Site icon Vistara News

Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ 43,081 ಕೋಟಿ ರೂ. ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಟ್ಟು ಮೌಲ್ಯ

Forex Reserves

Forex Reserves

ನವದೆಹಲಿ: ಭಾರತದ ವಿದೇಶಿ ವಿನಿಮಯ ಸಂಗ್ರಹವು (Forex Reserves) ಜುಲೈ 5ಕ್ಕೆ ಅಂತ್ಯವಾದ ವಾರದಲ್ಲಿ 5.158 ಬಿಲಿಯನ್‌ ಡಾಲರ್‌ (43,081 ಕೋಟಿ ರೂ.) ವೃದ್ಧಿಸಿದ್ದು, ಒಟ್ಟು ಸಂಗ್ರಹವು 657.155 ಬಿಲಿಯನ್‌ ಡಾಲರ್‌ (54.88 ಲಕ್ಷ ಕೋಟಿ ರೂ.)ಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank of India) ತಿಳಿಸಿದೆ. ಸತತ ಎರಡು ವಾರಗಳ ಕುಸಿತದ ನಂತರ ಈ ಏರಿಕೆ ಕಂಡುಬಂದಿದೆ. ಜೂನ್ 28ರ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 1.713 ಬಿಲಿಯನ್ ಡಾಲರ್ ಇಳಿದು 651.997 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಈ ವರ್ಷದ ಜೂನ್‌ 7ರಂದು ಗರಿಷ್ಠ ಮಟ್ಟ 655.817 ಬಿಲಿಯನ್ ಡಾಲರ್‌ ದಾಖಲಾಗಿತ್ತು.

ವಿದೇಶಿ ಕರೆನ್ಸಿಗಳ ಸಂಗ್ರಹವು 35,313 ಕೋಟಿ ರೂ. ಹೆಚ್ಚಾಗಿದ್ದು, ಒಟ್ಟು 48.20 ಲಕ್ಷ ಕೋಟಿ ರೂ.ಗೆ ತಲುಪಿದೆ. ಇನ್ನು ಚಿನ್ನದ ಮೀಸಲು ಸಂಗ್ರಹವೂ ಏರಿಕೆಯಾಗಿದ್ದು, 7,550 ಕೋಟಿ ರೂ. ಹೆಚ್ಚಾಗಿದೆ. ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ (SDR) ಮೀಸಲು 175 ಕೋಟಿ ರೂ. ಹೆಚ್ಚಾಗಿ 1.50 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯಲ್ಲಿ ಭಾರತದ ಮೀಸಲು ಸಂಗ್ರಹ 33 ಕೋಟಿ ರೂ. ಅಧಿಕವಾಗಿದ್ದು, ಒಟ್ಟು ಸಂಗ್ರಹ 38,244 ಕೋಟಿ ರೂ.ಗೆ ಮುಟ್ಟಿದೆ.

ಆರ್ಥಿಕ ತಜ್ಞರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ವಿವೇಕಯುತ ನೀತಿ ಕ್ರಮಗಳು ಮತ್ತು ಜಾಗರೂಕ ವಿತ್ತೀಯ ನಿಲುವು ಇದಕ್ಕೆ ಕಾರಣ ಎಂದು ಹೇಳಿದ್ದಾರೆ. “ವಿವೇಕಯುತ ನೀತಿ ಕ್ರಮಗಳು ಮತ್ತು ಜಾಗರೂಕ ವಿತ್ತೀಯ ನೀತಿ ನಿಲುವಿನ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯವು ಜುಲೈ 5ರ ವೇಳೆಗೆ 657 ಬಿಲಿಯನ್ ಡಾಲರ್‌ಗೆ ತಲುಪಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ವಿನಿಮಯ ಮೀಸಲುಗಳಲ್ಲಿನ ಈ ದೃಢವಾದ ಬೆಳವಣಿಗೆಯು ಭಾರತದ ಆರ್ಥಿಕ ಬೆಳವಣಿಗೆಗೆ ಬಲ ನೀಡುತ್ತದೆ. ಜತೆಗೆ ಜಾಗತಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ದೇಶೀಯ ವ್ಯಾಪಾರ ಮತ್ತು ಉದ್ಯಮವನ್ನು ಬೆಂಬಲಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ. ಹೆಚ್ಚಿನ ವಿದೇಶಿ ವಿನಿಮಯ ಮೀಸಲು ಜಾಗತಿಕ ಆರ್ಥಿಕ ಸವಾಲುಗಳ ನಡುವೆ ದೇಶದ ಕರೆನ್ಸಿ ಮತ್ತು ಹಣಕಾಸು ನೀತಿಯನ್ನು ನಿರ್ವಹಿಸುವಲ್ಲಿ ಆರ್‌ಬಿಐಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.

ಇದನ್ನೂ ಓದಿ: EXPLAINER: ಡಾಲರ್‌ ಎದುರು ರೂಪಾಯಿ ಬೆಲೆ ಕುಸಿದಾಗ ಏನಾಗುತ್ತದೆ?

ವಿದೇಶಿ ವಿನಿಮಯ ಸಂಗ್ರಹ ಎಂದರೇನು?

ವಿದೇಶಿ ವಿನಿಮಯ ಸಂಗ್ರಹ ಸದೃಢವಾಗಿದ್ದರೆ ದೇಶದ ವಿದೇಶಿ ವಿನಿಮಯ ದರವು ಸ್ಥಿರವಾಗಿರುತ್ತದೆ. ದೇಶದ ಮಧ್ಯವರ್ತಿ ಅಥವಾ ಸೆಂಟ್ರಲ್‌ ಬ್ಯಾಂಕ್‌ (ಭಾರತದ ಆರ್‌ಬಿಐ) ಹೊಂದಿರುವ ಒಟ್ಟು ವಿದೇಶಿ ಕರೆನ್ಸಿ ಮೌಲ್ಯವನ್ನು ವಿದೇಶಿ ವಿನಿಮಯ ಸಂಗ್ರಹ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿದೇಶಿ ಬ್ಯಾಂಕ್‌ಗಳ ನೋಟುಗಳು, ಬಾಂಡ್‌, ಠೇವಣಿ, ಸರ್ಕಾರಿ ಸೆಕ್ಯುರಿಟಿ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿರುವ ಠೇವಣಿ, ಚಿನ್ನ ಇತ್ಯಾದಿ ಸೇರಿರುತ್ತದೆ. ನಮ್ಮಲ್ಲಿ ಸಾಕಷ್ಟು ವಿದೇಶಿ ವಿನಿಮಯ ಸಂಗ್ರಹವಿದ್ದರೆ ವಿದೇಶಿ ಹೂಡಿಕೆದಾರರಿಗೆ ತಮ್ಮ ಹೂಡಿಕೆ ಬಗ್ಗೆ ನಂಬಿಕೆ ಮೂಡುತ್ತದೆ. ಹೀಗಾಗಿ ವಿದೇಶಿ ವಿನಿಮಯ ಸಂಗ್ರಹಕ್ಕೆ ಪ್ರಧಾನ್ಯತೆ ನೀಡಲಾಗುತ್ತದೆ.

Exit mobile version