ನವ ದೆಹಲಿ: ಕೋವಿಡ್ ಬಿಕ್ಕಟ್ಟಿನ ಸಂದರ್ಭ ಅನೇಕ ಉದ್ಯೋಗಗಳು ನಷ್ಟವಾಗಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಅತಿ ದೊಡ್ಡ ಆತಂಕವೊಂದು ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ಕ್ಷೇತ್ರದಿಂದ ಬಂದಿದೆ. ಈ ಟೆಕ್ನಾಲಜಿ ಐಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಭೀತಿ ಅಕ್ಷರಶಃ ಆವರಿಸಿದೆ. ChatGPT ಮತ್ತು Generative artificial intelligence (Gen-AI) ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮೈಕ್ರೊಸಾಫ್ಟ್ ಬೆಂಬಲಿತ ಓಪನ್ ಎಐ (Open-AI) ಕಳೆದ ವರ್ಷ ನವೆಂಬರ್‌ನಲ್ಲಿ ChatGPT ಅನ್ನು ಬಿಡುಗಡೆಗೊಳಿಸಿದ ಬಳಿಕ ಅನೇಕ ಆತಂಕಗಳಿಗೆ ಕಾರಣವಾಗಿದೆ.
ChatGPT: ಎರಡೇ ತಿಂಗಳಲ್ಲಿ 10 ಕೋಟಿ ಡೌನ್‌ಲೋಡ್! ಚಾಟ್ ಜಿಪಿಟಿ ಆ್ಯಪ್ ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ 10 ಕೋಟಿ ಸಕ್ರಿಯ ಬಳಕೆದಾರರು ಡೌನ್‌ಲೋಡ್ ಮಾಡಿದ್ದರು. ಇದರೊಂದಿಗೆ ಚಾಟ್ ಜಿಪಿಟಿ (ChatGPT) ಸೃಜನಶೀಲತೆಯ ಹೊಸ ಯುಗಾರಂಭವಾಗಿದೆ. ಜತೆಗೆ Interactive AI ನಾನಾ ಇಂಡಸ್ಟ್ರಿಗಳಲ್ಲಿ ಅನೇಕ ಉದ್ಯೋಗಗಳ ಮೇಲೆ ಹಿಂದೆಂದೂ ಕಂಡರಿಯದಷ್ಟು ಪ್ರಭಾವ ಬೀರಲಿದೆ.
ChatGPT ಮೊಟ್ಟ ಮೊದಲಿಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಿರುವ ಎಐ ಆ್ಯಪ್ ಆಗಿದ್ದರೆ, ಅದೇ ಮಾದರಿಯಲ್ಲಿ ಮತ್ತೆ ಹಲವಾರು ಆ್ಯಪ್‌ಗಳು ಬಿಡುಗಡೆಯಾಗಿವೆ. ಆಗುತ್ತಿವೆ. ಗೂಗಲ್‌ನಿಂದ BARD, ಮೈಕ್ರೊಸಾಫ್ಟ್‌ನಿಂದ Bing ಚೀನಾದ Baidu app ನಿಂದ ChatSoni̧c Ernie ಚಾಟ್ ಜಿಪಿಟಿ ಮಾದರಿಯ ಇತರ ಎಐ ಆ್ಯಪ್‌ಗಳಿಗೆ ಉದಾಹರಣೆಯಾಗಿದೆ.
30 ಕೋಟಿ ಉದ್ಯೋಗ ನಷ್ಟ ಸಂಭವ: ಗೋಲ್ಡ್‌ಮನ್ ಸ್ಯಾಕ್ಸ್
ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್‌ಗಳ ಪರಿಣಾಮ ಜಗತ್ತಿನಾದ್ಯಂತ 30 ಕೋಟಿ ಉದ್ಯೋಗಗಳು ನಷ್ಟವಾಗಲಿದೆ.
ಇದು ಖಂಡಿತವಾಗಿಯೂ Inflection point̤ ಕಂಪ್ಯೂಟರ್, ಇಂಟರ್‌ನೆಟ್ ಸಂಶೋಧಿಸಿದಾಗ ಆಗಿರುವಂತೆ ಚಾಟ್ ಜಿಪಿಟಿ ಹೊರಹೊಮ್ಮಿದೆ ಎನ್ನುತ್ತಾರೆ ತಜ್ಞರು. ಇದು ಬ್ಲೂ ಕಲರ್ ಜಾಬ್‌ಗಳ ಬದಲಿಗೆ ಹೆಚ್ಚಾಗಿ ವೈಟ್ ಕಲರ್ ಜಾಬ್‌ಗಳನ್ನು ಕಿತ್ತುಕೊಳ್ಳಲಿದೆ. ಹಾಗಾದರೆ ಏನಿದು Gen-AI?
ಏನಿದು ಚಾಟ್ ಜಿಪಿಟಿ & Gen-AI? ಇದರಿಂದ ಕಲೆ, ಸಂಗೀತದ ಸೃಷ್ಟಿಯೂ ಸಾಧ್ಯ!
Generative AI ಅಂದರೆ ಒಂದು ವಿಧದದ ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಈ ಹಿಂದಿನ ಡೇಟಾ ಇಲ್ಲವೇ ಮಾಹಿತಿಯನ್ನು ಆಧರಿಸಿ ಹೊಸ ವಿಷಯವನ್ನು (Content) ಉತ್ಪಾದಿಸುವುದು. ಸಂಗೀತ, ಕಲೆಗಳಿಗೂ ಈಗ ಎಐ ನಂಟಿದೆ!
ಚಾಟ್ ಜಿಪಿಟಿ ಎಂದರೆ (ChatGPT) Text ಮತ್ತು ಭಾಷೆ ಆಧರಿಸಿದ Gen-AI ಆಗಿದೆ. ಇದರ ಫುಲ್ ಫಾರ್ಮ್ ಹೀಗಿದೆ- ( Chat Generative Pre-trained Transformer) ಕಲಾ ಸೃಷ್ಟಿಗೆ DALL-E2, ಸಂಗೀತಕ್ಕೆ AIVA , Soundful, Murf ̤ai ಇತ್ಯಾದಿ ಎಐ ಆ್ಯಪ್‌ಗಳಿವೆ.
ChatGPT ಎಂದರೆ ಹೆಚ್ಚು ಸುಧಾರಿತ ಚಾಟ್ ಬೋಟ್. ಅದು ದೊಡ್ಡ ಪ್ರಮಾಣದ ಇನ್‌ಪುಟ್ ಟೆಕ್ಸ್ಟ್ ಗಳನ್ನು (Input text) ಆಧರಿಸಿ ಹೊಸ ಕಂಟೆಂಟ್ ಅನ್ನೇ ಸೃಷ್ಟಿಸಬಲ್ಲುದು. ಹಾಗೂ ಅದು ಬಹುತೇಕ ಮನುಷ್ಯರೇ ಸೃಷ್ಟಿಸಿದಂತೆ ಇರುವುದು. ಇದು ಗೂಗಲ್ ಸರ್ಚ್ ಎಂಜಿನ್ ಕೂಡ ಮಾಡಲಾರದಷ್ಟು ಸಹಜ ಕಂಟೆಂಟ್‌ಗಳನ್ನು ನಾನಾ ಭಾಷೆಗಳಲ್ಲಿ ಕೊಡಬಲ್ಲುದು. ಆದ್ದರಿಂದ ಜನರಿಗೆ ಉಪಯುಕ್ತ ಎನ್ನಿಸಲಿದೆ.
ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ನಿಮಗೆ ನಾನಾ ಲಿಂಕ್‌ಗಳ ಆಯ್ಕೆ ಸಿಗುತ್ತದೆ. ಆದರೆ ಚಾಟ್ ಜಿಪಿಟಿಯಲ್ಲಿ ನಿಮಗೆ ಬೇಕಾದಂತೆ ಸಿದ್ಧಪಡಿಸಿಟ್ಟ ಮಾಹಿತಿ ಸಿಗುತ್ತದೆ. ಅಂದರೆ ರೆಡಿಮೇಡ್ ಬಟ್ಟೆಯ ಹಾಗೆ. ವಸ್ತ್ರವನ್ನು ಖರೀದಿಸಿ ಬಟ್ಟೆ ಹೊಲಿದುಕೊಳ್ಳಬೇಕಾದ ಅಗತ್ಯ ಇಲ್ಲ. ಸಿದ್ಧಪಡಿಸಿಟ್ಟ ಆಹಾರದ ಹಾಗೆಯೂ ಎನ್ನಬಹುದು. ಸುದೀರ್ಘ ಲೇಖನ, ವಿವರಣೆ, ಕೋಡ್-ಮ್ಯೂಸಿಕ್‌ಗಳನ್ನು ಇದು ಸೃಷ್ಟಿಸಬಲ್ಲುದು.
ಚಾಟ್ ಜಿಪಿಟಿ ಉಚಿತವೇ? ದರ ಇದೆಯೇ?
ಚಾಟ್ ಜಿಪಿಟಿ (ChatGPT) ಉಚಿತವಾಗಿ chat.openai.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪೇಯ್ಡ್ ವರ್ಶನ್ ChatGPTPlus ಎಂಬ ಎಐ ಆ್ಯಪ್ ಬಳಕೆದಾರರಿಗೆ ಮಾಸಿಕ 20 ಡಾಲರ್ (ಅಂದಾಜು 1,650 ರೂ.) ಶುಲ್ಕದಲ್ಲಿ ದೊರೆಯುತ್ತದೆ. ChatGPT-4 ಇತ್ತೀಚಿನ ವರ್ಶನ್.
GEN -AI ಪರಿಣಾಮ ಬೀರಬಲ್ಲ 10 ಉದ್ಯೋಗಗಳು ಯಾವುವು?
- ಸಾಫ್ಟ್‌ವೇರ್
- ಗ್ರಾಫಿಕ್ ಡಿಸೈನಿಂಗ್ & ವೆಬ್ ಡೆವಲಪ್‌ಮೆಂಟ್
- ಕಸ್ಟಮರ್ ಸರ್ವೀಸ್
- ಕಾನೂನು &ಅಕೌಂಟಿಂಗ್ ಸೇವೆ
- ಹಣಕಾಸು
- ಮಾಧ್ಯಮ
- ಮಾರ್ಕೆಟ್ ರೀಸರ್ಚ್ & ಅನಾಲಿಸಿಸ್
- ಅನುವಾದ
- ಬೋಧನೆ(ಶಿಕ್ಷಣ)
- ಎಚ್ ಆರ್ ನೇಮಕಾತಿ
ಉದ್ಯೋಗಿಗಳು, ಉದ್ಯೋಗಾಕಾಂಕ್ಷಿಗಳು ಏನು ಮಾಡಬಹುದು?
ಎಐ ತಂತ್ರಜ್ಞಾನದ ಬಗ್ಗೆ ಅಪ್ ಡೇಟ್ ಆಗಿರುವುದು ಮುಖ್ಯ. ಎಐ ಸಂಬಂಧಿತ ಉನ್ನತ ಶಿಕ್ಷಣ, ಕೌಶಲ ಪಡೆಯುವುದು ಸೂಕ್ತ. Gen-AI ಟೂಲ್ಸ್ ಬಗ್ಗ ತಿಳಿದುಕೊಳ್ಳುವುದು ಉತ್ತಮ.
ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆಯೇ?
ಎಐ ಟ್ರೈನರ್ಸ್, ಎಐ ಎತಿಕ್ಸ್ ಎಕ್ಸ್‌ಪರ್ಟ್ಸ್, ಎಐ ಸಿಸ್ಟಮ್ ಮ್ಯಾನೇಜರ್ಸ್, ಡೇಟಾ ಅನ್ನೊಶನ್ ಸ್ಪೆಶಲಿಸ್ಟ್, ಹ್ಯೂಮನ್ ಎಐ ಇಂಟರಾಕ್ಷನ್ ಸ್ಪೆಶಲಿಸ್ಟ್, ಎಐ ಸೇಲ್ಸ್ ಸ್ಪೆಶಲಿಸ್ಟ್, ಎಐ ಪ್ರಾಡಕ್ಟ್ ಮ್ಯಾನೇಜರ್ಸ್, ಪ್ರಾಮ್ಟ್ ಎಂಜಿನಿಯರ್ಸ್. ಈ ಹುದ್ದೆಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.