Site icon Vistara News

ವಿಸ್ತಾರ ಅಂಕಣ: ಮೋದಿಯವರಿಗೆ ಕೋಲು ಕೊಟ್ಟು ಪದೇ ಪದೆ ʼಹೊಡೆಸಿಕೊಳ್ಳುವʼ ಕಾಂಗ್ರೆಸ್ ಮತ್ತು ಮಿತ್ರರು !

pm narendra Modi Varanasi road show

ವಿಸ್ತಾರ ಅಂಕಣ: ಇದು ಸುಮಾರು 12 ವರ್ಷದ ಹಿಂದಿನ ಘಟನೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳ ಹೊಸ್ತಿಲಲ್ಲಿದ್ದ ಸಮಯದಲ್ಲಿ, ದೆಹಲಿಯ ತಮ್ಮ ʼಸರ್ಕಾರಿʼ ಬಂಗಲೆಯಲ್ಲಿ ಪತ್ರಕರ್ತರೊಂದಿಗೆ ರಾಹುಲ್‌ ಗಾಂಧಿ ಉಪಾಹಾರ ಕೂಟ ಏರ್ಪಡಿಸಿದರು. ಈ ಪೈಕಿ ಒಬ್ಬ ಪತ್ರಕರ್ತರು ಕೇಳಿದರು: “ಈಗ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಯ ಮಾಯಾವತಿ ಮುಖ್ಯಮಂತ್ರಿಯಾಗಿದ್ದಾರೆ. ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್‌ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಯೇ ಇಲ್ಲ ಎಂದ ಮೇಲೆ ಜನರು ನಿಮ್ಮ ಪಕ್ಷಕ್ಕೆ ಏಕೆ ಮತ ನೀಡುತ್ತಾರೆ? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಗೆದ್ದರೆ ನೀವೇ ಮುಖ್ಯಮಂತ್ರಿ ಆಗುವುದಾಗಿ ಘೋಷಿಸಿ, ವಿಧಾನಸಭೆ ಚುನಾವಣೆಯಲ್ಲಿ ಏಕೆ ಸ್ಪರ್ಧಿಸಬಾರದು?ʼ.

ʼಇದೊಂದು ಒಳ್ಳೆಯ ಪ್ರಶ್ನೆʼ ಎಂದ ರಾಹುಲ್‌ ಗಾಂಧಿ, ʼಹೀಗೆ ಸ್ಪರ್ಧೆ ಮಾಡಲು ನನಗೆ ಬಹಳ ಸಂತೋಷವಾಗುತ್ತದೆ. ಆದರೆ ʼನನ್ನದು’(My) ರಾಷ್ಟ್ರೀಯ ಪಕ್ಷ. ನಾನು ಕೇವಲ ಒಂದು ರಾಜ್ಯದ ಮೇಲೆ ಗಮನಹರಿಸುವುದನ್ನು ಪಕ್ಷ ಒಪ್ಪುವುದಿಲ್ಲʼ.

CM Siddaramaiah and Mallikarjun Kharge and Sonia Gandhi

ಕಾಂಗ್ರೆಸ್‌ ಇರಲಿ ಅಥವಾ ಇನ್ನಾವುದೇ ʼಕೌಟುಂಬಿಕʼ ಪಕ್ಷದ ನಾಯಕರ ಆಲೋಚನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಇದು ಉದಾಹರಣೆ. ಕಾಂಗ್ರೆಸ್‌ ಸೇರಿದಂತೆ ಯಾವುದೇ ಕೌಟುಂಬಿಕ ಪಕ್ಷಗಳಲ್ಲಿ ಒಂದು ಸರಳ ಸೂತ್ರವಿರುತ್ತದೆ. ಪಕ್ಷವೇನಾದರೂ ಗೆದ್ದರೆ ಅದರ ಸಂಪೂರ್ಣ ಶ್ರೇಯಸ್ ಅದರ ನಾಯಕನಿಗೆ ಸಲ್ಲುತ್ತದೆ. ಪಕ್ಷವೇನಾದರೂ ಸೋತರೆ ಅದರ ಕಾರಣ, ಎದುರಾಳಿಗಳ ದಬ್ಬಾಳಿಕೆ, ಹಣಬಲ, ಅಧಿಕಾರ ದುರುಪಯೋಗದ ಮೇಲೆ ಹೋಗುತ್ತದೆ. ನಿರ್ದಿಷ್ಟವಾಗಿ ಕಾಂಗ್ರೆಸ್‌ ಕುರಿತು ಹೇಳುವುದಾದರೆ, ಪಕ್ಷ ಚುನಾವಣೆಯಲ್ಲಿ ಗೆದ್ದರೆ ಸಂಪೂರ್ಣ ಶ್ರೇಯ ನೆಹರೂ ಕುಟುಂಬಕ್ಕೆ. ಸೋತರೆ ಸ್ಥಳೀಯ ಕಾರ್ಯಕರ್ತರ ಮೇಲೆ.

ಕಾರ್ಯಕರ್ತರು ಅಥವಾ ನೆಹರೂ ಕುಟುಂಬದ ಹೊರತಾದ ನಾಯಕರೂ ಪಕ್ಷದ ಸೋಲಿಗೆ ಕಾರಣರಾಗಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಡೀ ವ್ಯವಸ್ಥೆಯನ್ನು ನಿಭಾಯಿಸುವ ಹೊಣೆ ಹೊತ್ತಿರುವ ಹಾಗೂ ʼನನ್ನʼ ಪಕ್ಷ ಎನ್ನುವ ಮಾತುಗಳ ಮೂಲಕ ಪಕ್ಷದ ʼಮಾಲೀಕತ್ವʼ ಹೊಂದಿರುವ ಕುಟುಂಬವೇ ಹೆಚ್ಚು ಹೊಣೆ ಹೊರಬೇಕಾಗುತ್ತದೆ.

ಸಾವಿನ ವ್ಯಾಪಾರಿ!

ನರೇಂದ್ರ ಮೋದಿ 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾದರು. 2002ರಲ್ಲಿ ನಡೆದ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಮುಂದಿನ ಐದು ವರ್ಷ ಪಕ್ಷ ಸಂಘಟನೆಗೆ ಗಮನ ನೀಡಿದ್ದ ಕಾಂಗ್ರೆಸ್‌, 2007ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುವ ಹಂತಕ್ಕೆ ಬಂದಿತ್ತು. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಗೆಲ್ಲುವ ಸಾಧ್ಯತೆಗಳೂ ಇದ್ದವು. ಈ ಸಮಯದಲ್ಲಿ ರ‍್ಯಾಲಿಯೊಂದರಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, 2002ರ ಗುಜರಾತ್‌ ಗಲಭೆಗಳನ್ನು ಆಧಾರವಾಗಿಸಿಕೊಂಡು ನರೇಂದ್ರ ಮೋದಿಯವರನ್ನು ʼಸಾವಿನ ವ್ಯಾಪಾರಿʼ (ಮೌತ್‌ ಕಾ ಸೌದಾಗರ್‌) ಎಂದರು. ಇದನ್ನು ಪ್ರಬಲ ಅಸ್ತ್ರವಾಗಿಸಿಕೊಂಡ ಬಿಜೆಪಿ, ತಪ್ಪಿತಸ್ಥರನ್ನು ಹಾಗೂ ಭಯೋತ್ಪಾದಕರನ್ನು ರಕ್ಷಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಹೇಳಿತು. ಈ ಒಂದು ಮಾತು ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಯಿತು. ಅಂತಿಮವಾಗಿ 182ರಲ್ಲಿ 117 ಸ್ಥಾನ ಗೆದ್ದ ಬಿಜೆಪಿ ಮತ್ತೆ ಅಧಿಕಾರ ಹಿಡಿಯಿತು.

CM Siddaramaiah and Mallikarjun Kharge and Sonia Gandhi

ʼಚಾಯ್‌ ವಾಲಾʼ ಟೀಕೆ

2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ, ಅದಾಗಲೇ ಜನಪ್ರಿಯರಾಗಿದ್ದ ನರೇಂದ್ರ ಮೋದಿಯವರ ಹೆಸರು ಘೋಷಣೆಯಾಗಿತ್ತು. ಜನಪ್ರಿಯತೆ ಉತ್ತುಂಗದಲ್ಲಿದೆ ಎಂದ ಮಾತ್ರಕ್ಕೆ ಪ್ರಧಾನಿ ಆಗಲು ಸಾಧ್ಯವಿಲ್ಲ ಎನ್ನುವುದು, ದೇಶಕ್ಕಿಂತಲೂ ನೆಹರೂ ಕುಟುಂಬಕ್ಕೆ ನಿಷ್ಠರಾಗಿರುವ ಮಣಿಶಂಕರ್‌ ಅಯ್ಯರ್‌ ವಾದವಾಗಿತ್ತು. ಕಾಂಗ್ರೆಸ್‌ ಸಮ್ಮೇಳನವೊಂದರ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ʼಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ. ಬೇಕಿದ್ದರೆ ಈ ಸಮ್ಮೇಳನದಲ್ಲಿ ಟೀ ಮಾರಬಹುದುʼ ಎಂದರು. ಸ್ವತಃ ಟೀ ಮಾರಾಟ ಮಾಡಿದ ಹಿನ್ನೆಲೆ ಹೊಂದಿದ್ದ ನರೇಂದ್ರ ಮೋದಿಯವರ ಕುರಿತು ಸಾರ್ವಜನಿಕರಲ್ಲಿ ಭಾರೀ ಅನುಕಂಪ ಹಾಗೂ ಅಯ್ಯರ್‌ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಯಿತು. ʼಚಾಯ್‌ ವಾಲಾʼ ಚರ್ಚೆ ವ್ಯಾಪಕವಾಯಿತು. ಮೋದಿ ಅನೇಕ ಕಡೆಗಳಲ್ಲಿ ಸಾಮಾನ್ಯ ಜನರ ಜತೆಗೆ ಚಾಯ್‌ ಪೇ ಚರ್ಚಾ ಆರಂಭಿಸಿದರು, ಜನರಿಗೆ ಮತ್ತಷ್ಟು ಹತ್ತಿರವಾದರು. ಇಂದಿಗೂ ಸ್ನೇಹಿತರು ಟೀ ಕುಡಿಯುತ್ತ ನಿಂತಿದ್ದರೆ ʼಚಾಯ್‌ ಪೆ ಚರ್ಚಾʼ ಎನ್ನುತ್ತಾರೆ. ಮಣಿಶಂಕರ್‌ ಅಯ್ಯರ್‌ ಮಾತಿನಿಂದಾಗಿ ಬಿಜೆಪಿ ಜಯಭೇರಿ ಬಾರಿಸಿತು, ಎನ್‌ಡಿಎ ಸರ್ಕಾರವೂ ರಚನೆಯಾಯಿತು, ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದರು.

ʼನೀಚʼ ಹೇಳಿಕೆ

ಗುಜರಾತ್‌ ಚುನಾವಣೆಯಲ್ಲಿ ಒಮ್ಮೆ ಸೋನಿಯಾ ಗಾಂಧಿ ಮಾಡಿದ್ದ ʼಸಾವಿನ ವ್ಯಾಪಾರಿʼ ಹೇಳಿಕೆಯಿಂದ ಬಿಜೆಪಿಗೆ ಭಾರೀ ಅನುಕೂಲವಾಗಿತ್ತು. ಇದೇ ಸಂಪ್ರದಾಯವನ್ನು ಕುಟುಂಬನಿಷ್ಠ ಅಯ್ಯರ್‌ ಮತ್ತೂ ಮುಂದುವರಿಸಿದರು. 2017ರ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಮಾತನಾಡಿದ ಮಣಿಶಂಕರ್‌ ಅಯ್ಯರ್‌, ನರೇಂದ್ರ ಮೋದಿ ʼನೀಚ ವ್ಯಕ್ತಿʼ ಎಂದರು. ಹಿಂದುಳಿದ ಸಮುದಾಯದಿಂದ ಆಗಮಿಸಿದ ಮೋದಿಯವರ ಕುರಿತು ಈ ಮಾತು ಮತ್ತಷ್ಟು ಅನುಕಂಪವನ್ನು ಹೆಚ್ಚಿಸುವುದರೊಂದಿಗೆ ಕಾಂಗ್ರೆಸ್‌ ಪಕ್ಷವು ಅಧಿಕಾರದಿಂದ ಮತ್ತಷ್ಟು ದೂರ ಸರಿಯಿತು. ಬಿಜೆಪಿಗೆ ಕೆಲ ಸ್ಥಾನಗಳು ಕಡಿಮೆಯಾದವಾದರೂ, 99 ಸ್ಥಾನದೊಂದಿಗೆ ಅಧಿಕಾರಕ್ಕೆ ಬರುವಲ್ಲಿ ತಡೆಯಲು ಆಗಲಿಲ್ಲ.

ʼರಾವಣʼ ಹೇಳಿಕೆ

ಮೂರನೇ ಬಾರಿಯೂ ಕಾಂಗ್ರೆಸ್‌ ಪಕ್ಷದ ನಾಯಕರೊಬ್ಬರು ಗುಜರಾತ್‌ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕುರಿತು ಟೀಕೆ ಮಾಡಿ ಅನುಕೂಲ ಮಾಡಿಕೊಟ್ಟರು. 2022ರ ಗುಜರಾತ್‌ ವಿಧಾನಸಭೆ ಚುನಾವಣೆ ರ‍್ಯಾಲಿಯೊಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿಯವರನ್ನು ʼರಾವಣʼನಿಗೆ ಹೋಲಿಕೆ ಮಾಡಿದ್ದಾರೆ ಎನ್ನುವುದು ಬಹುದೊಡ್ಡ ವಿವಾದವನ್ನು ಸೃಷ್ಟಿಸಿತು. ಎಂದಿನಂತೆ ಕಾಂಗ್ರೆಸ್‌ ಮತ್ತೆ ಸೋಲುಂಡಿತು.

ಇತ್ತೀಚೆಗೆ ಬಿಹಾರದಲ್ಲಿ ‘ಜನ್ ವಿಶ್ವಾಸ್ ಮಹಾರ್‍ಯಾಲಿ’ಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಾತನಾಡುತ್ತ, “ನರೇಂದ್ರ ಮೋದಿ ಯಾರು? ನಾವು ಕುಟುಂಬ ರಾಜಕಾರಣ ಮಾಡುತ್ತಿದ್ದೇವೆ ಎಂದು ಅವರು ಆರೋಪಿಸುತ್ತಾರೆ. ಮೋದಿಗೆ ಸ್ವಂತ ಕುಟುಂಬವಿಲ್ಲದಿದ್ದರೆ ನಾವೇನು ಮಾಡಲು ಸಾಧ್ಯ? ಅವರಿಗೆ ಮಕ್ಕಳು ಏಕಿಲ್ಲ? ಅವರು ನಿಜವಾದ ಹಿಂದುವೇ ಅಲ್ಲ. ಹಿಂದೂ ಸಂಪ್ರದಾಯದಲ್ಲಿ, ಮಗನು ತನ್ನ ಪೋಷಕರು ಮರಣ ಹೊಂದಿದಾಗ ತನ್ನ ತಲೆಗೂದಲು ತೆಗೆಸಬೇಕು. ಮೋದಿಯವರು ತಮ್ಮ ತಾಯಿ ನಿಧನರಾದಾಗ ಹಾಗೆ ಮಾಡಲಿಲ್ಲʼ ಎಂದು ಟೀಕಿಸಿದರು. ಇದು ನಿಜಕ್ಕೂ ಒಬ್ಬ ವ್ಯಕ್ತಿಯ ವೈಯಕ್ತಿಕ ನಿರ್ಧಾರಕ್ಕೆ ಮಾಡಿದ ಅವಮಾನ. ಇದೀಗ ಇಡೀ ದೇಶವೇ ನರೇಂದ್ರ ಮೋದಿಯವರ ಬೆನ್ನಿಗೆ ನಿಂತಿದೆ. ನರೇಂದ್ರ ಮೋದಿಯವರು ದೇಶಕ್ಕಾಗಿ ತಮ್ಮ ಪರಿವಾರವನ್ನು ತ್ಯಾಗ ಮಾಡಿ ಬಂದವರು. ಇದೀಗ ಇಡೀ ದೇಶವೇ ನರೇಂದ್ರ ಮೋದಿಯವರನ್ನು ತಮ್ಮ ಪರಿವಾರದವರು ಎಂದು ಹೇಳುತ್ತಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಈಗ ಇರುವುದು ಕಾಂಗ್ರೆಸ್‌ ದೇಹ, ಕಮ್ಯುನಿಸ್ಟ್‌ ಆತ್ಮ!

ಕುಟುಂಬ ರಾಜಕಾರಣ ಮಾಡುತ್ತ ನಾಲ್ಕೈದು ತಲೆಮಾರುಗಳಿಗೆ ಸಾವಿರಾರು ಕೋಟಿ ರೂ. ಕೂಡಿಟ್ಟಿರುವ ಲಾಲು ಯಾದವ್‌ರಂಥವರಿಗೆ ಸಾಮಾನ್ಯ ಜನರು ನರೇಂದ್ರ ಮೋದಿಯವರ ಕುರಿತು ಹೊಂದಿರುವ ಭಾವನೆ ಅರ್ಥವಾಗುವುದಿಲ್ಲ. ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿಲ್ಲದಿದ್ದರೆ ದೇಶವು ಯಾವ್ಯಾವ ಸಂಕಟಗಳನ್ನು ಎಷ್ಟು ಸಂಘರ್ಷದ ಮೂಲಕ ಎದುರಿಸಬೇಕಾಗುತ್ತಿತ್ತು ಎನ್ನುವುದನ್ನು ಜನರು ಅರಿತಿದ್ದಾರೆ. ನರೇಂದ್ರ ಮೋದಿಯವರು ಪಟ್ಟ ಪರಿಶ್ರಮದ ಕಾರಣಕ್ಕೆ ಅನೇಕ ಬೃಹತ್‌ ಕಾರ್ಯಗಳು ನಮ್ಮ ಕಣ್ಣಿಗೆ ಗೋಚರವೇ ಆಗದಂತೆ ನಡೆದುಹೋಗಿವೆ. ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಮತ್ತಷ್ಟು ದಿವಸ ಜನರ ಕಣ್ಣಿಗೆ ಮಣ್ಣೆರೆಚಲು ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳಿಗೆ ಸಾಧ್ಯವಿಲ್ಲ. ಈ ಹಿಂದಿನ ಕಾಂಗ್ರೆಸ್‌ ನಾಯಕರ ಹೇಳಿಕೆಗಳು ಜನರ ಮನದಲ್ಲಿ ಮೋದಿಯವರ ಕುರಿತು ಸದಭಿಪ್ರಾಯವನ್ನು ಹೆಚ್ಚಳ ಮಾಡಿದಂತೆಯೇ ಲಾಲು ಯಾದವ್‌ ಮಾತೂ ತನ್ನ ʼಶಕ್ತಿʼಯನ್ನು ತೋರಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಕೊನೆ ಮಾತು: ನರೇಂದ್ರ ಮೋದಿಯವರ ಕುರಿತು ಜನರ ಭಾವನೆ ತೀವ್ರವಾಗಿದೆ, ಅವರ ವಿರುದ್ಧ ಏನೇ ವೈಯಕ್ತಿಕ ಟೀಕೆ ಮಾಡಿದರೂ ತಿರುಗುಬಾಣವಾಗುತ್ತದೆ ಎನ್ನುವುದು ಈಗಾಗಲೆ ಅನೇಕ ಬಾರಿ ಸಾಬೀತಾಗಿದೆ. ಕಣ್ಣಮುಂದೆಯೇ ಫಲಿತಾಂಶ ಇದ್ದರೂ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಮೋದಿಯವರನ್ನು ಏಕೆ ಟೀಕಿಸುತ್ತವೆ ಎನ್ನುವುದು ಒಬ್ಬ ಪತ್ರಕರ್ತನಾಗಿಯೂ ನಿಜಕ್ಕೂ ಅಚ್ಚರಿಯ ವಿಚಾರ. ಎದುರಾಳಿ ಗೆಲುವಿಗೆ ಕಾರಣವಾಗುವ ಹೆಜ್ಜೆಯನ್ನು ಒಂದು ಪಕ್ಷ ಯಾಕಾಗಿ ಇಡುತ್ತದೆ? ಅಧಿಕಾರದಿಂದ ದೂರಾಗಿದ್ದೇವೆ ಎನ್ನುವ ಹಪಾಹಪಿಯು, ಚುನಾವಣೆಯನ್ನು ಗೆಲ್ಲಲು ಯಾವುದು ಅವಶ್ಯಕ, ಯಾವುದು ಮಾರಕ ಎನ್ನುವ ಸರಿತಪ್ಪಿನ ನಿರ್ಧಾರ ಮಾಡಲು ಸಾಧ್ಯವಾಗದಷ್ಟು ಕುರುಡಾಗಿವೆಯೇ? ನಿಜವಾಗಿಯೂ ಆ ಪಕ್ಷ ಗೆಲ್ಲಬೇಕು ಎಂದು ಅದೇ ಪಕ್ಷದ ಯಾವ ನಾಯಕರೂ ಬಯಸುವುದಿಲ್ಲ. ತಾನು ಗೆದ್ದರೆ ಸಾಕು, ತನ್ನ ಸ್ಥಾನಮಾನ‌ ಉಳಿದರೆ ಸಾಕು ಎನ್ನುವುದಷ್ಟೇ ಅವರ ಚಿಂತೆ. ಇದೇ ಕಾರಣಕ್ಕೆ ರಾಹುಲ್‌ ಗಾಂಧಿಯವರು ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಿದರೆ ತಮ್ಮ ಲೆವೆಲ್ಲಿಗೆ ಕಡಿಮೆ ಎಂದಿದ್ದು. ಇನ್ನು ಇಂತಹ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳಿಗೆ ಅಧಿಕಾರ ನೀಡಿದರೆ ದೇಶವನ್ನು ಹೇಗೆ ನಡೆಸಿಯಾರು ಎನ್ನುವುದನ್ನು ಯಾರು ಬೇಕಾದರೂ ಊಹೆ ಮಾಡಬಹುದು.

ಇದನ್ನೂ ಓದಿ: ವಿಸ್ತಾರ ಅಂಕಣ: ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ, ಕಾಂಗ್ರೆಸ್

Exit mobile version