Site icon Vistara News

ವಿಸ್ತಾರ Explainer | ಸಮಾಜದಲ್ಲಿ ಬಾಳಲು ಅಸಾಧ್ಯವಾಗಿಸುವ ASPD! ಏನಿದು ಕಾಯಿಲೆ?

ASPD and Shradha Walkar, Aftab

| ಡಾ. ಪ್ರೀತಿ ಎಸ್, ಹಿರಿಯ ಮನೋವೈದ್ಯಶಾಸ್ತ್ರಜ್ಞರು, ಸ್ಪಂದನಾ ಆಸ್ಪತ್ರೆ ಮತ್ತು ರಿಹ್ಯಾಬಿಲಿಟೇಷನ್ ಸೆಂಟರ್, ಬೆಂಗಳೂರು
ಆ್ಯಂಟಿ ಸೋಷಿಯಲ್ ಪರ್ಸನಾಲಿಟಿ ಡಿಸಾರ್ಡರ್ (antisocial personality disorder- ASPD) ಹೊಂದಿರುವ ರೋಗಿಗಳು ಸಾಮಾನ್ಯವಾಗಿ ತಮಾಷೆ, ಆಕರ್ಷಕ ಮತ್ತು ಮನರಂಜನಾತ್ಮಕ ವ್ಯಕ್ತಿಗಳಾಗಿಯೂ ಇರಬಹುದು. ಆದರೆ ಅವರು ಜನರನ್ನು ವಂಚಿಸಿ, ಶೋಷಣೆಯನ್ನೂ ಮಾಡಬಲ್ಲರು. ಎಎಸ್‌ಪಿಡಿ ಹೊಂದಿರುವ ವ್ಯಕ್ತಿಗಳು ಏನೂ ಆಗೇ ಇಲ್ಲ ಎನ್ನುವಂತೆ ಇದ್ದು, ತಾವು ತೋರಿರುವ ವರ್ತನೆಗೆ ಪಶ್ಚಾತ್ತಾಪವನ್ನೂ ಪಡದೆ ಇದ್ದುಬಿಡುತ್ತಾರೆ. ಈ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಹಠಾತ್ತಾಗಿ, ವಿಧ್ವಂಸಕವಾಗಿ, ಹಾಗೂ ಅಪಾಯಕಾರಿಯಾಗಿ ವರ್ತಿಸಬಹುದು. ಆದರೆ ಅವರ ಕೃತ್ಯಗಳಿಂದ ಇತರರಿಗೆ ಹಾನಿಯಾದಾಗಲೂ ಅವರು ಅದಕ್ಕಾಗಿ ಪಶ್ಚಾತ್ತಾಪ ಪಡುವುದಿಲ್ಲ. ಅವರು ಸ್ವಂತ ಲಾಭಕ್ಕಾಗಿ ಕುಶಲತೆಯಿಂದಲೂ ವರ್ತಿಸುತ್ತಾರೆ. ಅವರಿಗೆ ಯಾವುದಾದರೂ ಚಟ ಇದ್ದು, ಅವರು ಕಾನೂನಿನ ಪ್ರಕಾರ ನಡೆದುಕೊಳ್ಳುವವರಾಗಿರುವುದಿಲ್ಲ(ವಿಸ್ತಾರ Explainer).

ಆದ್ದರಿಂದ ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲ ಎಎಸ್‌ಪಿಡಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅವನು ತನ್ನ ನಡವಳಿಕೆಯಲ್ಲಿ ಈ ಮೇಲೆ ವಿವರಿಸಿದ ಲಕ್ಷಣಗಳನ್ನು ಹೊಂದಿರಲಿಲ್ಲ. ಆತ ತನ್ನೊಡನೆ ಲಿವ್ ಇನ್ ಸಂಬಂಧ ಹೊಂದಿದ್ದ ಸಂಗಾತಿ ಶ್ರದ್ಧಾ ವಾಳ್ಕರಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆ ಬಳಿಕ ಅವಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದ. ಅವನ ವರ್ತನೆ ತಮಾಷಿಯದ್ದಾಗಲಿ, ಮನರಂಜನಾತ್ಮಕವಾಗಿ ಆಗಲಿ ಇರಲಿಲ್ಲ. ಆತನ ನೆರೆಹೊರೆಯ ಜನರು ಅಫ್ತಾಬ್‌ನನ್ನು ಒಬ್ಬ ಸಭ್ಯ ಎಂದೇ ವಿವರಿಸಿದ್ದರು.

ಶ್ರದ್ಧಾ ವಾಳ್ಕರ್ ತಂದೆ ವಿಕಾಸ್ ವಾಳ್ಕರ್ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡರು. ಅದೇ ಸಮಯದಲ್ಲಿ ಅವನು ಗಾಂಜಾ ಅಮಲಿನಲ್ಲಿದ್ದ, ಮತ್ತು ಅವನು ಗಾಂಜಾ ಚಟಕ್ಕೆ ದಾಸನಾಗಿದ್ದ ಎಂದೂ ಹೇಳಿದ್ದರು.

ಅಫ್ತಾಬ್ ಪೂನಾವಾಲಾ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲಿ “ಹಂಗ್ರಿಚೋಕ್ರೋ” ಎಂಬ ಅಡಿಗೆಗೆ ಸಂಬಂಧಿಸಿದ ಬ್ಲಾಗ್ ಹೊಂದಿದ್ದ. ಅವನು ಮುಂಬೈನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಶಿಕ್ಷಣವನ್ನೂ ಪಡೆದಿದ್ದ. ಪೊಲೀಸರು ಅವನು ಅಪ್ರೆಂಟಿಸ್ ಷೆಫ್ ಆಗಿ ಕಾರ್ಯ ನಿರ್ವಹಿಸಿದ್ದ ಮುಂಬೈನ ಫೈವ್ ಸ್ಟಾರ್ ಹೊಟೆಲ್‌ನ ಸಿಬ್ಬಂದಿಗಳನ್ನೂ ಪ್ರಶ್ನಿಸಿ, ಈ ಪ್ರಕರಣದಲ್ಲಿ ಏನಾದರೂ ಹೊಸ ಹೊಳಹು ಸಿಗಬಹುದೇ ಎಂದು ಪ್ರಯತ್ನಿಸಲು ಬಯಸಿದ್ದರು. ಪೊಲೀಸರು ಈ ವಿಚಾರವಾಗಿ ಸಾಕಷ್ಟು ಜನರನ್ನು ವಿಚಾರಣೆ ನಡೆಸಿದ್ದಾರೆ. ಅವರಲ್ಲಿ ಅಫ್ತಾಬ್ ಹಾಗೂ ಶ್ರದ್ಧಾರ ಪರಿಚಯ ಹೊಂದಿದ್ದವರು, ಅಫ್ತಾಬ್ ಕುಟುಂಬ ನೆಲೆಸಿದ್ದ ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿ, ಶ್ರದ್ಧಾ ಕೌಟುಂಬಿಕ ದೌರ್ಜನ್ಯದ ಕುರಿತು ಸಂದೇಶ ಕಳುಹಿಸಿದ್ದ ಆಕೆಯ ಸೂಪರ್‌ವೈಸರ್ ಸಹ ಸೇರಿದ್ದರು. ಪೊಲೀಸರು ಕಲೆ ಹಾಕಿರುವ ಮಾಹಿತಿಯ ಪ್ರಕಾರ, ಅಫ್ತಾಬ್ ಮಾಂಸ ಕತ್ತರಿಸುವ ಮತ್ತು ಅದನ್ನು ಸಂಗ್ರಹಿಸಿಡುವ ವಿದ್ಯೆ ಕಲಿತುಕೊಂಡಿದ್ದ. ಅದರ ಪರಿಣಾಮವಾಗಿ ಅವನು ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದ ಬಳಿಕ ಅವಳ ದೇಹವನ್ನು ಕತ್ತರಿಸಿ ಹಾಕಿದ್ದ.

ಸೈಕೋಪಾತ್ ವರ್ಸಸ್ ಸೋಷಿಯೋಪಾತ್
ಆಧುನಿಕ ರೋಗನಿರ್ಣಯ ತಂತ್ರಗಳು ಎಎಸ್‌ಪಿಡಿಯನ್ನು ಎರಡು ಸಂಬಂಧ ಹೊಂದಿರುವ, ಆದರೆ ಬೇರೆ ಬೇರೆ ಸ್ಥಿತಿಗಳಾಗಿ ನೋಡುತ್ತವೆ. ಒಬ್ಬ ವ್ಯಕ್ತಿ “ಸೈಕೋಪಾತ್” ಎಂದು ಕರೆಯಲ್ಪಟ್ಟರೆ ಇತರರ ಕುರಿತಾದ ಆತನ ಕ್ರೂರ ನಡವಳಿಕೆಯಲ್ಲಿ ಲೆಕ್ಕಾಚಾರ, ಕುಶಲತೆ ಮತ್ತು ಕುತಂತ್ರಗಳು ಎದ್ದು ಕಾಣುತ್ತವೆ. ಅವರಿಗೆ ಸಾಮಾನ್ಯವಾಗಿ ಭಾವನೆಗಳು ಮತ್ತು ಇತರರ ಕುರಿತ ಸಹಾನುಭೂತಿಯ ಕೊರತೆ ಇರುತ್ತದೆ. ಇದು ಎಎಸ್‌ಪಿಡಿಯ ವಿಪರೀತದ ಹಂತವಾಗಿದೆ. ಅವರು ಇತರರನ್ನು ಕುತಂತ್ರದಿಂದ ಮೋಸಗೊಳಿಸುವಷ್ಟು ಚಾರ್ಮಿಂಗ್, ಹಾಗೂ ವರ್ಚಸ್ವಿಯಾಗಿರುತ್ತಾರೆ. ಆದರೆ ಇವರಿಗೆ ಹೋಲಿಸಿದರೆ ಸೋಷಿಯೋಪಾತ್‌ಗಳು ಸಾಮಾನ್ಯವಾಗಿ ಇತರರೊಡನೆ ಸಂಬಂಧ ಹೊಂದಲು ಸಾಧ್ಯವಿದ್ದರೂ, ಸಾಮಾಜಿಕ ರೂಢಿಗಳನ್ನು ಮುರಿಯುವಂತೆ ನಡೆದುಕೊಳ್ಳುತ್ತಾರೆ. ಅವರು ಹೆಚ್ಚು ದಿಢೀರ್ ನಡವಳಿಕೆ, ಅಸ್ತವ್ಯಸ್ತ ವರ್ತನೆ, ಹಾಗೂ ಸೈಕೋಪಾತ್‌ಗಳಿಂದ ಹೆಚ್ಚು ಶೀಘ್ರವಾಗಿ ಕೋಪಗೊಳ್ಳುವವರಾಗಿರುತ್ತಾರೆ. ಎಎಸ್‌ಪಿಡಿ ಸಾಮಾನ್ಯವಾಗಿ 2-4% ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಗಂಡಸರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಆನುವಂಶಿಕತೆ ಹಾಗೂ ಇತರ ಜೈವಿಕ ಅಂಶಗಳು (ವಿಶೇಷವಾಗಿ ಸೈಕೋಪಾತ್ ಗಳಲ್ಲಿ) ಒಂದು ಗಣನೀಯ ಪಾತ್ರ ವಹಿಸುತ್ತದೆ ಎಂದು ನಂಬಲಾಗಿದ್ದು, ಅದರೊಡನೆ ಬೆಳೆಯುವ ಸಂದರ್ಭದಲ್ಲಿ ಎದುರಾಗುವ ಒತ್ತಡದ ಅಥವಾ ನಿಂದನಾತ್ಮಕ ವಾತಾವರಣಗಳೂ (ವಿಶೇಷವಾಗಿ ಸೋಷಿಯೋಪಾತ್ ಗಳಲ್ಲಿ) ಕಾರಣವಾಗುತ್ತವೆ ಎನ್ನಲಾಗಿದೆ. ಸಂಶೋಧನೆಗಳ ಪ್ರಕಾರ ಬೆಳೆಯುವ ವಯಸ್ಸಿನಲ್ಲಿ ಮೆದುಳಿನ ಅಸಹಜತೆ ಹಾಗೂ ಆಘಾತಗಳು ಸಹ ಎಎಸ್‌ಪಿಡಿಗೆ ಹಾದಿಯಾಗಬಹುದು ಎನ್ನಲಾಗಿದೆ.

ಬಾಲ್ಯದಲ್ಲಿ ನೋಡುವ ವೀಡಿಯೋಗಳು ವಯಸ್ಕರಾದಾಗ ಅಪರಾಧಕ್ಕೆ ದಾರಿ ಮಾಡಬಲ್ಲದು

2013ರಲ್ಲಿ ನ್ಯೂಜಿಲ್ಯಾಂಡ್‌ನ ಒಟಾಗೋ ಯುನಿವರ್ಸಿಟಿ ಪ್ರಕಟಿಸಿದ ಸಂಶೋಧನೆಯಲ್ಲಿ ಮಕ್ಕಳು ಹಾಗೂ ಹದಿ ಹರೆಯದವರು ಅತಿಹೆಚ್ಚು ಟಿವಿ ನೋಡುವುದರಲ್ಲಿ ತೊಡಗಿದರೆ ಅವರು ದೊಡ್ಡವರಾದಾಗ ಸಮಾಜ ವಿರೋಧಿ ಹಾಗೂ ಕ್ರಿಮಿನಲ್ ನಡವಳಿಕೆಗಳನ್ನು ತೋರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಡಲಾಗಿತ್ತು. ಈ ಸಂಶೋಧನೆಯನ್ನು ಆಫ್ತಾಬ್ ಪ್ರಕರಣಕ್ಕೂ ಹೋಲಿಸಿ ನೋಡಬಹುದು.

ಬಾಲ್ಯದ ವಯಸ್ಸಿನಲ್ಲಿ ಅತಿ ಹೆಚ್ಚು ವೀಡಿಯೋ ನೋಡುವ ಅಭ್ಯಾಸಗಳಿಂದ ಬೆಳೆಯುವಾಗ ಹೆಚ್ಚು ಆಕ್ರಮಣಕಾರಿ ವ್ಯಕ್ತಿತ್ವದ ಪ್ರವೃತ್ತಿಯು ರೂಢಿಯಾಗಲು ಕಾರಣವಾಗಬಲ್ಲದು. ಇದರಿಂದಾಗಿ ಆ್ಯಂಟಿ ಸೋಷಿಯಲ್ ಪರ್ಸನಾಲಿಟಿ ಡಿಸಾರ್ಡರ್ ಉಂಟಾಗುವ ಅಪಾಯಗಳೂ ಎದುರಾಗುತ್ತದೆ.

ಟಿವಿ ವೀಕ್ಷಣೆ ಹಾಗೂ ಸಮಾಜಘಾತಕ ನಡವಳಿಕೆಯ ನಡುವೆ ಇರುವ ಸಂಬಂಧದ ಕುರಿತು ಸಾಮಾಜಿಕ, ಆರ್ಥಿಕ ಸ್ಥಿತಿ, ಬಾಲ್ಯದಲ್ಲಿ ಆಕ್ರಮಣಕಾರಿ ಅಥವಾ ಸಮಾಜ ವಿರೋಧಿ ನಡವಳಿಕೆಗಳು, ಅಥವಾ ಪೋಷಕರು ಬೆಳೆಸುವ ಕುರಿತು ಹೇಳುವಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಈ ಸಂಶೋಧನಾ ಬರಹದ ಸಹ ಬರಹಗಾರರಾದ ಲಿಂಡ್ಸೇ ರಾಬರ್ಟ್‌ಸನ್ ಸಮಾಜ ವಿರೋಧಿ ಮಕ್ಕಳು ಹೆಚ್ಚು ಟಿವಿ ನೋಡುತ್ತಾರೆ ಎನ್ನುವುದಕ್ಕಿಂತಲೂ, ಅತಿ ಹೆಚ್ಚು ಟಿವಿ ನೋಡುವ ಅಭ್ಯಾಸ ಇರುವ ಮಕ್ಕಳು ಸಮಾಜ ವಿರೋಧಿ ನಡವಳಿಕೆಯನ್ನು ಮೈಗೂಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ.

ಈ ಅಧ್ಯಯನದ ಸಾಧ್ಯತೆಯನ್ನು ಅಫ್ತಾಬ್ ಪ್ರಕರಣಕ್ಕೆ ಹೋಲಿಸಿ ನೋಡಬಹುದು. ಅಫ್ತಾಬ್ 2006 ರಿಂದ 2013ರ ಮಧ್ಯದಲ್ಲಿ ಬಂದ ಅಮೆರಿಕಾದ ಕ್ರೈಮ್ ಟಿವಿ ಡ್ರಾಮಾ ಡೆಕ್ಸ್ಟರ್‌ನಿಂದ ಪ್ರಭಾವಿತನಾಗಿದ್ದನಂತೆ. ಈ ಅಮೆರಿಕಾದ ಟಿವಿ ಸರಣಿಯ ಎರಡನೇ ಸೀಸನ್‌ನಲ್ಲಿ ಡೆಕ್ಸ್ಟರ್ ಎಂಬ ಪಾತ್ರ ಒಂದು ಆಂತರಿಕ ಸ್ವಗತ ಎಂಬಂತೆ ಓರ್ವ ವಕೀಲನೊಡನೆ ಅಪನಂಬಿಕೆಯಿಂದ ಮಾತನಾಡುವಾಗ “ನಿನ್ನ ಭವಿಷ್ಯದಲ್ಲಿ ನಾನು ಪ್ಲಾಸ್ಟಿಕ್ ಹಾಳೆಗಳನ್ನು ಕಾಣುತ್ತಿದ್ದೇನೆಯೇ?” ಎನ್ನುತ್ತಾನೆ.

ಅಫ್ತಾಬ್ ಪೂನಾವಾಲ ದೆಹಲಿ ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ತನ್ನ ಕಾರ್ಯ ಡೆಕ್ಸ್ಟರ್‌ನ ಪ್ರಭಾವದಿಂದಾಗಿ ನಡೆದಿದೆ ಎಂದು ಹೇಳಿದ್ದಾನೆ. ಈ ಸರಣಿಯಲ್ಲಿ ಮೈಕೇಲ್ ಸಿ ಹಾಲ್ ಡೆಕ್ಸ್ಟರ್ ಮೋರ್ಗನ್ ಎಂಬ ಜಾಗರೂಕ ಸರಣಿ ಕೊಲೆಗಾರನ ಪಾತ್ರ ನಿರ್ವಹಿಸಿದ್ದಾರೆ. ಇಲ್ಲಿ ಡೆಕ್ಸ್ಟರ್ ಕ್ರಿಮಿನಲ್ ಕೆಲಸಗಳನ್ನು ಮಾಡಿರುವವರನ್ನೇ ತನ್ನ ಬಲಿಯನ್ನಾಗಿ ಆಯ್ಕೆ ಮಾಡಿಕೊಂಡು, ಅವರು ಮಾಡಿರುವ ಅಪರಾಧಗಳಿಗೆ ಅವರನ್ನು ತಾನು ಕೊಂದು, ಅವರ ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ, ಸುಲಭವಾಗಿ ಅದನ್ನು ಇಲ್ಲವಾಗಿಸುವುದು ಸರಿಯಾದ ಶಿಕ್ಷೆ ಎಂದು ಭಾವಿಸುತ್ತಾನೆ. ಈ ಮೂಲಕ ತಾನು ಮಾಡಿದ ಅಪರಾಧದ ಸುಳಿವು ಉಳಿಯದಂತೆ ನೋಡಿಕೊಳ್ಳುತ್ತಾ‌ನೆ.

ಇದು ಡೆಕ್ಸ್ಟರ್ ಹಾಗೂ ಅಫ್ತಾಬ್ ಪೂನಾವಾಲ ಪ್ರಕರಣಗಳ ಮಧ್ಯ ಇರುವ ಹೋಲಿಕೆ. ಆದರೆ ಡೆಕ್ಸ್ಟರ್ ಒಬ್ಬ ಕಾಲ್ಪನಿಕ ಪಾತ್ರವಾಗಿದ್ದು, ತನ್ನನ್ನು ತಾನು ಓರ್ವ ನ್ಯಾಯಾಧೀಶ, ವಕೀಲ ಹಾಗೂ ಶಿಕ್ಷೆ ಕೊಡುವವ ಎಂದೇ ಭಾವಿಸುತ್ತಾನೆ. ಡೆಕ್ಸ್ಟರ್ ಯಾವಾಗಲೂ ಅಪರಾಧ ಎಸಗಿ, ಶಿಕ್ಷೆಯಿಂದ ತಪ್ಪಿಸಿಕೊಂಡವರನ್ನು ಮಾತ್ರವೇ ಶಿಕ್ಷಿಸುತ್ತಾನೆ.

ಗಾಂಜಾ ಫ್ಯಾಕ್ಟರ್
ಅಫ್ತಾಬ್ ಪೂನಾವಾಲಾ ಆಗಾಗ ಗಾಂಜಾ ಸೇವನೆ ಮಾಡುವವನಾಗಿದ್ದ. ಇದರ ಪರಿಣಾಮವಾಗಿ ಅವನು ಮತ್ತು ಶ್ರದ್ಧಾ ಮಧ್ಯ ನಡೆದ ಜಗಳ ಅವಳ ಕೊಲೆಯಲ್ಲಿ ಅಂತ್ಯವಾಯಿತು. ಅಮೆರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ಪ್ ಪ್ರಕಾರ, ಅತಿಯಾದ ಗಾಂಜಾ ಚಟ ಹೊಂದಿರುವವರು ನಡೆಸುವ ಅಪರಾಧಗಳು ಗಾಂಜಾ ಸೇವನೆ ಉಂಟುಮಾಡುವ ಮತಿವಿಕಲ್ಪ ಸ್ಥಿತಿ (ಅತಿಯಾದ, ಆಧಾರ ರಹಿತ ಅಪನಂಬಿಕೆ) ಹಾಗೂ ಸೈಕೋಸಿಸ್ (ವ್ಯಕ್ತಿತ್ವದಲ್ಲಿನ ಬದಲಾವಣೆ, ನೈಜತೆಯ ಅರಿವಿನಿಂದ ದೂರವಾಗುವುದು) ಗಳಿಗೆ ಉದಾಹರಣೆಗಳಾಗಿವೆ.

ಗಾಂಜಾ ಸೇವನೆಯಿಂದ ಒಬ್ಬ ವ್ತಕ್ತಿಯ ಜೀವನ ಪರ್ಯಂತ ಆಕ್ರಮಣಕಾರಿ ಪ್ರವೃತ್ತಿಯು ಹೆಚ್ಚಾಗಬಹುದು. ಪದೇ ಪದೇ ಗಾಂಜಾ ಸೇವಿಸುವವರು ಸೈಕೋಸಿಸ್ ಅಪಾಯವನ್ನು ಹೆಚ್ಚಾಗಿ ಎದುರಿಸುತ್ತಾರೆ. ಅದರೊಡನೆ ಹೆಚ್ಚಿನ ಬಳಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವ ಅಪಾಯಗಳಿವೆ. ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್, ಸೋಷಿಯಲ್ ಆ್ಯಂಕ್ಸೈಟಿ, ಹಾಗೂ ಖಿನ್ನತೆಯಂತಹಾ ಮಾನಸಿಕ ಸಮಸ್ಯೆಗಳನ್ನು ಹೊಂದಿರುವವರಲ್ಲಿ ಗಾಂಜಾ ಸೇವನೆಯಿಂದ ಆರೋಗ್ಯ ಕ್ಷೀಣವಾಗಬಹುದು.

ಹಾಗೆಂದು ಡೆಕ್ಸ್ಟರ್ ಪ್ರಭಾವ ಅಫ್ತಾಬ್ ಮೇಲೆ ಕೊಲೆಯ ಮೊದಲು ಬಂದಿತ್ತಾ ಅಥವಾ ಕೊಲೆಯ ಬಳಿಕ ಬಂತಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಂದರೆ ಅವನು ಶ್ರದ್ಧಾಳ ಕೊಲೆಯನ್ನು ಯೋಜಿಸಿ ಮಾಡಿದನಾ, ಅಥವಾ ಅವಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆಯುವುದು ಅವನ ದುಷ್ಕೃತ್ಯವನ್ನು ಮರೆಮಾಚಲು ಮಾಡಿದನಾ ಎಂಬುದು ಇನ್ನೂ ತಿಳಿಯಬೇಕಾಗಿದೆ.

ಇದನ್ನೂ ಓದಿ | Shraddha Murder Case | ಪೀಸ್​ಪೀಸ್​ ಮಾಡುವುದಾಗಿ ಶ್ರದ್ಧಾಗೆ 2020ರಲ್ಲೇ ಬೆದರಿಕೆ ಹಾಕಿದ್ದ ಅಫ್ತಾಬ್​; ಪತ್ರ ಬಿಚ್ಚಿಟ್ಟ ಸತ್ಯಗಳಿವು!

Exit mobile version