ಬೆಂಗಳೂರು: ಯುಪಿಐ(UPI) ಮೂಲಕ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಕೇಂದ್ರ ಸರ್ಕಾರ ಇದೀಗ ವಿಶ್ವದ ಇ ಕಾಮರ್ಸ್ ದಿಗ್ಗಜ ಸಂಸ್ಥೆಗಳಾದ ಅಮೇಜಾನ್ (Amazon) ಹಾಗೂ ಫ್ಲಿಪ್‌ಕಾರ್ಟ್(Flipkart) ಎದುರಾಳಿಯಾಗಬಲ್ಲ ಸಂಸ್ಥೆಯನ್ನು ಸ್ಥಾಪಿಸಿದೆ.
ಆನ್‌ಲೈನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ONDC) ಈಗಾಗಲೆ ಬೆಂಗಳೂರು ಸೇರಿ ದೇಶದ ಐದು ನಗರಗಳಿಗೆ ಲಗ್ಗೆ ಇಟ್ಟಿದ್ದು, ನಿರೀಕ್ಷೆಯಂತೆಯೇ ಸಫಲವಾದರೆ ನಮ್ಮ ನೆರೆಹೊರೆ ಕಿರಾಣಿ ಅಂಗಡಿಗಳು ಆನ್‌ಲೈನ್ ಮೂಲಕ ಆರ್ಡರ್ ಪಡೆದು ವಹಿವಾಟು ನಡೆಸುತ್ತವೆ.
ಭಾರತದಲ್ಲಿ ಚಿಲ್ಲರೆ ಮಾರಾಟ ಉದ್ಯಮ ಬಹುದೊಡ್ಡದು. 2020ರಲ್ಲಿ ಪ್ರತಿ ವರ್ಷ 88 ಸಾವಿರ ಕೋಡಿ ಅಮೆರಿಕನ್ ಡಾಲರ್‌ನಷ್ಟಿದ್ದ ಚಿಲ್ಲರೆ ಮಾರುಕಟ್ಟೆ ವಹಿವಾಟು ವಾರ್ಷಿಕ 15% ಮೀರಿ ಏರಿಕೆ ಕಾಣುತ್ತಿದೆ. 2026ರ ವೇಳೆಗೆ ಈ ಮಾರುಕಟ್ಟೆ ದ್ವಿಗುಣವಾಗುವ, ಅಂದರೆ 1.7 ಲಕ್ಷ ಕೋಟಿ ಅಮೆರಿಕನ್ ಡಾಲರ್‌ನಷ್ಟಾಗುವ ಅಗಾಧ ಅವಕಾಶಗಳಿವೆ. ಈಗ ಸಾಮಾನ್ಯರ ಕಣ್ಣಿನಲ್ಲಿ ದೈತ್ಯ ಸಂಸ್ಥೆಗಳು ಎಂದು ಕಾಣುವ ಅಮೇಜಾನ್, ಫ್ಲಿಪ್‌ಕಾರ್ಟ್ ಸೇರಿ ಇನ್ನೂ ಹತ್ತಾರು ಸಂಸ್ಥೆಗಳು ಚಿಲ್ಲರೆ ಮಾರುಕಟ್ಟೆಯನ್ನು ಸಂಘಟಿತಗೊಳಿಸುತ್ತಿವೆ. ಇಷ್ಟೆಲ್ಲ ಸರ್ಕಸ್ ನಂತರವೂ ಈ ಎಲ್ಲ ಸಂಸ್ಥೆಗಳು ಭಾರತದ ಚಿಲ್ಲರೆ ಮಾರುಕಟ್ಟೆಯ 12% ಪಾಲನ್ನು ಮಾತ್ರ ಹೊಂದಲು ಸಾಧ್ಯವಾಗಿದೆ. ಅಂದರೆ ಇನ್ನೂ 80%ಕ್ಕಿಂತ ಹೆಚ್ಚು ಅಸಂಘಟಿತವಾಗಿರುವ ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹತ್ತಾರು ಕಂಪನಿಗಳಿಗೆ ಅವಕಾಶವಂತೂ ಇದೆ.
ಕೆಲವೇ ಕಂಪನಿಗಳ ಹಿಡಿತದಲ್ಲಿ ಈ ಚಿಲ್ಲರೆ ಮಾರುಟ್ಟೆ ಇರುವುದು ವಾಣಿಜ್ಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ. ಬದಲಾದ ತಂತ್ರಜ್ಞಾನವನ್ನು ಭಾರತೀಯರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ನೋಟು ಅಮಾನ್ಯೀಕರಣದ ನಂತರ ತಂತ್ರಜ್ಞಾನ ಅಳವಡಿಕೆಗೆ ಸಾಕಷ್ಟು ವೇಗ ಸಿಕ್ಕಿದೆ. ಇದೇ ವೇಗವನ್ನು ಇ ಕಾಮರ್ಸ್ ಚಿಲ್ಲರೆ ಮಾರುಕಟ್ಟೆಯಲ್ಲಿ ಬಳಸಿಕೊಂಡು ಸ್ಥಳೀಯ ಕಿರಾಣಿ ಅಂಗಡಿಗಳೂ ಅಮೇಜಾನ್, ಫ್ಲಿಪ್‌ಕಾರ್ಟ್‌ನಂತೆ ಆನ್‌ಲೈನ್ ವಹಿವಾಟು ನಡೆಸುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಇದೀಗ ಜಾರಿಗೆ ತಂದಿರುವ ಒಎನ್‌ಡಿಸಿ ಉದ್ದೇಶ.
ಇದನ್ನೂ ಓದಿ | Explainer: ಭಾರತೀಯರ ಫೇವರಿಟ್ ಆಗುವತ್ತ ಯುಎಇ, ಏನಿದರ ವಿಶೇಷ?
ಐದು ನಗರಗಳಲ್ಲಿ ಒಎನ್‌ಡಿಸಿ
ಫ್ಲಿಪ್‌ಕಾರ್ಟ್ ಹಾಗೂ ಅಮೇಜಾನ್ ಮೂಲಕ ವಸ್ತುಗಳನ್ನು ಖರೀದಿಸಲು ಆ ಸಂಸ್ಥೆಗಳ ಮೊಬೈಲ್ ಆಪ್ ಬಳಕೆ ಮಾಡಬೇಕು. ಆದರೆ ಇದೀಗ ಕೇಂದ್ರ ಸರ್ಕಾರ ರೂಪಿಸಿರುವ ಒಎನ್‌ಡಿಸಿ ಬಳಕೆ ಮಾಆಡಲು ಯಾವುದೇ ಒಂದು ಸಂಸ್ಥೆಯ ಆಪ್ ಅವಶ್ಯಕತೆ ಇಲ್ಲ. ಯುಪಿಐಮೂಲಕ ಯಾವುದೇ ಬ್ಯಾಂಕ್‌ನಿಂದ ಯಾವುದೇ ಬ್ಯಾಂಕ್‌ಗೆ ನೇರವಾಗಿ ಹಣ ವರ್ಗಾವಣೆ ಮಾಡುವ ರೀತಿಯಲ್ಲಿ ಯಾವುದೇ ಆಪ್ ಬಳಕೆ ಮಾಡಿ ವಹಿವಾಟು ನಡೆಸಬಹುದು. ಒಂದು ಕಂಪನಿಯ ಎಮೇಲ್ ವಿಳಾಸದಿಂದ ಮತ್ತೊಂದು ಕಂಪನಿಯ ಇಮೇಲ್ ವಿಳಾಸಕ್ಕೆ ಸಂದೇಶ ಕಳಿಸಿದಷ್ಟೇ ಸರಳವಾಗಿದೆ. ಇದು, ಕೆಲವೇ ಕಂಪನಿಗಳ ಒಡೆತನದಲ್ಲಿರುವ ಚಿಲ್ಲರೆ ಮಾರುಕಟ್ಟೆಯನ್ನು ಪ್ರಜಾತಾಂತ್ರಿಕಗೊಳಿಸುತ್ತದೆ ಎನ್ನುವುದು ಕೇಂದ್ರ ಸರ್ಕಾರದ ವಾದ.
ಎಫ್‌ಎಂಸಿಜಿಯಿಂದ ಪಾನ್‌ವಾಲಾವರೆಗೆ
ಸ್ಥಳೀಯ ಕಿರಾಣಿ ಅಂಗಡಿಗಳು, ಎಫ್‌ಎಂಸಿಜಿ ಕಂಪನಿಗಳಿಂದ ಹಿಡಿದು ಏರಿಯಾದಲ್ಲಿರುವ ಪಾನ್‌ವಾಲಾಗಳವರೆಗೂ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಜೋಡಿಸುವ ಹಾಗೂ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ. ಈ ಹಿಂದೆ ದೇಶದ ಮಹತ್ವಾಕಾಂಕ್ಷಿ ಯೋಜನೆಯಾದ ಆಧಾರ್ ಪ್ರಾರಂಭಿಕ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಉದ್ಯಮಿ ನಂದನ್ ನಿಲೇಕಣಿ ಅವರ ಪರಿಕಲ್ಪನೆಯಲ್ಲಿ ಒಟ್ಟು ಯೋಜನೆ ಮೂಡಿಬಂದಿದೆ. ಪ್ರಾರಂಭಿಕ ಹಂತದಲ್ಲಿ ದೆಹಲಿ ಎನ್‌ಸಿಆರ್, ಬೆಂಗಳೂರು, ಮಧ್ಯಪ್ರದೇಶದ ಭೋಪಾಲ್, ಮೇಘಾಲಯದ ಶಿಲಾಂಗ್ ಹಾಗೂ ತಮಿಳುನಾಡಿನ ಕೊಯಮತ್ತೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಯೋಜನೆಯನ್ನು ಚಾಳನೆ ನೀಡಿ ಮಾತನಾಡಿದ ನಂದನ್ ನಿಲೇಕಣಿ, “ಭಾರತ ಡಿಜಿಟಲ್ ಕ್ರಾಂತಿಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾನ್ಯ ಜನರಿಗೆ ಸೇವೆ ಒದಗಿಸುವಲ್ಲಿ ನಾವು ಮುಂದಿದ್ದೇವೆ. ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಆಧಾರ್ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಉದಾಹರಣೆ. ಆಧಾರ್ ಆಧಾರದಲ್ಲಿ ಯುಪಿಐ ರೂಪಿಸಲಾಯಿತು. ಯುಪಿಐ ಎಂಟು ವರ್ಷದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಇದೇ ಮಾರ್ಗದಲ್ಲಿ ಇದೀಗ ಒಎನ್‌ಡಿಸಿ ಜಾರಿ ಮಾಡಲಾಗುತ್ತಿದೆ. ಿಂತಹ ನವೀನ ಯೋಜನೆಗಳಿಗೆ ಆರ್‌ಬಿಐ, ವಾಣಿಜ್ಯ ಸಚಿವಾಲಯ, ಪ್ರಧಾನಿ ಕಾರ್ಯಾಲಯದಂತಹ ಸಂಸ್ಥೆಗಳು ಒತ್ತಾಸೆ ನೀಡುತ್ತಿರುವುದು ಅತ್ಯಂತ ಆಶಾದಾಯಕವಾಗಿದೆ” ಎಂದರು.
ಇ ಕಾಮರ್ಸ್ ಕ್ಷೇತ್ರದಲ್ಲಿ ಅತಿ ದೊಡ್ಡ ಮಾರುಕಟ್ಟೆ ಇದೆ, ಆ ಮಾರುಕಟ್ಟೆಯಲ್ಲಿ ಮತ್ತಷ್ಟು ನಾವೀನ್ಯತೆ ತರುವ ಅವಕಾಶಗಳಿವೆ. ಇಂತಹ ಒಂದು ವ್ಯವಸ್ಥೆಯ ಸಾಮಾಜಿಕ ಅವಶ್ಯಕತೆಯೂ ಭಾರತದಲ್ಲಿದೆ. ಇ ಕಾಮರ್ಸ್ ಮುಂದಿನ ಜೀವನ ಶೈಲಿ ಆಗುತ್ತದೆ ಎನ್ನುವುದನ್ನು ಕರೊನಾ ತೋರಿಸಿದೆ. ಮುಂದಿನ ದಿನದಲ್ಲಿ ಹೆಚ್ಚೆಚ್ಚು ಜನರು ಆನ್‌ಲೈನ್ ಮೂಲಕ ಆರ್ಡರ್ ಮಾಡುತ್ತಾರೆ. ದೇಶದಲ್ಲಿ ನಡೆಯುವ 1 ಲಕ್ಷ ಕೋಟಿ ಡಾಲರ್ ರೀಟೇಲ್ ಆರ್ಥಿಕತೆಯಲ್ಲಿ 10-20 ಸಾವಿರ ಕೋಟಿಯಷ್ಟು ವಹಿವಾಟು ಈ ವೇದಿಕೆಯಲ್ಲಿ ನಡೆದರೂ ಅದು ಕ್ರಾಂತಿ ಆಗುತ್ತದೆ. ಸಣ್ಣ ವ್ಯಾಪಾರಿಯೂ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡುತ್ತದೆ. ಲಕ್ಷಾಂತರ ಜನರಿಗೆ ಸಹಕಾರ ಆಗುತ್ತದೆ ಎಂದರು.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯೆಲ್, ಯುಪಿಐ ನಂತರ ವಾಣಿಜ್ಯವನ್ನು ಪ್ರಜಾತಾಂತ್ರಿಕಗೊಳಿಸಲು ಕೆಲವೇ ಆಯ್ದ ಗ್ರಾಹಕರು, ಮಾರಾಟಗಾರರು ಹಾಗೂ ಸಾಗಣೆ ಸೇವಾದಾರರ ಮೂಲಕ ಒಎನ್‌ಡಿಸಿಗೆ ಪ್ರಾಯೋಗಿಕ ಚಾಲನೆ ನೀಡಲಾಗುತ್ತಿದೆ. ಾಯ್ಕೆ, ಅನುಕೂಲ ಹಾಗೂ ಪಾರದರ್ಶಕತೆಯ ಹೊಸ ವಿಶ್ವಕ್ಕೆ ನಿಮಗೆ ಸ್ವಾಗತ” ಎಂದಿದ್ದಾರೆ.
ಖ್ಯಾತ ಆಟೊಮೊಬೈಲ್ ಉದ್ಯಮಿ ಆನಂದ್ ಮಹೀಂದ್ರಾ ಈ ಕುರಿತು ಮೆಚ್ಚುಗೆಯ ಟ್ವೀಟ್ ಮಾಡಿದ್ದಾರೆ. “ವಿಶ್ವವು ಚಿಲ್ಲರೆ ಮಾರುಕಟ್ಟೆಯ ಕ್ರಾಂತಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ. ಇದು ಕೆಲವೇ ಬೃಹತ್ ಕಂಪನಿಗಳ ಹಿಡಿತದಿಂದ ಇ ಕಾಮರ್ಸ್ ಕ್ಷೇತ್ರವನ್ನು ಬಿಡುಗಡೆ ಮಾಡಿ ಪ್ರಾಜಾತಾಂತ್ರಿಕಗೊಳಿಸುತ್ತದೆ. ಸಣ್ಣ ಕಿರಾಣಿ ಅಂಗಡಿಗಳ ಲಕ್ಷಾಂತರ ಮಾಲೀಕರಿಗೆ ಇದು ಸಹಾಯ ಮಾಡುತ್ತದೆʼ ಎಂದಿದ್ದಾರೆ.
ಇದನ್ನೂ ಓದಿ | Explainer: ಉಳಿತಾಯ ಯಥಾಸ್ಥಿತಿ, ಖರ್ಚು ಏರಿಕೆಗಿಲ್ಲ ಬ್ರೇಕ್: ಹಣಕಾಸು ನೀತಿ ಹೇಳಿದ್ದೇನು?