Site icon Vistara News

Year- end special | 2022ರಲ್ಲಿ ವಿಶ್ವದ ಅತ್ಯುತ್ತಮ ಸ್ಟಾಕ್‌ ಮಾರ್ಕೆಟ್‌ಗಳ ಸಾಲಿನಲ್ಲಿ ಹೊರಹೊಮ್ಮಿದ ಭಾರತ

bse

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಈ ವರ್ಷ ವಿಶ್ವದ ಅತ್ಯುತ್ತಮ ಸ್ಟಾಕ್‌ ಮಾರ್ಕೆಟ್‌ಗಳ ಸಾಲಿನಲ್ಲಿ ಹೊರ ಹೊಮ್ಮಿದೆ. (Year- end special) ಇದುವರೆಗೆ ಸೆನ್ಸೆಕ್ಸ್‌ 3% ಏರಿಕೆಯನ್ನು ದಾಖಲಿಸಿದೆ. ಸಿಂಗಾಪುರ ಮತ್ತು ಇಂಡೊನೇಷ್ಯಾದ ಸೂಚ್ಯಂಕಗಳ ಬಳಿಕ ಅತಿ ಹೆಚ್ಚಿನ ಏರಿಕೆಯನ್ನು ಭಾರತ ದಾಖಲಿಸಿದೆ. ಅಂದರೆ ಇವೆರಡು ಮಾರುಕಟ್ಟೆಗಳ ಬಳಿಕ ಅತಿ ಹೆಚ್ಚಿನ ಗಳಿಕೆಯನ್ನು ಭಾರತ ಗಳಿಸಿದೆ. ಬಡ್ಡಿ ದರ ಏರಿಕೆ ಹಾಗೂ ಜಾಗತಿಕ ಆರ್ಥಿಕತೆಯ ಹಿಂಜರಿತದ ಭೀತಿಯನ್ನು ಮೆಟ್ಟಿ ನಿಂತು ಭಾರತೀಯ ಷೇರು ಪೇಟೆಯ ಸೂಚ್ಯಂಕಗಳು ಗಳಿಕೆಯನ್ನು ದಾಖಲಿಸಿರುವುದು ಗಮನಾರ್ಹ.

ಬ್ರಿಟನ್‌ ಅನ್ನು ಹಿಂದಿಕ್ಕಿದ ಭಾರತದ ಸ್ಟಾಕ್‌ ಮಾರ್ಕೆಟ್

ಭಾರತದ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ 3.16 ಲಕ್ಷ ಕೋಟಿ ಡಾಲರ್‌ ಆಗಿದ್ದು, ಬ್ರಿಟನ್‌ ಅನ್ನು 2022ರಲ್ಲಿ ಹಿಂದಿಕ್ಕಿದೆ. ಜಗತ್ತಿನ 6ನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಬ್ಲೂಮ್‌ ಬರ್ಗ್‌ ವರದಿ ತಿಳಿಸಿದೆ.

2022ರಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ವಿಶ್ವದ ಅತಿ ದೊಡ್ಡ ಸ್ಟಾಕ್‌ ಮಾರ್ಕೆಟ್‌ಗಳು ಇಂತಿವೆ:

ಅಮೆರಿಕ: 46.01 ಲಕ್ಷ ಕೋಟಿ ಡಾಲರ್‌

ಚೀನಾ : 11.31 ಲಕ್ಷ ಕೋಟಿ ಡಾಲರ್‌

ಜಪಾನ್‌ : 5.78 ಲಕ್ಷ ಕೋಟಿ ಡಾಲರ್‌

ಹಾಂಕಾಂಗ್‌ : 5.50 ಲಕ್ಷ ಕೋಟಿ ಡಾಲರ್‌

ಸೌದಿ ಅರೇಬಿಯಾ: 3.25 ಲಕ್ಷ ಕೋಟಿ ಡಾಲರ್‌

ಭಾರತ : 3.1 ಲಕ್ಷ ಕೋಟಿ ಡಾಲರ್‌

ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಸಮೂಹದ ಷೇರುಗಳು ಜಿಗಿದಿತ್ತು. ಹೀಗಿದ್ದರೂ, 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತೀಯ ಷೇರು ಸೂಚ್ಯಂಕಗಳ ಮೇಲೆ ಅನಿಶ್ಚಿತತೆ ಉಂಟಾಗಿದೆ ಎಂದು ಗೋಲ್ಡ್‌ಮನ್‌ ಸ್ಯಾಕ್ಸ್‌ ವರದಿ ತಿಳಿಸಿದೆ.

ಅದಾನಿ ಷೇರುಗಳ ಬಂಪರ್‌ ಲಾಭ

ಅದಾನಿ ಸಮೂಹದ ಏಳು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿವೆ. ಈ ಪೈಕಿ ಎರಡು ಕಂಪನಿಗಳ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಈ ಒಂದೇ ವರ್ಷದಲ್ಲಿ ಇಮ್ಮಡಿಯಾಗಿವೆ. ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಷೇರು ದರ 113% ಹೆಚ್ಚಳವಾಗಿದೆ.

ಬ್ಯಾಂಕಿಂಗ್‌ ಷೇರುಗಳ ದರ ಏರಿಕೆ, ಐಟಿ, ಔಷಧ ಕಂಪನಿಗಳ ಷೇರುಗಳ ದರ ಇಳಿಕೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಈ ವರ್ಷ ಬ್ಯಾಂಕಿಂಗ್‌ ಷೇರುಗಳು ಈ ವರ್ಷ 18% ಏರಿಕೆ ದಾಖಲಿಸಿವೆ. ಎಸ್‌ಬಿಐ ಷೇರು ದರ ಈ ವರ್ಷ 25% ಹೆಚ್ಚಳವಾಗಿತ್ತು. ಮುಂದಿನ ವರ್ಷ ಕೂಡ ಇದೇ ರೀತಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು. ಹೀಗಿದ್ದರೂ, ಅಮೆರಿಕ, ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ತಂತ್ರಜ್ಞಾನ ಕಂಪನಿಗಳ ಷೇರು ದರಗಳು ಇಳಿಯಿತು. ಔಷಧ ಕಂಪನಿಗಳ ಷೇರುಗಳ ದರಗಳೂ ಇಳಿದಿತ್ತು.

ನಿರಾಸೆ ಮೂಡಿಸಿದ ಐಪಿಒಗಳು

ಫಿನ್‌ ಟೆಕ್‌ ಕಂಪನಿ ಪೇಟಿಎಂ ಮತ್ತು ವಿಮೆ ಮಾರುಕಟ್ಟೆ ವಲಯದ ಪಾಲಿಸಿ ಬಜಾರ್‌ 2021ರ ಕೊನೆಯ ವೇಳೆಗೆ ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶಿಸಿತ್ತು. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒ ಎನ್ನಿಸಿತ್ತು. ಹೀಗಿದ್ದರೂ, ಐಪಿಒ ಬಳಿಕ ಈ ಷೇರುಗಳು ಮೇಲೇಳಲಿಲ್ಲ. ಬದಲಿಗೆ ಗಣನೀಯ ಕುಸಿಯಿತು. ಕಳೆದ ಮೇನಿಂದ ಎಲ್‌ಐಸಿ ಷೇರು ದರದಲ್ಲಿ 25% ಇಳಿಕೆಯಾಗಿದೆ. ಪೇಟಿಎಂ ಮತ್ತು ಪಾಲಿಸಿ ಬಜಾರ್‌ ಷೇರು ದರದಲ್ಲಿ 50% ಇಳಿಕೆ ದಾಖಲಾಗಿದೆ.

ಹೊಸ ಹೂಡಿಕೆದಾರರು ಕಲಿತ ಪಾಠವೇನು?

ಕಳೆದ ಆರು ತಿಂಗಳಿನ ಅವಧಿಯಲ್ಲಿ ಸೆನ್ಸೆಕ್ಸ್‌ ಜಿಗಿದಿದ್ದರೂ, ಕೋವಿಡ್‌ ಸಂದರ್ಭ ಷೇರು ಹೂಡಿಕೆದಾರರು ಕಲಿತ ಪಾಠ ಹಲವು. ಅದರಲ್ಲಿ ಮುಖ್ಯವಾಗಿ ದುಡ್ಡು ಮಾಡುವುದು ಸುಲಭವಲ್ಲ ಎಂಬುದು ಅವರು ಕಲಿತ ಪಾಠ ಎನ್ನುತ್ತಾರೆ ತಜ್ಞರು. ಹಲವಾರು ಮಂದಿ ಹೊಸ ಹೂಡಿಕೆದಾರರಲ್ಲಿ ಕಳೆದುಕೊಳ್ಳುವ ಭಯ (Fear of missing out) ಇತ್ತು. ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ, ರಷ್ಯಾ-ಉಕ್ರೇನ್ ಸಮರ, ಹಣದುಬ್ಬರ, ಆರ್ಥಿಕ ಹಿಂಜರಿತದ ಭೀತಿ ಇದಕ್ಕೆ ಕಾರಣವಾಗಿತ್ತು. ಈ ವರ್ಷ ಷೇರು ಮಾರುಕಟ್ಟೆಯಲ್ಲಿ ಇವುಗಳು ಪ್ರತಿಕೂಲ ಪ್ರಭಾವವನ್ನೂ ಬೀರಿತ್ತು.

ಮಿಡ್‌ ಕ್ಯಾಪ್‌ ಇಂಡೆಕ್ಸ್‌ನಿಂದ ಹೂಡಿಕೆದಾರರಿಗೆ ನಷ್ಟ:

ಬಿಎಸ್‌ಇ ಮಿಡ್‌ ಕ್ಯಾಪ್‌ ಇಂಡೆಕ್ಸ್‌ 2022ರಲ್ಲಿ ಋಣಾತ್ಮಕವಾಗಿತ್ತು. 2022ರ ಆರಂಭದಲ್ಲಿ ನೀವು ಈ ಇಂಡೆಕ್ಸ್‌ನಲ್ಲಿ 100 ರೂ. ಹೂಡಿಕೆ ಮಾಡಿದ್ದರೆ, ಡಿಸೆಂಬರ್‌ 21ರ ವೇಳೆಗೆ ಋಣಾತ್ಮಕ ಆದಾಯ (97.82 ರೂ.) ನೀಡಿತ್ತು.

ಸೆನ್ಸೆಕ್ಸ್‌ 63,583ರ ಸಾರ್ವಕಾಲಿಕ ಎತ್ತರಕ್ಕೆ ಜಿಗಿತ:

ಸೆನ್ಸೆಕ್ಸ್‌ ಈ ವರ್ಷ 63,583ರ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿತ್ತು. 2022ರಲ್ಲಿ 14 ಸಲ

1,000 ಕ್ಕೂ ಹೆಚ್ಚು ಅಂಕಗಳ ಗಳಿಕೆ ದಾಖಲಿಸಿದೆ. ಫೆಬ್ರವರಿ 15ರಂದು 1,736 ಅಂಕ ಏರಿತ್ತು. 14 ಸಲ 1,000 ಅಂಕಗಳಿಗೂ ಹೆಚ್ಚು ಕುಸಿದಿತ್ತು. ಫೆಬ್ರವರಿ 24ರಂದು ಸೆನ್ಸೆಕ್ಸ್‌ 2,702 ಅಂಕ ನಷ್ಟಕ್ಕೀಡಾಗಿತ್ತು.

ರಿಟೇಲ್‌ ಹೂಡಿಕೆದಾರರ ಭರ್ಜರಿ ಎಂಟ್ರಿ

2022ರಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಸಿತ್ತು. ಹೀಗಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1.2 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಹೀಗಿದ್ದರೂ, ರಿಟೇಲ್‌ ಹೂಡಿಕೆದಾರರು ಉತ್ಸಾಹದಿಂದ ಷೇರುಗಳನ್ನು ಖರೀದಿಸಿದ್ದರಿಂದ, ಭಾರತೀಯ ಷೇರು ಮಾರುಕಟ್ಟೆಗೆ ಬಲ ಬಂದಿತ್ತು. ಇಲ್ಲದಿದ್ದರೆ ವಾಲ್‌ ಸ್ಟ್ರೀಟ್‌ ಮಾದರಿಯಲ್ಲಿ ದಲಾಲ್‌ ಸ್ಟ್ರೀಟ್‌ ಕೂಡ ರೆಡ್‌ ಆಗಿರುತ್ತಿತ್ತು.

ದೀರ್ಘಕಾಲೀನ ಹೂಡಿಕೆ ಲಾಭದಾಯಕ:

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಪ್ರತಿಫಲವನ್ನು ಅಳೆಯುವಾಗಿ ಕೆಲವು ತ್ರೈಮಾಸಿಕಗಳಿಗೆ ಮಾತ್ರ ಸೀಮಿತಗೊಳಿಸಬಾರದು. ದೀರ್ಘಕಾಲೀನ ದೃಷ್ಟಿಯಿಂದ ನೋಡಬೇಕು. ಆಗ ಅವುಗಳು ಬ್ಯಾಂಕ್‌ ಎಫ್‌ಡಿಗಿಂತಲೂ ಹೆಚ್ಚಿನ ಆದಾಯ ತಂದು ಕೊಟ್ಟಿರುವುದನ್ನು ಗಮನಿಸಬಹುದು ಎನ್ನುತ್ತಾರೆ ಎಡಿಲ್‌ವೈಸ್‌ ವೆಲ್ತ್‌ನ ಉಪಾಧ್ಯಕ್ಷ ಅಜಯ್‌ ವೋರಾ.

Exit mobile version