Site icon Vistara News

ವಿಸ್ತಾರ ಅಂಕಣ: ಅಮೃತ ಕಾಲದ ಶಾಸಕರು ಯಾವ ಮನಸ್ಸಿನಿಂದ ವಿಧಾನಸೌಧ ಪ್ರವೇಶಿಸಬೇಕು?

ವಿಧಾನಸೌಧ

1949ರ ನವೆಂಬರ್ 26ರಂದು ಸಂಸತ್ತಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಈ ರೀತಿ ಹೇಳಿದ್ದರು; “ಭಾರತೀಯ ಸಮಾಜದಲ್ಲಿ ಖಡಾಖಂಡಿತವಾಗಿ ಅದೃಶ್ಯವಾಗಿರುವ ವಿಚಾರ ಎಂದರೆ ಸಮಾನತೆ ಎನ್ನುವುದನ್ನು ನಾವು ಮೊದಲಿಗೆ ಒಪ್ಪಿಕೊಳ್ಳಬೇಕು. ವರ್ಗೀಕೃತವಾಗಿರುವ ಈ ಸಮಾಜದಲ್ಲಿ ಕೆಲವರು ಅತಿ ಶ್ರೀಮಂತರಾಗಿದ್ದರೆ ಕೆಲವರು ಕಡುಬಡವರಾಗಿದ್ದಾರೆ. 1950ರ ಜನವರಿ 26ರಂದು ನಾವು ವಿರೋಧಾಭಾಸದ ಹೊಸ ಜೀವನಕ್ಕೆ ಪ್ರವೇಶೀಸುತ್ತಿದ್ದೇವೆ. ರಾಜಕೀಯ ವ್ಯವಸ್ಥೆಯಲ್ಲಿ ಸಮಾನತೆ ತರಲಿದ್ದೇವೆ, ಇದೇ ವೇಳೆ ಸಾಮಾಜಿಕ ಹಾಗೂ ಆರ್ಥಿಕ ಜೀವನದಲ್ಲಿ ಅಸಮಾನತೆ ಇರಲಿದೆ. ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯವನ್ನು ನಿಗದಿಪಡಿಸಿದ್ದೇವೆ. ಆದರೆ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಜೀವನದಲ್ಲಿ ಒಬ್ಬ ವ್ಯಕ್ತಿ ಒಂದು ಮೌಲ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಈ ವಿರೋಧಾಭಾಸದ ಜೀವನವನ್ನು ಎಚ್ಟು ದಿನ ಜೀವಿಸುವುದು? ಇನ್ನೆಷ್ಟು ದಿನ ಸಮಾನತೆಯನ್ನು ನಿರಾಕರಿಸುವುದು? ಈ ನಿರಾಕರಣೆಯನ್ನು ಮತ್ತಷ್ಟು ಮುನ್ನಡೆಸುತ್ತಲೇ ಹೋದರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕಲಿದೆ. ಈ ವಿರೋಧಾಭಾಸವನ್ನು ಆದಷ್ಟು ಬೇಗನೆ ನಾವು ತೊಡೆದುಹಾಕದಿದ್ದರೆ, ಅಸಮಾನತೆಗೆ ಒಳಗಾಗಿರುವವರು ಈ ರಾಜಕೀಯ ಪ್ರಜಾಪ್ರಭುತ್ವವನ್ನು ಇಲ್ಲವಾಗಿಸಿಬಿಡುತ್ತಾರೆ”.

ಈಗ ಭಾರತವು 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ನಾವೇ ಒಪ್ಪಿ, ಅಪ್ಪಿ, ಅಳವಡಿಸಿಕೊಂಡ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ಆರೈಕೆ ಮಾಡಿದ್ದೇವೆ ಎನ್ನುವುದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತಿನ ಆಧಾರದಲ್ಲಿ ಒಂದು ಸಾರಿ ಅವಲೋಕನ ಮಾಡಿಕೊಳ್ಳಬೇಕಿದೆ. ಭಾರತ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರಾದ ಅಟಲ್ ಬಿಹಾರಿ ವಾಹಪೇಯಿ ಅವರು, “ಪ್ರಜಾಪ್ರಭುತ್ವ ಎನ್ನುವುದು ಕೇವಲ ಸರ್ಕಾರದ ವಿಧಾನವಲ್ಲ, ಅದೊಂದು ಜೀವನ ಪದ್ಧತಿ” ಎಂದಿದ್ದರು.

ಮುಂದಿನ 25 ವರ್ಷಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅಮೃತ ಕಾಲ ಎಂದು ಕರೆದಿದ್ದಾರೆ. ಈ 25 ವರ್ಷದಲ್ಲಿ ದೇಶ ಕೈಗೊಳ್ಳುವ ನಿರ್ಧಾರಗಳು, ಇಡುವ ಹೆಜ್ಜೆಗಳು ಭಾರತದ ಶತಮಾನೋತ್ಸವ ಆಚರಣೆಯ ಸ್ವರೂಪವನ್ನು ನಿರ್ಧರಿಸುತ್ತದೆ. ಕರ್ನಾಟಕದಲ್ಲಿ ಅಮೃತ ಕಾಲದ ಮೊದಲ ಸರ್ಕಾರ ರಚನೆಯಾಗುವ ಹೊಸ್ತಿಲಲ್ಲಿದ್ದೇವೆ. ಚುನಾವಣೆ ಮೇ 10ರಂದು ನಡೆದಿದೆ, ಇಂದು (ಮೇ 13) ಫಲಿತಾಂಶ ಹೊರಬೀಳಲಿದೆ. ಮತದಾನ ಪ್ರಮಾಣ ಸ್ವಲ್ಪವೇ ಆದರೂ ಸರಿ 2018ರ ಹೋಲಿಕೆಯಲ್ಲಿ ಹೆಚ್ಚಿನ ಮತದಾನ ಆಗಿರುವುದು, ಒಟ್ಟಾರೆ ವ್ಯವಸ್ಥೆಯ ಮೇಲೆ ಜನರು ಇನ್ನೂ ನಂಬಿಕೆ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಎರಡು ಪ್ರಮುಖ ಅಂಶಗಳು ಎಂದು ಏನನ್ನಾದರೂ ಪರಿಗಣಿಸಿದರೆ, ಅದರಲ್ಲಿ ಮೊದಲನೆಯದು- ಚುನಾವಣೆ. ಅದು ಈಗಷ್ಟು ಪೂರ್ಣಗೊಂಡಿದೆ. ಜನರು ಆಯ್ಕೆ ಮಾಡಿದ ಪ್ರತಿನಿಧಿಗಳು ವಿಧಾನಸೌಧದ ಪ್ರವೇಶಕ್ಕೆ ಅನುಮತಿ ಪಡೆಯಲಿದ್ದಾರೆ. 1975ರ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಹೊರತುಪಡಿಸಿ ಭಾರತದಲ್ಲಿ ಎಲ್ಲಿಯೂ ಚುನಾಯಿತ ಸರ್ಕಾರ ರಚನೆಗೆ ವಿರೋಧ, ಪ್ರತಿಭಟನೆ, ರಕ್ತಪಾತ ನಡೆದ ಉದಾಹರಣೆಗಳಿಲ್ಲ. ಯಾವುದೇ ಸರ್ಕಾರ ಇದ್ದರೂ ಜನಾದೇಶಕ್ಕೆ ತಲೆಬಾಗಿ ಹೊಸ ಸರ್ಕಾರಕ್ಕೆ ಅವಕಾಶ ಮಾಡಿಕೊಡುತ್ತದೆ. ನಂತರದ್ದು ಎರಡನೇ ಭಾಗ, ಸಂಸದೀಯ ವ್ಯವಸ್ಥೆ ಕಾರ್ಯಾಚರಣೆ.

ಸಂಸದೀಯ ವ್ಯವಸ್ಥೆಯ ಅತಿ ಮುಖ್ಯ ಲಕ್ಷಣಗಳಲ್ಲಿ ಒಂದು ಸಂವಾದ. ಸಂಸತ್ ಅಧಿವೇಶನವನ್ನು ನಡೆಸುವುದು ನಿರ್ಧಾರ ಕೈಗೊಳ್ಳುವುದಕ್ಕಿಂತ ಹೆಚ್ಚಾಗಿ ಸಂವಾದ ನಡೆಸಲು. ಜನಸಾಮಾನ್ಯರ ಸಮಸ್ಯೆಗಳು, ರಾಜ್ಯದ ಸ್ಥಿತಿಗತಿ, ಮುಂದಿನ ಹತ್ತಾರು ವರ್ಷಗಳ ಮುನ್ನೋಟ ಅಲ್ಲಿ ಹೊರಹೊಮ್ಮಬೇಕು. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳು ಕೇವಲ ಒಣ ಭಾಷಣಗಳಲ್ಲ, ಅವು ಅಧಿಕೃತ ದಾಖಲೆಗಳು. ಅಲ್ಲಿ ಯಾವುದೇ ಭರವಸೆ ನೀಡಿದರೆ ಸರ್ಕಾರ ಈಡೇರಿಸಲೇಬೇಕು. ಆದರೆ ಕೆಲ ವರ್ಷಗಳಿಂದ ಅಧಿವೇಶನದ ಗುಣಮಟ್ಟ ಕುರಿತು ನಿಜಕ್ಕೂ ಆತಂಕವಾಗುತ್ತಿದೆ.

ಪರಸ್ಪರ ಕೆಸರೆರೆಚಾಟ ಮಾಡಿಕೊಳ್ಳುವುದು, ಕಚ್ಚಾಡುವುದೇ ನಿಜವಾದ ಅಧಿವೇಶನ ಎನ್ನುವಂತಾಗಿದೆ. ಎದುರಾಳಿಯ ಬಾಯಿ ಮುಚ್ಚಿಸುವ ಮುಖಂಡನೇ ಉತ್ತಮ ಸಂಸದೀಯ ಪಟು ಎನ್ನುವ ಭಾವನೆ ಬೇರೂರುತ್ತಿದೆ. ಶಿಕ್ಷಕರ, ವಿದ್ಯಾರ್ಥಿಗಳ, ವೈದ್ಯರ, ವಿಶೇಷಚೇತನರ, ಮಹಿಳೆಯರ ಕಲ್ಯಾಣದ ಕುರಿತ ಚರ್ಚೆಗಳು ಕೇವಲ ರಾಜಕೀಯ ಸ್ವರೂಪದ್ದಾಗಿವೆ ಹಾಗೂ ಅವು ಯಾಂತ್ರಿಕವಾಗಿವೆ. ಈ ಬಾರಿಯ ವಿಧಾನಸಭೆಗೆ ಅನೇಕ ಹೊಸ ಮುಖಗಳು ಪ್ರವೇಶಿಸುತ್ತಿವೆ.

ಇದೀಗ ಹೊರನಡೆಯುತ್ತಿರುವ ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಒಬ್ಬರು. ಇನ್ನೂ ಆಡುವ ತಾಕತ್ತಿದ್ದರೂ ಏಕದಿನ ಪಂದ್ಯದಿಂದ ನಿವೃತ್ತಿ ಪಡೆದು ಐಪಿಎಲ್‌ನಲ್ಲಿ ಆಟ ಮುಂದುವರಿಸುವ ಕ್ರಿಕೆಟಿಗನ ರೀತಿ, ತಮ್ಮ ವಯಸ್ಸಿನ ಕಾರಣಕ್ಕೆ ಶಾಸಕ ಸ್ಥಾನದಿಂದ ಹೊರನಡೆದಿದ್ದಾರೆ. ಆದರೆ ಚುನಾವಣಾ ಕಣದಲ್ಲಿ ಭರ್ಜರಿ ತಿರುಗಾಟ ನಡೆಸಿದ್ದಾರೆ.

ಯಡಿಯೂರಪ್ಪ ಅವರ ಸಿಟ್ಟು, ಕೋಪ, ಅನೇಕ ವಿಚಾರಗಳ ಕುರಿತು ಬದ್ಧತೆ ಸಾಕಷ್ಟು ಪ್ರಸಿದ್ಧವಾಗಿದೆ. ಆದರೆ ಸದನದಲ್ಲಿ ಅವರ ಶಿಸ್ತು ಅನೇಕರ ಕಣ್ಣಿಗೆ ಬೀಳುತ್ತಿರಲಿಲ್ಲ. ಕೊನೆಯ ಬಾರಿ ಶಾಸಕರಾಗಿದ್ದಾಗಲೂ ಅವರದ್ದು ಅದೇ ಶಿಸ್ತು. ಅಧಿವೇಶನದ ಸ್ಥಳಕ್ಕೆ ಬಂದರೆಂದರೆ ತಮ್ಮ ಪಾಡಿಗೆ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ಎಲ್ಲರೂ ಮಾತನಾಡುವುದನ್ನು ಚಿಕ್ಕ ಶಾಲಾ ಬಾಲಕನಂತೆಯೇ ಶ್ರದ್ಧೆಯಿಂದ ಆಲಿಸುತ್ತಾರೆ. ತಮಗೆ ಮುಖ್ಯ ಎನ್ನಿಸಿದೆ ಅಂಶಗಳನ್ನು ಕೂಡಲೆ ನೋಟ್ ಮಾಡಿಕೊಳ್ಳುತ್ತಾರೆ. ಬೇರೆಯವರು ಮಾತನಾಡುತ್ತಿರುವಾಗ ನಡುವೆ ತಮ್ಮ ಅಭಿಪ್ರಾಯ ಹೇಳಬೇಕೆಂದರೆ ಮನವಿ ಮಾಡುತ್ತಾರೆ. ತಾವು ಮಾತನಾಡುವಾಗ ಯಾರಾದರೂ ಮಧ್ಯಪ್ರವೇಶಿಸಲು ಬಯಸಿದರೆ ಅವಕಾಶ ನೀಡಿ ಕುಳಿತುಕೊಳ್ಳುತ್ತಾರೆ. ಹೊಸದಾಗಿ ಬಂದ ಶಾಸಕರು ಗುಂಪು ಕಟ್ಟಿಕೊಂಡು ಹರಟೆ ಕೊಚ್ಚುತ್ತ ಆಗಾಗ್ಗೆ ಸ್ಪೀಕರ್ ಅವರಿಂದ ಬುದ್ಧಿ ಹೇಳಿಸಿಕೊಳ್ಳುತ್ತಿದ್ದರೆ ಯಡಿಯೂರಪ್ಪ ಮಾತ್ರ ಶಿಸ್ತಿನ ವಿದ್ಯಾರ್ಥಿಯಾಗಿ ಸದನ ಕಲಾಪದಲ್ಲಿ ಪಾಲ್ಗೊಳ್ಳುತ್ತಾರೆ.

ಯಡಿಯೂರಪ್ಪ ಅವರಿಗೂ ಮುನ್ನವೂ ಕರ್ನಾಟಕ ಅನೇಕ ಮುತ್ಸದ್ದಿ ರಾಜಕಾರಣಿಗಳನ್ನು ಕಂಡಿದೆ. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡರು, ಜೆ.ಎಚ್.ಪಟೇಲ್, ಎಸ್.ಎಂ. ಕೃಷ್ಣ, ದೇವರಾಜ ಅರಸು… ಹೀಗೆ ಪಟ್ಟಿ ಮಾಡುತ್ತ ಸಾಗಿದರೆ ಮುಗಿಯದಷ್ಟು ಹೆಸರುಗಳಿವೆ. ಒಬ್ಬೊಬ್ಬರೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಹೊಸದಾಗಿ ಆಯ್ಕೆಯಾಗುವ ಶಾಸಕರಿಗೆ ಇವರೆಲ್ಲರೂ ದಾರಿದೀಪಗಳಾಗಬೇಕು. ಮೊದಲಿಗೆ ವಿಧಾನಸಭೆಯ ಕಾರ್ಯಕಲಾಪಗಳ ತಾಂತ್ರಿಕ ವಿವರಗಳನ್ನು ತಿಳಿದುಕೊಳ್ಳಬೇಕು. ನಿಯಮ, ನಡವಳಿಕೆಗಳನ್ನು ಅರಿಯುವ ಕಾಳಜಿ ಇರಬೇಕು. ಹೊಸ ಶಾಸಕರಿಗೆ ಪ್ರತಿ ಬಾರಿಯೂ ವಿಧಾನಸಭೆ ಸಚಿವಾಲಯದಿಂದ ಕಾರ್ಯಾಗಾರವನ್ನು ಇದೇ ಕಾರಣಕ್ಕೆ ನಡೆಸಲಾಗುತ್ತದೆ. ಹಿರಿಯ ರಾಜಕಾರಣಿಗಳನ್ನು, ನಿವೃತ್ತ ಅಧಿಕಾರಿಗಳನ್ನು ಇಲ್ಲಿಗೆ ಆಹ್ವಾನಿಸಿ ತರಬೇತಿ ನೀಡಲಾಗುತ್ತದೆ. ಆದರೆ ಬೆರಳೆಣಿಕೆಯ ಹೊಸ ಶಾಸಕರು ಇದಕ್ಕೆ ಹಾಜರಾಗುತ್ತಾರೆ. ಈ ಬಾರಿಯಾದರೂ ಹೊಸ ಶಾಸಕರು ಈ ನಡವಳಿಕೆಯನ್ನು ತಿದ್ದಿಕೊಳ್ಳಲಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುವುದು ತಪ್ಪು ಹೇಳಿಕೆಯಲ್ಲ, ಐತಿಹಾಸಿಕ ಪ್ರಮಾದ…

ಅಧಿವೇಶನದಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಕರ್ತವ್ಯ. ಇಲ್ಲಿ ಬರೀ ಮಾತನಾಡುವ ಬದಲು ಕ್ಷೇತ್ರದಲ್ಲಿ ಯಾವುದಾದರೂ ಯೋಜನೆಯ ಗುದ್ದಲಿ ಪೂಜೆ, ಉದ್ಘಾಟನೆ ಮಾಡುವುದೇ ಶ್ರೇಷ್ಠ ಎಂದು ಅನೇಕ ಶಾಸಕರು ಭಾವಿಸಿರುತ್ತಾರೆ. ಅನೇಕರು ತಮ್ಮನ್ನು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಶಾಸಕರು ಎಂದು ಭಾವಿಸಿರುತ್ತಾರೆ. ಅಸಲಿಗೆ ಅವರು ಕರ್ನಾಟಕದ ವಿಧಾನಸಭೆಗೆ, ಆ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿ. ಅವರು ಶಾಸನ ರಚನೆ ಮಾಡಬೇಕಾಗಿರುವುದು ಇಡೀ ರಾಜ್ಯಕ್ಕೇ ಹೊರತು ಒಂದು ಕ್ಷೇತ್ರಕ್ಕಲ್ಲ. ತಾವೇ ಸದನದಲ್ಲಿ ಕುಳಿತು ರೂಪಿಸಿದ ನೀತಿ ತಮ್ಮ ಕ್ಷೇತ್ರವೂ ಸೇರಿ ಎಲ್ಲ ಕಡೆ ಸೂಕ್ತವಾಗಿ ಅನುಷ್ಠಾನ ಆಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳುವ ಹೊಣೆಗಾರಿಕೆಯೂ ಶಾಸಕರಿಗಿರುತ್ತದೆ. ಅಧಿವೇಶನದಲ್ಲಿ ಭಾಗವಹಿಸಿ ನಿಖರ ಅಂಕಿ ಅಂಶಗಳ ಆಧಾರದಲ್ಲಿ ಚರ್ಚಿಸಬೇಕು. ಈ ವಿಚಾರ ಮಂಥನದ ನಂತರ ಹೊಸ ಕಾಯಿದೆ, ಕಾನೂನು ಒಪ್ಪಿಗೆ ಪಡೆಯಬೇಕು.

ಆದರೆ ಈಗಿನ ಅಧಿವೇಶನಗಳಲ್ಲಿ ಅತ್ಯಂತ ಕಡಿಮೆ ಸಮಯವನ್ನು ನೀತಿ ನಿರೂಪಣೆಗೆ, ಹೊಸ ಕಾಯಿದೆ ಕುರಿತ ಚರ್ಚೆಗೆ ನೀಡಲಾಗುತ್ತಿದೆ. ಆಯಾ ಕಾಲಕ್ಕೆ ಎದುರಾಗುವ ರಾಜಕೀಯ ಬೆಳವಣಿಗೆಗಳು, ಪ್ರಕೃತಿ ವಿಕೋಪಗಳು, ಹಗರಣಗಳ ಆರೋಪಗಳೇ ಇಡೀ ಸದನದ ಸಮಯವನ್ನು ತಿನ್ನುತ್ತಿವೆ. ಕಾಯಿದೆಗಳನ್ನು ಯಾವುದೇ ಚರ್ಚೆಯೇ ಇಲ್ಲದೆ ಅಂಗೀಕರಿಸುವ ಅತ್ಯಂತ ಕೆಟ್ಟ ಸಂಪ್ರದಾಯವೇ ಈಗ ಖಾಯಂ ಆಗುತ್ತಿರುವುದು ಬೇಸರದ ಸಂಗತಿ. ಅಮೆರಿಕ, ಬ್ರಿಟನ್, ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ಅಧಿವೇಶನ ವರ್ಷಕ್ಕೆ ಸರಾಸರಿ 140-150 ದಿನಗಳು ನಡೆಯುತ್ತವೆ. ಆದರೆ ಭಾರತದ ಸಂಸತ್ತು ಕಳೆದ ವರ್ಷ ಕೇವಲ 63 ದಿನಗಳ ಅಧೀವೇಶನ ನಡೆಸಿತ್ತು. ಅಷ್ಟಾದರೂ ಸರಿ, ರಾಜ್ಯಗಳ ವಿಧಾನಸಭೆ ಅಧಿವೇಶನಗಳು ಕೇವಲ 30 ದಿನ ನಡೆಯುತ್ತಿವೆ. ಕರ್ನಾಟಕದಲ್ಲಿ 40 ದಿನವಾದರೆ, ಪಂಜಾಬಿನಲ್ಲಿ ಕೇವಲ 15 ದಿನ ಅಧಿವೇಶನ ನಡೆದಿದೆ. ಒಟ್ಟಾರೆ ರಾಜ್ಯದ ಜನರ ಕಲ್ಯಾಣದ ಚರ್ಚೆ, ನಿರ್ಧಾರಕ್ಕಿಂತಲೂ ತಮ್ಮದೊಂದು ಕ್ಷೇತ್ರದ ಬೋರ್ ತೋಡಿಸುವಿಕೆ ಉದ್ಘಾಟನೆಯೇ ಶಾಸಕರಿಗೆ ಮುಖ್ಯವೆನಿಸಿದೆ ಎನ್ನುವುದು ದುರಂತ. ಕಾರ್ಯಾಂಗದ ಕೈಯಿಂದ ಮಾಡಿಸಬೇಕಾದ ಕೆಲಸಕ್ಕೆ ಶಾಸಕನೇ ಹೋಗಿ ನಿಲ್ಲುತ್ತಾರೆ ಎನ್ನುವುದು ವ್ಯವಸ್ಥೆಯು ಸರಿಯಿದೆ ಎನ್ನುವುದನ್ನು ತೋರಿಸುತ್ತದೆಯೋ, ಹಾಳಾಗಿರುವುದನ್ನು ತೋರಿಸುತ್ತದೆಯೋ? ಸ್ಥಳೀಯ ಪ್ರದೇಶಾಭಿವೃದ್ಧಿ ಎನ್ನುವುದು ಶಾಸಕನಿಗೆ ಮುಖ್ಯವಾದರೂ ಅದು ಆತನ ಎರಡನೇ ಪ್ರಾಶಸ್ತ್ಯವಾಗಬೇಕು.

ಜನಪ್ರತಿನಿಧಿಗಳು ಮಾತ್ರವಲ್ಲ, ಸಾರ್ವಜನಿಕರಿಗೂ ಹೊಣೆಗಾರಿಕೆ ಇದೆ. ಈಗ ಮತ ನೀಡಿದ್ದೇವೆ, ಮುಂದಿನ ಐದು ವರ್ಷ ಸುಮ್ಮನಿರುವ ಮನೋಭಾವವನ್ನು ತೊರೆಯಬೇಕಿದೆ. ಜನರು ಹಾಗೂ ಜನಪ್ರತಿನಿಧಿಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ಪ್ರಜಾಪ್ರಭುತ್ವ ಬಲವಾಗುತ್ತದೆ.

ಇದನ್ನೂ ಓದಿ: Mann Ki Baat: ವಿಸ್ತಾರ ಅಂಕಣ; ಮನ್ ಕಿ ಬಾತ್ ಮೂಲಕ ಭಾರತೀಯರೊಂದಿಗೆ ಮೋದಿ ಕುಶಲೋಪರಿ

ತಾವು ಕಳಿಸಿದ ಉದ್ದೇಶಕ್ಕೆ ಶಾಸಕ ಕೆಲಸ ಮಾಡುತ್ತಿದ್ದಾನೆಯೇ? ದಾರಿ ತಪ್ಪಿ, ಬಾಯಿ ತಪ್ಪಿ ನಡೆಯುತ್ತಿದ್ದಾನೆಯೇ ಎನ್ನುವುದನ್ನು ಗಮನಿಸುತ್ತಲೇ ಇರಬೇಕು. ʼಬುದ್ಧಿʼ ಕಲಿಸಲು ಐದು ವರ್ಷ ಕಾಯುವ ಬದಲಿಗೆ ಆಗಿಂದಾಗ್ಗೆ ಕಿವಿ ಹಿಂಡಿ ಸರಿದಾರಿಗೆ ತರಬೇಕು. ಆತನ ಚಲನವಲನಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿರುತ್ತದೆ. ಇದೆಲ್ಲದರ ಆಧಾರದಲ್ಲಿ ಆತನ ಮೇಲೊಂದು ಕಣ್ಣಿಟ್ಟಿರಬೇಕು.

ಅಮೃತ ಕಾಲದ ಅಧಿವೇಶನಕ್ಕೆ ಪ್ರವೇಶಿಸುತ್ತಿರುವ ಎಲ್ಲ ಶಾಸಕರಿಗೂ ಅಭಿನಂದನೆಗಳು. ತಮ್ಮನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎನ್ನುವುದನ್ನು ಮೊದಲು ಇವರು ಅರಿಯಲಿ. ತಾವು ಈಗ ಕುಳಿತುಕೊಳ್ಳುತ್ತಿರುವ ಸ್ಥಳದಲ್ಲಿ ಈ ಹಿಂದೆ ಮಹಾನ್ ವ್ಯಕ್ತಿಗಳು ಕುಳಿತು ತೆರಳಿದ್ದಾರೆ. ಅವರ ಮುಂದುವರಿದ ಪೀಳಿಗೆಯಾಗಿ ಇರುವ ಹೊಣೆಗಾರಿಕೆಯನ್ನು ಅರಿತು ಮುಂದೆ ಸಾಗಲಿ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆಗಳನ್ನು ಆದಷ್ಟೂ ಶೀಘ್ರದಲ್ಲಿ ಹೋಗಲಾಡಿಸುವ ಸಂಕಲ್ಪ ತೊಡಲಿ ಎಂದು ಆಶಿಸೋಣ. ಇಷ್ಟೆಲ್ಲ ಭ್ರಷ್ಟಾಚಾರ, ಅನಾಚಾರದ ನಡುವೆ ಇದರ ಹೊರತಾಗಿ ನಮಗೆ ಬೇರೆ ದಾರಿ ಏನಿದೆ ಅಲ್ಲವೇ?

ಇದನ್ನೂ ಓದಿ: ವಿಸ್ತಾರ ಅಂಕಣ: ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದರ ಹಿಂದೆ ಬಿ.ಎಲ್ ಸಂತೋಷ್ ಸ್ವಹಿತಾಸಕ್ತಿ ಏನಿದೆ?

Exit mobile version