Site icon Vistara News

World Social Media Day : ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಹೇಗೆ ಅಪಾಯಕಾರಿ?

World Social Media Day

| ಸುಪ್ರೀತಾ ಶಾಸ್ತ್ರೀ ವಾಷಿಂಗ್ಟನ್, ಅಮೆರಿಕ
ಆಹಾರ, ವಸತಿ , ಬಟ್ಟೆ ಮನುಷ್ಯನ ಅತ್ಯಾವಶಕಗಳ ಜೊತೆಗೆ ಇಂಟರ್ನೆಟ್ (Internet) ಅಥವಾ ಅಂತರ್ಜಾಲ ಹೊಸ ಸೇರ್ಪಡೆಗೊಂಡಿದೆಯೆಂದು ಸುಲಭವಾಗಿ ಹೇಳಬಹುದು. ಏಕೆಂದರೆ ಮಕ್ಕಳಿಂದ ಮುದುಕರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ (Mobile) ರಾರಾಜಿಸುತ್ತಿದೆ. ಬುದ್ಧ ಹೇಳಿದ ಸಾವಿಲ್ಲದ ಮನೆ ಇಲ್ಲದಂತೆ ಈಗ ಎಲ್ಲರೂ ಅಂತರ್ಜಾಲಕ್ಕೆ ತಲೆಬಾಗಿದ್ದಾರೆ! ಈ ಶತಮಾನದ ಕೊಡುಗೆಯಾದ ಅಂತರ್ಜಾಲದ ಮಹಿಮೆಗೆ ಮನಸೋಲದವರಿಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳಾದ (Social Media) ವಾಟ್ಸಾಪ್ , ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಕ್ಲಬ್ ಹೌಸ್ ಮುಂತಾದ ಜಾಲತಾಣಗಳು ಮನುಷ್ಯರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಇದರ ಅರಿವು ಮೂಡಿಸಲು ವಿಶ್ವದಾದ್ಯಂತ ಜೂನ್ 30ರಂದು, ‘ವಿಶ್ವ ಸಾಮಾಜಿಕ ಜಾಲತಾಣಗಳ ದಿನ’ವನ್ನಾಗಿ (World Social Media Day) ಆಚರಿಸಲಾಗುತ್ತದೆ. ಇಂಟರ್ನೆಟ್ ಒಂದು ಅದ್ಭುತ ಪ್ರಪಂಚ. ಇಲ್ಲಿ ನಾವು ಹುಡುಕಿದ್ದು ಸಿಗುವುದಿಲ್ಲ ಎಂಬ ಮಾತೇ ಇಲ್ಲ. ಸಾಮಾಜಿಕ ಜಾಲಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿ ಮಾಡಿಕೊಟ್ಟಿದೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ನಮ್ಮ ಸ್ನೇಹಿತರನ್ನಾಗಿಸಿಕೊಂಡು ನಮ್ಮಲ್ಲಿರುವ ಸಂವಹನ ಸಾಮರ್ಥ್ಯ ಹಾಗೂ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು, ಅಭಿಪ್ರಾಯ ಹಂಚಿಕೊಳ್ಳಬಹುದು. ಹೊಸದನ್ನು, ಆಸಕ್ತ ವಿಷಯಗಳನ್ನು ವಿಡಿಯೋಗಳ ಮೂಲಕ ಕಲಿಯಬಹುದು.

ಸಾಮಾಜಿಕವಾಗಿ ಎಷ್ಟೇ ದೂರವಿದ್ದರೂ ಎಲ್ಲರೊಂದಿಗೆ ಸಂಪರ್ಕದಲ್ಲಿ ಇರಲು ಸಹಾಯಮಾಡುತ್ತದೆ. ಉದ್ಯೋಗ ಪಡೆಯಲೂ ನೆರವಾಗುತ್ತದೆ. ಇವೆಲ್ಲ ಇದರ ಒಳಿತಾದರೆ, ಹೇಗೆ ಬಳಸಬೇಕೆಂದು ತಿಳಿಯದೇ ಅಥವಾ ಅತೀ ಬಳಕೆಯಿಂದ ಜನರು ವ್ಯಸನಿಗಳಾಗುತ್ತಿದ್ದಾರೆ ಎಂಬುದೂ ಕಟುಸತ್ಯ. ಇದರಲ್ಲಿ ಖಾತೆ ತೆಗೆಯಲು 15-18 ವರ್ಷ ನಿಗದಿಯಾಗಿದ್ದರೂ ತಪ್ಪು ವಯಸ್ಸನ್ನು ಹಾಕಿ ಅಕೌಂಟ್ ಮಾಡಿಕೊಳ್ಳುತ್ತಾರೆ. ಸಮಯ ಸಿಕ್ಕಾಗಲೆಲ್ಲಾ, ಸಮಯ ಮಾಡಿಕೊಂಡು ರೀಲ್ಸ್ ನೋಡುವುದು ಒಂದು ಚಟವಾಗಿದೆ.

ಮನೆಯವರಿಗಿಂತ ಹೊರಗಡೆಯವರ ಜೊತೆ ಸ್ನೇಹ -ಸಂಬಂಧ , ಖುಷಿಯಾಗಿ ಮಾರ್ಪಡುತ್ತಿದೆ. ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್ , ಕಾಮೆಂಟ್ಸ್ ಬರಬೇಕೆಂಬ ಹುಚ್ಚು ಹೆಚ್ಚಾಗಿದೆ. 10-12 ವರ್ಷದ ಮಕ್ಕಳು ಏನು ಬೇಕೆಂದು ಕೇಳಿದರೆ ಮೊಬೈಲ್ ಎನ್ನುತ್ತಿದ್ದಾರೆ. ಅದರಲ್ಲಿಯೇ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ. ಆಟ ಆಡಬೇಕಾದ ವಯಸ್ಸಿನಲ್ಲಿ ಹೊರಗೆ ಆಟವಾಡದೇ ಮೊಬೈಲ್ ಗೇಮ್ಸ್ ಇವರ ಗೆಳಯರಾಗಿ ಮಾರ್ಪಟ್ಟಿದೆ. ವಯಸ್ಸಿಗೆ ಮೀರಿದ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ತಮ್ಮ ಮುಗ್ದತೆಯನ್ನು ಬೇಗ ಕಳೆದುಕೊಳ್ಳುತ್ತಿದ್ದಾರೆ .

ಕೋವಿಡ್ ಆದಾಗಿನಿಂದ ಮೊಬೈಲ್ ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿದೆ. ಊಟ ಮಾಡುವಾಗ ಮೊಬೈಲ್, ಪಾಠ ಕೇಳುವಾಗ ಮೊಬೈಲ್, ಶೌಚಕ್ಕೆ ಹೋದಾಗ ಮೊಬೈಲ್, ಪ್ರಯಾಣ ಮಾಡುವಾಗ ಮೊಬೈಲ್ ಹೀಗೆ ಮೊಬೈಲ್ ಜೀವನದ ಅವಿಭಾಜ್ಯ ವಸ್ತುವಾಗಿದೆ . ಇಂದು ಹುಟ್ಟಿದ ಇನ್ನೂ ಒಂದು ವರ್ಷ ತುಂಬದ ಮಕ್ಕಳಿಗೂ ಮೊಬೈಲ್ / ಕಾರ್ಟೂನ್ ಇಲ್ಲದೇ ಆಹಾರ ಒಳಗೆ ಇಳಿಯುವುದಿಲ್ಲ. ಹರಿಹರೆಯದ ಮಕ್ಕಳು ಅದರಲ್ಲೇ ತಲ್ಲೀನರಾಗುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಎಚ್ಚರವಾಗಿರುವ ಸಮಯವೆಲ್ಲಾ ಕೈಯಲ್ಲಿ ಮೊಬೈಲ್ ಇಲ್ಲದೇ ಇರಲಾಗದು. ಆಕಸ್ಮಾತ್ ಮೊಬೈಲ್ ಚಾರ್ಜ್ ಆಗುತ್ತಿದ್ದರೆ ಕಿವಿಯಲ್ಲಿ ಇಯರ್ ಫೋನ್ / ಐ ಪಾಡ್ ಇರುತ್ತದೆ . ಊಟವಾದರೂ ಬಿಟ್ಟಾರು ಆದರೆ ಮೊಬೈಲ್ ಕೈಬಿಡುವುದಿಲ್ಲ. ಅವರದ್ದೇ ಲೋಕ , ಏನು ಮಾಡುತ್ತಾರೋ, ಎಷ್ಟು ಹೊತ್ತಿಗೆ ಮಲಗುತ್ತಾರೋ ಸ್ವತಃ ಪೋಷಕರಿಗೆ ತಿಳಿಯದು.

ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರಾಹೀನತೆಯ ಸಮಸ್ಯೆ , ಕಣ್ಣಿನ ಸಮಸ್ಯೆ ಇವರನ್ನು ಕಾಡುತ್ತಿದೆ . ಮನೆಗೆ ಬಂದ ಅತಿಥಿಗಳ ಜೊತೆ ಮಾತನಾಡುವುದಿರಲಿ, ಹೆತ್ತ ತಂದೆ ತಾಯಿಯನ್ನೇ ಮಾತನಾಡಿಸಲು ಇವರಿಗೆ ಸಮಯವಿಲ್ಲ. ಇಷ್ಟೇ ಅಲ್ಲದೇ ಪಬ್‌ಜಿ, ಗ್ರೂಪ್ ಗೇಮ್ಸ್‌ನಲ್ಲೂ ಇವರು ಪಂಟರು. ಸಭೆ ಸಮಾರಂಭ , ಕಾರ್ಯಕ್ರಮಗಳಿಗೆ ಬರುವುದಿಲ್ಲ. ಬಂದರೂ ಅಲ್ಲೂ ಮೊಬೈಲ್ ವ್ಯಸನಿಗಳನ್ನೂ ಎಲ್ಲಡೆ ಕಾಣಬಹುದು. ಇದರ ಪರಿಣಾಮ ನೀವೆಲ್ಲರೂ ನೋಡಿರುತ್ತೀರಾ, ಮದುವೆ ಮನೆಗಳು, ಗೃಹಪ್ರವೇಶ, ಉಪನಯನ ಕಾರ್ಯಕ್ರಮಕ್ಕೆ ಹೋದಾಗ ಆತ್ಮೀಯವಾಗಿ ಮಾತನಾಡಿಸುವುದಿಲ್ಲ. ಕೆಲಸವೇನೂ ಇಲ್ಲದಿದ್ದರೂ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಕಂಡಾಗ ಹಾಯ್, ನಡುವೆ ಸೆಲ್ಫಿ, ಹೋಗಬೇಕಾದರೆ ಬಾಯ್. ಇವಿಷ್ಟರಲ್ಲಿ ಕಾರ್ಯಕ್ರಮ ಮುಕ್ತಾಯವಾಗುತ್ತದೆ . ಅಲ್ಲಿಯೂ ಸೆಲ್ಫಿ ತೆಗೆದುಕೊಂಡು ಬೇಗ ಜಾಲತಾಣಗಳಿಗೆ, ಸ್ಟೇಟಸ್ ಅಪ್ಡೇಟ್ ಮಾಡುವ ತವಕ. ಹಬ್ಬ ಹರಿದಿನಗಳು ಬಂದಾಗ ಸ್ಟೇಟಸ್ ಹಾಕಲೇ ದೇವರಿಗೆ ಅತಿಯಾದ ಅಲಂಕಾರ. 15-20 ವರ್ಷಗಳಲ್ಲಿ ಎಷ್ಟು ಬದಲಾಗಿದೆ ಜಗತ್ತು , ಜನರು ಮತ್ತು ಇವರ ಮನಸ್ಥಿತಿಗಳು.

ಈ ಲೇಖನವನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದ ಅಂತರಂಗ; ಡೀಪ್ ವೆಬ್ ಮತ್ತು ಡಾರ್ಕ್ ವೆಬ್

ಹಾಗಾದರೆ ಡಿಜಿಟಲ್ ಯುಗದಲ್ಲಿ ಇವುಗಳಿಂದ ನಾವು ದೂರವಿರಲು ಸಾಧ್ಯವಿಲ್ಲವೇ? ಎಲ್ಲವೂ ಸಮಯೋಜಿತವಾಗಿದ್ದರೆ, ಇದರಿಂದ ಯಾವುದೇ ದುಷ್ಪರಿಣಾಮವಿಲ್ಲ. ಎಷ್ಟೇ ಡಿಜಿಟಲ್ ಕ್ರಾಂತಿಯಾದರೂ , ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಂದರೂ ಅವುಗಳ ಕಂಟ್ರೋಲ್ ಕೀ ಮನುಷ್ಯ ಮಾತ್ರ. ಭಾವನೆಗಳ ಸಂವಹನೆಗೆ ಎದುರಿಗೆ ಮನುಷ್ಯನೇ ಬೇಕು. ನಿಗದಿತ ಸಮಯ ಮೀಸಲಿಟ್ಟು ಉಪಯೋಗಿಸಿದಾಗ ಇದು ಮನೆರಂಜನೆಯಾಗುತ್ತದೆ. ನಮ್ಮ ನೆನಪುಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಶೇಖರಿಸುವ ಬದಲು ಮೆದುಳಲ್ಲಿ ಸಂಗ್ರಹಿಸಿದರೆ, ಆ ಕ್ಷಣಗಳನ್ನು ಅನುಭವಿಸದಾಗ ಮನಸ್ಸಿಗೂ ಮುದ ನೀಡುತ್ತದೆ. ಆದ್ದರಿಂದ ಜಾಲತಾಣಗಳನ್ನು ನಮ್ಮ ವಶದಲ್ಲೇ ಇಟ್ಟುಕೊಳ್ಳೋಣ . ನಾವು ಅದಕ್ಕೆ ಬಾಗುವುದು ಬೇಡ ಏನಂತೀರಿ ?

ಇನ್ನಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version