ಕನ್ನಡ ಅಸ್ಮಿತೆ ಯಾವತ್ತೂ ಭಾರತ ವಿರೋಧಿಯಲ್ಲ, ಆ ರೀತಿ ಬಿಂಬಿಸುವುದು ಸರಿಯಲ್ಲ
“ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡೋರು ಯಾರು? ಯಾರ್ರೀ ತೆರಿಗೆ ಕೊಡೋರು? ರಾಜ್ಯದ ಜನಗಳಲ್ಲವ? ಅದಕ್ಕೆ ಅಂತ ಬೇರೆ ಜನರೇನಾದರೂ ಇರುವರೇ, ಇಲ್ಲ. ನಮ್ಮ ರಾಜ್ಯದಿಂದ ಹಣ ಕೊಟ್ಟಿದ್ದೀವಿ”
— ಇದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರು ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ನಡೆಸಿದ ವಾಗ್ದಾಳಿಯ ಪರಿ.
ಇದು ಸಿದ್ದರಾಮಯ್ಯ ಒಬ್ಬರ ಮಾತಲ್ಲ. ಈ ರೀತಿ ಮಾತನಾಡುವವರ ಸಂಖ್ಯೆ ಸಾಕಷ್ಟಿದೆ. ಕರ್ನಾಟಕದ ಅನೇಕ ಸಚಿವರು, ಸಾಮಾಜಿಕ ಕಾರ್ಯಕರ್ತರು ಕೂಡ ಇದೇ ಧಾಟಿಯಲ್ಲಿ ಮಾತನಾಡಲಾರಂಭಿಸಿದ್ದಾರೆ.
ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಲ್ಲೂ ಇದೇ ಚರ್ಚೆ ಶುರುವಾಗಿದೆ. ಕೇಂದ್ರ ಸರ್ಕಾರವು ರಾಜ್ಯಗಳ ತೆರಿಗೆಯನ್ನು (state tax) ಪಡೆಯುತ್ತದೆ, ಆದರೆ ಇಲ್ಲಿನ ಜನರು ಸಂಕಷ್ಟದಲ್ಲಿರುವಾಗ ಕೊಡುವುದೇ ಇಲ್ಲ. ಯಾವುದೇ ಆದಾಯ ಸಂಗ್ರಹಿಸದ, ಆದರೆ ಜನಸಂಖ್ಯೆಯನ್ನು ಹೆಚ್ಚು ಮಾಡುತ್ತಿರುವ ಉತ್ತರ ಪ್ರದೇಶದಂತಹ ರಾಜ್ಯಕ್ಕೆ ಹೆಚ್ಚು ಪಾಲನ್ನು ಕೇಂದ್ರ ಸರಕಾರ ನೀಡುತ್ತಿದೆ. ಇದು ನಮಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂಬ ವಾದವನ್ನು ದಕ್ಷಿಣದ ರಾಜ್ಯಗಳು ಮುಂದಿಡುತ್ತಿವೆ.
ಅನ್ಯಾಯದ ವಾದ ಸರಣಿ ಇಲ್ಲಿಗೆ ನಿಲ್ಲುವುದಿಲ್ಲ. ಕೇಂದ್ರ ಸರಕಾರ ಹಿಂದಿ ಹೇರಿಕೆ (Hindi imposition) ಮಾಡುತ್ತಿದೆ, ದಕ್ಷಿಣದ ರಾಜ್ಯಗಳನ್ನು ಕಡೆಗಣಿಸುತ್ತಿದೆ, ಉತ್ತರದವರೆಲ್ಲರೂ ಆರ್ಯರು, ದಕ್ಷಿಣದವರು ದ್ರಾವಿಡರು- ಹೀಗೆ ಅನ್ಯಾಯದ ಮೀಮಾಂಸೆಯನ್ನು ಜಾತಿ, ಕುಲ, ಪ್ರಾಂತ್ಯ, ಭಾಷೆ ಆಧಾರಿತವಾಗಿ ಹೇಳಲಾರಂಭಿಸಿದ್ದಾರೆ.
ಈ ಆಕ್ರೋಶದ ಕತ್ತಿ ಪರೋಕ್ಷವಾಗಿ ವಿವಿಧ ಜಾತಿ, ಸಮುದಾಯಗಳ ವಿರುದ್ಧವೂ, ಭಾಷಿಕರ ವಿರುದ್ಧವೂ ತಿರುಗುತ್ತದೆ. ಇಂಥದ್ದೊಂದು ಅಪಾಯಕಾರಿ ಬೆಳವಣಿಗೆ ಕುರಿತು, ಇನ್ನೊಂದು ಲೇಖನದಲ್ಲಿ ಚರ್ಚಿಸುವೆ. ಸದ್ಯ ಅನುದಾನದಲ್ಲಿ ತಾರತಮ್ಯ ಎನ್ನುವುದನ್ನು ಎಲ್ಲರೂ ಮುಂದು ಮಾಡುತ್ತಿದ್ದಾರೆ. ನಮ್ಮ ತೆರಿಗೆಯಲ್ಲಿ ಕಡಿಮೆ ಪಾಲು ಏಕೆ ಕೊಡುತ್ತಿರುವಿರಿ ಎನ್ನುವುದು ಈಗ ನಡೆಯುತ್ತಿರುವ ಚರ್ಚೆ. ಇದಕ್ಕೆ ಅಸ್ಮಿತೆಯ ಅಂಗಿ ತೊಡಿಸಲಾಗಿದೆ.
ಆದರೆ, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಮರೆತಿರುವ ಒಂದು ಸಂಗತಿ, ಭಾರತ ಒಂದು ಗಣರಾಜ್ಯ (republic). ರಾಜ್ಯಗಳ ಒಕ್ಕೂಟ ವ್ಯವಸ್ಥೆಯೇ (Union of states) ಅದರ ಜೀವಾಳ. ಹಾಗೆ ನೋಡಿದರೆ, ಭಾರತದ ಆಗಸ್ಟ್ 15 ಸ್ವಾತಂತ್ರ್ಯದ ಹಬ್ಬಕ್ಕಿಂತ, ಸಂವಿಧಾನ ಒಪ್ಪಿ, ನಾವೊಂದು ಒಕ್ಕೂಟವಾಗಿ ರೂಪುಗೊಂಡ ಜ.26 ನಮಗೆ ಮಹತ್ವದ ಹಬ್ಬವಾಗಬೇಕು. ಗಣತಂತ್ರ ವ್ಯವಸ್ಥೆಯನ್ನು ಪೋಷಿಸುವ ಬಗೆಗೆ ಒತ್ತು ನೀಡಬೇಕು. ಆದರೆ, ಇಲ್ಲಿ ಅದಕ್ಕೆ ತದ್ವಿರುದ್ಧ ಬೆಳವಣಿಗೆಗಳು ಘಟಿಸುತ್ತಿವೆ.
ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ಬಳಸಿರುವ ಮಾತಿನ ಲಯ ಹಿಡಿದೇ ವಾದ ಮುಂದುವರಿಸುವುದಾದರೆ, ಇದು ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನಿರ್ದಿಷ್ಟ ಜವಾಬ್ದಾರಿಗಳಿವೆ. ಭವಿಷ್ಯದಲ್ಲಿ ಈ ರೀತಿಯ ಸಮಸ್ಯೆ, ಸವಾಲು ಎದುರಾಗಬಹುದು ಎಂದು ಅರಿತಿದ್ದ ಸಂವಿಧಾನ ನಿರ್ಮಾತೃಗಳು ಮೂರು ರೀತಿಯ ಪಟ್ಟಿಯನ್ನು ಮಾಡಿದ್ದಾರೆ. ಮೊದಲನೆಯದು ಕೇಂದ್ರದ ಪಟ್ಟಿ, ಎರಡನೆಯದು ರಾಜ್ಯದ ಪಟ್ಟಿ, ಮೂರನೆಯದು ಸಮವರ್ತಿ ಪಟ್ಟಿ.
ಮೊದಲನೆಯ ಕೇಂದ್ರ ಪಟ್ಟಿಯನ್ನು ಗಮನಿಸೋಣ. ಅಲ್ಲಿ ಭಾರತದ ರಕ್ಷಣೆ, ರಕ್ಷಣಾ ಪಡೆಗಳು, ವಿದೇಶಾಂಗ ವಿಚಾರಗಳು, ಖನಿಜಗಳು, ವಿದೇಶಿ ನ್ಯಾಯವ್ಯವಸ್ಥೆ, ಹೆದ್ದಾರಿಗಳು, ರೈಲ್ವೆ, ಪೋಸ್ಟ್, ಬ್ಯಾಂಕಿಂಗ್, ವಿಮೆ, ಉನ್ನತ ಶಿಕ್ಷಣ, ಹೀಗೆ 97 ಅಂಶಗಳಿವೆ. ಇವುಗಳಲ್ಲಿ ಕೆಲವನ್ನು ತಿದ್ದುಪಡಿ ಮಾಡಲಾಗಿದೆ. ಎರಡನೆಯದು ರಾಜ್ಯ ಪಟ್ಟಿ. ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ರಾಜ್ಯಗಳ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್, ಕಾರಾಗೃಹಗಳು, ಸಾರ್ವಜನಿಕ ಆರೋಗ್ಯ, ಪ್ರಾಥಮಿಕ ಶಿಕ್ಷಣ, ಭೂಮಿ… ಹೀಗೆ 66 ಅಂಶಗಳು ರಾಜ್ಯ ಪಟ್ಟಿಯಲ್ಲಿವೆ. ಸಮವರ್ತಿತ ಪಟ್ಟಿ ಮೂರನೆಯದು. ಕ್ರಿಮಿನಲ್ ಕಾನೂನು, ಮದುವೆ ಹಾಗೂ ವಿಚ್ಛೇದನ, ಶಿಕ್ಷಣ, ಬಂದರುಗಳು, ಬೆಲೆ ನಿಯಂತ್ರಣ, ಫ್ಯಾಕ್ಟರಿಗಳು, ಸುದ್ದಿಪತ್ರಿಕೆಗಳು ಸೇರಿ 47 ವಿಷಯಗಳಿವೆ.
ಕೇಂದ್ರ ಪಟ್ಟಿಯಲ್ಲಿರುವ ವಿಚಾರದಲ್ಲಿ ಕೇಂದ್ರ ಸರ್ಕಾರದ್ದೇ ಅಂತಿಮ ನಿರ್ಧಾರ. ರಾಜ್ಯ ಪಟ್ಟಿ ವಿಚಾರದಲ್ಲಿ ರಾಜ್ಯದ್ದೇ ಅಂತಿಮ ಮಾತು. ಸಮವರ್ತಿ ಪಟ್ಟಿಯ ವಿಚಾರದಲ್ಲಿ ಎರಡರ ಹಕ್ಕು, ಕರ್ತವ್ಯವೂ ಇರುತ್ತದೆ. ಆದರೆ ಒಂದೇ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯದ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಮವರ್ತಿ ಪಟ್ಟಿಯಲ್ಲಿರುವ ಒಂದು ವಿಚಾರದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕಾನೂನಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಕಾನೂನು ಮಾಡಬಹುದು. ಆಗ ಏನು? ಇದಕ್ಕೂ ಸಂವಿಧಾನಕರ್ತೃಗಳು ಉತ್ತರ ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾಡಿದ ಕಾನೂನೇ ಊರ್ಜಿತವಾಗುತ್ತದೆ ಎಂದು ತಿಳಿಸಲಾಗಿದೆ. ಆಡಳಿತದಲ್ಲಿ ಸ್ಪಷ್ಟತೆ ಇರಬೇಕು ಎಂಬ ಕಾರಣಕ್ಕೆ ಈ ಪಟ್ಟಿ ತಯಾರಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕತೆ ಹೆಸರಿನಲ್ಲಿ ಈ ಪಟ್ಟಿಯನ್ನೇ ತಿರಸ್ಕರಿಸುವ ಕೆಲಸ ಆಗುತ್ತಿದೆ. ಹಾಗಾದರೆ ರಾಜ್ಯಗಳಿಗೆ ಅಧಿಕಾರವೇ ಇಲ್ಲವೇ? ನಾವೇನು ಕೇಂದ್ರ ಸರ್ಕಾರದ ಗುಲಾಮಗಿರಿಯಲ್ಲಿ ಇದ್ದೇವೆಯೇ? ಎಂಬ ವಿತಂಡವಾದವನ್ನುಕೆಲವು ಜವಾಬ್ದಾರಿ ಮನುಷ್ಯರೇ ಮಾಡುತ್ತಾರೆ. ಇವರೇ ಸಂವಿಧಾನದ ರಕ್ಷಣೆ ಬಗ್ಗೆಯೂ ಮಾತನಾಡುತ್ತಿರುತ್ತಾರೆ !
ನಿಜ, ಇಲ್ಲಿ ಯಾರೂ ಸಾರ್ವಭೌಮರೂ ಅಲ್ಲ, ಅಂತೆಯೇ ಯಾರೂ ಗುಲಾಮರಲ್ಲ. ಕೇಂದ್ರ ಸರಕಾರ ಕೂಡ ತನ್ನ ಸಹವರ್ತಿ ಪಟ್ಟಿಯಲ್ಲಿ ತನಗೆ ಸಂಪೂರ್ಣ ಅಧಿಕಾರ ಇದೆ ಎಂದು ಹುಚ್ಚುಚ್ಚು ಕಾನೂನು ರೂಪಿಸಲು ಆಗದು. ರಾಜ್ಯಗಳು ಅದನ್ನು ಪ್ರಶ್ನಿಸಬಲ್ಲವು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದರೆ ನ್ಯಾಯಾಲಯದಲ್ಲಿ ಶಾಸನವೇ ಬಿದ್ದುಹೋಗಬಹುದು. ಅಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಹಾಗಾದರೆ ನ್ಯಾಯಾಲಯ ಪರಮೋಚ್ಛವೇ? ಅದೂ ಇಲ್ಲ. ನ್ಯಾಯಾಲಯವು ಸಂವಿಧಾನದ ಆಶಯಕ್ಕೆ ತಕ್ಕಂತೆಯೇ ತೀರ್ಪು ನೀಡಿರಬಹುದು, ಆದರೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅದು ಜನಪರವಾಗಿಲ್ಲ ಎಂದಾದರೆ, ನ್ಯಾಯಾಲಯದ ತೀರ್ಪನ್ನು ಮೀರಿಯೂ ಸರ್ಕಾರದ ನೀತಿ ರೂಪಿಸಬಹುದು. ಹೀಗೆ, ಪ್ರಜಾಪ್ರಭುತ್ವ ದೇಶದಲ್ಲಿ ಯಾರೂ ಸಾರ್ವಭೌಮರಲ್ಲ, ಯಾರೂ ಸಂಪೂರ್ಣ ಸ್ವತಂತ್ರರಲ್ಲ. ಎಲ್ಲವೂ ಒಂದಷ್ಟು ನಿಬಂಧನೆ, ಹೊಣೆಗಾರಿಕೆಗಳೊಂದಿಗೆ ಸಿಗುತ್ತದೆ.
ಕೇಂದ್ರಕ್ಕೆ ತೆರಿಗೆ ಕೊಡುವವರು ಕರ್ನಾಟಕದ ಜನರೇ ಅಲ್ಲವೇ? ಎಂದು ಸಿದ್ದರಾಮಯ್ಯ ಅವರು ಆಗಾಗ್ಗೆ ಪ್ರಶ್ನಿಸುತ್ತಾರೆ. ಅವರು ಒಬ್ಬ ವಕೀಲರು, ಸಂವಿಧಾನವನ್ನು ಓದಿಕೊಂಡಿದ್ದಾರೆ. ಆದರೂ ಹೀಗೇಕೆ ಮಾತನಾಡುತ್ತಾರೆ ? ಈ ಸಂಗತಿಯನ್ನು ಭಾವನಾತ್ಮಕವಾಗಿ ನೋಡುವ ಬದಲಿಗೆ ತಾಂತ್ರಿಕವಾಗಿ ನೋಡೋಣ.
ಭಾರತದ ಸಂವಿಧಾನದ ಪ್ರಸ್ತಾವನೆ ಶುರುವಾಗುವುದು “ಭಾರತದ ಜನತೆಯಾದ ನಾವು…,” ಎಂದೇ ಹೊರತು, ಕರ್ನಾಟಕದ ಪ್ರಜೆ, ತಮಿಳುನಾಡಿನ ಪ್ರಜೆ, ತೆಲಂಗಾಣದ ಪ್ರಜೆಯಾದ ನಾವು ಎಂದಲ್ಲ. ಈ ಸಂಗತಿಗಳು ನಮ್ಮ ಸಂವಿಧಾನದಲ್ಲಿ ಇಲ್ಲ. ಇಲ್ಲಿರುವುದು ಒಂದೇ ನಾಗರಿಕತ್ವ. ಅದರಲ್ಲಿ ನಾವೆಲ್ಲರೂ ಭಾರತೀಯರು ಎಂದಷ್ಟೇ ಇರುತ್ತದೆ. ಆದರೂ, ನಾವು ಕನ್ನಡಿಗರು ಎಂದು ಹೇಳಿಕೊಳ್ಳುವುದು ಸಂವಿಧಾನ ವಿರೋಧಿ ಆಗುವುದಿಲ್ಲ. ಅದೊಂದು ಸಾಂಸ್ಕೃತಿಕ, ಭಾವನಾತ್ಮಕ ಸಂಗತಿ. ಇದರ ಹೊರತಾಗಿಯೂ, ನಮಗ್ಯಾರಿಗೂ ಕರ್ನಾಟಕದ ನಾಗರಿಕ ಎಂದು ಪ್ರತ್ಯೇಕ ಪಾಸ್ಪೋರ್ಟ್ ಪಡೆಯಲು ಸಾಧ್ಯವಿಲ್ಲ.
ಕನ್ನಡ ಧ್ವಜದ ವಿಷಯದಲ್ಲೂ ಸಿದ್ದರಾಮಯ್ಯ ಇಂಥದ್ದೇ ಪ್ರಯತ್ನ ನಡೆಸಿದ್ದರು. ಕರ್ನಾಟಕ ಧ್ವಜಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಮ. ರಾಮಮೂರ್ತಿಯವರು ರೂಪಿಸಿದ ಹಳದಿ ಹಾಗೂ ಕೆಂಪು ಬಣ್ಣದ ಕನ್ನಡ ಧ್ವಜವನ್ನು ನಾವೆಲ್ಲರೂ ಒಪ್ಪಿದ್ದೇವೆ. ಅದು ಕನ್ನಡ ನಾಡಿನ ಅಸ್ಮಿತೆ. ಬೇರೆ ರಾಜ್ಯಗಳಿಗೆ ಅಥವಾ ವಿದೇಶಗಳಿಗೆ ಹೋದಾಗ ಅಲ್ಲಿ ಯಾವುದೇ ಹಳದಿ, ಕೆಂಪು ಬಣ್ಣ ಕಂಡರೂ ನಮ್ಮ ಕಣ್ಣಮುಂದೆ ಕರ್ನಾಟಕವೇ ಬರುತ್ತದೆ. ಆದರೆ ಈ ಧ್ವಜಕ್ಕೆ ಕಾನೂನಾತ್ಮಕ ಮಾನ್ಯತೆ ಇಲ್ಲ. ಧ್ವಜ ಸಂಹಿತೆ ಅದಕ್ಕೆ ಅನ್ವಯವಾಗುವುದಿಲ್ಲ. ಅದಕ್ಕೂ ಒಂದು ಸಂಹಿತೆ ರೂಪಿಸಿ ಎನ್ನುವುದು ಉಪ ರಾಷ್ಟ್ರೀಯವಾದದ (sub nationalism) ಪ್ರೋತ್ಸಾಹವಷ್ಟೆ. ಇಂಥಾ ವಾದಗಳೆಲ್ಲವೂ ಸರಿಯಲ್ಲ ಎಂಬುದನ್ನು ಸ್ಥಳೀಯವಾದದ ಆಳಕ್ಕೆ ಇಳಿಸಿ ನೋಡೋಣ. ಕರ್ನಾಟಕದ ಶೇ.60ಕ್ಕೂ ಹೆಚ್ಚು ಆದಾಯವನ್ನು ಬೆಂಗಳೂರು ಕೊಡುತ್ತಿದೆ. ಹಾಗಾದರೆ ಈ ಹಣವನ್ನು ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕಕ್ಕೆ ಅಥವಾ ಬೇರೆ ಭಾಗದ ಹಳ್ಳಿಯೊಂದಕ್ಕೆ ಮೂಲಸೌಕರ್ಯ ಒದಗಿಸಲು ಸರ್ಕಾರ ಹಣ ನೀಡಬೇಕೆ ಬೇಡವೇ? ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ ? ನಮ್ಮ ದುಡ್ಡನ್ನು ಇಲ್ಲೇ ಉಪಯೋಗಿಸಿ ಎಂದು ಬೆಂಗಳೂರಿನಲ್ಲಿರುವವರು ಕೇಳಿದರೆ ಹೇಗಿರುತ್ತದೆ? ಬೆಂಗಳೂರಿನಲ್ಲೂ ಮುಖ್ಯವಾಗಿ ಐಟಿ ಕಂಪನಿಗಳು ಕೇಂದ್ರಿತವಾಗಿರುವ ಎಲೆಕ್ಟ್ರಾನಿಕ್ ಸಿಟಿ ಮುಂತಾದ ಪ್ರದೇಶಗಳಿಂದ ಆದಾಯ ಬರುತ್ತದೆ. ಹಾಗಾದರೆ ದಾಸರಹಳ್ಳಿಗೋ, ಯಲಹಂಕಕ್ಕೋ ನಮ್ಮ ಹಣ ಉಪಯೋಗಿಸಬೇಡಿ ಎಂದರೆ ಹೇಗಿರುತ್ತದೆ? ಅದು ನ್ಯಾಯಸಮ್ಮತವಾಗುತ್ತದೆಯೇ? ನಾವು ಬೆಂಗಳೂರಿನಲ್ಲಿ ವಾಸವಿರುವ, ಕರ್ನಾಟಕ ರಾಜ್ಯದಲ್ಲಿರುವ ನಾಗರಿಕರಿರಬಹುದು, ಆದರೆ ನಮ್ಮ ನಾಗರಿಕತ್ವದ ಹೆಸರು ಭಾರತ.
ಇದನ್ನೂ ಓದಿ: ವಿಸ್ತಾರ ಅಂಕಣ: ಸಮಾಜವಾಗಿ ಭಾರತ ಸೋಲುತ್ತಿರುವುದೇತಕ್ಕೆ?
ಹೀಗೆ ಹೇಳಿದ ತಕ್ಷಣ ಕನ್ನಡ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ಕೆಲಸಗಳು ಆಗಬಹುದು. ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ವ್ಯವಸ್ಥೆ, ಎರಡು ಧ್ವಜ ಇರಕೂಡದು ಎಂದು ಕಾಶ್ಮೀರದಲ್ಲಿ ಬಲಿದಾನಗೈದವರು ಡಾ. ಶಾಮಪ್ರಸಾದ್ ಮುಖರ್ಜಿ ಅವರು. ʼಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆʼ ಎಂದರು ಬೇಂದ್ರೆಯವರು. ಕರ್ನಾಟಕ ಮಾತ್ರ ಏಳಿಗೆಯಾಗಬೇಕು ಎನ್ನುವುದಲ್ಲ, ನಮ್ಮ ಕಾರ್ಯತತ್ಪರತೆ, ಪ್ರಾಮಾಣಿಕತೆ, ಏಕತೆಯು ರಾಷ್ಟ್ರ ಹಾಗೂ ಜಗತ್ತಿನ ಏಳಿಗೆಗೆ ಕಾರಣವಾಗಬೇಕು ಎನ್ನವ ಆಶಯದ ನಾಡು ನಮ್ಮದು. ಸಾಹಿತ್ಯವನ್ನೇ ಉಸಿರಾಗಿಸಿಕೊಂಡವರೊಂದಿಗೆ ಅನೇಕ ವರ್ಷಗಳ ಒಡನಾಟದಲ್ಲಿ ಖಡಾಖಂಡಿತವಾಗಿ ನಾನು ಹೇಳುವುದಾದರೆ, ಕರ್ನಾಟಕ ಸಾಹಿತ್ಯದಲ್ಲಿ ಯಾವುದೇ ಕಾಲದಲ್ಲಿ ಪ್ರತ್ಯೇಕತಾವಾದಕ್ಕೆ, ಉಪರಾಷ್ಟ್ರೀಯತೆಗೆ ಬೆಂಬಲ ಸಿಕ್ಕಿಲ್ಲ. ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆಯಾದಿಯಾಗಿ ನಾಡಿನ ಸಾಕ್ಷಿ ಪ್ರಜ್ಞೆಗಳು ಮಾಡಿದ್ದನ್ನೇ ನಾವು ಪುನರುಚ್ಛರಿಸುತ್ತಿರುವುದು. ನಾವು ಹೇಳಿದ್ದು ತಪ್ಪು ಎನ್ನುವ ಮೂಲಕ, ಅವರೆಲ್ಲರನ್ನೂ ಅವಮಾನಿಸಲಾಗುತ್ತಿದೆ ಎಂದೇ ಹೇಳಬಹುದು.
ಸಿದ್ದರಾಮಯ್ಯ ಹಾಗೂ ಇನ್ನಿತರರ ಈ ಮಾತಿನ ಆಳದಲ್ಲಿ ಉಪ ರಾಷ್ಟ್ರೀಯವಾದವು ಇರುವುದು ಬಲವಾಗಿ ಕಾಣುತ್ತದೆ. ಪ್ರಾದೇಶಿಕವಾದದ ಹೆಸರಿನಲ್ಲಿ ವೈವಿಧ್ಯತೆಯನ್ನು ಕಡೆಗಣಿಸುವ, ಸಂವಿಧಾನದ ಹೆಸರು ಹೇಳಿಕೊಂಡೇ ಸಂವಿಧಾನದ ಮೌಲ್ಯಗಳಿಗೆ ತಿಲಾಂಜಲಿ ಇಡುವ ಹೆಜ್ಜೆಗಳು ಇವು. ನಮ್ಮ ಕನ್ನಡದ ರಾಜಕಾರಣಿಗಳ ಪರಂಪರೆಯಾಗಲಿ, ಕವಿ ಪುಂಗವರ ಪರಂಪರೆಯಲ್ಲಾಗಲಿ ಉಪರಾಷ್ಟ್ರೀಯತೆಗೆ ಅವಕಾಶ ನೀಡಿಲ್ಲ. ಕುವೆಂಪು ಅವರು ಹೇಳುವಂತೆ- ʼಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆʼ ಎನ್ನುವುದೊಂದೇ ನಮ್ಮ ಚಿಂತನೆಯ ಮೂಲಾಧಾರ. ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಕೂಡ ಹೇಳುವುದು- “ನಾನು ಮೊದಲು ಭಾರತೀಯ. ಬಳಿಕ ಕನ್ನಡಿಗ !”
ಚುನಾವಣೆ ಮುಂತಾದ ಸಮಯದಲ್ಲಿ ಈ ಆಧಾರವನ್ನು ಅಲುಗಿಸುವ ಪ್ರಯತ್ನಗಳನ್ನು ನಾವು ಹಿಮ್ಮೆಟ್ಟಿಸಲೇಬೇಕಾಗುತ್ತದೆ. ಕರ್ನಾಟಕವನ್ನಷ್ಟೇ ನೋಡಿದರೆ ಸ್ಪಷ್ಟ ಚಿತ್ರಣ ಸಿಗದೇ ಇರಬಹುದು, ಇನ್ನಿತರೆ ರಾಜ್ಯಗಳಲ್ಲಿ, ಅದರಲ್ಲೂ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಹೇಗೆ ಉಪರಾಷ್ಟ್ರೀಯತೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಎನ್ನುವುದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಇದನ್ನೂ ಓದಿ: ವಿಸ್ತಾರ ಅಂಕಣ: ಯುವಜನರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ತಿಳಿಸುವುದು ಹೇಗೆ?