Site icon Vistara News

ದೃಶ್ಯ ಕಾವ್ಯ | ಕಾಂತಾರ ಸಿನೆಮಾ ನನಗೇಕೆ ಇಷ್ಟವಾಯಿತು?

kantara bhootaradhane ದೈವಾರಾಧನೆ ಕೊರಗಜ್ಜನಿಗೆ ದೂರು

| ಡಾ.ಎಸ್‌.ಆರ್‌ ಲೀಲಾ

2016ರಲ್ಲಿ ರಾಷ್ಟ್ರೀಯ ಚಿತ್ರಪ್ರಶಸ್ತಿಗಳ ಆಯ್ಕೆಗಾಗಿ ದೆಹಲಿಯಲ್ಲಿ ಇಪ್ಪತ್ತೈದು ದಿನಗಳ ಕಾಲ ಇರಬೇಕಾಗಿತ್ತು. ದಿನಕ್ಕೆ ನಾಲ್ಕು-ಐದು ಚಿತ್ರಗಳನ್ನು ನೋಡುತ್ತಿದ್ದೆವು. ಭಾರತೀಯ ಭಾಷೆಗಳ ಎಲ್ಲ ಚಿತ್ರಗಳನ್ನೂ ವೀಕ್ಷಿಸುವ ಉತ್ತಮ ಅವಕಾಶವದು. ಹನ್ನೆರಡು ಜನ ಜ್ಯೂರಿಗಳಲ್ಲಿ ನಾನೂ ಒಬ್ಬಳು. ಒಂದೇ ದಿನ ಸುಮಾರು ನಾಲ್ಕೈದು ಮಲೆಯಾಳಿ ಸಿನೆಮಾಗಳನ್ನು ನೋಡಬೇಕಾಯಿತು. ವಿಷಯ ವೈವಿಧ್ಯ, ನಿರೂಪಣಾ ದೃಷ್ಟಿಯಿಂದ ವಿಭಿನ್ನವಾಗಿದ್ದು, ಉತ್ತಮ ಗುಣಮಟ್ಟವೂ ಇತ್ತು.

ಎಷ್ಟೊಂದು ಮಲೆಯಾಳಿ ಚಿತ್ರಗಳು ಎಂದಾಗ ಕೇರಳದಿಂದ ಬಂದಿದ್ದ ಒಬ್ಬ ಜ್ಯೂರಿ ಸದಸ್ಯ ʼಇವತ್ತು ಕೇರಳ ಚಲನ ಚಿತ್ರೋತ್ಸವ, Malayalam film festivalʼ ಅಂದರು. ಆತನ ದನಿಯಲ್ಲಿ ಸಂತೋಷ, ಹೆಮ್ಮೆ ಎರಡೂ ಮೇಳೈಸಿದ್ದವು. ಆ ವರ್ಷ ಕನ್ನಡದಲ್ಲಿ ಕೆಲವೇ ಕೆಲವು ರಾಷ್ಟ್ರೀಯ ಚಿತ್ರಪ್ರಶಸ್ತಿ ಮಟ್ಟಕ್ಕೆ ಬಂದಿದ್ದವು. ಅವುಗಳಲ್ಲಿ ಒಂದು ʼತಿಥಿ’ ಚಲನಚಿತ್ರ. ಜ್ಯೂರಿಗಳು ತಿಥಿ ಚಿತ್ರವನ್ನು ಅದರ ಸರಳತೆಗಾಗಿ, ವಿನೂತನತೆಗಾಗಿ ಮೆಚ್ಚಿಕೊಂಡರು. ಉಳಿದಂತೆ ಕನ್ನಡ ಸಿನೆಮಾಗಳು ತೀರ ಕಳಪೆಯಾಗಿದ್ದುವು. ಕೇರಳದವರು ನನ್ನನ್ನು ಕೇಳಿಯೇ ಬಿಟ್ಟರು. ʼಕನ್ನಡದಲ್ಲಿ ಹಿಂದೆಲ್ಲ ತುಂಬ ಉತ್ತಮ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಮಟ್ಟದವು ಬರುತ್ತಿದ್ದವು. ಈಗೇಕೆ ಹೀಗೆ?ʼ ಅಂದರು.

ಹೌದಲ್ಲ! ಪುಟ್ಟಣ್ಣ, ಬಿ. ವಿ. ಕಾರಂತರು, ಜಿ. ವಿ. ಅಯ್ಯರ್ ಮುಂತಾದ ಪ್ರತಿಭಾವಂತ ನಿರ್ದೇಶಕರ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದ್ದವು. ನಾನು ಚುಟುಕಾಗಿ ಹೇಳಿದ್ದೆ- ʼಹಿಂದೆ ಇದ್ದರು, ಈಗಿಲ್ಲದೆ ಇರಬಹುದು, ಮುಂದೆ ಬರುತ್ತಾರೆ, ಕಾಲಪ್ರವಾಹದಲ್ಲಿ ಎಲ್ಲ ಒಂದೇ ತರಹ ಇರುವುದಿಲ್ಲ’.

ಮೊನ್ನೆ ʼಕಾಂತಾರʼ ಚಿತ್ರ ನೋಡಿ ಬಂದ ಮೇಲೆ ನನ್ನ ಭವಿಷ್ಯವಾಣಿ ನಿಜವಾಗಿದ್ದಕ್ಕೆ ನಾನೇ ಸಾಕ್ಷಿಯಾದೆ. ಕಾಂತಾರ ಯಾವ ನಿಟ್ಟಿನಿಂದ ನೋಡಿದರೂ ಒಂದು ಅದ್ಭುತ ಸೃಷ್ಟಿಯೆ ಸರಿ. ಸಿನೆಮಾ ಅಂದರೆ ಸಾಮಾನ್ಯವಲ್ಲ. ಕಥೆ, ಚಿತ್ರಕಥೆ, ಅಭಿನಯ, ಸಿನೆಮಾಟೊಗ್ರಫಿ, ಲೋಕೇಶನ್ಸ್, ಹಿನ್ನೆಲೆ ಸಂಗೀತ ಎಲ್ಲಕ್ಕಿಂತ ಹೆಚ್ಚಾಗಿ ದಿಗ್‌ದರ್ಶನ- ಡೈರೆಕ್ಷನ್ ಹೀಗೆ ಅದರ ಯಶಸ್ಸಿಗೆ ಹತ್ತಾರು ಎಳೆಗಳು ಕೂಡಬೇಕು. ಕಾಂತಾರದಲ್ಲಿ ಇವೆಲ್ಲ ಸೊಗಸಾಗಿ ಕೂಡಿ ಬಂದಿವೆ.

ಜತೆಗೆ ಎಲ್ಲವನ್ನೂ ಮೀರಿದ ಅಥವಾ ಎಲ್ಲವನ್ನೂ ಒಗ್ಗೂಡಿಸುವ ಅಪೂರ್ವವಾದೊಂದು ಆಯಾಮವೂ ಕಾಂತಾರಕ್ಕಿದೆ. ಏನದು? ನೈಜತೆ, ಸ್ವಂತಿಕೆ, ಸರಳತೆ, ನೆಲದ ನಂಟು. ಕೃತ್ರಿಮತೆ ಅಥವಾ ಆರ್ಟಿಫಿಷಿಯಾಲಿಟಿ ಎಲ್ಲೂ ಇಲ್ಲ. ಹಾಡಿಯ ಜನರ ಕಥೆಯನ್ನು, ವ್ಯಥೆಯನ್ನು ಅವರದೆ ಭಾಷೆಯಲ್ಲಿ, ಅವರದೆ ವರಸೆಯಲ್ಲಿ ಹೇಳಿರುವ ಮನಮುಟ್ಟುವ ರೀತಿ, ಸರಳತೆಯ ಸೊಗಸು ಕಾಂತಾರದ ಕೀರ್ತಿಕಲಶವಾಗಿ ಮೆರೆಯುತ್ತಿದೆ. ಅದರ ಈ ಗುಣವೇ ಪ್ರೇಕ್ಷಕರ ಎದೆಯ ಕದ ತಟ್ಟುತ್ತಿದೆ.

ಇದೇ ಮಾತನ್ನೇ ಸ್ವಲ್ಪ ವಿವರವಾಗಿ ನೋಡೋಣ. ಅರಣ್ಯವೇ ಒಟ್ಟು ಈ ಚಿತ್ರದ ಹಿನ್ನೆಲೆ, ಮುನ್ನೆಲೆ. ಕಾಡಿನ ಜನರ ಬದುಕು ಅಷ್ಟೇನೂ ಸುಗಮವಲ್ಲ. ಕಾಂತಾರ ಎಂಬ ಹೆಸರೇ ಬಹು ಸೊಗಡಿನಿಂದ ಕೂಡಿದೆ ಹಾಗೂ ಅರ್ಥವತ್ತಾಗಿದೆ. ಕಾಂತಾರ ಎಂದರೆ ಸಂಸ್ಕೃತದಲ್ಲಿ ಎರಡರ್ಥಗಳಿವೆ. ಒಂದು, ದಟ್ಟ ಅರಣ್ಯ; ಇನ್ನೊಂದು, ದುರ್ಗಮವಾದ ದಾರಿ. ಈ ಎರಡೂ ಅರ್ಥಗಳಲ್ಲಿ ಈ ಹೆಸರು ಚಿತ್ರಕ್ಕೆ ಚೆನ್ನಾಗಿ ಒಪ್ಪುತ್ತದೆ.

ಇದರಲ್ಲಿ ಬರುವ ಕಂಬಳ, ಹುಂಜದ ಕಾಳಗ, ಕೋಲದ ವಿವರ, ಕಾಡಿನ ಪರಿಸರ, ಪೋಲೀಸರ ಉಪಟಳ ಎಲ್ಲವೂ ಸಹಜವಾದ ರೀತಿಯಲ್ಲಿ ಹಾಡಿಯ ಬದುಕಿನಲ್ಲಿ ಬೆರೆತು ಪಾಕವಾಗಿದೆ. ವೀಕ್ಷಕರೂ ಈ ಹಾಡಿಯ ಅವಿಭಾಜ್ಯ ಅಂಗವಾಗಿ ಅಲ್ಲಿನ ಎಲ್ಲ ವಿದ್ಯಮಾನಗಳನ್ನೂ ಅನುಭವಿಸಲು, ಸವಿಯಲು ತೊಡಗುತ್ತಾರೆ.

ಕಾಂತಾರದಲ್ಲಿ ಎಲ್ಲ ನೈಜ, ಸಹಜ ಅಂದೆವಲ್ಲ. ನಮ್ಮ ಭಾರತೀಯ ಕಾವ್ಯ ಪರಂಪರೆಯಲ್ಲಿ ಉಪಮೆ, ಉತ್ಪ್ರೇಕ್ಷೆ, ಅತಿಶಯೋಕ್ತಿ ಇತ್ಯಾದಿ ಅಲಂಕಾರಗಳ ಜತೆಗೆ ಸ್ವಭಾವೋಕ್ತಿಯೂ ಒಂದು. ಏನು ಹಾಗೆಂದರೆ? ಪ್ರತಿಯೊಂದು ವಸ್ತುವಿನಲ್ಲೂ ಒಂದು ಸೌಂದರ್ಯ, ಚೆಲುವು ಇರುತ್ತದೆ. ಅದನ್ನು ಆಡಂಬರವಿಲ್ಲದೆ ಸ್ವಾಭಾವಿಕವಾಗಿ ಹೇಳುವುದು; ಸಹೃದಯನಾದ ಪ್ರೇಕ್ಷಕ, ಕೇಳುಗ ಅದೇ ನೈಜತೆಯಿಂದ ಸ್ವೀಕರಿಸುವುದು. ಕಾಂತಾರದಲ್ಲಿನ ಶಿವ-ಲೀಲಾ ಪ್ರೇಮ ಪ್ರಕರಣವನ್ನು ಇದಕ್ಕೆ ನಿದರ್ಶನವಾಗಿ ಹೇಳಬಹುದು. ಈ ಪ್ರೇಮಿಗಳು ತಮ್ಮ ಸಹಜತೆಯಿಂದಲೆ, ಸರಳತೆಯಿಂದಲೆ ಆಕರ್ಷಿಸುತ್ತಾರೆ. ಪ್ರೀತಿ- ಪ್ರಣಯಗಳನ್ನು ಸಿನೆಮಾದಲ್ಲಿ ತುಂಬ ವಿಚಿತ್ರವಾಗಿ, ಒಮ್ಮೊಮ್ಮೆ ವಿಕೃತವಾಗಿ, ತೀರ ಅಸಹಜವಾಗಿ, ಬೇಕಿಲ್ಲದಷ್ಟು ವೈಭವ ಬೆರೆಸಿ ಅತಿಯಾಗಿ ತೋರಿಸುವುದು ವಾಡಿಕೆ. ತುಂಬ ಒಳ್ಳೆ ಸಿನೆಮಾಗಳಲ್ಲೂ ಕೂಡ ಇದೇ ರೀತಿ, ಉದಾಹರಣೆಗೆ ರೋಜಾ ಚಿತ್ರದ ವಧು ಪರೀಕ್ಷೆಯ ಸಂದರ್ಭದಲ್ಲಿ ಒಂದು ಹೊರೆ ಮುದುಕಿಯರು ಹುಡುಗಿಯ ಮುಂದೆ ಕುಣಿದು ಕುಪ್ಪಳಿಸುವ ದೃಶ್ಯ ಇದೆ. ಸಿನೆಮಾದ ಪ್ರಣಯ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಕನಸಿನ ಲೋಕದ ಅನಾವರಣ ಮಾಡಿರುತ್ತಾರೆ. ಪ್ರೀತಿ ಅಂಕುರಿಸಿತು ಎಂದರೆ ಸಾಕು ಲೊಕೇಶನ್, ವೇಷ-ಭೂಷಣಗಳೆಲ್ಲ ಬದಲಾಗಿ ಬಿಡುತ್ತವೆ. ಪ್ರಣಯಿಗಳ ಹಿನ್ನೆಲೆ, ಸ್ವಭಾವ, ಸ್ಥಿತಿ-ಪರಿಸ್ಥಿತಿಗಳೇನೇ ಇರಲಿ ಹಾಡು ಕುಣಿತಗಳು ಆರಂಭವಾಗುತ್ತವೆ.

ಇದನ್ನೂ ಓದಿ | Kantara Review | ದಟ್ಟ ಕಾಂತಾರದಲ್ಲಿ ಭೂತ-ಭವಿಷ್ಯಗಳ ಥ್ರಿಲ್ಲಿಂಗ್‌ ಮುಖಾಮುಖಿ

ಕಾಂತಾರದ ಶಿವ-ಲೀಲೆಯರು ನೆಲದಲ್ಲಿ ಇರ್ತಾರೆ, ಎಲ್ಲೂ ಹಾರಾಡುವುದಿಲ್ಲ. ಎದೆಯಲ್ಲಿ ಮಾತ್ರ ಸಂತಸದ ಹೊನಲು ಹರಿಯುತ್ತದೆ. ಲೀಲಾ ಗಾಡಿ ಮೇಲೆ ಕೂತರೆ, ಶಿವ ಅವಳು ಕಾಣುವಂತೆ ಕನ್ನಡಿ ಸರಿ ಮಾಡುತ್ತಾನೆ ಅಷ್ಟೇ ಸಾಕು. ಅವಳ ಮೊಗದಲ್ಲಿ ಮೂಡುವ ಚೆಲುವಾದ ನಗುವೆ ಅವನ ಎದೆಯಲ್ಲಿ ಒಲವಿನ ಚಿಲುಮೆ ಉಕ್ಕಿಸುತ್ತದೆ. ಇಬ್ಬರ ಎದೆಯಾಳದಲ್ಲಿ ಪ್ರೀತಿಯ ಸಂಚಾರವಾಗುತ್ತದೆ. ಲೀಲಾ ಮನೆಯಲ್ಲಿರಲಿ, ʼಕೈಲಾಸ’ಕ್ಕೆ ಹೋಗಿರಲಿ, ಅವಳ ಬಟ್ಟೆ ಬರೆ ಅದೇ. ಹಳ್ಳಿಯ ಪ್ರಣಯಿಗಳ ಎದೆಯಾಳದ ಸ್ನಿಗ್ಧ ಭಾವ ಮನಸೆಳೆಯುತ್ತದೆ.

ಒಟ್ಟಿನಲ್ಲಿ ಕಾಂತಾರದಲ್ಲಿ ಮಣ್ಣಿನ ವಾಸನೆ ದಟ್ಟವಾಗಿದೆ. ಹಳ್ಳಿಯವರಾಗಲಿ, ದಿಲ್ಲಿಯವರಾಗಲಿ, ಎಲ್ಲ ಜನರಿಗೆ ಮಣ್ಣಿನ ಜತೆ ಒಂದು ನಂಟು ಇದ್ದೇ ಇರುತ್ತದೆ. ಆ ನಂಟಿನ ಆಳ-ಅಗಲಗಳು ವ್ಯಾಖ್ಯಾನಕ್ಕೆ ಸಿಗೋಲ್ಲ, ವಿವರ ಹೇಳೋಕೆ ಬರೋಲ್ಲ. ನಮ್ಮೂರು, ನಮ್ಮ ಜನ, ನಮ್ಮ ಹಬ್ಬ- ನಮ್ಮ ಕಾಡು, ನಮ್ಮ ಹೊಳೆ ಇವೆಲ್ಲ ಹತ್ತಿರ ಆಗೋದು ಯಾಕೆ? ಅಲ್ಲಿ ನಮ್ಮ ಬೇರು ಇದೆ ಎಂಬ ಒಂದೇ ಕಾರಣಕ್ಕೆ. ಬೇರಿನಿಂದ ಬೇರಾಗಲು ಸಾಧ್ಯವೆ? ಅದಕ್ಕೆ ಕಾಂತಾರ ಎಲ್ಲ ಜನರಿಗೂ ಇಷ್ಟ ಆಗಿರೋದು.

ದೇವೇಂದ್ರ (ಅಚ್ಯುತಕುಮಾರ್) ಪಾತ್ರದ ಪರಿಕಲ್ಪನೆಯಲ್ಲಿ ಒಂದು ಸಂಕೇತ ಕಾಣುತ್ತದೆ. ಇವನ ಮನಸ್ಸು ಅದೆಷ್ಟು ಕಪ್ಪಿಟ್ಟಿದೆಯೋ ಅವನು ಧರಿಸಿರುವ ಬಟ್ಟೆ ಅದಕ್ಕೆ ವಿರುದ್ಧ! ಶ್ವೇತ, ಶುಭ್ರ! ಒಮ್ಮೆ ಮಾತ್ರ ಅವನು ಕಪ್ಪು ಕನ್ನಡಕ ತೊಡುತ್ತಾನೆ. ಉಳಿದಂತೆ ಬಿಳಿ ಅವನನ್ನು ತಬ್ಬಿರುತ್ತದೆ. ಕಡೆಯಲ್ಲಿ ಹಾಡಿಯ ಜನರನ್ನು ಹಿಂಸಿಸಲು, ಕೊಲ್ಲಲು ಅವನು ಭೂ ಬಿಡುವ ಖಳನ ಬಟ್ಟೆ ಕಪ್ಪು, ಖಳನ ಮನದಲ್ಲಿ ರಾಶಿ ಹಾಕಿದ್ದ ದುರ್ಭಾವನೆಗಳ ಕೊಳಕೇ ಎದ್ದು ಬಂದಂತೆ ಅವನ ಚೇಲಾ ಕಪ್ಪುಡುಗೆಯಲ್ಲಿ ದುಷ್ಟ ಕಾರ್ಯಕ್ಕಿಳಿಯುತ್ತಾನೆ. ಇದು ತುಂಬ ಧ್ವನಿಪೂರ್ಣವಾಗಿದೆ. ಸ್ವಚ್ಛತೆಯ, ಪ್ರಾಮಾಣಿಕತೆಯ ಸೋಗು ಹಾಕುವವನ ಒಳಗು ಅದೆಷ್ಟು ಕಪ್ಪಿಟ್ಟಿದೆ ಎಂಬುದನ್ನು ಅರ್ಥವತ್ತಾಗಿ ತೋರಿಸಿದೆ.

ಇದನ್ನೂ ಓದಿ | Kantara Movie | ಹೊರ ರಾಜ್ಯಗಳಲ್ಲೂ ಕನ್ನಡಿಗರ ಕಾಂತಾರ ಹವಾ ಜೋರು!

ಕಡೆಯಲ್ಲಿ ಶಿವನ ಮೈ ಮೇಲೆ ದೈವವೆ ಬಂದು ದುಷ್ಪ ವಿನಾಶಕ್ಕೆ ಕೈ ಹಾಕುವ ದೃಶ್ಯವಂತೂ ಅತ್ಯಂತ ನೈಜವಾಗಿದೆ. ಬಲವಾದ ದುಷ್ಟ ಶಕ್ತಿಯನ್ನು ಹತ್ತಿಕ್ಕಲು ಪ್ರಕೃತಿ, ಮನುಷ್ಯ, ದೈವ ಎಲ್ಲ ಒಂದಾದರೆ ಮಾತ್ರ ಸಾಧ್ಯವೆಂಬ ಸಂದೇಶವು ಹೊಮ್ಮುತ್ತದೆ. ದೈವ ಎಲ್ಲರ ಕೈ ಹಿಡಿದು ಕಾಪಿಡುವ ದೃಶ್ಯವಂತೂ ಭರವಸೆ ನೀಡುವ ನೆಮ್ಮದಿಯ ಭಾವವನ್ನು ತುಂಬುತ್ತದೆ. ಸಾಧಾರಣ ಮನುಷ್ಯನ ಭಾವ-ಬಂಧಗಳ, ದುಷ್ಟ ಪ್ರವೃತ್ತಿಗಳ ಚಿತ್ತಾಕರ್ಷಕ ದರ್ಶನ-
ಪ್ರದರ್ಶನಗಳ ಮೋಹಕ ಚಿತ್ರ ಕಾಂತಾರ.

(ಲೇಖಕರು ವಿಧಾನ ಪರಿಷತ್‌ ಮಾಜಿ ಸದಸ್ಯರು, ಅಂಕಣಕಾರರು)

Exit mobile version