ನವ ದೆಹಲಿ: ಭಾರತದಲ್ಲಿ ೫ಜಿ ಕ್ರಾಂತಿ ಸಮೀಪಿಸುತ್ತಿದೆ. ೪ಜಿಗಿಂತ ೧೦ ಪಟ್ಟು ವೇಗದ ೫ಜಿಯಿಂದ ಇಂಟರ್‌ನೆಟ್ ಬಳಕೆದಾರರಿಗೆ ಭಾರಿ ಅನುಕೂಲವಾಗಲಿದೆ. (ವಿಸ್ತಾರ 5G Info) ತಂತ್ರಜ್ಞಾನ ನಮ್ಮ ಜನ ಜೀವನವನ್ನು ಹೇಗೆ ಆವರಿಸಿದೆ ಎಂಬುದಕ್ಕೆ ಬಿಡುಗಡೆಗೆ ಮುನ್ನವೇ ತೀವ್ರ ಕುತೂಹಲ ಮೂಡಿಸಿರುವ ೫ಜಿಯೇ ತಾಜಾ ಉದಾಹರಣೆಯಾದೀತು. ಇಂಟರ್‌ನೆಟ್ ಟೆಸ್ಟಿಂಗ್ ಸಂಸ್ಥೆ Ookla ಸಮೀಕ್ಷೆಯ ಪ್ರಕಾರ, ೮೯% ಮಂದಿ ಬಳಕೆದಾರರು ೪ಜಿಯಿಂದ ೫ಜಿಗೆ ಬದಲಾಗಲು ಉತ್ಸುಕವಾಗಿದ್ದಾರೆ!
ಯಾವುದೇ ತಂತ್ರಜ್ಞಾನ ಹಲವಾರು ಆಯಾಮಗಳಿಂದ ಜನೋಪಯೋಗಿಯಾದಾಗ, ದಿನ ನಿತ್ಯದ ಬದುಕಿನ ಆಗುಹೋಗುಗಳನ್ನು ಸುಗಮಗೊಳಿಸಿದಾಗ, ಹಲವು ಸಮಸ್ಯೆಗಳನ್ನು ಪರಿಹರಿಸಿದಾಗ ಬಲುಬೇಗ ಜನಪ್ರಿಯವಾಗುತ್ತದೆ. ಇದೇ ಕಾರಣಕ್ಕಾಗಿ ಇದೀಗ ೫ಜಿ ಕ್ರಾಂತಿ ಸದ್ದು ಮಾಡುತ್ತಿದೆ. ಹಾಗಾದರೆ ೫ಜಿಯ ಲಾಭವೇನು? ಎಂಬುದನ್ನು ತಿಳಿಯೋಣ ಬನ್ನಿ.
ಮೊಬೈಲ್ ಬಳಕೆದಾರರಿಗೆ
ಈಗಿನ ದಿನಗಳಲ್ಲಿ ಇಂಟರ್‌ನೆಟ್ ಸಂಪರ್ಕ ಇರುವ ಸ್ಮಾರ್ಟ್‌ಫೋನ್ ಬಳಕೆ ಸರ್ವೇ ಸಾಮಾನ್ಯವಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಸಿಗುತ್ತದೆ. ೫ಜಿ ಬಳಿಕ ಡೇಟಾ ಡೌನ್‌ಲೋಡ್‌ನ ಸ್ಪೀಡ್ ೪ಜಿಗಿಂತ ೧೦ ಪಟ್ಟು ಹೆಚ್ಚು ವೇಗದಲ್ಲಿ ಲಭ್ಯ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಮೆಚ್ಚಿನ ಶೋಗಳನ್ನು ಯಾವುದೇ ವಿಳಂಬ ಇಲ್ಲದೆ ತಕ್ಷಣವೇ ವೀಕ್ಷಿಸಬಹುದು. ಸಿನಿಮಾಗಳನ್ನು ಕೆಲ ನಿಮಿಷಗಳ ಬದಲಿಗೆ ಕೆಲವು ಸೆಕೆಂಡ್‌ಗಳಲ್ಲಿಯೇ ಡೌನ್‌ಲೋಡ್ ಮಾಡಿಕೊಳ್ಳಬಹುದು! ಡೌನ್‌ಲೋಡ್ ಪ್ರಕ್ರಿಯೆಯಲ್ಲಿ ಸಮಯದ ಉಳಿತಾಯ ಜನತೆಗೆ ಬಹಳ ಪ್ರಯೋಜನ ನೀಡುವುದು ಖಚಿತ.
ಮನೆ-ಮನರಂಜನೆಗೆ ಏನು?
ಮನೆಗಳಲ್ಲಿ ೪K ಮತ್ತು ೮K High-end, High definition ಟಿ.ವಿಗಳನ್ನು ಹೊಂದಿದವರಿಗೆ ( ೭,೬೮೦ x4,320) ೫Gಯಿಂದ ಅಲ್ಟ್ರಾ ಹೈ ಡೆಫಿನಿಶನ್ ಪಡೆಯಬಹುದು. ವರ್ಚುವಲ್ ರಿಯಾಲಿಟಿ ಗೇಮ್ ಜನಪ್ರಿಯವಾಗಬಹುದು. ಇದಕ್ಕೆ ಬೇಕಾಗುವ ಭಾರಿ ಪ್ರಮಾಣದ ಡೇಟಾ ವರ್ಗಾವಣೆ ತ್ವರಿತವಾಗಿ ಆಗಲಿದೆ.
ಆರೋಗ್ಯ: ವೈದ್ಯಕೀಯ ಕ್ಷೇತ್ರದಲ್ಲಿ ೫ಜಿ ಉಪಯೋಗಕ್ಕೆ ಬರಲಿದೆ. ಪಾಯಿಂಟ್ -ಆಫ್-ಕೇರ್ ಡಯಾಗ್ನಸ್ಟಿಕ್ಸ್ (point of care diagnostics) ಪದ್ಧತಿಯಲ್ಲಿ, ಲ್ಯಾಬೊರೇಟರಿಯ ಹೊರಗೆ, ಅಂದರೆ ರೋಗಿ ಇರುವ ಸ್ಥಳದಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ಅನುಕೂಲವಾಗಲಿದೆ. ಹಿಂದುಳಿದ ಪ್ರದೇಶಗಳಲ್ಲಿಯೂ ರೋಗಿಯ ತ್ವರಿತ ವೈದ್ಯಕೀತ ತಪಾಸಣೆಗೆ ಇದು ಸಹಕಾರಿಯಾಗಲಿದೆ. ಭವಿಷ್ಯದ ದಿನಗಳಲ್ಲಿ ರೊಬಾಟಿಕ್ ಆರ್ಮ್ಸ್ ಬಳಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಬಹುದು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸದೆಯೂ ಆಪರೇಷನ್ ನಡೆಸಬಹುದು.
ಬ್ಯಾಂಕಿಂಗ್: ಡಿಜಿಟಲೀಕರಣದ ಪರಿಣಾಮ ಈಗಾಗಲೇ ಭಾರತದಲ್ಲಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಬೇಕಾದ ಅಗತ್ಯವನ್ನು ಕಡಿಮೆ ಮಾಡಿದೆ. ಎಟಿಎಂಗಳ ಸಂಖ್ಯೆಯೂ ಇಳಿಯುತ್ತಿದೆ. ಇನ್ನೂ ಹಲವು ಅನುಕೂಲಗಳು ಗ್ರಾಹಕರಿಗೆ ಸಿಗಲಿದೆ.
ಶಿಕ್ಷಣ: ಆನ್‌ಲೈನ್ ಶಿಕ್ಷಣದ ಗುಣಮಟ್ಟ ಮತ್ತು ಆಯ್ಕೆ ಹೆಚ್ಚಲಿದೆ. ಹೀಗಾಗಿ ಯಾವುದೇ ಪ್ರದೇಶದಲ್ಲಿರುವವರಿಗೂ ತಮ್ಮ ಕೌಶಲಾಭಿವೃದ್ಧಿಗೆ, ಯಾವುದಾದರೂ ಕೋರ್ಸ್ ಕಲಿಕೆಗೆ ಅನುಕೂಲ ಆಗಲಿದೆ.
ಕ್ಯಾಶಿಯರ್‌ಲೆಸ್ ಸ್ಟೋರ್
ಉತ್ಪಾದನೆಯ ವಲಯದಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ (IoT) ಸೆನ್ಸರ್, ಸಾಧನಗಳ ಬಳಕೆ ವೃದ್ಧಿಸಲಿದೆ. ಇದು ದಕ್ಷತೆ ಹೆಚ್ಚಿಸುವ ಮೂಲಕ ಪರಿಸರಸ್ನೇಹಿ ಉತ್ಪಾದನೆಗೂ ಸಹಕಾರಿಯಾಗಲಿದೆ. ಶಾಪಿಂಗ್‌ನಲ್ಲಿ ವಾಯ್ಸ್ ಕಮಾಂಡ್ ಆಧಾರಿತ ಪೇಮೆಂಟ್, ಕ್ಯಾಶಿಯರ್ ಲೆಸ್ ಸ್ಟೋರ್ ಬರಲಿದೆ.
ಆಡಳಿತ, ಸಾರಿಗೆ: ೫ಜಿಯಿಂದ ಸಾರ್ವಜನಿಕ ಸೇವೆಗಳ ಗುಣಮಟ್ಟ ವೃದ್ಧಿಗೆ ನೆರವಾಗಲಿದೆ. ಸಾರಿಗೆ ವಲಯದಲ್ಲಿ FASTag ವ್ಯವಸ್ಥೆಗೆ ಪುಷ್ಟಿ ಸಿಗಲಿದೆ. ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯ, ಚಾರ್ಜಿಂಗ್ ಸ್ಟೇಷನ್ ಜತೆ ಸಂಪರ್ಕ ವೃದ್ಧಿಗೆ ನೆರವಾಗಲಿದೆ.
ಸೂಪರ್ ಆ್ಯಪ್: ಭವಿಷ್ಯದ ದಿನಗಳಲ್ಲಿ ಸೂಪರ್ ಆ್ಯಪ್‌ಗಳು ಜನತೆಗೆ ಒಂದೇ ಆ್ಯಪ್‌ನಲ್ಲಿ ಹಲವಾರು ಸೇವೆಗಳನ್ನು ಒದಗಿಸಲಿವೆ. ಉದಾಹರಣೆಗೆ ಚೀನಾದ ವಿಚಾಟ್ ಆರಂಭದಲ್ಲಿ ಮೆಸೇಜಿಂಗ್ ಆ್ಯಪ್ ಆಗಿತ್ತು. ಬಳಿಕ ಪೇಮೆಂಟ್ಸ್, ಕ್ಯಾಬ್ಸ್, ಶಾಪಿಂಗ್, ಆಹಾರದ ಆನ್‌ಲೈನ್ ಆರ್ಡರ್ ಸೇವೆಗಳನ್ನು ವಿತರಿಸುವ ಸೂಪರ್ ಆ್ಯಪ್ ಆಯಿತು.
ಇದನ್ನೂ ಓದಿ: ವಿಸ್ತಾರ 5G Info| ನಿಮ್ಮ ಮೊಬೈಲ್ 5G ಸಪೋರ್ಟ್ ಮಾಡುತ್ತಿದೆಯೇ ಎಂದು ತಿಳಿಯುವುದು ಹೇಗೆ?