ಭಾರತದ ಮೊಟ್ಟ ಮೊದಲ ಕೇಬಲ್ ಆಧರಿತ ರೈಲ್ವೆ ಸೇತುವೆ ( cable-styled’ bridge) ನಿರ್ಮಾಣದ ಅಂತಿಮ ಘಟ್ಟದಲ್ಲಿದೆ. (Anji bridge) 2023ರ ಮೇ ವೇಳೆಗೆ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ. ಜಮ್ಮು ಕಾಶ್ಮೀರದಲ್ಲಿ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಕೇಬಲ್ ಆಧರಿತ ರೈಲ್ವೆ ಸೇತುವೆ ದೇಶದ ಎಂಜಿನಿಯರಿಂಗ್ ಕೌಶಲಕ್ಕೆ ಸಾಕ್ಷಿ ಎಂದೇ ಬಣ್ಣಿಸಲಾಗುತ್ತಿದೆ. ಅಂಜಿ ಬ್ರಿಡ್ಜ್ ಎಂದೇ ಇದು ಜನಪ್ರಿಯವಾಗುತ್ತಿದೆ.
193 ಮೀಟರ್ ಎತ್ತರದ ಸೇತುವೆಯ ವಿಶೇಷತೆ ಹಲವು
ಈ ಸೇತುವೆಯ ಮೇಲೆ ರೈಲನ್ನು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಾಯಿಸಬಹುದು. ಹೀಗಿದ್ದರೂ, ಗಾಳಿಯ ವೇಗ ಗಂಟೆಗೆ 90 ಕಿ.ಮೀಗಿಂತ ಹೆಚ್ಚು ಇದ್ದರೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗಂಟೆಗೆ 213 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ ಸೇತುವೆ ತಡೆದುಕೊಳ್ಳಬಲ್ಲುದು.
ಜಮ್ಮುವಿನಿಂದ 80 ಕಿ.ಮೀ ದೂರದಲ್ಲಿ ಇರುವ ಈ ಸೇತುವೆಯು 473 ಮೀಟರ್ ಉದ್ದವಿದೆ. ಉಧಾಮ್‌ಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯಲ್ಲಿ ( Udhampur -Srinagar-Baramulla-Rail Link-USBRL) ಕಾತ್ರಾ-ಬನಿಹಾಲ್ ನಡುವೆ 2 ಮತ್ತು 3ನೇ ಸುರಂಗವನ್ನು ಈ ಸೇತುವೆ ಜೋಡಿಸುತ್ತದೆ. ಕಾತ್ರಾದಿಂದ ಬನಿಹಾಲ್ ನಡುವೆ 111 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಬನಿಹಾಲ್ ಮತ್ತು ಬಾರಾಮುಲ್ಲಾಗೆ ರೈಲು ಸಂಪರ್ಕ ಸಿಗಲಿದೆ. ಒಂದು ದೈತ್ಯ ಸ್ತಂಭವನ್ನು ಈ ಸೇತುವೆ ಆಧರಿಸಿದ್ದು, ಈಗಾಗಲೇ ತಿಳಿಸಿರುವಂತೆ ಎರಡು ಸುರಂಗಗಳನ್ನು ಜೋಡಿಸುತ್ತದೆ. ಕಾತ್ರಾ ಕಡೆಯ ಸುರಂಗ ಮಾರ್ಗ 5 ಕಿ.ಮೀ ಉದ್ದ ಹಾಗೂ ಕಾಶ್ಮೀರ ಕಡೆಯ ಸುರಂಗ 3 ಕಿ.ಮೀ ಉದ್ದವನ್ನು ಹೊಂದಿದೆ. ಎರಡೂ ಸುರಂಗಗಳಲ್ಲಿ ರೈಲ್ವೆ ಹಳಿಯನ್ನು ನಿರ್ಮಿಸಲಾಗಿದೆ. 2017ರಲ್ಲಿ ಈ ಕೇಬಲ್ ಸೇತುವೆಯ ಕಾಮಗಾರಿ ಆರಂಭವಾಗಿತ್ತು. ಹೀಗಿದ್ದರೂ, ಮೇನ್ ಕೇಬಲ್ ಅಳವಡಿಕೆ 2018ರಲ್ಲಿ ಶುರುವಾಗಿತ್ತು. ಭೂಕಂಪನದ ಸಾಧ್ಯತೆ ಬಗ್ಗೆಯೂ ರೂರ್ಕೆ ಐಐಟಿಯ ತಂಡ ಇಲ್ಲಿ ಅಧ್ಯಯನ ನಡೆಸಿದೆ.
ಯೋಜನೆಯ ಲಾಭವೇನು?
ಉಧಾಮ್‌ಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯಿಂದ ಕಾಶ್ಮೀರ ಕಣಿವೆಗೂ ರಾಷ್ಟ್ರೀಯ ರೈಲ್ವೆ ಜಾಲಕ್ಕೂ ಸಂಪರ್ಕ ಸಿಗಲಿದೆ. ಈ ರೈಲ್ವೆ ಸೇತುವೆಯ ಆಯುಷ್ಯ 120 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. 40 ಕೆ.ಜಿ ಸ್ಫೋಟಗಳನ್ನು ಸೇತುವೆ ಮೇಲೆ ಸ್ಫೋಟಿಸಿದರೂ, ಸೇತುವೆಗೆ ಹಾನಿಯಾಗುವುದಿಲ್ಲ. ಹಲವಾರು ಕಡೆಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ತೀವ್ರ ನಿಗಾ ವ್ಯವಸ್ಥೆಯನ್ನು ಹೊಂದಿದೆ.
ತೂಗು ಸೇತುವೆ ಅಲ್ಲ, ಹಾಗಾದರೆ ಏನು?
ಮೇಲ್ನೋಟಕ್ಕೆ ಈ ಕೇಬಲ್ ಆಧರಿತ ಸೇತುವೆಯು ತೂಗು ಸೇತುವೆಯಂತೆ ಕಾಣುತ್ತದೆ. ಏಕೆಂದರೆ ತೂಗಾಡುವ ಲೇನ್‌ಗಳು, ಗೋಪುರವು ತೂಗುಸೇತುವೆಯನ್ನು ಹೋಲುತ್ತವೆ. ಆದರೆ ಅದಕ್ಕೂ ಇದಕ್ಕೂ ವ್ಯತ್ಯಾಸ ಇದೆ. ಕೇಬಲ್ ಆಧರಿತ ಸೇತುವೆಗೆ ತೂಗು ಸೇತುವೆಗೆ ಬೇಕಾಗುವಂತೆ ಎರಡು ಗೋಪುರಗಳ ಅವಶ್ಯಕತೆ ಇಲ್ಲ. ಬದಲಿಗೆ ಒಂದೇ ಸ್ತಂಭವನ್ನು ಆಧರಿಸಿ ಇಕ್ಕೆಲಗಳಲ್ಲೂ ಕೇಬಲ್‌ಗಳನ್ನು ವಿಸ್ತರಿಸಿ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ಎರಡೂ ತುದಿಗಳಲ್ಲಿ ಗೋಪುರಗಳ ಅಗತ್ಯ ಇದಕ್ಕಿರುವುದಿಲ್ಲ.
ಸೇತುವೆಗೆ ಕಡಿಮೆ ಉಕ್ಕು ಸಾಕು:
ಕೇಬಲ್ ಆಧರಿತ ಸೇತುವೆಯು ಸಂಕೋಚನದ ಒತ್ತಡವನ್ನು ಹೀರಿಕೊಳ್ಳುವ ಮತ್ತು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸೇತುವೆಗೆ ಹಲವಾರು ಕಡೆಗಳಲ್ಲಿ ಕಟ್ಟಿದ ಕೇಬಲ್‌ಗಳು ಗೋಪುರದಲ್ಲಿ ಒಂದು ಪಾಯಿಂಟ್‌ನಲ್ಲಿ ಸಂಧಿಸುತ್ತವೆ. ಯುರೋಪ್‌ನಲ್ಲಿ ಎರಡನೇ ಜಾಗತಿಕ ಯುದ್ಧದ ಸಂದರ್ಭ ಕೇಬಲ್ ಆಧರಿತ ಸೇತುವೆಗಳನ್ನು ನಿರ್ಮಿಸಲಾಗಿತ್ತು. ಆದರೆ 16ನೇ ಶತಮಾನದ ಹಿಂದೆಯೇ ಐರೋಪ್ಯ ಸಂಶೋಧಕ ಫೌಸ್ಟ್ ವ್ರಾನ್‌ಸಿಸ್ ಇಂಥ ಎಂಜಿನಿಯರಿಂಗ್ ಅನ್ನು ಸಂಶೋಧಿಸಿದ್ದ. ತೂಗು ಸೇತುವೆಯ ಎಲ್ಲ ಪ್ರಯೋಜನಗಳನ್ನೂ ನೀಡುವ ಕೇಬಲ್ ಆಧರಿತ ಸೇತುವೆಗಳು ಈಗ ಜನಪ್ರಿಯವಾಗಿವೆ. 152 ಮೀಟರ್‌ನಿಂದ 853 ಮೀಟರ್ ಉದ್ದದ ತನಕ ಇಂಥ ಸೇತುವೆಗಳು ನಿರ್ಮಾಣವಾಗಿವೆ. ಇವುಗಳಿಗೆ ಉಕ್ಕಿನ ತಂತಿಗಳು ಕಡಿಮೆ ಸಾಕು. ವೇಗವಾಗಿ ನಿರ್ಮಿಸಬಹುದು. ಕಾಂಕ್ರಿಟ್ ರಚನೆಗಳನ್ನು ಮೊದಲೇ ತಯಾರಿಸಿ ಅಳವಡಿಸಬಹುದು. ಹೀಗೆ ಹಲವು ಪ್ರಯೋಜನಗಳಿವೆ.