Site icon Vistara News

ವಿಸ್ತಾರ ಭಾಗ 2 | ಹರಿವ ನದಿಗೆ ಸಾವಿರ ಕಾಲು | ಹೊಣೆಯರಿತ ಪತ್ರಕರ್ತನ ಸತ್ಯದ ವಿಶ್ಲೇಷಣೆ | ಹರಿಪ್ರಕಾಶ್‌ ಕೋಣೆಮನೆ ಅಂಕಣ ಸಂಕಲನ

vistara book 2

| ನಾರಾಯಣ ಯಾಜಿ

ಪತ್ರಿಕಾ ಮನೆಯಲ್ಲಿ ಕುಳಿತವರಿಗೆ ಸುದ್ದಿಗಳ ವಿಷಯದಲ್ಲಿ ಬರಗಾಲವಿಲ್ಲ. ಈ ಸುದ್ದಿಗಳ ಸಂತೆಯಲ್ಲಿ ಅದರಲ್ಲಿರುವ ವಿಷಯಗಳನ್ನು ಹಸಿಹಸಿಯಾಗಿ ಓದುಗರಿಗೆ ತಲುಪಿಸುವ ಇಂದಿನ ಅವಸರದ ಜಾಯಮಾನದಲ್ಲಿ ತಾವು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆನ್ನುವದನ್ನು ಇಂದು ಮಾಧ್ಯಮಗಳು ಮರೆತುಬಿಟ್ಟಿವೆ. ಟೀವಿ ಪತ್ರಿಕೋದ್ಯಮ ಬಂದಮೇಲೆ ಈ ಸಂಗತಿ ಇನ್ನೂ ಹೆಚ್ಚೇ ಆಗಿಹೋಗಿವೆ. ಪರಿಣಾಮವಾಗಿ ತಾವು ಸಮಾಜಕ್ಕೆ ನೀಡುವ ಮುಖ್ಯವಾದ ಸಂದೇಶವನ್ನೇ ಅವುಗಳು ಮರೆಮಾಚಿವೆ ಎನ್ನುವದು ಅಷ್ಟೇ ಸತ್ಯವಾಗಿವೆ. ಪತ್ರಿಕೆಗಳು ಸಮಾಜಕ್ಕೆ ಹಿಡಿಯುವ ಕನ್ನಡಿ ಎಂದು ಅನೇಕ ಮಾಧ್ಯಮಗಳು ಈ ರೀತಿಯ ಧಾವಂತದ ಸುದ್ದಿಗಳ ಪ್ರಕಟನೆಗೆ ಸಮರ್ಥನೆಗಳನ್ನು ಕೊಡುತ್ತಿರುವದನ್ನೂ ಸಹ ನೋಡಬಹುದಾಗಿದೆ. ಆದರೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಬಲದ್ದು ಎಡ, ಎಡದ್ದು ಬಲ ಎನ್ನುವದನ್ನು ಮರೆಯಬಾರದು.

ಈ ಸಂದರ್ಭದಲ್ಲಿ ಅಮೇರಿಕಾದ ಪ್ರಸಿದ್ಧ ಪತ್ರಕರ್ತರಾದ Bill Kovach ಮತ್ತು Tom Rosenstiel ಪತ್ರಿಕಾರಂಗದ ಉದ್ದೇಶದ ಕುರಿತು “The Elements of Journalism, “is not defined by technology, nor by journalists or the techniques they employ. Rather the principles and purpose of journalism are defined by something more basic: the function news plays in the lives of people” ಎಂದು ಬರೆದಿರುವದು ಭಾರತದ ಪ್ರಸ್ತುತ ಮಾಧ್ಯಮರಂಗ ಗಮನಿಸುವದು ತುಂಬಾ ಮುಖ್ಯ ಅನಿಸುತ್ತದೆ. ತಾವು ಪ್ರಕಟಿಸುವ ಸುದ್ದಿಗಳು ಜನರ ಬದುಕಿನ ಮೇಲೆ ಆಡುವ ಆಟದ ಪರಿಣಾಮದ ಕುರಿತು ಆಲೋಚಿಸಿ ಕೊಡುವಾಗ ತಮ್ಮ ಮೇಲೆ  ಸ್ವನಿಯಂತ್ರಣವನ್ನು ವಹಿಸಿಕೊಳ್ಳುವದು ಅಷ್ಟೇ ಮುಖ್ಯ. ಈ ಸಂದರ್ಭಗಳಲ್ಲಿ ನನಗೆ ಇಷ್ಟವಾದ ಕೆಲ ರಾಜಕೀಯ ವಿಶ್ಲೇಷಕರುಗಳು ಖುಶ್‌ವಂತ್‌ ಸಿಂಗ್, ಅರುಣ ಶೌರಿ, ಜಾರ್ಜ್ ಓರ್ವೆಲ್, ರುಡ್ಯಾರ್ಡ್ ಕಿಪ್ಲಿಂಗ್, ರಾಜ್ ಮೋಹನ್ ಗಾಂಧಿ, ಶಶಿ ತರೂರ್ ಮುಂತಾದವರು. ಇವರೆಲ್ಲರೂ ಮುಖ್ಯವಾಗುವದು ಏಕೆಂದರೆ ಇವರೆಲ್ಲರ ನಿಜಜೀವನದ ಬದುಕಿನಲ್ಲಿ ತಮ್ಮ ತಮ್ಮ ಬಾಲಿಶತನ, ಜಾಣನಡೆ, ರಸಿಕತೆ, ಸೆಡವು-ಸಿನಿಕತನ, ಕೆಲವೊಮ್ಮೆ ಮೂರ್ಖತನಕ್ಕೂ ಪ್ರಸಿದ್ಧರಾದವರು. ಆದರೆ ಸುದ್ದಿಮನೆಯ ವಿಶ್ಲೇಷಣೆಯ ಹೊಣೆ ಬಂದಾಗ ಲೇಖನಿ ಇವರ ಮೂಸೆಯಲ್ಲಿ ರೂಪುಗೊಳ್ಳುವದಿದೆಯಲ್ಲಾ ಅದೊಂದು ಪರಿಭಾಷೆಯಾಗಿಬಿಡುತ್ತದೆ.

Shashi Tharoor ಅವರ Why I’m a Hindu ಓದಿದವರಿಗೆ ಅವರ ತಿಕ್ಕಲುತನ ಮರೆಯಾಗಿ ಅವರೊಳಗಿರುವ ಸಂಸ್ಕೃತಿ, ಸನಾತನ ಧರ್ಮದ ಕುರಿತು ಅವರಿಗಿರುವ ತಿಳಿವಳಿಕೆಗಳ ಕುರಿತು ಅಚ್ಚರಿ ಮೂಡಿಸುತ್ತದೆ. ಖುಶವಂತ ಸಿಂಗರ ಪೋಲಿ ಜೋಕುಗಳನ್ನು ಸವಿಯುತ್ತಿರುವ ಹೊತ್ತಿನಲ್ಲಿಯೇ ಅವರ Train to Pakistan ಕೃತಿಯಲ್ಲಿ ಬರುವ Freedom is for the educated people who fought for it. We were slaves of the English, now we will be slaves of the educated Indians or Pakistanis. ಎಂಬ ವಾಕ್ಯ ನಮ್ಮನ್ನು ವಿಷಾದದ ಗುಂಡಿಯಲ್ಲಿ ನೂಕಿಬಿಡುತ್ತದೆ. ನಮ್ಮೆದೆಗೆ ಆ ಬಿಸಿಯುಸಿರು ತಾಕುತ್ತದೆ. ಈ ರೀತಿಯ ಪ್ರಬುದ್ಧತೆಯನ್ನು ಸುದ್ದಿಮನೆಯಲ್ಲಿರುವವರು ಗಮನಿಸದೇ ಇದ್ದರೆ ಅದು ಗೊಂದಲವನ್ನು ಸೃಷ್ಟಿಸಿ ಕೇವಲ ಟಿಆರ್‌ಪಿ ಹೆಚ್ಚಿಸುವ ಮಾರುಕಟ್ಟೆಯ ತಂತ್ರವಾಗುತ್ತದೆ. ಕನ್ನಡದಲ್ಲಿಯೂ ಹೆಚ್‌ಎಸ್‌ವಿ, ಖಾದ್ರಿ ಶಾಮಣ್ಣ, ಶಾಮರಾಯರು, ವೈಎನ್‌ಕೆ, ಲಂಕೇಶ್, ಬಿ.ವಿ ವೈಕುಂಠರಾಜು, ಡಾ.ಹಾಮಾನಾರಂತಹ ಕೆಲವರು ಇದೇ ರೀತಿಯಲ್ಲಿ ತಮ್ಮ (Committed Observer) ಜವಾಬುದಾರಿಯನ್ನು ನಿರ್ವಹಿಸಿದ ರೀತಿ ಇನ್ನೊಬ್ಬರಿಗೆ ಮಾದರಿಯಾಗಿದೆ.

ಹರಿಪ್ರಕಾಶ ಕೋಣೆಮನೆಯವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕರಾಗಿ ಇರುವಾಗ ಬರೆದ ಅಂಕಣದ ಪುಸ್ತಕ ರೂಪ “ವಿಸ್ತಾರ– 2” ಓದಿದಾಗ ಈ ಮೇಲಿನ ಸಂಗತಿಗಳೆಲ್ಲವೂ ನೆನಪಿಗೆ ಬಂತು. ಹರಿಪ್ರಕಾಶ ಕೋಣೆಮನೆಯವರು ತಮ್ಮ ಅಂಕಣದಲ್ಲಿ ಕಾದುಕೊಂಡಿದ್ದ ಸಂಯಮ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಕ್ರಮಗಳು ಮಾದರಿಯ ಪತ್ರಿಕೋದ್ಯಮಕ್ಕೆ ಒಂದು ಪಠ್ಯವಾಗಿತ್ತು ಎನ್ನಬಹುದಾಗಿದೆ. ಒಟ್ಟೂ ಇಪ್ಪತ್ನಾಲ್ಕು ಲೇಖನಗಳನ್ನು ಸಂಗ್ರಹಿಸಿ ಹೊರತಂದ ಈ ಕೃತಿಯಲ್ಲಿ ರಾಜಕೀಯ ಚಿಂತನೆ, ಸಾಂಸ್ಕೃತಿಕ ಬದುಕಿನತ್ತ ಇಣುಕುನೋಟ, ಕನ್ನಡದ ಮತ್ತು ಕನ್ನಡ ಭಾಷೆಯ ಕುರಿತಾದ ಕಾಳಜಿ, ರಾಜಕೀಯದ ಅವಾಂತರಗಳಿಗೆ ಕಂಬಳಿಯಿಂದ ಸುತ್ತಿ ಕೊಡುವ ಕಲ್ಲಿನ ಪೆಟ್ಟುಗಳು ಎಲ್ಲವೂ ಕೋಣೆಮನೆಯವರ ಶೈಲಿಯನ್ನು ರೂಢಿಸಿವೆ.

ಅವರು ದಿಗ್ವಿಜಯ ನ್ಯೂಸ್‌ನಲ್ಲಿ ಸಂಪಾದಕರಾಗಿರುವಾಗ ರಾತ್ರಿ ಬಹುಮುಖ್ಯ ಹೊತ್ತಿನಲ್ಲಿ ನಡೆಸಿಕೊಡುತ್ತಿದ್ದ ಸುದ್ದಿ ವಿಶ್ಲೇಷಣೆಯಲ್ಲಿ ಗಂಭೀರವಾಗಿ ಪ್ರಸ್ತುತಗೊಳಿಸುತ್ತಿರುವ ರಾಜಕೀಯದ ವಿಶ್ಲೇಷಣೆಗಳು ನನ್ನನ್ನು ತಪ್ಪದೇ ಅವರ ಸಮಯಕ್ಕಾಗಿ ಕಾಯುವಂತೇ ಮಾಡುತ್ತಿದ್ದವು. ನಿರುದ್ವಿಗ್ನವಾಗಿ ಹೇಳಬೇಕಾದುದನ್ನು ಹೇಳಿಯೇ ಬಿಡುವ, ಸಮಾಜ ಮತ್ತು ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಅವರ ಕಾಳಜಿ ನಿಜ ಅರ್ಥದಲ್ಲಿ ಜನಪರವಾಗಿರುತ್ತಿದ್ದವು. “ವೈರಿಯನ್ನು ಟೀಕಿಸುತ್ತಾ ಅದರಂತೆಯೇ ಆಗುವ ಬಿಜೆಪಿಯ ಗುಣ” ಲೇಖನದಿಂದಲೇ ಅದು ವ್ಯಕ್ತವಾಗಿ ಬಿಡುತ್ತದೆ. ಸಿದ್ಧಾಂತವೇ ಮುಖ್ಯವೆನ್ನುವ ಪಕ್ಷವೊಂದು ಸಿದ್ಧಾಂತದ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಮಾಡುವ ತಂತ್ರಗಾರಿಕೆಯನ್ನು ನೇರಾನೇರ ಬಿಚ್ಚಿಟ್ಟಿದ್ದಾರೆ. ಹೀಗೆ ವಿಶ್ಲೇಷಣೆ ಮಾಡುವ ಹೊತ್ತಿನಲ್ಲಿ ಕರ್ನಾಟಕದ ಪ್ರಬುದ್ಧ ಮತದಾರ ಮತ್ತು ಬಂಗಾಲದ ರಾಜಕೀಯ ಕಸರತ್ತುಗಳ ತೌಲನಿಕ ಅಧ್ಯಯನವನ್ನು ನಡೆಸಿದ್ದಾರೆ. ಬಂಗಾಲದಲ್ಲಿ ಅಹಿಂಸೆಯನ್ನು ಇಷ್ಟಪಡದ ದೀದಿ ಎನ್ನುವಲ್ಲಿ ಉಪಯೋಗಿಸಿರುವ ಪದ ಸಿಡುಕು ಮುಖದ, ಸದಾ ಜಗಳ ಕಾರುವ, ಪ್ರಧಾನಿ ಹುದ್ದೆಗೂ ಗೌರವ ಕೊಡದ ಮಮತಾ ಬ್ಯಾನರ್ಜಿಯನ್ನು ಎದುರಿಸಿಲು ಅವರದೇ ಪಕ್ಷದ ನಾಯಕರನ್ನು ಸಾರಾ ಸಗಟಾಗಿ ಆಮದು ಮಾಡಿಕೊಂಡು 2016ರಲ್ಲಿ ಕೇವಲ ಮೂರು ಸ್ಥಾನಗಳನ್ನು ಗಳಿಸಿದ ಪಕ್ಷ 77 ಸ್ಥಾನಗಳನ್ನು ಗಳಿಸಿಕೊಂಡಿರುವದು ಒಂದು ಕಡೆ. ಬಹುಮತವನ್ನು ಗಳಿಸಿಯೂ ನಂದಿಗ್ರಾಮದಲ್ಲಿ ಸೋತ ಮಮತಾ ದೀದಿಯ ಪಕ್ಷಕ್ಕೆ ಸಡ್ಡು ಹೊಡೆದಿರುವದು ಇನ್ನೊಂದು ಕಡೆ. ಹೀಗೆ ನೋಡುವಾಗ ಅಂಕಿಅಂಶಗಳ ಪ್ರಕಾರ ಬಿಜೆಪಿಯ ಗೆಲುವು ಮಹತ್ವದ್ದಾಗಿ ಕಾಣಿಸಬಹುದು.  ಆದರೆ ಬಿಜೆಪಿ 3ರಿಂದ 77ಕ್ಕೆ ಜಿಗಿದಿರುವದು ಆಪರೇಷನ್ ಕಮಲದ ಮೂಲಕವಾಗಿ ಎನ್ನುವದನ್ನು ನಿರೂಪಿಸುತ್ತಾರೆ. ಅಂತಿಮವಾಗಿ ಅಂಕಿಅಂಶಗಳನ್ನು ಬಿಟ್ಟು ಗೆದ್ದಿರುವದು ಮಮತಾ ಬ್ಯಾನರ್ಜಿಯೇ ಎನ್ನುವದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಭಾಗ 1 | ಹೊಸ ತಿಳಿವಿನ ಬಾಗಿಲು | ಕಾಲಕ್ಕೆ ಹಿಡಿದ ಕನ್ನಡಿ | ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಕಲನ

ಸುಳ್ಳಿನಲ್ಲಿ ಸುಳ್ಳು, ಮಹಾ ಸುಳ್ಳು ಮತ್ತು ಅಂಕಿಅಂಶಗಳೆಂಬ ಮೂರು ವಿಧಗಳನ್ನು ಸ್ಟ್ಯಾಟೆಸ್ಟಿಕ್ಸಿಗೆ ತಮಾಷೆಯಾಗಿ ಹೇಳುವದುಂಟು. ಹೀಗೆ ಒಂದರ ವಿಷಯಗಳನ್ನು ಹೇಳುತ್ತಲೇ ವಿಜಯವೆನ್ನುವದು ಅಂಕಿಅಂಶಗಳಲ್ಲಿಲ್ಲ, ಅದಕ್ಕೂ ಮೀರಿದ ಭಾವನೆಗಳಲ್ಲಿ ಇದೆ ಎನ್ನುವದನ್ನು ಎಚ್ಚರಿಸುತ್ತಾ ಆ ಪಕ್ಷಕ್ಕಾಗಿ ದುಡಿದ ಸಾವಿರಾರು ಕಾರ್ಯಕರ್ತರ ಮೌನ ರೋದನವನ್ನು ನಮ್ಮೆದುರು ತಂದಿರಿಸುತ್ತಾರೆ. ಕರ್ನಾಟಕದಲ್ಲಿಯೂ ಇದೇ ಅವಸ್ಥೆಯನ್ನು ಕಾರ್ಯಕರ್ತರು ಅನುಭವಿಸುತ್ತಿರುವದು ನಮ್ಮೆದುರು ಬರುತ್ತದೆ. ಅದೇ ಕಾಲಕ್ಕೆ ಕರ್ನಾಟಕದ ಪ್ರಬುದ್ಧ ಮತದಾರ ಇಲ್ಲಿನ ಸಂಕೀರ್ಣ ಜಾತಿ ವ್ಯವಸ್ಥೆಯ ನಡುವೆಯೂ ಲೋಕ ಸಭೆ ಮತ್ತು ವಿಧಾನ ಸಭಾ ಚುನಾವಣೆಗಳಲ್ಲಿ ಪ್ರತ್ಯೇಕ ವಿಚಾರ ಮತ್ತು ಪ್ರತ್ಯೇಕ ಪಕ್ಷವನ್ನು ಆಯ್ಕೆ ಮಾಡುವಲ್ಲಿ ವಿವೇಚನೆಯನ್ನು ತೋರಿದ್ದಾನೆ ಎನ್ನುತ್ತಾರೆ. ಪಶ್ಚಿಮ ಮಂಗಾಲದಲ್ಲಿ ದೀದಿ ಗೆದ್ದಿರುವದು ನೆಲದ ಮಗಳು ಎನ್ನುವ ಘೋಷಣೆಯಿಂದ. ಟಿಎಂಸಿಯಿಂದಲೇ ಬಹುತೇಕ ನಾಯಕರನ್ನು ಆಮದು ಮಾಡಿಕೊಂಡರೂ ಬಿಜೆಪಿಯ ಮುಖವಿರುವದು ಮೋದಿ-ಶಾ ಜೋಡಿಯ ಮೇಲೆ. ಹಾಗಾಗಿ ಒಳಗಿನವರು ವರ್ಸಸ್ ಹೊರಗಿನವರು ಎನ್ನುವದು ಅಲ್ಲಿನ ಮತದಾರರಿಗೆ ಮುಖ್ಯವಾಯಿತು. ಈ ಒಂದು ವಾಕ್ಯವನ್ನು ಓದುವಾಗ ಕರ್ನಾಟಕದಲ್ಲಿಯೂ ಲೋಕಲ್ ವರ್ಸಸ್ ಹೊರಗಿನವರು ಎನ್ನುವದರಿಂದಲೇ ಯಡಿಯೂರಪ್ಪನವರಿಗೆ ಮಣೆಹಾಕಿದ ವಿಷಯವನ್ನು ನೆನಪಿಸುತ್ತಾರೆ.

ವಿಸ್ತಾರ ಪುಸ್ತಕ ಬಿಡುಗಡೆ ಸಂದರ್ಭ

ಅದೇ ರೀತಿ “ಕೊನೆಯ ಓವರಿನಲ್ಲಿ ಮ್ಯಾಚ್ ಗೆಲ್ಲಿಸ್ತಾರಾ ಬೊಮ್ಮಾಯಿ”  ಎನ್ನುವಲ್ಲಿಯೂ ಬಿಜೆಪಿ ನಾಯಕತ್ವಕ್ಕೆ ಎಚ್ಚರಿಕೆಯನ್ನು ನೀಡುವಂತೆ ಅನಿಸಿದರೂ ಇಲ್ಲಿರುವದು ಕರ್ನಾಟಕದ ಜನತೆಗೆ ಬೇಕಾಗಿರುವ ಒಳ್ಳೆಯ ಆಡಳಿತದ ಆಶಯವಾಗಿದೆ.  ಲೇಖನದ ಮೊದಲನೆಯ ವಾಕ್ಯದಲ್ಲಿಯೇ “ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ” ಎನ್ನುವ ಮೂಲಕ ಅದನ್ನು ಸ್ಪಷ್ಟಪಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಆಗಿಹೋಗಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ನೆನಪಿಸುತ್ತಾ ಅವರು ಆಯ್ಕೆಯಾದ ಬಗೆ, ಸ್ವಭಾವ, ಜನಪ್ರಿಯತೆ, ಜನಪರತೆ, ಪ್ರತಿನಿಧಿಸಿದ ಪಕ್ಷ, ಕೌಟುಂಬಿಕ ಹಿನ್ನೆಲೆ, ಅದೃಷ್ಟ, ಮಾಡಿರುವ ಕೆಲಸಗಳು, ಹೈಕಮಾಂಡ್ ಕೃಪೆ, ಸ್ಥಳೀಯ ನಾಯಕರ ಇಷ್ಟಾನುಸಾರ ಮುಖ್ಯಮಂತ್ರಿಗಳಾಗಿರುವವರನ್ನು ನೆನಪಿಸುತ್ತಾ ಇದನ್ನು ರಣರೋಚಕ ಎನ್ನುತ್ತಾರೆ. ಕೇವಲ ಬೊಮ್ಮಾಯಿಯವರಿಗೆ  ಭೋಪರಾಕ್ ಹೇಳಿ ತಮ್ಮ ಲೇಖನವನ್ನು ಮುಗಿಸುವದು ಕೋಣೆಮನೆಯವರ ಉದ್ದೇಶವಲ್ಲ. ಸಂಖ್ಯೆ ಎಷ್ಟೆನ್ನುವದಕ್ಕಿಂತಲೂ ಅವರಿಗೆ ಇಲ್ಲಿ ಜನಪರ ಆಡಳಿತ ನಡೆಸಿ ಆ ಮೂಲಕ ಕೆಲವೇ ಜನ ಮಾತ್ರ ಜನರ ಮನಸ್ಸಿನಲ್ಲಿ ಸ್ಥಾಯಿಯಾಗಿ ಉಳಿದಿರುವದನ್ನು ನೆನಪಿಸಬೇಕಾಗಿದೆ. ಹಿಂದುಳಿದವರ ಪಾಲಿಗೆ ಧ್ವನಿಯಾದ ದೇವರಾಜ ಅರಸು, ಮೌಲ್ಯಾಧಾರಿತ ರಾಜಕೀಯವನ್ನು ನಡೆಸಿ ಜಾತ್ಯತೀತವಾಗಿ ಹಲವು ನಾಯಕರನ್ನು ಬೆಳೆಸಿದ ರಾಮಕೃಷ್ಣ ಹೆಗಡೆಯವರು, ಐಟಿಬಿಟಿಯನ್ನು ಬೆಂಗಳೂರಿಗೆ ತಂದ ಎಸ್. ಎಮ್. ಕೃಷ್ಣ ಅವರನ್ನು ನೆನಪಿಸಿಕೊಳ್ಳುತ್ತಾ ಎಸ್. ಎಮ್. ಕೃಷ್ಣರ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಆಗಿರುವದು ಅವರ ಸೋಲಿಗೂ ಕಾರಣವಾಯಿತೆನ್ನುವ ವಿಶ್ಲೇಷಣೆ ವಾಸ್ತವವೂ ಹೌದು. ಬಂಗಾರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನೆಲ್ಲ ನೆನಪಿಸಿಕೊಳ್ಳುವ  ಮತ್ತು ಅವರ ಏಳುಬೀಳುಗಳನ್ನು ಕೆಲವೇ ಶಬ್ದಗಳಲ್ಲಿ ಹಿಡಿದಿಟ್ಟುಕೊಟ್ಟಿದ್ದಾರೆ. ಪಕ್ಷದ ಸಿದ್ಧಾಂತಕ್ಕಿಂತಲೂ ವೈಯಕ್ತಿಕವಾದ ಇಚ್ಛಾಶಕ್ತಿಯಿಂದ ಮಕ್ಕಳಿಗೆ ಸೈಕಲ್, ಕೈಗಾರಿಕೆಗಳಿಗೆ  ಮೂಲಸೌಕರ್ಯ ಒದಗಿಸಿಕೊಟ್ಟಿರುವದು, ಪ್ರತ್ಯೇಕ ಕೃಷಿ ಬಜೆಟ್, ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಮತ್ತು ಎರಡನೇಯ ಹಂತದ ನಾಯಕತ್ವವನ್ನು ಬೆಳೆಸಿದ ಯಡಿಯೂರಪ್ಪನವರನ್ನು ಬಹುಮುಖ್ಯವಾಗಿ ನೆನಪಿಸಿಕೊಳ್ಳುತ್ತಾರೆ. ಲೇಖನದ ಆಶಯವೆನ್ನುವದು ಇಲ್ಲಿ ಬೊಮ್ಮಾಯಿಯವರಿಗೆ ಈ ರಾಜ್ಯವನ್ನು ಆಳಿದ  ಪೂರ್ವದ ಮುಖ್ಯಮಂತ್ರಿಗಳ SWOT Analysis–ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಬೆದರಿಕೆಗಳನ್ನು ಅವರವರಿಗೆ ಒದಗಿದ ಪರಿಯನ್ನು ನೆನಪಿಸುವುದಾಗಿದೆ. ನಾಯಕನಾದವ ದಿಟ್ಟನಾಗಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಇಲ್ಲವಾದರೆ ಆತ ಕಾಲಗರ್ಭದಲ್ಲಿ ಸೇರಿಹೋಗುತ್ತಾನೆ ಎನ್ನುವದರ ಮೂಲಕ ಪಕ್ಷದ ಅಡಿಗಟ್ಟಿನಲ್ಲಿ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ; ಮತದಾರ ಪ್ರಭು ತಾನೇ ತಾನಾಗಿ ಒಲಿಯುತ್ತಾನೆ ಎನ್ನುವದನ್ನು ಸೂಚಿಸಿದ್ದಾರೆ. ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಗುಂಡುರಾಯರು ಇಲೆಕ್ಷನ್ನಿನಲ್ಲಿ ಸೋತಾಗ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ಗುಂಡುರಾಯರ ಏಳು ಬೀಳುಗಳ ಕುರಿತು ಮನಮುಟ್ಟುವ ರೀತಿಯಲ್ಲಿ ಬರೆದಿರುವದು ಈ ಸಂದರ್ಭದಲ್ಲಿ ನೆನಪಿಗೆ ಬಂತು. ಗುಂಡುರಾಯರ ಕಟು ಟೀಕಾಕಾರರಾಗಿದ್ದ ಲಂಕೇಶ ಈ ಲೇಖನದಲ್ಲಿ ಬಳಸಿರುವ ಭಾಷೆ ಮತ್ತು ವಿಷಯ ಇಂದಿಗೂ ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸುವವರಿಗೆ ಒಂದು ಮಹತ್ವದ ಪಾಠವಾಗಿರುತ್ತದೆ. ನಾಯಕನಾದವನಿಗೆ ತಾನು ಹೇಗಿರಬೇಕಿತ್ತು, ಹೇಗಿದ್ದೆ ಎನ್ನುವದರ ನಿರ್ದಾಕ್ಷಿಣ್ಯ ಮತ್ತು ನಿರ್ಭಾವುಕತ್ವದಿಂದ ಕೂಡಿದ ಲೇಖನವಾದರೆ ಈ ಲೇಖನ ಬೊಮ್ಮಾಯಿಯವರಿಗೆ ಅಂತಹ ಸಂದರ್ಭದಲ್ಲಿ ಅಳುವದಕ್ಕಿಂತ ಈಗಲೇ ಜಾಗ್ರತರಾಗಿ ನಾಯಕರಾಗಿ ಎನ್ನುವ ಬಹುಮುಖ್ಯ ಸಂದೇಶವಿದೆ. ಇಂತಹ ಲೇಖನವನ್ನು ನಾಯಕರುಗಳು ಯಾವತ್ತಿಗೂ ನೆನಪಿನಲ್ಲಿಟ್ಟಿಕೊಳ್ಳಬೇಕು.

ಇದನ್ನೂ ಓದಿ | ವಿಸ್ತಾರ ಭಾಗ- 2 | ಹರಿವ ನದಿಗೆ ಸಾವಿರ ಕಾಲು | ಕಾಣದ್ದನ್ನೂ ಹೊಳೆಯಿಸುವ ಬರಹಗಳು | ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

ಕೋಣೆಮನೆಯವರ ಲೇಖನಗಳಲ್ಲಿ ಬಿಜೆಪಿಗೆ ಒತ್ತು ಹೆಚ್ಚಿದೆ ಎನ್ನುವದನ್ನು ಗಮನಿಸಬಹುದಾದರೂ ರಾಜಕೀಯ ಅಂಕಣವೆನ್ನುವದು ಯಾವತ್ತಿಗೂ ವರ್ತಮಾನ ಕಾಲವನ್ನು ಉದ್ದೇಶಿಸಿ ಇರುತ್ತದೆ ಎನ್ನುವದನ್ನು ಮರೆಯಲಾಗದು. ಈ ದೇಶದಲ್ಲಿ ಬಿಜೆಪಿಯ ಪರ್ವ ರಾಮ ಮಂದಿರದ ರಥಯಾತ್ರೆಯ ಹೊತ್ತಿಗೇ ಆಗಿಹೋಗಿದೆ. ಕೇವಲ ಎರಡು ಸ್ಥಾನಗಳಿಂದ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವನ್ನು ಅದರ ಕಟು ಟೀಕಾಕಾರರೂ ಪ್ರಧಾನವಾಗಿಯೇ ಗಮನಿಸಬೇಕಾಗುತ್ತದೆ. ಬಿಜೆಪಿ ಕೋಣೆಮನೆಯವರಿಗೆ ಆಪ್ತವಾಗಿರುವದು  ಹೌದಾದರೂ ಅವರ ಪತ್ರಿಕಾಧರ್ಮಕ್ಕೆ ಈ ಮೋಹ ಅಡ್ಡ ಬಂದಿಲ್ಲ. ಹೇಳಬೇಕಾದ ಅಂಶಗಳನ್ನು ಯಾವ ಮುಲಾಜಿಲ್ಲದೇ ಹೇಳಿದ್ದಾರೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ತಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಿಸಲು ಅವಸರದ ಕುರಿತು ಅವರಿಗೆ ಅಸಮಾಧಾನವಿರುವದನ್ನು ಗಮನಿಸಬಹುದಾಗಿದೆ.

ಇಲ್ಲೆಲ್ಲ ಅವರು ಬಿಜೆಪಿಯ ಕಿವಿ ಹಿಂಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಕಿವಿಯ ಚರ್ಮ ಸ್ವಲ್ಪ ದಪ್ಪವಾಗಿಬಿಟ್ಟಿದೆ ಎನ್ನುವ ಅನಿಸಿಕೆಯೂ ಅವರ ಬರಹದಲ್ಲಿ ಧಾರಾಳವಾಗಿ ಕಾಣಬಹುದಾಗಿದೆ. ಸಾಂಸ್ಕೃತಿಕ ಅರಿವಿನಿಂದಲೇ ಪಕ್ಷಗಳ ಸಮಸ್ಯೆಗೆ ಪರಿಹಾರ ಎನ್ನುವ ಲೇಖನದಲ್ಲಿ ಇದನ್ನು ಕಾಣಬಹುದಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಹೇಳಿದ ನೀತಿಪಾಠ. ಶತಮಾನೋತ್ತರ ಇತಿಹಾಸವಿರುವ ಕಾಂಗ್ರೆಸ್ಸಿಗೆ ತನ್ನ ಇತಿಹಾಸ ಮತ್ತು ತಾನು ಈ ದೇಶಕ್ಕೊಂದು  ಅಸ್ಮಿತೆಯನ್ನು ಸಮಗ್ರವಾಗಿ ಕಟ್ಟಿಕೊಟ್ಟ ಮಹತ್ವದ ಅರಿವಿಲ್ಲ ಎನ್ನುವದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಉರಿವ ಮನೆಯಲ್ಲಿ ಗಳ ಹಿರಿಯುವವರು ಎನ್ನುವ ನೀತಿಯಿಂದ ಕಾಂಗ್ರೆಸ್ಸು ಹೊರಬರಬೇಕಾಗಿದೆ. ಅದೇ ರೀತಿ ವೈಚಾರಿಕ ಹಿನ್ನೆಲೆಯ ಗೈರು ಹಾಜರಿ ಇಂದಿನ ಬಿಜೆಪಿಗಿದೆ ಎನ್ನುತ್ತಾರೆ. ಇಲ್ಲಿ ವೈಚಾರಿಕ ಹಿನ್ನೆಲೆಯ ಕೊರತೆ ಎನ್ನುವದಕ್ಕಿಂತ ಗೈರುಹಾಜರಿ ಎನ್ನುವದನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ತನ್ನ ಇತಿಹಾಸ ಗೊತ್ತಿರದ ಯಾವುದೇ ಸಂಸ್ಥೆಯಾಗಲೀ, ವ್ಯಕ್ತಿಯಾಗಲೀ ಹೊಸ ಇತಿಹಾಸವನ್ನು ರಚಿಸಲಾರ. ನೋಟಾ ಎನ್ನುವ ಆಲೋಚನೆಯೇ  ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಬ್ರಿಟಿಷ್‌ ಮಾದರಿಯ ನಮ್ಮ ಪ್ರಜಾಪ್ರಭುತ್ವದ ಮೂಲ ಲಕ್ಷಣವೇ Choosing between the best available alternative. ಇಲ್ಲಿ ಅತ್ಯುತ್ತಮ ಆಯ್ಕೆಗಿಂತ ಇರುವವರಲ್ಲಿ ಉತ್ತಮರು ಆಳಬೇಕಾಗಿದೆ. ನಕ್ಸಲ್ ಪ್ರಭಾವದಲ್ಲಿನ ಪ್ರದೇಶದಲ್ಲಿಯೇ ಹೆಚ್ಚಿನ ನೋಟಾ ಬಿದ್ದಿರುವದನ್ನು ಗಮನಿಸಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ ತುಂಬಾ ಗಮನಾರ್ಹವೂ ಹೌದು. ಸದ್ಯದ ವರ್ತಮಾನದಲ್ಲಿ ಸಾಗುವ ರಾಷ್ಟ್ರೀಯ ಪಕ್ಷಗಳ ಧಾಟಿಯನ್ನು ಗಮನಿಸಿದರೆ ಬಿಜೆಪಿ ಭವಿಷ್ಯದಲ್ಲಿ ಟೊಳ್ಳಾಗುವ ಲಕ್ಷಣಗಳನ್ನು ಸರಿಯಾಗಿಯೇ ಅವರು ಗುರುತಿಸಿದ್ದಾರೆ.

ರಾಮ ಮನೋಹರ ಲೋಹಿಯಾ ದೇವರನ್ನು ನಂಬುತ್ತಿರಲಿಲ್ಲ. ಆದರೆ ಅವರು ಜನಸಾಮಾನ್ಯರು ದೇವಸ್ಥಾನಗಳಿಗೆ ಹೋಗಿ ಪಡೆಯುವ ಶಾಂತಿಯನ್ನು ತಾನು ಬೇರ್ಯಾವ ರೀತಿಯಿಂದಲೂ ಕೊಡಲಾರೆ ಎಂದಿದ್ದರು. ದೇವರು ಎನ್ನುವ ಪದಗಳಿಗೆ ಸಂಸ್ಕೃತಿ ಎನ್ನುವದನ್ನು ಬದಲಾಯಿಸಿ ಎರಡೂ ರಾಜಕೀಯ ಪಕ್ಷಗಳಿಗೆ ನೀಡಿದ ಕರೆಯನ್ನು ಆ ಪಕ್ಷಗಳು ಇನ್ನೂ ಗಮನಿಸಿಲ್ಲ; ಬಹುಶಃ ಗಮನಿಸಲಾರರದಷ್ಟು ಮೌಢ್ಯ ಅವರಲ್ಲಿ ತುಂಬಿಕೊಂಡಿದೆ. ಉಡುಪಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಹಿಜಾಬ್ ಎನ್ನುವದು ಇಂದು ಈ ಪಾಟಿ ಬೆಳೆದು ಸುಪ್ರೀಮ್ ಕೋರ್ಟಿನಲ್ಲಿಯೂ ಇನ್ನೂ ಪ್ರಶ್ನೆಯಾಗಿರುವದು ಅಪಕ್ವ ವ್ಯಕ್ತಿಗಳ ಹೊಣೆಗೇಡಿತನದಿಂದ ಎನ್ನುವದನ್ನು ಬರೆದ ಲೇಖನವನ್ನು ಅಡಳಿತದಲ್ಲಿರುವ ಬಿಜೆಪಿ ನಾಯಕರು ಗಮನಿಸಬೇಕಾಗಿತ್ತು. ಅದೇ‌ ರೀತಿ ಜಾಗತಿಕ ಕ್ಷಿತಿಜದಲ್ಲಿ ಮೂಡಿರುವ ವಿಸ್ತರಣಾ ವಾದದ ಕುರಿತು “ಮತ್ತೆ ವಿಸ್ತರಣಾವಾದದ ಸುಳಿಯಲ್ಲಿ ವಿಶ್ವ ಸಮುದಾಯ” ಹಾಗೂ “ಭಾರತ ತನ್ನ ಕ್ಷಾತ್ರ ಗುಣವನ್ನು ತೋರಿಸಲು ಇದು ಸಕಾಲ”  ಎನ್ನುವ ಲೇಖನದಲ್ಲಿದೆ. ಇವರು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ ಅನೇಕ ಸಂಗತಿಗಳನ್ನು ಓದುವಾಗ ಅರುಣ್ ಶೌರಿ ಅವರ “Secular Agenda” ಎನ್ನುವ ಪುಸ್ತಕದ ನೆನಪಾಗುತ್ತದೆ. ನಿಷ್ಠುರವಾದ ಸತ್ಯ ಯಾರಿಗೂ ಇಷ್ಟವಲ್ಲ. ಆ ಪುಸ್ತಕದ ಮೊದಲನೆಯ ಭಾಗದಲ್ಲಿ ಅವರು One Nation ‌ ಎನ್ನುವಲ್ಲಿ ಭಾರತೀಯ ಇತಿಹಾಸವನ್ನು ಜಾಗತಿಕ ಇತಿಹಾಸದೊಂದಿಗೆ ಸಂಯೋಜಿಸಿರುವ ರೀತಿ ಮತ್ತು  matters of religion ಎನ್ನುವದನ್ನು ಸಂವಿಧಾನದ ಪರಿಚ್ಛೇದ 25, 26, 29 ಮತ್ತು 30ರಲ್ಲಿ ಅಸ್ಪಷ್ಟವಾಗಿ ವ್ಯಾಖ್ಯಾನಿಸಿರುವದನ್ನು ಭಾರತಾದ್ಯಂತ ಹೇಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿವೆ ಎನ್ನುವದನ್ನು ವಿವರಿಸುತ್ತಾರೆ. ಇಂತಹ ಸೂಕ್ಷ್ಮತೆ ಪತ್ರಿಕಾ ಸಂಪಾದಕನಿಗಿರಬೇಕಾಗಿರುವದು ಅತ್ಯಂತ ಆವಶ್ಯ. ವಿಸ್ತಾರ– 2ರ ಪ್ರತಿಯೊಂದೂ ಲೇಖನವೂ  ಈ ಹಿನ್ನೆಲೆಯಲ್ಲಿ ಮಹತ್ವವನ್ನು ಪಡೆಯುವದು ಈ ಕಾರಣಗಳಿಂದಾಗಿದೆ.

ಇದನ್ನೂ ಓದಿ | ವಿಸ್ತಾರ ಭಾಗ- 1 | ಹೊಸ ತಿಳಿವಿನ ಬಾಗಿಲು | ನೈತಿಕ ಶುದ್ಧತೆಯ ಬರಹಗಳು; ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

ಮತ್ತೊಂದು ಲೇಖನವಾದ “ಸಂಸ್ಕೃತ ಎಂದರೆ ಕೆಲವರಿಗೆ ಯಾಕಿಷ್ಟು ಉರಿ?”  ಎನ್ನುವಲ್ಲಿ ಭಾಷಾಶಾಸ್ತ್ರಜ್ಞರೂ ಮತ್ತೊಮ್ಮೆ ತಾವು ತಮ್ಮ ಸುತ್ತ ಬೆಳೆಸಿಕೊಂಡ ಪದರುಗಳಿಂದ ಹೊರಬರುವಂತೆ ಸಂಸ್ಕೃತದ ಕುರಿತು ಗಮನ ಸೆಳೆದಿದ್ದಾರೆ. ಅಂಬೇಡ್ಕರ, ಪಂ. ನೆಹರೂರಿಂದ ಹಿಡಿದು ಪಾ.ವೆಂ ಆಚಾರ್ಯರವರೆಗಿನ ಅವಲೋಕನವನ್ನು ಮಾಡುವಾಗ ಪಾವೆಂರಿಗಿರುವ ಸಂಸ್ಕೃತದ ಭಾಷೆಯ ಅನುಮಾನದ ಕುರಿತು ಸರ್ ವಿಲಿಯಮ್ ಜೋನ್ಸ್ ಎನ್ನುವ ಬ್ರಿಟಿಷ್‌ ಭಾಷಾಶಾಸ್ತಜ್ಞ ನೀಡಿರುವ ಪರಿಹಾರದ ಕುರಿತು ಹೇಳಿರುತ್ತಾರೆ. ಇವರ ಲೇಖನದ ಹರಿವು ಇವರ ಅಧ್ಯಯನದ ವಿಸ್ತಾರವೂ ಹೌದು. ಸಂಸ್ಕೃತಿ ಮತ್ತು ಸಾಮಾಜಿಕ ಕಾಳಜಿಯ ಕುರಿತು ಬರೆಯುವಾಗ ಇವರು ತಮಗೆ ಅನಿಸಿದ ಸಂಗತಿಗಳನ್ನು ಇಲ್ಲಿನ ನೆಲದ ಸಂಸ್ಕೃತಿಗಳ ಉದಾತ್ತತೆಯ ಜೊತೆ ಸಮೀಕರಿಸಿ ಹೇಳಿದ್ದಾರೆ. ಹಾಗಾಗಿ ಇವರಿಗೆ ಭಾಷೆಯಾಗಿ ಕನ್ನಡ, ಸಂಸ್ಕೃತ ಹಾಗೂ ಹಿಂದಿ ಇವೆಲ್ಲವೂ ಈ ನೆಲದ ಭಾಗಗಳಾಗಿವೆ. ಸಂವಿಧಾನ ಕರ್ತೃಗಳೂ ಅದನ್ನೇ ಹೇಳಿದ್ದಾರೆ. ಆದರೆ ಈ ಎಲ್ಲ ಭಾರತೀಯ ಭಾಷೆಗಳನ್ನು ಉದ್ಯೋಗ ಎನ್ನುವ ನೆಪದಿಂದ ನುಂಗಿ ಬೆಳೆಯುತ್ತಿರುವ ಇಂಗ್ಲೀಷಿನ ಮೋಹದ ಕುರಿತು ತುಂಬಾ ಮಹತ್ವದ ಸಂಗತಿಗಳನ್ನು ಗಮನ ಸೆಳೆದಿದ್ದಾರೆ. ಗಾಂಧಿ ಮತ್ತು ಭಾರತೀಯತೆ ಒಂದನ್ನೊಂದು ಬಿಡಲಾರದ ನಂಟು. ಗಾಂಧಿ ಚಿಂತನೆ ಇವರ ಮೇಲೆ ಬೀರಿದ ಪ್ರಭಾವ ಸಮಗ್ರ ಲೇಖನದಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ. ಮಾದ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿ ಸಮುದಾಯದಿಂದ ಪ್ರತ್ಯೇಕವಾದ ಭಾಗವಲ್ಲ. ಆತ ನಾಗರಿಕರ ಅಗತ್ಯಗಳೊಂದಿಗೆ ಪರಸ್ಪರ ಅವಲಂಬಿತನಾಗಿರುತ್ತಾನೆ. ಆದರೆ ಆತನಿಗೆ ವಿಶಿಷ್ಟವಾದ ಹೊಣೆಗಾರಿಕೆಯಿರುತ್ತದೆ. ಗಿಲ್ ಥೆಲೆನ್ ಎನ್ನುವ ಪ್ರಕಾಶಕ ಅದನ್ನು Committed Observer ಎಂದು ಕರೆಯುತ್ತಾನೆ. ಈ ಅರ್ಪಣಾ ಮನೋಭಾವದ ವೀಕ್ಷಕಗುಣ ಪತ್ರಕರ್ತರಿಗೆ ಸತ್ಯವನ್ನು ಪರಿಶೀಲಿಸಲು ಸಹಕಾರಿಯಾಗಿಸುತ್ತದೆ.  ಸತ್ಯಗಳನ್ನು ಪರಿಶೀಲಿಸುವ ಮತ್ತು ಅದರ ಸಮಾಜಮುಖಿ ಗುಣಗಳ ಅವಲೋಕನ ಪತ್ರಕರ್ತನಾದವನ ಬಹುಮುಖ್ಯ ಕಾರ್ಯವಾಗಿವೆ. ಸತ್ಯ ಮತ್ತು ನಿರ್ಧಾರ ಇವೆರಡರ ನಡುವಿನ ಸೇತುವೆಯಾಗಿ ಪತ್ರಕರ್ತನ ವರದಿ ಅಥವಾ ಅಂಕಣಗಳು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಕೋಣೆಮನೆಯವರ ಅಂಕಣಗಳ “ವಿಸ್ತಾರ -2” ಓದಿದಾಗ ಹೊಣೆಯರಿತ ಸಂಪಾದಕನಾಗಿ ಅವರು ತಮ್ಮ ಹದವನ್ನು ಮೀರದೆ ಸತ್ಯವನ್ನು ಹೇಳಿದ್ದಾರೆ. ಆ ಕುರಿತು ನ್ಯಾಯ ತೀರ್ಮಾನವನ್ನು ಎಲ್ಲಿಯೂ ಹೇಳಿಲ್ಲ.

(ಲೇಖಕರು ಕತೆಗಾರ, ವಿಮರ್ಶಕ, ಯಕ್ಷಗಾನ ಅರ್ಥಧಾರಿ)

Exit mobile version