Site icon Vistara News

IPEF deal : ಚೀನಾದ ಅವಲಂಬನೆ ತಗ್ಗಿಸಲು ಅಮೆರಿಕ- ಭಾರತ ಸೇರಿ 14 ರಾಷ್ಟ್ರಗಳ ಡೀಲ್‌, ಏನಿದೆ ಇದರಲ್ಲಿ?

IPEF Launch program

ನವ ದೆಹಲಿ: ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಅಮೆರಿಕ-ಭಾರತ ಸೇರಿದಂತೆ 14 ದೇಶಗಳ ಒಕ್ಕೂಟವು ಇಂಡೊ-ಪೆಸಿಫಿಕ್‌ ಎಕನಾಮಿಕ್‌ ಫ್ರೇಮ್‌ ವರ್ಕ್‌ (Indo-Pacific Economic Framework -IPEF) ಎಂಬ ಒಪ್ಪಂದವನ್ನು ಮಾಡಿಕೊಂಡಿವೆ. ಭವಿಷ್ಯದ ಸಪ್ಲೈ ಚೈನ್‌ ಬಿಕ್ಕಟ್ಟನ್ನು (supply chain crises) ಎದುರಿಸಲು ಇದರಿಂದ ಸಹಕಾರಿಯಾಗಲಿದೆ.

ಸಪ್ಲೈ ಚೈನ್‌ ಎಂದರೆ ಗ್ರಾಹಕರಿಗೆ ನೀಡುವ ಅಂತಿಮ ಉತ್ಪನ್ನವನ್ನು ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳು ಅಥವಾ ಸೇವೆಯನ್ನು ಒದಗಿಸುವುದು. ಉತ್ಪಾದನೆಯ ಚಕ್ರ ತಿರುಗಲು ಇದು ಅವಶ್ಯಕ. ಇದೀಗ 14 ದೇಶಗಳು ಮಾಹಿತಿ ವಿನಿಮಯ ಸೇರಿಂದಂತೆ ಬಿಕ್ಕಟ್ಟಿನ ವೇಳೆ ಸಮಗ್ರ ಸಹಕಾರಕ್ಕೆ ಒಪ್ಪಂದ ಮಾಡುತ್ತಿವೆ.

ಡೆಟ್ರಾಯಿಟ್‌ನಲ್ಲಿ ಕಳೆದ ವಾರಾಂತ್ಯ ಐಪಿಇಎಫ್‌ನ ಸಚಿವರುಗಳ ಮಟ್ಟದ ಸಮಾಲೋಚನೆ ನಡೆಯಿತು. ಈ ಸಭೆಯಲ್ಲಿ ಐಪಿಎಎಓ ಸಪ್ಲೈ ಚೈನ್‌ ಕೌನ್ಸಿಲ್‌, ಸಪ್ಲೈ ಚೈನ್‌ ರೆಸ್ಪಾನ್ಸ್‌ ನೆಟ್‌ ವರ್ಕ್‌ ಮತ್ತು ಲೇಬರ್‌ ರೈಟ್ಸ್‌ ನೆಟ್‌ ವರ್ಕ್‌ ವ್ಯವಸ್ಥೆಗೊಳಿಸಲು ಸಮ್ಮತಿಸಲಾಯಿತು. ಪ್ರಾದೇಶಿಕ ಹೈಡ್ರೋಜನ್‌ ಯೋಜನೆಗೂ ಒಪ್ಪಿಗೆ ಸೂಚಿಸಲಾಯಿತು.

ಸಪ್ಲೈ ಚೈನ್‌ ವಿಭಾಗದಲ್ಲಿ ಮೊದಲ ಬಾರಿಗೆ ಒಂಥ ಒಪ್ಪಂದ ನಡೆದಿದೆ ಎಂದು ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೈಮಂಡೋ ತಿಳಿಸಿದ್ದಾರೆ. ಈ ಐಪಿಇಎಫ್‌ನಲ್ಲಿ ಅಮೆರಿಕ-ಭಾರತ ಹೊರತುಪಡಿಸಿ ಇರುವ ದೇಶಗಳು- ಆಸ್ಟ್ರೇಲಿಯಾ, ಬ್ರುನಿ, ಫಿಜಿ, ಇಂಡೊನೇಷ್ಯಾ, ಜಪಾನ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್‌, ಪಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌, ವಿಯೆಟ್ನಾಂ.

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ಅವರು ಒಪ್ಪಂದದ ಬಗ್ಗೆ ಮಾತನಾಡಿದ್ದು, ಒಪ್ಪಂದದಿಂದ ಸಪ್ಲೈ ಚೈನ್‌ನ ಉತ್ಪಾದಕತೆ, ಪಾರದರ್ಶಕತೆ, ವೈವಿಧ್ಯತೆ, ಭದ್ರತೆ, ದೃಢತೆ, ಸಮಗ್ರತೆಗೆ ಅನುಕೂಲವಾಗಲಿದೆ. ಪ್ರತಿಯೊಂದು ದೇಶಕ್ಕೂ ಅನುಕೂಲವಾಗಲಿದೆ ಎಂದರು.

ಐಪಿಇಎಫ್‌ನಿಂದ ಒಕ್ಕೂಟದಲ್ಲಿ ಇರುವ ಎಲ್ಲ ಸದಸ್ಯತ್ವ ರಾಷ್ಟ್ರಗಳಿಗೆ ಒಟ್ಟಿಗೆ ಅಭಿವೃದ್ಧಿಯಾಗಲು ಹಾಗೂ ವಲಯಾವಾರು ಆಯಾಮಗಳಲ್ಲಿ ಸಹಕಾರಕ್ಕೆ ಅನುಕೂಲವಾಗಲಿದೆ. ಮೂಲಸೌಕರ್ಯ, ಬಿಸಿನೆಸ್‌, ಸಂಶೋಧನೆ ಮತ್ತು ಅಭಿವೃದ್ಧಿಗೆ, ವ್ಯಾಪಾರ ವಿಷಯಗಳಲ್ಲಿ ಸಹಕಾರಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದರು. ಸದಸ್ಯ ರಾಷ್ಟ್ರಗಳಿಗೆ ತುರ್ತು ಸಂವಹನದ ಮಾಧ್ಯಮವಾಗಿಯೂ ಐಪಿಇಎಫ್‌ ಸಪ್ಲೈ ಚೈನ್‌ ಕೌನ್ಸಿಲ್‌ ಕಾರ್ಯನಿರ್ವಹಿಸಲಿದೆ. ಕಾರ್ಮಿಕ ಹಕ್ಕುಗಳ ಪಾಲನೆ, ಹೂಡಿಕೆಯ ಅವಕಾಶಗಳನ್ನು ಕಂಡುಕೊಳ್ಳುವಿಕೆಗೂ ಒಪ್ಪಂದ ಸಹಕಾರಿಯಾಗಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ಅವರು ವಿವರಿಸಿದ್ದಾರೆ.

21ನೇ ಶತಮಾನದ ಆರ್ಥಿಕತೆಗೆ ಹೊಸ ಅಧ್ಯಾಯವನ್ನೇ ಐಪಿಇಎಫ್‌ ರಚಿಸಲಿದೆ. ಜಾಗತಿಕ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಹತ್ವದ ನಡೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಈ ಒಪ್ಪಂದದ ಉದ್ಘಾಟನೆಯ ವೇಳೆ ಹೇಳಿದ್ದರು.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯವನ್ನು ಹತ್ತಿಕ್ಕಲು ಇಂಥ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದ ಅನಿವಾರ್ಯ ಎಂದು ಈ ಹಿಂದೆಯೇ ಹಲವು ಸಂದರ್ಭಗಳಲ್ಲಿ ಪ್ರತಿಪಾದಿಸಿದ್ದರು. ಕೋವಿಡ್‌ ಬಿಕ್ಕಟ್ಟಿನ ಬಳಿಕ ಜಾಗತಿಕ ಪೂರೈಕೆಯ ಸರಣಿ ಅಸ್ತವ್ಯಸ್ತವಾಗಿತ್ತು. ಹಾಗೂ ಚೀನಾದ ಪ್ರಾಬಲ್ಯದ ಪರಿಣಾಮ ಉಂಟಾಗಿದ್ದ ಅನಾನುಕೂಲತೆಗೂ ಕನ್ನಡಿ ಹಿಡಿದಿತ್ತು. ಮುಖ್ಯವಾಗಿ ಚೀನಾ ಮೇಲಿನ ಅವಲಂಬನೆಯ ಪ್ರತಿಕೂಲ ಪರಿಣಾಮಗಳನ್ನು ಆಗ ಎದುರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಒಪ್ಪಂದ ಸಹಕಾರಿಯಾಗಲಿದೆ ಎಂದು ವಿದೇಶಿ ವ್ಯವಹಾರ ತಜ್ಞರು ವಿವರಿಸಿದ್ದಾರೆ.

ಅಮೆರಿಕ-ಚೀನಾ ನಡುವೆ ಕಳೆದ ಹಲವು ವರ್ಷಗಳಿಂದ ವಾಣಿಜ್ಯ ಸಂಘರ್ಷ ನಡೆಯುತ್ತಿದೆ. ಇದರ ಪರಿಣಾಮವನ್ನು ಜಗತ್ತು ಅನುಭವಿಸಿದೆ. ಇಂಥ ಸಂದರ್ಭದಲ್ಲಿ ಐಪಿಇಎಫ್‌ ಒಪ್ಪಂದ ಜಗತ್ತಿನ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ವಿದೇಶಾಂಗ ವ್ಯವಹಾರ ತಜ್ಞರು.

ಇದನ್ನೂ ಓದಿ: Gold rate : ಅಮೆರಿಕದ ಸಾಲ ಬಿಕ್ಕಟ್ಟಿನ ಎಫೆಕ್ಟ್‌, ಮತ್ತಷ್ಟು ಇಳಿಯಲಿದೆಯಾ ಚಿನ್ನದ ದರ?

Exit mobile version