ನವದೆಹಲಿ: ಅದಾನಿ ಗ್ರೂಪ್ ಷೇರುಗಳ ಬಗ್ಗೆ ರಿಪೋರ್ಟ್ ಪ್ರಕಟಿಸಿ ಆ ಕಂಪನಿಯ ಷೇರುಗಳ ಪತನಕ್ಕೆ ಕಾರಣವಾಗಿದ್ದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಈಗ ಮತ್ತೊಂದು ಸಂಸ್ಥೆಯನ್ನು ಖೆಡ್ಡಾಕ್ಕೆ ಕೆಡವಿದೆ. ಟ್ವಿಟರ್ ಸಹ ಸಂಸ್ಥಾಪಕರಾಗಿದ್ದ ಜಾಕ್ ಡಾರ್ಸೆ ಅವರ ಬ್ಲಾಕ್ ಇಂಕ್(Block Inc) ಕಂಪನಿಯ ಕುರಿತು ಬಿಡುಗಡೆ ಮಾಡಿದ ವರದಿಯ ಬೆನ್ನಲ್ಲೇ, ಡಾರ್ಸೆ ಅವರ ಒಟ್ಟು ಆಸ್ತಿಯ ಮೌಲ್ಯವು ಕುಸಿತ ಕಂಡಿದೆ(Hindenburg Report).
ಗುರುವಾರದಂದು ಡಾರ್ಸೆಯವರ ಸಂಪತ್ತಿನಲ್ಲಿ 526 ಮಿಲಿಯನ್ ಡಾಲರ್ ನಷ್ಟವಾಗಿದೆ. ಇದು ಮೇ ನಂತರದ ಅವರ ಕೆಟ್ಟ ಏಕದಿನದ ಕುಸಿತವಾಗಿದೆ. ಬ್ಲೂಮ್‌ಬರ್ಗ್ ಬಿಲಿನೆಯರ್ಸ್ ಇಂಡೆಕ್ಸ್ ಪ್ರಕಾರ, ಶೇ.11 ಕುಸಿತದ ನಂತರ ಅವರು ಈಗ 4.4 ಶತಕೋಟಿ ಡಾಲರ್ ಮೌಲ್ಯ ಸಂಪತ್ತು ಹೊಂದಿದ್ದಾರೆ.
ಹಿಂಡೆನ್‌ಬರ್ಗ್ ಗುರುವಾರ ವರದಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬ್ಲಾಕ್ ಇಂಕ್ ಕಂಪನಿಯ ಷೇರುಗಳ ಭಾರೀ ಕುಸಿತವನ್ನು ದಾಖಲಿಸಿದವು. ಬ್ಲಾಕ್ ಇಂಕ್, ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆಯ್ಕೆಯಗನ್ನು ಹೊಂದಿದೆ. ಗುರುವಾರ ಬ್ಲಾಕ್ ಇಂಕ್ ಷೇರು ಶೇ.22ರಷ್ಟು ಕುಸಿತವಾಗಿ ಶೇ.15ರಲ್ಲಿ ಮುಕ್ತಾಯ ಕಂಡಿದೆ.
ಇದನ್ನೂ ಓದಿ: Adani group : ಹಿಂಡೆನ್‌ಬರ್ಗ್ ಎಫೆಕ್ಟ್: ಅದಾನಿ ಹೈಡ್ರೋಜನ್‌ನಲ್ಲಿ ಹೂಡಿಕೆಗೆ ಫ್ರಾನ್ಸ್‌ನ ಟೋಟಲ್ ಎನರ್ಜೀಸ್ ಹಿಂದೇಟು
ಟ್ವಿಟರ್‌ನ ಸಹ-ಸ್ಥಾಪಕರಾಗಿದ್ದ ಡಾರ್ಸೆ ಅವರು ತಮ್ಮ ವೈಯಕ್ತಿಕ ಸಂಪತ್ತನ್ನು ಬ್ಲಾಕ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಬ್ಲೂಮ್‌ಬರ್ಗ್ ಸಂಪತ್ತು ಸೂಚ್ಯಂಕದ ಪ್ರಕಾರ, ಸಂಸ್ಥೆಯಲ್ಲಿನ ಅವರ ಪಾಲು 3 ಶತಕೋಟಿ ಡಾಲರ್‌ನಷ್ಟಿದೆ. ಎಲಾನ್ ಮಸ್ಕ್ ಅವರ ಕೊಂಡುಕೊಂಡಿರುವ ಟ್ವಿಟರ್‌ನಲ್ಲಿ ಅವರ ಪಾಲು 388 ಮಿಲಿಯನ್ ಡಾಲರ್‌ನಷ್ಟಿದೆ.