ಈಗಲೂ ಈ ಪ್ರಶ್ನೆ ಆಗಿಂದಾಗ್ಗೆ ಚರ್ಚೆಯಾಗುತ್ತಲೇ ಇದೆ!
ಹೌದು, ನಿಮಗೆ ನೆನಪಿರಬಹುದು! 2016ರ ನವೆಂಬರ್ 8ರ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಐತಿಹಾಸಿಕ ಘೋಷಣೆಯನ್ನು ಮಾಡಿದ್ದರು! ಮೊದಲು ಹೊಸ 2,000 ರೂ.ಗಳ ನೋಟನ್ನು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಹೊಸ 500 ರೂ. ಹಾಗೂ 200 ರೂ. ಮುಖಬೆಲೆಯ ನೋಟನ್ನೂ (ವಿಸ್ತಾರ Explainer) ಪರಿಚಯಿಸಲಾಯಿತು.
ಕೆಲವು ಕ್ಷಣಗಳ ಕಾಲ ಜನತೆಗೆ ಇದನ್ನು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಅಂದು ಮಧ್ಯ ರಾತ್ರಿಯಿಂದಲೇ ಜನ ಎಟಿಎಂ ಮುಂದೆ ಸರದಿಯಲ್ಲಿ ನಿಂತು ನಗದು ಪಡೆಯಲು ಗಂಟೆಗಟ್ಟಲೆ ಕಾದರು. ವಾರಗಟ್ಟಲೆ ಕಾಲ ಎಟಿಎಂಗಳಲ್ಲಿ ನಗದಿಗೋಸ್ಕರ ಹಾಹಾಕಾರ ಉಂಟಾಯಿತು. ಆನ್‌ಲೈನ್ ಮೂಲಕ ಹಣಕಾಸು ವರ್ಗಾವಣೆಗೆ ಅವಕಾಶ ಇದ್ದರೂ, ಆಗ ಈಗಿನಷ್ಟು ಯುಪಿಐ ಪಾವತಿಗಳು ನಡೆಯುತ್ತಿರಲಿಲ್ಲ. ಹೀಗಾಗಿ ಜನತೆಗೆ ತಿಂಗಳುಗಟ್ಟಲೆ ಸಮಸ್ಯೆಯಾಗಿತ್ತು. ದೇಶವಿಡೀ ಜನಜೀವನ ಸ್ತಬ್ಧವಾದಂಥ ಸನ್ನಿವೇಶ. ಬ್ಯಾಂಕ್‌ಗಳಲ್ಲಿಯೂ ಅಮಾನ್ಯಗೊಂಡ ನೋಟುಗಳ ವಿನಿಮಯಕ್ಕೆ ಭಾರಿ ಸರದಿಗಳು ಸಾಮಾನ್ಯವಾಗಿತ್ತು. ನಗರ-ಪಟ್ಟಣಗಳಲ್ಲಿನ ಎಟಿಎಂಗಳಲ್ಲಿ ನಗದು ಬರಿದಾಗಿ, ನೋ ಕ್ಯಾಶ್ ಬೋರ್ಡ್‌ಗಳನ್ನು ಕಂಡು ಜನ ಪರದಾಡಿದ್ದರು. ಆದರೂ, ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಜನ ಬೆಂಬಲವಿತ್ತು. ಹೀಗಾಗಿ ಎಲ್ಲೂ ದಂಗೆಯಾಗಲಿಲ್ಲ.
ಪರ-ವಿರೋಧ: ಕಪ್ಪುಹಣ ಹಾಗೂ ನಕಲಿ ನೋಟುಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಎಂದು ಬೆಂಬಲಿಸಿದವರು ಒಂದೆಡೆಯಾದರೆ, ಮತ್ತೊಂದು ಕಡೆ ಇದರಿಂದ ಏನೂ ಪ್ರಯೋಜನವಾಗಿಲ್ಲ, ಇದೊಂದು ಘೋರ ಪ್ರಮಾದ ಎನ್ನುವ ಮಂದಿ ಮತ್ತೊಂದು ಕಡೆ! ಹಾಗಾದರೆ ಯಾವುದು ಸರಿ- ಯಾವುದು ತಪ್ಪು? ಈ ಚರ್ಚೆ ಡಿಮಾನಿಟೈಸೇಶನ್ ಆಗಿ ಆರು ವರ್ಷಗಳ ಬಳಿಕವೂ ನಡೆಯುತ್ತಿದೆ.
ಸರಿಯೋ-ತಪ್ಪೊ ಗೊಂದಲ
ನೋಟು ಅಮಾನ್ಯತೆಯ ಘೋಷಿಸಿದ 2016ರ ನವೆಂಬರ್ 8 ಅನ್ನು ಕಪ್ಪು ಹಣದ ವಿರುದ್ಧ ಗದಾ ಪ್ರಹಾರ ಮಾಡಿದ ದಿನ ಎಂದು ಬಣ್ಣಿಸಲಾಗುತ್ತಿದೆ. ಮತ್ತೊಂದು ಕಡೆ ಕಪ್ಪು ದಿನ ಎಂದೂ ಖಂಡಿಸಲಾಗುತ್ತಿದೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಏನೆಂದಿದ್ದರು? ಅದರ ಸಾರಾಂಶ ಇಂತಿದೆ-
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಕೆಲವು ಮಹತ್ವದ ನಿರ್ಣಯಗಳ ಬಗ್ಗೆ ನಾನು ಮಾತನಾಡಲು ಬಯಸುವೆ. ನಿಮ್ಮಲ್ಲಿ ವಿಶೇಷ ಮನವಿ ಮಾಡುತ್ತಿದ್ದೇನೆ. 2014ರ ಮೇ 2014ರ ವೇಳೆಗೆ ದೇಶದ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೀವು ಸ್ಮರಿಸಿಕೊಳ್ಳಬಹುದು. ಬ್ರಿಕ್ಸ್ (BRICS) ದೇಶಗಳ ಪೈಕಿ ಭಾರತದ ಪರಿಸ್ಥಿತಿ ಅಭದ್ರವಾಗಿತ್ತು. ಬಳಿಕ ಎರಡು ವರ್ಷಗಳ ಬರಗಾಲ ಬಂತು. ಹೀಗಿದ್ದರೂ ಕಳೆದ ಎರಡೂ ವರ್ಷಗಳಲ್ಲಿ ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಗಳಿಸಿದೆ. ನಾನಿದನ್ನು ಹೇಳುತ್ತಿಲ್ಲ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವಬ್ಯಾಂಕ್ ಹೇಳುತ್ತಿವೆ. ಕಳೆದ ದಶಕಗಳಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣದಿಂದ ಆರ್ಥಿಕತೆಗೆ ಭಾರಿ ಹಾನಿ ಸಂಭವಿಸಿದೆ. ಭ್ರಷ್ಟಾಚಾರ ನಿಗ್ರಹಿಸಲು ಹಲವು ಕ್ರಮ ಕೈಗೊಂಡಿದ್ದರೂ, ಮತ್ತಷ್ಟು ಕಠಿಣ ಕ್ರಮಗಳ ಅಗತ್ಯ ಇದೆ. ಭ್ರಷ್ಟಾಚಾರಿಗಳಿಂದಾಗಿ ಬಡವರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಸೋದರ, ಸೋದರಿಯರೇ, ಭ್ರಷ್ಟಾಚಾರ ಮತ್ತು ಕಪ್ಪುಹಣದ ಹಿಡಿತವನ್ನು ಬಿಡಿಸಲು ನಾವು ಇಂದು ಮಧ್ಯ ರಾತ್ರಿಯಿಂದ 500 ರೂ. ಮತ್ತು 1000 ರೂ. ನೋಟುಗಳ ಮಾನ್ಯತೆಯನ್ನು ರದ್ದುಪಡಿಸುತ್ತಿದ್ದೇವೆ. ದೇಶ ದ್ರೋಹಿಗಳು ಹಾಗೂ ಸಮಾಜಘಾತುಕ ಶಕ್ತಿಗಳು ಹೊಂದಿರುವ 500 ಮತ್ತು 1000 ರೂ. ನೋಟುಗಳು ಇಂದಿನಿಂದ ಕೇವಲ ಕಾಗದದ ತುಣುಕುಗಳಾಗಿವೆ. ಜನತೆ ಬೆವರು ಹರಿಸಿ ದುಡಿದು ಸಂಪಾದಿಸಿದ ಹಣವನ್ನು ಸಂರಕ್ಷಿಸಲಾಗುವುದು. ಇದು ಭ್ರಷ್ಟಾಚಾರ, ಕಪ್ಪು ಹಣ, ನಕಲಿ ನೋಟು ಮತ್ತು ಭಯೋತ್ಪಾದನೆ ವಿರುದ್ಧದ ಪ್ರಬಲ ಹೋರಾಟವಾಗಿದೆ. ಇದಕ್ಕಾಗಿ ಕೆಲ ದಿನಗಳ ಕಾಲ ಅಡಚಣೆಗಳನ್ನು, ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುವೆ. 125 ಕೋಟಿ ಭಾರತೀಯರು ಈ ಮಹಾ ಅಭಿಯಾನದಲ್ಲಿ ಸಹಕರಿಸುವ ವಿಶ್ವಾಸ ನನಗಿದೆ.
ನಾಲ್ಕು ವರ್ಷಗಳ ಬಳಿಕ, ಅಂದರೆ 2020ರ ನವೆಂಬರ್‌ನಲ್ಲಿ ಪ್ರಧಾನಿ ಮೋದಿಯವರು, ಕಪ್ಪುಹಣವನ್ನು ನಿಯಂತ್ರಿಸುವಲ್ಲಿ, ತೆರಿಗೆ ಸಂಗ್ರಹ ಏರಿಕೆಗೆ ಮತ್ತು ಆರ್ಥಿಕತೆ ಚಟುವಟಿಕೆಗಳನ್ನು ಔಪಚಾರಿಕವಾಗಿಸಲು ಮತ್ತು ಪಾರದರ್ಶಕತೆಗೆ ನೋಟು ಅಮಾನ್ಯತೆ ಸಹಕಾರಿಯಾಗಿದೆ. ಇದು ರಾಷ್ಟ್ರದ ಪ್ರಗತಿಗೆ ಪೂರಕವಾಗಿ ಪರಿಣಮಿಸಿದೆ ಎಂದು ಹೇಳಿದ್ದರು. ನೋಟು ಅಮಾನ್ಯತೆಯ ಬಳಿಕ ನಾಲ್ಕು ವರ್ಷಗಳಲ್ಲಿ ತೆರಿಗೆದಾರರ ಸಂಖ್ಯೆ ಹೆಚ್ಚಳವಾಗಿರುವುದನ್ನು ತಿಳಿಸಿದ್ದರು.
ಆರ್ಥಿಕ ತಜ್ಞರಲ್ಲಿ ಭಿನ್ನಾಭಿಪ್ರಾಯ: ನೋಟು ಅಮಾನ್ಯತೆಯ ವಿಚಾರದಲ್ಲಿ ಆರ್ಥಿಕ ತಜ್ಞರ ನಡುವೆಯೂ ಭಿನ್ನಾಭಿಪ್ರಾಯ ಉಂಟಾಗಿತ್ತು. ಚಲಾವಣೆಯಲ್ಲಿರುವ 86% ಕರೆನ್ಸಿಗಳು ಘೋಷಣೆಯಾದ ನಾಲ್ಕೇ ಗಂಟೆಯೊಳಗೆ ಅಮಾನ್ಯವಾಗಿತ್ತು. ಇದರ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸೂಕ್ತ ವ್ಯವಸ್ಥೆಯನ್ನು ಏರ್ಪಡಿಸಿದೆಯೇ ಎಂಬ ಪ್ರಶ್ನೆಯ ಜತೆಗೆ, ಕರೆನ್ಸಿಯಲ್ಲಿ ಕಪ್ಪುಹಣದ ಪ್ರಮಾಣ ಕೇವಲ 5 ಪರ್ಸೆಂಟ್ ಮಾತ್ರ ಇತ್ತು. ಉಳಿದ ಕಪ್ಪುಹಣವು ರಿಯಲ್ ಎಸ್ಟೇಟ್, ಬಂಗಾರ ಇತ್ಯಾದಿ ಇತರ ಆಸ್ತಿಗಳಲ್ಲಿ ಇರುವುದರಿಂದ ನೋಟು ಅಮಾನ್ಯತೆ ಫಲ ನೀಡುವುದು ಅನುಮಾನ ಎಂಬುದು ಕೆಲ ಆರ್ಥಿಕ ತಜ್ಞರ ಅಭಿಪ್ರಾಯವಾಗಿತ್ತು.
ಕಪ್ಪು ಹಣ ವಶಪಡಿಸಿದ್ದೆಷ್ಟು? : ನೋಟು ಅಮಾನ್ಯತೆಯಿಂದ ಕಪ್ಪುಹಣದ ನಿಯಂತ್ರಣ ಆಗಿದೆಯೇ ಎಂಬುದು ನಿರ್ಣಾಯಕ ಪ್ರಶ್ನೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಅಮಾನ್ಯಗೊಂಡಿದ್ದ ನೋಟುಗಳ ಪೈಕಿ 99% ಕೂಡ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿತ್ತು. ಒಟ್ಟು 15.41 ಲಕ್ಷ ಕೋಟಿ ರೂ. ನೋಟುಗಳು ಅಮಾನ್ಯವಾಗಿತ್ತು. ಹಾಗೂ 15.31 ಲಕ್ಷ ಕೋಟಿ ರೂ. ಬ್ಯಾಂಕ್‌ಗಳಿಗೆ ವಾಪಸ್ ಬಂದಿತ್ತು. ಹೀಗಾಗಿ ನೋಟು ಅಮಾನ್ಯತೆ ಒಂದರಿಂದಲೇ ಎಷ್ಟು ಕಪ್ಪು ಹಣ ನಿರ್ನಾಮವಾಗಿದೆ ಎಂದು ಹೇಳುವುದು ಕಷ್ಟ. ಆದರೆ 2019ರಲ್ಲಿ ಅಂದಿನ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಸಂತ್ತಿಗೆ, 1.3 ಲಕ್ಷ ಕೋಟಿ ರೂ. ಕಪ್ಪುಹಣವನ್ನು ನಾನಾ ಕಪ್ಪುಹಣ ವಿರೋಧಿ ಕಾರ್ಯಾಚರಣೆಗಳ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಕೆಲ ವರದಿಗಳ ಪ್ರಕಾರ ಸರ್ಕಾರ 3-4 ಲಕ್ಷ ಕೋಟಿ ರೂ. ಕಪ್ಪು ಹಣ ವ್ಯವಸ್ಥೆಯಿಂದ ಹೊರ ಹೋಗಲಿದೆ ಎಂದು ಭಾವಿಸಿತ್ತು. ಆದರೆ ಅದು ಆಗಿಲ್ಲ. ಈ ನಡುವೆ ಕಪ್ಪು ಹಣವನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳನ್ನು ತೆರಿಗೆ ಇಲಾಖೆ ಮುಂದುವರಿಸಿದೆ.
ನಕಲಿ ನೋಟುಗಳ ಸಂಖ್ಯೆಯಲ್ಲಿ ಏರಿಕೆ: ಆರ್‌ಬಿಐ ಕಳೆದ ಮೇ 27ಕ್ಕೆ ಬಿಡುಗಡೆಗೊಳಿಸಿರುವ ವಾರ್ಷಿಕ ವರದಿಯ ಪ್ರಕಾರ 2021-22ರಲ್ಲಿ ನಕಲಿ ನೋಟುಗಳ ಸಂಖ್ಯೆಯಲ್ಲಿ 10% ಏರಿಕೆಯಾಗಿದೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ 101% ಹಾಗೂ 2,000 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ 54% ಹೆಚ್ಚಳವಾಗಿದೆ.
ಜನರ ಕೈಯಲ್ಲಿರುವ ನಗದು 30.88 ಲಕ್ಷ ಕೋಟಿ ರೂ.ಗೆ ಜಿಗಿತ: ನೋಟು ಅಮಾನ್ಯತೆಯ ಆರು ವರ್ಷಗಳ ಬಳಿಕವೂ ದೇಶದ ಜನರ ಕೈಯಲ್ಲಿರುವ ಒಟ್ಟು ನಗದು, ಕಳೆದ ಅಕ್ಟೋಬರ್ 21ಕ್ಕೆ 30.88 ಲಕ್ಷ ಕೋಟಿ ರೂ.ಗೆ ಏರಿತ್ತು. ಅಂದರೆ 2016ರ ನವೆಂಬರ್‌ಗೆ ಹೋಲಿಸಿದರೆ 71% ಹೆಚ್ಚು. 2016ರ ನವೆಂಬರ್ 4ರಂದು 17.7 ಲಕ್ಷ ಕೋಟಿ ರೂ. ನಗದು ವ್ಯವಸ್ಥೆಯಲ್ಲಿ ಇತ್ತು.
ಡಿಜಿಟಲ್ ಪೇಮೆಂಟ್ ಹೆಚ್ಚಳ: ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆ, ಯುಪಿಐ ವರ್ಗಾವಣೆಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಹಂತ ಹಂತವಾಗಿ ಏರಿಕೆಯಾಗಿದೆ ಎಂದು ಆರ್‌ಬಿಐ ಅಧ್ಯಯನ ವರದಿ ತಿಳಿಸಿದೆ. ಎಸ್‌ಬಿಐ ಪ್ರಕಾರ ಈ ಸಲದ ದೀಪಾವಳಿಯ ವಾರದಲ್ಲಿ ಕರೆನ್ಸಿ ಚಲಾವಣೆ 7,600 ಕೋಟಿ ರೂ.ಗೆ ಇಳಿಕೆಯಾಗಿತ್ತು.
ಯುಪಿಐ ವರ್ಗಾವಣೆ ಏರಿಕೆಯಾಗಿದ್ದು ಹೀಗೆ
ಭಾರತದಲ್ಲಿ ಯುಪಿಐ (Unified Payments Interface) ವರ್ಗಾವಣೆಗಳ ಸಂಖ್ಯೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ 7.7% ಹೆಚ್ಚಳವಾಗಿತ್ತು. ಸೆಪ್ಟೆಂಬರ್‌ನಲ್ಲಿ 11.16 ಲಕ್ಷ ಕೋಟಿ ರೂ. ಯುಪಿಐ ವರ್ಗಾವಣೆಯಾಗಿದ್ದರೆ, ಅಕ್ಟೋಬರ್‌ನಲ್ಲಿ 12.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಅಂದರೆ 678 ಕೋಟಿ ರೂ. ವೃದ್ಧಿಸಿತ್ತು. ( ಯುಪಿಐ ತಂತ್ರಜ್ಞಾನ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳಿಗೆ ಉದಾಹರಣೆಗಳು: ಫೋನ್ ಪೇ, ಪೇಟಿಎಂ, ಗೂಗಲ್‌ಪೇ, ಭೀಮ್, ಮೊಬಿವಿಕ್, ಎಸ್‌ಬಿಐ ಪೇ, ಬಿಒಬಿ ಯುಪಿಐ ಇತ್ಯಾದಿ) ಕಳೆದ ಮೇನಲ್ಲಿ 10 ಲಕ್ಷ ಕೋಟಿ ರೂ.ಗಳ ಮೈಲುಗಲ್ಲನ್ನು ಕ್ರಮಿಸಿತ್ತು. ಸೆಪ್ಟೆಂಬರ್‌ನಲ್ಲಿ 11 ಲಕ್ಷ ಕೋಟಿ ರೂ. ಮೈಲುಗಲ್ಲನ್ನು ದಾಟಿತ್ತು. 2022ರಲ್ಲಿ ಈಗಾಗಲೇ 7,100 ಕೋಟಿ ಡಿಜಿಟಲ್ ವರ್ಗಾವಣೆಗಳು ನಡೆದಿವೆ. 2015ರಿಂದೀಚೆಗೆ ಯುಪಿಐ ವರ್ಗಾವಣೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.
ಆಧಾರ್ ಕಾರ್ಡ್ ಆಧಾರಿತ AePS ವರ್ಗಾವಣೆಗಳೂ ಕಳೆದ ಅಕ್ಟೋಬರ್‌ನಲ್ಲಿ 11.77 ಕೋಟಿಗೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ 10.27 ಕೋಟಿಯಾಗಿತ್ತು. ಈ ವರ್ಗಾವಣೆಗಳ ಮೊತ್ತದಲ್ಲಿ ಕೂಡ 26,665 ಕೋಟಿ ರೂ.ಗಳಿಂದ 31,112 ಕೋಟಿ ರೂ.ಗೆ ಏರಿಕೆಯಾಗಿದೆ.
FASTag ಮೂಲಕ ಟೋಲ್ ಸಂಗ್ರಹ ಹೆಚ್ಚಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುವ FASTag ಮೂಲಕ ಪ್ರಾಧಿಕಾರದ ಟೋಲ್ ಬೂತ್‌ಗಳಲ್ಲಿ ಆಟೊಮ್ಯಾಟಿಕ್ ಆಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ 28.3 ಕೋಟಿ ರೂ. ವರ್ಗಾವಣೆಗಳು ದಾಖಲಾಗಿದ್ದು, 9.3% ಹೆಚ್ಚಳವಾಗಿದೆ. ಈ ವರ್ಗಾವಣೆಗಳ ಮೌಲ್ಯ ಸೆಪ್ಟೆಂಬರ್- ಅಕ್ಟೋಬರ್ ನಡುವೆ 4,244 ಕೋಟಿ ರೂ.ಗಳಿಂದ 4,451 ಕೋಟಿ ರೂ.ಗೆ ವೃದ್ಧಿಸಿದೆ.
ನಗದು ಏರಿಕೆಯಾಗಿದ್ದೇಕೆ?
ರಿಸರ್ವ್ ಬ್ಯಾಂಕ್ ಕಾಯಿದೆಯ ಸೆಕ್ಷನ್ 22ರ ಪ್ರಕಾರ ಆರ್‌ಬಿಐಗೆ ನೋಟುಗಳನ್ನು ಮುದ್ರಿಸಿ ವಿತರಿಸುವ ಹಕ್ಕು ಇದೆ. ಆದರೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐನ ಕೇಂದ್ರೀಯ ಮಂಡಳಿ ಸಮಾಲೋಚನೆ ನಡೆಸಿ, ಎಷ್ಟು ನೋಟುಗಳನ್ನು ಮುದ್ರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
ಆರ್ಥಿಕ ವ್ಯವಸ್ಥೆಯಲ್ಲಿ ಬೆಳವಣಿಗೆಯ ಪ್ರಮಾಣ ಮತ್ತು ಬೇಡಿಕೆಯನ್ನು ಆಧರಿಸಿ ಎಷ್ಟು ನೋಟುಗಳನ್ನು ಮುದ್ರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ನೋಟುಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಬೇಡಿಕೆ ಮತ್ತು ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಬಿಂಬಿಸುತ್ತದೆ. ಬೇಡಿಕೆಗಿಂತ ಹೆಚ್ಚು ನೋಟುಗಳನ್ನು ಮುದ್ರಿಸಿದರೂ, ಹಣದುಬ್ಬರ ಉಂಟಾಗುತ್ತದೆ. ಹೀಗಾಗಿ ನೋಟುಗಳ ಸಂಖ್ಯೆ ಹೆಚ್ಚಳವಾಗಿರುವುದು ಆರ್ಥಿಕ ಬೆಳವಣಿಗೆಯನ್ನೂ ಬಿಂಬಿಸುತ್ತದೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿಯೂ ನಗದು ಕೂಡ ದೊಡ್ಡ ಮೊತ್ತದಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು ಎನ್ನುತ್ತಾರೆ ತಜ್ಞರು.
ಎಸ್‌ಬಿಐ ಸಂಶೋಧನಾ ವರದಿ ಹೇಳಿದ್ದೇನು? ಎಸ್‌ಬಿಐ ಸಂಶೋಧನಾ ವರದಿಯ ಪ್ರಕಾರ ಪಾವತಿ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ (Currency In Circulation) 2015-16ರಿಂದ 2021-22 ಅವಧಿಯಲ್ಲಿ 88%ರಿಂದ 20%ಕ್ಕೆ ಇಳಿಕೆಯಾಗಿದೆ. 2026-27ರಲ್ಲಿ ಇದು 11.5%ಕ್ಕೆ ಇಳಿಕೆಯಾಗಲಿದೆ.
ನೋಟು ಅಮಾನ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ
ನೋಟು ಅಮಾನ್ಯತೆಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ 58 ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಚಾರಣೆ ಮುಂದುವರಿದಿದೆ. ಕಪ್ಪುಹಣದ ಬಳಕೆ ನಿಯಂತ್ರಣ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಸ್ಥಗಿತದ ಉದ್ದೇಶಗಳು ಈಡೇರಿವೆಯೇ ಎಂದು ಸುಪ್ರೀಂಕೋರ್ಟ್, ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ವಿವರಣೆಯನ್ನು ಕೋರಿದೆ. ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ಬಿಆರ್ ಗವಾಯ್, ಎಎಸ್ ಬೋಪಣ್ಣ, ವಿ. ರಾಮಸುಬ್ರಮಣಿಯನ್ ಮತ್ತು ಬಿ.ವಿ ನಾಗರತ್ನ ಅವರನ್ನು ಒಳಗೊಂಡಿರುವ ಐವರು ನ್ಯಾಯಮೂರ್ತಿಗಳ ಪೀಠ ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ. ನವೆಂಬರ್ 9ಕ್ಕೆ ವಿಚಾರಣೆ ಮುಂದುವರಿಯಲಿದೆ.
ನೋಟು ಅಮಾನ್ಯತೆಗೆ ಪೂರ್ವಭಾವಿಯಾಗಿ ಆರ್‌ಬಿಐ ನಡೆಸಿದ್ದ ಮಂಡಳಿ ಸಭೆಗಳ ದಾಖಲಾತಿಗಳನ್ನೂ ಸುಪ್ರೀಂಕೋರ್ಟ್ ನಿರೀಕ್ಷಿಸಿದೆ. ಮುಂಬರುವ ದಿನಗಳಲ್ಲಿ ಸರ್ಕಾರಗಳು ನೋಟು ಅಮಾನ್ಯತೆಯನ್ನು ಕೈಗೊಳ್ಳುವ ಸಂದರ್ಭ ಸೃಷ್ಟಿಯಾದರೆ, ಸುಪ್ರೀಂಕೋರ್ಟ್ ವಿಚಾರಣೆ ಮತ್ತು ಅದರ ತೀರ್ಪು ನಿರ್ಣಾಯಕವಾಗಲಿದೆ. ನೋಟು ಅಮಾನ್ಯತೆಯ ವಿಷಯ ಕೇವಲ ಅಕಾಡೆಮಿಕ್ ಆಗಿದ್ದರೆ, ಸುಪ್ರೀಂಕೋರ್ಟ್‌ನ ಸಮಯವನ್ನು ವ್ಯರ್ಥಪಡಿಸುವುದರಲ್ಲಿ ಅರ್ಥವಿಲ್ಲ ಎಂದು ನ್ಯಾಯಮೂರ್ತಿ ನಜೀರ್ ಹೇಳಿರುವುದು ಗಮನಾರ್ಹ.
ಪ್ರತಿಪಕ್ಷಗಳ ಆರೋಪವೇನು?: ಪ್ರತಿ ಪಕ್ಷ ಕಾಂಗ್ರೆಸ್ ನೋಟು ಅಮಾನ್ಯತೆ ವಿರುದ್ಧ ಮಾಡಿರುವ ಪ್ರಮುಖ ಆರೋಪಗಳು ಇಂತಿವೆ-
೧. ಇದು ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿಯವರು ಎಸಗಿರುವ ಮಹಾ ಪ್ರಮಾದ. ನವೆಂಬರ್ 8ರ ನೋಟು ಅಮಾನ್ಯತೆಯಿಂದ ವಿಶ್ವದ ಎರಡನೇ ಅತಿ ದೊಡ್ಡ ಪ್ರಗತಿಪರ ಮಾರುಕಟ್ಟೆ ಎನಿಸಿದ್ದ ಭಾರತದಲ್ಲಿ ಅಲ್ಲೋಲಕಲ್ಲೋಲವಾಯಿತು. ಸಾರ್ವಜನಿಕ ಜನಜೀವನ ಬುಡಮೇಲಾಯಿತು. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕಂಡು ಕೇಳರಿಯದಷ್ಟು ಹಾನಿ ಸಂಭವಿಸಿತು. ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳು ನಾಶವಾಯಿತು. ಅನೇಕ ಅಂಗಡಿಗಳು, ಉದ್ದಿಮೆಗಳು ಶಾಶ್ವತವಾಗಿ ಮುಚ್ಚಿದವು. ನೋಟು ಅಮಾನ್ಯತೆಯ ಒಂದು ವರ್ಷದೊಳಗೆ 3.72 ಕೋಟಿ ಉದ್ಯೋಗಗಳು ನಷ್ಟವಾಯಿತು.
೨. ವಾಸ್ತವವಾಗಿ ಕಪ್ಪುಹಣ ನೋಟುಗಳಲ್ಲಿ ಶೇಖರಣೆಯಾಗಿರುವುದಿಲ್ಲ. ಆಸ್ತಿ, ಚಿನ್ನ ಮತ್ತು ಸುಲಭವಾಗಿ ಪರಿವರ್ತಿಸಬಹುದಾದ ಡಾಲರ್‌ನಲ್ಲಿ ಶೇಖರಣೆಯಾಗುತ್ತದೆ.
೩. ನೋಟು ಅಮಾನ್ಯತೆಯ ಪರಿಣಾಮ ರಾಷ್ಟ್ರೀಯ ಆದಾಯದಲ್ಲಿ 3 ಲಕ್ಷ ಕೋಟಿ ರೂ. ನಷ್ಟವಾಗಿದೆ.
೪. ನೋಟು ಬ್ಯಾನ್‌ನ ಸಂಕಷ್ಟಗಳ ಪರಿಣಾಮ 115 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
೫. ನೋಟ್ ಬಂದಿಯ ಪರಿಣಾಮ 4 ಲಕ್ಷ ಕೋಟಿ ರೂ. ಕಪ್ಪು ಹಣ ಮರೆಯಾಗಿ, ಅಷ್ಟು ಲಾಭವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ನಿರೀಕ್ಷಿಸಿದ್ದರು. ಆದರೆ ಕೇವಲ 16,000 ಕೋಟಿ ರೂ. ಮಾತ್ರ ಮರಳಿ ಬಂದಿಲ್ಲ. ಬದಲಿಗೆ ಹೊಸ ನೋಟುಗಳ ಮುದ್ರಣಕ್ಕೆ 21,000 ಕೋಟಿ ರೂ. ಖರ್ಚಾಗಿದೆ. ಆದ್ದರಿಂದ ನೋಟು ಅಮಾನ್ಯತೆಯ ಉದ್ದೇಶ ಸಂಪೂರ್ಣ ವಿಫಲವಾಗಿದೆ.
ಚುನಾವಣೆಗಳ ಮೇಲೆ ನೋಟು ಅಮಾನ್ಯತೆಯ ಪ್ರಭಾವ? ನೋಟು ಅಮಾನ್ಯತೆಯ ಬಳಿಕ 2017ರಲ್ಲಿ ಏಳು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಿತು. ಈ ಚುನಾವಣೆಗಳಲ್ಲಿ ಬಿಜೆಪಿಗೆ ಪ್ರತಿಕೂಲ ಪ್ರಭಾವ ಬೀರಬಹುದೇ ಎಂಬ ಕುತೂಹಲ ಇತ್ತು. ಕೇಂದ್ರ ಸರ್ಕಾರಕ್ಕೆ ಇದು ಲಿಟ್ಮಸ್ ಪರೀಕ್ಷೆಯಾಗಿತ್ತು. ಆದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ, ಬಿಜೆಪಿಯು ಉತ್ತರಪ್ರದೇಶ, ಉತ್ತರಾಖಂಡ್, ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ಜಯ ಗಳಿಸಿತ್ತು. ನೋಟು ಅಮಾನ್ಯತೆ ಪಕ್ಷಕ್ಕೆ ಪ್ರತಿಕೂಲವಾಗಿರಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶ ಬಿಂಬಿಸಿತ್ತು.
ನೋಟು ಅಮಾನ್ಯತೆಯಿಂದ ಆರ್ಥಿಕತೆ ಸ್ವಚ್ಛವಾಗುವ ಪ್ರಕ್ರಿಯೆ ಶುರುವಾಗಿದೆ. ಈ ಹಿಂದೆ ಅನೌಪಚಾರಿಕವಾಗಿದ್ದ ಎಕಾನಮಿ ಈಗ ಔಪಚಾರಿಕವಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರಿಗೆ ಅನುಕೂಲವಾಗುತ್ತಿದೆ. ಹಣಕಾಸು ನೆರವು-ಸಾಲ ಸೌಲಭ್ಯ ಸಿಗುವಂತಾಗಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆ ಏರಿಕೆಯಾಗಿದೆ. ಆರ್ಥಿಕ ಚಟುವಟಿಕೆಗಳು ವಿಸ್ತಾರವಾಗಿದೆ. ನಗದು ಸಂಖ್ಯೆ ಹೆಚ್ಚಿರುವುದು ಎಂದರೆ ನೋಟು ಅಮಾನ್ಯತೆ ವೈಫಲ್ಯ ಎಂಬುದಲ್ಲ. ಕರೆನ್ಸಿ ಮತ್ತು ಜಿಡಿಪಿಯ ಅನುಪಾತವನ್ನು ಗಮನಿಸಿದರೆ, ನೋಟುಗಳ ಬಳಕೆ ಕಡಿಮೆಯಾಗುರುವುದನ್ನು ಕಾಣಬಹುದು. ಜಿಡಿಪಿ ಬೆಳವಣಿಗೆಯಾದಾಗ ನೋಟುಗಳ ಸಂಖ್ಯೆಯೂ ಹೆಚ್ಚುವುದು ಸ್ವಾಭಾವಿಕ ಎಂದು ಬಿಜೆಪಿ ವಾದಿಸಿದೆ.
ಜಿಎಸ್‌ಟಿಯ ಯಶಸ್ಸಿಗೆ ನೋಟು ಅಮಾನ್ಯತೆ ಬುನಾದಿ: ಎಸ್. ಗುರುಮೂರ್ತಿ
ಡಿಮಾನಿಟೈಸೇಶನ್ ಮಾಡದಿರುತ್ತಿದ್ದರೆ, ಜಿಎಸ್‌ಟಿ ಯಶಸ್ವಿಯಾಗುತ್ತಿರಲಿಲ್ಲ. ಈ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗಿತ್ತು ಎನ್ನುತ್ತಾರೆ ಹಿರಿಯ ಆರ್ಥಿಕ ತಜ್ಞ ಎಸ್. ಗುರುಮೂರ್ತಿ. ನೋಟು ಅಮಾನ್ಯತೆ ಘೋಷಿಸಿದಾಗ ಅನೇಕ ಮಂದಿ ಟೀಕಿಸಿದ್ದರು. ಈಗಲೂ ಕೆಲವರು ಅದನ್ನು ಮುಂದುವರಿಸಿದ್ದಾರೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿಯ ಪ್ರಕಾರ ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆ (Informal Economy) ಇವತ್ತು ಇಳಿಕೆಯ ಹಾದಿಯಲ್ಲಿದೆ. ಶೇ.೫೨% ಇದ್ದುದು ಇದೀಗ 15%-16% ಕ್ಕೆ ಇಳಿದಿದೆ. ದೇಶದ ಅಭ್ಯುದಯದ ನಿಟ್ಟಿನಲ್ಲಿ ಇದು ಸಕಾರಾತ್ಮಕ ಬೆಳವಣಿಗೆ. ಜಿಎಸ್‌ಟಿಯ ಸಮರ್ಪಕ ಜಾರಿಗೆ ಇದು ಬುನಾದಿ ಆಯಿತು ಎನ್ನುತ್ತಾರೆ ಎಸ್. ಗುರುಮೂರ್ತಿ.