ಖ್ಯಾತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ, ಕಳೆದ ಕೆಲ ವರ್ಷಗಳಿಂದ ಬೃಹತ್ ಸಾಲದ ಹೊರೆಯ ಮೇಲೆ ನಿಂತಿದ್ದು, ಆತಂಕ ಹುಟ್ಟಿಸಿದೆ ಎಂದು ಅಮೆರಿಕ ಮೂಲದ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ಸಮೂಹದ ಘಟಕವಾಗಿರುವ ಕ್ರೆಡಿಟ್‌ಸೈಟ್ಸ್ ಮಾಡಿರುವ ವರದಿ ಸಂಚಲನ ಸೃಷ್ಟಿಸಿದೆ. (ವಿಸ್ತಾರ Explainer) ಈ ಸ್ಫೋಟಕ ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರು ದರಗಳು ಕಳೆದ ಎರಡು ದಿನಗಳಿಂದ ಕುಸಿತಕ್ಕೀಡಾಗಿವೆ. ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ೯೪,೦೦೦ ಕೋಟಿ ರೂ. ನಷ್ಟವಾಗಿದೆ.
ಅದಾನಿ ಗ್ರೂಪ್‌ನ ಸಾಲ ೨,೩೦,೯೦೦ ಕೋಟಿ ರೂ!
ಅದಾನಿ ಗ್ರೂಪ್ ಕಳೆದ ಕೆಲ ವರ್ಷಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಭಾರಿ ಬಂಡವಾಳ ಹೂಡಿಕೆ ಮಾಡಿದೆ. ಆದರೆ ಈ ಅನೂಹ್ಯ ವಿಸ್ತರಣೆಗೆ ಭಾರಿ ಮೊತ್ತದ ಸಾಲದ ಹಣವನ್ನು ಬಳಸಿಕೊಳ್ಳಲಾಗಿದೆ. ೨೦೨೨ರ ಮಾರ್ಚ್ ೩೧ರ ವೇಳೆಗೆ ಅದಾನಿ ಗ್ರೂಪ್‌ನ ೬ ಪ್ರಮುಖ ಕಂಪನಿಗಳ ಒಟ್ಟು ಸಾಲದ ಹೊರೆ ೨.೩೦ ಲಕ್ಷ ಕೋಟಿ ರೂ.ಗಳಾಗಿವೆ. (೨,೩೦,೯೦೦ ಕೋಟಿ ರೂ.) ಒಂದು ವೇಳೆ ಅದಾನಿ ಸಮೂಹದ ಕಂಪನಿಗಳ ಪರಿಸ್ಥಿತಿ ಬಿಗಡಾಯಿಸಿದರೆ, ಅಂಥ ಕಂಪನಿಗಳು ಸಾಲದ ಬಲೆಯಲ್ಲಿ ಸಿಲುಕಿ ದಿವಾಳಿಯಾಗುವ ಅಪಾಯ ಇದೆ ಎಂದು ಕ್ರೆಡಿಟ್‌ಸೈಟ್ಸ್ ಎಚ್ಚರಿಸಿದೆ. ಹಾಗಾದರೆ ಅದಾನಿ ಸಮೂಹದ ಪ್ರಮುಖ ಕಂಪನಿಗಳು ಯಾವುದು? ಯಾವ ಬ್ಯಾಂಕ್‌ಗಳಿಂದ ಸಾಲ ಪಡೆದಿದೆ? ಅದಾನಿ ಸಮೂಹದ ಭವಿಷ್ಯವೇನು? ಕ್ರೆಡಿಟ್‌ಸೈಟ್ಸ್ ಬಿಡುಗಡೆಗೊಳಿಸಿರುವ ಸ್ಫೋಟಕ ವರದಿಯಲ್ಲಿ ಏನೇನಿದೆ? ಇಲ್ಲಿದೆ ವಿವರ.
ಕ್ರೆಡಿಟ್ ಸೈಟ್ಸ್ ವರದಿಯ ಮುಖ್ಯಾಂಶಗಳು:
- ಭಾರತದ ಅತಿ ದೊಡ್ಡ ಉದ್ದಿಮೆ ಸಮೂಹಗಳಲ್ಲೊಂದಾಗಿರುವ ಅದಾನಿ ಗ್ರೂಪ್‌ನ ಮೂಲಭೂತ ಅಂಶಗಳನ್ನು ಕ್ರೆಡಿಟ್‌ಸೈಟ್ಸ್ ವಿಶ್ಲೇಷಿಸಿದೆ. ಇದರ ಪ್ರಕಾರ ಕಳೆದ ಕೆಲ ವರ್ಷಗಳಿಂದ ಅದಾನಿ ಗ್ರೂಪ್, ವ್ಯಾಪಕ ವಿಸ್ತರಣೆ ಯೋಜನೆಯನ್ನು ಕೈಗೊಂಡಿದೆ. ಇದರ ಪರಿಣಾಮ ಅದರ ಸಾಲದ ಮೊತ್ತ ಅನೂಹ್ಯವಾಗಿ ವೃದ್ಧಿಸಿದೆ. ನಗದು ಹರಿವಿನ ಮೇಲೆ ಒತ್ತಡ ಉಂಟಾಗಿದೆ.
- ಅದಾನಿ ಗ್ರೂಪ್ ಈಗ ವ್ಯವಹಾರ ನಡೆಸುತ್ತಿರುವ ಹಾಗೂ ಹೊಸ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಮಾಡುತ್ತದೆ. ಅವುಗಳಿಗೆ ಭಾರಿ ಬಂಡವಾಳದ ಅಗತ್ಯವೂ ಇದೆ. ಆದರೆ ಯಥಾರ್ಥವಾಗಿ ಇದರ ಅನುಷ್ಠಾನ ಸಾಧ್ಯವೇ ಎಂಬ ಆತಂಕ ಉಂಟಾಗಿದೆ.
- ಸಮೂಹದ ಕಂಪನಿಗಳಲ್ಲಿ ಸಮೂಹದ ಪ್ರವರ್ತಕರ ಈಕ್ವಿಟಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ.
- ಮಾರುಕಟ್ಟೆಯ ಹಿಡಿತ ಸಾಧಿಸಲು ಅದಾನಿ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಜತೆ ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಇದರ ಪರಿಣಾಮ ಅಸಮರ್ಪಕ ಹಣಕಾಸು ನಿರ್ಣಯಗಳನ್ನು ಅದಾನಿ ಗ್ರೂಪ್ ಕೈಗೊಳ್ಳುವ ಸಾಧ್ಯತೆ ಇದೆ.
- ಅದಾನಿ ಗ್ರೂಪ್ ಆಡಳಿತಾತ್ಮಕ, ಪರಿಸರ, ಸಾಮಾಜಿಕ ಬದಲಾವಣೆಗಳ (ECG) ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
- ಹೀಗಿದ್ದರೂ, ಅದಾನಿ ಗ್ರೂಪ್, ದೇಶಿ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಜತೆಗೆ ಪ್ರಬಲ ಸಂಬಂಧವನ್ನು ಹೊಂದಿದೆ. ಈ ಬ್ಯಾಂಕ್‌ಗಳು ಅದಾನಿ ಗ್ರೂಪ್‌ಗೆ ದೊಡ್ಡ ಮೊತ್ತದ ಸಾಲವನ್ನು ನೀಡುತ್ತಿವೆ. ಹೊಸ ಬಿಸಿನೆಸ್ ಮಾಡಲೂ, ಈಗಿನ ಉದ್ದಿಮೆಯನ್ನು ವಿಸ್ತರಿಸಲೂ ಭರಪೂರ ಸಾಲ ವಿತರಿಸುತ್ತಿವೆ.
- ಅದಾನಿ ಗ್ರೂಪ್ ಪ್ರಬಲ ಮತ್ತು ಸ್ಥಿರವಾದ ಕಂಪನಿಗಳನ್ನು ಕಟ್ಟಿರುವ ಇತಿಹಾಸವನ್ನು ಹೊಂದಿದೆ. ಮೂಲಸೌಕರ್ಯ ವಲಯದಲ್ಲಿ ಬೆಳವಣಿಎ ದಾಖಲಿಸಿದೆ. ಇದು ಭಾರತದ ಆರ್ಥಿಕತೆಗೂ ಆರೋಗ್ಯಕರ.
- ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೀತಿಗಳು ಪೂರಕವಾಗಿವೆ. ಜತೆಗೆ ಗೌತಮ್ ಅದಾನಿ ಅವರು ಆಡಳಿತಾರೂಢ ಮೋದಿ ಸರ್ಕಾರದ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.
- ಒಟ್ಟಾರೆಯಾಗಿ ಭಾರಿ ಸಾಲದ ಹಣದ ಮೂಲಕ ಅದಾನಿ ಗ್ರೂಪ್‌ನ ಬೆಳವಣಿಗೆ ಮತ್ತು ವಿಸ್ತರಣೆ ನಡೆಯುತ್ತಿರುವುದರಿಂದ ಕ್ರೆಡಿಟ್ ಸೈಟ್ಸ್ ಎಚ್ಚರಿಕೆಯಿಂದ ಗಮನಿಸುತ್ತಿದೆ.
ಅದಾನಿ ಗ್ರೂಪ್ ಮೂರನೇ ಅತಿ ದೊಡ್ಡ ಸಮೂಹ
ಭಾರತದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಸಮೂಹದ ಬಳಿಕ ಮೂರನೇ ಅತಿ ದೊಡ್ಡ ಉದ್ದಿಮೆ ಸಮೂಹ ಅದಾನಿ ಗ್ರೂಪ್ ಆಗಿಎ. ೧೯೮೮ರಲ್ಲಿ ಸ್ಥಾಪನೆಯಾಗಿರುವ ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ ೨೦೨೨ರ ಆಗಸ್ಟ್ ೧೮ರ ವೇಳೆಗೆ ೨೦೦ ಶತಕೋಟಿ ಡಾಲರ್ ( ಅಂದಾಜು ೧೫.೮ ಲಕ್ಷ ಕೋಟಿ ರೂ.)
ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ, ಅದಾನಿ ಗ್ರೂಪ್‌ನ ೬ ಕಂಪನಿಗಳು
ಕಂಪನಿ | ಮಾರುಕಟ್ಟೆ ಬಂಡವಾಳ | ಬಿಸಿನೆಸ್ |
---|---|---|
ಅದಾನಿ ಎಂಟರ್‌ಪ್ರೈಸಸ್ (AEL) | 3.5 ಲಕ್ಷ ಕೋಟಿ ರೂ. | ಅದಾನಿ ಸಮೂಹದ ಪ್ರಮುಖ ಕಂಪನಿ. ಕಲ್ಲಿದ್ದಲು ಗಣಿಗಾರಿಕೆ, ಏರ್‌ಪೋರ್ಟ್, ಆಹಾರ ಎಫ್‌ಎಂಸಿಜಿ, ಡೇಟಾ ಸೆಂಟರ್, ಡಿಜಿಟಲ್ ಸೇವೆಗಳು |
ಅದಾನಿ ಗ್ರೀನ್ ಎನರ್ಜಿ (AGEL) | 3.5 ಲಕ್ಷ ಕೋಟಿ ರೂ. | ಭಾರತದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ. 11 ರಾಜ್ಯಗಳಲ್ಲಿ5.4 ಗಿಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆ. ಸೋಲಾರ್ (88%), ಪವನ ಶಕ್ತಿ (12%) |
ಅದಾನಿ ಪೋರ್ಟ್ಸ್ & ಸ್ಪೆಷಲ್ ಎಕನಾಮಿಕ್ ಝೋನ್ (APSEZ) | 1.8 ಲಕ್ಷ ಕೋಟಿ ರೂ. | ಭಾರತದ ಅತಿ ದೊಡ್ಡ ಖಾಸಗಿ ಬಂದರು ನಿರ್ವಾಹಕ. 13 ಬಂದರುಗಳ ನಿರ್ವಹಣೆ. |
ಅದಾನಿ ಪವರ್ (APL) | 1.5 ಲಕ್ಷ ಕೋಟಿ ರೂ. | ಭಾರತದ ಅತಿ ದೊಡ್ಡ ಉಷ್ಣ ವಿದ್ಯುತ್ ಉತ್ಪಾದಕ. 4 ಉಷ್ಣ ವಿದ್ಯುತ್ ಉತ್ಪಾದಕ, 1 ಸೌರ ವಿದ್ಯುತ್ ಘಟಕ. ಒಟ್ಟು ಸಾಮರ್ಥ್ಯ-12.5 GW. |
ಅದಾನಿ ಟೋಟಲ್ ಗ್ಯಾಸ್ (ATGL) | 3.8 ಲಕ್ಷ ಕೋಟಿ ರೂ. | ಭಾರತದ ಅತಿ ದೊಡ್ಡ ಖಾಸಗಿ ಅನಿಲ ವಿತರಕಗಳಲ್ಲೊಂದು. 124 ಜಿಲ್ಲೆಗಳಲ್ಲಿ 8,937 ಕಿ.ಮೀ ನೆಟ್‌ವರ್ಕ್ ಪೈಪ್‌ಲೈನ್ ಮೂಲಕ ಅನಿಲ ಪೂರೈಕೆ. |
ಅದಾನಿ ಟ್ರಾನ್ಸ್‌ಮಿಶನ್ (ATL) | 4 ಲಕ್ಷ ಕೋಟಿ ರೂ. | ದೇಶದ ಅತಿ ದೊಡ್ಡ ಖಾಸಗಿ ವಿದ್ಯುತ್ ವಿತರಣ ಕಂಪನಿಗಳಲ್ಲಿ ಒಂದು. 6 ರಾಜ್ಯಗಳಲ್ಲಿ 18,795 ಸರ್ಕ್ಯೂಟ್ ಕಿ.ಮೀ ಟ್ರಾನ್ಸ್‌ಮಿಶನ್ ಲೈನ್‌ಗಳು. |
ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಗಳು ಯಾವೆಲ್ಲ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿವೆ ಮತ್ತು ಅವುಗಳ ಮೌಲ್ಯ ಹಾಗೂ ಉದ್ದೇಶವನ್ನು ಕ್ರೆಡಿಟ್ ಸೈಟ್ಸ್ ಪಟ್ಟಿ ಮಾಡಿದೆ. ವಿವರ ಇಲ್ಲಿದೆ.
ಅದಾನಿ ಗ್ರೂಪ್ ಕಂಪನಿಗಳ ಇತ್ತೀಚಿನ ವರ್ಷಗಳ ಪ್ರಮುಖ ಸಾಲಗಳು:
ಕಂಪನಿ | ದಿನಾಂಕ | ಸಾಲ | ಸಾಲ ವಿತರಕ | ಉದ್ದೇಶ |
---|---|---|---|---|
ಅದಾನಿ ಎಂಟರ್‌ಪ್ರೈಸಸ್ | ಮಾರ್ಚ್ 22 | 12,770 ಕೋಟಿ ರೂ | ಎಸ್ಬಿಐ | ನವಿ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ |
ಮೇ 22 | 750 ದಶಲಕ್ಷ ಡಾಲರ್ (5,925 ಕೋಟಿ ರೂ.) | ಅಪೊಲೊ ಗ್ಲೋಬಲ್ ಮ್ಯಾನೇಜ್ಮೆಂಟ್ | ಹಾಲಿ ಸಾಲಗಳ ನಿರ್ವಹಣೆಗೆ ಮರು ಹಣಕಾಸು. ಮುಂಬಯಿ ಏರ್‌ಪೋರ್ಟ್ ಅಭಿವೃದ್ಧಿ | |
ಮೇ-22 | 250 ದಶಲಕ್ಷ ಡಾಲರ್ (1,975 ಕೋಟಿ ರೂ.) | ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಬಾರ್‌ಕ್ಲೇಸ್ ಬ್ಯಾಂಕ್ | ಅದಾನಿ ಏರ್‌ಪೋರ್ಟ್ಸ್ ನಡೆಸುತ್ತಿರುವ 6 ಏರ್‌ಪೋರ್ಟ್ ಅಭಿವೃದ್ಧಿ | |
ಜೂನ್-22 | 6,000 ಕೋಟಿ ರೂ. | ಎಸ್ಬಿಐ | ಗುಜರಾತ್ನಲ್ಲಿ ತಾಮ್ರ ಸಂಸ್ಕರಣೆ ಘಟಕ ನಿರ್ಮಾಣ | |
ಅದಾನಿ ಗ್ರೀನ್ ಎನರ್ಜಿ | ಮಾರ್ಚ್-21 | 1.35 ಶತಕೋಟಿ ಡಾಲರ್ (10,665 ಕೋಟಿ ರೂ.) | ಸಂಯೋಜಿತ ಸಾಲ, ವಿತರಕರು-ಬಾರ್‌ಕ್ಲೇಸ್, ಬಿಎನ್‌ಪಿ, ಡ್ಯೂಯಿಚ್ ಬ್ಯಾಂಕ್, ಐಎನ್‌ಜಿ, ರಾಬೊ ಬ್ಯಾಂಕ್, ಸಿಮೆನ್ಸ್ ಬ್ಯಾಂಕ್, ಎಸ್‌ಎಂಬಿಸಿ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ | ರಾಜಸ್ಥಾನದಲ್ಲಿ 1.7 ಗಿಗಾವ್ಯಾಟ್ ಹೈಬ್ರಿಡ್ ಸೌರ ಮತ್ತು ಪವನ ವಿದ್ಯುತ್ ಯೋಜನೆ |
ಅದಾನಿ ಪೋರ್ಟ್ಸ್ | ಏಪ್ರಿಲ್-20 | 600 ದಶಲಕ್ಷ ಡಾಲರ್ (4,740 ಕೋಟಿ ರೂ.) | ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ | ಧಾಮ್ರಾ ಬಂದರಿನಲ್ಲಿ ಎಲ್‌ಎನ್‌ಜಿ ಟರ್ಮಿನಲ್ |
ಅದಾನಿ ಟ್ರಾನ್ಸ್‌ಮಿಶನ್ | ಅಕ್ಟೋಬರ್-21 | 700 ದಶಲಕ್ಷ ಡಾಲರ್ (5,530 ಕೋಟಿ ರೂ.) | ಡಿಬಿಎಸ್, ಮಿಜುವೊ, ಸಿಮೆನ್ಸ್ ಬ್ಯಾಂಕ್, ಎಸ್‌ಎಂಬಿಸಿ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ | 4 ವಿದ್ಯುತ್ ಸಾಗಣೆ ಯೋಜನೆಗಳ ಅಭಿವೃದ್ಧಿ. ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆ. |
ಅದಾನಿ ಕಂಪನಿಗಳು ದಿವಾಳಿಯಾದರೆ ಎಕಾನಮಿಗೆ ಹೊಡೆತ: ಕ್ರೆಡಿಟ್ ಸೈಟ್ಸ್ ಎಚ್ಚರಿಕೆ
ಕ್ರೆಡಿಟ್ ಸೈಟ್ಸ್ ವರದಿ ಅಂತಿಮವಾಗಿ ಹೇಳುವುದಿಷ್ಟು: ಅದಾನಿ ಗ್ರೂಪ್ ತನ್ನ ಸಾಂಪ್ರದಾಯಿಕ ಬಿಸಿನೆಸ್ ಹಾಗೂ ಹೊಸ ಉದ್ದಿಮೆಗಳಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡುತ್ತಿದೆ. ಅವುಗಳು ಭಾರಿ ಬಂಡವಾಳ ಬಯಸುವ ಕ್ಷೇತ್ರಗಳೂ ಹೌದು. ಈ ವಿಸ್ತರಣೆಗೆ ಭಾರಿ ಮೊತ್ತದ ಸಾಲ ಪಡೆಯಲಾಗುತ್ತಿದೆ. ಇದರ ಪರಿಣಾಮ ಇಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಅದಾನಿ ಗ್ರೂಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಂಪನಿಗಳು ಸಾಲದ ಬಲೆಗೆ ಸಿಕ್ಕಿ ದಿವಾಳಿಯಾಗಬಹುದು. ಆದರೆ ಇದರಿಂದ ಭಾರತೀಯ ಮಾರುಕಟ್ಟೆ ಮತ್ತು ಎಕಾನಮಿಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವರದಿ ಎಚ್ಚರಿಸಿದೆ.
ಅದಾನಿ ಗ್ರೂಪ್‌ನ ಬಲ ಯಾವುದರಲ್ಲಿದೆ?
ಹಾಗಂತ ಅದಾನಿ ಸಮೂಹದ ಸಕಾರಾತ್ಮಕ ಅಂಶಗಳನ್ನೂ ವರದಿ ಪ್ರಸ್ತಾಪಿಸಿದೆ. ದೇಶಿ-ವಿದೇಶಿ ಬ್ಯಾಂಕ್ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಫಂಡ್ ಪಡೆಯಬಲ್ಲ ಸಾಮರ್ಥ್ಯ, ಮೂಲಸೌಕರ್ಯ ಉದ್ದಿಮೆಯಲ್ಲಿ ಸ್ಥಿರವಾದ ಬೆಳವಣಿಗೆ, ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಅಸ್ತಿತ್ವ, ಭವಿಷ್ಯದಲ್ಲೂ ದೇಶದ ಬೆನ್ನೆಲುಬಾಗಿರುವ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬೆಳವಣಿಗೆಗೆ ವಿಫುಲ ಅವಕಾಶ ಕಂಪನಿಗೆ ಇರುವುದು ಅದಾನಿ ಗ್ರೂಪ್‌ಗೆ ಸಕಾರಾತ್ಮಕ ಅಂಶಗಳಾಗಿವೆ ಎಂದು ವರದಿ ಹೇಳಿದೆ. ಆದರೆ ಒಟ್ಟಾರೆಯಾಗಿ ಭಾರಿ ಸಾಲದ ದುಡ್ಡಿನಲ್ಲಿ ವಿಸ್ತರಣೆಯಾಗುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದಿದೆ ವರದಿ.
ಅದಾನಿ ನಿವ್ವಳ ಸಂಪತ್ತು ಅನೂಹ್ಯ ಏರಿಕೆಯಾಗಿದ್ದು ಹೇಗೆ?
ಬ್ಲೂಮ್ ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಕಳೆದ ಎರಡು ವರ್ಷಗಳ ಹಿಂದೆ ಗೌತಮ್ ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ೧೦ ಶತಕೋಟಿ ಡಾಲರ್ ಆಗಿತ್ತು. ( ೭೯ ಸಾವಿರ ಕೋಟಿ ರೂ.) ಈಗ ೧೩೬ ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.( ೧೦.೭೪ ಲಕ್ಷ ಕೋಟಿ ರೂ.) ಹೀಗಾಗಿ ಗೌತಮ್ ಅದಾನಿ ಏಷ್ಯಾದ ನಂ.೧ ಶ್ರೀಮಂತರೆನಿಸಿದ್ದಾರೆ. ಆದರೆ ಇದು ಷೇರುಗಳ ಮಾರುಕಟ್ಟೆ ಮೌಲ್ಯ ವೃದ್ಧಿಸಿ ಸೃಷ್ಟಿಯಾಗಿರುವ, ಕಾಗದದ ಮೇಲಿರುವ ಸಂಪತ್ತು (paper wealth) ಎಂದು ವರದಿ ತಿಳಿಸಿದೆ. ೧೯೮೦ರ ಕೊನೆಯಲ್ಲಿ ಸರಕು ಮಾರಾಟದ ಸಣ್ಣ ಕಂಪನಿಯಾಗಿದ್ದ ಅದಾನಿ ಗ್ರೂಪ್ ಬಳಿಕ ಗಣಿಗಾರಿಕೆ, ಬಂದರು, ವಿದ್ಯುತ್ ಘಟಕ, ವಿಮಾನ ನಿಲ್ದಾಣ, ಡೇಟಾ ಸೆಂಟರ್, ರಕ್ಷಣಾ ಉತ್ಪಾದನೆ ಮುಂತಾದ ವಲಯಗಳಲ್ಲಿ ವಹಿವಾಟು ವಿಸ್ತರಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಜತೆ ಸ್ಪರ್ಧೆ
ಅದಾನಿ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಡುವಣ ಪೈಪೋಟಿ ಮತ್ತು ಅದರ ಸಂಭವನೀಯ ಪರಿಣಾಮಗಳ ಬಗ್ಗೆ ಕೂಡ ಕ್ರೆಡಿಟ್‌ಸೈಟ್ಸ್ ಪ್ರಸ್ತಾಪಿಸಿದೆ. ಗೌತಮ್ ಅದಾನಿ, ಮುಕೇಶ್ ಅಂಬಾನಿ ಇಬ್ಬರೂ ಗುಜರಾತ್ ಮೂಲದ ಉದ್ಯಮಿಗಳು. ಅದಾನಿ ೨೦೧೫ರಲ್ಲಿ ಅದಾನಿ ಗ್ರೀನ್ ಎನರ್ಜಿ ಮೂಲಕ ನವೀಕರಿಸಬಹುದಾದ ಇಂಧನ ಬಿಸಿನೆಸ್‌ಗೆ ಪ್ರವೇಶಿಸಿದರು. ೨೦೨೧ರ ಅಕ್ಟೋಬರ್‌ನಲ್ಲಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಪ್ರವೇಶಿಸುತ್ತಿರುವುದಾಗಿ ಘೋಷಿಸಿತು. ಈ ದಶಕದೊಳಗೆ ೧೦೦ ಗಿಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯನ್ನು ಅದು ಹೊಂದಿದೆ. ರಿಲಯನ್ಸ್ ೨೦೧೫ರಲ್ಲಿ ರಿಲಯನ್ಸ್ ಜಿಯೊ ಮೂಲಕ ಟೆಲಿಕಾಂ ವಲಯವನ್ನು ಪ್ರವೇಶಿಸಿತು. ಅದಾನಿ ಅವರು ೫ಜಿ ಸ್ಪಕ್ಟ್ರಮ್ ಹರಾಜಿನಲ್ಲಿ ಭಾಗವಹಿಸುವ ಮೂಲಕ ಹಿಂಬಾಲಿಸುತ್ತಿದ್ದಾರೆ. ಖಾಸಗಿ ಬಳಕೆಗೆ ೫ಜಿ ಎಂಟರ್‌ಪ್ರೈಸಸ್ ನೆಟ್ ವರ್ಕ್ ಸಲ್ಯೂಷನ್ಸ್ (ಬಿ೨ಬಿ) ಅಳವಡಿಸುವುದಾಗಿ ಹೇಳಿದ್ದರೂ, ಕನ್‌ಸ್ಯೂಮರ್ ಮೊಬೈಲ್ ವಲಯಕ್ಕೆ ಪ್ರವೇಶಿಸುವ ಸಾಧ್ಯತೆಯನ್ನು ಅಲ್ಲಗಳೆಯುವುದು ಕಷ್ಟ. ಹೀಗೆ ಎರಡು ಮೆಗಾ ಸಮೂಹಗಳು ನವೀಕರಿಸಬಹುದಾದ ಇಂಧನ, ಟೆಲಿಕಾಂ ಮತ್ತಿತರ ಉದ್ದಿಮೆಗಳಲ್ಲಿ ಜಿದ್ದಿಗೆ ಬಿದ್ದರೆ, ಉಭಯ ಬಣಗಳೂ ಆರ್ಥಿಕ ದೃಷ್ಟಿಯಿಂದ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಕ್ರೆಡಿಟ್‌ಸೈಟ್ಸ್ ವರದಿಯ ಬೆನ್ನಲ್ಲೇ ಅದಾನಿ ಗ್ರೂಪ್‌ನ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ೯೪,೦೦೦ ಕೋಟಿ ರೂ. ನಷ್ಟವಾಗಿರುವುದು ಗಮನಾರ್ಹ ಎನ್ನುತ್ತಾರೆ ತಜ್ಞರು. ಜತೆಗೆ ಭಾರಿ ಸಾಲದ ಹೊರೆಯನ್ನು ಮುಂಬರುವ ವರ್ಷಗಳಲ್ಲಿ ಅದಾನಿ ಗ್ರೂಪ್ ಹೇಗೆ ನಿರ್ವಹಿಸಲಿದೆ? ಸಾಲ ಮುಕ್ತವಾಗಲಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಮಾತ್ರವಲ್ಲದೆ ಅದಾನಿ ಗ್ರೂಪ್‌ಗೆ ಈ ಮಟ್ಟದಲ್ಲಿ ಬೃಹತ್ ಮೊತ್ತದ ಸಾಲ ಪಡೆಯಲು ಹೇಗೆ ಸಾಧ್ಯವಾಯಿತು ಎಂಬುದು ಮಾರುಕಟ್ಟೆ ತಜ್ಞರಲ್ಲಿ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಇದನ್ನೂ ಓದಿ: NDTV | ಅದಾನಿಗೆ RRPR ಷೇರು ಖರೀದಿಗೆ ಸೆಬಿ ಅನುಮತಿ ಅಗತ್ಯ: ಎನ್‌ಡಿಟಿವಿ