ಘಟನೆ 1: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ಕಳೆದ 14 ವರ್ಷದಲ್ಲಿ 13 ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇವರಲ್ಲಿ ಇಬ್ಬರನ್ನು ಕೇವಲ 25 ದಿನದೊಳಗೆ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಘಟನೆ 2: ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ದಕ್ಷ ಅಧಿಕಾರಿ ಎಂದೇ ಹೆಸರು ಪಡೆದ ಹರ್ಷ ಗುಪ್ತ ಅವರನ್ನು 22 ವರ್ಷದಲ್ಲಿ 30ಕ್ಕೂ ಹೆಚ್ಚು ಬಾರಿ ವರ್ಗಾವಣೆ ಮಾಡಲಾಗಿದೆ.
ಸ್ವಾತಂತ್ರ್ಯಾನಂತರದಲ್ಲಿ ದೇಶದ ಒಟ್ಟಾರೆ ಆಡಳಿತ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಬದಲಾವಣೆಯನ್ನು ಕಂಡಿರುವುದು ಅಧಿಕಾರಿ ವರ್ಗ. ಅದರಲ್ಲೂ ಮುಖ್ಯವಾಗಿ ಅಖಿಲ ಭಾರತ ಆಡಳಿತ ಸೇವೆ (ಐಎಎಸ್) ಎಂಬ ಹುದ್ದೆ ಇನ್ನೂ ತನ್ನ ʼಖದರ್ʼ ಅನ್ನು ಹಾಗೆಯೇ ಉಳಿಸಿಕೊಂಡಿದೆ. ಸ್ವಾತಂತ್ರ್ಯಾನಂತರದಲ್ಲಿ ಜನಪ್ರತಿನಿಧಿಗಳು ಹೊಸಬರಾಗಿದ್ದರು. ಜತೆಗೆ ಒಟ್ಟಾರೆ ದೇಶದ ಶೈಕ್ಷಣಿಕ ಮಟ್ಟವೇ ಕಡಿಮೆಯಿದ್ದ ಕಾರಣ ಒಟ್ಟಾರೆ ಜನಪ್ರತಿನಿಧಿಗಳಲ್ಲಿ ಶಿಕ್ಷಿತರಿದ್ದದ್ದೂ ಕಡಿಮೆಯೇ. ಈ ಸಮಯದಲ್ಲಿ ಜನೋಪಕಾರಿಯಾದ ಕೆಲಸಗಳ ಇಂಗಿತವನ್ನು ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದರು. ನಿಯಮಾವಳಿಗಳಿಗೆ ಅದಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಸಂಪೂರ್ಣ ಹೊಣೆ ಐಎಎಸ್ ಅಧಿಕಾರಿಗಳಿಗಿರುತ್ತಿತ್ತು. ಕೆಲವು ಇಲಾಖೆಗಳಲ್ಲಂತೂ ರಾಜಕಾರಣಿಗಳ ಪ್ರವೇಶವೇ ಇಲ್ಲದಂತೆ ಕಾರ್ಯ ನಡೆಯುತ್ತಿತ್ತು. ಆದರೆ ಕಾಲ ಬದಲಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಈ ಹಿಂದಿನಷ್ಟು ʼಸ್ವಾತಂತ್ರ್ಯʼ ಐಎಎಸ್ ಅಧಿಕಾರಿಗಳಿಗೆ ಇಲ್ಲ. ಜನರ ಜತೆಗೆ ಹಾಗೂ ವಿವಿಧ ಕ್ಷೇತ್ರದ ತಜ್ಞರು, ಸಂಸ್ಥೆಗಳ ಜತೆಗೆ ಹೆಚ್ಚೆಚ್ಚು ಬೆರೆಯುವ ರಾಜಕಾರಣಿಗಳು, ಕೆಲಸವನ್ನು ಹೀಗೆಯೇ ಮಾಡಬೇಕೆಂದು ತಾಕೀತು ಮಾಡುತ್ತಾರೆ. ಅನೇಕ ಬಾರಿ ಜನಪ್ರತಿನಿಧಿಗಳ ಆದೇಶವನ್ನು ಅನುಷ್ಠಾನ ಮಾಡುವಷ್ಟೇ ಕೆಲಸ ಉಳಿದಿರುತ್ತದೆ. ಕಾನೂನು ಹಾಗೂ ನಿಯಮಾವಳಿ ಪ್ರಕಾರ ತಮ್ಮ ಆದೇಶವನ್ನು ಪಾಲನೆ ಮಾಡಲಾಗದು ಎಂಬುದನ್ನು ಸೌಜನ್ಯವಾಗಿ, ಕೆಲವೊಮ್ಮೆ ಕಠಿಣವಾಗಿ ತಿಳಿಸುವ ಅಧಿಕಾರಿಗಳು ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲೀ ಐಎಎಸ್ ಅಧಿಕಾರಿಗಳ ವರ್ಗಾವಣೆ ನಿತ್ಯನೂತನ ವಿಚಾರವಾಗಿದೆ. ಒಂದು ಹುದ್ದೆಯಲ್ಲಿ ಹೆಚ್ಚುಕಾಲ ಇದ್ದರೆ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ ಎಂಬ ಕಾರಣಕ್ಕೆ ನಿಯಮಿತ ವರ್ಗಾವಣೆಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ಆ ಇಲಾಖೆಯ ಆಳ ಅಗಲ ತಿಳಿಯುವ ಮೊದಲೇ ವರ್ಗಾವಣೆ ನಡೆಯುತ್ತಿದೆ.
2020ರ ಆಗಸ್ಟ್ 29ರಂದು ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಯಿತು. ಮೈಸೂರು ದಸರಾ ತಯಾರಿ ನಡೆಯುತ್ತಿರುವ ನಡುವೆಯೇ ಸೆಪ್ಟೆಂಬರ್ 29ರಂದು ಅಂದರೆ ಸರಿಯಾಗಿ ಒಂದು ತಿಂಗಳಿಗೆ ಶರತ್ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಯಿತು. 2017ರ ಜುಲೈ 14ರಂದು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದ ರೋಹಿಣಿ ಸಿಂಧೂರಿ ಅವರನ್ನು 2018ರ ಮಾರ್ಚ್ 7ರಂದು ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು.
ಕರ್ನಾಟಕ ಹಾಗೂ ಇತರೆ ರಾಜ್ಯದಲ್ಲಷ್ಟೆ ಅಲ್ಲ, ಕೇಂದ್ರ ಸರ್ಕಾರದ ಹಂತದಲ್ಲೂ ಈ ಸಮಸ್ಯೆ ಇದೆ. 1999-2004ರ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆಯ ವಿಶ್ಲೇಷಣೆ ಪ್ರಕಾರ ಒಬ್ಬ ಅಧಿಕಾರಿ ಒಂದು ಹುದ್ದೆಯಲ್ಲಿ ಸರಾಸರಿ 382 ದಿನ ಮಾತ್ರ ಇರುತ್ತಿದ್ದರು. 2004-2009ರ ಅವಧಿಯಲ್ಲಿ 379 ದಿನ, 2009-2014ರ ವರೆಗೆ 390 ದಿನಗಳಿದ್ದವು. 2014ರಿಂದ 2019ರ ಅವಧಿಯಲ್ಲಿ ಈ ಸಂಖ್ಯೆ 464 ದಿನಗಳಿಗೆ ಹೆಚ್ಚಳವಾಗಿದೆ. ಆದರೂ ಈಗಲೂ ಒಬ್ಬ ಅಧಿಕಾರಿಯ ಸರಾಸರಿ ಅವಧಿ 15 ತಿಂಗಳು ಮಾತ್ರ ಇದೆ.
ಇಲ್ಲಿ ಯಾವುದೇ ಅಧಿಕಾರಿಗಳ ಪರ, ವಿರುದ್ಧ ಮಾತನಾಡುವುದಲ್ಲ. ಆದರೆ ಈ ರೀತಿ ವರ್ಗಾವಣೆಯನ್ನು ಮಾಡುತ್ತ ಹೋದರೆ ಆಡಳಿತಾತ್ಮಕ ಪ್ರಕ್ರಿಯೆ ಹಳಿತಪ್ಪುತ್ತದೆ ಎನ್ನುವ ಆತಂಕ. ಇದು ಕೇವಲ ಐಎಎಸ್ ಅಧಿಕಾರಿಗಳಿಗೆ ಸೀಮಿತವಾದದ್ದಲ್ಲ. ಐಪಿಎಸ್ ಅಧಿಕಾರಿಗಳಿಗೂ ಈ ಕಿರಿಕಿರಿ ಇದ್ದದ್ದೆ. ಇದೆಲ್ಲದರ ಜತೆಗೆ ಐಎಎಸ್, ಐಪಿಎಸ್ ಅಲ್ಲದ ಇನ್ನಿತರ ವೃಂದದ ಅಧಿಕಾರಿಗಳಿಗೂ ಈ ವರ್ಗಾವಣೆ ಶಿಕ್ಷೆಯನ್ನು ಜನಪ್ರತಿನಿಧಿಗಳು ನೀಡುತ್ತಲೇ ಇರುತ್ತಾರೆ. ಹಾಗಾದರೆ ನಿರಂತರ ವರ್ಗಾವಣೆಯಿಂದ ಏನಾಗುತ್ತದೆ?
1. ಸಾಂಸ್ಥಿಕ ನೆನಪಿನ ಶಕ್ತಿಯ ನಷ್ಟ: ಒಬ್ಬ ಅಧಿಕಾರಿಯನ್ನು ಕನಿಷ್ಠ ಅವಧಿಗಿಂತಲೂ ಮುನ್ನ ಎತ್ತಂಗಡಿ ಮಾಡಿದರೆ ಅಲ್ಲಿನ ಸಾಂಸ್ಥಿಕ ನೆನಪಿನ ಶಕ್ತಿಗೆ ಹೊಡೆತ ಬೀಳುತ್ತದೆ. ಕೆಲವು ಸಮಯ ಅಧಿಕಾರಿ ಅಲ್ಲಿಯೇ ಇದ್ದರೆ ಇಲಾಖೆಯ ಸಾಧಕ ಬಾಧಕಗಳ, ಈ ಹಿಂದೆ ಕೈಗೊಂಡ ತಪ್ಪು ಅಥವಾ ಸರಿ ನಿರ್ಧಾರಗಳ ಪರಿಣಾಮದ ಅನುಭವ ಇರುತ್ತದೆ. ಇಂತಹ ಸಂದರ್ಭದಲ್ಲಿ ಅನುಭವದ ಮೇಲೆ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗುತ್ತದೆ.
2. ಪ್ರತಿಭೆಯ ಅಪಮೌಲ್ಯ: ಅಧಿಕಾರಿಯ ಕಾರ್ಯಕ್ಷಮತೆ, ಪ್ರತಿಭೆಯ ಬದಲಿಗೆ ರಾಜಕೀಯ ಕಾರಣಗಳಿಗಾಗಿ ಹಾಗೂ ಅಧಿಕಾರಿಗಳ ನಡುವಿನ ವೈಮನಸ್ಯದ ಕಾರಣಕ್ಕೆ ವರ್ಗಾವಣೆ ಮಾಡಿದರೆ ಪ್ರತಿಭೆಯ ಅಪಮೌಲ್ಯ ಆಗುತ್ತದೆ. ತಮ್ಮ ಸ್ಥಾನದಿಂದ ಯಾವಾಗಬೇಕಾದರೂ ವರ್ಗಾವಣೆ ಆಗಬಹುದು ಎಂಬ ಆತಂಕದಲ್ಲಿ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಇಲಾಖೆ ಸುಧಾರಣೆಯ ದೀರ್ಘಾವಧಿ ಯೋಜನೆಗಳನ್ನು ಕೈಗೊಳ್ಳದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ.
3. ಹುದ್ದೆ ಘನತೆಗೆ ಧಕ್ಕೆ: ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡರೆ ತಮಗೆ ಉತ್ತಮ ಹುದ್ದೆ ಸಿಗುತ್ತದೆ ಎಂಬುದು ಮನಸ್ಸಿಗೆ ಬಂದರೆ ಅಧಿಕಾರಿಗಳು ರಾಜಕೀಯ ಪಕ್ಷಗಳ ಚೇಲಾಗಳಂತೆ ವರ್ತನೆ ಮಾಡಲು ಆರಂಭಿಸುತ್ತಾರೆ. ಇದು ಆಡಳಿತ ವ್ಯವಸ್ಥೆಯ ಸ್ವಾತಂತ್ರ್ಯ, ಸಾರ್ವಭೌಮತೆ ಮೇಲೆಯೇ ಪ್ರಶ್ನೆಗಳನ್ನೆತ್ತುತ್ತವೆ.
ಇನ್ನೇನು ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆ ಆಗುತ್ತಿದೆ. ಹೊರಗೆ ಮಾಧ್ಯಮಗಳಿಗೆ ಹಾಗೂ ಜನಸಾಮಾನ್ಯರಿಗೆ ಕಾಣುವಂತೆ ಸಿಎಂ, ಡಿಸಿಎಂ, ಸಚಿವರ ಪ್ರಮಾಣವಚನ ನಡೆಯುತ್ತಿರುತ್ತದೆ. ಆದರೆ ಅಧಿಕಾರಿಗಳ ವಲಯದಲ್ಲಿ ಈಗಾಗಲೆ ಗಲಿಬಿಲಿ ಆರಂಭಗೊಂಡಿದೆ. ಯಾರು ಕಾಂಗ್ರೆಸ್ ಪಕ್ಷದ ಪರವಾಗಿದ್ದರು? ಯಾರು ಸಿದ್ದರಾಮಯ್ಯ ಆಪ್ತರಾಗಿದ್ದರು? ಯಾರು ಡಿ.ಕೆ. ಶಿವಕುಮಾರ್ ಆಪ್ತರಿದ್ದಾರೆ? ಯಾರು ಬಿಜೆಪಿ ಬೆಂಬಲಿಗರಾಗಿದ್ದರು? ಎಂಬ ಲೆಕ್ಕಾಚಾರಗಳನ್ನು ನಾಯಕರ ಸುತ್ತಮುತ್ತ ಇರುವ ಕೋಟೆಯ ಜನಗಳು ನಡೆಸುತ್ತಿದ್ದಾರೆ. ಅನೇಕ ಅಧಿಕಾರಿಗಳು, ತಾವು ಈ ಹಿಂದೆ ಮಾಡಿದ ಅನೇಕ ʼಸಹಾಯʼಗಳಿಗಾಗಿ ಉತ್ತಮ ಹುದ್ದೆ ನೀಡುವಂತೆ ದುಂಬಾಲು ಬಿದ್ದಿದ್ದಾರೆ.
ಇದೆಲ್ಲದರಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಯ ಜತೆಗೆ ಹೆಚ್ಚು ಕೆಲಸ ಮಾಡುವುದು ಅಧಿಕಾರಿಯ ಜಾತಿ ಹಾಗೂ ಅನೇಕ ಸಂದರ್ಭದಲ್ಲಿ ಹಣ ಎನ್ನುವುದು ಮತ್ತೂ ಗಾಬರಿ ಹುಟ್ಟಿಸುವ ವಿಚಾರ. ಉತ್ತಮ ಆಡಳಿತವು ಸಾಧ್ಯವಾಗುವುದು ಉತ್ತಮ ರಾಜಕಾರಣಿಯಿಂದ ಮಾತ್ರವಲ್ಲ. ರಾಜಕಾರಣಿ ಹೊಂದಿರುವ ಉತ್ತಮ ಆಡಳಿತಾತ್ಮಕ ಅನುಭವವನ್ನು ಕಾರ್ಯಕ್ಷೇತ್ರದಲ್ಲಿ ಅನುಷ್ಠಾನ ಮಾಡುವ ಕಾರ್ಯಾಂಗದಿಂದ.
ಇದೀಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗುತ್ತಿರುವ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ. ಶಿವಕುಮಾರ್ ಅವರಾಗಲಿ ಆಡಳಿತದಲ್ಲಿ ಸಾಕಷು ಅನುಭವ ಹೊಂದಿರುವವರೆ. ಸಿದ್ದರಾಮಯ್ಯ ಅವರಂತೂ ಒಂದು ಡಜನ್‌ಗಿಂತಲೂ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
ಕಳೆದ ಅನೇಕ ಸರ್ಕಾರಗಳ ಅವಧಿಯಲ್ಲಿ ಸರಿಯಾಗಿ ಕೆಲಸವನ್ನೇ ಮಾಡಲಾಗದೆ ಮೌನವಾಗಿರುವ ಅನೇಕ ಅತ್ಯುತ್ತಮ ಅಧಿಕಾರಿಗಳು ಕರ್ನಾಟಕದಲ್ಲಿದ್ದಾರೆ. ಇದಕ್ಕೆ ಯಾವುದೇ ಒಂದು ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ. ಏಕೆಂದರೆ ಎಲ್ಲ ಸರ್ಕಾರಗಳ ಅವಧಿಯಲ್ಲೂ ಇಂತಹ ಪ್ರಕ್ರಿಯೆಗಳು ನಡೆದಿವೆ. ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಿಕೊಂಡರೆ ಅವರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯದೇ ಇರಬಹುದು. ತಲೆಗೆ ಬಂದಂತೆ ಮಾಡಲು ಹೇಳಿದಾಗ ಒಪ್ಪದೆ, ರೂಲ್ ಬುಕ್ ತೋರಿಸಬಹುದು. ಇದು ಕೆಲವೊಮ್ಮೆ ಕಿರಿಕಿರಿ ಎನ್ನಿಸಿದರೂ ಒಟ್ಟಾರೆ ಆಡಳಿತದ ಮೇಲೆ ಅತ್ಯುತ್ತಮ ಪರಿಣಾಮ ಬೀರುತ್ತದೆ. ಅಡ್ಡ ದಾರಿಗಳ ಮೂಲಕ ಬಂದು, ರಾಜಕಾರಣಿಗಳ ಮೂಲಕ ಒತ್ತಡ ಹಾಕಿಸುವ ಹಿತಾಸಕ್ತಿಗಳೇ ಈ ಕೆಟ್ಟ ಸಂಪ್ರದಾಯಗಳಿಗೆ ಕಾರಣ. ಜನಪ್ರತಿನಿಧಿಗಳು ತಾವೇ ಮಾಡಿದ ಕಾನೂನನ್ನು ಉಲ್ಲಂಘಿಸಿ ಕೆಲಸ ಮಾಡಲು ಅಧಿಕಾರಿಗಳನ್ನು ಒತ್ತಾಯಿಸುವುದು ಅತ್ಯಂತ ಬೇಸರದ ಸಂಗತಿ. ಇಂತಹ ಸಂದರ್ಭದಲ್ಲಿ ದೃಢವಾಗಿ ನಿಲ್ಲುವ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ದೊರಕುತ್ತದೆ.
ಕ್ರಿಕೆಟ್ ತಂಡಕ್ಕೆ ಒಬ್ಬ ಹೊಸ ಆಟಗಾರ ಸೇರ್ಪಡೆ ಆದ ಎಂದುಕೊಳ್ಳೋಣ. ಆತ ಆರಂಭದಿಂದ ಪ್ರತಿ ಪಂದ್ಯದಲ್ಲೂ ಸಾಮರ್ಥ್ಯವನ್ನು ತೋರಲೇ ಬೇಕು, ಒಂದು ಪಂದ್ಯದಲ್ಲಿ ವಿಫಲನಾದರೂ ತಂಡದಿಂದ ಹೊರಕ್ಕೆ ಎಂದು ಹೇಳಿದರೆ ಆತ ಆಡಲು ಸಾಧ್ಯವೇ? ನೀನು ಈ ಸರಣಿಯ ಎಲ್ಲ ಐದು ಪಂದ್ಯಗಳನ್ನೂ ಆಡುತ್ತೀಯ, ಧೈರ್ಯವಾಗಿರು ಎಂದರೆ ಏನಾಗುತ್ತದೆ? ಆತ ತನ್ನ ಸಹಜ ಲಯವನ್ನು ಕಂಡುಕೊಳ್ಳಲು ಈ ಅವಧಿ ಅವಕಾಶ ನೀಡುತ್ತದೆ. ಇಲ್ಲದಿದ್ದರೆ ವೈಫಲ್ಯದ ಭಯದಲ್ಲಿ ಆತ ಯಾರನ್ನೋ ನಕಲು ಮಾಡಲು ಹೋಗಿ ಹೊರಗೆ ಹೋಗುತ್ತಾನೆ.
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಆದರೆ ಅವರು ಮೊದಲ ಶತಕ ಬಾರಿಸಿದ್ದು 1994ರಲ್ಲಿ, ಸತತ 78 ಪಂದ್ಯಗಳ ನಂತರ. ಆನಂತರ ನಡೆದದ್ದೆಲ್ಲ ಇತಿಹಾಸ. ಹೌದು. ಇದೇ ಸೂತ್ರವನ್ನು ಅಧಿಕಾರಿಗಳಿಗೂ ಅನ್ವಯ ಮಾಡಬೇಕು.
ಒಂದು ಹುದ್ದೆಯಲ್ಲಿ ಕನಿಷ್ಟ ಎರಡೂವರೆಯಿಂದ ಮೂರು ವರ್ಷ ಇರದಿದ್ದರೆ ಯಾವುದೇ ದೂರಗಾಮಿ ಯೋಜನೆಗಳನ್ನು ಕೈಗೊಳ್ಳಲು ಆಗುವುದೇ ಇಲ್ಲ. ಇದರ ನಡುವೆ ಮತ್ತೊಂದು ಪ್ರಶ್ನೆ ಎದುರಾಗಬಹುದು. ಅಧಿಕಾರಿಗಳು ಹೆಚ್ಚು ಸಮಯ ಒಂದೇ ಸ್ಥಾನದಲ್ಲಿದ್ದರೆ ಭ್ರಷ್ಟಾಚಾರಕ್ಕೆ ಅವಕಾಶ ಆಗಬಹುದು ಅಲ್ಲವೇ? ಎಂದು. ಇದಕ್ಕೆ ಮರು ಪ್ರಶ್ನೆ ಎಂದರೆ, ಹಾಗಾದರೆ ಈಗ ಪದೇಪದೆ ವರ್ಗಾವಣೆ ಮಾಡುತ್ತಿರುವ ಸಮಯದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯೇ? ಎಂದು.
ಇದನ್ನೂ ಓದಿ: ವಿಸ್ತಾರ ಅಂಕಣ: ಅಮೃತ ಕಾಲದ ಶಾಸಕರು ಯಾವ ಮನಸ್ಸಿನಿಂದ ವಿಧಾನಸೌಧ ಪ್ರವೇಶಿಸಬೇಕು?
ಎರಡೂವರೆಯಿಂದ ಮೂರು ವರ್ಷ ಒಂದು ಕಡೆಯೇ ಇರುವುದಕ್ಕೂ ಪದೇಪದೆ ವರ್ಗಾವಣೆ ಆಗುವುದಕ್ಕೂ ಭ್ರಷ್ಟಾಚಾರಕ್ಕೂ ಸಂಬಂಧವಿರುವುದಿಲ್ಲ. ಭ್ರಷ್ಟಾಚಾರವನ್ನು ತಡೆಗಟ್ಟಲು ಲೋಕಾಯುಕ್ತದಂತಹ ಸಂಸ್ಥೆಗಳ ಬಲವರ್ಧನೆ, ಅಧಿಕಾರಿ ವರ್ಗದಲ್ಲಿ ಕರ್ತವ್ಯಪ್ರಜ್ಞೆಯ ಜಾಗೃತಿ, ಲಂಚ ನೀಡಲು ಹಾಗೂ ಪಡೆಯಲು ಅವಕಾಶವಿಲ್ಲದಂತಹ ವ್ಯವಸ್ಥೆಯ ನಿರ್ಮಾಣ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವುದರಲ್ಲಿ ಪರಿಹಾರ ಅಡಗಿದೆ.
ಇದರಲ್ಲಿ ಅಧಿಕಾರಿ ವರ್ಗದ ದೊಡ್ಡ ಜವಾಬ್ದಾರಿ ಸಹ ಇದೆ. ತಾವು ಅಖಿಲ ಭಾರತ ಸೇವೆಗಾಗಲಿ, ಕರ್ನಾಟಕ ಸೇವೆಗಾಗಲಿ ನೇಮಕಗೊಳ್ಳುವಾಗ ಯಾವ ಮನೋಭಾವ ಹೊಂದಿದ್ದೆವು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಕೆಲವರು ಭ್ರಷ್ಟಾಚಾರ, ಜಾತಿಯ ಮೂಲಕವೇ ನೇಮಕ ಆಗಿರುತ್ತಾರೆ, ಅವರ ಬಗ್ಗೆ ವಿಶೇಷವಾದ ಭರವಸೆ ಇಲ್ಲ. ಆದರೆ ಸರ್ಕಾರದ ಕೆಲಸಕ್ಕೆ ಸೇರಿ ಆಡಳಿತ ಸುಧಾರಣೆ ಮಾಡಬೇಕು ಎಂದೇ ಅನೇಕರು ಸಂಕಲ್ಪ ತೊಟ್ಟಿರುತ್ತಾರೆ. ಅಂತಹವರು ವ್ಯವಸ್ಥೆಗೆ ಅನುಗುಣವಾಗಿ ತಾವೂ ಬದಲಾಗಿಬಿಟ್ಟಿರುತ್ತಾರೆ. ತಾವು ತರಬೇತಿ ಸಮಯದಲ್ಲಿ ಮಾಡಿಟ್ಟುಕೊಂಡ ನೋಟ್‌ಗಳು, ತರಬೇತಿಯನ್ನು ಕೇಳಿದ ಪಾಠಗಳನ್ನು ಪುನರ್ಮನನ ಮಾಡಿಕೊಳ್ಳಬೇಕು. ತಾನು ಈ ಭ್ರಷ್ಟ ಮಾರ್ಗದಲ್ಲಿ ಇಷ್ಟು ದೂರ ಬಂದುಬಿಟ್ಟೆನಲ್ಲ ಎಂಬ ಸಣ್ಣ ಪಶ್ಚಾತ್ತಾಪ ಅವರ ಕಣ್ಣಂಚಿನಲ್ಲಿ ಕಂಡರೂ ಇಡೀ ವ್ಯವಸ್ಥೆ ಸುಧಾರಣೆ ಆಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಇದೀಗ ರಚನೆಯಾಗುತ್ತಿರುವ ಸರ್ಕಾರದಲ್ಲಿ ನೇತೃತ್ವ ವಹಿಸಿರುವ ಇಬ್ಬರೂ ಅತ್ಯಂತ ಅನುಭವಿಗಳು. ತಮ್ಮ ಅನುಭವದ ಮೂಸೆಯಿಂದ ಹೊರಬಂದ ಜ್ಞಾನದ ಆಧಾರದಲ್ಲಿ ಉತ್ತಮ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಕ್ಕೆ ನಿಯೋಜನೆ ಮಾಡಿಕೊಳ್ಳಲಿ. ಮುಂದಿನ ಎರಡು-ಮೂರು ವರ್ಷದ ರೋಡ್ ಮ್ಯಾಪ್ ನೀಡಿ ಈ ಅವಧಿಯಲ್ಲಿ ಸಾಧಿಸಿ ತೋರಿಸುವ ಟಾಸ್ಕ್ ನೀಡಲಿ. ಒಂದು ಹಂತದ ಕಾರ್ಯ ಮುಗಿದ ನಂತರ ಬೇರೆಡೆಗೆ ವರ್ಗಾವಣೆ ಮಾಡುವ ಕಠಿಣ ನಿರ್ಧಾರವನ್ನು ಕೈಗೊಳ್ಳುವಂತಾಗಲಿ. ಜನರು ನೀಡಿರುವ ಈ ಸ್ಪಷ್ಟ, ಪ್ರಚಂಡ ಬಹುಮತವನ್ನು ಜನರ ಏಳಿಗೆಗಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಹೊಂದೋಣ.
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
ಕಡೆಮಾತು:
ನಮ್ಮ ಸಂವಿಧಾನ ಸರಿ ಇಲ್ಲ, ಹಿಂದೂ ಧರ್ಮ ಸರಿ ಇಲ್ಲ, ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಗೊಣಗಾಡುತ್ತಿರುವವರೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಒಂದು ಸಂಗತಿ, ಇಲ್ಲಿ ಎಲ್ಲವೂ ಸರಿ ಇರುತ್ತೆ. ಅದರೆ, ಅದನ್ನು ಅನುಷ್ಠಾನ ಮಾಡುವ, ಆಚರಣೆಗೆ ತರುವ ದೇಹ-ಮನಸ್ಸುಗಳು ಕಲುಷಿತಗೊಂಡಿದ್ದರೆ/ ನಿಷ್ಕ್ರಿಯಗೊಂಡಿದ್ದರೆ ಯಾರು ಏನು ಮಾಡಿಯಾರು.
ಅಂತೆಯೇ, ಮೋದಿ ಸರಕಾರವಾಗಲಿ, ಸಿದ್ದರಾಮಯ್ಯ-ಡಿಕೆಶಿ ಅವರ ಸರಕಾರವಾಗಲಿ, ಆಳದಲ್ಲಿ ಅವರು ರೂಪಿಸುವ ಯೋಜನೆಗಳು ಜನಪರವಾಗಿಯೇ ಇರುತ್ತವೆ. ಅದನ್ನು ಜಾರಿಗೆ ಅಧಿಕಾರಿಗಳು ಹಾದಿ ತಪ್ಪಿದಾಗ, ದೂಷಣೆಯನ್ನು ಸರಕಾರಗಳೇ ಹೊರಬೇಕಾಗುತ್ತದೆ. ಕಾರ್ಯಾಂಗದ ಜವಾಬ್ದಾರಿ ಯಾಕೆ ದೊಡ್ಡದು? ಅಲ್ಲಿ ಒಳ್ಳೆಯ ಅಧಿಕಾರಿಗಳು ಯಾಕೆ ಬೇಕು? ಎಂಬುದನ್ನೂ ಹೀಗೂ ಯೋಚಿಸಿ. ಶ್ರೇಷ್ಠತೆಯ ನೈಜ ಫಲಿತಾಂಶ ಇರುವುದು ಚಿಂತನೆಯಲ್ಲಿ ಮಾತ್ರವಲ್ಲ, ಜಾರಿಯ ಹೊತ್ತಲ್ಲಿ!
ಇದನ್ನೂ ಓದಿ: Mann Ki Baat: ವಿಸ್ತಾರ ಅಂಕಣ; ಮನ್ ಕಿ ಬಾತ್ ಮೂಲಕ ಭಾರತೀಯರೊಂದಿಗೆ ಮೋದಿ ಕುಶಲೋಪರಿ