Site icon Vistara News

Gold price : ಷೇರು ಹೂಡಿಕೆ ಆದಾಯವನ್ನು ಮೀರಿಸಿದ ಬಂಗಾರ, ಕಳೆದ 5 ವರ್ಷಗಳಲ್ಲಿ ದರ 97% ಹೆಚ್ಚಳ

Gold Rate Today

Gold Rate Today

ಮುಂಬಯಿ: ನೀವೂ ಬಂಗಾರದಲ್ಲಿ ಹೂಡಿದ್ದೀರಾ? ಭಾರತದಲ್ಲಿ ಬಂಗಾರದ ದರ (Gold price) ಈಗ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. 24 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 60,050 ರೂ.ಗೆ ಜಿಗಿದಿದೆ. ಭಾರತೀಯರು ಚಿನ್ನದ ಖರೀದಿಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇದರ ಪರಿಣಾಮ ದೇಶದ ಒಟ್ಟು ಆಮದಿನಲ್ಲಿ ಬಂಗಾರ ಗಣನೀಯ ಪಾಲನ್ನು ಹೊಂದಿದೆ.

ಕಳೆದ 5 ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 50 ಇಂಡೆಕ್ಸ್‌ 70%, ಸೆನ್ಸೆಕ್ಸ್‌ 78% ಆದಾಯವನ್ನು ಕೊಟ್ಟಿದೆ. ಆದರೆ ಬಂಗಾರ 97% ಆದಾಯವನ್ನು ನೀಡಿರುವುದು ಗಮನಾರ್ಹ. ಷೇರು ಮಾರುಕಟ್ಟೆಯಲ್ಲಿ ವೈಯಕ್ತಿಕವಾಗಿ ರಿಟೇಲ್‌ ಹೂಡಿಕೆದಾರರಿಗೆ ಅವರ ಷೇರು ಖರೀದಿ ದರ, ಮಾರಾಟ ದರ ಆಧರಿಸಿ ಆದಾಯದಲ್ಲಿ ಹೆಚ್ಚು ಅಥವಾ ಕಮ್ಮಿ ಆಗಿರಬಹುದು. ಆದರೆ ಬಂಗಾರದ ದರ ಎಲ್ಲರಿಗೂ ಸಮಾನವಾಗಿರುತ್ತದೆ.

ಕಳೆದ 2018ರಲ್ಲಿ ಬಂಗಾರದ ದರ 10 ಗ್ರಾಮ್‌ಗೆ 31,438 ರೂ. ಹಾಗೂ 2019ರಲ್ಲಿ 35,220ರೂ. ಇತ್ತು. ಅದು ಈಗ 60,000 ರೂ.ಗಳ ಗಡಿ ದಾಟಿದೆ.

ಬಂಗಾರದ ದರ 2005ರಿಂದೀಚೆಗೆ

ವರ್ಷಚಿನ್ನದ ದರ
20057,000 ರೂ.
20068,000
200710,800
200812,500
200914,500
201018,500
201126,400
201231,050
201329,600
201428,006
201526,343
201628,623
201729,667
201831,438
201935220
202048,651
202148,720
202252,670
202361,095

ಭಾರತದಲ್ಲಿ ಚಿನ್ನದ ದರ ಸ್ಫೋಟ (Gold prices in India)

ಭಾರತದಲ್ಲಿ 2023ರಲ್ಲಿ ಚಿನ್ನದ ದರ ಗಣನೀಯ ಏರಿಕೆ ದಾಖಲಿಸಿದೆ. 2022ಕ್ಕೆ ಹೋಲಿಸಿದರೆ ದರ ಸ್ಫೋಟವಾಗಿದೆ ಎಂದರೂ ಉತ್ರ್ಪೇಕ್ಷೆ ಆಗದು. ಕಳೆದ ಆರು ತಿಂಗಳಿನಲ್ಲಿ ಚಿನ್ನದ ದರದಲ್ಲಿ 3000 ರೂ. ಏರಿಕೆ ಆಗಿರುವುದನ್ನು ಗಮನಿಸಬಹುದು.

ರಷ್ಯಾ-ಉಕ್ರೇನ್‌ ಸಮರ, ಅಮೆರಿಕದಲ್ಲಿ ಬಡ್ಡಿ ದರ ಏರಿಕೆ, ಹಣದುಬ್ಬರದ ಪರಿಣಾಮ ಬಂಗಾರದ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ವರ್ಷದ ಆರಂಭದಲ್ಲಿ ಷೇರು ಮಾರುಕಟ್ಟೆ ಆದಾಯ ಕುಸಿಯುತ್ತಿದೆ. ಕೋವಿಡ್‌ 19 ಬಿಕ್ಕಟ್ಟಿನ ಸಂದರ್ಭ ಹೂಡಿಕೆದಾರರಿಗೆ ಚಿನ್ನ ಸೇಫ್‌ ಅನ್ನಿಸತೊಡಗಿತ್ತು. ಬೇಡಿಕೆ ಹೆಚ್ಚಳದ ಪರಿಣಾಮ ದರ ಕೂಡ ಏರುಗತಿ ಪಡೆಯಿತು.

ಭಾರತದಲ್ಲಿ ಚಿನ್ನದ ಹೂಡಿಕೆ ಹೇಗೆ ಮಾಡಬಹುದು?

ಸಾಮಾನ್ಯವಾಗಿ ಆಭರಣಗಳ ರೂಪದಲ್ಲಿ ಹೂಡಿಕೆ ಮಾಡುತ್ತಾರೆ. ಚಿನ್ನದ ನಾಣ್ಯ, ಗಟ್ಟಿಯನ್ನೂ ಜನ ಖರೀದಿಸುತ್ತಾರೆ. ಆದರೆ ಹೂಡಿಕೆಗೆ ಹಲವು ಆಯ್ಕೆಗಳು ಈಗ ಲಭ್ಯವಿದೆ. ಗೋಲ್ಡ್‌ ಮ್ಯೂಚುವಲ್‌ ಫಂಡ್‌, ಗೋಲ್ಡ್‌ ಇಟಿಎಫ್‌, ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್‌ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.

ಮದುವೆಗಳು ಮತ್ತು ಹಬ್ಬಗಳಲ್ಲಿ ಚಿನ್ನದ ಖರೀದಿ ಹೆಚ್ಚು: ಭಾರತದಲ್ಲಿ ಮದುವೆ ಹಾಗೂ ಹಬ್ಬಗಳ ಸಂದರ್ಭ ಚಿನ್ನದ ಖರೀದಿ ಹೆಚ್ಚು.ಮಾರುಕಟ್ಟೆಯಲ್ಲಿ ಅರ್ಧದಷ್ಟು ಪಾಲನ್ನು ವಧುವಿನ ಆಭರಣಗಳು ಮತ್ತು ಹಬ್ಬಗಳ ಸಂದರ್ಭ ಕೊಳ್ಳುವ ಒಡವೆಗಳೇ ವಹಿಸುತ್ತಿವೆ. ಭಾರತದಲ್ಲಿ ಚಿನ್ನದ ಖರೀದಿ ಹೊಸತೇನಲ್ಲ, ಹೀಗಿದ್ದರೂ ಮುಂಬರುವ ವರ್ಷಗಳಲ್ಲಿ ಶಾಪಿಂಗ್‌ ಗಣನೀಯ ಹೆಚ್ಚಲಿದೆ ಎನ್ನಲು ಕಾರಣಗಳನ್ನು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಮುಂದಿಟ್ಟಿದೆ.

ಆರ್ಥಿಕ ಬೆಳವಣಿಗೆ, ಸಂಪತ್ತಿನ ವಿತರಣೆ, ನಗರೀಕರಣ ಎಫೆಕ್ಟ್: ಭಾರತದಲ್ಲಿ ಉಂಟಾಗುತ್ತಿರುವ ಆರ್ಥಿಕ ಬೆಳವಣಿಗೆ, ಸಂಪತ್ತಿನ ವಿತರಣೆ, ನಗರೀಕರಣದ ಪರಿಣಾಮ ಬಂಗಾರದ ಖರೀದಿಯ ಪ್ರವೃತ್ತಿ ಗಣನೀಯ ಹೆಚ್ಚಳವಾಗಲಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಜ್ಯುವೆಲ್ಲರಿ ರಫ್ತು: ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-‌19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.

ವಧುವಿನ ಆಭರಣಕ್ಕಾಗಿ ಖರೀದಿಯ ಪ್ರಾಬಲ್ಯ: ಶತಶತಮಾನಗಳಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ. ಅದಕ್ಕೆ ಧಾರ್ಮಿಕ ನಂಬಿಕೆಗಳೂ ಬೆಸೆದುಕೊಂಡಿದೆ. ಹೀಗಾಗಿ ವಧುವಿನ ಆಭರಣಗಳಿಗೆ ಚಿನ್ನದ ಒಡವೆಗಳನ್ನು ಖರೀದಿಸುವುದು ವಾಡಿಕೆ. ಮಾಂಗಲ್ಯ ಸೂತ್ರಕ್ಕೆ ಜನ ಬಂಗಾರವನ್ನು ಕೊಳ್ಳುತ್ತಾರೆ. ಅದೊಂದೇ ಅಲ್ಲದೆ, ವಧುವಿನ ಅಂದ ಚಂದ ಹೆಚ್ಚಿಸಲು, ಗಮನ ಸೆಳೆಯಲು ಆಭರಣಗಳನ್ನು ಧರಿಸುತ್ತಾರೆ. ದೇಶದಲ್ಲಿ ಪ್ರತಿ ವರ್ಷ 1.1 ಕೋಟಿಗೂ ಹೆಚ್ಚು ಮದುವೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಟ್ರೆಂಡ್‌ ದೀರ್ಘಕಾಲೀನವಾಗಿ ಮುಂದುವರಿಯಲಿದೆ. ವಧುವಿಗೆ ನೀಡುವ ಆಭರಣಗಳು ಅವಳದ್ದೇ ಆಸ್ತಿಯಾಗಿ ಇರುವುದರಿಂದ ಹಾಗೂ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿರುವುದರಿಂದ ಬಂಗಾರಕ್ಕೆ ಮದುವೆ ಸಂದರ್ಭ ಬೇಡಿಕೆ ಹೆಚ್ಚುತ್ತದೆ. ಕೃಷಿ ಕೂಡ ಚಿನ್ನಕ್ಕೆ ಬೇಡಿಕೆ ಸೃಷ್ಟಿಸಿದೆ. ಹೂಡಿಕೆಯ ಸಾಧನವಾಗಿಯೂ ಚಿನ್ನ ಬೇಡಿಕೆ ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದ ಅಭಿವೃದ್ಧಿ, ಮಳೆ-ಬೆಳೆಯನ್ನು ಆಧರಿಸಿ ಚಿನ್ನಕ್ಕೆ ಬೇಡಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಮಳೆ-ಬೆಳೆ ಚೆನ್ನಾಗಿದ್ದಾಗ ಚಿನ್ನದ ಖರೀದಿ ಹೆಚ್ಚುತ್ತದೆ. ಕೃಷಿ ಕಡಿಮೆಯಾದಾಗ ಬಂಗಾರಕ್ಕೆ ಬೇಡಿಕೆ ಕಡಿಮೆಯಾಗುತ್ತದೆ.

Exit mobile version