ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಚೀನಾದ ಶಂಕಿತ ಬೇಹುಗಾರಿಕೆಯ ಬಲೂನನ್ನು ಹೊಡೆದುರುಳಿಸಿದ ಅಮೆರಿಕಕ್ಕೆ ಚೀನಾ ಎಚ್ಚರಿಸಿದೆ. ಅಮೆರಿಕದ ಸೇನಾ ಪಡೆಯು ಬಲೂನನ್ನು ಹೊಡೆದುರುಳಿಸಿದ್ದಲ್ಲದೆ, ಅದರ ಅವಶೇಷಗಳನ್ನು ವಶಪಡಿಸಿಕೊಳ್ಳಲು ಕಾರ್ಯಪ್ರವೃತ್ತವಾಗಿದೆ. ಇದಕ್ಕೆ ಚೀನಾ ಭಾನುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇದರ ಪರಿಣಾಮಗಳನ್ನು ಅಮೆರಿಕ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಬಲೂನನ್ನು ಹೊಡೆದುರುಳಿಸಿದ ಸೇನಾ ಪಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿನಂದಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶದ ಪ್ರಕಾರ ಅಮೆರಿಕ ಸೇನಾ ಪಡೆಯು ಚೀನಾದ ಬಲೂನನ್ನು ( ಏರ್‌ಶಿಪ್) ಹೊಡೆದುರುಳಿಸಿತ್ತು. ಇದರಿಂದ ಯಾವುದೇ ಜೀವ ಹಾನಿಯಾಗಿಲ್ಲ. ಆಸ್ತಿಪಾಸ್ತಿಗೂ ತೊಂದರೆಯಾಗಿಲ್ಲ. ಅಮೆರಿಕದ ಯುದ್ಧ ವಿಮಾನದಿಂದ ಸಿಂಗಲ್ ಮಿಸೈಲ್ ಬಳಸಿ ಬಲೂನನ್ನು ಒಡೆದು ಹಾಕಲಾಯಿತು.
ಅಮೆರಿಕ ಈ ಮೂಲಕ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿದೆ. ಇದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾ ಹೇಳಿಕೆ ಬಿಡುಗಡೆಗೊಳಿಸಿದೆ.