ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ದ ಪ್ರಕಟಿಸಿರುವ ಹೊಸ ಹಣಕಾಸು ನೀತಿ ಪ್ರಕಾರ ರೆಪೊ ದರ ಮತ್ತು ರಿವರ್ಸ್ ರೆಪೊ ದರಗಳು ಸದ್ಯ ಬದಲಾಗುತ್ತಿಲ್ಲ. ಆದರೆ ಹಣದುಬ್ಬರ ದರ ಹೆಚ್ಚಲಿದೆ. ಅಂದರೆ ನಿಮ್ಮ ಉಳಿತಾಯದ ಬಡ್ಡಿದರ ಮತ್ತು ಸಾಲದ ಬಡ್ಡಿದರಗಳ ಯಥಾಸ್ಥಿತಿಯಲ್ಲಿ ಉಳಿಯಲಿದೆ. ಗ್ರಾಹಕ ಮಾರುಕಟ್ಟೆಯಲ್ಲಿ ದರ ಏರಿಕೆ ಮುಂದುವರಿಯಲಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) 2022-23ರಲ್ಲಿ ನೈಜ ಜಿಡಿಪಿ (GDP) ಬೆಳವಣಿಗೆ ಶೇ. 7.2 ಇರಬಹುದು ಎಂದು ಅಂದಾಜಿಸಿದೆ. ಕಳೆದ ಬಾರಿ ಇದನ್ನು ಶೇ. 7.8 ಎಂದು ಅಂದಾಜಿಸಲಾಗಿತ್ತು. ಚಿಲ್ಲರೆ ಹಣದುಬ್ಬರ ಶೇ. 4.5 ಇರಬಹುದು ಎಂದು ಹಿಂದಿನ ಹಣಕಾಸು ನೀತಿಯಲ್ಲಿ ಅಂದಾಜಿಸಲಾಗಿತ್ತು. ಆದರೆ 2023ರಲ್ಲಿ ಅದು ಶೇ. 5.7ರಷ್ಟು ಇರಲಿದೆ ಎಂದು ಮರು ಅಂದಾಜಿಸಲಾಗಿದೆ. ರೆಪೊ ದರವನ್ನು ಶೇ. 4ರಲ್ಲಿ ಹಾಗೂ ರಿವರ್ಸ್ ರೆಪೊ ದರವನ್ನು ಶೇ. 3.5ರಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ.
ಏನಿದು ಹಣಕಾಸು ನೀತಿ?
ಆರ್‌ಬಿಐ ಹಣಕಾಸು ವರ್ಷದಲ್ಲಿ ಆರು ಬಾರಿ, ಮುಂದಿನ ಎರಡು ತಿಂಗಳಿಗೆ ಅನ್ವಯವಾಗುವಂತೆ ಹಣಕಾಸು ನೀತಿಯನ್ನು ಪ್ರಕಟಿಸುತ್ತದೆ. ಇದು ಈ ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿ. ಹಣಕಾಸು ಸಮಿತಿ(ಎಂಪಿಸಿ)ಯಲ್ಲಿ ಆರು ಮಂದಿ ತಜ್ಞರಿದ್ದು, ಆರ್‌ಬಿಐ ಗವರ್ನರ್ ಅದರ ಅಧ್ಯಕ್ಷರಾಗಿರುತ್ತಾರೆ.
Repo ದರಗಳು ಎಂದರೇನು?
ಇತರ ಬ್ಯಾಂಕ್‌ಗಳು ತನ್ನಿಂದ ಪಡೆಯುವ ಸಾಲದ ಹಣಕ್ಕೆ ಆರ್‌ಬಿಐ ವಿಧಿಸುವ ಬಡ್ಡಿ ದರಕ್ಕೆ ರೆಪೊ ದರ ಎಂದು ಹೆಸರು. ಹಾಗೇ ವಾಣಿಜ್ಯ ಬ್ಯಾಂಕ್‌ಗಳು ತನ್ನಲ್ಲಿ ಇಡುವ ಹಣಕ್ಕೆ ಆರ್‌ಬಿಐ ನೀಡುವ ಬಡ್ಡಿದರಕ್ಕೆ ರಿವರ್ಸ್ ರೆಪೊ ದರ ಎನ್ನುತ್ತಾರೆ. ಯಾವಾಗಲೂ ರಿವರ್ಸ್ ರೆಪೊಗಿಂತ ರೆಪೊ ದರಗಳು ಹೆಚ್ಚು ಇರುತ್ತವೆ.
ಇದು ಗ್ರಾಹಕರ ಮೇಲೆ ಏನು ಪರಿಣಾಮ ಬೀರುತ್ತದೆ?
ರೆಪೊ ದರಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ ಎಂದರೆ, ಬ್ಯಾಂಕ್‌ನಿಂದ ನೀವು ಪಡೆಯುವ ಸಾಲದ ಬಡ್ಡಿ ದರಗಳು ಬದಲಾಗುವುದಿಲ್ಲ ಎಂದರ್ಥ. ರಿವರ್ಸ್ ರೆಪೊ ದರಗಳು ಬದಲಾಗಿಲ್ಲ ಎಂದರೆ, ಬ್ಯಾಂಕ್‌ನಲ್ಲಿ ನೀವು ಇಟ್ಟಿರುವ ಉಳಿತಾಯದ ಹಣಕ್ಕೆ ಸಿಗುವ ಬಡ್ಡಿ ದರವೂ ಹಾಗೇ ಮುಂದುವರಿಯಲಿದೆ ಎಂದರ್ಥ. ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ವಾಣಿಜ್ಯ ವಹಿವಾಟು ನಡೆಯಬೇಕು ಎಂದು ಆರ್‌ಬಿಐ ಬಯಸಿದರೆ, ಅದು ಎರಡೂ ರೆಪೊ ದರಗಳನ್ನು ಇಳಿಸುತ್ತದೆ. ಇದರಿಂದ ಉದ್ಯಮಿಗಳು ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಪಡೆಯಲು ಸಾಧ್ಯವಾಗುತ್ತದೆ. ಹಾಗೇ ಉಳಿತಾಯಕ್ಕೆ ಸಿಗುವ ಬಡ್ಡಿಯ ಪ್ರಮಾಣವೂ ಕಡಿಮೆಯಾಗುವುದರಿಂದ, ಬ್ಯಾಂಕ್ ಉಳಿತಾಯದ ಕಡೆ ಜನರ ಗಮನ ಕಡಿಮೆಯಾಗಿ ಇತರ ಹೂಡಿಕೆಗಳ ಕಡೆಗೆ ಗಮನ ಹೆಚ್ಚುತ್ತದೆ. ಬಡ್ಡಿದರವನ್ನು ಹಾಗೇ ಮುಂದುವರಿಸುವುದು ಎಂದರೆ, ಆರ್ಥಿಕತೆಯ ಸುಸ್ಥಿರ, ಒಂದೇ ಬಗೆಯ ಬೆಳವಣಿಗೆಯನ್ನು ಆರ್‌ಬಿಐ ನಿರೀಕ್ಷಿಸುತ್ತಿದೆ ಎಂದರ್ಥ.
ಬೆಲೆಗಳು ಇನ್ನಷ್ಟು ಏರಿಕೆ
ಇದೇ ವೇಳೆಗೆ ಚಿಲ್ಲರೆ ಹಣದುಬ್ಬರದ (Inflation) ದರ ಶೇ. 4.5ರಿಂದ ಶೇ. 5.7ಕ್ಕೆ ಏರಬಹುದೆಂದು ಅಂದಾಜಿಸಲಾಗಿದೆ. ಹಣದುಬ್ಬರ ದರ ಎಂಬುದು ತಜ್ಞರ ಒಂದು ಅಂದಾಜು. ಇದರ ಪ್ರಕಾರ ಗ್ರಾಹಕ (Consumer) ಮಾರುಕಟ್ಟೆಯಲ್ಲಿ ಎಲ್ಲ ಸಾಮಗ್ರಿಗಳ ದರವೂ ಏರಲಿದೆ.
ಇದಕ್ಕೆ ಕಾರಣಗಳು ಹೀಗಿವೆ:
- ರಷ್ಯಾ- ಉಕ್ರೇನ್ (Ukraine) ಯುದ್ಧದಿಂದಾಗಿ ಯೂರೋಪ್‌ನ ಆರ್ಥಿಕತೆ ಅಸ್ತವ್ಯಸ್ತವಾಗಿದೆ.
- ರಷ್ಯಾದಿಂದ ಬರುವ ನೈಸರ್ಗಿಕ ಅನಿಲ ಪೂರೈಕೆ ಏರುಪೇರಾಗಿದೆ.
- ಒಪೆಕ್ ತೈಲ ರಾಷ್ಟ್ರಗಳು ಕಚ್ಚಾ ತೈಲದ ಬೆಲೆಯನ್ನು ಏರಿಸಿವೆ. ಆದರೆ ಅದೇ ಪ್ರಮಾಣದಲ್ಲಿ ಪೂರೈಕೆ ಏರಿಸಿಲ್ಲ.
- ದೇಶದ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣ 1000 ಕೋಟಿ ಡಾಲರ್‌ನಷ್ಟು ಇಳಿಕೆಯಾಗಿದೆ. ಇದು ಕಳೆದ 2 ವರ್ಷಗಳಲ್ಲಿ ಆದ ಕನಿಷ್ಠ ಇಳಿಕೆ.
ಹೆಚ್ಚಿನ ಓದಿಗಾಗಿ: ಸರಿಯಲಿಲ್ಲ ಕ್ರಿಪ್ಟೊ ಕರೆನ್ಸಿ ಮೇಲಿನ ತೂಗುಗತ್ತಿ!: ಕ್ರಿಪ್ಟೊ ಬಗ್ಗೆ ನಿಮಗೆಷ್ಟು ಗೊತ್ತು?