ಬೆಂಗಳೂರು: ಬೆಂಗಳೂರು ಮೂಲದ ಆನ್‌ಲೈನ್ ಷೇರು ಟ್ರೇಡಿಂಗ್ ಕಂಪನಿ ಜೆರೋಧಾ, (Zerodha) ತನ್ನ ಉದ್ಯೋಗಿಗಳಿಗೆ ಫಿಟ್ನೆಸ್ ಚಾಲೆಂಜ್ ಅನ್ನು ಮುಂದಿಟಿದ್ದು, ಇದರಲ್ಲಿ ನಿಗದಿತ ಗುರಿ ಮುಟ್ಟಿದವರಿಗೆ ಒಂದು ತಿಂಗಳಿನ ವೇತನ ಸಿಗಲಿದೆ. ಹಾಗೂ ಒಬ್ಬ ಅದೃಷ್ಟಶಾಲಿಗೆ 10 ಲಕ್ಷ ರೂ. ಬಹುಮಾನ ಸಿಗಲಿದೆ.
ಜೆರೋಧಾ ಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಈ ವಿಷಯವನ್ನು ತಿಳಿಸಿದ್ದು, ದಿನಕ್ಕೆ ಕನಿಷ್ಠ 350 ಕ್ಯಾಲೊರಿಗಳನ್ನು ಕರಗಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದು, ನಿಗದಿತ ಗುರಿಯನ್ನು ಮುಟ್ಟುವವರಿಗೆ 1 ತಿಂಗಳಿನ ವೇತನವನ್ನು ಬೋನಸ್ ಆಗಿ ನೀಡಲಾಗುವುದು. ಒಬ್ಬ ಅದೃಷ್ಟಶಾಲಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜೆರೋಧಾ ಉದ್ಯೋಗಿಗಳಿಗೆ ಇದು ಕಡ್ಡಾಯವಲ್ಲ, ಆದರೆ ಚಾಲೆಂಜ್ ಪ್ರಕಾರ ದಿನಕ್ಕೆ ಕನಿಷ್ಠ 350 ಕ್ಯಾಲೊರಿಗಳನ್ನು ಯಾವುದೇ ವಿಧಾನದಲ್ಲಿ ಕರಗಿಸಬೇಕು. ಬಹುತೇಕ ಮಂದಿ ವರ್ಕ್ ಫ್ರಮ್ ಹೋಮ್‌ನ ಭಾಗವಾಗಿ ಮನೆಯಿಂದಲೇ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಳ್ಳುವುದು ಆರೋಗ್ಯಕ್ಕೂ ಹಾನಿಕರ. ಹೀಗಾಗಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದ್ದಾರೆ.