ನವ ದೆಹಲಿ: ಅಮೆರಿಕ ಮೂಲದ ಇಂಟರ್‌ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್‌ಗೆ (Google) ಭಾರತದಲ್ಲಿ ಎರಡನೇ ಬಾರಿಗೆ 936 ಕೋಟಿ ರೂ. ಮೊತ್ತದ ಭಾರಿ ದಂಡವನ್ನು ವಿಧಿಸಲಾಗಿದೆ.
ಗೂಗಲ್‌ನ ಮಾತೃಸಂಸ್ಥೆ ಅಲ್ಫಬೆಟ್‌ಗೆ ಮಂಗಳವಾರ ಈ ದಂಡ ವಿಧಿಸಲಾಗಿದೆ. ವಿಶ್ವಾಸ ನಷ್ಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಗೂಗಲ್ ತನ್ನ ಪೇಮೆಂಟ್ ಆ್ಯಪ್ ಮತ್ತು ಇನ್ ಆ್ಯಪ್ ಪೇಮೆಂಟ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಲು ಅಕ್ರಮ ಎಸಗಿದ ಆರೋಪವನ್ನು ಎದುರಿಸುತ್ತಿದೆ.
ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಗೂಗಲ್‌ಗೆ ನೀಡಿರುವ ನಿರ್ದೇಶನದಲ್ಲಿ, ಆಗಿರುವ ತಪ್ಪನ್ನು ನಿಗದಿತ ಅವಧಿಯೊಳಗೆ ತಿದ್ದಿಕೊಳ್ಳುವಂತೆ ಸೂಚಿಸಿದೆ. ಅಂದಹಾಗೆ ಗೂಗಲ್‌ಗೆ ವಾರದೊಳಗೆ ಎರಡನೇ ಸಲ ದಂಡ ವಿಧಿಸಲಾಗಿದೆ.
ಅಕ್ಟೋಬರ್ 20ರಂದು ಗೂಗಲ್‌ಗೆ 1,337 ಕೋಟಿ ರೂ. ದಂಡ ವಿಧಿಸಲಾಗಿತ್ತು. ತನ್ನ ಆ್ಯಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮೂಲಕ ಅಕ್ರಮ ಎಸಗಿರುವ ಪ್ರಕರಣದಲ್ಲಿ ಈ ದಂಡ ವಿಧಿಸಲಾಗಿತ್ತು.
ಗೂಗಲ್ ತನ್ನ ಯೂಟ್ಯೂಬ್ ಮತ್ತಿತರ ಆ್ಯಪ್‌ಗಳಿಗೆ ತನ್ನ ಬಿಲ್ಲಿಂಗ್ ಸಿಸ್ಟಮ್ ಅನ್ನು ಬಳಸುತ್ತಿರಲಿಲ್ಲ. ಇದು ಮಾರುಕಟ್ಟೆ ನೀತಿಗೆ ವಿರುದ್ಧವಾದುದು ಎಂದು ಸಿಸಿಐ ಪರಿಗಣಿಸಿತ್ತು.