Site icon Vistara News

Britain PM | ಬ್ರಿಟನ್ ಪಿಎಂ ಯಾರು? ಸುನಕ್, ಬೋರಿಸ್, ಪೆನ್ನಿ- ಯಾರು ಹಿತವರು ಈ ಮೂವರೊಳಗೆ!

Britain PM

| ಮಲ್ಲಿಕಾರ್ಜುನ ತಿಪ್ಪಾರ ಬೆಂಗಳೂರು

ರಾಜಕೀಯ ಅಸ್ಥಿರತೆಯ ನಡುವೆ ಲಿಜ್ ಟ್ರಸ್ ಅವರು ಕೇವಲ 45 ದಿನಗಳಲ್ಲಿ ಬ್ರಿಟನ್ ಪ್ರಧಾನಿ (Britain PM) ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜತೆಗೆ, ಅತಿ ಕಡಿಮೆ ಅವಧಿಯ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. 1827ರಲ್ಲಿ ಜಾರ್ಜ್ ಕ್ಯಾನ್ನಿಂಗ್ ಅವರು 4 ತಿಂಗಳವರೆಗೆ ಪಿಎಂ ಆಗಿದ್ದರು. ಆ ದಾಖಲೆಯನ್ನು ಲಿಜ್ ಮುರಿದಿದ್ದಾರೆ. ಆದರೆ, ಬಹು ಮುಖ್ಯ ಪ್ರಶ್ನೆ ಏನೆಂದರೆ- ಬ್ರಿಟನ್ ಮುಂದಿನ ಪ್ರಧಾನಿ ಯಾರು? ಮೇಲ್ನೋಟಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರಿಗೆ ಪಿಎಂ ಹುದ್ದೆ ಒಲಿಯಲಿದೆ ಎಂದು ಹೇಳಬಹುದಾದರೂ, ಇಂಗ್ಲೆಂಡ್‌ನ ರಾಜಕೀಯ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ!

ಏನೇ ಆದರೂ ಅಕ್ಟೋಬರ್ 31ರೊಳಗೇ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯ ಟೋರಿ (ಕನ್ಸರ್ವೇಟಿವ್) ಪಕ್ಷಕ್ಕೆ ಇದೆ. ಬಹುತೇಕರು ರಿಷಿ ಸುನಕ್ ಅವರು ಪ್ರಧಾನಿಯಾಗಲಿದ್ದಾರೆಂದು ಭಾವಿಸಿದ್ದಾರೆ. ಆದರೆ, ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಪೆನ್ನಿ ಮೋರ್ಡಾಂಟ್ ಮತ್ತು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಸ್ಪರ್ಧೆಗಿಳಿಯುವ ಸಾಧ್ಯತೆ ಇರುವುದರಿಂದ ರಿಷಿ ಹಾದಿ ಅಷ್ಟು ಸುಲಭವಾಗಿಲ್ಲ.

ಮುಂದೇನು?
ಲಿಜ್ ಟ್ರಸ್ ಅವರು ಪ್ರಧಾನಿಗೆ ಹುದ್ದೆ ರಾಜೀನಾಮೆ ನೀಡುತ್ತಿದ್ದಂತೆ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆಗಳೂ ಚಾಲನೆಗೊಂಡಿವೆ. ಸೋಮವಾರ ಅಂದರೆ, ಅಕ್ಟೋಬರ್ 24ರ ಮಧ್ಯಾಹ್ನ 2 ಗಂಟೆಯವರೆಗೂ ಉಮೇದುವಾರಿಕೆಗೆ ಅವಕಾಶವಿರುತ್ತದೆ. ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಉಳಿಯಲು ಯಾವುದೇ ಅಭ್ಯರ್ಥಿಗೆ 100 ಸಂಸದರ ಬೆಂಬಲ ಅತ್ಯಗತ್ಯ. ಸಂಸತ್ತಿನಲ್ಲಿ ಒಟ್ಟು 357 ಕನ್ಸರ್ವೇಟಿವ್ ಸಂಸದರಿದ್ದಾರೆ. ಹಾಗಾಗಿ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶವಿದೆ.

ಅಕ್ಟೋಬರ್ 24ರಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಮೊದಲ ಮತದಾನ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆಗೆ ರಿಸಲ್ಟ್ ಕೂಡ ಘೋಷಿಸಲಾಗುತ್ತದೆ. ಒಂದು ವೇಳೆ, ಎರಡನೇ ಸುತ್ತಿನ ಮತದಾನ ಅಗತ್ಯವಾದರೆ ಸಂಜೆ, 6.30ಕ್ಕೆ ಮತ್ತೆ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ. ಈ ಹೊತ್ತಿಗೆ ಕೊನೆಯುಲ್ಲಿ ಉಳಿದ ಇಬ್ಬರು ಅಭ್ಯರ್ಥಿಗಳು ಯಾರು ಎಂಬುದು ಪಕ್ಷದ ಸದಸ್ಯರಿಗೆ ಗೊತ್ತಿರುತ್ತದೆ. ಈ ಮತದಾನ ರಿಸಲ್ಟ್ ಅದೇ ದಿನ ರಾತ್ರಿ 9 ಗಂಟೆಗೆ ಗೊತ್ತಾಗಲಿದೆ.

ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿರುವ ಇಬ್ಬರು ಅಭ್ಯರ್ಥಿಗಳ ನಡುವೆ ಒಪ್ಪಂದ ಮೂಲಕ ಆಯ್ಕೆ ಸಾಧ್ಯತೆಯೂ ಇರುತ್ತದೆ. ಒಂದೊಮ್ಮೆ ಡೀಲ್ ಸಾಧ್ಯವಾಗದೇ ಹೋದರೆ, ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸುರಕ್ಷಿತ ಆನ್‌ಲೈನ್ ವೋಟಿಂಗ್ ಸಿಸ್ಟಮ್ ಮೂಲಕ ಮತದಾನ ನಡೆಸಲಿದ್ದಾರೆ. ಈ ಮತದಾನವು ಅಕ್ಟೋಬರ್ 28ರಂದು ಬೆಳಗ್ಗೆ 11ಕ್ಕೆ ಅಂತ್ಯಗೊಳ್ಳುತ್ತದೆ. ಫಲಿತಾಂಶವನ್ನು ಅದೇ ದಿನ ಘೋಷಿಸಲಾಗುತ್ತದೆ. ಅಕ್ಟೋಬರ್ 28ಕ್ಕೆ ಬ್ರಿಟನ್ ಮುಂದಿನ ಪ್ರಧಾನಿ ಯಾರು ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ. ಬ್ರಿಟನ್ ಸರ್ಕಾರದಲ್ಲಿ ಅಕ್ಟೋಬರ್ 31ಕ್ಕೆ ಫೈನಾನ್ಷಿಯಲ್ ಸ್ಟೇಟ್ಮೆಂಟ್ ಸಲ್ಲಿಸಲಾಗುತ್ತದೆ. ಅದಕ್ಕೂ ಮುಂಚೆಯೇ ಪ್ರಧಾನಿಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಪಕ್ಷದ 1922 ಕಮೀಟಿ ಅಧ್ಯಕ್ಷ ಗ್ರಹಾಮ್ ಬ್ರಾಡಿ ಅವರು ನಿಯಮಗಳನ್ನು ರೂಪಿಸಿದ್ದಾರೆ.

ರಿಷಿ ಸುನಕ್ ಪ್ರಧಾನಿ ಆಗ್ತಾರ?
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ಕೂಡ ಆಗಿರುವ, ಮಾಜಿ ವಿತ್ತ ಸಚಿವ ರಿಷಿ ಸುನಕ್ ಅವರು ಬ್ರಿಟನ್ ಪಿಎಂ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಯಾಕೆಂದರೆ, ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡಿದಾಗಲೂ ರಿಷಿ ಸುನಕ್ ಅವರು ಪ್ರಧಾನಿಯಾಗುತ್ತಾರೆಂದು ಭಾವಿಸಲಾಗಿತ್ತು. ಅವರಿಗೆ ಸಂಸದರ ಬೆಂಬಲವೂ ವ್ಯಕ್ತವಾಗಿತ್ತು. ಆದರೆ, ಅಂತಿಮವಾಗಿ ಪ್ರಧಾನಿ ಸ್ಥಾನಕ್ಕೆ ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ಪ್ರಧಾನಿಯಾಗಿ ಆಯ್ಕೆಯಾದರು. ರಿಷಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಈಗ ಲಿಜ್ ಕೂಡ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ರಿಷಿ ಸುನಕ್, ರೆಡಿ ಫಾರ್ ರಿಷಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಟೋರಿ ಸಂಸದರೂ ಬೆಂಬಲವೂ ಅವರಿಗೆ ಇದೆ. ಆದರೆ, ಪಿಎಂ ರೇಸಿನಲ್ಲಿ ಅವರಿಗೆ ನಿಜವಾಗೂ ಗೆಲುವು ಸಿಗುವುದಾ? ಕಾದುನೋಡಬೇಕು. ಯಾಕೆಂದರೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಸ್ಪರ್ಧೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಪೆನ್ನಿ ಮೋರ್ಡಾಂಟ್
ಈ ಹಿಂದೆ ನಡೆದ ಬ್ರಿಟನ್ ಪಿಎಂ ಆಯ್ಕೆ ಸ್ಪರ್ಧೆಯಲ್ಲಿ ಪೆನ್ನಿ ಮೋರ್ಡಾಂಟ್ ಅವರು ಮೂರನೇ ಸ್ಥಾನದಲ್ಲಿದ್ದರು. ಅವರೂ ಈಗ ಪ್ರಧಾನಿ ಹುದ್ದೆಯ ಆಕಾಂಕ್ಷಿ. ಬ್ರಿಟನ್ ಸಾಮಾನ್ಯರ ಸಭೆಯ ನಾಯಕಿಯೂ ಆಗಿರುವ ಮೋರ್ಡಾಂಟ್ ಅವರು ರಿಷಿಗೆ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಕೊನೆ ಗಳಿಗೆಯಲ್ಲಿ ಟೋರಿ ಪಕ್ಷದ ಸದಸ್ಯರು ಪೆನ್ನಿ ಬೆನ್ನಿಗೆ ನಿಂತರೆ, ಮತ್ತೆ ರಿಷಿಗೆ ಸೋಲು ಖಚಿತ.

ಬೋರಿಸ್ ಜಾನ್ಸನ್
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಡಾರ್ಕ್ ಹಾರ್ಸ್ ಆಗುವ ಸಾಧ್ಯತೆಗಳಿವೆ. ಲಿಜ್ ಟ್ರಸ್ ರಾಜೀನಾಮೆ ನೀಡುವ ಸಂದರ್ಭದಲ್ಲಿ ಸೂಟಿಯಲ್ಲಿದ್ದ ಬೋರಿಸ್ ಲಂಡನ್‌ಗೆ ವಾಪಸ್ ಆಗಿದ್ದಾರೆ. ಮೂಲಗಳ ಪ್ರಕಾರ ಅವರು ಪಿಎಂ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆಗಳಿವೆ. ಹಗರಣಗಳಿಂದಾಗಿ ಅಧಿಕಾರವನ್ನು ಕಳೆದುಕೊಂಡಿದ್ದರೂ ಕನ್ಸರ್ವೇಟಿವ್ ಪಕ್ಷದಲ್ಲಿ ಈಗಲೂ ಹಿಡಿತವನ್ನು ಹೊಂದಿದ್ದಾರೆ. ಬಹಳಷ್ಟು ಸಂಸದರು ಬೋರಿಸ್ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ, ಮೋರ್ಡಾಂಟ್ ಹಾಗೂ ರಿಷಿಗೆ ಬೋರಿಸ್ ಪೆಟ್ಟುಕೊಡಬಹುದು. ಈ ಹಿಂದಿನ ಚುನಾವಣೆ ವೇಳೆ, ರಿಷಿಯನ್ನು ಬೆಂಬಲಿಸಿಬೇಡಿ ಎಂದು ಬಹಿರಂಗವಾಗಿಯೇ ಲಿಜ್ ತಮ್ಮ ಬೆಂಬಲ ನೀಡಿದ್ದರು ಬೋರಿಸ್.

ಯಾರು ಹಿತವರು ಮೂವರಲ್ಲಿ?
ಬೋರಿಸ್ ಜಾನ್ಸನ್ ಅವರು ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವುದನ್ನು ಇನ್ನೂ ಪಕ್ಕಾ ಆಗಿಲ್ಲ. ಹೀಗಿದ್ದಾಗ್ಯೂ, ತ್ರಿಕೋನ ಸ್ಪರ್ಧೆ ಏರ್ಪಡಬಹುದು ಎನ್ನಲಾಗುತ್ತಿದೆ. ಬೋರಿಸ್ ಜಾನ್ಸನ್ ಅವರು ಸಾಲು ಸಾಲು ಹಗರಣಗಳಿಂದಾಗಿಯೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಹಾಗೆಯೇ, ರಿಷಿ ಸುನಕ್ ಅವರನ್ನು ಒಂದು ಬಾರಿ ಕನ್ಸರ್ವೇಟಿವ್ ಪಕ್ಷದ ಮತದಾರರು ತಿರಸ್ಕರಿಸಿದ್ದಾರೆ. ಅಲ್ಲದೇ, ಅವರು ಪ್ರತಿಪಾದಿಸುವ ಆರ್ಥಿಕ ನೀತಿಗಳ ಬಗ್ಗೆ ಅಂಥ ಒಲವುಗಳಿಲ್ಲ. ಇವರಿಬ್ಬರಿಗೆ ಹೋಲಿಸಿದರೆ, ಪೆನ್ನಿ ಮೋರ್ಡಾಂಟ್ ಕ್ಲೀನ್ ಇಮೇಜ್ ಹೊಂದಿದ್ದಾರೆ. ಯಾವುದೇ ಬ್ಯಾಗೇಜುಗಳಿಲ್ಲ. ಹಾಗಾಗಿ, ಪೆನ್ನಿ ಕೂಡ ಪ್ರಧಾನಿಯಾಗಿ ಆಯ್ಕೆಯಾದರೆ ಅಚ್ಚರಿ ಇಲ್ಲ.

ರಿಷಿ ಸೋಲಲು ಕಾರಣಗಳೇ ಇಲ್ಲ
ಸದ್ಯದ ಪರಿಸ್ಥಿತಿ ನೋಡಿದರೆ, ರಿಷಿ ಸುನಕ್ ಅವರಿಗೆ ಸೋಲಲು ಕಾರಣಗಳೇ ಇಲ್ಲ. ತೊಂದರೆಯಲ್ಲಿ ಸಿಲುಕಿರುವ ಇಂಗ್ಲೆಂಡ್ ಆರ್ಥಿಕತೆಯನ್ನು ಮತ್ತೆ ಮೇಲಕ್ಕೆತ್ತಲು, ಗಟ್ಟಿ ನಿರ್ಧಾರ ಕೈಗೊಳ್ಳುವ ರಿಷಿಯಂಥ ನಾಯಕರ ನೇತೃತ್ವವು ಅಗತ್ಯವಿದೆ. ಲಿಜ್ ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಲಾಗಿದೆ ಎಂದು ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಹಾಗಾಗಿ, ಈ ಬಾರಿ ಅವರು ಸೋಲಲು ಕಾರಣಗಳೇ ಇಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಬಹುತೇಕ ಸಂಸದರು ಅವರ ಬಗ್ಗೆ ಒಲವು ಹೊಂದಿದ್ದಾರೆ. ಆದರೂ, ಸೋತರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ, ಪಶ್ಚಿಮ ರಾಷ್ಟ್ರಗಳು ಎಷ್ಟೇ ಮುಂದುವರಿದಿದ್ದರೂ ಬಣ್ಣದ ಆಧಾರದ ಮೇಲೆ ತಾರತಮ್ಯ ಅನುಸರಿಸುವ ನೀತಿಯಿಂದ ಇನ್ನೂ ಪೂರ್ತಿಯಾಗಿ ಹೊರ ಬಂದಿಲ್ಲ. ವರ್ಣಭೇದ ಅವರ ಮನಸ್ಸಿನಾಳದಲ್ಲಿದೆ. ಹಾಗಂತ, ಬ್ರಿಟನ್ ಪಿಎಂ ಆಯ್ಕೆಯಲ್ಲಿ ವರ್ಣಭೇದವು ಪ್ರಭಾವ ಬೀರಲಿದೆ ಎಂದು ನೇರವಾಗಿ ಹೇಳುವುದು ಅಪಕ್ವವಾಗಬಹುದು. ಕನ್ಸರ್ವೇಟಿವ್ ಪಕ್ಷದಲ್ಲಿ ನಾಯಕತ್ವವನ್ನು ಆಯ್ಕೆಯ ಮತದಾರ ಸಮೂಹವನ್ನು ವಿಶ್ಲೇಷಿಸಿದರೆ ಈ ಅನುಮಾನ ಕಾಡದೇ ಇರದು. ಪಕ್ಷದ ಹಳೆಯ ಸದಸ್ಯರನ್ನು ಪರಿಗಣಿಸಿದರೆ ವರ್ಣಭೇದ ಪ್ರಭಾವ ಮತ್ತೆ ಬೀರುವ ಸಾಧ್ಯತೆ ತಕ್ಕಮಟ್ಟಿಗಾದರೂ ಇದ್ದೇ ಇದೆ. ಬಿಳಿಯ ಅಲ್ಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾಗುವುದನ್ನು ಅವರಿಗೆ ಊಹಿಸಿಕೊಳ್ಳುವುದು ಕಷ್ಟವಾಗಬಹುದು! ಹಾಗಾಗಿ, ಮತ್ತೊಮ್ಮೆ ಸುನಕ್ ಸೋತರೂ ಅಚ್ಚರಿ ಇಲ್ಲ.

ಇದನ್ನೂ ಓದಿ | Liz Truss Resign | ಬ್ರಿಟನ್ ಪಿಎಂ ಸ್ಥಾನಕ್ಕೆ ಲಿಜ್ ರಾಜೀನಾಮೆ, 44 ದಿನದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದರು

Exit mobile version