ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ರಫ್ತಿನ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ೧೩ ರೂ.ಗೆ ಹಾಗೂ ಡೀಸೆಲ್ ಮೇಲಿನ ರಫ್ತು ಸುಂಕವನ್ನು ೬ ರೂ.ಗೆ ಹೆಚ್ಚಿಸಿದೆ. ಆದರೆ ಇದರಿಂದ ರಿಟೇಲ್ ದರಗಳು ಏರಿಕೆಯಾಗುವ ಸಾಧ್ಯತೆ ಇಲ್ಲ.
ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಪೂರೈಕೆಗೆ ಕೊರತೆ ಆಗದಂತೆ ನೋಡಿಕೊಳ್ಳಲು ರಫ್ತು ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವೈಮಾನಿಕ ಇಂಧನ ಎಟಿಎಫ್ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ ೧ ರೂ. ಏರಿಸಲಾಗಿದೆ.
ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲವನ್ನು ರಫ್ತು ಮಾಡಿದರೆ ಈಗ ಭಾರಿ ಲಾಭವಾಗುತ್ತದೆ. ಏಕೆಂದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ದರ ಇದೆ. ಆದರೆ ಇದರಿಂದ ದೇಶಿ ಮಾರುಕಟ್ಟೆಗೆ ಪ್ರಯೋಜನವಿಲ್ಲ. ಇಲ್ಲಿ ಪೂರೈಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ರಫ್ತು ಸುಂಕವನ್ನು ಏರಿಸಲಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಖಾಸಗಿ ವಲಯದ ಕಚ್ಚಾ ತೈಲ ಸಂಸ್ಕರಣೆ ಕಂಪನಿಗಳು ಯುರೋಪ್ ಮತ್ತು ಅಮೆರಿಕಕ್ಕೆ ಕಚ್ಚಾ ತೈಲ ರಫ್ತು ಮಾಡುವ ಮೂಲಕ ಹೇರಳ ಲಾಭ ಗಳಿಸುತ್ತವೆ. ಕಳೆದ ಮೇನಲ್ಲಿ ಭಾರತ ೫೭ ಲಕ್ಷ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿತ್ತು.
ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲೆ ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲೇ ರಿಲಯನ್ಸ್ ಇಂಡಸ್ಟ್ರೀಸ್, ಒಎನ್‌ಜಿಸಿ ಷೇರು ದರ ೫%ರಷ್ಟು ಇಳಿಯಿತು.