉದ್ಯಮದ ಹಿಂದೆ ಓಡುತ್ತಿದೆ, ರಾಜಕೀಯ ಶಕ್ತಿಯ ಹಿಂದೆ ಓಡುತ್ತಿದೆ. ಆದರೆ ಅದೇ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಇದಕ್ಕೆ ಕಾರಣ, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಮನವೊಲಿಸಿದ್ದು. ಅದಕ್ಕಾಗಿ ಅವರಿಗೆ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕು.

ಆದರೆ ನರೇಂದ್ರ ಮೋದಿಯವರು ಯೋಗದ ಕುರಿತು ಮನವರಿಕೆ ಮಾಡುವ ಮುನ್ನ ಆ ದೇಶಗಳಲ್ಲಿ ಅದಾಗಲೇ ಸಾಕಷ್ಟು ಪ್ರಮಾಣದಲ್ಲಿ ಯೋಗ ಅಭ್ಯಾಸ ನಡೆಯುತ್ತಿತ್ತು. ಅದಕ್ಕೆ ಕರ್ನಾಟಕದವರೇ ಆದ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಬಾಬಾ ರಾಮದೇವ್, ಶ್ರೀ ಶ್ರೀ ರವಿಶಂಕರ್ ಗುರೂಜಿವರೆಗಿನ ಪ್ರಮುಖ ನೂರಾರು ಸಾಧು ಸಂತರು ಸಾಧಕರು, ಸಾವಿರಾರು ಯೋಗಪಟುಗಳ ಪರಿಶ್ರಮ ಇತ್ತು. ಯೋಗವೆಂದರೆ ಕೇವಲ ಯಾವುದೋ ಖಾಯಿಲೆಗೆ ಪರಿಹಾರವಲ್ಲ, ಬದಲಿಗೆ ಅದು ಒಂದು ಆರೋಗ್ಯಕರ ಜೀವನಶೈಲಿಯ ಕೀಲಿಕೈ ಎಂದು ಇವರೆಲ್ಲರೂ ತಿಳಿಸಿಕೊಟ್ಟಿದ್ದರು. ನರೇಂದ್ರ ಮೋದಿಯವರು ಇವರೆಲ್ಲರ ಶ್ರಮಕ್ಕೆ ಕಲಶಪ್ರಾಯವೆಂಬಂತೆ ವಿಶ್ವಸಂಸ್ಥೆಯಲ್ಲಿ ಮಾನ್ಯತೆ ದೊರಕಿಸಿಕೊಟ್ಟರು.

ಭಾರತವು ಮುಂದಿನ ಕೆಲ ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆ ಆಗಬೇಕು ಎಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ, ಅದಕ್ಕಾಗಿ ದೇಶದ ಎಲ್ಲರನ್ನೂ ಹುರಿದುಂಬಿಸುತ್ತಿದ್ದಾರೆ. ಅದು ಅಗತ್ಯವೂ ಹೌದು. ಇಷ್ಟು ದೊಡ್ಡ ಸಂಖ್ಯೆಯ ಯುವಕರನ್ನು ಹೊಂದಿರುವ ದೇಶವು ಇಂದು ಶ್ರಮವಹಿಸಿ ದುಡಿಯಬೇಕೆ ವಿನಃ ಸೋಮಾರಿಗಳಾಗಿ ತಿನ್ನುತ್ತ ಕೂರಬಾರದು. ಏಕೆಂದರೆ ಮುಂದಿನ 30-40 ವರ್ಷದಲ್ಲಿ ಇದೇ ಯುವ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮುದುಕರು ತುಂಬಿಕೊಂಡಿರುತ್ತಾರೆ. ಆಗ ಕೆಲಸ ಮಾಡುವ ಶಕ್ತಿ ಇರುವುದಿಲ್ಲ. ಆಗಿನ ಯುವ ಪೀಳಿಗೆಯ ಮೇಲೆ ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದರೆ ಈಗಿನ ಯುವಕರು ಆದಷ್ಟು ದುಡಿದು ಮುಂದಿನ ಪೀಳಿಗೆಗೂ ಉಳಿಸಬೇಕು. ಆದರೆ ಹಣವನ್ನು ದುಡಿಯುವುದು ಭಾರತದ ಗುರುತು ಅಲ್ಲ. ಅದು ಅನಿವಾರ್ಯ ಅಷ್ಟೆ.

ಭಾರತದ ಆತ್ಮ ಎಂದರೆ ಅದು ವಿಶ್ವಶಾಂತಿಗೆ ಜ್ಞಾನ, ಸೇವೆಯನ್ನು ನೀಡುವುದು. ಸದ್ಯಕ್ಕೆ ಯೋಗವು ವಿಶ್ವಕ್ಕೆ ಭಾರತ ಇತ್ತೀಚಿಗೆ ನೀಡಿದ ಅತ್ಯಮೂಲ್ಯ ಕೊಡುಗೆ. ಸಾವಿರಾರು ವರ್ಷ ಗುಲಾಮಿತನದಲ್ಲಿದ್ದ ಭಾರತವು ಅಂತರ್ಗತದಲ್ಲಿಯಾದರೂ ಇಂತಹ ಗುಣಗಳನ್ನು ಕಾಪಾಡಿಕೊಂಡು ಬಂದಿದೆ. ಸಂಸ್ಕೃತ ಭಾಷೆ, ಅದರಲ್ಲಿರುವ ಸಂಪತ್ತು, ವಿಜ್ಞಾನದ ಸಂಶೋಧನೆ, ನೌಕಾಯಾನ, ಖಗೋಳಶಾಸ್ತ್ರ, ಗಣಿತದಲ್ಲಿ ಭಾರತವು ವಿಶ್ವಕ್ಕೆ ಕೊಡಲು ಇನ್ನೂ ಸಾಕಷ್ಟು ಸರಕುಗಳಿವೆ. ಭಾರತವು ಎಂದಿಗೂ ಶಾಂತಿಯ ದೇಶವೇ ಆಗಿತ್ತು.

yoga by foreigners

ಹೀಗೆಂದ ಕೂಡಲೆ ಕೆಲವರ ಕಣ್ಣು ಕೆಂಪಾಗಬಹುದು. ಶಾಂತಿ ಮಂತ್ರ ಜಪಿಸಿದ್ದರಿಂದಲೇ ನಾವು ಸಾವಿರ ವರ್ಷ ಗುಲಾಮರಾಗಿದ್ದೆವು, ಕ್ಷಾತ್ರ ತೇಜಸ್ಸು ಇಂದಿನ ಅವಶ್ಯಕತೆ ಎನ್ನಬಹುದು. ಅದೂ ಸರಿಯೆ. ಕ್ಷಾತ್ರ ಎನ್ನುವುದು ಎಂದಿಗೂ ಅತ್ಯಗತ್ಯವಾದ ಗುಣ. ಆದರೆ ಭಾರತದ ನಿಜವಾದ ಗುಣ ಶಾಂತಿ. ಶಾಂತಿಯ ಕಡೆಗೇ ನಮ್ಮ ಒಲವು. ನಾವಾಗಿ ಎಂದಿಗೂ ಯಾರ ಮೇಲೆಯೂ ದಂಡೆತ್ತಿ ಹೋದವರಲ್ಲ. ಋಷಿ ಮುನಿಗಳು, ರಾಜ ಮಹಾರಾಜರು, ವ್ಯಾಪಾರಿಗಳು, ಬುದ್ಧನೂ ದೇಶದೇಶಗಳನ್ನು ದಾಟಿ ಹಿಂದು ಧರ್ಮವನ್ನು ಪ್ರಸಾರ ಮಾಡಿದ್ದು ಕೈಯಲ್ಲಿ ಒಂದು ಕಮಂಡಲ ಹಿಡಿದು, ನಗುಮೊಗದಿಂದಲೇ ವಿನಃ ಕತ್ತಿ ಕೋವಿಗಳಿಂದ ಅಲ್ಲ. ಎದುರಾಳಿ ದಾಳಿ ಮಾಡಿದಾಗಲೂ ಶಾಂತಿ ಜಪಿಸುತ್ತ ಕೂರಬೇಕು ಎನ್ನುವುದಕ್ಕೆ ಆಕ್ಷೇಪ ಇದೆ. ಅದು ಭಾರತದ ಗುಣ ಅಲ್ಲ. ನಡುವೆ ಎಲ್ಲೋ ತೂರಿಕೊಂಡ ದೋಷ. ಒಟ್ಟಾರೆ, ಜಗತ್ತಿನಲ್ಲಿ ಎಲ್ಲವೂ ಶಾಂತಿಯಿಂದ ಇರಬೇಕು, ನಾವೂ ಶಾಂತಿಯಿಂದ ಬಾಳಬೇಕು ಎನ್ನುವುದೇ ಭಾರತದ ಗುಣ, ಇದರಲ್ಲಿ ವ್ಯತ್ಯಾಸವಿಲ್ಲ. ಯಜುರ್ವೇದದಲ್ಲಿನ ಶಾಂತಿ ಮಂತ್ರದ ನಡುವಿನ ಸಾಲುಗಳು “…ಪೃಥಿವೀ ಶಾಂತಿಃ ಆಪಃ ಶಾಂತಿಃ, ಓಷಧಯ ಶಾಂತಿಃ, ವನಸ್ಪತಯಃ ಶಾಂತಿಃ…” ಕೇವಲ ಮನುಷ್ಯನಿಗೆ ಮಾತ್ರ ಶಾಂತಿಯನ್ನು ಕೋರುವುದಲ್ಲ, ಬದಲಿಗೆ ಭೂಮಿಗೆ ಶಾಂತಿ, ಗಿಡ, ಮರ, ಬಳ್ಳಿಗಳಲ್ಲೂ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇವೆ.

ಈಗಲೂ ಭಾರತದ ಈ ಗುಣ ಬದಲಾಗಿಲ್ಲ. ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯ ಭಾರತಕ್ಕೆ ಇದೆ, ಭಾರತದ ಬಳಿ ಅಣ್ವಸ್ತ್ರವೂ ಇದೆ. ಆದರೆ ಭಾರತದ ಘೋಷಣೆ ಏನು? ʼಮೊದಲು ಬಳಕೆ ಇಲ್ಲʼ ಎನ್ನುವುದು. ನಾವಂತೂ ಮೊದಲಿಗರಾಗಿ ಅಣ್ವಸ್ತ್ರವನ್ನು ಬಳಸಿ ವಿಶ್ವಶಾಂತಿಯನ್ನು ಕದಡುವುದಿಲ್ಲ. ಆದರೆ ಬೇರೆ ಯಾರಾದರೂ ನಮ್ಮ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎನ್ನುವುದು ನಮ್ಮ ನೀತಿ.

ಇದನ್ನೂ ಓದಿ: ವಿಸ್ತಾರ ಅಂಕಣ: ದೇಶವನ್ನು ಹರಾಜು ಹಾಕಲು ಈ ರಾಜಕೀಯ ಪಕ್ಷಗಳಿಗೆ ಯಾರೂ ಅಧಿಕಾರ ಕೊಟ್ಟಿಲ್ಲ

ಇಷ್ಟೆಲ್ಲ ಜ್ಞಾನ ಪರಂಪರೆಯು ಭಾರತದಲ್ಲಿ ಇದೆಯಾದರೂ ಅದ್ಯಾವುದಕ್ಕೂ ಪೇಟೆಂಟ್ ತೆಗೆದುಕೊಳ್ಳಬೇಕು ಎಂಬ ಆಲೋಚನೆಯೇ ಬರಲಿಲ್ಲ. ಸುಶ್ರುತ, ಆರ್ಯಭಟ್ಟ, ಬೋಧಾಯನರಂಥವರು ತಮ್ಮ ಸಂಶೋಧನೆಗಳಿಗೆ ಪೇಟೆಂಟ್ ಪಡೆಯಲು ಆರಂಭಿಸಿದ್ದರೆ ಇಂದು ಪಾಶ್ಚಿಮಾತ್ಯರಿಗೆ ಸಂಶೋಧನೆ ಮಾಡಲು ಅವಕಾಶವೇ ಆಗುತ್ತಿರಲಿಲ್ಲ. ಭಾರತವು ಕೇವಲ ಪೇಟೆಂಟ್ನಿಂದ ಬರುವ ಹಣದಿಂದಲೇ ಬದುಕಬಹುದಿತ್ತು. ಇದೇ ಕಾರಣಕ್ಕೆ ಯೋಗದ ಕುರಿತು ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಇದೇ ಮಾತನ್ನು ಉಲ್ಲೇಖಿಸಿದ್ದಾರೆ. ಯೋಗಕ್ಕೆ ಹಕ್ಕುಸ್ವಾಮ್ಯ ಇಲ್ಲ. ಯೋಗಕ್ಕೆ ಪೇಟೆಂಟ್ ಇಲ್ಲ. ಯೋಗಕ್ಕೆ ರಾಯಲ್ಟಿ ನೀಡಬೇಕಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಎರಡು ವಿಚಾರಗಳಿವೆ.

ಯೋಗವು ಪ್ರಸಿದ್ಧಿ ಆಗುತ್ತಿರುವಂತೆಯೇ ಪಾಶ್ಚಿಮಾತ್ಯರ ವ್ಯಾಪಾರಿ ಬುದ್ಧಿ ಬಲಿಯಲು ಆರಂಭಿಸಿದೆ. 2007ರಲ್ಲೇ ಅಮೆರಿಕವು ಯೋಗದ ಕೆಲವು ಆಸನಗಳಿಗೆ, ʼಉತ್ಪನ್ನʼಗಳಿಗೆ ಪೇಟೆಂಟ್ ದಯಪಾಲಿಸಿ ಕೆಲವರದ್ದೇ ಸ್ವತ್ತಾಗಿಸುವ ಪ್ರಯತ್ನ ನಡೆಸಿತ್ತು. ಈಗಲೂ ಕೆಲವು ಆಸನಗಳಿಗೆ ಒಂದಷ್ಟು ಹೊಸ ಶಬ್ದ, ಸ್ಥಿತಿ ಸೇರಿಸಿ ಪೇಟೆಂಟ್ ಮಾಡಿಕೊಳ್ಳುವ ಸಂಚಿನಲ್ಲಿದ್ದಾರೆ. ಅಂಥವರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಯೋಗದ ಪೇಟೆಂಟ್ ಭಾರತದ ಬಳಿಯೇ ಇರಲಿದೆ, ಹಾಗೂ ಅದು ವಿಶ್ವದ ಎಲ್ಲರಿಗೂ ಮುಕ್ತವಾಗಿರಲಿಲ್ಲ ಎಂಬ ಮಾತನ್ನು ಪರೋಕ್ಷವಾಗಿ ಹೇಳಿದ್ದಾರೆ. ಜ್ಞಾನವನ್ನು ಹಂಚುವುದರ ಜತೆಗೆ, ಜ್ಞಾನದ ಮೂಲವು ಯಾರೋ ಒಬ್ಬರ ಸ್ವತ್ತಾಗದಂತೆ ತಡೆಯುವ ಕರ್ತ್ಯವನ್ನೂ ನರೇಂದ್ರ ಮೋದಿಯವರು ಮೆರೆದಿದ್ದಾರೆ.

ಜ್ಞಾನಕ್ಕೆ ಯಾವುದೇ ಗಡಿ, ಕಟ್ಟುಪಾಡು ಇರಕೂಡದು ಎಂಬ ಭಾರತದ ಪುರಾತನ ಮೌಲ್ಯವು ನರೇಂದ್ರ ಮೋದಿಯವರ ಮೂಲಕ ಇಂದು ಜಗತ್ತಿನಲ್ಲಿ ಮತ್ತೆ ಅನುರಣಿಸಿದೆ. ಭಾರತವು ಹಣದಿಂದಾಗಲಿ, ಅಧಿಕಾರದಿಂದಾಗಲಿ ಸೂಪರ್ ಪವರ್ ಆಗಲು ಎಂದೂ ಬಯಸಿಲ್ಲ, ಭಾರತದ ಗುಣಧರ್ಮವನ್ನು ನೋಡಿದರೆ ಅದು ಸಾಧ್ಯವೂ ಇಲ್ಲ, ಅಗತ್ಯವೂ ಇಲ್ಲ. ವಿಶ್ವವು ಅಂಧಕಾರದಲ್ಲಿ ಮುಳುಗಿದ್ದಾಗ ಜ್ಯೋತಿಯನ್ನು ತೋರಿಸುವ ವಿಶ್ವ ಗುರುವಿನ ಸ್ಥಾನವನ್ನಷ್ಟೆ ಭಾರತವು ಅಲಂಕರಿಸಬೇಕಿದೆ. ಆ ಸ್ಥಾನಕ್ಕೆ ಭಾರತವನ್ನು ಬಿಟ್ಟರೆ ಬೇರೆ ಯಾರಿಗೂ ಅರ್ಹತೆ ಇದೆ ಎಂದೂ ಹೇಳಲಾಗದು. ನಮ್ಮತನವನ್ನು ಅರಿತು, ಅದನ್ನೇ ಬದುಕು, ಮೆರೆಯವುದರ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಲು ನಾವೆಲ್ಲರೂ ಕಾರ್ಯತತ್ಪರರಾಗೋಣ.

ಇದನ್ನೂ ಓದಿ: ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?

Exit mobile version