ನವ ದೆಹಲಿ: ಭಾರತವು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೇರಿದಂತೆ ಸಾರ್ವಜನಿಕ ತೈಲ ಕಂಪನಿಗಳಿಗೆ ಅಡುಗೆ ಅನಿಲ ಮಾರಾಟದಲ್ಲಿ ಉಂಟಾಗುತ್ತಿರುವ ನಷ್ಟದ ಭಾಗಶಃ ಪರಿಹಾರದ (Oil price ) ಸಲುವಾಗಿ ಸುಮಾರು 20,000 ಕೋಟಿ ರೂ.ಗಳ ನೆರವನ್ನು ನೀಡಲು ನಿರ್ಧರಿಸಿದೆ.
ತೈಲ ಸಚಿವಾಲಯವು 28,000 ಕೋಟಿ ರೂ. ಪರಿಹಾರವನ್ನು ನಿರೀಕ್ಷಿಸಿತ್ತು. ಆದರೆ ಹಣಕಾಸು ಸಚಿವಾಲಯವು 20,000 ಕೋಟಿ ರೂ. ಒದಗಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ವಲಯದ ಮೂರು ಅತಿ ದೊಡ್ಡ ತೈಲ ಕಂಪನಿಗಳು ಒಟ್ಟಾಗಿ ಭಾರತದ 90% ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ ಮತ್ತು ರಿಟೇಲ್ ದರದ ವ್ಯತ್ಯಾಸದಿಂದ ತ್ರೈಮಾಸಿಕ ಲೆಕ್ಕದಲ್ಲಿ ನಷ್ಟಕ್ಕೀಡಾಗಿವೆ.
ಸರ್ಕಾರ ಪ್ರಸಕ್ತ ಸಾಲಿನ ತೈಲ ಸಬ್ಸಿಡಿ ವೆಚ್ಚವಾಗಿ 5,800 ಕೋಟಿ ರೂ. ಮತ್ತು ರಸಗೊಬ್ಬರ ಸಬ್ಸಿಡಿಯಾಗಿ 1.05 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.
ಕಚ್ಚಾ ತೈಲ ದರ ಇಳಿದರೂ, ಪೆಟ್ರೋಲ್- ಡೀಸೆಲ್ ದರ ಯಥಾಸ್ಥಿತಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಕಳೆದ ಏಳು ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್‌ನ ರಿಟೇಲ್ ದರಗಳಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ ಎಂದು ವರದಿಯಾಗಿದೆ.
ಕಳೆದೊಂದು ವಾರದಿಂದೀಚೆಗೆ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕೆಳಕ್ಕಿಳಿದಿದೆ. ಕಳೆದ ಫೆಬ್ರವರಿಯಿಂದೀಚೆಗಿನ ಕನಿಷ್ಠ ದರ ಇದಾಗಿದೆ. ಹೀಗಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್‌ನ ರಿಟೇಲ್ ದರಗಳು ಇಳಿಕೆಯಾಗಿಲ್ಲ.
ಒಂದು ಕಡೆ ರಷ್ಯಾದಿಂದ ತೈಲ ಪೂರೈಕೆ ಇಳಿಕೆಯಾಗುವ ಸಾಧ್ಯತೆ, ಮತ್ತೊಂದು ಕಡೆ ಒಪೆಕ್ ತನ್ನ ತೈಲೋತ್ಪಾದನೆಯನ್ನು ಕಡಿತಗೊಳಿಸುವ ನಿರೀಕ್ಷೆ ಇದೆ. ಇದರ ಪರಿಣಾಮ ತೈಲ ದರಗಳು ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಕಳೆದ 158 ದಿನಗಳಿಂದ ಪೆಟ್ರೋಲ್-ಡೀಸೆಲ್ ದರ ಯಥಾಸ್ಥಿತಿಯಲ್ಲಿ ಇವೆ.
ಕಚ್ಚಾ ತೈಲ ದರಗಳು ಅಂತಾರಾಷ್ಟ್ರೀಯವಾಗಿ ಉನ್ನತ ಮಟ್ಟದಲ್ಲಿ ಇದ್ದಾಗ ರಿಟೇಲ್ ದರವನ್ನು ತೈಲ ಕಂಪನಿಗಳು ಏರಿಸಿರಲಿಲ್ಲ. ಇದರಿಂದ ಉಂಟಾಗಿರುವ ನಷ್ಟದಲ್ಲಿ ಸ್ವಲ್ಪ ಪಾಲನ್ನು ಸರಿದೂಗಿಸಬೇಕಲ್ಲವೇ ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಏಪ್ರಿಲ್‌ನಲ್ಲಿ 102.97 ಡಾಲರ್, ಮೇನಲ್ಲಿ 109.51 ಡಾಲರ್, ಜೂನ್‌ನಲ್ಲಿ 116.01 ಡಾಲರ್ ಇತ್ತು. ಜುಲೈನಲ್ಲಿ 105 ಡಾಲರ್, ಆಗಸ್ಟ್‌ನಲ್ಲಿ 92.87 ಡಾಲರ್‌ಗೆ ಇಳಿದಿತ್ತು.