Site icon Vistara News

Inflation in USA : 20% ಅಮೆರಿಕನ್ನರಿಗೆ ಸಾಲದಲ್ಲಿ ದಿನಸಿ ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸ್ಥಿತಿ

Retail inflation hits four-month high

ವಾಷಿಂಗ್ಟನ್:‌ ಅಮೆರಿಕದಲ್ಲಿ ದಿನ ನಿತ್ಯದ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಅನೇಕ ಕುಟುಂಬಗಳು ದಿನಸಿ ವಸ್ತುಗಳನ್ನು ಕೊಳ್ಳಲು ಕೂಡ ಪರದಾಡುವಂತಾಗಿದೆ. ಹೀಗಾಗಿ ದಿನ ನಿತ್ಯದ ದಿನಸಿ ವಸ್ತುಗಳ ಖರೀದಿಗೂ ಇನ್‌ಸ್ಟಂಟ್‌ ಲೋನ್‌ ಆ್ಯಪ್‌ಗಳು ನೀಡುವ ಸಾಲದ ಕಂತುಗಳಿಗೆ (EMI) ಮೊರೆ ಹೋಗುತ್ತಿದ್ದಾರೆ. (Inflation in USA) ಹಾಗಾದರೆ ಅಲ್ಲಿ ಆಗಿದ್ದೇನು? ಇಲ್ಲಿದೆ ದಂಗುಬಡಿಸುವ ವಿವರ.

ಅಮೆರಿಕದಲ್ಲಿ ಇನ್‌ಸ್ಟಂಟ್‌ ಕ್ರೆಡಿಟ್ ಆ್ಯಪ್‌ಗಳು ಹೊಸತಲ್ಲ.‌ ನೀವು ಬೇಕಾದ್ದನ್ನು ಈಗಲೇ ಪಡೆಯಬಹುದು, ಬಳಿಕ ಸಾಲದ ಮೂಲಕ ಪಾವತಿಸಬಹುದು. ಬಿಲ್‌ನ ಒಟ್ಟು ಮೊತ್ತವನ್ನು ಕಂತುಗಳಲ್ಲಿ ಕೊಡಬಹುದು. ಅಮೆರಿಕದಲ್ಲಿ Buy now pay later apps -BNPL ಆ್ಯಪ್‌ಗಳ ಮೂಲಕ ( ಈಗ ಖರೀದಿಸಿ-ಬಳಿಕ ) ನಾನಾ ವಸ್ತುಗಳನ್ನು ಕೊಳ್ಳುವ ಟ್ರೆಂಡ್‌ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಆದರೆ ಇದರ ಮೂಲಕ ಮನೆ, ಕಾರು, ಬೈಕ್‌, ಸ್ಮಾರ್ಟ್‌ಫೋನ್‌, ಪ್ರವಾಸ ಸೇವೆ ಇತ್ಯಾದಿಗಳ ಖರೀದಿಗೆ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಈಗ ದಿನಸಿ ವಸ್ತುಗಳನ್ನು ಕೊಳ್ಳಲೂ ಬಳಸುತ್ತಿರುವುದು ಆತಂಕದ ವಿಚಾರವಾಗಿದೆ. ಕುಟುಂಬಗಳು ಸಾಲದ ಸುಳಿಗೆ ಬಿದ್ದಿರುವುದನ್ನು ಬಿಂಬಿಸಿದೆ ಎನ್ನುತ್ತಾರೆ ತಜ್ಞರು.

ಜನ ಒಂದು ತಟ್ಟೆ ಆಹಾರಕ್ಕೆ ಹೀಗೆ ಸಾಲದ ಮೊರೆ ಹೋಗುತ್ತಿರುವುದು ಕಳವಳಕಾರಿಯಾಗಿದೆ. ಅಮೆರಿಕದಲ್ಲಿ ಸಮೀಕ್ಷೆಯೊಂದರ ಪ್ರಕಾರ 2023 ರ ಮೊದಲ ಎರಡು ತಿಂಗಳುಗಳಲ್ಲಿ ಸರಾಸರಿ ಐವರಲ್ಲಿ ಒಬ್ಬರು ಕ್ರೆಡಿಟ್‌ ಆ್ಯಪ್‌ಗಳ ಮೂಲಕ ದಿನಸಿ ವಸ್ತುಗಳನ್ನು ಖರೀದಿಸಿದ್ದಾರೆ. 27% ಮಂದಿ ತಿಂಗಳಿನ ಕೊನೆಗೆ ಆಹಾರ ವಸ್ತುಗಳನ್ನು ಕೊಳ್ಳಲು ಸಾಲಕ್ಕೆ ಮೊರೆ ಹೋಗುತ್ತಿದ್ದಾರೆ. 2023ರ ಜನವರಿ-ಫೆಬ್ರವರಿಯಲ್ಲಿ ಕ್ರೆಡಿಟ್‌ ಆ್ಯಪ್‌ಗಳನ್ನು ಬಳಕೆದಾರರು 40% ದಿನಸಿ, 38% ಗೃಹೋಪಕರಣ, 8% ಜವಳಿ ಖರೀದಿಗೆ ಬಳಸಿದ್ದಾರೆ.

ಅಮೆರಿಕದಲ್ಲಿ ಈಗ ಹಣದುಬ್ಬರದ ಒತ್ತಡ ಕಡಿಮೆಯಾಗಿದೆ. ಹೀಗಿದ್ದರೂ ಸಾಲದ ಹೊರೆ ಕಡಿಮೆಯಾಗಿಲ್ಲ. ಅಮೆರಿಕದಲ್ಲಿರುವ ಕೆಲ ಬೈ ನೌ, ಪೇ ಲೇಟರ್‌ ಆ್ಯಪ್‌ಗಳು ಇಂತಿವೆ: Klarna, Affirm, Afterpay, Apple Pay, Sezzle. 2000ರಿಂದೇಚೆಗೆ ಇಂಥ ಆ್ಯಪ್‌ಗಳು ಜನಪ್ರಿಯವಾಗಿತ್ತು. ಕೋವಿಡ್‌ 19 ಬಿಕ್ಕಟ್ಟಿನ ಸಂದರ್ಭ ಈ ಆ್ಯಪ್‌ಗಳು ಭಾರಿ ಜನಪ್ರಿಯವಾಗಿತ್ತು. ಆರ್ಥಿಕ ಸಂಕಷ್ಟದ ಪರಿಣಾಮ ಇವುಗಳನ್ನು ಜನ ಆಶ್ರಯಿಸಿದ್ದರು. ಉದಾಹರಣೆಗೆ ಆಸ್ಟ್ರೇಲಿಯಾ ಮೂಲದ ಆಫ್ಟರ್‌ಪೇ (Afterpay) ಅಮರಿಕದಲ್ಲಿ 2019-20ರಲ್ಲಿ ಅಮೆರಿಕದಲ್ಲಿ ತನ್ನ ಗ್ರಾಹಕರ ಸಂಖ್ಯೆಯನ್ನು ಇಮ್ಮಡಿಗೊಳಿಸಿತ್ತು. ಅದು 65 ಲಕ್ಷಕ್ಕೆ ಏರಿತ್ತು. ಅಮೆರಿಕದಲ್ಲಿ ಆಹಾರ ಹಣದುಬ್ಬರ ನಂಬಲೂ ಕಷ್ಟವಾಗುವಷ್ಟು ಎತ್ತರಕ್ಕೆ ಜಿಗಿದಿದ್ದು, ಕಳೆದ ವರ್ಷ 11.4% ಕ್ಕೆ ವೃದ್ಧಿಸಿತ್ತು. ಇದು 1974ರಿಂದೀಚೆಗೆ ಗರಿಷ್ಠ ಮಟ್ಟ.

ಅಮೆರಿಕದಲ್ಲಿ ಆಹಾರ ವಸ್ತುಗಳ ದರ ಗಗನಕ್ಕೇರಿದ್ದೇಕೆ?

ಅಮೆರಿಕದಲ್ಲಿ ಆಹಾರ ವಸ್ತುಗಳ ದರ ಜಿಗಿತಕ್ಕೆ ಸಂಬಂಧಿಸಿ ಹಣಕಾಸು ಸಾಫ್ಟ್‌ವೇರ್‌ ಸಂಸ್ಥೆ ಪ್ರೊಪೆಲ್‌ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಸಮೀಕ್ಷೆಯಲ್ಲಿ ಸಂದರ್ಶನ ನೀಡಿದವರಲ್ಲಿ ಮೂರನೇ ಒಂದರಷ್ಟು ಮಂದಿ ಖರ್ಚು ಹೆಚ್ಚುತ್ತದೆ ಎಂದು ಕೆಲವೊಮ್ಮೆ ಊಟ ಮಾಡುತ್ತಿಲ್ಲ. ಮಾಡಿದರೂ ಕಡಿಮೆ ಸೇವಿಸುತ್ತಾರೆ. ಫುಡ್‌ ಬ್ಯಾಂಕ್‌ಗಳನ್ನು ಆಶ್ರಯಿಸುತ್ತಿದ್ದಾರೆ. ಆಟಿಕೆ, ಜವಳಿ ಉತ್ಪನ್ನಗಳ ಖರೀದಿಯನ್ನು ಕಡಿಮೆ ಮಾಡುತ್ತಿದ್ದಾರೆ.

ಹಾಗಾದರೆ ಆಹಾರ ದರ ಜಿಗಿದಿದ್ದೇಕೆ? ಇದಕ್ಕೆ ಹಲವು ಕಾರಣಗಳು ಇವೆ. ಆಹಾರ ವಸ್ತುಗಳ ಪೂರೈಕೆಯ ಜಾಲದಲ್ಲಿ ಉಂಟಾಗಿರುವ ಅಡಚಣೆ ( suply chain snags) ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಮೊಟ್ಟೆ ಮತ್ತಿತರ ದಿನ ಬಳಕೆ ಆಹಾರ ದರ ಹೆಚ್ಚಳ, ಕ್ಯಾಲಿಫೋರ್ನಿಯಾದಲ್ಲಿನ ಪ್ರವಾಹದಿಂದ ಬೆಳೆ ಹಾನಿ, ರಷ್ಯಾ-ಉಕ್ರೇನ್‌ ಸಮರದ ಪರಿಣಾಮಗಳಿಂದ ಕಚ್ಚಾ ವಸ್ತುಗಳ ದರ ಏರಿಕೆಯ ಎಫೆಕ್ಟ್‌ ಆಹಾರ ದರ ಹೆಚ್ಚಳಕ್ಕೂ ಕಾರಣವಾಗಿದೆ.

ಕಳೆದು ಹೋಗಿದೆಯೇ ಹಳೆಯ ಲೈಫ್‌ ಸ್ಟೈಲ್?

ಜಾಹೀರಾತು ವಲಯದ ಎನ್‌ಸಿ ಸಲ್ಯೂಷನ್ಸ್‌ (NCSolutions) ಎಂಬ ಕಂಪನಿಯ ಸಮೀಕ್ಷೆ ಪ್ರಕಾರ, ಸಮೀಕ್ಷೆಯಲ್ಲಿ ಸಂದರ್ಶನ ನೀಡಿದವರಲ್ಲಿ 45% ಅಮೆರಿಕನ್ನರು ತಮ್ಮ ಗತಕಾಲದ ವೈಭವದ ಲೈಫ್‌ ಸ್ಟೈಲ್‌ ಮುಕ್ತಾಯವಾಗಿದೆ ಎಂದು ಭಾವಿಸಿದ್ದಾರೆ. ಮೂರನೇ ಎರಡರಷ್ಟು ಮಂದಿ, ಯೋಚಿಸಿ ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ಇದ್ದೇವೆ ಎನ್ನುತ್ತಿದ್ದಾರೆ. ಈ ಸಮೀಕ್ಷೆಗಳು ಹಣದುಬ್ಬರ ಅಮೆರಿಕವನ್ನು ಕಾಡುತ್ತಿರುವುದನ್ನು ಬಿಂಬಿಸಿದೆ.

Exit mobile version