ಅದಾನಿ ಸಮೂಹದ ಷೇರುಗಳ ಪತನ ಭಾರತೀಯ ಕಂಪನಿಗಳ ಮೇಲಿನ ದಾಳಿಯೇ? ಇದರಿಂದ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಹೊಡೆತ ಉಂಟಾಗಲಿದೆಯಾ?
ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬಿಕ್ಕಟ್ಟು ಅಥವಾ ಎಫ್‌ಪಿಒ ಹಿಂತೆಗೆತದ ಪರಿಣಾಮ ಭಾರತದ ಆರ್ಥಿಕತೆಯ ಮೇಲೆ ಯಾವುದೇ ನಕಾರಾತ್ಮಕ ಪ್ರಭಾವ ಆಗದು ಎಂದು ಸ್ವತಃ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ೫,೦೦೦ಕ್ಕೂ ಹೆಚ್ಚು ಷೇರುಗಳು ನೊಂದಣಿಯಾಗಿವೆ. ಅವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಷೇರುಗಳು ನಿತ್ಯ ಸಕ್ರಿಯವಾಗಿ ವಹಿವಾಟು ನಡೆಸುತ್ತಿವೆ. ಅದಾನಿ ಷೇರುಗಳ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಷೇರು ಮಾರುಕಟ್ಟೆ ಗಣನೀಯವಾಗಿ ಚೇತರಿಸುವ ವಿಶ್ವಾಸದಲ್ಲಿದೆ ಎನ್ನುತ್ತಾರೆ ವಿಶ್ಲೇಷಕರು.
ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಸೆಬಿ, ಸುಪ್ರೀಂಕೋರ್ಟ್ ಮತ್ತು ಸರ್ಕಾರದ ಮಟ್ಟದಲ್ಲಿ ಇತ್ತೀಚಿನ ಬೆಳವಣಿಗೆಗಳೇನು? ಏನಾಗಬಹುದು?
ಸೆಬಿ ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಮಾಹಿತಿಯ ಪ್ರಕಾರ ಹಿಂಡೆನ್ ಬರ್ಗ್ ವಿರುದ್ಧದ ಆರೋಪಗಳು ಹಾಗೂ ಅದಾನಿ ಕಂಪನಿಗಳ ಷೇರುಗಳ ದಿಢೀರ್ ಕುಸಿತದ ಬಗ್ಗೆ ತನಿಖೆ ಆರಂಭಿಸಿದೆ. ಆದರೆ ತನಿಖೆ ಪ್ರಾಥಮಿಕ ಹಂತದಲ್ಲಿ ಇರುವುದರಿಂದ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಿದೆ.
ಹಿಂಡೆನ್ ಬರ್ಗ್ ಉದ್ದೇಶವೇನು? ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ ಬರ್ಗ್ ಮಾಡಿರುವ ಪ್ರಮುಖ ಆರೋಪವೇನು? ಭಾರತದ ಹಿತಾಸಕ್ತಿಯೇ ಅಥವಾ ಬೇರೆ ಏನಾದರೂ ವ್ಯವಹಾರದ ಉದ್ದೇಶ ಇತ್ತೇ?
ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಜನವರಿ 24ರಂದು ಅದಾನಿ ಗ್ರೂಪ್ ವಿರುದ್ಧ ಒಟ್ಟು 88 ಪ್ರಶ್ನೆಗಳನ್ನು ಮಾಡಿತ್ತು. ಇದಕ್ಕೆ ಅದಾನಿ ಗ್ರೂಪ್ ಕೆಲ ದಿನಗಳ ಬಳಿಕ 413 ಪುಟಗಳ ಉತ್ತರವನ್ನು ಕೊಟ್ಟಿತ್ತು. ಆದರೆ ಅದಾನಿ ಗ್ರೂಪ್ ತನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿಲ್ಲ ಎಂದು ಹಿಂಡೆನ್ ಬರ್ಗ್ ಆರೋಪಿಸಿತ್ತು. ಆದರೆ ಅದಾನಿ ಕಂಪನಿಗಳ ವಿರುದ್ಧ ಶಾರ್ಟ್ ಸೆಲ್ಲರ್ ಮಾಡುತ್ತಿರುವುದಾಗಿ ತಿಳಿಸಿದೆ.
ಅದಾನಿ ಕಂಪನಿಗಳ ಷೇರು ದರಗಳು ಈಗಲೂ ಸರಾಸರಿ 40% ಕುಸಿತದ ದರದಲ್ಲಿಯೇ ಮುಂದುವರಿದಿದೆ. ಇದರ ಚೇತರಿಗೆ ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗಬಹುದು. ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಬರಬೇಕು. ಹಿಂಡೆನ್ ಬರ್ಗ್ ವರದಿಯ ಬಳಿಕ ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಮೂಡಿಸುವುದು ಹೇಗೆ ಎಂಬುದು ಅತಿ ದೊಡ್ಡ ಸವಾಲು. ಎರಡನೆಯದಾಗಿ ಎಫ್‌ಪಿಒ ಹಿಂತೆಗೆತದ ಬಳಿಕ ಕ್ಯೂ ಐಪಿ, ಪ್ರಿಫರೆನ್ಷಿಯಲ್ ಷೇರುಗಳ ಬಿಡುಗಡೆಯ ವಿಧಾನವನ್ನು ಅನುಸರಿಸಬೇಕಾಗಿದೆ. ಕ್ಯೂ ಐಪಿಯಲ್ಲಿ ಮಾರುಕಟ್ಟೆ ನಿಯಂತ್ರಕದ ಅನುಮತಿ ಇಲ್ಲದೆಯೂ ಷೇರುಗಳನ್ನು ಬಿಡುಗಡೆಗೊಳಿಸಿ ಹಣ ಸಂಗ್ರಹಿಸಬಹುದು.
5. ಅದಾನಿ ಸಾಲ ಮರುಪಾವತಿಸುತ್ತಿದೆಯೇ? ಎಷ್ಟು ಸಾಲ ಇದೆ?
ಅದಾನಿ ಗ್ರೂಪ್ ಇದುವರೆಗೆ ಸಾಲವನ್ನು ಸರಿಯಾಗಿ ಮರು ಪಾವತಿಸುತ್ತಲೇ ಬಂದಿದೆ. ಒಟ್ಟಾರೆಯಾಗಿ 2.26 ಲಕ್ಷ ಕೋಟಿ ರೂ. ಸಾಲವನ್ನು ಅದು ಹೊಂದಿದೆ. 29,754 ಕೋಟಿ ರೂ. ನಗದನ್ನು ಹೊಂದಿದೆ. ಹೀಗಾಗಿ 1.96 ಲಕ್ಷ ಕೋಟಿ ನಿವ್ವಳ ಸಾಲವನ್ನು ಹೊಂದಿದೆ. ಹೀಗಿದ್ದರೂ, ಹಿಂಡೆನ್ ಬರ್ಗ್ ವರದಿಯಿಂದ ಭವಿಷ್ಯದಲ್ಲಿ ಅದಾನಿ ಗ್ರೂಪ್‌ಗೆ ಹೊಸತಾಗಿ ಸಾಲ ಪಡೆಯಲು ಕಷ್ಟವಾಗಬಹುದು ಎಂದು ಮೂಡೀಸ್ ರೇಟಿಂಗ್ ಏಜೆನ್ಸಿ ಎಚ್ಚರಿಸಿದೆ. ಮತ್ತೊಂದು ಕಡೆ ಫಿಚ್ ರೇಟಿಂಗ್ ಸದ್ಯಕ್ಕೆ ಅದಾನಿ ಗ್ರೂಪ್‌ನ ರೇಟಿಂಗ್ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಇಲ್ಲ ಎಂದಿದೆ.
ಎಲ್‌ಐಸಿ ಮತ್ತು ಎಸ್‌ಬಿಐ ಹಾಗೂ ಅದಾನಿ ಸಮೂಹದ ನಡುವಣ ವ್ಯವಹಾರಗಳೇನು? ಅದಾನಿ ಗ್ರೂಪ್ ಕಂಪನಿಗಳು ಒಂದು ವೇಳೆ ಸಾಲ ಮರು ಪಾವತಿಸದಿದ್ದರೆ, ಷೇರುಗಳ ದರ ಚೇತರಿಸದಿದ್ದರೆ ಇವುಗಳಿಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆಯೇ?
ಎಲ್‌ಐಸಿ ಬಿಡುಗಡೆಗೊಳಿಸಿರುವ ಹೇಳಿಕೆ ಪ್ರಕಾರ 35,917 ಕೋಟಿ ರೂ. ಮೌಲ್ಯದ ಷೇರುಗಳನ್ನು ಅದಾನಿ ಕಂಪನಿಗಳಲ್ಲಿ ಹಲವು ವರ್ಷಗಳಿಂದ ಖರೀದಿಸಿದೆ. ಅವುಗಳ ಮಾರುಕಟ್ಟೆ ಮೌಲ್ಯ 56,142 ಕೋಟಿ ರೂ. ಎಸ್‌ಬಿಐ 27,000 ಕೋಟಿ ರೂ. ಸಾಲವನ್ನು ಅದಾನಿ ಕಂಪನಿಗೆ ನೀಡಿದೆ.
ಅದಾನಿ ಗ್ರೂಪ್ ಬಿಕ್ಕಟ್ಟಿನ ರಾಜಕೀಯ ಆಯಾಮಗಳೇನು? ಇದರಿಂದ ಮೋದಿ ಸರ್ಕಾರಕ್ಕೆ ಹಿನ್ನಡೆ ಹಾಗೂ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಗಲಿದೆಯೇ?
ಅದಾನಿ ಗ್ರೂಪ್ ವಿರುದ್ಧ ಜಂಟಿ ಸಂಸದೀಯ ತನಿಖೆ ನಡೆಸಬೇಕು ಹಾಗೂ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಆದರೆ ಅದಾನಿ ಬಿಕ್ಕಟ್ಟಿನಿಂದ ಮೋದಿಯವರ ವರ್ಚಸ್ಸಿಗೆ ಧಕ್ಕೆ ಆಗಿಲ್ಲ ಎಂದು ಇತ್ತೀಚಿನ ಸಮೀಕ್ಷೆಗಳು ತಿಳಿಸಿವೆ.
ಷೇರು ಹೂಡಿಕೆದಾರರು ಅದಾನಿ ಸಮೂಹದ ಷೇರುಗಳ ದಿಢೀರ್ ಕುಸಿತದಿಂದ ಕಲಿಯಬೇಕಾದ ಪಾಠವೇನು?
ಯಾವುದೇ ಕಂಪನಿಯ ಷೇರು ದರ ತೀವ್ರಗತಿಯಲ್ಲಿ ಏರುತ್ತಿದ್ದರೆ, ಅದರಲ್ಲಿ ಹೂಡಿಕೆಗೆ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕು. ಕಂಪನಿಯ ಫಂಡಮೆಂಟಲ್ ಬಗ್ಗೆ ತಿಳಿದುಕೊಳ್ಳಬೇಕು. ಎರಡನೆಯದಾಗಿ ಅದಾನಿ ಸಮೂಹದ ಕಂಪನಿಗಳಲ್ಲಿ ರಿಸ್ಕ್ ತೆಗೆದುಕೊಂಡು ಹೂಡಿಕೆ ಮಾಡುವವರಿಗೆ ಖರೀದಿಯ ಅವಕಾಶವೂ ಸಿಕ್ಕಿದೆ.
ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ ಷೇರು ದರಗಳು ಏರಿಕೆ ದಾಖಲಿಸಿವೆ. ಮ್ಯೂಚುವಲ್ ಫಂಡ್ ಕಂಪನಿಗಳು ಈ ಎರಡು ಕಂಪನಿಗಳ ಷೇರುಗಳನ್ನು ಖರೀದಿಸುತ್ತಿವೆ. ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಸಮೂಹದ 10 ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 75% ಏರಿಕೆಯಾಗಿದೆ. ಅದಾನಿ ಪೋರ್ಟ್, ಅದಾನಿ ಎಂಟರ್‌ಪ್ರೈಸಸ್ ಷೇರು ಏರಿದ್ದರೂ, ಇತರ ಕಂಪನಿಗಳ ಷೇರು ದರಗಳು ಇಳಿದಿವೆ.